ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಶೂಟಿಂಗ್...! ಶೂಟಿಂಗ್...!! - 15

ದೃಶ್ಯ ಮಾಧ್ಯಮದ ನೆನಪಿನ ಸವಾರಿ...


ಚಿತ್ರರಂಗದಲ್ಲಿ ಕಮರ್ಷಿಯಲ್ ಮತ್ತು ಕಲಾತ್ಮಕಚಿತ್ರಗಳೆನ್ನುವ ಪ್ರತ್ಯೇಕತೆಯಿರಬಾರದೆನ್ನುವುದು ಇಡೀ ವಿಶ್ವ ಸಿನಿಮಾರಂಗದ ದನಿ. ಈ ತರಹದ ವಿಂಗಡಣೆ ಒಟ್ಟು ಸಿನಿಮಾದ ಆಶಯವನ್ನು ದೂರವಿಟ್ಟು, ಒಂದರತ್ತ ಒಲವು ಇನ್ನೊಂದರತ್ತ ತಿರಸ್ಕಾರವನ್ನು ಹುಟ್ಟಿಸಬಲ್ಲದೆನ್ನುವುದು ಇದರ ಹಿಂದಿನ ಸತ್ಯವಾಗಿರಬಹುದು. ಕಲಾತ್ಮಕ ಚಿತ್ರಗಳು ಪ್ರೇಕ್ಷರತ್ತ ಮುಖಾಮುಖಿಯಾಗುವುದು ಒಂದು ರೀತಿಯಲ್ಲಿ ವಿರಳ. ಎಲ್ಲೋ ಒಂದು ಎರಡು ಚಿತ್ರಗಳು ಮಹಾ ಹರ್ಡಲ್ಸ್ಗಳನ್ನು ದಾಟಿ ಚಿತ್ರಮಂದಿರಕ್ಕೆ ಬಂದವೆಂದರೆ ಅದೇ ಒಂದು ದೊಡ್ಡ ಸಂತೋಷ. ಇಲ್ಲಿಯ ಹರ್ಡಲ್ಸ್ ಅಥವಾ ತೊಡಕುಗಳು ಏನು ಅನ್ನುವುದನ್ನು ಮೊದಲು ನೋಡಬೇಕಿದೆ.ಮೊದಲನೆಯದಾಗಿ ಈ ಕಲಾತ್ಮಕ ಚಿತ್ರಗಳು ನಿರ್ದೇಶಕನ ಕೈಯಿಂದ ಮುಕ್ತಿ ಪಡೆದು ನಿರ್ಮಾಪಕನ ಕೈ ಸೇರುತ್ತವೆ. ಇಲ್ಲಿ ನಿರ್ದೇಶಕನಿಗೆ ಇರುವ ಜವಾಬ್ದಾರಿಯೆಂದರೆ ಒಮ್ಮೆ ಚಿತ್ರ ಮುಗಿಸಿ ಅದು ಸೆನ್ಸಾರನ್ನು ಪ್ರವೇಶಿಸಿದರೆ ಆನಂತರ ಆ ಚಿತ್ರದ ಹಕ್ಕು ನಿರ್ಮಾಪಕನಿಗೆ ಸೇರುವಂತದ್ದು. ನಿರ್ಮಾಪಕ ಅದನ್ನು ಡಿಸ್ಟ್ರಿಬ್ಯೂಟರ್ಸ್ ಗೆ ಮಾರಾಟ ಮಾಡಿದರೆ ಅದು ಮುಂದೆ ಚಿತ್ರ ಮಂದಿರದ ಮಾಲೀಕನ ಬೇಡಿಕೆಗೆ ಕಾದಿರುತ್ತದೆ. ಚಿತ್ರಮಂದಿರದ ಮಾಲೀಕ ಅಂದರೆ ಎಕ್ಸ್ಬಿಟರ್ ಆ ಚಿತ್ರಕ್ಕೆ ಕನಿಷ್ಟ ಪಕ್ಷ ತುಂಬಿದ ಗೃಹಗಳಿಂದ ಇಪ್ಪತ್ತೆಂಟು ದಿನಗಳ ಡಿಮಾಂಡ್ ಇರುತ್ತದೆಯೆ? ಎಂದು ವಿಮರ್ಶಿಸಿ ಅಂತಹ ಚಿತ್ರಗಳನ್ನು ಮಾತ್ರ ಪ್ರದರ್ಶನಕ್ಕೆ ತರಿಸಿಕೊಳ್ಳುತ್ತಾನೆ. ಆಗ ನಾವೇನು ಕಲಾತ್ಮಕ ಚಿತ್ರಗಳೆಂದು ಪರಿಗಣಿಸುತ್ತೇವೆಯೋ ಅವುಗಳು ನಿರ್ಮಾಪಕನ ಬಳಿಯೋ ಇಲ್ಲ ಡಿಸ್ಟ್ರಿಬ್ಯೂಟರ್ಸ್ ಬಳಿಯೋ ಅನಾಥವಾಗಿ ಬಿದ್ದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಇಲ್ಲಿ ಅಂತಹ ಕಲಾತ್ಮಕ ಚಿತ್ರಗಳು ಪ್ರೇಕ್ಷಕರನ್ನು ತಲುಪುವುದಿಲ್ಲವೆನ್ನುತ್ತಾ ಆ ಅಪವಾದವನ್ನು ನಿರ್ದೇಶಕನ ಮೇಲೆ ಹೊರಿಸುತ್ತೇವೆ. ಇದು ತಪ್ಪು. ನಮ್ಮಂತಹ ಪ್ರೇಕ್ಷಕರು ಎಕ್ಸಿಬಿಟರನ್ನು ಅಪ್ರೋಚ್ ಆಗಿ ಇಂತಹ ಚಿತ್ರ ತರಿಸಿ ಅಂದರೆ ಅಂತಹ ಅವಕಾಶವನ್ನು ಚಿತ್ರ ಮಂದಿರದ ಮಾಲೀಕ ಮಾಡಿಕೊಡಬಹುದೇನೋ? ಆದರೆ ಅಂತಹ ಪ್ರಯತ್ನವನ್ನು ಯಾರು ಮಾಡುತ್ತಾರೆ?

ಆದರೆ ಇತ್ತೀಚೆಗೆ ಇನ್ನೊಂದು ಪ್ರಕಾರ ಬೆಳೆಯುತ್ತಿದೆ. ಅದುವೇ ಕಲಾತ್ಮಕ ಚಿತ್ರಗಳ ಪ್ರದರ್ಶನ. ಶಾಲೆ, ಕಾಲೇಜು, ಸಂಘ ಸಂಸ್ಥೆಗಳ ಮೂಲಕ ಒಳ್ಳೆಯ ಚಿತ್ರಗಳನ್ನು ಪ್ರದರ್ಶಿಸಿ, ಅವುಗಳ ಬಗ್ಗೆ ನಿರ್ದೇಶಕರು ಅಥವಾ ಸೋರ್ಸ್ ಪರ್ಸನ್ ಜೊತೆಗೆ ನೇರ ಸಂವಾದ ಕಾರ್ಯಕ್ರಮ. ಆ ತರಹ ನನಗೆ ಇತ್ತೀಚೆಗೆ ಲಬಿಸಿದ ಒಂದು ಒಳ್ಳೆಯ ಅವಕಾಶ ಕಥೆಗಾರ ಅಮರೇಶ ನುಗಡೋಣಿ ಅವರ ಜೊತೆಗೆ ಮಾತನಾಡುವ ಅವಕಾಶ. ಅವರ ಪ್ರಸಿದ್ಧ ಕಥೆ `ಸವಾರಿ' ಆದರಿಸಿ `ಕನಸೆಂಬೊ ಕುದುರೆಯೇರಿ' ಚಿತ್ರವನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರು ನಿರ್ದೇಶಿಸಿದ್ದಾರೆ. ಅಮರೇಶ ನುಗಡೋಣಿಯವರ ಜೊತೆಗೆ ಆ ಕಥೆ ಮತ್ತು ಚಿತ್ರದ ಬಗ್ಗೆ ಚರ್ಚಿಸಿದ್ದ ನನಗೆ ಒಂದು ತಿಂಗಳ ಅಂತರದಲ್ಲಿ ಗಿರೀಶ್ ಕಾಸರವಳ್ಳಿಯವರ ಆ ಚಿತ್ರವನ್ನು ಸ್ವತ: ನಿರ್ದೇಶಕನ ಜೊತೆಗೆ ನೋಡಿ ಆ ಸಂವಾದದಲ್ಲಿ ಭಾಗವಹಿಸುವ ಅವಕಾಶ ದೊರಕಿದ್ದು ನನ್ನ ಭಾಗ್ಯ ಅಂತ ತಿಳಿಯುತ್ತೇನೆ. ಅಮರೇಶ ನುಗಡೋಣಿಯವರ `ಸವಾರಿ' ಮೂಲ ಕಥೆಗೂ ಕಾಸರವಳ್ಳಿಯವರ `ಕನಸೆಂಬೊ ಕುದುರೆಯೇರಿ' ಕಥೆಗೂ ಸ್ವಲ್ಪ ವ್ಯತ್ಯಾಸವಿದ್ದರೂ ಮೂಲ ಕಥೆಗೆ ಎಲ್ಲೂ ನೋವಾಗದ ರೀತಿಯಲ್ಲಿ ಮತ್ತು ಆ ಕಥೆಯ ಒಟ್ಟು ಆಶಯವನ್ನು ಹೊಸತನದಲ್ಲಿ ಕಟ್ಟಿಕೊಟ್ಟಿರುವ ಕಾಸರವಳ್ಳಿಯವರು ಈ ತರಹದ ಬದಲಾವಣೆ ನಿರ್ದೇಶಕನ ಸೃಜನಶೀಲತೆಯೇ ಅಥವಾ ಸಂಕ್ಷಿಪ್ತತತೆಯೇ ಅನ್ನುವ ಜಿಜ್ಞಾಸೆಗೆ ಬೀಳುತ್ತಾರೆ. ಅವರ ಚಿತ್ರಗಳನ್ನು ನೋಡಿದವರಿಗೆ ಇದೊಂದು ಸೃಜನಶೀಲತೆಯೆನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ.

ಇಲ್ಲಿಯ ಕಥೆ ನಡೆಯುವುದು ಕೆಲವೇ ಗಂಟೆಗಳಲ್ಲಿ. ಆದರೆ ಕಥೆಯನ್ನು ಬರೆದಿರುವ ಲೇಖಕ ಈ ಸಣ್ಣ ಸಮಯದ ನಡುವೆ ಎಷ್ಟೆಲ್ಲಾ ವಿಷಯಗಳನ್ನು ತರುತ್ತಾನೆನ್ನುವುದು ಓದುಗನಿಗೆ ಬೆರಗು. ಮತ್ತು ಈ ಕಥೆಯಲ್ಲಿ ಬಳಕೆಯಾಗಿರುವ ತಂತ್ರ ಕನಸು. ನಾವು ಇದನ್ನು ಪ್ಲ್ಯಾಶ್ಬ್ಯಾಕ್ ಅನ್ನುವುದಕ್ಕಿಂತ ಒಂದು ವಾಸ್ತವದ ಘಟನೆ ಮತ್ತೊಂದು ಕನಸಿನಲ್ಲಿ ನಡೆಯುವ ಘಟನೆ ಎಂದು ವಿಶ್ಲೇಷಿಸಿದರೆ ಉತ್ತಮ. ಯಾಕಂದರೆ ಕಲಾತ್ಮಕ ಚಿತ್ರಗಳನ್ನು ನೋಡುವ ದೃಷ್ಟಿ ಕೋನ ಬೇರೆಯದಾಗಿರಬೇಕೆನ್ನುವುದು ನನ್ನ ಅನುಭವ. ಇಲ್ಲಿಯೂ ನಾಲ್ಕು ಕನಸುಗಳು ಮತ್ತು ಕಥೆ ಹೀಗೆ ವ್ಯವಸ್ಥಿತ ರೀತಿಯಲ್ಲಿ ಒಂದು ಹೊಸ ಪ್ರಯೋಗದ ಮೂಲಕ ಈ ಚಿತ್ರ ಸಾಗುತ್ತದೆ. ಒಂದು ಬೈರನ ಕನಸು; ರುದ್ರವ್ವನ ಕನಸು; ಮತ್ತೊಮ್ಮೆ ರುದ್ರವ್ವನ ಕನಸು; ಕೊನೆಗೆ ನಮ್ಮ ಅಥವಾ ಇಲ್ಲಿ ನಿರ್ದೇಶಕನ ಕನಸು ಸಾಗುತ್ತಾ ಮಧ್ಯೆ ಮಧ್ಯೆ ಕಥೆ ಸಾಗುತ್ತದೆ. ಕನಸಿನಲ್ಲಿ ನಡೆಯುವ ಘಟನೆಗಳೆಲ್ಲಾ ಕಥೆಯಲ್ಲಿಯೂ ಮರುಪ್ರವೇಶ ಪಡೆಯುತ್ತಾ ಒಮ್ಮೆ ಗೊಂದಲ ಸೃಷ್ಟಿಸಿದರೂ ಸಿನಿಮಾದ ನಡುವೆ ಇದು ಕನಸು ಅನ್ನುವ ಸ್ಪಷ್ಟತೆ ಬರುವುದರಿಂದ ನಮ್ಮಲ್ಲಿ ಗೊಂದಲ ಮೂಡುವುದಿಲ್ಲ ಮತ್ತು ಒಂದು ಕಥೆಯನ್ನು ವ್ಯವಸ್ಥಿತಿ ರೀತಿಯಲ್ಲಿ ನೋಡುವ ಅನುಭವವಾಗುತ್ತದೆ.

ಚಿತ್ರದ ಕಥಾನಾಯಕ ಈರನಿಗೆ ಬರೀ ಸಾವಿನ ಕನಸುಗಳೇ ಕಾಣುತ್ತವೆ. ಅವನಿಗೆ ಕನಸು ಬಿದ್ದರೆ ಆ ಸತ್ತವನಿಗೆ ಕುಳಿ ತೋಡುವುದು ಅವನ ಕಾಯಕ. ಅವನ ಕನಸಿನ ಸ್ಪೆಷಾಲಿಟಿಯಿರುವುದು ನಿರ್ದಿಷ್ಟ ವ್ಯಕ್ತಿಯೇ ಸಾಯುತ್ತಾನೆನ್ನುವುದು. ಹಾಗೆ ಒಮ್ಮೆ ಬಿದ್ದ ಕನಸಿನಲ್ಲಿ ಆ ಊರಿನ ಮಹಾ ಉಡಾಳ ಜಮಿನ್ದಾರ ಗೌಡನ ಸಾವು. ಅವನು ನೇರವಾಗಿ ಗೌಡನ ಮನೆಗೆ ಹೋಗಿ ಎಲ್ಲಿ ಗುಂಡಿ ತೋಡಬೇಕೆನ್ನುತ್ತಾನೆ. ಇದರಿಂದ ಸಿಟ್ಟಾದ ಗೌಡನ ಮನೆಯವರು ಅವನನ್ನು ಬೈದು ಕಳುಹಿಸುತ್ತಾರೆ. ಆದರೆ ವಾಸ್ತವದಲ್ಲಿ ಗೌಡನ ಸಾವು ಸಂಭವಿಸುತ್ತದೆ. ಅವನ ಮಗ ಶಿವಪ್ಪಗೌಡ ತನ್ನ ಕೆಲಸದ ಅನಿವಾರ್ಯತೆಯಿಂದ ತಂದೆಯ ಹೆಣವನ್ನು ಹಾಗೆ ಬಿಟ್ಟು ಪರವೂರಿಗೆ ಹೋಗುತ್ತಾನೆ. ಹಿಂತಿರುಗಿ ಬರುವುದು ಒಂದು ವಾರಗಳ ತರುವಾಯ. ಅಷ್ಟರಲ್ಲಿ ಹೆಣ ಕೊಳೆತು ನಾದಿರುತ್ತದೆ. ಆ ಸಮಯಕ್ಕೆ ಸರಿಯಾಗಿ ಈರನ ಹೆಂಡತಿ ರುದ್ರವ್ವನಿಗೂ ಒಂದು ಕನಸು ಬಿದ್ದು ಸುಡುಗಾಡು ಸಿದ್ದ ಬರುತ್ತಾನೆನ್ನುವುದು ತಿಳಿಸುತ್ತಾಳೆ. ಸಿದ್ಧನ ಬಗ್ಗೆ ವಿಷೇಶ ಭಕ್ತಿಯಿರುವ ಈರ ಅವನಿಗೆ ಬೇಕಾಗುವ ವ್ಯವಸ್ಥೆಯನ್ನು ಮಾಡುತ್ತಾನಾದರೂ ಅವನಿಗೆ ಒಂದೇ ಒಂದು ಕೊರಗು ತನ್ನ ಕನಸು ಮೊತ್ತ ಮೊದಲಬಾರಿಗೆ ಸುಳ್ಳಾಯಿತೆನ್ನುವ ವೇದನೆ. ಅದೇ ಕೊರಗಿನಲ್ಲಿ ಅವನಿಗೆ ಮತ್ತೊಂದು ಆಘಾತ ಸುಡುಗಾಡು ಸಿದ್ಧ ಬರುತ್ತೇನೆಂದವನು ಬರೆದು ಹೋಗುವನೆನ್ನುವುದು. ಆ ರಾತ್ರಿ ವಿಷಯ ತಿಳಿದು ಅವನು ಹೆಂಡ ಕುಡಿದು ಮಲಗುತ್ತಾನೆ. ಆದರೆ ಸಿದ್ಧ ಬರುವ ಸುದ್ದಿಯ ದಿನದಂದೆ ಶಿವಪ್ಪಗೌಡ ಕೆಲಸ ಮುಗಿಸಿ ಹಿಂತಿರುಗುವಾಗ ಗೌಡನ ಸಾವಿನ ಸುದ್ದಿಯನ್ನು ಹಬ್ಬುತ್ತಾನೆ ಹಿರೆಮುತ್ಯಾ. ಸಿದ್ದ ಬರುವ ಸಮಯಕ್ಕೆ ಸಾವು ಸಂಭವಿಸಿದರೆ ಆ ವ್ಯಕ್ತಿ ಪುಣ್ಯವಂತನೆನ್ನುವ ಅಭಿಪ್ರಾಯ ಊರವರದ್ದು. ಆದರೆ ಅವನ ಸಾವಿಗೆ ಈರ ಗುಂಡಿ ತೋಡುವುದನ್ನು ನಿರಾಕರಿಸುತ್ತಾನೆ. ಗೌಡನ ಸಾವನ್ನು ಮುಚ್ಚಿಟ್ಟು ತನ್ನ ಕನಸನ್ನು ಹುಸಿ ಮಾಡಿದರೆನ್ನುವ ವೇದನೆಯಿಂದಿರುತ್ತಾನೆ. ಒಂದು ಕಾಲದೊಂದಿಗಿನ ಅನುಸಂಧಾನದೊಂದಿಗೆ ಹೀಗೆ `ಕನಸೆಂಬೊ ಕುದುರೆಯನೇರಿ' ಮುಗಿಯುತ್ತದೆ.

ಗಿರೀಶ್ ಕಾಸರವಳ್ಳಿಯವರ ನಿರ್ದೇಶನದ ಈ ಚಿತ್ರದಲ್ಲಿ ಚಿತ್ರಕಥೆ ಗೋಪಾಲಕೃಷ್ಣ ಪೈ ಅವದ್ದು ನಿರ್ಮಾಣ ಬಂಸಂತ್ ಪಾಟೀಲ್ ಹಾಗೂ ಕಲಾವಿದರಾಗಿ ಬಿರದಾರ್, ಉಮಾಶ್ರೀ, ಶಿವರಂಜನ್, ಪವಿತ್ರಾ ಲೋಕೇಶ್ ಮುಂತಾದವರು ಅಭಿನಯಿಸಿದ್ದಾರೆ. ಈ ಚಿತ್ರ ಏಷ್ಯಾಟಿಕಾ ಚಿತ್ರೋತ್ಸವ ರೋಂ 2010ರ ಶ್ರೇಷ್ಟ ಚಿತ್ರ ಪ್ರಶಸ್ತಿ; 2010ರ ಏಷ್ಯಾದ ಶ್ರೇಷ್ಟ ಚಿತ್ರಕ್ಕಾಗಿ ನೆಟ್ಪ್ಯಾಕ್ ಪ್ರಶಸ್ತಿ; ಶ್ರೇಷ್ಟ ಕನ್ನಡ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಮತ್ತು ಚಿತ್ರ ಕಥೆಗೂ ಪ್ರಶಸ್ತಿಯನ್ನು ಪಡೆದಿದೆ.-ಅನು ಬೆಳ್ಳೆ

0 comments:

Post a Comment