ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಮೂಡಬಿದಿರೆ, ಶೋಭಾವನ : ಗೋಧೂಳಿಯ ಸಮಯ... ನೇಸರ ಪಶ್ಚಿಮದಲ್ಲಿ ಕಣ್ಣಾಮುಚ್ಚಾಲೆಯಾಟವಾಡುತ್ತಿದ್ದ... ಹಕ್ಕಿಗಳು ಸಾಲುಗಟ್ಟಿ ಬಾನಂಗಳದಲ್ಲಿ ಸಾಗುತ್ತಿದ್ದವು... ಮೋಡಗಳು ವರ್ಣಬದಲಾಯಿಸಿದ್ದವು... ಜೀರುಂಡೆಗಳು ಮೆಲ್ಲ ಮೆಲ್ಲದೆ ಝೇಂಕರಿಸಲಾರಂಭಿಸಿದ್ದವು... ಶೋಭಾವನದ ತುಂಬೆಲ್ಲಾ ತುಂಬಿರುವ ಎರಡು ಸಹಸ್ರಕ್ಕೂ ಮಿಕ್ಕಿದ ಔಷಧೀಯ ಸಸ್ಯಗಳ ನಡು ನಡುವೆ ಸಾಗಿಬಂದ ತಂಗಾಳಿ ಮಿಜಾರಿನ ತುತ್ತತುದಿಯಲ್ಲಿ ಸೇರಿದ್ದ 13ಸಾವಿರಕ್ಕೂ ಮಿಕ್ಕಿದ ಕಲಾಸಕ್ತರ ಮೈ ಮನಕ್ಕೆ ಮುದ ನೀಡುತ್ತಿದ್ದವು...
ಅದಾಗಲೇ ಬೃಹತ್ ವೇದಿಕೆಯ ಮೇಲೆ ಅಲಂಕರಿಸಿದ್ದ ಪಂಡಿತ್ ತರುಣ್ ಭಟ್ಟಾಚಾರ್ಯ, ಪಂಡಿತ್ ಪ್ರವೀಣ್ ಗೋಡ್ಕಿಂಡಿ , ಪಂಡಿತ್ ವಿಕ್ರಮ್ ಘೋಷ್ ಕಲಾವಿದರ ಕೈಗಳು ಸಂತೂರ್, ಬಾನ್ಸುರಿ ಹಾಗೂ ತಬ್ಲಾದ ಮೇಲೆಲ್ಲಾ ಹರಿದಾಡುತ್ತಿದ್ದವು...! ಅಮೋಘ ಸ್ವರ ಸಂಗೀತಗಳ ಸುಮಧುರ ನಾದಗಳು ಆ ಪರಿಕರಗಳಿಂದ ಹೊರಸೂಸಲಾರಂಭಿಸಿದವು... ವ್ಹಾವ್... ಸೇರಿದ್ದ ಕಲಾಸಕ್ತರೂ ಮೈಮರೆತರು...ತಲೆದೂಗಿದರು... ಕುಳಿತಲ್ಲೇ ಅವರ ಕೈಗಳು ತಾಳಹಾಕಲಾರಂಭಿಸಿದವು... ಆ ರೀತಿಯಲ್ಲಿ ಅಪೂರ್ವ ಜುಗಲ್ ಬಂದಿಗೆ ಆಳ್ವಾಸ್ ವಿರಾಸತ್ನ ನಾಲ್ಕನೇ ದಿನ ಕಾರ್ಯಕ್ರಮ ಸಾಕ್ಷಿಯಾಗುವಂತಾಯಿತು.
ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ಮಿಜಾರಿನ ಶೋಭಾವನದಲ್ಲಿ ನಡೆಯುತ್ತಿರುವ 19ನೆಯ ವರುಷದ " ಆಳ್ವಾಸ್ ವಿರಾಸತ್ 2011"ರ ನಾಲ್ಕನೇ ದಿನದ ಮೊದಲ ಕಾರ್ಯಕ್ರಮ ಅಪೂರ್ವ " ಜುಗಲ್ ಬಂದಿ" ಹೆಸರೇ ಸೂಚಿಸುವಂತೆ "ಅಪೂರ್ವ" ಎಂದೆನಿಸಿತು. ಖ್ಯಾತ ಕಲಾವಿದರ ಅನುಭವದ ಕಲಾ ಪ್ರಕಾರಗಳ ಪ್ರದರ್ಶನ ಬೆರಗುಹುಟ್ಟಿಸಿದವು. ಎರಡು ಗಂಟೆಗಳ ಕಾಲ ಖ್ಯಾತ ಕಲಾವಿದರು ಸಂತೂರ್, ಬಾನ್ಸುರಿ, ತಬ್ಲಾಗಳ ಮೂಲಕ ಕಲಾಪ್ರತಿಭೆಯನ್ನು ಸಾದರಪಡಿಸಿದರು. ಕಲಾಸಕ್ತರು ಹಂತ ಹಂತದಲ್ಲೂ ಚಪ್ಪಾಳೆಯ ಮೂಲಕ ತಮ್ಮ ಪ್ರೋತ್ಸಾಹವನ್ನು ವ್ಯಕ್ತಪಡಿಸಿದರು.

0 comments:

Post a Comment