ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ದೃಶ್ಯ ಮಾಧ್ಯಮದ ನೆನಪಿನ ಸವಾರಿ...

ಕಾದಂಬರಿ ಮತ್ತು `ಕಾವ್ಯ'

ಎಲ್ಲರಲ್ಲೂ ಒಂದಲ್ಲ ಒಂದು ರೀತಿಯ ಹವ್ಯಾಸ ಇದ್ದೇ ಇರುತ್ತದೆ. ಇದು ಪ್ರತೀಯೊಬ್ಬ ವ್ಯಕ್ತಿಯಲ್ಲಿಯೂ ವಿಭಿನ್ನವಾಗಿರುವುದಕ್ಕೆ ಕಾರಣ ಮುಖ್ಯವಾಗಿ ಆತ ಬೆಳೆದು ಬಂದ ವಾತಾವರಣವನ್ನು ಹೊಂದಿಕೊಂಡಿದೆ. ಒಳ್ಳೆಯ ವಾತಾವರಣದಲ್ಲಿ ಬೆಳೆದ ವ್ಯಕ್ತಿ ಒಳ್ಳೊಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳುತ್ತಾನೆ. ಇನ್ನು ತೀರಾ ಕೆಟ್ಟ ಪರಿಸ್ಥಿತಿಯಲ್ಲಿ, ವಾತಾವರಣದಲ್ಲಿ ಬೆಳೆದವನು ಹವ್ಯಾಸವನ್ನು ಬೆಳೆಸಿಕೊಂಡಿರುವುದುದಾದರೂ ಅದು ಹವ್ಯಾಸವಾಗದೆ `ಚಟ'ವಾಗಿ ಮಾತ್ರ ಗೋಚರಿಸುತ್ತದೆ. ಏನಿದು ಹವ್ಯಾಸ? ಇದನ್ನು ಅರ್ಥ ಮಾಡಿಕೊಳ್ಳಲು ಸುಲಭ. ವ್ಯಕ್ತಿ ತಾನು ಬೆಳೆದು ಬಂದ ಪರಿಸರದಲ್ಲಿ ತನ್ನ ಆಸಕ್ತಿಯನ್ನು ಉದ್ದೀಪನಗೊಳಿಸುವ ಮತ್ತು ಅದರಿಂದ ಸಂತೋಷವನ್ನು ಅಥವಾ ಆನಂದವನ್ನು ಪಡೆಯುವ ಕೆಲಸವನ್ನ ಹವ್ಯಾಸವೆನ್ನಬಹುದು. ಹವ್ಯಾಸದಿಂದ ವ್ಯಕ್ತಿಯ ಅಭಿರುಚಿ ಒಳ್ಳೊಳ್ಳೆಯ ವಿಚಾರಗಳತ್ತ ಸಾಗಿ ತನ್ನ ಆಸಕ್ತಕ ವಿಷಯದಲ್ಲಿ ಸಾಧನೆಯನ್ನು ಮಾಡಲು ಸಹಕಾರಿಯೂ ಆಗಬಹುದು.ಹವ್ಯಾಸಗಳನ್ನ ಗುರುತಿಸುವುದಾದರೆ ವಿದ್ಯಾರ್ಥಿ ಜೀವನದಲ್ಲಿ ಚಿತ್ರಕಲೆ, ಸಂಗೀತ, ನೃತ್ಯ, ಓದುವುದು, ಬರೆಯುವುದು, ಅಂಚೆಚೀಟಿ ಸಂಗ್ರಹ, ಛಾಯಾಚಿತ್ರಗ್ರಹಣ, ಪ್ರಾಣಿ ಪಕ್ಷಿಗಳ ಮತ್ತು ಪರಿಸರದ ಚಿತ್ರಗಳನ್ನು ಸಂಗ್ರಹಿಸಿವುದು. ಹೀಗೆ ಹವ್ಯಾಸ ನಮೂನೆಗಳು ಕಾಣಸಿಗುತ್ತವೆ. ಇವು ಇಷ್ಟೇ ಹವ್ಯಾಸಗಳಲ್ಲ. ಇನ್ನೂ ಹಲವಾರು ಬಗೆ ಇವೆ.

ನನ್ನ ಹಲವು ಒಳ್ಳೆಯ ಹವ್ಯಾಸಗಳಲ್ಲಿ ಒಂದು ಪುಸ್ತಕ ಸಂಗ್ರಹ. ನಾನು ಪುಸ್ತಕವನ್ನು ಓದುವುದು ಮಾತ್ರವಲ್ಲ, ಅವುಗಳನ್ನು ಸಂಗ್ರಹಿಸುವ ಹವ್ಯಾಸ ಎಲ್ಲಿಯವರೆಗೆಂದರೆ ಪತ್ರಿಕೆಗಳಲ್ಲಿ ಬರುವ ಧಾರಾವಾಹಿ, ಕಥೆ, ಲೇಖನಗಳನ್ನು ಒಟ್ಟು ಸೇರಿಸಿ ಬುಕ್ ಬೈಂಡ್ ಮಾಡಿಸಿ, ನನಗೆ ಬೇಕಾದಾಗ ಅದನ್ನು ಮತ್ತೆ ಮತ್ತೆ ತಿರುಚುವಲ್ಲಿಯವರೆ. ಅದರಲ್ಲಿ ಸಿಗುವ ಸುಖ, ಆನಂದ ಹೇಳಲಾತೀತ. ಏನಿಲ್ಲವೆಂದರೂ ಮನಸ್ಸಿಗೆ ದು:ಖವಾದಾಗ ಅಥವಾ ಆಸಕ್ತಿ (ಮೂಡ್) ಇಲ್ಲದಾಗ ಪುಸ್ತಕಗಳನ್ನು ತಿರುವಿದರೆ ಮತ್ತೆ ಚೈತನ್ಯ ತುಂಬುತ್ತದೆ. ಅದಕ್ಕಾಗಿಯಾದರೂ ನಾವು ಒಂದಾದರೂ ಹವ್ಯಾಸವನ್ನು ಬೆಳೆಸಿಕೊಳ್ಳಲೇಬೇಕು.

ಪುಸ್ತಕ ಸಂಗ್ರಹದ ನನ್ನ ಹವ್ಯಾಸವನ್ನು ಬದಿಗಿರಿಸಿ, ಎಂಥಹ ಪುಸ್ತಕಗಳಿವೆ ಎಂದು ಒಮ್ಮೆ ನಾನೇ ಪರಿಶೀಲನೆಗೆ ಕುಳಿತರೆ ನನ್ನಲ್ಲಿರುವುದು ಹೆಚ್ಚಾಗಿ ಕಾದಂಬರಿಗಳು. ಅದರಲ್ಲೂ ಚಲನಚಿತ್ರವಾದ ಕಾದಂಬರಿಗಳು. ಸಿನಿಮಾ ಪತ್ರಿಕೆಗಳಲ್ಲಿ ಬರುವ ವಿಷಯಗಳನ್ನು ಓದಿ, ಯಾವುದೇ ಸಿನಿಮಾವಾಗಲಿ ಅದು ಕಾದಂಬರಿಯಾಧಾರಿತವಾದರೆ ಆ ಕೃತಿಯನ್ನು ಎಷ್ಟೇ ಕಷ್ಟವಾದರೂ ಖರೀದಿಸಿಯೇ ಬಿಡುವುದು ನನ್ನ ಹವ್ಯಾಸ. ಇದನ್ನೇ ಕೆಲವರು `ಹುಚ್ಚು' ಅಂದದ್ದು ಇದೆ. ಅವರ ದೃಷ್ಟಿಯಲ್ಲಿ ಒಮ್ಮೆ ಓದಿ ಎಸೆದು ಬಿಡುವ ಪುಸ್ತಕವನ್ನು ಸಂಗ್ರಹಿಸುವುದು ವೇಸ್ಟ್ ಅಂತ. ಆದರೆ ನನಗೆ ಹಾಗಲ್ಲ. ಕಾದಂಬರಿಯನ್ನು ಓದಿ, ಆ ಕಾದಂಬರಿಗೂ ಚಲನಚಿತ್ರಕ್ಕೂ ಇರುವ ವ್ಯತ್ಯಾಸವನ್ನು ನೋಡುತ್ತಿದ್ದೆ. ಮಾತ್ರವಲ್ಲ, ನಾನು ಓದಿದ ಕಾದಂಬರಿಯ ಪಾತ್ರ ನನ್ನ ಇಮ್ಯಾಜಿನೇಶನ್ನಲ್ಲಿ ಮೂಡಿದ ಹಾಗೆ ಸಿನೆಮಾದಲ್ಲಿ ಮೂಡಿದೆಯೇ? ಅನ್ನುವ ಬೆರಗು ನನ್ನಲ್ಲಿತ್ತು. ಹಾಗಾಗಿ ಮನೆಯಲ್ಲಿ ಬಸ್ಸ್ಗೆ, ಊಟಕ್ಕೆ ಕೊಡುವ ಹಣವನ್ನು ಉಳಿಸಿ ತಿಂಗಳಿಗೊಂದಾದರೂ ಇಂತಹ ಪುಸ್ತಕವನ್ನು ಖರೀದಿಸುತ್ತಿದ್ದೆ.

ನನ್ನ ಈ ಹವ್ಯಾಸ ಆರಂಭವಾಗಿದ್ದು ನಾನು ಪಿಯುಸಿಯಲ್ಲಿರುವಾಗ. ಓದುವ ಹವ್ಯಾಸ ಹೈಸ್ಕೂಲಿನಿಂದಿದ್ದರೂ ಪುಸ್ತಕ ಸಂಗ್ರಹ ಆರಂಭವಾಗಿದ್ದು ತದ ನಂತರ. ಆಗ `ಮಿಥಿಲೆಯ ಸೀತೆಯರು' ಅನ್ನುವ ಸಿನಮಾವನ್ನು ನರೆಂದ್ರ ಬಾಬು ಅನ್ನುವವರು ಕನ್ನಡದಲ್ಲಿ ತಯಾರಿಸುತ್ತಿದ್ದರು. ಅದು ತಮಿಳಿನ ಜನಪ್ರಿಯ ಲೇಖಕಿ ರಾಧಾರಮಣನ್ ಅನ್ನುವವರ ಕೃತಿ. ನಮ್ಮ ಮನೆಯಲ್ಲಿ ತಮಿಳು ಭಾಷೆಯ ಬಗ್ಗೆ ನನ್ನ ಅಕ್ಕ ಅಣ್ಣನವರಿಗೆಲ್ಲ ತಿಳಿದಿರುವುದರಿಂದ ಲೇಖಕಿಯ ಬಗ್ಗೆ ಹೇಳಿದ್ದರು. ಅದು ಬೇಸಿಕಲಿ ಮೂವರು ಅಕ್ಕತಂಗಿಯರ ನಡುವೆ ನಡೆಯುವ ಕಥೆ. ಆಗ ಆ ಕಾದಂಬರಿಯ ಬೆಲೆ ಹತ್ತು ರೂಪಾಯಿ ಮಾತ್ರ. ಆಗಿನ ಕಾಲಕ್ಕೆ ಅದು ದೊಡ್ಡ ಮೊತ್ತ. ಒಮ್ಮೆ ತಂದೆಯವರ ಜೊತೆಗೆ ಅಂಗಡಿಗೆ ಸಾಮಾನು ತರಲು ಉಡುಪಿಯ ಬುಧವಾರ ಸಂತೆಗೆ ಹೋಗಿದ್ದೆ. ಅಲ್ಲಿ ಅಂಗಡಿಗೆ ಬೇಕಾದ ಲೇಖನ ಸಾಮಾಗ್ರಿಗಳನ್ನು ಶೈಣೈ ಬ್ರದರ್ಸ್ ನಿಂದ ತರುತ್ತಿದ್ದರು. ಅಲ್ಲಿ ಗಾಜಿನ ಕಪಾಟಿನಲ್ಲಿದ್ದ ಪುಸ್ತಕವನ್ನು ನೋಡಿ ಅದನ್ನು ಹೇಗಾದರು ಮಾಡಿ ಖರೀದಿಸಲೇಬೇಕೆನ್ನುವ ನಿರ್ಧಾರಕ್ಕೆ ಬಂದೆ. ಪ್ರತೀ ವಾರ ಹೋಗುವುದು ಅದನ್ನು ನೋಡುವುದು ಹಿಂತಿರುಗುವುದು. ಹೀಗೆ ಮುಂದುವರಿತಾ ಇತ್ತು. ಕೊನೆಗೆ ಅಂಗಡಿಯವರು, `ನೀವು ಪ್ರತೀವಾರ ಬಂದು ಕೇಳ್ತೀರಿ, ನೋಡ್ತೀರಿ, ಹೋಗ್ತೀರಿ. ತೆಗೆದುಕೊಳ್ಳುವುದೇ ಇಲ್ಲ' ಅಂತ ಹೇಳಿದ್ದೆ. ನಾನು ನಿರಾಶೆಯಿಂದ ಹಿಂತಿರುಗಿದೆ. ಹತ್ತು ರೂಪಾಯಿ ನನ್ನ ಕೈಯಲ್ಲಿರಲಿಲ್ಲ. ಮುಂದೊಮ್ಮೆ ತಂದೆಯವರು ಅಂಗಡಿಯಲ್ಲಿ ಇಲ್ಲದ ಸಮಯದಲ್ಲಿ ದಿನಕ್ಕೆ ಒಂದೊಂದು ರುಪಾಯಿಯನ್ನು ಕದ್ದು ಹತ್ತು ರುಪಾಯಿಗಳಾಗುವವರೆಗೆ ಸಂಗ್ರಹಿಸಿದೆ. ಅದನ್ನು ತೆಗೆದುಕೊಂಡು ಹೋಗಿ ಪುಸ್ತಕದ ಅಂಗಡಿಯವನಿಗೆ ಕೊಟ್ಟು ಆ ಪುಸ್ತಕವನ್ನು ಖರೀದಿಸಿದೆ. ಆನಂತರ ನಾನು ದುಡಿಯಲು ಆರಂಭಿಸಿದ ಬಳಿಕ ಪುಸ್ತಕಗಳಿಗಾಗಿಯೇ ಇಂತಿಷ್ಟು ಹಣವನ್ನು ಮೀಸಲಿಟ್ಟು ಖರೀದಿಸುತ್ತಿದ್ದೆ. ಈಗ ನನ್ನ ಸಂಗ್ರಹದಲ್ಲಿ ಎಲ್ಲಾ ಸೇರಿ ಒಟ್ಟು ಎರಡು ಸಾವಿರದಷ್ಟು ಪುಸ್ತಕಗಳಿಗೆ.

ಈ ವಿಷಯ ಯಾಕೆ ಹೇಳುತ್ತಿದ್ದೇನೆಂದರೆ ನನ್ನ ಪುಸ್ತಕ ಸಂಗ್ರಹದಲ್ಲಿ ಅಪರೂಪದ ಅಂದರೆ ಸಿನಿಮಾ ಮಾಧ್ಯಮಕ್ಕೆ ಬಂದ ಕೆಲವು ಕೃತಿಗಳಲ್ಲಿ ಬಿ. ಸಿ. ಗೌರಿಶಂಕರ್ ಬರೆದಿರುವ `ಏಳು ಸುತ್ತಿನ ಕೋಟೆ' ಯಂತಹ ಕೃತಿಗಳು ಇವೆ. ಹಾಗೆ ಅಪರೂಪಕ್ಕೆ ಸಿಕ್ಕ ಮತ್ತೊಂದು ಕೃತಿ `ಕಾವ್ಯ'. ಕಾವ್ಯ ಸಿನೆಮಾದ ಮೇಲೆ ಆಸಕ್ತಿ ಹುಟ್ಟಲು ಮತ್ತೊಂದು ಕಾರಣ ಅದು ನಾನು ಉದ್ಯೋಗ ಮಾಡುತ್ತಿರುವಾಗ ಮಣಿಪಾಲದ ಸುತ್ತ ಮುತ್ತಲಿನಲ್ಲಿ ಚಿತ್ರೀಕರಣವಾಗಿರುವುದಕ್ಕೆ. ಸುಧಾರಾಣಿ ಆಗ ಪ್ರವರ್ಧಮಾನದಲ್ಲಿದ್ದ ಕಾಲ. ಅವರನ್ನ ನೋಡುವ ಹುಮ್ಮಸಿನಿಂದ `ಕಾವ್ಯ' ಶೂಟಿಂಗ್ ನಡೆಯುವ ಸ್ಥಳಕ್ಕೆ ಹೋಗಿದ್ದೆ.

ಕಾವ್ಯ (ಸುಧಾರಾಣಿ) ಮೆಡಿಕಲ್ ವಿದ್ಯಾರ್ಥಿ, ದೆಹಲಿಯಲ್ಲಿ ನಡೆಯುವ ಓಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ಮರಳಿ ಮಣಿಪಾಲ ಕಾಲೇಜಿಗೆ ಬರುವ ಸನ್ನಿವೇಶ. ನಾಯಕ ರಾಮ್ ಕುಮಾರ್ ಅವಳನ್ನು ಅಭಿನಂದನಾ ಸಮಾರಂಭದಲ್ಲಿ ಹಾಡಿ ಹೊಗಳುವ ದೃಶ್ಯವಂತು ಹಾಡಿನಷ್ಟೇ ಮನಮೋಹಕ. ಆ ಕಾವ್ಯ ಲಹರಿ `ವಂದನೆ ವಂದನೆ ಸಾವಿರ ವಂದನೆ'ಯೊಂದಿಗೆ ಆರಂಭವಾಗುತ್ತದೆ.

ವಂದನೆ ವಂದನೆ, ಸಾವಿರ ವಂದನೆ
ಸಾಧನೆ ತೋರಿದ ಜಾಣೆಗೆ
ಗೆಲುವಿನ ಬಂಗಾರಿಗೆ, ಸೊಬಗಿನ ಸಿಂಗಾರಿಗೆ
ವಂದನೆ ವಂದನೆ ವಂದನೆ||
ನೀಲಾಂಭರದ ಬೆಳ್ದಿಂಗಳಲಿ
ತೇಲಾಡುತಿರೊ ಸೌಂದರ್ಯವು ನೀನೆ
ರಂಗೇರಿರುವ ಹೂದೋಟದಲಿ
ತೂಗಾಡುತ್ತಿರೊ ಮಂದಾರವು ನೀನೆ
ಮೋಹಾಂಗನೆ... ನೀನು ರಾಗಾಂಕಿತಾ ನಾನು...
ಓ! ಶೋಭನೆ, ನೀಲಾಂಜನೆ, ಅಭಿವಂದನೆ...

ವ್ಹಾ! ಎಷ್ಟೊಂದು ಪ್ರೀತಿಯಿಂದ ಅಭಿನಂದನೆ ಹೇಳ್ತಾನಲ್ಲ. ಇನ್ನೊಬ್ಬರ ಯಶಸ್ಸಿಗೆ ಹೀಗೆ ಅಭಿನಂದನೆ ಹೇಳೋ ಮನಸ್ಸು ನಮದಾಗಿರಲಿ. ಮುಂದೆ ತ್ರಿಕೋನ ಪ್ರೇಮದ ಕಥಾಹಂದರದಲ್ಲಿ ಸಾಗುವ ಕಾವ್ಯ ಒಂದು ಕಾವ್ಯಾತ್ಮಕ ನಿರೂಪಣೆ. ಇದರ ಮೂಲ ಕಥೆ ಕೂಡ್ಲು ರಾಮಕೃಷ್ಣ ಅವರದ್ದು. ಆದರೆ ಇದನ್ನು ಕಾದಂಬರಿಯಾಗಿಸಿದವರು ವಿಜಯಾ ಮೂರ್ತಿಯವರು.

ಕೂಡ್ಲು ರಾಮಕೃಷ್ಣ ನಿರ್ದೇಶನದ ಈ ಚಿತ್ರಕ್ಕೆ ಸಾಧು ಕೋಕಿಲ ಸಂಗೀತ ನೀಡಿದ್ದಾರೆ. ಈ ಚಿತ್ರದ ಭೂಮಿಕೆಯಲ್ಲಿ ಸುಧಾರಾಣಿ, ರಾಮ್ ಕುಮಾರ್, ಸಿತಾರ, ಕಲ್ಯಾಣ್ ಕುಮಾರ್ ಮುಂತಾದವರಿದ್ದಾರೆ.


ಅನು ಬೆಳ್ಳೆ

0 comments:

Post a Comment