ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರತ್ಯಕ್ಷ ವರದಿ: ಹರೀಶ್ ಕೆ.ಆದೂರು.

ಅಲ್ಲಿ ಮೌನವೇ ಮಾತಾಡುತ್ತಿತ್ತು. ಎಲ್ಲರ ಕಣ್ಣಂಚಿನಲ್ಲೂ ಹನಿ ನೀರು ಜಿನುಗುತ್ತಿತ್ತು..." ಪ್ಲೀಸ್ ಇದು ನಿಮ್ಮ ಉಸಿರು...ಸ್ವಲ್ಪ ನಿಲ್ಲಿ..." ಎಂಬಂತಹ ರೋಧನದ ಈ ಮಾತು ಅಲ್ಲಿನ ವಿಕಾರ ನಿಸರ್ಗದಿಂದ ಕೇಳಿಬರುತ್ತಿದ್ದವು...ಹೌದು...ಇಂದು ಸಮೃದ್ಧವಾದಂತಹ ಪಶ್ಚಿಮ ಘಟ್ಟ ನಾಶವಾಗುತ್ತಿದೆ. ಕುದುರೆ ಮುಖ ತನ್ನ ಮುಖಾರವಿಂದವನ್ನೇ ಕಳೆದುಕೊಂಡು ಕಳೆಗುಂದಿದೆ. ಇಡೀ ಕುದುರೆಮುಖದಲ್ಲಿ ಸೂತಕದ ಛಾಯೆ ಇನ್ನೂ ಇದೆ. ಗಣಿಗಾರಿಕೆಯಿಂದ ಉಂಟಾಗಿದ್ದ ಪ್ರಕೃತಿ ನಾಶಕ್ಕೆ ಇಡೀ ಭೂಮಿ ಇಂದು ಪರಿತಪಿಸುತ್ತಿದೆ. ಮನುಷ್ಯರನ್ನು ನೋಡಿದ ಕೂಡಲೇ ಇಡೀ ಬೆಟ್ಟ ಬೆಚ್ಚಿಬೀಳುವಂತೆ ಭಾಸವಾಗುತ್ತಿದೆ...! ಅಷ್ಟರ ಮಟ್ಟಿಗೆ ಕುದುರೆಮುಖದಲ್ಲಿ ಪ್ರಕೃತಿಯ ಮೇಲೆ ಅತ್ಯಾಚಾರವಾಗಿದೆ. ಪ್ರಕೃತಿಯ ಗರ್ಭಸೀಳಿ ಗಣಿಗಾರಿಕೆ ನಡೆಸಲಾಗಿದೆ.ಕುದುರೆಮುಖದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ನಡೆಸಲಾಗಿತ್ತು.2006ರಿಂದೀಚೆಗೆ ಅದಿರು ಗಣಿಗಾರಿಕೆಗೆ ತೀವ್ರ ವಿರೋಧ ಉಂಟಾದ ಹಿನ್ನಲೆಯಲ್ಲಿ ಗಣಿಗಾರಿಕೆಗೆ ನಿಷೇಧ ಹೇರಲಾಗಿತ್ತು. ಅದಾಗಲೇ ಸ್ವಚ್ಛ ಕುದುರೆಮುಖ ತನ್ನ ಗರ್ಭವನ್ನು ಸೀಳಿ ಕಳಾಹೀನವಾಗಿ ಬೋರಲಾಗಿಬಿಟ್ಟಿತ್ತು.
ಅಲ್ಲಿ ಕಣ್ಣುಹಾಯಿಸಿದಷ್ಟು ಉದ್ದಗಲಕ್ಕೂ ಒಂದೊಮ್ಮೆ ಕೇವಲ ಹಸಿರು ಹಸಿರಾದ ಗಿರಿರಾಶಿಗಳಿದ್ದವು. ಸ್ವಚ್ಚಂಧವಾಗಿ ವಿಹರಿಸುತ್ತಿದ್ದ ಸಸ್ಯರಾಶಿಯಿದ್ದಿತು. ಆದರೆ ಇಂದು ಅವುಗಳೆಲ್ಲಾ ಇದ್ದವೆಂಬುದನ್ನು ತೋರುವ ಕುರುಹುಗಳು ಕಂಡುಬರುತ್ತವೆ. ಒಂದೊಮ್ಮೆ ಅತ್ಯಂತ ವೈಭವದಿಂದ ವಿಜಯನಗರ ಸಾಮ್ರಾಜ್ಯ ಮೆರೆಯುತ್ತಿತ್ತೆಂಬುದನ್ನು ಸಾರಿಹೇಳುವ ಹಾಳು ಹಂಪೆಯಂತೆ ಇಂದು ಕುದುರೆಮುಖದ ಗರ್ಭಸೀಳಿದ ಗಣಿಗಾರಿಕೆಯ ಕುರುಹುಗಳು ಭಾಸವಾಗುತ್ತಿವೆ.

ಈ ಗಣಿಗಾರಿಕೆಯ ಕರಿನೆರಳು ಕೇವಲ ಕುದುರೆಮುಖಕ್ಕಷ್ಟೇ ಸೀಮಿತವಾಗಿಲ್ಲ. ಇಡೀ ಪಶ್ಚಿಮ ಘಟ್ಟಕ್ಕೆ ಗಣಿಗಾರಿಕೆ, ಕಿರುಜಲವಿದ್ಯುತ್ ಯೋಜನೆ ಹಾಗೂ ಅಣೆಕಟ್ಟುಗಳ ನಿರ್ಮಾಣ ಹೀಗೆ ಹಲವು ವಿಘ್ನಗಳು ನಿರಂತರವಾಗಿ ಕಾಡುತ್ತಾ ಬಂದಿವೆ. ಪ್ರಸ್ತುತ ಕಾಡುತ್ತಿವೆ. ಒಂದೊಮ್ಮೆ ಪರಿಸರ ಹೋರಾಟಗಾರರ ಧ್ವನಿಯಿಂದಲೋ, ನೈಜ ಪರಿಸರಾಸಕ್ತರ ಕಾಳಜಿಯಿಂದಲೂ ಕುದುರೆಮುಖದ ನಿಸರ್ಗ ರಮ್ಯತಾಣದಲ್ಲಿ ನಡೆಯುತ್ತಿರುವ ಗಣಿಗಾರಿಕೆಗೆ ಅಲ್ಪವಿರಾಮ ಘೋಷಿಸಲಾಗಿದೆಯಾದರೂ ಮುಂದೊಂದು ದಿನ ಮತ್ತೆ ಆ ಪ್ರದೇಶದಲ್ಲಿ ಗಣಿಗಾರಿಕೆ ನಡೆದೇ ನಡೆಯಲಿದೆ ಎಂಬ ಹೆದರಿಕೆ ಇನ್ನೂ ಮಾಸಿಲ್ಲ.
ಪಶ್ಚಿಮ ಘಟ್ಟ ಎಂಬ ಅನಘ್ರ್ಯ ಸಂಪತ್ತು
ಪಶ್ಚಿಮ ಘಟ್ಟ ಎಂಬುದು ಅನಘ್ರ್ಯ ಸಂಪತ್ತು. ಉತ್ತರದ ಗುಜರಾಥ್ ರಾಜ್ಯದಿಂದ ತಮಿಳುನಾಡಿನ ದಕ್ಷಿಣದ ತುದಿ ಕನ್ಯಾಕುಮಾರಿಯ ತನಕ 1600 ಕಿಲೋಮೀಟರ್ ಉದ್ದದ ಘಟ್ಟ ಪ್ರದೇಶ ಇದಾಗಿದೆ. ಅತ್ಯಂತ ರಮ್ಯವಾದಂತಹ ದೃಶ್ಯಾವಳಿಗಳಿಗೆ ಇದೊಂದು ಸಾಕ್ಷಿಯಾಗಿದೆ. ಅಸಂಖ್ಯ ವನ್ಯಸಂಪತ್ತು, ಔಷಧೀಯ ಸಸ್ಯಸಂಪತ್ತು, ವೈವಿಧ್ಯಮಯ ಪ್ರಾಣಿ, ಪಕ್ಷಿ ಪ್ರಬೇಧಗಳನ್ನು ತನ್ನಲ್ಲಿ ಹುದುಗಿಸಿಕೊಂಡಿರುವ ಈ ಪಶ್ಚಿಮ ಘಟ್ಟಕ್ಕೆ ಕಳೆದ ಹತ್ತು ಹಲವು ವರುಷಗಳಿಂದ "ಕ್ರೂರ"ದೃಷ್ಠಿಯ ಕಾಟ ಪ್ರಾರಂಭಗೊಂಡಿದೆ.
ಪಶ್ಚಿಮ ಘಟ್ಟ ಹಲವು ನದೀಗಳಿಗೆ ಮೂಲವಾಗಿದೆ. ತನ್ನೊಡಲಲ್ಲಿ ಸಂಗ್ರಹಿಸಿಟ್ಟ ನೀರನ್ನು ಇಡೀ ಜೀವರಾಶಿಗೆ ನಿಸ್ವಾರ್ಥವಾಗಿ ಧಾರೆ ಎರೆಯುವ ಮೂಲಕ ಅಸಂಖ್ಯ ಜೀವರಾಶಿಯ ಜೀವನದಿಯಾಗಿಯೂ ಇದು ಗುರುತಿಸಲ್ಪಟ್ಟಿದೆ.
ಆದರೆ ಈ ಬೆಟ್ಟಗಳಲ್ಲಿರುವ ಖಜಿನ ನಿಕ್ಷೇಪಗಳು ಇಂದು "ವಾಣಿಜ್ಯ" ದೃಷ್ಠಿಗೆ ಬಲಿಯಾಗುತ್ತಿವೆ. ಇಲ್ಲಿನ ನೀರಸೆಲೆಳಗಳು "ವಿದ್ಯುತ್ ಉತ್ಪಾದನೆ"ಯ ಹೆಸರಿನಲ್ಲಿ ಉದ್ಯಮಿಗಳ ಕಬಂಧ ಬಾಹುಗಳಲ್ಲಿ ಸಿಲುಕಿ ನಲುಗುತ್ತಿವೆ. ರಕ್ಷಿತಾರಣ್ಯ ಎಂಬ ಹಣೆಪಟ್ಟಿಹೊಂದಿರುವ ಕಾಡುಗಳು ಮರಗಳ್ಳರ ಪಾಲಾಗುತ್ತಿದೆ. ನಿರಂತರವಾಗಿ ಪಶ್ಚಿಮ ಘಟ್ಟದ ಮೇಲೆ ಒಂದಿಲ್ಲೊಂದು ರೀತಿಯ ಅತ್ಯಾಚಾರಗಳು ನಡೆಯುತ್ತಿವೆ.

ಹೋರಾಟ
ಪಶ್ಚಿಮ ಘಟ್ಟ ಉಳಿಸಿ ಎಂಬ ಕೂಗು ಇಂದು ನಿನ್ನೆಯದಲ್ಲ. 20ವರುಷಗಳ ಹಿಂದೆಯೇ ಪರಿಸರಾಸಕ್ತ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಪಶ್ಚಿಮ ಘಟ್ಟ ಉಳಿಸುವ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ತದನಂತರ ಸ್ವಲ್ಪ ಮಟ್ಟಿಗೆ ತೀವ್ರತೆ ಕಳೆದುಕೊಂಡ ಈ ಅಭಿಯಾನ 2009ರಲ್ಲಿ ಗೋವಾದಲ್ಲಿ ಊರ್ಜಿತಗೊಂಡಿತು.
2010ರ ಫೆಬ್ರವರಿಯಲ್ಲಿ ತಮಿಳುನಾಡಿನ ಕೋಟಗಿರಿಯಲ್ಲಿ ಪಶ್ಚಿಮ ಘಟ್ಟ ಉಳಿಸುವ ನಿಟ್ಟಿನಲ್ಲಿ ಸಭೆಯೊಂದನ್ನು ನಡೆಸಲಾಯಿತು.ಈ ಸಭೆಯಲ್ಲಿ ಭಾರತ ಸರಕಾರದ ಪರಿಸರ ಮಂತ್ರಿಯಾಗಿದ್ದ ಜಯರಾಮ್ ರಮೇಶ ಪಶ್ಚಿಮಘಟ್ಟ ಉಳಿಸುವ ಮಹತ್ತರವಾದ ನಿರ್ಣಯವೊಂದನ್ನು ಘೋಷಿಸಿದರು. ಇದಾದ ನಂತರ ಕೆಲವೇ ವಾರಗಳಲ್ಲಿ ಪ್ರೊ.ಮಾಧವ ಗಾಡ್ಗೀಳ್ ನೇತೃತ್ವದಲ್ಲಿ ಪಶ್ಚಿಮ ಘಟ್ಟದ ಪರಿಸರ ತಜ್ಞರ ತಂಡ "ವೆಸ್ಟರ್ನ್ ಘಾಟ್ ಇಕಾಲಜೀ ಎಕ್ಸ್ ಪರ್ಟ್ಸ್ ಪ್ಯಾನೆಲ್" ಅಸ್ತಿತ್ವಕ್ಕೆ ಬಂತು.ಪ್ರೊ.ಗಾಡ್ಗೀಳ್ ತಂಡದ ವರದಿ 2011ಕ್ಕೆ ಪಶ್ಚಿಮಘಟ್ಟದ ಕುರಿತಾದ ಅಧ್ಯಯನಾತ್ಮಕ ವರದಿಯನ್ನು ಸರಕಾರಕ್ಕೆ ಸಲ್ಲಿಸಲಿದೆ.

ಐದುರಾಜ್ಯಗಳ ಪರಿಸರಾಸಕ್ತರ ಒಗ್ಗೂಡುವಿಕೆ
ಮಿಜಾರು ಶೋಭಾವನದಲ್ಲಿ ಕಳೆದ ಎರಡುದಿನಗಳಿಂದ ಪಶ್ಚಿಮಘಟ್ಟ ಉಳಿಸಿ ಹೋರಾಟದ ಒಂದು ಪುಟ್ಟ ಕಾರ್ಯಕ್ರಮ ನಡೆಯುತ್ತಿದೆ.ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಶಿವಮೊಗ್ಗದ ಪರಿಸರ ಅಧ್ಯಯನ ಕೇಂದ್ರದ ಜನಾರ್ಧನ ಹಾಗೂ ಉಡುಪಿತಾಲೂಕು ಪರಿಸರಾಸಕ್ತರ ಒಕ್ಕೂಟದ ಡಾ.ಅಶೋಕ್ ಕುಂದಾಪುರ ನೇತೃತ್ವದಲ್ಲಿ ಈ ಅಭಿಯಾನ ನಡೆಸಲಾಗುತ್ತಿದೆ. ಗೋವಾ,ಕೇರಳ, ಕರ್ನಾಟಕ,ತಮಿಳ್ನಾಡು ಮೊದಲಾದ ಪ್ರದೇಶಗಳಿಂದ ಸುಮಾರು 180ಮಂದಿ ಪರಿಸರಾಸಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಗುಂಪು ಚರ್ಚೆಗಳ ಮೂಲಕ ಪಶ್ಚಿಮಘಟ್ಟ ಉಳಿಸುವ ಹಲವು ಯೋಚನೆಗಳನ್ನು ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ. ಪರ್ಯಾಯ ಶಕ್ತಿ ವರ್ಧನೆಗಳ ಬಗ್ಗೆ ಉತ್ತಮ ಮಾಹಿತಿಗಳು ಹೊರಹೊಮ್ಮಿವೆ.

30ವರುಷಗಳ ಮಹಾಸಮರ!
ಸಂಸೆ ವಿಲೇಜ್, ಮಲ್ಲೇಶ್ವರ ಹ್ಯಾಮ್ಲೆಟ್ಗೆ ಸೇರ್ಪಡೆಗೊಳ್ಳುವ ಕುದುರೆ ಮುಖ ಪರಿಸರದಲ್ಲಿ ಗಣಿಗಾರಿಕೆ. ಪ್ರಕೃತಿಯೊಂದಿಗೆ 30ವರುಷಗಳ ಮಹಾಸಮರ!.ಹೌದು...1969ರಲ್ಲಿ ಕುದುರೆಮುಖದಲ್ಲಿ ಗಣಿಗಾರಿಕೆಗೆ ಅವಕಾಶವಾಗಿತ್ತು. ಅದು 30ವರುಷಗಳ ಸುಧೀರ್ಘಕಾಲ ಈ ಪರಿಸರದ ಗರ್ಭಸೀಳಿ ಗಣಿಗಾರಿಕೆ ನಡೆಸಲು ಅವಕಾಶ ಕಲ್ಪಿಸಲಾಗಿತ್ತು. 3,500 ಹೆಕ್ಟೇರ್ ಭೂಮಿಯಲ್ಲಿ ಎರ್ರಾಬಿರ್ರಿಯಾಗಿ ಗಣಿಗಾರಿಕೆ ನಡೆಸಲಾಗಿದೆ. 1999ರಲ್ಲಿ ಈ ಲೀಸ್ ಅವಧಿ ಪೂರ್ತಿಗೊಂಡಿತು. ಆದರೆ ವರ್ಷಂಪ್ರತಿ ಲೀಸ್ ನವೀಕರಣಗೊಳಿಸಿ 2005ರ ತನಕ ಮತ್ತೆ ಗಣಿಗಾರಿಕೆ ನಡೆಯತೊಡಗಿತು. ಆದರೆ ಪರಿಸರಾಸಕ್ತರ ತೀವ್ರ ವಿರೋಧದಿಂದಾಗಿ 2005 ಡಿಸೆಂಬರ್ ಅಂತ್ಯಕ್ಕೆ ಗಣಿಗಾರಿಕೆಯನ್ನು ಪೂರ್ತಿಯಾಗಿ ನಿಲ್ಲಿಸಲಾಯಿತು.

ಹಸುರೀಕರಣ
1969ರಿಂದ ಕುದುರೆ ಮುಖದ ಗರ್ಭಸೀಳಿರುವ ಬೃಹತ್ ಯಂತ್ರೋಪಕರಗಣಗಳು ಇಡೀ ಭೂಮಿಯ ಅಂದವನ್ನು ಕೆಡಿಸಿ ಪುಡಿಗಟ್ಟಿಬಿಟ್ಟಿವೆ. ಭೂಮಿ ಅತ್ಯಾಚರಾದಿಂದ ನಲುಗಿಹೋಗಿದೆ. ಈ ಭೂ ಭಾಗದಲ್ಲಿ ಹಸಿರು ನಾಶವಾಗಿದೆ. ಹುಡುಕಿದರೆ ಒಂದು ಸಣ್ಣ ಹುಲ್ಲೂ ಚಿಗುರದಂತಹ ಸ್ಥಿತಿ ನಿರ್ಮಾಣವಾಗಿತ್ತು. ಪ್ರಕೃತಿ ತೀವ್ರ ಹದಗೆಟ್ಟಿತ್ತು. 2005ರ ವರ್ಷಾಂತ್ಯಕ್ಕೆ ಈ ಭಾಗದಲ್ಲಿ ಗಣಿಗಾರಿಕೆ ಪೂರ್ತಿಯಾಗಿ ನಿಂತಿತ್ತು. ನಂತರ ಈ ಭಾಗದಲ್ಲಿ ಹಸಿರು ಮೊದಲಿನಂತೆ ಬೆಳಸಬೇಕೆಂಬ ಕಲ್ಪನೆ. ಅದಕ್ಕಾಗಿ 10 ಎಕ್ಕರೆ ಪ್ರದೇಶದಲ್ಲಿ ಈಗಾಗಲೇ ಹುಲ್ಲುಬೀಜಗಳನ್ನು ಬಿತ್ತಿ ಹುಲ್ಲುಬೆಳೆಸಲಾಗಿದೆ. ಮುಂದೆ 50 ಹೆಕ್ಟೇರ್ ಗಣಿಗಾರಿಕಾ ಪ್ರದೇಶದಲ್ಲಿ ಹುಲ್ಲುಬೆಳೆಸುವ ಬಗ್ಗೆ ಚಿಂತಿಸಲಾಗಿದ್ದು ಮೇ ಅಂತ್ಯದೊಳಗೆ ಹುಲ್ಲಿನ ಬೀಜಗಳ ಬಿತ್ತನೆ ಕಾರ್ಯ ನಡೆಸಲಾಗುವುದೆಂದು ಅರಣ್ಯಾಧಿಕಾರಿಗಳಾದ ಎಸ್.ವಿ.ಕಂಬಳಿ ತಿಳಿಸಿದ್ದಾರೆ.

ಪ್ರಾಣಿಗಳ ಓಡಾಟ
ಗಣಿಗಾರಿಕೆ ಆರಂಭಗೊಂಡು ನಾಲ್ಕುದಶಕಗಳು ಕಡೆದಿವೆ. ಇದೀಗ ಯಂತ್ರಗಳ ಕರ್ಕಶ ಧ್ವನಿ ಮರೆಯಾಗಿದೆ. ಮತ್ತೆ ಈ ಭಾಗದಲ್ಲಿ ವನ್ಯಪ್ರಾಣಿಗಳ ಸಂಚಾರ ಪ್ರಾರಂಭಗೊಂಡಿವೆ. ಚಿರತೆ, ಕಾಡುಕೋಣ, ಹುಲಿ, ಸಿಂಗಳೀಕ, ಜಿಂಕೆ ಮೊದಲಾದ ವನ್ಯಪ್ರಾಣಿಗಳು, ವೈವಿಧ್ಯಮಯ ಪಕ್ಷಿಗಳು ಈ ಪ್ರದೇಶದಲ್ಲಿ ಸಂಚರಿಸತೊಡಗಿವೆ. ಒಟ್ಟಿನಲ್ಲಿ ಗಣಿಗಾರಿಕೆ ನಡೆದ ಪ್ರದೇಶ ಮತ್ತೆ ಹಸಿರಿನಿಂದ ಕಂಗೊಳಿಸುವಂತಾಗುತ್ತಿದೆ. ಮರಳಿ ಕುದುರೆಮುಖ ಆ ಕಳೆ ಪಡೆದುಕೊಳ್ಳುವಂತಾಗುತ್ತಿದೆ.

0 comments:

Post a Comment