ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಿನೆಮಾ
ಅದು ಐವತ್ತರ ದಶಕ. ಸ್ವಾತಂತ್ರ್ಯದ ಬಳಿಕ ಹಿಂದಿ ಚಲನಚಿತ್ರರಂಗ ಆರ್ಥಿಕವಾಗಿ ಚೇತರಿಸಿಕೊಳ್ಳಲು ಪ್ರಾರಂಭಿಸಿದ್ದ ಕಾಲ. ಕಲಾತ್ಮಕತೆಯನ್ನು ಮೈಗೂಡಿಸಿಕೊಳ್ಳುವುದರ ಜತೆಜತೆಗೆ ಇಂಪಾದ ಹಾಡುಗಳನ್ನೊಳಗೊಂಡಿದ್ದ ಹಿಂದಿ ಚಿತ್ರಗಳು ದೇಶದೆಲ್ಲೆಡೆ ಅತೀ ಹೆಚ್ಚು ವೀಕ್ಷಕರನ್ನು ಸಂಪಾದಿಸಿದ್ದವು. ಸಂಗೀತ ನಿರ್ದೇಶಕ ಸಚಿನ್ ದೇವ್ ಬರ್ಮನ್ (ಎಸ್.ಡಿ.ಬರ್ಮನ್) ತಮ್ಮ ವಿಶಿಷ್ಟ ಶೈಲಿಯ ಸಂಗೀತದಿಂದ ಬಾಲಿವುಡ್ನಲ್ಲಿ ಅದಾಗಲೇ ಹೊಸ ಟ್ರೆಂಡ್ವೊಂದನ್ನು ಹುಟ್ಟುಹಾಕಿದ್ದರು. ಸಂಗೀತದ ಬಗ್ಗೆ ವಿಶೇಷ ಕಾಳಜಿಯಿದ್ದ ಎಸ್.ಡಿ ಬರ್ಮನ್ ಸಾಂಪ್ರದಾಯಿಕ ಸಂಗೀತಕ್ಕೆ ಪ್ರಾಧಾನ್ಯತೆ ನೀಡಿದ ಬಾಲಿವುಡ್ನ ಕೆಲವೇ ಕೆಲವು ಸಂಗೀತ ನಿರ್ದೇಶಕರಲ್ಲಿ ಒಬ್ಬರು. ಇಂತಹ ಸಂಗೀತಾಭಿಮಾನಿಯ ಏಕೈಕ ಪುತ್ರ ರಾಹುಲ್ ದೇವ್ ಬರ್ಮನ್.
ರಾಹುಲ್ ಜನಿಸಿದ್ದು ಕಲ್ಕತ್ತಾದಲ್ಲಿ. ಹೊರ ಪ್ರಪಂಚಕ್ಕೆ ಇವರು ರಾಹುಲ್ ಎಂಬ ಹೆಸರಿನಿಂದ ಪರಿಚಿತರಾಗಿದ್ದರೂ ತಂದೆ ಇವರಿಗಿಟ್ಟ ಪ್ರೀತಿಯ ಹೆಸರು ಪಂಚಮ್. ರಾಹುಲ್ ಮಗುವಾಗಿದ್ದಾಗ ತಂದೆಗೆ ಅವನ ಅಳುವಿನಲ್ಲಿ ಭಾರತೀಯ ಸಂಗೀತದ ಐದನೇ ರಾಗ 'ಪಾ' ಹೆಚ್ಚಾಗಿ ಕೇಳಿಸುತ್ತಿತ್ತಂತೆ. ಅದಕ್ಕಾಗಿ ಅವರು ಆತನನ್ನು ಪಂಚಮ್ ಎಂಬ ಹೆಸರಿನಿಂದ ಕರೆಯಲು ಪ್ರಾರಂಭಿಸಿದರು. ಚಿಕ್ಕಂದಿನಿಂದಲೂ ರಾಹುಲ್ ಸಂಗೀತಪ್ರಿಯ. ತನ್ನ ಏಳನೇ ವಯಸ್ಸಿನಲ್ಲೇ ಆತ ರಚಿಸಿದ ಏ ಮೆರೆ ಟೋಪಿ ಪಲಟ್ ಕೇ ಆ...ಎಂಬ ಹಾಡು ತಂದೆ ಎಸ್.ಡಿ.ಬರ್ಮನ್ರನ್ನು ಅತಿಯಾಗಿ ಆಕರ್ಷಿಸಿತು. ಆ ಹಾಡನ್ನು ಅವರು 1956ರಲ್ಲಿ ಬಿಡುಗಡೆಗೊಂಡ ತಮ್ಮ ಫನ್ ಟೂಸ್ ಚಿತ್ರಕ್ಕಾಗಿ ಬಳಸಿಕೊಂಡರು. ಮಗನಲ್ಲಿರುವ ಸಂಗೀತಾಸಕ್ತಿಯನ್ನು ಗಮನಿಸಿದ ತಂದೆ ಆತನನ್ನೂ ತನ್ನ ಕ್ಷೇತ್ರಕ್ಕೆ ಕರೆತರಲು ನಿರ್ಧರಿಸಿದರು. 1958ರಲ್ಲಿ ದೇವ್ ಆನಂದ್ ನಟಿಸಿದ ಸೋಲಾ ಸಾಲ್ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗುವ ಅವಕಾಶ ತಂದೆ ಎಸ್.ಡಿ.ಬರ್ಮನ್ ಗೆ ಒದಗಿ ಬಂತು. ಚಿತ್ರದ ಹಾಡಿನ ರೆಕಾರ್ಡಿಂಗ್ ನಡೆಯುತ್ತಿರುವಾಗ ತಂದೆ ಮಗನಿಗೆ ಹೇ ಅಪ್ನಾ ದಿಲ್ ತೊ ಆವಾರಾ ...ಎಂಬ ಹಾಡಿಗಾಗಿ ಹಾರ್ಮೋನಿಯಂ ನುಡಿಸಲು ಹೇಳಿದರು. ಮಗ ಅಲ್ಪ ಸಮಯದಲ್ಲೇ ಟ್ಯೂನ್ ಕಲಿತು ಹಾಡಿಗಾಗಿ ಹಾರ್ಮೋನಿಯಂ ನುಡಿಸಿದ. ಅದು ಪಾಪ್ಯುಲರ್ ಹಾಡಾಯ್ತು. ಇಡೀ ಮ್ಯುಸಿಕ್ ಇಂಡಸ್ಟ್ರಿಯೇ ಒಂಭತ್ತು ವರುಷ ವಯಸ್ಸಿನ ಪುಟ್ಟ ರಾಹುಲ್ ನ ಬೆನ್ನು ತಟ್ಟಿತು.ರಾಹುಲ್ ಬಾಲಿವುಡ್ನಲ್ಲಿ ತನ್ನ ಸಂಗೀತ ನಿರ್ದೇಶನದ ವೃತ್ತಿಯನ್ನು ತಂದೆಯ ಸಹಾಯಕರಾಗಿಯೇ ಪ್ರಾರಂಭಿಸಿದರು. 1961ರಲ್ಲಿಇವರು ಜತೆಯಾಗಿ ಸಂಗೀತ ನಿರ್ದೇಶನ ಮಾಡಿದ ಮೊತ್ತ ಮೊದಲ ಚಿತ್ರ ಛೋಟಾ ನವಾಬ್. ಕೆಲ ವರುಷಗಳಿಂದ ಲತಾ ಮಂಗೇಶ್ಕರ್ ಜತೆ ಹಾಡುವುದನ್ನು ಬಿಟ್ಟಿದ್ದ ತಂದೆ ಎಸ್.ಡಿ.ಬರ್ಮನ್ ಈ ಚಿತ್ರಕ್ಕಾಗಿ ಮತ್ತೆ ಆಕೆಯ ಜತೆಯಾಗಿ ಹಾಡಿದರು. ಚಿತ್ರದ ಸಂಗೀತ ಜನಪ್ರಿಯವಾಯಿತು. ಬಳಿಕ ಬಿಡುಗಡೆಗೊಂಡ ಬಂದಿನಿ, ತೀನ್ ಕನ್ಯಾ, ಗೈಡ್...ಹೀಗೆ ಹಲವು ಚಿತ್ರಗಳು 'ಮ್ಯುಸಿಕಲ್' ಚಿತ್ರಗಳಾಗಿ ಹೊರಹೊಮ್ಮಿದವು.
11966ರಲ್ಲಿ ಸಾಜಿರ್ ಹುಸೈನ್ ತಮ್ಮ ತೀಸ್ರಿ ಮಂಜಿಲ್ ಚಿತ್ರದಲ್ಲಿ ಬ್ಯುಸಿಯಾಗಿದ್ದರು. ಅವರು ಒಬ್ಬ ಉತ್ತಮ ಸಂಗೀತ ನಿರ್ದೇಶಕನ ತಲಾಶೆಯಲ್ಲಿದ್ದರು. ಅದೇ ಸಮಯಕ್ಕೆ ಖ್ಯಾತ ಚಿತ್ರ ಸಂಭಾಷಣಾಕಾರ ಮಜ್ರೂ ಸುಲ್ತಾನ್ಪುರಿ ನಾಜಿರ್ ಅವರಿಗೆ ರಾಹುಲ್ ಬರ್ಮನ್ರನ್ನು ಪರಿಚಯಿಸಿದರು. ರಾಹುಲ್ ಕಾರ್ಯಕ್ಷಮತೆಯನ್ನು ಅರಿತ ನಾಜಿರ್ ಅವರನ್ನು ತಮ್ಮ ಚಿತ್ರದ ಸಂಗೀತ ನಿರ್ದೇಶಕರನ್ನಾಗಿ ಆಯ್ಕೆ ಮಾಡಿದರು. ಆದರೆ ಚಿತ್ರದ ನಾಯಕ ಶಮ್ಮಿ ಕಪೂರ್ ಇದಕ್ಕೆ ಒಪ್ಪಲಿಲ್ಲ. ಒಬ್ಬ ಅನನುಭವಿ ತಾನು ನಟಿಸುವ ಚಿತ್ರಕ್ಕೆ ಸಂಗೀತ ನಿರ್ದೇಶಿಸಿದರೆ ಅದು ಫ್ಲಾಪ್ ಆಗಬಹುದೆಂಬ ಭಯ ಅವರಲ್ಲಿತ್ತು. ಆದರೆ ರಾಹುಲ್ರ ಸಂಗೀತ ಕೇಳಿದ ಬಳಿಕ ಅವರಿಗೆ ನಿರಾಳವಾಯಿತು. ಚಿತ್ರ ಬಿಡುಗಡೆಗೊಂಡಿತು. ಅದರಲ್ಲಿರುವ ಓ ಹಸೀನಾ ಜುಲ್ಫೋವಾಲಿ...ಹಾಡು ಇಂದಿಗೂ ಸೂಪರ್ ಹಿಟ್. ಚಿತ್ರ ರಾಹುಲ್ರ ಸಂಗೀತ ನಿರ್ದೇಶನ ವೃತ್ತಿಗೆ ಭದ್ರ ಬುನಾದಿಯನ್ನೇ ಹಾಕಿಕೊಟ್ಟಿತು. ಈ ಚಿತ್ರದ ಬಳಿಕ ರಾಹುಲ್ ಸಂಗೀತ ಪ್ರಿಯರಿಗೆ ಒಂದರ ಮೇಲೊಂದರಂತೆ ಹಿಟ್ ಹಾಡುಗಳನ್ನು ನೀಡುತ್ತಾ ಹೋದರು.

1968ರಲ್ಲಿ ರಾಹುಲ್ ಪಡೋಸನ್ ಚಿತ್ರಕ್ಕಾಗಿ ನೀಡಿದ ಎಲ್ಲಾ ಹಾಡುಗಳು ಬಾಕ್ಸ್ ಆಫೀಸ್ ಹಿಟ್. ಈ ಮೂಲಕ ಕಾಮಿಡಿ ಚಿತ್ರಗಳಿಗೆ ಸಂಗೀತ ನೀಡಿವುದಕ್ಕೂ ತಾವು ಸೈ ಎನಿಸಿಕೊಂಡರು. ಉತ್ತಮ ಸಂಗೀತ ನಿರ್ದೇಶಕನ ಜತೆಜತೆಗೆ ರಾಹುಲ್ ಒಬ್ಬ ಉತ್ತಮ ನಟನೂ ಹೌದು. 1969 ರಲ್ಲಿ ಸಾಜಿರ್ ನಿರ್ದೇಶನದ ಪ್ಯಾರ್ ಕಾ ಮೋಸಮ್ ಚಿತ್ರದಲ್ಲಿ ಇವರು ಪೋಷಕ ನಟನ ಪಾತ್ರದಲ್ಲಿ ಕಾಣಿಸಿ ಉತ್ತಮ ಅಭಿನಯ ನೀಡಿದ್ದರು. ಆದರೆ ನಟನೆಗಿಂತ ಸಂಗೀತದ ಸೆಳೆತ ಹೆಚ್ಚಾಗಿ ನಟನೆಯನ್ನು ಅವರು ಅಲ್ಲಿಗೇ ಕೈ ಬಿಡಬೇಕಾಯಿತು. ಅದೇ ವರುಷ ತಂದೆ ಎಸ್.ಡಿ ಬರ್ಮನ್ ಆರಾಧನಾ ಚಿತ್ರಕ್ಕೆ ಕೈ ಹಾಕಿದರು. ಅಲ್ಲಿಯವರೆಗೂ ಆರೋಗ್ಯವಾಗಿದ್ದ ಅವರು ಇದ್ದಕ್ಕಿಂದಂತೆ ಹಾಸಿಗೆ ಹಿಡಿದರು. ಅವರಿಂದ ವೃತ್ತಿ ಮುಂದುವರೆಸಲು ಸಾಧ್ಯವಾಗಲಿಲ್ಲ. ಆರಾಧನಾ ಚಿತ್ರಕ್ಕೆ ರಾಹುಲ್ ಮ್ಯುಸಿಕ್ ಕಂಪೋಸ್ ಮಾಡಿದರು.

ಎಪ್ಪತ್ತರ ದಶಕದಲ್ಲಿ ನಿರ್ದೇಶಕ ಶಕ್ತಿ ಸಮಂತಾ ಹಾಗೂ ರಾಹುಲ್ ಜೋಡಿ ಜನಪ್ರಿಯವಾಗಿತ್ತು. ಸಮಂತಾ ಚಿತ್ರಕ್ಕೆ ರಾಹುಲ್ ಸಂಗೀತ ನಿರ್ದೇಶಿಸಿದರೆ ಅದು ಹಿಟ್ ಆಗುವುದರಲ್ಲಿ ಸಂಶಯವಿರಲಿಲ್ಲ. ಅಷ್ಟರ ಮಟ್ಟಿಗೆ ಚಿತ್ರಕಥೆಯೊಂದಿಗೆ ಹೋಲುವಂತಹ ಸಂಗೀತವನ್ನು ರಾಹುಲ್ ನೀಡುತ್ತಿದ್ದರು. ಅಮರ್ ಪ್ರೇಮ್ ಚಿತ್ರಕ್ಕಾಗಿ ಅವರು ಸಂಯೋಜಿಸಿದ ಒಂದೊಂದು ಹಾಡೂ ಎವರ್ ಮೆಮೊರೇಬಲ್.
ಸಾಂಪ್ರದಾಯಿಕ ಸಂಗೀತದ ಜತೆಗೆ ಪಾಶ್ಚಾತ್ಯ ಶೈಲಿಯತ್ತಲೂ ಒಲವು ತೋರಿದ ರಾಹುಲ್ ಹಲವಾರೂ ಕ್ಯಾಬರೇ ಹಾಡುಗಳನ್ನೂ ಸಂಯೋಜಿಸಿದ್ದರು. ಸ್ವತಃ ರಾಹುಲ್ ಹಾಗೂ ಆಶಾ ಬೋಸ್ಲೆ ಜತೆಯಾಗಿ ಹಾಡಿದ ಕ್ಯಾಬರೆ ಹಾಡುಗಳು ಗಲ್ಲಾ ಪೆಟ್ಟಿಗೆಯಲ್ಲಿ ದಾಖಲೆಯನ್ನೇ ನಿರ್ಮಿಸಿದ್ದವು. ಶೋಲೆ ಚಿತ್ರದ ಮೆಹೆಬೂಬಾ ಮೆಹಬೂಬಾ... ಕ್ಯಾರಾವನ್ ಚಿತ್ರದ ಮೋನಿಕಾ ಓ ಮೈ ಡಾರ್ಲಿಂಗ್ ...ಹಾಡುಗಳು ರಿಮಿಕ್ಸ್ ರೂಪದಲ್ಲಿ ಇಂದಿಗೂ ಜನಪ್ರಿಯವಾಗಿವೆ. 1982ರಲ್ಲಿ ಸನಮ್ ತೆರಿ ಕಸಮ್ ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ರಾಹುಲ್ ಫಿಲ್ಮಫೇರ್ ಬೆಸ್ಟ್ ಮ್ಯುಸಿಕ್ ಡೈರೆಕ್ಟರ್ ಪ್ರಶಸ್ತಿಯನ್ನು ಪಡೆದರು. ಈ ಮೂಲಕ ಅವರು ವೃತ್ತಿ ಜೀವನದ ಉತ್ತುಂಗಕ್ಕೇರಿದರರು.

ರಾಹುಲ್ ಒಬ್ಬ ಸೃಜನಶೀಲ ವ್ಯಕ್ತಿ. ಸಂಗೀತದ ಒಂದು ಪ್ರಕಾರಕ್ಕಷ್ಟೇ ಅವರು ಸೀಮಿತರಾಗಿರಲಿಲ್ಲ. ರೊಮಾಂಟಿಕ್ ಚಿತ್ರದಿಂದ ಹಿಡಿದು ಹಾರರ್ ಚಿತ್ರದವರೆಗೆ ಪ್ರತಿಯೊಂದರ ಜತೆಯೂ ಸಂಗೀತ ಪ್ರಯೋಗಗಳನ್ನು ನಡೆಸಿ ಯಶಸ್ವಿಯಾದವರು ಅವರು. ಕಟ್ಟಾ ಸಂಗೀತಕಾರರಿಂದ ಹಿಡಿದು ಸಂಗೀತದ ಗಂದಗಾಳಿಯನ್ನೂ ಅರಿಯದ ವ್ಯಕ್ತಿಯನ್ನೂ ತನ್ನ ಸಂಗೀತದಿಂದ ರಂಜಿಸಿದ ಬಾಲಿವುಡ್ನ ಏಕೈಕ ಸಂಗೀತ ನಿರ್ದೇಶಕ ರಾಹುಲ್ ದೇವ್ ಬರ್ಮನ್. ಇವರು ಸಂಯೋಜಿಸಿದ ಚಿಂಗಾರಿ ಕೋಯಿ ಬಡ್ಕೇ... ತೆರೆ ಬಿನಾ ಜಿಂದಗಿಸೆ ಕೋಯಿ ಶಿಕ್ವಾ......ಹಾಗೂ ಆನೇ ವಾಲಾ ಪಲ್... ಹಾಡುಗಳನ್ನು ಕೇಳಿದರೆ ಇಂದಿಗೂ ಕಣ್ತುಂಬಿ ಬರುತ್ತವೆ.

ವೃತ್ತಿ ಜೀವನದಲ್ಲಿ ಯಶಸ್ಸನ್ನು ಕಂಡರೂ ರಾಹುಲ್ ತನ್ನ ವಯುಕ್ತಿಕ ಜೀವನದಲ್ಲಿ ನೆಮ್ಮ,ದಿಯನ್ನು ಕಾಣಲಿಲ್ಲ. ತನ್ನ ಮೊದಲ ಪತಿ ರೀಟಾ ಪಟೇಲ್ಗೆ ವಿಚ್ಚೇದನ ನೀಡಿದ ಬಳಿಕ ರಾಹುಲ್ 1980ರಲ್ಲಿ ಖ್ಯಾತ ಗಾಯಕಿ ಆಶಾ ಬೋಸ್ಲೆಯನ್ನು ವಿವಾಹವಾದರು. ತೀವ್ರ ಹಣಕಾಸಿನ ಸಮಸ್ಯೆಯ ನಡುವೆಯೂ ರಾಹುಲ್ ಹಲವಾರು ಪಾಪ್ಯುಲರ್ ಟ್ಯೂನ್ಗಳನ್ನು ಸಂಯೊಜಿಸಿದ್ದರು. ಅವರು ತಮ್ಮ ವೃತ್ತಿಯಲ್ಲಿ ತಮ್ಮನ್ನೇ ಮರೆತಿದ್ದರು. ಹಿಂದಿ ಚಿತ್ರಗಳ ಜತೆಗೆ ಒರಿಯಾ, ಬಂಗಾಲಿ, ಮಲಯಾಲಂ ಚಿತ್ರಗಳಿಗೂ ಅವರು ಸಂಗೀತ ನಿರ್ದೇಶಿಸಿದರು. ಹಲವಾರು ಸಾಕ್ಷ್ಯಚಿತ್ರಗಳಿಗೂ ಹಿನ್ನೆಲೆ ಸಂಗೀತವನ್ನು ಸಂಯೋಜಿಸಿದರು. 1994ರಲ್ಲಿ ಎ ಲವ್ ಸ್ಟೋರಿ ಚಿತ್ರಕ್ಕೆ ಸಂಗೀತ ಸಂಯೋಜಿಸಿದ ಬಳಿಕ ರಾಹುಲ್ ಕೊನೆಯುಸಿರೆಳೆದರು. ಅವರ ಮರಣಾನಂತರ ಚಿತ್ರ ಬಿಡುಗಡೆಗೊಂಡಿತು. ಚಿತ್ರದ ಸಂಗೀತ ದೇಶ-ವಿದೇಶಗಳಲ್ಲೂ ಜನಪ್ರಿಯಗೊಂಡಿತು. ರಾಹುಲ್ಗೆ ಮರಣೋತ್ತರ ಬೆಸ್ಟ್ ಮ್ಯುಸಿಕ್ ಡೈರೆಕ್ಟರ್ ಪ್ರಶಸ್ತಿಯನ್ನು ಘೋಷಿಸಲಾಯಿತು. ಆದರೆ ಅದನ್ನು ನೋಡಿ ಸಂಭ್ರಮಿಸಲು ಅವರಿರಲಿಲ್ಲ.

ಇಂದು ಬಾಲಿವುಡ್ನಲ್ಲಿ ಹತ್ತುಹಲವು ಖ್ಯಾತ ಸಂಗೀತ ನಿರ್ದೇಶಕರಿದ್ದಾರೆ. ದಿನಂಪ್ರತಿ ಹಲವಾರು ಚಿತ್ರಗಳು ಮಾರುಕಟ್ಟೆಗೆ ಬಿಡುಗಡೆಗೊಳ್ಳುತ್ತಿವೆ. ಕೆಲ ನಿರ್ದೇಶಕರು ಹಿಂದಿನ ಮಧುರವಾದ ಹಾಡುಗಳನ್ನು ನಕಲು ಹೊಡೆದು ರಿಮಿಕ್ಸ್ ರೂಪದಲ್ಲಿ ಕರ್ಕಶವಾಗಿಸಿದರೆ ಇನ್ನು ಕೆಲವು ನಿರ್ದೇಶಕರರು ಅರ್ಥಹೀನ ಲಿರಿಕ್ಸ್ಗಳನ್ನು ಉಪಯೋಗಿಸಿ ಅದೇನೋ ಹುಚ್ಚು ಪ್ರಯೋಗಗಳನ್ನು ನಡೆಸುತ್ತಾ ಕೇಳುಗರ ನೆಮ್ಮದಿಯನ್ನೇ ಕಸಿದುಕೊಳ್ಳುತ್ತಿದ್ದಾರೆ. ಇಂತಹ ಚಿತ್ರವಿಚಿತ್ರ ಹಾಡುಗಳನ್ನು ಕೇಳುವಾಗೆಲ್ಲಾ ಇದು ಸಂಗೀತವೇ? ಎಂಬ ಪ್ರಶ್ನೆ ಸಾಮಾನ್ಯವಾಗಿ ಕಾಡುತ್ತದೆ. ಎಂದೋ ಕೇಳಿದ ಬರ್ಮನ್ರ ಇಂಪಾದ ಹಾಡಿಗಾಗಿ ಮನಸ್ಸು ಹಾತೊರೆಯುತ್ತದೆ. ಇದೇ ಜನವರಿ 4 ಕ್ಕೆ ಈ ಸಂಗೀತ ಮಾಂತ್ರಿಕ ನಮ್ಮಲ್ಲೆರನ್ನಗಲಿ ಹದಿನೇಳು ವರುಷಗಳು ತುಂಬುತ್ತವೆ. ಆತ ಬದುಕಿದ್ದಾಗ ಆತನ ಸಂಗೀತದಿಂದಲೇ ಕೋಟ್ಯಾಂತರ ರುಪಾಯಿ ಲಾಭಗಳಿಸಿದ ಸಿನಿಮಾ ನಿರ್ದೇಶಕರು ಇಂದು ಆತನ ನೆನಪನ್ನೊಮ್ಮೆ ಮೆಲುಕು ಹಾಕುವ ಸೌಜನ್ಯವನ್ನೂ ತೋರದಿರುವುದು ವಿಷಾದನೀಯ.


- ಅಕ್ಷತಾ ಭಟ್ ಸಿ.ಎಚ್.

5 comments:

Anonymous said...

ಅವರ ಹಾಡುಗಳು ಕೇಳಿದ್ದೆ ಅಷ್ಟೇ . ಅವರ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು. ಅಕ್ಷತ ಭಟ್ ಬರೆದ ಲೇಖನ ಮಾಹಿತಿ ಪೂರ್ಣವಾಗಿದೆ.
ವಿನ್ಯಾಸ್

Anonymous said...

ಬರ್ಮನ್ ಕುರಿತ ಮಾಹಿತಿ ಪೂರ್ಣ ಲೇಖನ ನೀಡಿದ ಈ ಕನಸಿಗೂ, ಬರಹ ಬರೆದ ಅಕ್ಷತಾ ಅವರಿಗೂ ವಂದನೆಗಳು.

ನಿಹಾರಿಕಾ, ಉಜಿರೆ

Anonymous said...

article on burman is melodious as his songs....film industry might have forgotten him... but not EKANASU....

Murali Bharadhwaaj said...

Akshatha i need ur article written on vanaraj bhatiyajee. It was published in MMC handbook in 2002. I red it when we were studying in PPC. But at that time I couldn't contact you. You were in PUC it seems. Pls do publish it. All the best..keep on writing.

Murali Bharadwaj said...

when can i expect your article ? I need it urgently. Its ok if you mail it to me. My email id is www.muralift@gmail.com. Its good if you have that original write up published in MMC.

Post a Comment