ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಆರೋಗ್ಯ
ಭಾಗ - 1
ಮಾನವ ಜೀವನದ ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ನಾಲ್ಕರ ಸಾಧನೆಗೂ ಆಧಾರಭೂತವಾದುದು ಈ ಶರೀರ. ಯೋಗಾಸಕ್ತನಾದವನು ಚಿತ್ತವೃತ್ತಿ ನಿರೋಧದ ಮೂಲಕ ಸರ್ವ ಸಂಯಮದ ಮೂಲಕ ಮಾನಸಿಕ, ಬೌದ್ಧಿಕ ಹಾಗೂ ಶಾರೀರಿಕ ಬಲಗಳನ್ನು ವೃದ್ಧಿಸಿಕೊಂಡು ಸದ್ಗತಿ ಪಡೆಯುತ್ತಾನೆ. ಈ ದೃಷ್ಟಿಯಿಂದ ನೋಡಿದಾಗ ಯೋಗಕ್ಕೂ, ಆರೋಗ್ಯಕ್ಕೂ ಇರುವ ಹತ್ತಿರದ ಸಂಬಂಧ ಸ್ಪಷ್ಟವಾಗಿ ಗೋಚರಿಸುತ್ತದೆ.
ಅನೇಕ ಶತಮಾನಗಳ ಅನುಭವದಿಂದ ದೇಹದ ಪ್ರತಿಯೊಂದು ಅಂಗಕ್ಕೂ, ಮಾಂಸಖಂಡಗಳಿಗೂ, ನರಗಳಿಗೂ, ಗ್ರಂಥಿಗಳಿಗೂ ವ್ಯಾಯಾಮ ಸಿಗುವಂತೆ ಆಸನಗಳನ್ನು ನಿಯೋಜಿಸಲಾಗಿದೆ. ಅವು ಒಳ್ಳೆಯ ದೇಹವನ್ನು ಬೆಳೆಸುತ್ತದೆ. ಆಸನಗಳನ್ನು ಮಾಡುವುದರಿಂದ ಕೇವಲ ಆರೋಗ್ಯವಾಗಿ ಇರುವಿಕೆಯನ್ನು ಮಾತ್ರ ಸಾಧಕನು ಗಳಿಸುವುದಿಲ್ಲ ಅದೂ ಹಣ ಕೊಟ್ಟು ಪಡೆಯುವ ವಸ್ತುವೂ ಅಲ್ಲ. ಕಷ್ಟದ ದಿನನಿತ್ಯದ ಸಾಧನೆಯಿಂದ ಮಾತ್ರ ಗಳಿಸಬಹುದಾದ ಆಸ್ತಿ ಅದು. ದೇಹ, ಮನಸ್ಸು ಮತ್ತು ಆತ್ಮಗಳ ಸಾಮರಸ್ಯದ ಅವಸ್ಥೆ ದೈಹಿಕ, ಮಾನಸಿಕ ಶಾಂತಿ, ನೆಮ್ಮದಿಗಳ ಅರಿವುಗಳನ್ನು ಪಡೆಯುವುದೇ ನಿಜವಾದ ಆರೋಗ್ಯ.


(ಯೋಗ ಎನ್ನುವ ಪದ ಸಂಸ್ಕೃತ ಮೂಲಧಾತುವಾದ ಯುಜ್ ಎನ್ನುವುದರಿಂದ ಬಂದಿದ್ದು. ಅದು ಬಂಧಿಸು, ಕೂಡಿಸು, ಚಿತ್ತವನ್ನು ನಿರ್ದೇಶಿಸಿ ಕೇಂದ್ರೀಕರಿಸು ಎನ್ನುವ ಆಜ್ಞೆಗಳನ್ನು ಕೊಡುತ್ತದೆ. ಗೀತೆಯಲ್ಲಿ ತಿಳಿಸಿದಂತೆ ಶರೀರದ, ಮನಸ್ಸಿನ ಮತ್ತು ಆತ್ಮದ ಸರ್ವ ಶಕ್ತಿಗಳನ್ನು ಭಗವಂತನೊಡನೆ ಸಂಯೋಜಿಸುವುದು ಯೋಗ. ಪತಂಜಲಿ ಋಷಿಗಳ 196 ಸೂತ್ರಗಳ 2ನೇ ಸೂತ್ರದಲ್ಲಿ ಯೋಗ: ಚಿತ್ತ ವೃತ್ತಿ ನಿರೋಧ : ಅಂದರೆ ಚಿತ್ತದ ವೃತ್ತಿಗಳನ್ನು (ಬಯಕೆಗಳನ್ನು) ಸಂಪೂರ್ಣ ತಡೆ ಹಿಡಿದ ಸರ್ವದಾ ವಿರೋಧಿಸಿ, ನಿಲ್ಲಿಸಿ ಏಕಾಗ್ರತೆ ಸಾಧಿಸುವುದೇ ಯೋಗವೆನಿಸುವುದು). ಪ್ರಾಚೀನಮುನಿ ಪತಂಜಲಿಯ ಪ್ರಕಾರ ಯೋಗದಲ್ಲಿ ಅಷ್ಟಾಂಗಗಳಿವೆ. ಅವು : 1. ಯಮ, 2. ನಿಯಮ, 3. ಯೋಗಾಸನ, 4. ಪ್ರಾಣಾಯಾಮ, 5. ಪ್ರತ್ಯಾಹಾರ 6. ಧಾರಣ 7. ಧ್ಯಾನ ಮತ್ತು 8. ಸಮಾಧಿ ಎಂಬುದಾಗಿ 8 ಅಂಗಗಳಾಗಿ ವಿಂಗಡಿಸಬಹುದು. ಇದೇ ಕಾರಣದಿಂದ ಇದನ್ನು ಅಷ್ಟಾಂಗ ಯೋಗವೆಂದು ಕರೆಯುವರು. ಈ ಅಷ್ಟಾಂಗ ಯೋಗದ 3ನೇ ಮೆಟ್ಟಲೇ ಯೋಗಾಸನ. ಮನುಷ್ಯನಿಗೆ ಗಾಳಿ, ಬೆಳಕು, ನೀರು ಎಷ್ಟು ಪ್ರಾಮುಖ್ಯವೋ ಯೋಗವೂ ಕೂಡಾ ಅಷ್ಟೇ ಅನಿವಾರ್ಯ. ಇದು ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕವಾಗಿ ಒಬ್ಬ ವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತದೆ. (ಇಂದಿನ ನಾಗರಿಕತೆಯ ಯುಗದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಯೋಗ ಸಾಧನೆಯ ಅವಶ್ಯಕತೆ ಹೆಚ್ಚಿದೆ. ನಾವು ಉಪಯೋಗಿಸುವ ಆಹಾರ, ಪಾನೀಯ, ಉಸಿರಾಡುವ ಗಾಳಿ ಎಲ್ಲವೂ ಮಾಲಿನ್ಯಗೊಂಡಿದ್ದು. ಪ್ರತಿಯೊಬ್ಬರು ರೋಗ ರುಜಿನಗಳಿಂದ ಬಳಲುವಂತಾಗಿದೆ. ಇವುಗಳಿಂದ ಸಾಧ್ಯವಿರುವಷ್ಟು ವಿಮುಕ್ತರಾಗಿ ಉತ್ತಮ ರೀತಿಯ ಆರೋಗ್ಯವಂತರಾಗಿ, ದೀರ್ಘಾಯುಗಳಾಗಿ ಬದುಕಿ ಬಾಳಲು ಯೋಗಾಭ್ಯಾಸ ನಿರಂತರ ಅಗತ್ಯ.

ಯೋಗಾಸನವು ಮನುಷ್ಯನ ಶರೀರದ ರಚನಾ ಶಾಸ್ತ್ರದ ಸಂಪೂರ್ಣ ಜ್ಞಾನದ ವೈಜ್ಞಾನಿಕ ಆಧಾರದ ಮೇಲೆ ನಿಂತಿದೆ. ಯೋಗಾಸನವೆಂಬುದು ಜಗತ್ತಿಗೆ ಒಂದು ಭಾರತದ ದೊಡ್ಡ ಕೊಡುಗೆ ಆಗಿದೆ. ಯೋಗಾಭ್ಯಾಸದಿಂದ ಜೀರ್ಣಾಂಗಗಳ ಶಕ್ತಿ ವೃದ್ಧಿಗೊಳ್ಳುತ್ತದೆ ಮತ್ತು ಮನುಷ್ಯನ ಆರೋಗ್ಯವನ್ನು ಕಾಪಾಡುತ್ತದೆ. ಇದರಿಂದ ಹಲವಾರು ರೋಗಗಳನ್ನು ತಡೆಗಟ್ಟಬಹುದು. ಶರೀರ ಸ್ವಾಸ್ಥ್ಯವನ್ನೂ ಕೊಡುವ ಕೆಲವು ಯೋಗಾಸನಗಳನ್ನಾದರೂ ನಮ್ಮ ನಿತ್ಯ ಜೀವನದಲ್ಲಿ ಆಚರಣೆಯಲ್ಲಿಟ್ಟುಕೊಳ್ಳುವುದು ಎಲ್ಲರಿಗೂ ಕ್ಷೇಮ. ಯೋಗಾಭ್ಯಾಸವನ್ನು ಗುರುವಿನ ಮಾರ್ಗದರ್ಶನವಿಲ್ಲದೆ ಕಲಿಯಬಾರದು. ಯೋಗಾಭ್ಯಾಸವೆಂದರೆ ಶುಷ್ಕ ಅಂಗ ಸಾಧನೆಯಲ್ಲ. ಎಲ್ಲ ಧರ್ಮಕ್ಕೂ ದೇಹವೇ ಮೂಲಸಾಧನ. ದೇಹವನ್ನು ಮೊದಲು ಹಿಡಿತಕ್ಕೆ ತಂದುಕೊಳ್ಳಬೇಕು. ಭಾರತೀಯ ಯೋಗ ಅದಕ್ಕೊಂದು ಸಾಧನ. ಅದು ಶರೀರವನ್ನು ಕಾಂತಿಗೊಳಿಸುತ್ತದೆ. ಯೌವನ ಹರಿಸುತ್ತದೆ. ಲವಲವಿಕೆ ತುಂಬುತ್ತದೆ. ಪಾಶ್ಚಾತ್ಯರೂ ಈಗೀಗ ಈ ಯೋಗದ ಬೆನ್ನು ಹತ್ತಿದ್ದಾರೆ. ಯೋಗ ಔಷಧಕ್ಕೊಂದು ಪರ್ಯಾಯ ರಾಮಬಾಣ. ಮಾನವದ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗಾಭ್ಯಾಸವೇ ಅತ್ಯುತ್ತಮ ರಾಜಮಾರ್ಗ. ಯೋಗಾಭ್ಯಾಸವು ಬೌದ್ಧಿಕವಾಗಿ ಮೆದುಳನ್ನು ಆರೋಗ್ಯದಲ್ಲಿಟ್ಟು ಸಮಸ್ತವಾಗಿ ಶಕ್ತಿಯುತವಾಗಿ ಮಾಡಿ ಔಷಧಿಗಳಿಂದ ಗುಣಪಡಿಸಲಾಗದ ರೋಗದಿಂದ ಮುಕ್ತ ಪಡೆಯುವುದು ಸಾಧ್ಯ. ಯೋಗಾಸನಗಳು ಕೇವಲ ದೈಹಿಕ ವ್ಯಾಯಾಮಗಳಾಗದೆ, ಅವು ನಿಲುವುಗಳು ಆಗಿವೆ. ಶುಭ್ರವಾದ ಸ್ಥಳ, ಒಂದು ಜಮಖಾನೆ ಮತ್ತು ಮನಸ್ಸಿನ ದೃಢತೆ ಬೇಕಾಗಿರುತ್ತದೆ. ಇತರ ದೈಹಿಕ ವ್ಯಾಯಾಮಗಳಿಗೆ ವಿಸ್ತಾರವಾದ ಸ್ಥಳಗಳೂ ಹೆಚ್ಚಿನ ಖರ್ಚಿನ, ಸಾಧನ ಸಾಮಾಗ್ರಿಗಳೂ ಜನರೂ ಬೇಕು. ಆದರೆ ಆಸನಗಳನ್ನು ಒಂಟಿಯಾಗಿಯೇ ಮಾಡಬಹುದು. ದೇಹಕ್ಕೆ ಬೇಕಾದ ಭಾರ ಪ್ರತಿಭಾರಗಳನ್ನು ಅಂಗಗಲೇ ಒದಗಿಸುತ್ತವೆ. ಅವುಗಳನ್ನು ಬೆಳೆಸಿಕೊಂಡಲ್ಲಿ ಅವಶ್ಯಕವಾದ ಕ್ಷಿಪ್ರತಾ ಸಮತಾ, ಸಹಿಷ್ಣುತಾ ಮತ್ತು ಹೆಚ್ಚಿನ ಶಕ್ತಿಗಳು ಬರುತ್ತವೆ.
ಇಡಿಯ ಮಾನವ ಜನಾಂಗಕ್ಕೆ : ನಿಜವಾದ ಕೊಡುಗೆಯಾಗಬಲ್ಲ: ಭಾರತೀಯ ಸಂಸ್ಕೃತಿಯ ಮುಖ್ಯಾಂಶಗಳಲ್ಲಿ : ಯೋಗ ಎಂಬುವುದು ಗಣ್ಯ ಸ್ಥಾನವನ್ನು ಪಡೆಯುತ್ತದೆ. ಮಾನವನ ಸರ್ವತೋಮುಖವಾದ ಆರೋಗ್ಯದ ದೃಷ್ಟಿಯಿಂದ ಯೋಗಾಸನಗಳು ಎಂತಹ ಪವಾಡ ಸದೃಶ ಪರಿಣಾಮವನ್ನು ಉಂಟು ಮಾಡುತ್ತವೆ ಎಂಬುವುದನ್ನು ಅನುಭವದಿಂದ ಸಿದ್ಧಿ ಮಾಡಿಕೊಂಡ ಅನೇಕ ವಿದೇಶೀ ಜಿಜ್ಞಾಸುಗಳು ಸಹ ಈಚೆಗೆ ಯೋಗದ ಕುರಿತು ಸಾಕಷ್ಟು ಸಾಧನೆ ಪ್ರಜಾರಾದಿಗಳನ್ನು ಕೈಗೊಂಡಿದ್ದಾರೆ. ಪೂರ್ವಕಾಲದ ಬೆಳೆಯಿಸಿಕೊಳ್ಳುವ ಮನೋವೃತ್ತಿಯು ಕ್ರಮೇಣ ಕಡಿಮೆಯಾಗುತ್ತಾ ಸಮಾಧಾನವಾಗುತ್ತದೆ. ಯೋಗ ನಮ್ಮ ದೇಶದ ಒಂದು ಪುರಾತನ ವಿದ್ಯೆ, ಕಲೆ, ವಿಜ್ಞಾನ ಹಾಗೂ ಸಂಸ್ಕೃತಿ. ಯೋಗವೆಂಬುದು ಅನಾದಿ ಕಾಲದಿಂದ ಪ್ರಯೋಜನ ಪ್ರಮಾಣವಾದರಿಂದ ಕೂಡಿ ಸೂತ್ರಬದ್ಧವಾಗಿ ನಮಗೆ ಉಳಿದು ಬಂದ ವಿಜ್ಞಾನ ಶಾಸ್ತ್ರ, ಸಾವಿರಾರು ವರ್ಷಗಳ ಹಿಂದೆ ಗ್ರಥಿತವಾದ ಈ ಶಾಸ್ತ್ರವು ಮಾನವನ ಪರಿಪೂರ್ಣತೆಗೆ ಸಾಧಕವಾದ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ವಿಷಯಗಳನ್ನು ವ್ಯಕ್ತಿಯ ಏಳಿಗೆಯನ್ನು ಗಳಿಸಿಕೊಡುವಂತಹದು. ಯೋಗದ ಬಗೆಗೆ ಬರೆದ ಪ್ರಾಚೀನ ಮುನಿ ಎಂದರೆ ಪತಂಜಲಿ ಎಂದೇ ಹೇಳಬೇಕು. ಕ್ರಿಸ್ತಪೂರ್ವ 500 ವರ್ಷಗಳ ಹಿಂದೆ ಮಹರ್ಷಿ ಪತಂಜಲಿ ಬರೆದ ಪತಂಜಲಿ ಯೋಗ ಸೂತ್ರ. ಯೋಗ ಶಾಸ್ತ್ರದಲ್ಲೇ ಒಂದು ಮೈಲಿಗಲ್ಲು. ಯೋಗದಲ್ಲಿಯೂ ಹಲವು ವಿಧಗಳಿವೆ. ರಾಜಯೋಗ, ಕರ್ಮಯೋಗ, ಭಕ್ತಿಯೋಗ, ಜ್ಞಾನಯೋಗ ಹೀಗೆ ಹೆಸರಿಸಬಹುದು. ಆದರೆ ಎಲ್ಲದರ ಉದ್ದೇಶ ಮತ್ತು ಗುರಿ ಒಂದೇ ಆಗಿದೆ. ಈಚೆಗೆ ಪಶ್ಚಿಮ ರಾಷ್ಟ್ರಗಳಲ್ಲಿ ವಿಮಾನ ಚಾಲಕರಂಥ ತಂತ್ರಜ್ಞರು, ಹಿರಿಯ ಜವಾಬ್ದಾರಿಗಳನ್ನು ನಿರ್ವಹಿಸುವ ಉದ್ಯಮಾಧಿಕಾರಿಗಳು ಕೂಡಾ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗದ ಮೊರೆ ಹೋಗುತ್ತಾರೆ. ಇತ್ತೀಚೆಗೆ ವ್ಯೋಮ ಯಾತ್ರೆ ಮಾಡಿದ ಭೌತದ ಗಗನಯಾನಿ ರಾಕೇಶ ಶರ್ಮಾ ಬಾಹ್ಯಾಕಾಶದಲ್ಲಿ ತಲೆದೋರುವ ಶಾರೀರಿಕ, ಮಾನಸಿಕ ವೈಪರೀತ್ಯಗಳ ಸಂದರ್ಭದಲ್ಲಿ ಯೋಗಾಸನಗಳ ಪ್ರಯೋಗ ನಡೆಸಿದ್ದು ವಿಶ್ವದ ಗಮನ ಸೆಳೆದದ್ದು ನಾವೆಲ್ಲರೂ ತಿಳಿದ ವಿಚಾರ.
ಸಾಮಾನ್ಯವಾಗಿ ನಾನಾ ಒತ್ತಡಗಳಿಂದ ನಿದ್ರೆ ಬಾರದೆ ವಿಶ್ರಾಂತಿ ಸಿಗದಿರುವ ವ್ಯಕ್ತಿಗಳಿಗೆ ಅಡ್ಡ ಪರಿಣಾಮದ ಮಾತ್ರೆಗಳಿಲ್ಲದೆ ನೈಜ ವಿಶ್ರಾಂತಿ ನೀಡಬಲ್ಲ ಸಾಧನವಾಗಿದೆ ಯೋಗಾಭ್ಯಾಸ. ಒಬ್ಬ ವ್ಯಕ್ತಿಯ ದೇಹದ ಕಾರ್ಯ ನಿರ್ವಹಣೆಯ ಮೇಲೆ ಮತ್ತು ರೋಗ ರುಜಿನಗಳನ್ನು ನಿವಾರಿಸುವುದರ ಮೇಲೆ ನಿಶ್ಚಿತ ಅಂಗಚಲನೆಗಳು ಮತ್ತು ಆಸನಗಳು ಫಲಪದ್ರ ರೀತಿಯಲ್ಲಿ ಪರಿಣಾಮಕಾರಿಯಾಗಬಲ್ಲವು ಎಂಬುದನ್ನು ವಿಜ್ಞಾನಿಗಳು ಪ್ರಯೋಗಾಲಯಗಳಲ್ಲಿ ವೈಜ್ಞಾನಿಕ ಶಿಸ್ತಿನಿಂದ ಅಧ್ಯಯನ ಮಾಡಿ ಯೋಗದಿಂದ ಸಾಕಷ್ಟು ಪ್ರಯೋಜನವಿದೆಯೆಂದು ತರ್ಕಬದ್ಧ ತೀರ್ಮಾನಕ್ಕೆ ಬಂದಿದ್ದಾರೆ. ಅದು ಮೂಲಭೂತ ದೈಹಿಕ ಕಾರ್ಯಾಚರಣೆಗಳನ್ನೇ ಸುಧಾರಿಸಬಲ್ಲದೆಂದು ಕಂಡುಕೊಂಡಿದ್ದಾರೆ. ಬಹುಪಾಲು ಜನರಿಗೆ ಇದು ಎಳೆಯ ಯುವಕರಿಗೆ ಮಾತ್ರ ಸೀಮಿತವಾದ ಕ್ರಿಯೆ ಎಂಬ ತಪ್ಪು ಭಾವನೆ ಇದೆ. ಆದರೆ ಅದು ನಿಜವಲ್ಲ. ಅದು ದೇಹ ದಂಡನೆಯೂ ಅಲ್ಲ. ಎಲ್ಲಾ ವಯಸ್ಸಿನವರಿಗೂ ಉಡುಗಿಹೋದ ಶಕ್ತಿಯ ಪುನರ್ಸ್ಥಾಪನೆಗೆ ಯೋಗಾಭ್ಯಾಸ ಬೇಕು. ಇದರ ಪ್ರಯೋಜನ ಅಪರಿಮಿತ. ಆಫೀಸಿನಲ್ಲಿ ದೇಹ ದಣಿಕೆಯಿಲ್ಲದೆ ಫ್ಯಾನ್ ಗಾಳಿಯ ಅಡಿಯಲ್ಲಿ ಅಥವಾ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತುಕೊಳ್ಳುವ ಉದ್ಯಮಪತಿಗಳಿಗೆ ದೇಹಕ್ಕೆ ಅಗತ್ಯವೆನಿಸುವ ವ್ಯಾಯಾಮ ಸಿಗುವುದಿಲ್ಲ. ಕೆಲಸ ಹಾಗೂ ವ್ಯಾಯಾಮ ಇವೆರಡನ್ನೂ ಹಲವಾರು ಮಂದಿ ಒಂದೇ ಎಂದು ತಿಳಿದಿದ್ದಾರೆ. ಆದರೆ ವಸ್ತು ಸ್ಥಿತಿ ಹಾಗಲ್ಲ. ದೇಹದಲ್ಲಿ ಆರೋಗ್ಯದ ಕಳೆ, ಚೈತನ್ಯದ ನೆಲೆ ಇರಬೇಕಾದಲ್ಲಿ ಎಲ್ಲಾ ಅಂಗಗಳಿಗೆ ಸರ್ವತೋಮುಖವಾದ ಕೆಲಸ ಸಿಗಬೇಕು. ವ್ಯವಸ್ಥಿತ ಚಲನೆಗೆ ದೇಹಕ್ಕೆ ದಣಿವು ಆಗಬೇಕು. ಉತ್ತಮ ಸಮತೂಕದ ಆಹಾರ ಪೋಷಣಾಂಶಗಳು, ಗಾಢನಿದ್ರೆ ಹಾಗೂ ಶುಭ್ರಗಾಳಿ ಇವಿಷ್ಟು ದೇಹದ ಆರೋಗ್ಯಕ್ಕೆ ಅಷ್ಟೇ ಅಗತ್ಯ ಯೋಗಾಭ್ಯಾಸ ಕೂಡ.
ಯೋಗದಲ್ಲಿ ಪ್ರತಿಯೊಂದು ಆಸನದಲ್ಲೂ ಮೂರು ಮುಖ್ಯಾಂಶಗಳುಂಟು.
1. ದೈಹಿಕ ಚಲನೆ, 2. ಮಾನಸಿಕ ನಿಯಂತ್ರಣ ವಿಧಾನ ಮತ್ತು. 3. ಶ್ವಾಸಕೋಶದ ನಿರ್ದಿಷ್ಟ ಹತೋಟಿ ಯೋಗಾಭ್ಯಾಸವನ್ನು ಇಂಥವರು, ಇಷ್ಟೇ ವಯಸ್ಸಿನವರು, ದೈವಭಕ್ತರು, ಸ್ತ್ರೀ ಯಾ ಪುರುಷರು ಕೈಗೊಳ್ಳಬೇಕಲೆಂಬ ಪ್ರತಿಬಂಧಕ ನಿಯಮವಿದೆಯೆಂದು ಬಹುಜನರಲ್ಲಿ ತಪ್ಪು ಭಾವನೆಯಿದೆ. ಇದು ಸರಿಯಲ್ಲ. ಸ್ತ್ರೀ ಪುರುಷರು ಯಾರೇ ಆಗಿರಲಿ ಯಾವ ಹಂತದಲ್ಲಾದರೂ ಸೂಕ್ತ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ಕೈಗೊಂಡು ತಮ್ಮ ಆರೋಗ್ಯ, ಮಾನಸಿಕ ಸ್ಥಿತಿಗತಿಗಳನ್ನು ಉತ್ತಮಪಡಿಸಿಕೊಳ್ಳಬಹುದು. ತನ್ಮೂಲಕ ನರಮಂಡಲ ವ್ಯವಸ್ಥೆ, ರಕ್ತಚಲನೆ, ಇವೆಲ್ಲ ಸಂಪನ್ನವಾಗಿ ಶುದ್ಧವಾಗಿ ಆರೋಗ್ಯವಾಗಿ ಇರುವಂತೆ ನೋಡಿಕೊಳ್ಳಬಹುದು. ಯೋಗಾಭ್ಯಾಸ ಒಂದು ಸಾಮಾನ್ಯ ಆರೋಗ್ಯ ವ್ಯವಸ್ಥೆ.
ಪಾಶ್ಚಾತ್ಯರು ಈಗೀಗ ಯೋಗದ ಪ್ರಯೋಜನಗಳನ್ನು ಅರಿತುಕೊಂಡು ಅದರ ಬೆನ್ನು ಹತ್ತಿದ್ದಾರೆ. ಯೋಗದ ಕುರಿತು ವೈಜ್ಞಾನಿಕ ವಿಚಾರಗಳನ್ನು ನಮಗೆ ಕೊಡುತ್ತಾ ಸಮರ್ಥನೆಗಳನ್ನು ನೀಡುತ್ತಿದ್ದಾರೆ. ಆದರೆ ಹಿತ್ತಲ ಗಿಡ ಮದ್ದಲ್ಲ ಎಂದು ಭಾವಿಸದೆ ನಮ್ಮ ಪೂರ್ವಿಕರು ಬಿಟ್ಟುಹೋದ ಈ ಯೋಗ ಸಂಪತ್ತನ್ನು ನಮ್ಮ ಯುವ ಜನಾಂಗ ಬೆಳೆಸಿ ಉಳಿಸಿಕೊಳ್ಳಬೇಕಾಗಿದೆ. ಈ ದಿಸೆಯಲ್ಲಿ ಪ್ರತೀ ನಗರ, ಗ್ರಾಮಗಳಲ್ಲಿ ಯೋಗದ ತರಬೇತಿ ಕೇಂದ್ರಗಳನ್ನು ತೆರೆದು ಈ ಮೂಲಕ ನಮ್ಮ ಸಮಾಜದಲ್ಲಿ ಜಾಗೃತಿಯನ್ನುಂಟು ಮಾಡಬೇಕಾಗಿದೆ. ಪ್ರತೀ ನಗರಕ್ಕೊಂದು ಯೋಗ ಕೇಂದ್ರವನ್ನು ತೆರೆಯಲು ಸರಕಾರವು ಪ್ರಯತ್ನ ಮಾಡಬೇಕಾಗಿದೆ. ಪ್ರತೀ ಶಾಲೆ, ಕಾಲೇಜುಗಳಲ್ಲಿ ಯೋಗಾಸನ ಶಿಕ್ಷಣವನ್ನು ಪಾಠೇತರ ಚಟುವಟಿಕೆಗಳಲ್ಲಿ ಸೇರಿಸಿಕೊಂಡು ನಮ್ಮ ದೇಶದ ಈ ಒಂದು ಅನಘ್ರ್ಯ ಸಂಪತ್ತನ್ನು ಉಳಿಸಿಕೊಂಡು ಬೆಳೆಸಬೇಕೆಂದು ಬಯಸುವುದು ಸೂಕ್ತವಾದೀತು. ಇಲ್ಲವಾದಲ್ಲಿ ನಮ್ಮೀ ದೇಶದ ವಿದ್ಯೆಯನ್ನು ಕಲಿಯಲು ನಮ್ಮ ಮುಂದಿನ ಪೀಳಿಗೆ ಪಾಶ್ಚಿಮಾತ್ಯ ದೇಶಗಳಿಗೆ ಪ್ರಯತ್ನ ಪೂರ್ವಕ ಹೋಗಬೇಕಾದೀತು. ಸ್ವಿಟ್ಜರ್ಲ್ ಲ್ಯಾಂಡ್ ದೇಶವಂತೂ ಯೋಗದ ಅಂತರಾಷ್ಟ್ರೀಯ ಕೇಂದ್ರವಾಗಿ ಬೆಳೆಯುತ್ತಿದೆ. ಒಟ್ಟಿನಲ್ಲಿ ನಾವು ಈಗ ಜಾಗೃತರಾಗದಿದ್ದಲ್ಲಿ ಮುಂಬರಬಹುದಾದ ದುರಂತಕ್ಕೆ ನಾವೇ ಹೊಣೆಗಾರರಲ್ಲವೇ?
'ಯೋಗರತ್ನ' ಗೋಪಾಲಕೃಷ್ಣ ದೇಲಂಪಾಡಿ
ಲೇಖಕರು ನಿವೃತ್ತ ಸೀನಿಯರಹೆಲ್ತ್ಇನ್ಸ್ಪೆಕ್ಟರ್. ಮುಂದೆ ನಿರಂತರವಾಗಿ ಈ ಕನಸಿನಲ್ಲಿ ಆರೋಗ್ಯ ಅಂಕಣದ ಮೂಲಕ ಯೋಗದ ಬಗ್ಗೆ ಮಾಹಿತಿ ನೀಡಲಿದ್ದಾರೆ. ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರ ಪರಿಚಯ ಮುಂದಿನ ಕಂತಿನಲ್ಲಿ ಮೂಡಿಬರಲಿದೆ. - ಸಂ.

0 comments:

Post a Comment