ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ಕನ್ನಡ ಕಥನ ಪರಂಪರೆಯಲ್ಲಿ ಅದೆಷ್ಟೋ ಸಾಹಿತ್ಯ ಕೃತಿಗಳು ಚಲನಚಿತ್ರಗಳಾಗಿ ಬೆಳ್ಳಿ ತೆರೆಯನ್ನು ಅಲಂಕರಿಸಿವೆ. ಮೂಲ ಕಥೆಗಳನ್ನು ಓದಿ ಅದನ್ನು ಸವಾಲಾಗಿ ತೆಗೆದುಕೊಂಡು ಸಿನಿಮಾಗಳಾಗಿರುವುದು ಹೆಚ್ಚು. ಆದರೂ ದೃಶ್ಯ ಮಾಧ್ಯಮದಲ್ಲಿ ಮೂಲ ಕಥೆಯ ಆಶಯವಾಗಲಿ ಯಥಾವತ್ತಾದ ದೃಶ್ಯಗಳಾಗಲಿ ಇಲ್ಲದೆ ಹೋಗುವ ಸಾಧ್ಯತೆಗಳೇ ಹೆಚ್ಚು. ಅಂತಹ ಅದೆಷ್ಟೋ ಚಿತ್ರಗಳನ್ನು ನಾವು ನೋಡಿರುತ್ತೇವೆ.ಒಂದು ಕೃತಿಯನ್ನಾಧರಿಸಿ ಚಿತ್ರ ತಯಾರಿಸುವುದು ಅಸಾಧ್ಯವೇ? ಎನ್ನುವ ಪ್ರಶ್ನೆ ಉದ್ಭವಿಸಬಹುದು. ಮೂಲ ಕಥೆಯಲ್ಲಿರುವ ಸನ್ನಿವೇಶಗಳಿಗೆ ಸರಿ ಹೊಂದುವ ತಾಣಗಳು ಅಥವಾ ಪರಿಕರಗಳು ಇಲ್ಲದೆ ಹೋಗಬಹುದು. ಆಗ ಅದನ್ನು ಸವಾಲಾಗಿ ಸ್ವೀಕರಿಸಿ ಚಿತ್ರೀಕರಿಸುವುದು ನಿರ್ದೇಶಕನ ಹೊಣೆಯಾಗಿರುತ್ತದೆ. ಇನ್ನು ಕೆಲವೊಮ್ಮೆ ಬಜೆಟ್ನ ದೃಷ್ಟಿಯಿಂದಲೂ ಕೆಲವೊಂದು ಸನ್ನಿವೇಶಗಳನ್ನು ಉಳಿದು ಸಿನಿಮಾ ತಯಾರಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುವಾಗ ನಿರ್ಮಾಪಕನಾಗಲಿ ಅಥವಾ ನಿರ್ದೇಶಕನಾಗಲಿ ಲೇಖಕನ ಮೂಲ ಕೃತಿಗೆ ಚ್ಯುತಿ ಬಾರದಂತೆ ತೆಗೆಯುತ್ತಾನೆ.

ಇತ್ತೀಚೆಗೆ ತೆರೆಕಂಡ ವೈದೇಹಿಯವರ ಕಥೆಯಾಧರಿಸಿ ತೆಗೆದ ಚಿತ್ರ, ಗಿರೀಶ್ ಕಾಸರವಳ್ಳಿಯವರ `ಗುಲಾಬಿ ಟಾಕೀಸ್'. ಸ್ವತ: ಲೇಖಕಿಯೇ ನಿರ್ದೇಶಕರನ್ನ ಪ್ರಶ್ನಿಸಿದ್ದು, `ಇದು ನನ್ನ ಕಥೆಯೇ ಅಲ್ಲ' ಅಂತ. ಅದಕ್ಕೆ ಕಾಸರವಳ್ಳಿಯವರು ಸಮಂಜಸ ಉತ್ತರ ಕೊಟ್ಟಿದ್ದು ಹೀಗೆ, `ನಿಮ್ಮ ಕಥೆಯನ್ನು ನಾನು ಓದದಿರುತ್ತಿದ್ದರೆ ನನಗೆ ಗುಲಾಬಿ ಟಾಕೀಸ್ನಂತಹ ಸಿನಿಮಾವನ್ನು ಮಾಡುವ ಯೋಚನೆಯ ಬರುತ್ತಿರಲಿಲ್ಲ. ನಿಮ್ಮ ಕಥೆಯನ್ನು ಓದಿದ್ದರಿಂದ ನಾನು ಆ ಸಾಹಸಕ್ಕೆ ಕೈ ಹಾಕಿದೆ. ಇದು ನಿಮ್ಮ ಕಥೆಯೆ'

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಷಯ, ಒಂದು ನಿರ್ದೇಶಕರ ಔದಾರ್ಯತೆ. ಇನ್ನೊಂದು ಲೇಖಕನಿಗೆ ಮೋಸ ಮಾಡದೆ ಆ ಕಥೆಯ ಎಳೆಯಿಂದಲೇ ಚಿತ್ರವನ್ನು ನಿರ್ದೇಶಿಸಿದೆನೆನ್ನುವ ಪ್ರಾಮಾಣಿಕತೆ. ಇಂದಿನ ಕಾಲದಲ್ಲಿ ಇನ್ನೊಬ್ಬರ ಕಥೆಯನ್ನು ಕದ್ದು ಸಿನಿಮಾ ಮಾಡುವ ಇಂಡಸ್ಟ್ರಿಯಲ್ಲಿ ಇಂತಹ ಪ್ರಾಮಾಣಿಕತೆ, ಔದಾರ್ಯತೆ ಇರುವುದರಿಂದಲೇ ಅವರೊಬ್ಬ ಶ್ರೇಷ್ಟ ನಿರ್ದೇಶಕರೆನಿಸಿಕೊಂಡಿದ್ದಾರೆ. ಇದಕ್ಕೆ ಇನ್ನೊಂದು ಉದಾಹರಣೆ ಕೊಡುವುದಾದರೆ `ಅಂತ' ಕಾದಂಬರಿಯ ಕರ್ತೃ ಎಚ್.ಕೆ. ಅನಂತರಾವ್ ಅವರು `ಅಂತ ಈಗ' ಅನ್ನುವ ಕಾದಂಬರಿಯನ್ನು ಬರೆದು ಒಂದು ಜನಪ್ರಿಯ ಪತ್ರಿಕೆಗೆ ಕೊಟ್ಟರಂತೆ. ಅವರು ಅಂತದ ಗುಂಗಿನಲ್ಲೇ ಇದ್ದು ಇಳಿವಯಸ್ಸಿನಲ್ಲಿಯೂ ಈ ಹೊಸ ಕಾದಂಬರಿಯನ್ನು ಕೂಡ ಚಿತ್ರ ಮಾಧ್ಯಮದಲ್ಲಿ ಕಾಣುವ ಕನಸು ಕಟ್ಟಿಕೊಂಡು ಇಡೀ ಗಾಂಧಿನಗರ ತಿರುಗಾಡಿ ನಿರ್ದೇಶಕ, ನಿರ್ಮಾಪಕರ ಬಾಗಿಲು ತಟ್ಟಿದರಂತೆ. ಕೊನೆಗೆ ಯಾರೋ ಅದನ್ನು ಸಿನಿಮಾ ಮಾಡುವುದಾಗಿ ಹೇಳಿ ಅಂತಹ ಹಿರಿಯ ಲೇಖಕನಿಗೆ ಮೋಸ ಮಾಡಿದ ಘಟನೆ ಮರೆಯುವಂತಿಲ್ಲ. ಅವರು ಬಂದ ದಾರಿಗೆ ಸುಂಕವಿಲ್ಲದಂತೆ ಮರಳಿ ತಮ್ಮ ತವರು ಸೇರಿದರಂತೆ. ಹೀಗೆ ಲೇಖಕನನ್ನೇ ಮೋಸ ಮಾಡಿ ಹಣ ದೋಚುವ ದಂದೆ ಗಾಂಧಿನಗರಕ್ಕೆ ಹೊಸದೇನಲ್ಲ. ಇನ್ನು ಜನಪ್ರಿಯ ಕಾದಂಬರಿಗಳ ಹೆಸರನ್ನು ಬಳಸಿಕೊಂಡು ಅದೇಷ್ಟೋ ಸಿನಿಮಾಗಳು ತಯಾರಾಗುತ್ತವೆ. ಇಲ್ಲಿ ಸಿನಿಮಾ ಮಾಡುವವನು ಅಪರಾಧಿಯಲ್ಲ, ಲೇಖಕನೂ ಮೋಸ ಹೋಗಿರುವುದಿಲ್ಲ. ಅಂದಿನ ಜನಪ್ರಿಯ ಕಾದಂಬರಿಗಾರ್ತಿ ಉಷಾ ನವರತ್ನರಾಂ ಅವರ `ಕೃಷ್ಣ ನೀ ಬೇಗನೆ ಬಾರೋ' ಕಾದಂಬರಿ `ತರಂಗ' ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿತ್ತು. ಅದನ್ನು ಓದಿದ ನಾನು, ನಮ್ಮ ಮನೆಯವರೆಲ್ಲಾ ಒಂದು ಸಂಗೀತ ಮತ್ತು ನೃತ್ಯ ಪ್ರಧಾನವಾದ ಚಿತ್ರವನ್ನು ನೋಡುವ ದೃಷ್ಟಿಯಿಂದ ಅದೇ ಹೆಸರಿನ ದ್ವಾರಕೀಶ್ ನಿರ್ದೇಶನದ ಚಿತ್ರ ನೋಡಲು ಹೋಗಿ ಹತಾಶರಾಗಿದ್ದಿದೆ. ಆ ಚಿತ್ರ ಅಂದಿನ ಬೆಳ್ಳಿತೆರೆಯ ಜನಪ್ರಿಯ ನಟಿ ಭವ್ಯ ಮತ್ತು ವಿಷ್ಣುವರ್ಧನ್ ನಟಿಸಿರುವ ಮತ್ತು ಕನ್ನಡದಲ್ಲಿ ಬಪ್ಪಿ ಲಹರಿ ಸಂಗೀತ ನೀಡಿರುವ ಚಿತ್ರ ಹಿಂದಿಯ `ಸೌತೇಲ್ಕಾ ಬೇಟಿ' ಚಿತ್ರದ ರೀಮೇಕ್.

ಕಾದಂಬರಿಯಾಧಾರಿತ ಚಿತ್ರಗಳೆಂದರೆ ಮನೆಮಂದಿಯೆಲ್ಲಾ ಧೈರ್ಯವಾಗಿ ಥಿಯೇಟರ್ಗೆ ಹೋಗಿ, ಚಿತ್ರವನ್ನು ವೀಕ್ಷಿಸಬಹುದಾದ ಪರಿಶುದ್ಧ ಚಿತ್ರಗಳೆನ್ನುವ ಭಾವನೆ ಪ್ರೇಕ್ಷಕನಿಗೆ. ಕನ್ನಡದ ಜನಪ್ರಿಯ ಲೇಖಕ ಲೇಖಕಿಯರ ಕಾದಂಬರಿಗಳನ್ನಾಧರಿಸಿ ಅದೆಷ್ಟೋ ಚಿತ್ರಗಳು ತೆರೆ ಕಂಡು ಭರ್ಜರಿ ಯಶಸ್ಸನ್ನು ಕಂಡಿವೆ. ಇಲ್ಲೂ ಜನಪ್ರಿಯ ಕಾದಂಬರಿಗಳು ಮತ್ತು ಸಾಹಿತ್ಯಿಕ ಕೃತಿಗಳೆನ್ನುವ ಎರಡು ವಿಧವಾದ ಕೃತಿಗಳನ್ನು ತೆಗೆದುಕೊಂಡು ಸಿನಿಮಾಗಳಾಗಿವೆ. ಸಂಸ್ಕಾರ, ಧರಣಿ ಮಂಡಲ ಮಧ್ಯದೊಳಗೆ, ಕುಬಿ ಮತ್ತು ಇಯಾಲ, ಕಾರ್ಮುಗಿಲು, ಅವಸ್ಥೆ, ಮೈಸೂರು ಮಲ್ಲಿಗೆ, ಊರ್ವಶಿ, ಉಷಾಕಿರಣ, ಆಘಾತ ಇಂತಹ ಕಲಾತ್ಮಕ ಚಿತ್ರಗಳ ಸಾಲು ಒಂದಾದರೆ ಇನ್ನೊಂದು ಜನಪ್ರಿಯ ಕೃತಿಗಳನ್ನು ಆಧರಿಸಿದ ಹೊಸಬೆಳಕು, ಶೃತಿ ಸೇರಿದಾಗ, ಹೂವು ಹಣ್ಣು, ಬಂಧನ, ಸುವರ್ಣ ಸೇತುವೆ, ಅರುಣರಾಗ, ಮನ ಮೆಚ್ಚಿದ ಹುಡುಗಿ, ದೊರೆ, ರಥಸಪ್ತಮಿ, ಚೈತ್ರದ ಚಿಗುರು, ಬಾ ನಲ್ಲೆ ಮಧುಚಂದ್ರಕೆ, ಮಾನಸ ಸರೋವರ, ಮನ ಮಿಡಿಯಿತು, ಶ್ವೇತ ಗುಲಾಬಿ, ಮಿಡಿದ ಶೃತಿ ಇನ್ನೂ ಅನೇಕ ಸಿನೆಮಾಗಳು. ಯಾವ ಕೃತಿಯಾದರೇನು ಒಳ್ಳೆಯ ನಿರ್ದೇಶಕನ ಕೈಯಲ್ಲಿ ಅವು ನಿಜವಾಗಿಯೂ ಗೆಲುವು ಸಾಧಿಸುತ್ತವೆ. ಅಂತಹ ಇನ್ನೊಂದು ಚಿತ್ರ ಬೊಳುವಾರು ಮೊಹಮ್ಮದ್ ಕುಂಇ ಅವರ ಸಣ್ಣ ಕಥೆ `ಮುತ್ತುಚ್ಚೇರ' ಆಧರಿತ `ಮುನ್ನುಡಿ'. ಪಿ. ಶೇಷಾದ್ರಿ ನಿರ್ದೇಶನದ ಈ ಚಿತ್ರ ಮುಸ್ಲಿಂ ಕುಟುಂಬದ ಸುತ್ತಾ ಹೆಣೆದ ಕಥೆ.

ಬಡ ಕುಟಂಬದಲ್ಲಿ ಜನಿಸಿದ ಮುಸ್ಲಿಂ ಹೆಣ್ಣು ಮಕ್ಕಳಿಗೆ ನಿಖಾ ಮಾಡಲಾಗದೆ ವ್ಯಾಪಾರಕ್ಕೆಂದು ಮೂರು ತಿಂಗಳು ವಿದೇಶದಿಂದ ಬರುವ ಅರಬ್ಬ ವರ್ತಕರಿಗೆ ಅವರನ್ನು ಮದುವೆ ಮಾಡಿಕೊಟ್ಟು ತಮ್ಮ ಜವಾಬ್ದಾರಿಯ ಹೊರೆ ಇಳಿಸಿಕೊಳ್ಳುವ ಕುಟುಂಬದ ಕಥೆ ಈ ಮುನ್ನುಡಿ. ಹೆಣ್ಣಿನ ಆಸೆ, ಆಕಾಂಕ್ಷೆಗಳೆಲ್ಲಾ ದೂರದವನೊಬ್ಬನ ಕಾಮ ತೃಷೆಗೆ ಬಲಿಯಾಗಿ ಸುಲಭದ `ತಲಾಖ್' ನಲ್ಲಿ ಅಂತ್ಯವಾಗಿ ಮತ್ತೆ ಮುಂದಿನ ವರ್ಷ ಬರುವ ಇನ್ನೊಬ್ಬನ ಮೂರು ತಿಂಗಳ ಮಡದಿಯಾಗಿ ಬದುಕುವ ಬವಣೆ ಹೆಣ್ಣಿನ ತ್ಯಾಗದ ಸಂಕೇತ, ಅವಳನ್ನು ಶೋಷಿಸುವ ಶ್ರೀಮಂತ ವರ್ಗದ ದಾಪರ್ಿಷ್ಟತೆಯೇ ಇಲ್ಲಿಯ ತಿರುಳು.

ಇದೇ ಮಾದರಿಯ ಇನ್ನೊಂದೆ ಕೃತಿ ಫಕೀರ್ ಮಹಮ್ಮದ್ ಕಟ್ಪಾಡಿ ಅವರ `ಸರಕುಗಳು' ಕಾದಂಬರಿ. ಈ ಕಾದಂಬರಿ ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬರುತ್ತಿರುವಾಗ ಅದು ಗಲ್ಫ್ ರಾಷ್ಟ್ರಗಳಲ್ಲಿ ಕತ್ತರಿ ಪ್ರಯೋಗವಾಗಿ ಹೋಗುತ್ತಿತ್ತಂತ್ತೆ. ಅಂದರೆ ಇಲ್ಲಿಂದ ಅಲ್ಲಿಯ ಮಾರುಕಟ್ಟೆಗೆ ಹೋಗುವ ಪ್ರತೀಯೊಂದು ಪುಸ್ತಕದ ಪ್ರತೀ ಪುಟವನ್ನು ಪರಿಶೀಲಿಸಿ ಅದರಲ್ಲಿ ಆ ರಾಷ್ಟ್ರಕ್ಕೆ ವಿರೋಧವಾದ ಪುಟಗಳನ್ನು ಸ್ವತ: ಏಜಂಟರುಗಳೇ ಕತ್ತರಿಸಿ ತೆಗೆಯುತ್ತಿದ್ದರಂತೆ. ಆ ಧಾರಾವಾಹಿಯ ಚಿತ್ರಗಳನ್ನು ಕತ್ತರಿಸಿ ಓದದ ರೀತಿಯಲ್ಲಿ ಅಲ್ಲಿಯ ಓದುಗರಿಗೆ ತಲುಪುತ್ತಿತ್ತಂತೆ.

ಮುನ್ನುಡಿ ಸಿನಿಮಾ ನೋಡಿದಾಗಲು ಅಲ್ಲಿಯ ಅಸಹಾಯಕ ಪರಿಸ್ಥಿತಿಯನ್ನು ಗಮನಿಸಿದರೆ ಎಂತಹ ಸಹೃದಯನ ಮನಸ್ಸೂ ಕರಗಬೇಕು. ಹೆಣ್ಣಿಗೆ ಉಸಿರಾಡುವುದಕ್ಕೂ ಸ್ವಾತಂತ್ರ್ಯವಿಲ್ಲದೆ ಇರುವ ಸ್ಥಿತಿ ಶೋಚನೀಯ. ಈ ಚಿತ್ರದಲ್ಲಿ ಅಮೀನಾ (ತಾರಾ) ಅರಬ್ಬನೊಬ್ಬ ಮೂರು ತಿಂಗಳ ಮಡದಿಯಾಗಿ ಆತ ತಲಾಖ್ ನೀಡದೆ ತನ್ನ ರಾಷ್ಟ್ರಕ್ಕೆ ಹಿಂತಿರುಗಿದ ಮೇಲೆ ಅವನ ಬರುವಿಕೆಗಾಗಿ ಕಾದು, ಅವನಿಂದ ಪಡೆದ ಮಗುವನ್ನು ಜೋಪಾನವಾಗಿ ಬೆಳೆಸುವ ಜವಾಬ್ದಾರಿಯನ್ನು ಹೊತ್ತುಕೊಂಡ ದಿಟ್ಟ ಹೆಣ್ಣು. ಕೊನೆಯವರೆಗೂ ತನ್ನಂತೆ ಮಗಳ ಬದುಕು ಅರಬ್ಬನ ನಿಖಾದಲ್ಲಿ ಮುಗಿಯಬಾರದೆನ್ನುವ ದೃಢ ನಿಧರ್ಾರವಿರುವವಳು. ಹೀಗೆ ಕಥೆ ಮುಂದುವರಿಯುತ್ತದೆ.

ಈ ಚಿತ್ರದ ಚಿತ್ರೀಕರಣವೆಲ್ಲಾ ನಡೆದಿರುವುದು ಮಂಗಳೂರಿನ ಸಸಿಹಿತ್ಲು ಎಂಬ ಊರಿನ ಸುತ್ತಾ ಮತ್ತು ಕಡಲ ಕಿನಾರೆಯಲ್ಲಿ. ಯಾವ ಕಮರ್ಷಿಯಲ್ ಚಿತ್ರಗಳಿಗೂ ಕಡಿಮೆಯಿಲ್ಲದ ಇಲ್ಲಿಯ ಹೊರಾಂಗಣ ದೃಶ್ಯಗಳು ಸಿನೆಮಾದ ಹೈಲೈಟ್ಗಳು. ದತ್ತಾತ್ರೇಯ ಮತ್ತು ತಾರಾರ ಮನಮುಟ್ಟುವ ಅಭಿನಯ ಜೊತೆಗೆ ಪಿ. ಶೇಷಾದ್ರಿಯವರ ದಕ್ಷ ನಿರ್ದೇಶನ ಚಿತ್ರವನ್ನು ಶ್ರೀಮಂತಗೊಳಿಸಿದೆಯೆಂದರೆ ಆಶ್ಚರ್ಯವಲ್ಲ. ಈ ಚಿತ್ರದ ಹಾಡುಗಳು ಅಷ್ಟೇ ಅರ್ಥಪೂರ್ಣ ಮತ್ತು ಹೊಸತನದಿಂದ ಕೂಡಿದೆ. ಹಾಡುಗಳನ್ನು ಬರೆದಿರುವುದು ಸ್ವತ: ಈ ಚಿತ್ರದ ಕಥೆಯನ್ನು ಬರೆದ ಬೊಳುವಾರು ಮೊಹಮ್ಮದ್ ಕುಂಇ ಅವರು. ಈ ಕಥೆಗೆ ಅವರು ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ಪಡೆದಿರುವುದು ಹೆಮ್ಮೆಯ ವಿಷಯ. ಈ ಚಿತ್ರಕ್ಕೆ 2000ದ ಕನ್ನಡದ ಅತ್ಯುತ್ತಮ ಚಿತ್ರವೆಂದು 48ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಇಂತಹ ಒಳ್ಳೆಯ ಸಿನಿಮಾವನ್ನು ಒಮ್ಮೆಯಾದರೂ ನೋಡಲೇಬೇಕು.

- ಅನು ಬೆಳ್ಳೆ.

0 comments:

Post a Comment