ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಹನ್ನೊಂದನೆ ಕಂತು

ದೃಶ್ಯ ಮಾಧ್ಯಮದ ನೆನಪಿನ ಸವಾರಿ...

ಹಮ್ ತುಂ ಪೇ ಮರ್ತೈ ಹೈ

ಕನ್ನಡದಲ್ಲೊಂದು ಗಾದೆಯಿದೆ, `ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು'. ಮನೆ ಕಟ್ಟುವುದು ಸುಲಭದ ಕೆಲಸ ಅಲ್ಲ. ಲಕ್ಷಗಟ್ಟಲೆ ಖರ್ಚು ಮಾಡಿಯೂ ಸುಸೂತ್ರವಾಗಿ ಒಂದುಮನೆಯನ್ನು ಕಟ್ಟಲು ಸಾಧ್ಯವಿಲ್ಲ. ಮನೆಗೆ ಬೇಕಾದ ಮೆಟೀರಿಯಲ್ಗಳ ಖರ್ಚು, ಲೇಬರ್ ಖರ್ಚು, ನೀರಿನ ಖರ್ಚು ಹೀಗೆ ಖರ್ಚುಗಳ ಪಟ್ಟಿ ಉದ್ದಕ್ಕೂ ಸಾಗುತ್ತದೆ. ಆಗ ಮನೆ ಕಟ್ಟಿಸಲು ಇಳಿದ ಯಜಮಾನ ಅರೆ ಜೀವವಾಗಿರುತ್ತಾನೆ. ಸರಿ ಮನೆ ಕಟ್ಟಲು ಸಾಮರ್ಥ್ಯವಿದ್ದವರಿಗೂ ತೊಂದರೆ ತಪ್ಪಿದ್ದಲ್ಲ. ಆರ್ಥಿಕ ಅಡಚಣೆ. ಅದಕ್ಕಾಗಿ ಬ್ಯಾಂಕು, ಫೈನಾನ್ಸ್ ಕಂಪನಿಗಳಿಗೆ ಅಲೆದಾಟ. ಅಲ್ಲಿ ಲೋನ್ ತೆಗೆದುಕೊಳ್ಳಲು ಸಾವಿರ ಶರತ್ತುಗಳು. ಅವುಗಳನ್ನೆಲ್ಲಾ ರೆಡಿಮಾಡಿ ಮನೆ ಕಟ್ಟುವಾಗ `ಅಬ್ಬಾ, ಇಷ್ಟು ಕಷ್ಟ ಪಟ್ಟು ಮನೆ ಬೇಕಾ?' ಅನಿಸದಿರುವುದಿಲ್ಲ.


ಆದರೆ ಅದೇ ಒಬ್ಬ ಚಿತ್ರಕಾರ ತನ್ನ ಕುಂಚದಿಂದ ತನ್ನ ಕುಶಲತೆಯಿಂದ ಸುಂದರವಾದ ಮನೆಯನ್ನು ಕ್ಷಣದಲ್ಲಿಯೇ ರಚಿಸಬಲ್ಲ. ಕುಂಚದಲ್ಲಿ ಬಣ್ಣವನ್ನು ಅದ್ದಿ ಸಲೀಸಾಗಿ ಮನೆಯನೇಕೆ ಅರಮನೆಯನ್ನೇ ರಚಿಸಬಲ್ಲ. ಹಾಗೆಯೇ ಸಿನಿಮಾ ಮಂದಿ ಕೂಡ. ನಿಜ ಜೀವನದಲ್ಲಿ ಅವರ ಕೈಯಲ್ಲಿ ಚಿಕ್ಕಾಸು ಇಲ್ಲದಿದ್ದರು ಅವರು ಸಿನಿಮಾಗಳಲ್ಲಿ ಶ್ರೀಮಂತರ ಪಾತ್ರ ಮಾಡುತ್ತಾ ವೀಕ್ಷಕರ ಮನಸ್ಸನ್ನು ಅಪಹರಿಸುತ್ತಾರೆ. ಅಲ್ಲಿ ಅವರಿಗೆ ಬಂಗಲೆಯಿರುತ್ತದೆ. ಮನೆಗೊಂದು ದೊಡ್ಡ ಕಾರು, ಇಂಗ್ಲೀಷ್ ನಾಯಿ, ಮನೆಯೊಳಗೆ ಓಡಾಡಲು ಪವರ್ ಶೂಸ್ ಗಳು... ಹೀಗೆ ಅಸಂಗತಗಳೆಲ್ಲಾ ಅವರಿಗಿರುತ್ತದೆ.

ಇಂತಹ ಮನೆ ಅಥವಾ ಬಂಗ್ಲೆಯನ್ನು ನಿರ್ಮಿಸಲು ಅವರಿಗೆ ಕೋಟಿಗಟ್ಟಲೆ ಹಣ ಬೇಡವಾದರೂ ಸ್ವಲ್ಪ ಖರ್ಚು ಮಾಡಿ ದೊಡ್ಡ ದೊಡ್ಡ ಬಂಗಲೆಗಳನ್ನೇ ನಿರ್ಮಿಸಿಕೊಳ್ಳುತ್ತಾರೆ. ಆದರೆ ಅವೆಲ್ಲವೂ ತಾತ್ಕಾಲಿಕ ಮಾತ್ರ. ಅವೆಲ್ಲ ಅವರ ವಾಸಕ್ಕಾಗಿ ಅಲ್ಲ, ಕೇವಲ ಚಿತ್ರೀಕರಣ ನಡೆಸುವುದಕ್ಕಾಗಿ. ಇದಕ್ಕೊಂದು ವರದಾನ ಪ್ಲಾಸ್ಟರ್ ಆಫ್ ಪ್ಯಾರೀಸ್ ಅನ್ನುವ ಮೆಟೀರಿಯಲ್. ಇದರಿಂದ ತಾತ್ಕಾಲಿಕವಾಗಿ ಗಟ್ಟಿಮುಟ್ಟಲ್ಲದಿದ್ದರೂ ಮನೆಯಂತಹ ಮನೆಯನ್ನು ಅಥವಾ ಬಂಗಲೆಯಂತಹ ಬಂಗಲೆಯನ್ನು ನಿರ್ಮಿಸಬಹುದು.

ಇತ್ತೀಚೆಗೆ ಈ ಪ್ಲಾಸ್ಟರ್ ಆಫ್ ಪ್ಯಾರಿಸ್ನ ಅಗತ್ಯ ಎಲ್ಲಿಯವರೆಗೆಂದರೆ ಅದನ್ನು ನಾಟಕದ ಸೆಟ್ಟಿಂಗ್ಗಳಿಗೆ, ಮದುವೆ ಮಂಟಪ ನಿರ್ಮಿಸುವುದಕ್ಕೆ ಮತ್ತು ಮನೆಯ ಇಂಟೀರಿಯರ್ ಡೆಕೊರೇಷನ್ಗಳಿಗೂ ಉಪಯೋಗಿಸುವುದಕ್ಕೆ ಸಹಾಯವಾಗುತ್ತಿದೆ. ಅವುಗಳೆಲ್ಲಾ ಸುಣ್ಣ ಬಣ್ಣ ಹಚ್ಚಿಕೊಂಡು ಆಕರ್ಷಕವಾಗಿಯೂ, ಸುಂದರವಾಗಿಯೂ ಕಂಗೊಳಿಸುತ್ತವೆ. ಯಾವ ನೈಜ ಮನೆಯಾಗಲಿ ಬಂಗಲೆಯಾಗೂ ಕಡಿಮೆಯಿಲ್ಲದಂತೆ ಸಮೃದ್ಧವಾಗಿ ಕಾಣುತ್ತವೆ.

ಇದೇ ರೀತಿಯ ನೈಜ್ಯತೆಯನ್ನು ಬಿಂಬಿಸುವ ಪಾರ್ಕುಗಳು, ಪ್ರಾಣಿ ಪಕ್ಷಿಗಳ ಪ್ರತಿಬಿಂಬದ ಉದ್ಯಾನಗಳು, ಚಿತ್ರ ವಿಚಿತ್ರ ಶಿಲ್ಪಾಕೃತಿಗಳು ಕೂಡ ಜನಪ್ರಿಯವಾಗುತ್ತಿವೆ. ಕೇವಲ ಮಣ್ಣಿನಿಂದ ಮತ್ತು ಕಲ್ಲಿನಿಂದಲ್ಲದೆ ಇಂತಹ ತಾತ್ಕಾಲಿಕ ಸಿಮೆಂಟುಗಳಿಂದ ತಯಾರಿಸಲಾದ ಸುಂದರ ಶಿಲ್ಪ ಕಾವ್ಯಗಳು ಅರಳಿ ಜನಮಾನಸವನ್ನು ಗೆಲ್ಲುತ್ತಿರುವುದು ಇತ್ತೀಚಿನ ಬೆಳವಣಿಗೆ. ಜುರಾಸಿಕ್ ಪಾರ್ಕು, ನ್ಯಾಷನಲ್ ಪಾರ್ಕುಗಳಂತಹ ಮಾದರಿ ಮತ್ತು ಕೃತಕ ಉದ್ಯಾನಗಳು ಹುಟ್ಟಿಕೊಳ್ಳುತ್ತಿವೆ. ಇದೇ ವರ್ಗಕ್ಕೆ ಸೇರುವ ಇನ್ನೊಂದು ವ್ಯವಸ್ಥೆಯೆಂದರೆ ಫ್ಯಾಂಟಸಿ ಪಾರ್ಕು, ವಾಟರ್ ಪಾರ್ಕುಗಳು. ಇಲ್ಲಿ ಎಲ್ಲವೂ ಕೃತಕವಾದರೆ ನೋಡುವವರಿಗೆ ಇಲ್ಲಿ ಕಣ್ಣಿಗೆ ಮಾತ್ರವಲ್ಲ ಮನಸ್ಸಿಗೂ ಹಬ್ಬ. ವರ್ಷಕ್ಕೊಮ್ಮೆಯೋ, ಇಲ್ಲ ಎರಡು ಬಾರಿಯೋ ಇಲ್ಲಿಗೆ ಬಂದು ಸಾವಿರಗಟ್ಟಲೆ ಸುರಿದು ಸುಖ ಪಡುವುದು ಬೇರೆಯ ವಿಷಯ. ಎಲ್ಲೂ ಇಲ್ಲದ, ಎಂದೂ ಸಿಗದ ರಿಲ್ಯಾಕ್ಸ್ ಕೊಂಚ ಯಾಂತ್ರಿಕ ಬದುಕಿಗೆ ಅಗತ್ಯವಿದೆ. ಅದಕ್ಕಾಗಿ ಎಲ್ಲವೂ ಈಗ ಇಂತಹ ಸುಂದರ ಸುಳಿಯೊಳಗೆ ನಿರ್ಮಾಣವಾಗುತ್ತವೆ.


ಕಣ್ಣಿದ್ದರೂ ಪರಾಂಬರಿಸಿ ನೋಡಬೇಕು ಅನ್ನುವುದು ಇನ್ನೊಂದು ಗಾದೆ ಮಾತು. ಇಂತಹ ಕೃತಕ ಸೆಟ್ಟಿಂಗ್ ಗಳು ಕೆಲವೊಮ್ಮೆ ಅಪಾಯವನ್ನು ತಂದೊಡ್ಡಬಲ್ಲವು. ಫ್ಯಾಂಟಸಿ ಪಾರ್ಕುಗಳಲ್ಲಿ ದುರಂತಗಳು ನಡೆದದ್ದೂ ಇದೆ. ಮನುಷ್ಯ ಎಷ್ಟು ತಾಂತ್ರಿಕವಾಗಿ ಮುಂದುವರಿಯುತ್ತಾನೋ ಅಷ್ಟೇ ಅಪಾಯದ ತೂಗಂಚಿನ ಕತ್ತಿಯ ಕೆಳಗಿರುವ ಬಲಿಪಶುವಿನ ಹಾಗೆ ಇರುತ್ತಾನೆ. ಇದನ್ನೆಲ್ಲಾ ಯಾಕೆ ಹೇಳಬೇಕಿದೆಯೆಂದರೆ ಇಂತಹ ರಿಸ್ಕ್ಗಳನ್ನು ಬಳಸಿಕೊಂಡು ದೊಡ್ಡ ದೊಡ್ಡ ಚಿತ್ರಗಳು ಚಿತ್ರೀಕರಣವಾಗುತ್ತವೆ. ಇವುಗಳು ದುರಂತವನ್ನೂ ಆಹ್ವಾನಿಸುತ್ತವೆ. ಉದಾಹರಣೆಗೆ `ದ ಸ್ವೋರ್ಡ್ ಆಫ್ ಟಿಪ್ಪು ಸುಲ್ತಾನ್'ನ ಒಳಾಂಗಣದ ಚಿತ್ರೀಕರಣದಲ್ಲಿ ಬೆಂಕಿ ಕಾಣಿಸಿಕೊಂಡು ದುರಂತ ಸಂಭವಿಸಿತ್ತು. ಹಾಗೆಯೇ ಥ್ರಿಲ್ಲರ್ ಮಂಜು ಸಾಹಸದ ಲಾಕಪ್ ಡೆತ್ ಚಿತ್ರೀಕರಣದಲ್ಲಿಯೂ ಅಫಘಾತಗಳು ಸಂಭವಿಸಿದ್ದವು. ಹಾಗೆಯೇ ಇಂತಹ ಕೃತಕ ಬಂಗಲೆಯೆ ಸೆಟ್ಟಿಂಗ್ ಒಂದನ್ನು ಮಣಿಪಾಲದ ಸುಂದರ ತಾಣ ಎಂಡ್ ಪಾಯಿಂಟ್ನಲ್ಲಿಯೂ ನಿರ್ಮಿಸಿ ಹಿಂದಿಯ ಅದ್ದೂರಿ ಸಿನಿಮಾ `ಹಮ್ ತುಂ ಪೇ ಮರ್ತೈ ಹೈ' ಚಿತ್ರೀಕರಣಗೊಂಡಿತ್ತು. ಇದರ ರೂವಾರಿ ಚೀತಾ ಯಜ್ಞೇಶ್ ಶೆಟ್ಟಿಯವರು.

ಮಣಿಪಾಲದ ಎಂಡ್ ಪಾಯಿಂಟ್ನ ಸುಂದರ ಹಸಿರು ಹುಲ್ಲುಹಾಸಿನ ಪ್ರದೇಶದ ನಡುವೆ ಅದ್ದೂರಿಯಾಗಿ ನಿರ್ಮಿಸಲಾಗಿದ್ದ ಭವ್ಯ ಬಂಗಲೆ `ಪರಂಪರಾ' ಮತ್ತು `ಮುಕ್ತಾಂಗಣ್' ನ ಸೆಟ್ಟಿಂಗ್ ಅನ್ನು ಈ ಚಿತ್ರದ ಚಿತ್ರೀಕರಣಕ್ಕಾಗಿ ನಿರ್ಮಿಸಲಾಗಿತ್ತು. ಹಿನ್ನಲೆಯಲ್ಲಿ ಪರಿಶುದ್ಧವಾಗಿ ಹರಿಯುವ ಸ್ವರ್ಣಾ ನದಿಯ ದೃಶ್ಯ ನಯನ ಮನೋಹರವಾಗಿ ಕಾಣಿಸುತ್ತಿತ್ತು.

ನಾನಾಗ ಸಿ.ಎ. ಕಲಿಯುತ್ತಿದ್ದ ವರ್ಷ. ಮಣಿಪಾಲದಲ್ಲಿ ನಿರ್ಮಿಸಲಾದ ಚಿತ್ರೀಕರಣದ ಆ ಕೃತಕ ಮನೆಯನ್ನು ಶೂಟಿಂಗ್ ಮುಗಿದ ಬಳಿಕವೂ ಪ್ರೇಕ್ಷಕರಿಗಾಗಿ ತೆರವುಗೊಳಿಸಲಾಗಿತ್ತು. ಅದರ ಭವ್ಯತೆಯನ್ನು ನೋಡಿಯೇ ನಿಬ್ಬೆರಗಾಗಿದ್ದೆ. ಅಷ್ಟೊಂದು ಅಚ್ಚುಕಟ್ಟುತನವಿತ್ತು. ಅದನ್ನು ನೋಡುತ್ತಿದ್ದರೆ ಅದೊಂದು ಸಿನಿಮಾಕ್ಕಾಗಿ ನಿರ್ಮಿಸಿದ ಸೆಟ್ಟ್ ನಂತೆ ಕಾಣುತ್ತಿರಲಿಲ್ಲ. ಬದಲಾಗಿ ಎರಡು ಭವ್ಯ ಅರಮನೆಗಳಂತೆ ಕಾಣುತ್ತಿದ್ದವು.

ಈ ಚಿತ್ರದ ಮುಖ್ಯ ಪಾತ್ರದಲ್ಲಿ ತುಂಬು ಗಲ್ಲದ ಸದಾ ನಗುಮುಖದ ಹೀರೋ ಗೋವಿಂದ ಅಭಿನಯಿಸಿದ್ದರೆ ಅವನ ಪ್ರೇಮಿಕೆಯಾಗಿ ರಂಗೀಲಾ ಖ್ಯಾತಿಯ ಉರ್ಮಿಳಾ ಮಾಂತೋಡ್ಕರ್ ಅಭಿನಯವಿತ್ತು. ಜೊತೆಗೆ ನಿರ್ಮಲ್ ಪಾಂಡೆ, ಪರೇಶ್ ರಾವಲ್, ಜಾನಿ ಲಿವರ್, ಹಿಮಾನಿ ಶಿವಪುರಿ, ಗುಲ್ಷನ್ ಗ್ರೋವರ್ ಮತ್ತು ಡಿಂಪಲ್ ಕಪಾಡಿಯ ಮುಖ್ಯ ಪಾತ್ರಗಳಲ್ಲಿದ್ದರು.

ಈ ಚಿತ್ರದ ಭಾವೋನ್ಮಾದದ ಟೈಟಲ್ ಸಾಂಗ್ `ಹಮ್ ತುಂ ಪೇ ಮರ್ತೈ ಹೈ' ಬಹಳ ಜನಪ್ರಿಯವಾದ ಹಾಡಾಗಿತ್ತು. ಎರಡು ಮನೆತನಗಳ ರಾಗದ್ವೇಷಗಳ ಕಥೆಯಿರುವ ಈ ಚಿತ್ರ 1992 ರಲ್ಲಿ ಬಿಡುಗಡೆ ಕಂಡಿತ್ತು.ಅನು ಬೆಳ್ಳೆ

0 comments:

Post a Comment