ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ದೃಶ್ಯ ಮಾಧ್ಯಮದ ನೆನಪಿನ ಸವಾರಿ...
ಹತ್ತನೆ ಕಂತು
ಗುಂಡನ ಮದುವೆ
ಉಂಡಾಡಿ ಗುಂಡ; ಮನೆ ಮನೆಗೆ ಹೋದ
ಹತ್ತು ಲಾಡು ತಿಂದ; ಹೊಟ್ಟೆ ನೋವೆಂದ
ಅಮ್ಮ ಬೆಣ್ಣೆಕೊಟ್ಟಳು; ಇನ್ನಿಷ್ಟೆಂದ
ಅಪ್ಪ ದೊಣ್ಣೆ ತಂದನು
ಕೈ ಕಟ್ಟ್ ಬಾಯ್ಮುಚ್ಚ್ಈ ಶಿಶು ಗೀತೆಯನ್ನು ನಾವು ಸಣ್ಣವರಿದ್ದಾಗ ನಮ್ಮ ಲೆಕ್ಕದ ಮೇಷ್ಟ್ರು ಯಾವಾಗಲೂ ಹೇಳಿ ನಗಿಸೋರು. ಹೀಗೆ ಗುಂಡನ ಬಗ್ಗೆ ಅದೆಷ್ಟೋ ಕಟ್ಟು ಕಥೆಗಳು, ಅವನ ಮುಗ್ಧತೆಯ ಘಟನೆಗಳನ್ನು ಆವಾಗಾವಾಗ ನಾವು ಕೇಳುತ್ತಿದ್ದೆವು. ಯಾರೀತ ಗುಂಡ? ಅವನು ನಮ್ಮ ಹಾಗೆ ಮನುಷ್ಯನೆ? ಮನುಷ್ಯನಾಗಿದ್ದರೆ ಅವನು ಸಣ್ಣ ಹುಡುಗನೆ? ಮುಗ್ಧನೆ? ಬುದ್ಧಿಯಿಲ್ಲದವನೆ? ಹೀಗೆ ನಮಗೆಲ್ಲ ಗುಂಡನ ಬಗ್ಗೆ ಕುತೂಹಲ.

ಸಾಮಾನ್ಯವಾಗಿ ದೇಹ ತೂಕ ದಪ್ಪವಾಗಿದ್ದವರೆ, ನೋಡಲು ಮುದ್ದಾಗಿದ್ದರೆ ನಾವು ಅಂತಹವರನ್ನು ಗುಂಡ ಅಂತ ಕರೆಯುವುದು ವಾಡಿಕೆ. ಇದು ಕೆಲವರಿಗೆ ಇಷ್ಟವಿರುವುದಿಲ್ಲ. ಅವರು ಮುನಿಸಿಕೊಂಡೋ ಇಲ್ಲ ಕೋಪಗೊಂಡೋ ಮಾತು ಕೂಡ ಬಿಡುತ್ತಾರೆ. ಆದರೆ ಗುಂಡು ಗುಂಡಗೆ ಮುದ್ದು ಮುದ್ದಾಗಿದ್ದರೆ ನಾವು ಗುಂಡ ಅಂತ ಪ್ರೀತಿಯಿಂದ ಕರೆಯುತ್ತೇವೆ. ಅದು ಅವರಿಗೆ ಇಷ್ಟವಾಗಲಿ ಅಥವಾ ಬಿಡಲಿ.

ನಾನು ಸಣ್ಣವನಿದ್ದಾಗ ಒಬ್ಬ ಹುಡುಗ ನನ್ನ ವಯಸ್ಸಿಗಿಂತ ಸ್ವಲ್ಪ ಸಣ್ಣವನಿರಬಹುದು. ಅವನು ನೋಡಲು ಗುಂಡು ಗುಂಡಾದ ಹುಡುಗನಾಗಿದ್ದ. ಅವನನ್ನು ಮನೆಯವರು ಪ್ರೀತಿಯಿಂದ ಗುಂಡ ಅಂತ ಕರೆಯುತ್ತಿದ್ದರು. ನಾವೂ ಕೂಡ ಹಾಗೆ ಕರೆಯುತ್ತಿದ್ದೆವು. ಅವನಿಗೆ ಐದು ಜನ ಅಕ್ಕಂದಿರು. ಹುಡುಗ ಕೊನೆಯವನಾಗಿದ್ದರಿಂದ ಅವನ ತಂದೆಗೆ ಅವನ ಮೇಲೆ ಪ್ರೀತಿ ಜಾಸ್ತಿ. ಅವನು ಪೇಟೆಗೆ ಹೋದರೆ ಅವನಿಗೇನಾದರೂ ತಿಂಡಿ ತಂದು ಕೊಡೋರು. ಅವನ ಅಕ್ಕಂದಿರು ಅವನಿಗೆ ತರುವ ತಿಂಡಿಯನ್ನು ನೋಡಿ ಮೆಲ್ಲಗೆ ಅವನ ಹತ್ತಿರ ಬಂದು ಅವನ ಮುದ್ದು ಕೆನ್ನೆಗಳನ್ನು ಹಿಂಡಿ, ತಿಂಡಿಯನ್ನು ಉಪಾಯದಿಂದ ತೆಗೆದುಕೊಳ್ಳುತ್ತಿದ್ದರು.

ಒಮ್ಮೆ ಅವನ ತಂದೆ ಹೊಟೇಲ್ನಿಂದ ಕಡ್ಲೆ ಮತ್ತು ಅವಲಕ್ಕಿಯನ್ನು ತಂದು ಅವನ ಕೈಗಿತ್ತರು. ಅವನು ಅದನ್ನು ತೆಗೆದುಕೊಂಡು ಒಂದು ಕಡೆ ಮೂಲೆಗೆ ಕುಳಿತು ತಿನ್ನುವುದಕ್ಕೆ ಶುರು ಮಾಡಿದ. ಆ ಸಮಯಕ್ಕೆ ಸರಿಯಾಗಿ ಕರೆಂಟ್ ಹೋಯಿತು. ಅವನ ಅಕ್ಕಂದಿರಲ್ಲೊಬ್ಬಳು ಮೆಲ್ಲನೆ ಅವನ ಹತ್ತಿರ ಹೋಗಿ ಅವನ ಕೈಯಲ್ಲಿದ್ದ ತಿಂಡಿಯ ಪೊಟ್ಟಣವನ್ನು ತೆಗೆದುಕೊಂಡು ಒಂದಷ್ಟು ಕಡಲೆ ಕಾಳುಗಳನ್ನು ಬಾಯಿಗೆ ಹಾಕೊಂಡಿದ್ದಳಷ್ಟೆ ದೊಡ್ಡ ಕೂಗು ಕೇಳಿತು. ಅಷ್ಟರಲ್ಲಿ ಗುಂಡನ ಅಮ್ಮ ಚಿಮಣಿ ದೀಪ ತಂದು ನೋಡಿದರೆ ಕತ್ತಲೆಯಲ್ಲಿ ತಿಂಡಿಯ ಪೊಟ್ಟಣಕ್ಕೆ ಕೈ ಹಾಕಿ ಕಡಲೆ ತೆಗೆದ ಅವನ ಅಕ್ಕನ ಕೈಯನ್ನು ಗುಂಡ ಸರಿಯಾಗಿ ಕಚ್ಚಿದ್ದ. ಅವಳು ನೋವು ತಡೆಯಲಾರದೆ ಕಿರುಚಿದ್ದಳು.

ಇಂತಹ ಗುಂಡಂದಿರ ಅದೆಷ್ಟೋ ಕಥೆಗಳು ನಮಗೆ ಸಿಗುತ್ತವೆ. ಆದರೆ ಇಲ್ಲಿರುವ ಗುಂಡ, ಹೆಚ್ಚಿನ ಸಿನಿಮಾಗಳಲ್ಲಿ ತಮ್ಮ ವಿಚಿತ್ರ ಅಭಿನಯದಿಂದ ನಕ್ಕು ನಗಿಸುವ ನವರಸನಾಯಕ ಜಗ್ಗೇಶ್. ಅವರು ಅಭಿನಯಿಸಿದ ಚಿತ್ರ `ಗುಂಡನ ಮದುವೆ' ನಮ್ಮೂರಿನ ಸುತ್ತಮುತ್ತೆಲ್ಲ ಚಿತ್ರೀಕರಣವಾಗಿತ್ತು.

ಕನ್ನಡ ನಾಡಿನ ಸುಂದರ ಹಸಿರನು ಎಂದಿಗೂ ಬೆಳೆಸುವ ನಾವು
ಶ್ರೀಗಂಧದ ನಾಡಿನ ಹೆಮ್ಮೆಯ ಹೆಸರನು ಎಂದಿಗೂ ಉಳಿಸುವ ನಾವು.

ಹಾಡಿನ ದೃಶ್ಯಗಳಲ್ಲಿ ಬರುವ ಮುಂದಿನ ಸಾಲುಗಳು `ಧಾನ್ಯ ಲಕ್ಷ್ಮೀಯ ಗಿಡಗಳ ಬೆಳೆದರೆ ಅನ್ನದ ಕೊರತೆಯು ಇಲ್ಲ'. ಚರಣದಲ್ಲಿ ಸುಂದರವಾದ ಹಸಿರು ಭತ್ತದ ಪೈರಿನ ದೃಶ್ಯಗಳು ಕಾಣಿಸುತ್ತವೆ. ಅವೆಲ್ಲಾ ಕುರ್ಕಾಲು ಗ್ರಾಮದ ಕುಂಜಾರುಗಿರಿಯ ಬಳಿ ಚಿತ್ರೀಕರಿಸಿದ ದೃಶ್ಯಗಳು.

ಈ ಚಿತ್ರದಲ್ಲಿ ಗುಂಡನಿಗೊಂದು ಮದುವೆ ಮಾಡಬೇಕೆನ್ನುವ ಉದ್ದೇಶ ಅವನ ತಂದೆ ತಾಯಿಗಳಿಗೆ. ಆದರೆ ಅವನು ಸಸಿಗಳನ್ನು ಮಾರಾಟಮಾಡುತ್ತಾ ಹಸಿರೇ ಉಸಿರು ಅನ್ನುವ ಅಲೆಮಾರಿ. ಹೇಗೂ ಅವನಿಗೆ ನಾಯಕಿ ರಾಗಿಣಿಯ ಪರಿಚಯವಾಗುತ್ತದೆ. ಅವಳ ಮೇಲೆ ಪ್ರೇಮಾಂಕುರವಾಗಿ ಅವಳನ್ನು ಮದುವೆಯಾಗುವ ನಿರ್ಧಾರಕ್ಕೆ ಬರುತ್ತಾನೆ. ಹೀಗೆ ಕಥೆ ಮುಂದುವರಿಯುತ್ತಾ ಗುಂಡ ಪ್ರೇಕ್ಷಕನನ್ನು ನಗೆಗಡಲಿಗೆ ತಳ್ಳುತ್ತಾನೆ. ಈ ಚಿತ್ರ ಜಗ್ಗೇಶ್ ಅವರಿಗೆ ಹೆಸರು ಕೂಡ ತಂದುಕೊಟ್ಟಿತ್ತು. ಮಸಾಲೆ ಚಿತ್ರಗಳ ಸಾಲಿಗೆ ಸೇರುವ ಚಿತ್ರವಾದರೂ ಕೊಂಚ ಗಂಭೀರ ಚಿತ್ರಗಳಿಂದ ವಿಭಿನ್ನವಾಗಿರುವ ಸಿನಿಮಾವಾಗಿರುವುದರಿಂದ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಎರಡು ಮಾತಿಲ್ಲ.

ದಕ್ಷಿಣಕನ್ನಡದ ಮತ್ತು ಉಡುಪಿಯ ಸುತ್ತಮುತ್ತ ಗದ್ದೆ ನಾಟಿ ಮಾಡಿದರೆ ಮುಗಿಯಿತು. ಮಳೆಯ ಮೇಳಕ್ಕೆ ನಾಟಿ ಮಾಡಿದ ಭತ್ತದ ಪೈರುಗಳು ಸೊಫಾಗಿ ಬೆಳೆದು ಹಸಿರು ಹೊನ್ನು ಭೂಮಿಯಲ್ಲಿ ನಳನಳಿಸುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಅಂತಹ ಹಸಿರು ಸಮೃದ್ಧಿಯ ನೋಟ ಗುಂಡನ ಮದುವೆ ಚಿತ್ರದುದ್ದಕ್ಕೂ ಕಾಣಸಿಗುತ್ತದೆ.

ಉಡುಪಿಯ ಸುತ್ತ ಮುತ್ತ ಚಿತ್ರೀಕರಣವಾದ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನವರಸ ನಾಯಕ ಜಗ್ಗೇಶ್, ರಾಗಿಣಿ, ವಿನಯಾಪ್ರಸಾದ್, ಮುಖ್ಯಮಂತ್ರಿ ಚಂದ್ರು, ಕುಣಿಗಲ್, ಲೋಕೇಶ್ ಅಭಿನಯಿಸಿದ್ದಾರೆ. ಈ ಚಿತ್ರದ ಸಂಗೀತ ವಿ ಮನೋಹರ್ ಅವರದ್ದು.
- ಅನು ಬೆಳ್ಳೆ.

0 comments:

Post a Comment