ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

35ವರುಷಗಳ ಮಹಾಸಮರ!

ವಿಶೇಷ ವರದಿ : ಹರೀಶ್ ಕೆ.ಆದೂರು
ಕುದುರೆಮುಖ: ಪಶ್ಚಿಮಘಟ್ಟದ ಅತ್ಯಂತ ರಮ್ಯತಾಣ ಕುದುರೆಮುಖ.ಗಣಿಗಾರಿಕೆ ಆರಂಭಗೊಂಡು ನಾಲ್ಕುದಶಕಗಳು ಕಡೆದಿವೆ. ಇದೀಗ ಯಂತ್ರಗಳ ಕರ್ಕಶ ಧ್ವನಿ ಮರೆಯಾಗಿದೆ. ನಿಶ್ಯಬ್ಧಘಟ್ಟಪ್ರದೇಶದ ನೆತ್ತಿಒಡೆದ ಬೃಹತ್ ಯಂತ್ರೋಪಕರಣಗಳ ವಿಕಾರ ಧ್ವನಿಗೆ ಬೆದರಿ ಕಾಲ್ಕಿತ್ತ ಪ್ರಾಣಿ ಪ್ರಬೇಧಗಳು ಮತ್ತೆ ಮೆಲ್ಲನೆ ಈ ಪ್ರದೇಶದತ್ತ ಹೆಜ್ಜೆಹಾಕತೊಡಗಿವೆ. ಇದೀಗ ಈ ಭಾಗದಲ್ಲಿ ವನ್ಯಪ್ರಾಣಿಗಳ ಸಂಚಾರ ಪ್ರಾರಂಭಗೊಂಡಿವೆ. ಚಿರತೆ, ಕಾಡುಕೋಣ, ಹುಲಿ, ಸಿಂಗಳೀಕ, ಜಿಂಕೆ ಮೊದಲಾದ ವನ್ಯಪ್ರಾಣಿಗಳು, ವೈವಿಧ್ಯಮಯ ಪಕ್ಷಿಗಳು ಗಣಿಗಾರಿಕೆ ನಡೆಸಿದ ಪ್ರದೇಶದಲ್ಲಿ ಸಂಚರಿಸತೊಡಗಿವೆ. ಒಟ್ಟಿನಲ್ಲಿ ಗಣಿಗಾರಿಕೆ ನಡೆದ ಪ್ರದೇಶದ ಹಳೆರೂಪ ಮರಳಿಪಡೆಯುವತವಕದಲ್ಲಿದೆ .


ಗಣಿಗಾರಿಕಾ ಪ್ರದೇಶದ ನೈಜ ಚಿತ್ರಣ ತಿಳಿಯುವ ಸಲುವಾಗಿ ಈ ಕನಸು ತಂಡ ಆ ಪ್ರದೇಶಕ್ಕೆ ತೆರಳಿತ್ತು. ಅದಾಗ ಸಿಂಗಳೀಕ ಛಂಗನೆ ನೆಗೆದು ನಮ್ಮ ವಾಹನದ ಎದುರಿನಲ್ಲೇ ಓಡಿಹೋಯಿತು. ಉದ್ದ ಕೊಕ್ಕಿನ ವಿಶೇಷ ಪಕ್ಷಿಯೊಂದು ಹಾರಿ ಹೋಯಿತು. ದೂರದಲ್ಲಿ ಹಕ್ಕಿಗಳ ಕಲರವ...ಪ್ರಾಣಿಗಳ ಧ್ವನಿ ಕೇಳಿಬರುತ್ತಿತ್ತು. ಅಂತೂ ಮರಳಿ ಅದೇ ನೈಜತೆಯನ್ನು ಪಶ್ಚಿಮಘಟ್ಟ ಪಡೆಯುತ್ತಿದೆಯಲ್ಲ ಎಂಬ ಸಣ್ಣ ಸಂತಸ ನಮಗಾಯಿತು...
ಸಂಸೆ ಗ್ರಾಮ, ಮಲ್ಲೇಶ್ವರ ಹ್ಯಾಮ್ಲೆಟ್ಗೆ ಸೇರ್ಪಡೆಗೊಳ್ಳುವ ಕುದುರೆ ಮುಖ ಪರಿಸರದಲ್ಲಿ ಗಣಿಗಾರಿಕೆ. ಪ್ರಕೃತಿಯೊಂದಿಗೆ 35ವರುಷಗಳ ಮಹಾಸಮರ!.ಹೌದು...1969ರಲ್ಲಿ ಕುದುರೆಮುಖದಲ್ಲಿ ಗಣಿಗಾರಿಕೆಗೆ ಅವಕಾಶವಾಗಿತ್ತು. ಅದು 30ವರುಷಗಳ ಸುಧೀರ್ಘಕಾಲ ಈ ಪರಿಸರದ ಗರ್ಭಸೀಳಿ ಗಣಿಗಾರಿಕೆ ನಡೆಸಲು ಅವಕಾಶ ಕಲ್ಪಿಸಲಾಗಿತ್ತು. 3,500 ಹೆಕ್ಟೇರ್ ಭೂಮಿಯಲ್ಲಿ ಎರ್ರಾಬಿರ್ರಿಯಾಗಿ ಗಣಿಗಾರಿಕೆ ನಡೆಸಲಾಗಿದೆ. 1999ರಲ್ಲಿ ಈ ಲೀಸ್ ಅವಧಿ ಪೂರ್ತಿಗೊಂಡಿತು. ಆದರೆ ವರ್ಷಂಪ್ರತಿ ಲೀಸ್ ನವೀಕರಣಗೊಳಿಸಿ 2005ರ ತನಕ ಮತ್ತೆ ಗಣಿಗಾರಿಕೆ ನಡೆಸಲಾಯಿತು. ಆದರೆ ಪರಿಸರಾಸಕ್ತರ ತೀವ್ರ ವಿರೋಧದಿಂದಾಗಿ 2005 ಡಿಸೆಂಬರ್ ಅಂತ್ಯಕ್ಕೆ ಗಣಿಗಾರಿಕೆಯನ್ನು ಪೂರ್ತಿಯಾಗಿ ನಿಲ್ಲಿಸಲಾಯಿತು. ಗಣಿಗಾರಿಕೆ ನಡೆಸಿದ ಪ್ರದೇಶವನ್ನು ಮೊದಲಿನಂತೆಯೇ ಏರಿಳಿತಗಳ ಮಾದರಿಯಲ್ಲಿ ಪುನರ್ ನಿರ್ಮಾಣ ಮಾಡಬೇಕೆಂಬ ಶರತ್ತು ಕೆ.ಐ.ಒ.ಸಿ.ಎಲ್ ಕಂಪೆನಿಗೆ ಇದೆಯಾದರೂ ಇದಕ್ಕಿನ್ನೂ ಮುಹೂರ್ತ ಕೂಡಿಬಂದಿಲ್ಲ.
1969ರಿಂದ ಕುದುರೆ ಮುಖದ ಗರ್ಭಸೀಳಿರುವ ಬೃಹತ್ ಯಂತ್ರೋಪಕರಗಣಗಳು ಇಡೀ ಭೂಮಿಯ ಅಂದವನ್ನು ಕೆಡಿಸಿ ಪುಡಿಗಟ್ಟಿಬಿಟ್ಟಿವೆ. ಭೂಮಿ ಅತ್ಯಾಚರಾದಿಂದ ನಲುಗಿಹೋಗಿದೆ. ಈ ಭೂ ಭಾಗದಲ್ಲಿ ಹಸಿರು ನಾಶವಾಗಿದೆ. ಹುಡುಕಿದರೆ ಒಂದು ಸಣ್ಣ ಹುಲ್ಲೂ ಚಿಗುರದಂತಹ ಸ್ಥಿತಿ ನಿರ್ಮಾಣವಾಗಿತ್ತು.ಇಡೀ ಗಣಿಗಾರಿಕಾ ಪ್ರದೇಶದಲ್ಲಿ ಭೂಮಿ ಹೊತ್ತಿಉರಿದಂತೆ ಭಾಸವಾಗುತ್ತಿದೆ. ಹಸಿರು ತೋರಣದ ನಡುವೆ ಕೆಂಪು ಕೆಂಪಾದ ಬೋರಲು ಗುಡ್ಡಗಳು ... 2005ರ ವರ್ಷಾಂತ್ಯಕ್ಕೆ ಈ ಭಾಗದಲ್ಲಿ ಗಣಿಗಾರಿಕೆ ಪೂರ್ತಿಯಾಗಿ ನಿಂತಿತ್ತು. ನಂತರ ಈ ಭಾಗದಲ್ಲಿ ಹಸಿರು ಮೊದಲಿನಂತೆ ಬೆಳಸಬೇಕೆಂಬ ಕಲ್ಪನೆ. ಅದಕ್ಕಾಗಿ ಕುದುರೆಮುಖ ವಲಯ ಅರಣ್ಯ ಇಲಾಖೆಯ ವತಿಯಿಂದ 10 ಎಕ್ಕರೆ ಪ್ರದೇಶದಲ್ಲಿ ಈ ವರ್ಷ ಹುಲ್ಲುಬೀಜಗಳನ್ನು ಬಿತ್ತಿ ಹುಲ್ಲುಬೆಳೆಸಲಾಗಿದೆ. ಮುಂದೆ 50 ಹೆಕ್ಟೇರ್ ಗಣಿಗಾರಿಕಾ ಪ್ರದೇಶದಲ್ಲಿ ಹುಲ್ಲುಬೆಳೆಸುವ ಬಗ್ಗೆ ಚಿಂತಿಸಲಾಗಿದ್ದು ಮೇ ಅಂತ್ಯದೊಳಗೆ ಹುಲ್ಲಿನ ಬೀಜಗಳ ಬಿತ್ತನೆ ಕಾರ್ಯ ನಡೆಸಲಾಗುವುದೆಂದು ಅರಣ್ಯಾಧಿಕಾರಿಗಳಾದ ಎಸ್.ವಿ.ಕಂಬಳಿ ತಿಳಿಸಿದ್ದಾರೆ.

0 comments:

Post a Comment