ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ಪ್ರೇಮ ಭಾಷೆಯನ್ನು ಅಭಿವ್ಯಕ್ತಪಡಿಸುವ ಮತ್ತು ಪ್ರೇಮಿಗಳಿಗೆ ಪ್ರೇಮ ನಿವೇಧನೆಗೆ ಕೈಗೆಟಕುವ ಸುಲಭದ ಹೂವುಗಳೆಂದರೆ ಬೇಲಿಯ ಹೂವುಗಳು. ಕೈಯಲ್ಲಿ ಹೂವು ಹಿಡಿದ, ಇಲ್ಲ ಹೂವುಗಳನ್ನು ಲೈಕ್ ಮಾಡುವ ಹುಡುಗ ಹೂವಿನಂತೆ ಮನಸ್ಸಿರುವವನು ಅನ್ನುವ ಮಾತೊಂದಿದೆ. ಆ ಹೂವು ಅತೀ ಬೆಲೆಬಾಳುವ ರೋಜಾ ಹೂವು ಇಲ್ಲವೆ ತುಲಿಪ್ಗಳ ಬೊಕೆಯಾಗಿರಬೇಕಾಗಿಲ್ಲ. ಇದೊಂದು ಪ್ರೇಮ ಪರಿಭಾಷೆಯ ಅಭಿವ್ಯಕ್ತಿ ಮಾತ್ರ. ಅಂತಹ ಸೊಗಾಸಾದ ಹೂವುಗಳನ್ನು ಹುಡುಕುತ್ತಾ ಹೋದರೆ ನಮ್ಮೂರ ಬೇಲಿಗಳು ಎಲ್ಲಕ್ಕಿಂತಲೂ ಹೆಚ್ಚು ಶ್ರೀಮಂತವಾಗಿರುವವುಗಳು. ಹಳದಿ, ನೀಲಿ, ಕೆಂಪು, ಬಿಳಿ ಬಣ್ಣದ ಹೆಸರಿಡದ, ಹೆಸರಿಲ್ಲದ, ನವ ಹೆಸರಿನ ಹೂವುಗಳ ಅರಳಾಟದ ಸಮಯ ಪ್ರೇಮಿಗಳನ್ನು ಮಾತ್ರವಲ್ಲ; ಎಂತಹವರನ್ನಾದರೂ ಒಮ್ಮೆ ತನ್ನತ್ತ ಸೆಳೆಯದ್ದೇನಲ್ಲ.

ಈ ಹೂವುಗಳ ಬಗ್ಗೆ ಒಲವು ತೋರಿಸುವ ನಿದರ್ಶನಗಳನ್ನು ನಮ್ಮ ಆದಿ ಮಹಾಕಾವ್ಯಗಳು ನೀಡುತ್ತಾ ಬಂದಿದೆ. ಉದಾಹರಣೆಗೆ ಸೌಗಂಧಿಕಾ ಪುಷ್ಪಾಹರಣ, ಸೀತೆ ಬಿಳಿಯ ಹೂವಿಗಾಗಿ ಪರಿತಪಿಸುವ ಸನ್ನಿವೇಶಗಳು ನಮಗೆ ಕಾಣಸಿಗುತ್ತವೆ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಬೇಲಿ ಬದಿಯಲ್ಲಿ ಇಂತಹ ಬಗೆ ಬಗೆಯ ಹೂವುಗಳು ತಮ್ಮಷ್ಟಕ್ಕೆ ತಾವು ಅರಳಿ ಬಾಡಿ ಹೋಗುವುದನ್ನು ನೋಡಿರುತ್ತೇವೆ. ಅದರಲ್ಲೂ ಸೀತಾ ಹೂವು ಬಲು ಅಪರೂಪದ ಹೂವು. `ಕೊರಳ ಬಾರ್' ಅನ್ನುವುದು ಇದರ ತುಳು ನಾಮಧೇಯ. ಇದು ಮರದ ಕಾಂಡದಲ್ಲೋ , ಬೊಡ್ಡೆಯಲ್ಲೋ ಬೆಳೆಯುವ ಪರಾವಲಂಬಿ ಸಸ್ಯ. ಈ ಹೂವಿಗೆ ಮನಸೋತ ಸೀತೆಗೆ ಹನುಮಂತ ಆ ಹೂವನ್ನು ತಂದುಕೊಡುತ್ತಾನಂತೆ. ಅದೇ ರೀತಿ ದ್ರೌಪದಿ ಭೀಮನಲ್ಲಿ ಸೌಗಂಧಿಕಾ ಪುಷ್ಪವನ್ನು ಕೇಳುವ ಸನ್ನಿವೇಶ ಕೂಡ ಇದೆ.

ಆದರೆ ಪ್ರೇಮವನ್ನು ವ್ಯಕ್ತಪಡಿಸುವಲ್ಲಿ ಹೆಚ್ಚಾಗಿ ಹುಡುಗನೆ ಹೂವನ್ನು ಕೊಟ್ಟು ಹುಡುಗಿಯಲ್ಲಿ ತನ್ನ ಮನದಾಸೆಯನ್ನು ಹೇಳುಕೊಳ್ಳುವುದು ಆಧುನಿಕ ಪರಿ. ಗುಲಾಬಿ ಈ ಪ್ರೇಮ ಪರಿಭಾಷೆಯ ಮಧ್ಯವರ್ತಿಯಾದರೆ, ಇತ್ತೀಚಿನ ದಿನಗಳಲ್ಲಿ ಗುಲಾಬಿಯಂತೆ ವಿದೇಶಿ ಹೂವುಗಳ ಸರದಿ ನಮ್ಮ ದೇಶವನ್ನು ಪ್ರವೇಶಿಸಿದೆ. ಪ್ರೇಮದ ಮಾಧ್ಯಮಿಕ ಮತ್ತು ಭಾಷಿಕವಾಗಿ ಬೊಕೆಗಳೆನ್ನುವ ಅಲಂಕಾರಿತ ಹೂವಿನ ಜೋಡಣೆಗಳು ಮನಸ್ಸುಗಳನ್ನು ಆಕಷರ್ಷಿಸಿ ಪ್ರೇಮಕ್ಕೆ ಭದ್ರವಾದ ಬುನಾದಿಯನ್ನು ಹಾಕುತ್ತವೆ. ನಿಜ ಜೀವನದಲ್ಲಿರುವಂತೆಯೆ ಸಿನಿಮಾಗಳಲ್ಲಿಯೂ ಇಂತಹ ಸನ್ನಿವೇಶಗಳನ್ನು ಕಾಣಬಹುದಾಗಿದೆ.

ಹುಡುಗಿಯನ್ನು ಪ್ರಪೋಸ್ ಮಾಡುವ ನಿಜವಾದ ರೀತಿಯೆಂದರೆ ಹುಡುಗಿಯ ಎದುರು ಒಂದು ಮೊಣಕಾಲಮೇಲೆ ಕುಳಿತ ಹುಡುಗ ಹೂವನ್ನು ಪ್ರೀತಿಯ ಸಂಕೇತವಾಗಿ ನೀಡುತ್ತಾ, ನನ್ನ ಪ್ರೀತಿ ನಿನಗೆ ಮೀಸಲು ಅನ್ನುವುದು. ಇದು ಪ್ರೇಮ ಭಾಷೆಯನ್ನು ವ್ಯಕ್ತಪಡಿಸುವ ಒಂದು ದಿಟ್ಟ ಮಾದರಿ.

`ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು' ಇದೊಂದು ಚಿತ್ರಗೀತೆಯ ಹಾಡಾದರೆ ಪ್ರೇಮಿಗಳ ಎದೆಯಲ್ಲಿ ಧೈರ್ಯದ ಕಹಳೆಯೂದುವ ಧ್ಯೇಯ ಗೀತೆ. ಆದರೆ ಪ್ರೀತಿ ಮಾಡುವವರಿಗೆ ನಿಜವಾಗಿಯೂ ತಮ್ಮ ಪ್ರೀತಿಯನ್ನು ಹಂಚಿಕೊಳ್ಳುವ ಧೈರ್ಯವಿಲ್ಲದಿರುವುದು ವಾಸ್ತವ. ಹಾಗಾಗಿ ತಮ್ಮ ಪ್ರೀತಿಯನ್ನು ಏಕಾಂತದಲ್ಲೋ, ಕನಸಿನಲ್ಲೋ ಎಡತಾಕುತ್ತಿರುತ್ತಾರೆ. ಹೂವುಗಳನ್ನು ಕೈಯಲ್ಲಿ ಹಿಡಿದುಕೊಂಡರೂ ಅದನ್ನು ಸಾರಾಸಗಟಾಗಿ ಪ್ರೇಮಿಕೆಯ ಎದುರು ನಿಂತು ನಿವೇದಿಸುವ ಪರಿ ಕಾಣದೆ ಪ್ರೀತಿಯನ್ನು ಫ್ರಿಜ್ನೊಳಗೆ ಬಚ್ಚಿಟ್ಟಂತೆ ತಮ್ಮ ಅಂತರಂಗದೊಳಗೆ ಬಚ್ಚಿಟ್ಟುಕೊಳ್ಳುವುದು ಮತ್ತು ಪ್ರೇಮಿಸುವ ರೀತಿಯನ್ನೆ ಕಳೆದುಕೊಳ್ಳುವುದು ಅವರ ಕೊರತೆಗಳಲ್ಲೊಂದು. ಈ ಪ್ರೀತಿಯ ಕೊರತೆಗಳನ್ನು ಹಚ್ಚಿಸಿ ಮತ್ತು ಹೆಚ್ಚಿಸಿಕೊಂಡವರು ದೇವದಾಸರೋ, ಭಗ್ನ ಪ್ರೇಮಿಗಳೋ ಇಲ್ಲ, ಹುಚ್ಚರಾಗುವುದೋ ಸಾಮಾನ್ಯ. ಪ್ರೀತಿಯ ಅಭಿವ್ಯಕ್ತ ಇಲ್ಲಿ ಅನಿವಾರ್ಯ. `ಹಾಲಾದರೂ ಸುರಿಯೆ ಬಂಗಾರದ ಕಣ್ಣೆ, ಕೊನೆಗೆ ನೀರಾಗಿಯಾದರೂ ಹರಿಯೆ ದು:ಖದ ಒಡಲೆ' ಅಂತಾದರೂ ಪ್ರೀತಿಸುವುದನ್ನು ತಿಳಿಸಿ ಸೋಲಾದರೆ ಅತ್ತಾದರೂ ಸಮಾಧಾನಿಸಿಕೊಳ್ಳಬೇಕಾಗಿರುವುದು ಪ್ರೇಮಿಗಳಿಗೆ ಅನಿವಾರ್ಯ. ಹಾಗೆ ಹೇಳದೆ ಕುಳಿತ ಮಾತುಗಳೆಲ್ಲ ಒಂದು ಹೂವು ಹೇಳುವುದಾದರೆ ಪ್ರೀತಿಯ ರಾಯಭಾರ ಅದೆಷ್ಟು ಹಗುರ. ಅದಕ್ಕೇನೆ ಹೂವು ಪ್ರೇಮ ಸಂಕೇತ. ಹೂವು ಹಿಡಿದ ಹುಡುಗ ಪ್ರೇಮಹೃದಯಿ. ಪ್ರೇಮಿಸಲ್ಪಡುವವಳು ಪ್ರೇಮಿಕೆ. ಆ ಪ್ರೇಮದ ನಿವೇದನೆಯ ಪರಿ ಬೇಲಿಯ ಒಂದು ಹಳದಿ ಹೂವಿನಿಂದ ಆರಂಭವಾಗುವುದು `ಬಂಧನ' ಚಿತ್ರದ ಹೈಲೈಟ್!

ಮೆಡಿಕಲ್ ಕ್ಯಾಂಪಿಗೆ ಹೊರಡುವ ಡಾಕ್ಟರ್ಸ್ ಕುದುರೆಮುಖದ ಕೊಚ್ಚೆಯಲ್ಲಿಳಿದು ಮೈಕೈ ತೋಯಿಸಿಕೊಳ್ಳುವ ದೃಶ್ಯದೊಂದಿಗೆ ಆರಂಭವಾಗುವ ಚಿತ್ರ ಮುಂದೆ ನಾಯಕ ಹರೀಶ್ ಹಳದಿ ಕಾಡು ಹೂವೊಂದನ್ನು ನಾಯಕಿ ನಂದಿನಿಗೆ ನೀಡುತ್ತಾ ಅವಳ ಮನಸ್ಸನ್ನು ಗೆಲ್ಲುವ ಪ್ರಯತ್ನ ಮಾಡುತ್ತಾನೆ. ಆದರೆ ಆ ಹೂವು ಅವಳ ಕೈಗೆ ಸಿಗದೆ ನೀರಿನಲ್ಲಿ ಕೊಚ್ಚಿ ಹೋಗುವುದು ಒಂದು ಉಪಮೆಯಾಗಿ ಚಿತ್ರದ ಕಥೆಯನ್ನು ಹೇಳುವಂತಿದೆ.

ಕುದುರೆಮುಖದ ಕಬ್ಬಿಣದ ಅದಿರಿನ ಕಾರ್ಖಾನೆ, ಸುತ್ತ ಮುತ್ತಗಣಿಗಾರಿಕೆಯಿದ್ದರೂ ಪ್ರಕೃತಿ ಸೌಂದರ್ಯವನ್ನು ಉಳಿಸಿಕೊಂಡು ನಯನಮನೋಹರವಾಗಿರುವ ದೃಶ್ಯವನ್ನು ಮರೆಯುವಂತೆಯೇ ಇಲ್ಲ. ಹಸಿರು ಬೆಟ್ಟಗಳ ನಡುವೆ ಹೆಬ್ಬಾವಿನಂತೆ ಸೀಳಿಕೊಂಡು ಸಾಗುವ ಟಾರು ರಸ್ತೆ, ಚಿತ್ರವಿಚಿತ್ರ ಪರಿಚಿತ-ಅಪರಿಚಿತ ಮರಗಳ ರಾಶಿ, ಕಾಡುಪ್ರಾಣಿ, ವಿವಿಧ ನಮೂನೆಯ ಪಕ್ಷಿಗಳು, ಉದ್ಯಾನವನ, ಹೂವುಗಳು, ನೀರು ನೆಲೆ ನಿಂತ ಲಕ್ಯಾ ಡ್ಯಾಂ, ಅದರ ಪಕ್ಕದಲ್ಲಿಯೆ ಹಾದು ಹೋಗುವ ಅದ್ಭುತ ದಾರಿ, ಮೆಟ್ಟಿಲುಗಳು, ಸುಂದರವಾಗಿ ಬೀಸುವ ಗಾಳಿ... ವ್ಹಾ!

ಉದ್ಗಾರ ಪ್ರಕೃತಿ ಪ್ರೇಮಿಗಳದ್ದು. ಇಂತಹ ಅದ್ಭುತ ಪ್ರಕೃತಿಯ ದೃಶ್ಯವನ್ನು ನೋಡಿದ್ದೆ, ಡಿಗ್ರಿ ಕೊನೆಯ ವರ್ಷದಲ್ಲಿ. ಕುದುರೆಮುಖಕ್ಕೆ ಪಿಕ್ನಿಕ್ ಹೊರಟ ನಮಗೆ ನಮ್ಮ ಉಪನ್ಯಾಸಕರಾದ ಶ್ರೀಧರ ಶೆಟ್ಟಿಯವರು ಕಾರ್ಖಾನೆ ಮೇಲ್ವಿಚಾರಕರ ಅನುಮತಿಯನ್ನು ಪಡೆದು ಕಬ್ಬಿಣದ ಅದಿರಿನ ಅಗೆತದಿಂದ ಹಿಡಿದು ಅದು ದ್ರವ ರೂಪದ ಕಬ್ಬಿಣವಾಗಿ ಬಾಯ್ಲರ್ಗಳನ್ನು ಸೇರುವಲ್ಲಿಯವರೆಗೆ ತೋರಿಸಿ ನಮ್ಮನ್ನು ಬೆರಗು ಗೊಳಿಸಿದ್ದರು. ಅಂತಹ ಪ್ರಕೃತಿಯ ವಿನಾಶದ ಜೊತೆಗೆ ಅಲ್ಲೊಂದು ಕಣ್ಣಿಗೆ ತೆನೆ ಕಟ್ಟುವ ಸುಂದರ ಉದ್ಯಾನವನವೂ ಪ್ರವಾಸಿಗರನ್ನು ಆಕರ್ಷಿಸದಿರಲಾರದು. ವಿವಿಧ ನಮೂನೆಯ ಹೂಗಿಡಗಳು, ಎತ್ತರಕ್ಕೆ ಒಂದು ದೇವಾಲಯ, ಅದಕ್ಕೊಂದು ನೂರು ಮೆಟ್ಟಿಲುಗಳು... ಗಿರಿ ಮುಗಿಲು ಒಂದಾದ ಹಾಗೆ ಕಾಣುವ ವೈಭವ ಕುದುರೆಮುಖದ್ದು.

`ಬಂಧನ' ಚಿತ್ರದ ಹೆಚ್ಚಿನ ದೃಶ್ಯಗಳೆಲ್ಲಾ ಕುದುರೆಮುಖದ ರಮ್ಯತಾಣದಲ್ಲಿ ಚಿತ್ರೀಕರಿಸಿರುವಂತದ್ದು. ಈ ಚಿತ್ರ ಬಗ್ಗೆ ನಾನೇಕೆ ಬರೆಯುತ್ತಿದೇನೆಂದರೆ ನಮ್ಮ ಮೇಷ್ಟ್ರು ನಮಗೆ ಬರೀ ಕುದುರೆಮುಖದ ಕಬ್ಬಿಣದ ಅದಿರಿನ ಕಾರ್ಖಾನೆ ಬಗ್ಗೆ ಮಾತ್ರ ತಿಳಿಸಿಲ್ಲ. ಜೊತೆಗೆ ವಿಷ್ಟು ಸುಹಾಸಿನಿ ಜೋಡಿಯ `ಬಂಧನ' ಚಿತ್ರೀಕರಣವಾಗಿದ್ದ ಸುಂದರ ತಾಣಗಳನ್ನೂ ನಮಗೆ ತೋರಿಸಿದ್ದರು. ಜೊತೆಗೆ ಅಲ್ಲೊಂದು ಪುಟ್ಟ ದೇವಾಲಯ. ಅಲ್ಲಿ ವಿಷ್ಣು ಚಿತ್ರದ ದೃಶ್ಯವೊಂದರಲ್ಲಿ ದೇವರ ಮೊರೆ ಹೋಗುವ ಸನ್ನಿವೇಶವನ್ನು ಚಿತ್ರೀಕರಿಸಿರುವುದನ್ನೋ ತೋರಿಸಿದ್ದರು.

ಕುದುರೆಮುಖದ ನಡುವೆ ಪ್ರಯಾಣ ಮಾಡುವಾಗಲೆಲ್ಲಾ ನೂರೊಂದು ನೆನಪು ಎದೆಯಾಳದಿಂದ ಹಾಡಾಗಿ ಹೊರ ಹೊಮ್ಮುತ್ತವೆ. ವಿಷ್ಣು ನೆನಪಾಗುತ್ತಾರೆ. ಸುಹಾಸಿನಿಯ ಮುಗ್ಧ ನಗು ಕಣ್ಣಿಗೆ ಕಟ್ಟುತ್ತದೆ. ಬಂಧನ ಯಾವತ್ತೂ ಮರೆಗೆ ಸರಿಯದ ತೆರೆಯ ಮೇಲಿನ ಸುಂದರ ಚಿತ್ರವೆನ್ನುವುದರಲ್ಲಿ ಎರಡು ಮಾತಿಲ್ಲ.

0 comments:

Post a Comment