ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ಪತ್ತೇದಾರಿಯೆಂದರೆ ಮೇಲ್ನೋಟಕ್ಕೆ ನಿಗೂಢವಾಗಿ ಉಳಿದಿರುವ ಅಥವಾ ರಹಸ್ಯವಾಗಿರುವುದನ್ನು ಶೋಧಿಸಿ ಅದನ್ನು ಬಹಿರಂಗ ಪಡಿಸುವುದು ಎಂದರ್ಥ. ಪತ್ತೇದಾರಿಕೆಯ ಕ್ರಮದಲ್ಲಿ ಸಾಧ್ಯ ಅಸಾಧ್ಯಗಳ ತುಲನಾತ್ಮಕ ಪರಿಶೀಲನೆಯ ಜೊತೆಗೆ ತಾರ್ಕಿಕ ಅನುಸಂಧಾನಗಳು ಬಳಕೆಯಾಗುತ್ತವೆ. ಆದ್ದರಿಂದ ಪತ್ತೇದಾರಿಯೆಂದರೆ ಪರಿಶೋಧನೆ ಅಥವಾ ಇರುವಿಕೆಯ ಬಗೆಗಿನ ತಾರ್ಕಿಕ ಮತ್ತು ಬೌದ್ಧಿಕ ವಿಶ್ಲೇಷಣೆ ಎಂದು ಕೂಡ ಕರೆಯಬಹುದು.

ಪತ್ತೇದಾರಿ ಸಾಹಿತ್ಯ ಕೇವಲ ಒಂದು ಸಾಹಿತ್ಯ ಮಾತ್ರವಲ್ಲ, ಅದು ಸಾಹಿತ್ಯದ ಓದುಗರನ್ನು ಹುಟ್ಟುಹಾಕುವ ಕಲೆಯೂ ಹೌದು. ಓದುಗರನ್ನು ತುದಿಗಾಲ ಮೇಲೆ ನಿಲ್ಲಿಸಿ, ಓದುವಂತೆ ಪ್ರೇರೇಪಿಸುವ ಕಾರ್ಯ ಪತ್ತೇದಾರಿ ಕಥನಕದಿಂದ ಸಾಧ್ಯವಾಗಿದೆ. ಸಾಹಿತ್ಯದಲ್ಲಿ ಎಷ್ಟೇ ಪ್ರಕಾರಗಳಿದ್ದರೂ ಪತ್ತೇದಾರಿ ಸಾಹಿತ್ಯವು ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಓದುಗನ ಆರನೆಯ ಇಂದ್ರಿಯವನ್ನು ಜಾಗೃತಗೊಳಿಸುವ ಶಕ್ತಿ ಈ ಸಾಹಿತ್ಯಕ್ಕಿದೆ.

ಕನ್ನಡದ ಪತ್ತೇದಾರಿ ಸಾಹಿತ್ಯಕ್ಕೆ ಬಂದರೆ 1892 ರಲ್ಲಿ ಪ್ರಕಟವಾದ ಸಿ. ರಾಜಗೋಪಾಲ ಶೆಟ್ಟಿಯವರ `ರಾತ್ರಿ ಚುಕ್ಕೆ ಹಗಲು ಚುಕ್ಕೆ' ಕನ್ನಡದ ಪ್ರಥಮ ಪತ್ತೇದಾರಿ ಕಾದಂಬರಿಯಾಗಿದೆ. ತದ ನಂತರ ಕನ್ನಡದಲ್ಲಿ ಪತ್ತೇದಾರಿ ಸಾಹಿತ್ಯವನ್ನು ಆರಂಭಿಸಿದ ತಲೆಮಾರಿನಲ್ಲಿ ನರಹರಿಶರ್ಮ, ಬಿ.ಪಿ. ಕಾಳೆ, ರಮೇಶರವರು ಒಳ್ಳೆಯ ಕೃತಿಗಳನ್ನು ರಚಿಸಿದ್ದಾರೆ. ಕನ್ನಡದ ಪತ್ತೇದಾರಿ ಕಥನಕ ಕ್ರಮದ ಪುನರುತ್ಥಾನ ಮತ್ತು ಸುವರ್ಣಯುಗದ ಹರಿಕಾರರೆಂದರೆ ವೀರಕೇಸರಿ ಸೀತಾರಾಮಶಾಸ್ತ್ರಿಗಳ ಮಗನಾದ ಮ. ರಾಮ ಮೂರ್ತಿಯವರು. ಇವರು ಕನ್ನಡದ ಹಳದಿಕೆಂಪು ಬಣ್ಣದ ಬಾವುಟದ ಜನಕರೂ ಹೌದು. ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಇವರ ಮೊದಲ ಕಾದಂಬರಿ 1951ರಲ್ಲಿ ಪ್ರಕಟವಾದ `ಮುತ್ತಿನ ಬಳೆಯವಳು'. ಇವರ ಪ್ರಸಿದ್ಧ ಕಾದಂಬರಿ `ವೈಯಾಳಿಕಾವಲ್'. ಆ ಬಳಿಕ ಪತ್ತೇದಾರಿಯ ಸ್ಥಿರ ಪಾತ್ರವಾದ ಪುರುಷೋತ್ತಮನನ್ನು ಸೃಷ್ಟಿಸಿ ಖ್ಯಾತರಾದವರು ಎನ್. ನರಸಿಂಹಯ್ಯನವರು. ಇವರು ಪತ್ತೇದಾರಿ ಸಾಹಿತ್ಯದಲ್ಲಿ ಇತಿಹಾಸವನ್ನು ನಿರ್ಮಿಸಿದವರೆಂದರೆ ಸುಳ್ಳಲ್ಲ. ಕುಂದಾನಿ ಸತ್ಯನ್, ಬಿ.ಕೆ. ಸುಂದರರಾಜು, ಎಂ. ಜೀವನ್, ಮಾಭೀಶೇ, ಎನ್ ಗುಂಡಾಶಾಸ್ತ್ರಿ, ಜಿಂದೆ ನಂಜುಂಡೆ ಸ್ವಾಮಿ, ಪಿ. ರಾಜು, ಬಿ. ಎಚ್ ಸಂಜೀವಮೂರ್ತಿ, ಕಾಕೋಳು ರಾಮಯ್ಯ, ಪುಲಕೇಶಿ, ಬಿ. ವಿ. ಅನಂತರಾಮ, ಸಾಸ್ಕಾಮೂರ್ತಿ, ಚೈತನ್ಯ (ಮಾಧವ ಕುಲಕರ್ಣಿ), ಎಚ್. ಜಿ. ಶಿವಶಂಕರ, ಸದಾನಂದ, ಸಾ. ಕೃ. ಪ್ರಕಾಶ್, ಶಿವಾಜಿ ರಾವ್, ರಮೇಶ್ ನಾಯಕ್ ಅಲ್ಲದೆ ಮಹಿಳೆಯರಲ್ಲಿ ಕೆ. ಆರ್. ಪದ್ಮಜೆಯವರು ಕೂಡ ಕನ್ನಡದ ಪತ್ತೇದಾರಿ ಸಾಹಿತ್ಯಕ್ಕೆ ತಮ್ಮ ಕೊಡುಗೆಯನ್ನು ನೀಡಿದವರಲ್ಲಿ ಪ್ರಮುಖರು.

ಆ ನಂತರ ವಿಶೇಷವಾಗಿ ವಿಭಿನ್ನ ಶೈಲಿ, ಕಥಾವಸ್ತು ಮತ್ತು ನಿರ್ಧಿಷ್ಟ ಪತ್ತೇದಾರನ ಪಾತ್ರ ಸೃಷ್ಟಿಸಿದ ಕಥನಕಗಳಿಗೆ ಹೆಸರಾದವರು ಟಿ. ಕೆ. ರಾಮರಾವ್ ಅವರು. ಅವರ ಕಥನ ಶೈಲಿಯೆ ಮೋಹಕ ಮತ್ತು ಶಾಸ್ತ್ರೀಯ ದಾಟಿಯ ಕಥಾ ಸರಣಿ. ಕಣ್ಣಿಗೆ ಕಟ್ಟಿದಂತೆ ದೃಶ್ಯಗಳನ್ನು ಸೃಷ್ಟಿಸುವ ಅವರ ಬರವಣಿಗೆಯ ಶೈಲಿ ಓದುಗನನ್ನು ಆ ಸ್ಥಳಕ್ಕೆ ಕೊಂಡೊಯ್ದು ಬಿಡುತ್ತಿತ್ತು. ಅದಕ್ಕಾಗಿಯೇ ಅವರ ಹೆಚ್ಚಿನ ಕಾದಂಬರಿಗಳೆಲ್ಲಾ ದೃಶ್ಯಮಾಧ್ಯಮದಲ್ಲಿಯೂ ಯಶಸ್ಸು ಕಂಡಿವೆ. ಅವರ ಕಾದಂಬರಿಯಲ್ಲಿ ಹೆಚ್ಚಾಗಿ ಸಾಮಾಜಿಕ ಕಥಾ ಹಂದರದ ಜೊತೆಗೆ ಕುತೂಹಲದ ಸನ್ನಿವೇಶಗಳಿದ್ದು ಒಂದು ರೀತಿಯಲ್ಲಿ ಅದು ಕ್ಲಾಸಿಕಲ್ ಶೈಲಿಯೆಂದೇ ಖ್ಯಾತಿಯಾದವು. ಇವರ ನಂತರ ಪತ್ತೇದಾರಿ ಸಾಹಿತ್ಯಕ್ಕೆ ಅನರ್ಘ್ಯ ಸೇವೆ ಸಲ್ಲಿಸಿದವರೆಂದರೆ ಸುದರ್ಶನ ದೇಸಾಯಿಯವರು. `ಹಳದಿ ಚೇಳು' ಕಾದಂಬರಿಯ ಮೂಲಕ ಓದುಗರನ್ನು ಸೆಳೆದ ದೇಸಾಯಿಯವರು ಆಧುನಿಕ ತಂತ್ರಜ್ಞಾನ ಮತ್ತು ಸಮಕಾಲಿನ ವಸ್ತುಗಳನ್ನು ಆರಿಸಿಕೊಂಡು ಪತ್ತೇದಾರಿ ಕೃತಿಯನ್ನು ರಚಿಸುತ್ತಿದ್ದುದರಿಂದ ಅವರ ಹೆಚ್ಚಿನ ಕಾದಂಬರಿಗಳೆಲ್ಲಾ ವಾಸ್ತವಕ್ಕೆ ಸನಿಹವಾಗಿವೆಯೆನೋ ಅನಿಸುತ್ತಿತ್ತು.

ಇಂತಹ ಪತ್ತೇದಾರಿ ಕಥೆಗಳನ್ನು ಆದರಿಸಿಯೋ ಇಲ್ಲ ಸ್ವತಂತ್ರ್ಯವಾಗಿಯೋ ಪತ್ತೇದಾರಿ ಕಥೆಗಳು ಕನ್ನಡ ಚಿತ್ರರಂಗದ ಮಟ್ಟಿಗಂತು ಯತ್ತೇಚ್ಛವಾಗಿ ಬಂದಿವೆ. ಸಿ.ಐ.ಡಿ 999, ಅಪರೇಷನ್ ಡೈಮಂಡ್ ರಾಕೇಟ್, ಎಜೆಂಟ್ ಅಮರ್, ಜೇಡರ ಬಲೆ, ಶರವೇಗದ ಸರದಾರ, ಶ್!, ನಿಗೂಢ ರಹಸ್ಯ, ಮಣ್ಣಿನ ದೋಣಿ, ವರ್ಣ ಚಕ್ರ, ಸೀಳು ನಕ್ಷತ್ರ ಹೀಗೆ ಹಲವು ಸಿನೆಮಾಗಳು ನೋಡುಗರನ್ನ ತುದಿಗಾಲಲ್ಲಿ ನಿಲ್ಲಿಸಿದಂತೆ ಮಾಡಿ ಬಾಕ್ಸ್ ಆಫೀಸಿನಲ್ಲಿಯೂ ಗೆದ್ದು ಬಂದಿವೆ. ಒಂದು ಚಿತ್ರ ಗೆಲ್ಲಬೇಕಾದರೆ ಗಾಂಧಿನಗರದ ಲೆಕ್ಕ ಪ್ರಕಾರ ಆ ಚಿತ್ರ ತುಂಬಿದ ಗೃಹಗಳಿಂದ ನಿರಂತರವಾಗಿ ಮೂವತ್ತೈದು ದಿನ ಓಡಬೇಕು. ಆಗ ನಿರ್ಮಾಪಕನಿಗೆ ಮೋಸವಿಲ್ಲ, ಚಿತ್ರ ಕೂಡ ಯಶಸ್ವಿ ಚಿತ್ರವೆಂದು ಹೇಳಬಹುದು.

ಅಂತಹ ಜನಪ್ರಿಯ ಚಿತ್ರ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅಭಿನಯದ `ಸಂಯುಕ್ತಾ'. ಖ್ಯಾತ ಲೇಖಕಿ ಕಾಕೋಳು ಸರೋಜಮ್ಮ ಅವರ `ಮುಸುಕು' ಕಾದಂಬರಿಯನ್ನು ಆಧರಿಸಿದ ಈ ಚಿತ್ರದಲ್ಲಿ ಬಾಲರಾಜ್, ಗುರುದತ್ತ್ ಶಿವಣ್ಣನ ಜೊತೆಗಿನ ಇನ್ನಿಬ್ಬರು ನಾಯಕರು. `ಈ ನಮ್ಮ ನಾಡು ಚೆಂದವೋ, ಈ ನಮ್ಮ ನುಡಿಯೆ ಅಂದವು, ಬಳು ಬಳುಕುತ ತರುಲತೆಗಳಲ್ಲಿ ಅರಳಿದ ಹೂ ಚೆನ್ನ' ಹಾಡಿನೊಂದಿಗೆ ಮೂವರು ಗೆಳೆಯರು ನಮ್ಮ ನಾಡನ್ನು ಹೊಗಳುತ್ತಾ ಎಂಟ್ರಿ ಪಡೆಯುವ ಈ ಚಿತ್ರದಲ್ಲಿ ಸಂಯುಕ್ತಾ ಅನ್ನುವ ಹುಡುಗಿಯ ಕೊಲೆಯಾಗಿರುತ್ತದೆ. ಈ ಕೊಲೆಯ ನಿಗೂಢತೆಯನ್ನು ಬೇಧಿಸುವುದೇ ಈ ಚಿತ್ರದ ಕಥಾವಸ್ತು.

ಚಿತ್ರದ ಕೊನೆಯವರೆಗೂ ಕುತೂಹಲ ಕೆರಳಿಸಿ ನೋಡುಗನನ್ನು ಉಸಿರು ಬಿಗಿ ಹಿಡಿದು ನಿಲ್ಲಿಸುವ ಶಕ್ತಿ ಈ ಚಿತ್ರದ್ದು. ಈ ಚಿತ್ರದ ಇನ್ನೊಂದು ಜನಪ್ರಿಯ ಹಾಡು `ಮೈಸೂರಿನಲ್ಲಿ ಮಲ್ಲಿಗೆ ಹೂವು ಉಂಟಮ್ಮ; ಮಂಗಳೂರಿನಲ್ಲಿ ಭಾರೀ ಕಡಲೆ ಉಂಟಮ್ಮ; ಈ ಊರಲಿ ಏನುಂಟು ನೀನೇ ಹೇಳಮ್ಮ?' ಹಾಡು ಮಂಗಳೂರಿನ ಕಡಲಿನ ಅಬ್ಬರವನ್ನು ತೋರಿಸುವ ದೃಶ್ಯವಿದೆ. ಈ ಚಿತ್ರ ಶಿವರಾಜ್ಕುಮಾರ್ ಅಭಿನಯದ ನಾಲ್ಕನೆ ಚಿತ್ರ. ಮೊದಲ ಮೂರು ಚಿತ್ರಗಳಾದ ಆನಂದ್, ರಥಸಪ್ತಮಿ, ಮನಮೆಚ್ಚಿದ ಹುಡುಗಿ ಚಿತ್ರಗಳ ಜಯಭೇರಿ ಅವರಿಗೆ `ಹ್ಯಾಟ್ರಿಕ್ ಹೀರೋ' ಬಿರುದನ್ನು ತಂದುಕೊಟ್ಟಿದೆ. ಈ ಮೂರು ಚಿತ್ರಗಳು ಕೂಡಾ ಕನ್ನಡದ ಕಥೆ, ಕಾದಂಬರಿಗಳನ್ನು ಆಧರಿಸಿ ತಯಾರಿಸಿದ್ದೆನ್ನುವುದು ಹೆಮ್ಮೆಯ ಸಂಗತಿ. ಮೊದಲನೆ ಚಿತ್ರ ವಿದ್ಯುಲತಾ ಅವರ `ಪ್ರತಿಬಿಂಬ' ನೀಳ್ಗಥೆಯನ್ನಾಧರಿಸಿದರೆ, ಎರಡನೆ ಚಿತ್ರ ವಿದ್ಯುಲತಾ ಅವರ ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾದ ಅದೇ ಹೆಸರಿನ ಕಾದಂಬರಿಯನ್ನಾದರಿಸಿದೆ. ಇನ್ನು ಮೂರನೇ ಚಿತ್ರ ಖ್ಯಾತ ಸಾಹಿತಿ ಕುಂ. ವೀರಭದ್ರಪ್ಪ ಅವರ `ಬೇಟೆ' ಕಾದಂಬರಿಯಾಧಾರಿತ ಚಿತ್ರ. ಹಿಂದೆ ಕನ್ನಡ ಸಾಹಿತ್ಯಕ್ಕೂ ಕನ್ನಡ ಸಿನಿಮಾಕ್ಕೂ ನಂಟು ಹೇಗಿತ್ತಲ್ಲವೆ?
-ಅನು ಬೆಳ್ಳೆ

0 comments:

Post a Comment