ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಉಡುಪಿ :ಇಲ್ಲಿ ಬದುಕು ಕಟ್ಟೋದು ಸಲೀಸಾದ ಮಾತಲ್ಲಾ! ಬಾವಲಿಕುದ್ರು ದ್ವೀಪದಲ್ಲಿ ವಾಸಮಾಡುತ್ತಿರುವ ಜನರ ಬದುಕು ಮಾರಾಬಟ್ಟೆ. ಪ್ರತೀ ನಿತ್ಯ ಒಂದೆಲ್ಲಾ ಒಂದು ಸಮಸ್ಯೆ ಜೊತೆಗೆ ಏಗಬೇಕಾಗಿದೆ. ಈಜ ಬೇಕು, ಈಜಿ ಜಯಿಸಬೇಕು ಅಂತಾರಲ್ಲೊ ಹಾಗೆ ಬಾವಲಿಕುದ್ರು ನಿವಾಸಿಗಳು ಸೀತಾ ನದಿ ಹರಿವಿನೊಟ್ಟಿಗೆ ಈಜುತ್ತಲೇ ಬದುಕು ಕಟ್ಟಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಕಲೆವರು ಕೈಕಾಲು ಸೋತು ಸೀತಾ ನದಿಗೆ ಆಹಾರವಾಗಿದ್ದಾರೆ. ಕೈಕಾಲು ಗಟ್ಟಿಯಿದ್ದವರು ಈಜಿ ಜಯಿಸುವ ಪ್ರಯತ್ನ ಮಾಡುತ್ತಿದ್ದಾರೆ. ಬಾವಲಿಕುದ್ರೆಗೆ ಸೀತಾನದಿ ನೀರಿನ ಕೋಟೆ ಕಟ್ಟಿದೆ! ನೀರಿಲ್ಲದೆ ಬದುಕಿಲ್ಲಾ..! ಆದರೆ ಬಾವಲಿಕುದ್ರವಿನಲ್ಲಿ ನೀರೇ ಬದುಕನ್ನು ಪೋಷನ ತೆಗೆದುಕೊಳ್ಳುತ್ತಿದೆ. ಮಾತೊಂದಿದೆ! ಬೆಂಕಿ, ಗಾಳಿ ಮತ್ತು ನೀರಿನೊಟ್ಟಿಗೆ ಸರಸ ಸಲ್ಲಾ ಅಂತಾ. ಗಾದೆ ಮಾತು ಕೇಳುತ್ತಾ ಕೂರೋಕೆ ಬಾವಲಿಕುದ್ರು ಜನರಿಗೆ ಪುರುಸತ್ತಿಲ್ಲಾ. ಬಾವಲಿ ಹಕ್ಕಿಗಳ ಕಚಿಪಿಚಿಯೊಟ್ಟಿಗೆ ಬದುಕು ಸಾಗಿಸುತ್ತಿದ್ದ ಜನರ ಪಾಲಿಗೆ ಈಗ ಬಾವಲಿಯೂ ಇಲ್ಲ ಇಲ್ಲಿನ ಜನರ ಸೋವು, ನಲಿವು ಕೇಳುವ ರಾಜಕೀಯ ಬದ್ಧತೆಯೂ ಇಲ್ಲಾ. ಒಟ್ಟಾರೆ ಬಾವಲಿಕುದ್ರು ಜನರ ಬದುಕು ಇತ್ತ ಧರೆ ಅತ್ತ ಪುಲಿ.ಬಾವಲಿ ಹೆಸರು ಏಕು ಬಂತು : ಉಡುಪಿ ಜಿಲ್ಲೆ ನೀಲಾವರ, ಕುಂಜಾಲು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರಿದ ಬಾವಲಿಕುದ್ರು ಸ್ವಾತಂತ್ರ್ಯ ಭರಿತ ಗ್ರಾಮೀಣ ಅಭಿವೃದಿಗೆ ಹಿಡಿದ ಕನ್ನಡಿ. ಸುಮಾರು ಐದು ತಲೆಮಾರಿನಿಂದ ಬಾವಲಿಕುದ್ರು ದ್ವೀಪದಲ್ಲಿ ಜನ ವಾಸ್ತವ್ಯವಿದೆ.
ಬಾವಿಲಿಕುದ್ರು ಒಟ್ಟು ವಿಸ್ತೀರ್ಣ ನೂರು ಎಕ್ರೆ. ಭತ್ತ, ತೆಂಗು, ಅಡಿಕೆ ಮುಂತಾದ ಬೆಳೆಗಳು ಇಲ್ಲಿಯ ಪ್ರಮುಖ ಬೆಳೆಯಾದರೂ, ತರಕಾರಿ ಬೆಳೆಯೋದ್ರಲ್ಲಿ ಬಾವಲಿಕುದ್ರು ಫೇಮಸ್. ಹಾಗೆ ಇಲ್ಲಿ ಬೆಳೆಯುವ ಕಬ್ಬಿಗೂ ವಿಶೇಷ ಸ್ವಾಧ. ಕಬ್ಬು ಮತ್ತು ಬತ್ತದ ಬೆಳೆ ಗತವೈಭವಕ್ಕೆ ಸೇರಿದೆ. ತೆಂಗು ಮಾತ್ರ ಉಸಿರು ಹಿಡಿದುಕೊಂಡಿದೆ.
ಬಾಲಿಕುದ್ರು ವಿಶೇಷತೆ ಅಂದರೆ ಇಲ್ಲಿ ಜಾತಿ ವೈವಿಧ್ಯತೆ ಇಲ್ಲಾ. 30 ಕುಂಟುಂಬ ಬಾವಲಿಕುದ್ರು ದ್ವೀಪದಲ್ಲಿ ವಾಸಮಾಡುತ್ತಿವೆ. ಅವರೆಲ್ಲರೂ ಕ್ರೈಸ್ತ ಕಮ್ಯುನಿಟಿಗೆ ಸೇರಿದ್ದಾರೆ. ಇಲ್ಲಿನ ಕುಟುಂಬ ವಾಸಿಗಳದ್ದು ಕೂಡುಕುಟುಂಬದ ನಂಟು.
ಬಾವಲಿಕುದ್ರು ದ್ವೀಪದಲ್ಲಿ ಬಾವಲಿಗಳ ಹಿಂಡು ವಾಸಮಾಡುತ್ತಿದ್ದವು. ಬಾವಲಿ ಹಕ್ಕಿಗಳು ಜೋತು ಬೀಳಲು ಅನುಕೂಲವಾಗುವಂತೆ ಈದ್ವೀಪದಲ್ಲಿ ಹೆಮ್ಮರವಿತ್ತು. ನಿಶಾಚರಿ ಬಾವಲಿಗಳು ಎಲ್ಲೆಲ್ಲಿಂದಲೂ ಆಹಾರ ತಂದು ಹೆಮ್ಮರದ ರಂಬೆ ಕೊಂಬೆಗೆ ಜೋತುಬಿದ್ದು ಚಪ್ಪರಿಸಿತಿನ್ನುತ್ತಿದ್ದವು. ಸಾವಿರಾರು ಬಾವಲಿಗಳು ಇಲ್ಲಿ ವಾಸ್ತವ್ಯ. ಹಾಗಾಗಿ ಈ ದ್ವೀಪಕ್ಕೆ ಬಾವಲಿಕುದ್ರು ಎಂಬ ಹೆಸರು ಬಂದಿದೆ. ಕಳದೆ ಎರಡು ಮೂರು ವರ್ಷದ ಹಿಂದ ಬಂದ ನೆರೆಗೆ ಬಾಲಿಗಳ ಆವಾಸಸ್ಥಾನ ಮರ ಉರುಳಿಬಿದ್ದು, ಬಾವಲಿಗಳು ಜಾಗ ಖಾಲಿಮಾಡಿವೆ. ಪ್ರಸಕ್ತ ಬಾವಲಿಕುದ್ರು ದ್ವೀಪದಲ್ಲಿ ಬಾವಲಿಗಳ ವಾಸವಿಲ್ಲ. ನಾಗರಿಕರ ವಾಸವಿದೆ. ಅವರು ನಾಗರಿಕ ಪ್ರಪಂಚದ ಸೌಲತ್ತುಗಳಿಂದ ವಂಚಿತರಾಗಿ ಬದುಕು ಬದುಕುತ್ತಿದ್ದಾರೆ.ಮೂರು ತಿಂಗಳು ದಿಗ್ಬಂಧನ : ಮಳೆಗಾಲ ಆರಂಭವಾದರೆ ಸಾಕು ಬಾವಲಿ ವಾಸಿಗಳು ನಿದ್ದಗಣ್ಣಲ್ಲೂ ಬೆಚ್ಚಿ ಬೀಳುತ್ತಾರೆ. ಸೀತಾನದಿಗೆ ಮಳೆಗಾಲದಲ್ಲಿ ರಕ್ಕಸ ಶಕ್ತಿ. ಹೊಳೆಯಲ್ಲಿ ದೋಣಿ ಸಾಗಿಸೋದು ಅಂದರೆ ಅದು ಯದ್ಧ ಭೂಮಿ ಹೊಕ್ಕಂತೆ.
ಸೀತಾನದಿಯ ಸೆಳತದ ವಿರುದ್ದ ದೋಣಿ ಸಾಗಿಸೋದು ಅಂದರೆ ಸುಲಭದ ಮಾತೂ ಅಲ್ಲಾ. ರಟ್ಟೆಯಲ್ಲಿ ಕಸುವಿದ್ದವರೂ, ಮತ್ತು ದೋಣಿ ನಡೆಸುವ ನ್ಯಾಕ್ ಗೊತ್ತಿದ್ದವರೂ ಹರಸಾಹಸ ಮಾಡಿ ದಡ ಸೇರುತ್ತಿದ್ದರೂ. ದೋಣಿ ನಡೆಸುವ ಅನುಭವವಿರೋರು ಗತಿಸಿಹೋಗಿದ್ದಾರೆ. ಇಲ್ಲನ ಯವಕರಿಗೆ ಸರಿಯಾಗಿ ದೋಣಿ ತೆಗೆಯಲೂ ಗೊತ್ತಿಲ್ಲ. ಹಾಗಾಗಿ ಆರಂಭದಲ್ಲಿದ್ದ ಕುಟುಂಬದ ಸಂಖ್ಯೆ ಈಗ 30ಕ್ಕೆಇಳಿದಿದೆ. 350ಕ್ಕು ಮಿಕ್ಕ ಜನ ಸಂಖ್ಯೆ ಪ್ರಸಕ್ತ ಮಕ್ಕಳುಮರಿ ಎಲ್ಲಾ ಸೇರಿದರೆ ಇನ್ನೂರು ಮುಟ್ಟೋದು ಕಷ್ಟ.
ಮಳೆಗಾದಲ್ಲಿ ಬಾವಲಿಕುದ್ರು ಪ್ರದೇಶದಿಂದ ಶಾಲೆಗೆ ಹೋಗುವ ಮಕ್ಕಳಿಗೆ ಕಂಪಲ್ಸರಿ ರಜೆ. ಹೊಳೆಯ ಹೋರು ಲೆಕ್ಕಿಸದೆ ಶಾಲೆಗೆಹೋದ ಅದೆಷ್ಟೊ ಮಕ್ಕಳು ಮತ್ತೆ ಮನೆ ಸೇರಿಲ್ಲ. ಮತ್ತೆ ಕೆಲವರು ಹೊಳೆ ಈಜಿ ದಡ ಸೇರಿದ ಕತೆಗಳು ಕಾಸಿಗೊಂದು ಕೊಸರಿಗೊಂದು ಸಿಗುತ್ತದೆ.
ಬಾವಲಿಕುದ್ರಿನಲ್ಲಿ ಬದುಕು ಕಷ್ಟವಾಗಿದ್ರಿಂದ ಇಲ್ಲಿನ ವಾಸಿಗಳು ಬೇರೆ ಕಡೆ ಮನೆಮಾಡಿ, ವಾಸಮಾಡುತ್ತಿದ್ದಾರೆ. ಅವರಿಗೆ ತಮ್ಮ ಹಿರಿಯರು ಬಾಳಿಬದುಕಿದ ಸ್ಥಳ ತೊರೆಯಲು ಮನಸ್ಸಿಲ್ಲ. ಇತ್ತ ಮಕ್ಕಳ ವಿದ್ಯಾಭ್ಯಸ ಹಾಳಾಗಬಾರದು ಎಂಬ ಹಿನ್ನೆಲೆಯಲ್ಲಿ ಬೇರೆ ಕಡೆ ಮನೆ ಮಾಡಿದ್ದರೂ, ಬಾವಲಿಕುದ್ರು ಸಂಪರ್ಕ ಕಡಿದುಕೊಂಡಿಲ್ಲ.

ಮಳೆಗಾದಲ್ಲಿ ನೀರಿನ ಹೊಡೆತಕ್ಕೆ ಎದೆಕೊಟ್ಟು ನಿಂತರೆ, ಬೇಸಿಗೆಲ್ಲಿ ಸೀತಾ ನದಿ ಹರಿಯುತ್ತಿದ್ದರೂ ಹನಿ ನೀರಿಗೂ ತತ್ವಾರ ಬರುತ್ತದೆ. ಇಲ್ಲಿನ ವಾಸಿಗಳು ಕುಡಿಯುವ ನೀರಿಗಾಗಿ ಬಾವಿ ನೆಚ್ಚಿಕೊಂಡಿದ್ದಾರೆ. ಕಡು ಬೆಸಿಗೆಯಲ್ಲಿ ಬಾವಿ ನೀರೆಲ್ಲಾ ಬರೇ ಒಗರೋ ಒಗರು.
ಇಲ್ಲಿನ ನಿವಾಸಿಗಳು ಬದುಕು ಕೃಷಿಯಿಂದ ಆಗದಿಲ್ಲ ಎನ್ನೋದು ಅರ್ಥಮಾಡಿಕೊಂಡು ಬೇರೆ ಬೇರೆ ಊರಿಗೆ ಉದ್ಯೋಗ ಅರಸಿ ಹೊರಡುತ್ತಿದ್ದಾರೆ.
ಚಿಕ್ಕ ಕೆಲಸಕ್ಕು ಬೆಟ್ಟದ ಕಷ್ಟ : ಇಲ್ಲಿ ಚಿಕ್ಕ ಕೆಲಸವಾಗಬೇಕು ಅಂತಾದರೂ ಬೆಟ್ಟವೆತ್ತಿದಷ್ಟು ಕಷ್ಟ ಪಡಬೇಕು. ವಿದ್ಯುತ್, ಫೋನ್ ಸೌಲಭ್ಯವಿದೆ. ಅದೆಲ್ಲಾದರೂ ಕೈಕೊಟ್ಟರೆ ರಿಪೇರಿ ಮಾಡೋದು ಮಾತ್ರ ಕಣ್ಣಲ್ಲಿ ನೀರು ತರಿಸುತ್ತದೆ. ಸಂಬಂಧಪಟ್ಟ ಇಲಾಖೆಯವರು ಹೊಳೆಯ ಹೆದರಿಕೆಗೆ ಅಷ್ಟು ಸುಲಭದಲ್ಲಿ ಬಾವಲಿಕುದ್ರು ದ್ವೀಪಕ್ಕೆ ಬರೋದಿಲ್ಲ. ಹಾಗಾಗಿ ವಿದ್ಯುತ್, ಫೊನ್ ಕೈಕೊಟ್ಟರೆ ಅದರ ದುರಸ್ತಿಗೆ ತಿಂಗಳೊಪ್ಪತ್ತು ಹಿಡಿಯುತ್ತದೆ.
ಬಾವಲಿಕುದ್ರ ದ್ವೀಪಕ್ಕೆ ಪ್ರತಿ ಎಲೆಕ್ಷನ್ ಬಂದಾಗಲೂ ಜನಪ್ರತಿನಧಿಗಳು ದಾಳಿಯಿಡುತ್ತಾರೆ. ಬಂದವರ ಎದುರು ನಮಗೊಂದು ಸೇತುವೆ ಮಾಡಿಕೊಡಿ ಅಂತ ಇಲ್ಲಿನ ವಾಸಿಗಳು ಅಲವತ್ತು ಕೊಂಡಿದ್ದಾರೆ. ಜನಪ್ರತಿಧಿಗಳು ಥತಾಸ್ತು ಅಂದಿದ್ದಾರೆ. ಚುನಾವಣೆ ಮುಗಿದ ನಂತರೆ ಗೆದ್ದವರು ಬಾವಲಿಕುದ್ರು ಮರೆತರು. ಸೋತವರು ನಮಗ್ಯಾಕೆ ಬೇಡದ ಉಸಾಬರಿ ಅಂತ ಸುಮ್ಮನಾದರು. ಹಾಗಾಗಿ ಇದೂವರೆಗೆ ಬಾವಲಿಕ್ರುದು ವಾಸಿಗಳ ಕನಸಿನ ಸೇತುವೆಗೆ ಕಾಲಕೂಡಿಬಂದಿಲ್ಲ.
ಬಾವಲಿಕುದ್ರು ದ್ವೀಪಕ್ಕ ಸಂಪರ್ಕಕಲಿಸುವ ಸೇತುವಗೆ ಜಿಲ್ಲಾ ಪಂಚಾಯತ್ ಇಂಜನಿಯರಿಂಗ್ ವಿಭಗ ನೀಲಿ ನಕಾಶೆ ರೆಡಿ ಮಾಡಿದ. ಸೇತುಗೆ 33ಲಕ್ಷ ರೂ. ಬೇಕು ಎನ್ನುವ ಅಂದಾಜು ಪಟ್ಟಿ ಕೂಡ ಸಿದ್ದವಾಗಿದೆ. ಅದಕ್ಕಾಗಿ 15ಲಕ್ಷ ರೂ. ಬಿಡುಗಡೆ ಆಗಿದೆ. ರಾಜಕೀಯ ಇಚ್ಛಾಸಕ್ತಿಯ ಕೊರತೆ ಬಾವಲಿಕುದ್ರು ವಾಸಿಗಳ ಕನಸಿಗೆ ಮಣ್ನು ಹಾಕುತ್ತಿದೆ. ಒಟ್ಟಿನಲ್ಲಿ ಬಾವಲಿಕುದ್ರು ಜನರ ಕಷ್ಟದ ಬದುಕಿಗೆ ವಿಧಾಯದ ದಾರಿ ಯಾರು ತೋರಿಸುತ್ತಾರೆ ಎನ್ನೋದು ಯಕ್ಷಪ್ರಶ್ನೆ.

13 ಲಕ್ಷ ರೂ. ಭರಿಸೋದು ಹೇಗೆ : ಬಾವಲಿಕುದ್ರು ದ್ವೀಪ ಸಂಪರ್ಕ ಸೇತುವೆಗೆ ಒಟ್ಟು 33 ಲಕ್ಷ ರೂ. ಬೇಕಾಗುತ್ತದೆ. ರಾಜ್ಯಸಭ ಸದಸ್ಯ ಆಸ್ಕರ್ ಫರ್ನಾಂಡೀಸ್ ಅವರು ತಮ್ಮ ನಿಧಿಯಿಂದ 15 ಲಕ್ಷ ರೂ. ಬಿಡುಗಡೆ ಮಾಡಿದ್ದಾರೆ.
ಉಡುಪಿ ಶಾಸಕ ಕೆ.ರಘುಪತಿ ಭಟ್ ಅವರು 5ಲಕ್ಷ ರೂ. ಶಾಸಕ ನಿಧಿಯಿಂದ ಕೊಡಲಿದ್ದಾರೆ. ಆದರೂ 13 ಲಕ್ಷ ರೂ. ಸಾಲದಾಗುತ್ತದೆ.
ಈ ಬಗ್ಗೆ ಈ ಕನಸು.ಕಾಂಗೆ ಪ್ರತಿಕ್ರಿಯಿಸಿ ಉಡುಪಿ ಶಾಸಕ ಕೆ.ರಘುಪತಿ ಭಟ್, ಸೇತುವೆಗೆ ಕಡಿಮೆ ಬೀಳುವ 13 ಲಕ್ಷರೂ. ಅನ್ನು ಪ್ರಕೃತಿ ವಿಕೋಪ ನಿಧಿಯಿಂದ ಭರಿಸುವ ಪ್ರಯತ್ನ ಮಾಡಲಾಗುತ್ತದೆ. ಬಾವಲಿಕುದ್ರ ಪ್ರದೇಶದಲ್ಲಿ ಮಳೆಗಾದಲ್ಲಿ ನೆರೆಯ ಭೀತಿಯಿರೋದ್ರಿಂದ ಪ್ರಕೃತಿ ವಿಕೋಪ ನಿಧಿ ಮೂಲಕ ಸೇತುವೆ ನಿರ್ಮಾಣ ಮಾಡುವ ಕೆಲಸ ಮಾಡಲಾಗುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದು ಆದಷ್ಟು ಶೀಘ್ರ ಸೇತುವೆ ನಿರ್ಮಾಣಕ್ಕೆ ಕೈಹಾಕಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಸೇತುವೆಗಾಗಿ ಬಾವಲಿಕ್ರುದ ಜನರ ಮನವಿ : ನಮ್ಮ ಪೂರ್ವಿಕರು ಹುಟ್ಟಿ ಬೆಳದ ಸ್ಥಳ ಬಿಡೋಕೆ ಮನಸ್ಸಿಲ್ಲ. ಕಷ್ಟಾನೋ ಸುಖಾನೋ ಇಲ್ಲಿಯೇ ಬದುಕುತ್ತೇವೆ. ನಾವು ಮತ್ತೇನನ್ನೂ ಕೇಳೋದಿಲ್ಲ. ಸೇತುವೆ ಮಾಡಿಕೊಡಿ ಅಷ್ಟು ಸಾಕು ಗಂಜನೋ ಅಂಬ್ಲಿನೋ ಕುಡಿದು ಬದುಕುತ್ತೇನೆ ಅಂತ ಸಿಸಿಲಾ ಡಿಸೋಜಾ, ರಾಜೇಶ್, ವಿಶಾಲ್ ನೀಲಾವರ, ಸ್ಟಿಫನ್ ಡಿಸೋಜಾ, ಪಾವೆಲ್ ಡಿಸೋಜಾ ಮುಂತಾದವರು ಮನವಿ ಮಾಡಿದ್ದಾರೆ. ಏನಾಗುತ್ತೆ ನೋಡಬೆಕು.
ಪೇಪರ್ ಹೋಗೋದಿಲ್ಲ : ಪ್ರತಿ ಹಳ್ಳಿ ಹಳ್ಳಿ ಮೂಲೆಯಲ್ಲೂ ಪತ್ರಿಕೆ ತಲುಪುತ್ತಿದೆ. ಆದರೆ ಬಾವಲಿಕುದ್ರಗೆ ಯಾವ ಪತ್ರಿಕೆಯೂ ಬರೋದಿಲ್ಲ. ಹೊಳೆದಾಟಿ ಪತ್ರಿಕೆ ಹಂಚೋ ಸಾಹಸಕ್ಕೆ ಯಾರೂ ಮಂದಾಗದಿರೋದ್ರಿಂದ ಪತ್ರಿಕೆ ಇನ್ನೂ ದ್ವೀಪಕ್ಕೆ ಕಲಿಟ್ಟಿಲ್ಲ. ಇಲ್ಲಯವರಿಗೆ ಬೆಳಿಗೆ ಬಿಸಿ ಚಾ ಕುಡೀತಾ ಪೇಪರ್ ಓದೊ ತುಡಿತವಿದೆ. ಆದರೆ ಪೇಪರ್ ಬರೋದಿಲ್ವೆ.


- ಶ್ರೀಪತಿ ಹೆಗಡೆ ಹಕ್ಲಾಡಿ.

0 comments:

Post a Comment