ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:05 AM

ದಾಸರ ನೆನೆಯೋಣ..

Posted by ekanasu

ವೈವಿಧ್ಯ
ಫೆಬ್ರುವರಿ 2ರಂದು ಶ್ರೀ ಪುರಂದರದಾಸರ ಪುಣ್ಯಾರಾಧನೆಯ ಸಂದರ್ಭದಲ್ಲಿ. ಶ್ರೀ ಪುರಂದರ ಕರಿತು ಬರೆದಿರುವ ಒಂದು ಕಿರುಲೇಖನ.

ದಾಸರ ನೆನೆಯೋಣ..ನಮ್ಮ ಪುರಂದರದಾಸರ ನೆನೆಯೋಣ.

ದಾಸಸಾಹಿತ್ಯ ಪರಂಪರೆಯ ಪ್ರಮುಖರು,ಕರ್ನಾಟಕ ಸಂಗೀತದ ಪಿತಾಮಹರೂ ಆದ ಶ್ರೀ ಪುರಂದರದಾಸರ ಪುಣ್ಯಾರಾಧನೆಯ ದಿನವಿಂದು.ದಾಸ ಸಾಹಿತ್ಯ ಮತ್ತು ಕರ್ನಾಟಕ ಸಂಗೀತಕ್ಕೆ ಶ್ರೀ ಪುರಂದರರು ಕೊಟ್ಟಿರುವ ಕೊಡುಗೆ ಅವಿಸ್ಮರಣೀಯವಾದುದು.
ಜಾತಿ,ಪಂಥ ಹಾಗೂ ಮತೀಯ ಧೋರಣೆಗಳಂಥ ಅಂಧ ಕಟ್ಟುಪಾಡುಗಳಾಚೆ ನಿಂತು ಸಮಾಜದ ಒಳಿತಿಗಾಗಿ,ಜನರಿಗೆ ಬದುಕಿನ ಮಹತ್ವವನ್ನು ತಿಳಿಸುವ ಸಲುವಾಗಿ,ಭಕ್ತಿ ಹಾಗೂ ಮುಕ್ತಿ ಮಾರ್ಗದ ದಿವ್ಯಹಾದಿಯನ್ನು ತೋರಿಸವ ನಿಟ್ಟಿನಲ್ಲಿ ಅತ್ಯಂತ ಮನೋಜ್ಞವಾದ,ಮೌಲ್ಯಯುತವಾದ ಉತ್ತಮೊತ್ತಮ ಕೀರ್ತನೆ ಮತ್ತು ದೇವರನಾಮಗಳನ್ನು ಉತ್ಕೃಷ್ಟವಾದ ಸಾಹಿತ್ಯ,ವರ್ಣನಾತೀತವಾಗಿರುವ ಅಲಂಕಾರ ಹಾಗೂ ಸರಳ,ಸುಲಲಿತ ಕನ್ನಡ ಪದಗಳನ್ನು ಬಳಸಿಕೊಂಡು ಅವರು ರಚಿಸಿರುವ ಬಗೆ ಅಭೂತಪೂರ್ವವಾದುದು.ಶ್ರೀ ಪುರಂದರು ತಮ್ಮ ಜೀವಿತಾವಧಿಯಲ್ಲಿ 475000 ಕ್ಕೂ ಹೆಚ್ಚು ಕೀರ್ತನೆಗಳನ್ನು ರಚಿಸಿರುವರೆಂದು ಪ್ರತೀತಿ ಇದೆ.ಆದರೆ ಈವರೆಗೂ 1000 ಕೀರ್ತನೆಗಳು ಮಾತ್ರ ಉಪಲಬ್ದವಾಗಿರುವವು. ತಮ್ಮ ಕೀರ್ತನೆಗಳನ್ನು ಸಂಸ್ಕೃತ,ಕನ್ನಡ ಭಾಷೆಗಳಲ್ಲಿ ವಿರಚಿಸಿರುವರು.

ಪುರಂದರರರು ಢಾಂಬಿಕತೆ,ಅಹಂ,ಆಡಂಬರದಿಂದ ಕೂಡಿದ ಜನರ ಭಕ್ತಿಯನ್ನು ತಮ್ಮ ಕೀರ್ತನೆಗಳಲ್ಲಿ ಕಟುವಾಗಿ ಟೀಕಿಸಿದ್ದಾರೆ ಹಾಗೂ ಅಂತರಂಗದ ಪರಿಶುದ್ದಿ,ಪ್ರಾಮಾಣಿಕ ಪ್ರಯತ್ನ ಇವುಗಳೇ ಮುಕ್ತಿ ಮಾರ್ಗಕ್ಕೆ ಬೇಕಾದ ಸಕಲ-ಸಾಧನಗಳೆಂದು ತಮ್ಮ ಕೀರ್ತನೆಗಳ ಮೂಲಕ ಹೇಳಿದ್ದಾರೆ.ಬದುಕಿನ ಜಂಜಾಟಗಳನ್ನು ಮೆಟ್ಟಿ ಸಾರ್ಥಕ ಬಾಳ್ವೆಯನ್ನು ನಡೆಸಲು ಮತ್ತು ಭಕ್ತಿಯ ಮಾರ್ಗದ ಹಾದಿಯಲ್ಲಿ ಸಾಗಲು ಸರ್ವರಿಗೂ ಅವರ ಕೀರ್ತನೆಗಳು ಮಾರ್ಗದರ್ಶನದ ದೀವಿಗೆಗಳಾಗಿವೆ.
ಅವರು ತಮ್ಮ ಒಂದು ಕೀರ್ತನೆಯಲ್ಲಿ ಹೀಗೆ ಹೇಳುತ್ತಾರೆ:

ಗುರುವಿನ ಗುಲಾಮನಾಗುವ ತನಕ
ದೊರೆಯದಣ್ಣ ಮುಕುತಿ
ಪರಿ ಪರಿ ಶಾಸ್ತ್ರವನೋದಿದರೇನು
ವ್ಯರ್ಥವಾಯ್ತು ಭಕುತಿ

ಆರು ಶಾಸ್ತ್ರವ ಓದಿದರಿಲ್ಲ
ಮೂರು ಪುರಾಣವ ಮುಗಿಸಿದರಿಲ್ಲ
ಸಾರ ನ್ಯಾಯ ಕಥೆಗಳ ಕೇಳಿದರಿಲ್ಲ
ಧೀರನಾಗಿ ತಾ ಪೇಳಿದರಿಲ್ಲ

ಕೊರಳೊಳು ಮಾಲೆ ಧರಿಸಿದರಿಲ್ಲ,
ಬೆರಳೊಳು ಜಪಮಣಿ ಜಪಿಸಿದರಿಲ್ಲ
ಮರುಳನಾಗಿ ಶರೀರಕೆ ಬೂದಿ
ಒರೆಸಿಕೊಂಡು ತಾ ತಿರುಗಿದರಿಲ್ಲ

ನಾರಿಯ ಭೋಗ ಅಳಿಸಿದರಿಲ್ಲ
ಶಾರೀರಿಕ ಸುಖವ ಬಿಡಿಸಿದರಿಲ್ಲ
ನಾರದವರದ ಪುರಂದರ ವಿಠ್ಠಲನ

ದಕ್ಷಿಣ ಭಾರತಾದ್ಯಂತ ಅತ್ಯಂತ ಜನಪ್ರಿಯ ಭಕ್ತಿಗೀತೆಯಾದ ಭಾಗ್ಯದ ಲಕ್ಷ್ಮೀ ಬಾರಮ್ಮI ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮೀ ಬಾರಮ್ಮII, ನಿತ್ಯನೂತನವಾದ ಪುರಂದರರ ಈ ಭಕ್ತಿಗೀತೆಯನ್ನು ನಮ್ಮ ದೇಶದ ಹೆಸರಾಂತ ಗಾಯಕರೆಲ್ಲರೂ ತಮ್ಮದೇ ಶೈಲಿಯಲ್ಲಿ ಭಕ್ತಿಪೂರ್ವಕವಾಗಿ ಹಾಡಿದ್ದಾರೆ. ಶಂಕರನಾಗ್ ನಿರ್ದೇಶನದ ನೋಡಿಸ್ವಾಮಿ ನಾವಿರೋದು ಹೀಗೆ ಚಲನಚಿತ್ರದಲ್ಲಿ ಪಂಡಿತ್ ಭೀಮಸೇನ್ ಜೋಶಿಯವರು ಹಿಂದೂಸ್ತಾನಿ ದಾಟಿಯಲ್ಲಿ ಹಾಡಿದ ರೀತಿ ಕನ್ನಡಿಗರ ಮನಸ್ಸನ್ನು ಬಹುವಾಗಿ ಸೂರೆಗೊಂಡಿರುವುದರಲ್ಲಿ ಸಂಶಯವಿಲ್ಲ.

ಅಲ್ಲದೆ ಶ್ರೀ ಪುರಂದರರ ಬಹುತೇಕ ಕೀರ್ತನೆಗಳನ್ನು, ಭಕ್ತಿಗೀತೆಗಳನ್ನು ನಮ್ಮ ದೇಶದ ನಾಮಾಂಕಿತ ಗಾಯಕರಾದ ಎಂ.ಎಸ್ ಸುಬ್ಬಲಕ್ಷ್ಮಿ,ಪಂಡಿತ್ ಭೀಮಸೇನ್ ಜೋಶಿ,ಶ್ರೀ ವಿದ್ಯಾಭೂಷಣರು ಸುಶ್ರಾವ್ಯವಾಗಿ ಹಾಡಿ ರಾಷ್ಟ್ರ,ಅಂತರರಾಷ್ಟ್ರದ್ಯಾಂತ ಕರ್ನಾಟಕ ಸಂಗೀತ ಮತ್ತು ಹಿಂದೂಸ್ತಾನಿ ಸಂಗೀತ ಶ್ರೋತೃಗರ ಮನ ತಣಿಸಿದ್ದಾರೆ.

ಶ್ರೀ ಪುರಂದರರ ಬಹುಪಾಲು ಕೀರ್ತನೆಗಳು ನಮ್ಮ ಕನ್ನಡ ಭಾಷೆಯಲ್ಲಿ ಮಾತ್ರವೇ ಇದ್ದರೂ ಕೂಡ. ಅವುಗಳು ದೇಶ, ವಿದೇಶಗಳ ಮಟ್ಟದಲ್ಲಿ ಸಾಕಷ್ಟು ಮನ್ನಣೆಯನ್ನು, ಜನಪ್ರಿಯತೆಯನ್ನು ಗಳಿಸಿಕೊಂಡಿರುವುದು ಕನ್ನಡ ತಾಯಿಯ ಮಕ್ಕಳಾದ ನಮಗೆ ಬಹುದೊಡ್ಡ ಹೆಮ್ಮೆಯ ವಿಚಾರವೇ ಸರಿ.

ಶ್ರೀ ಪುರಂದರ ನಂತರದಲ್ಲಿ ಬಂದ ಕರ್ನಾಟಕ ಸಂಗೀತದ ಮತ್ತೊಬ್ಬ ಪ್ರಮುಖರಾದ ತ್ಯಾಗರಾಜರು ಶ್ರೀ ಪುರಂದರರೇ ತನ್ನ ಗುರುಗಳೆಂದು ತಮ್ಮ "ಪ್ರಹ್ಲಾದ ಭಕ್ತಿ ವಿಜಯ"ದ ಮಂಗಳಶ್ಲೋಕದಲ್ಲಿ ಸ್ಮರಿಸಿದ್ದಾರೆ.
ಕರ್ನಾಟಕ ಸಂಗೀತಕ್ಕೆ ತ್ಯಾಗರಾಜರ ಅನುಪಮ ಕಾಣಿಕೆಯ ನೆನಪಾಗಿ ಪ್ರತಿ ವರ್ಷ ತಮಿಳುನಾಡಿನ ತಿರುವಯ್ಯಾರಿನಲ್ಲಿ ಪುಷ್ಯ ಬಹುಳ ಪಂಚಮಿಯಂದು (ಜನವರಿ ಅಥವ ಫೆಬ್ರವರಿ ತಿ೦ಗಳುಗಳ ಸಮಯ) "ತ್ಯಾಗರಾಜ ಆರಾಧನೆ" ಉತ್ಸವವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ.

ಶ್ರೀ ಪುರಂದರ ವಿದ್ವತ್ ಅನ್ನು, ಅನನ್ಯ ದೈವಭಕ್ತಿಯನ್ನು ಮತ್ತು ಸಾಮಾಜಿಕ ಕಾಳಜಿಯನ್ನು ಕಂಡು ಅವರ ಪರಮ ಗುರುಗಳಾದ ವ್ಯಾಸರಾಜರು "ದಾಸರೆಂದರೆ ಪುರಂದರದಾಸರಯ್ಯ" ಎಂದು ಹಾಡಿ ಹೊಗಳಿದ್ದರು.

ಆದರೆ ಕನ್ನಡ ದಾಸಸಾಹಿತ್ಯಕ್ಕೆ ಮತ್ತು ಕರ್ನಾಟಕ ಸಂಗೀತ ಪದ್ದತಿಗೆ ಮಹತ್ತರವಾದ ಸೇವೆಯನ್ನು ಸಲ್ಲಿಸಿರುವ ಶ್ರೀ ಪುರಂದರದಾಸರನ್ನು ಸ್ಮರಿಸುವ ಸಲುವಾಗಿ ವರ್ಷಕ್ಕೊಮ್ಮೆಯಾದರೂ ಹೇಳಿಕೊಳ್ಳುವಂತಹ ಯಾವಂದೂ ಕಾರ್ಯಕ್ರಮವನ್ನು ಹಮ್ಮೀಕೊಳ್ಳುವುದರ
ಬಗ್ಗೆ ಚಿಂತನೆಯನ್ನು ನಮ್ಮ ಕರ್ನಾಟಕ ಸರ್ಕಾರ,ನಮ್ಮ ಕನ್ನಡ ಜನತೆ ಮಾಡದಿರುವುದು ಬಹಳ ವಿಪರ್ಯಾಸ ಮತ್ತು ವಿಷಾದನೀಯ ಸಂಗತಿ. ಕನ್ನಡಿಗರಾದ ನಾವು ಅಭಿಮಾನದ ವಿಚಾರದಲ್ಲಿ ಏಕೆ ಹಿಂದೆ ಇರುವೆವು? ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಾಗಿದೆ.

-ಸುನಿಲ್ ಕುಮಾರ ಮಲ್ಲೇನಹಳ್ಳಿ.
ಯಾಂತ್ರಿಕ ಅಭಿಯಂತರ

0 comments:

Post a Comment