ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:35 PM

ಧ್ಯಾನ

Posted by ekanasu

ವೈವಿಧ್ಯ

ಇತ್ತೀಚಿನ ದಿನಗಳಲ್ಲಿ ದಿನದಿಂದ ದಿನಕ್ಕೆ ಸುಧಾರಣೆಯ ಹೆಸರಿನಲ್ಲಿ ನಾವು ನಮ್ಮ ಜೀವನ ಶೈಲಿಯನ್ನು ಬದಲಾಯಿಸುತ್ತಿರುವುದರಿಂದಾಗಿ, ಸನಾತನ ಭಾರತೀಯ ಜೀವನ ಶೈಲಿಯು ಶಿಥಿಲವಾಗುತ್ತದೆ. ನೂತನ ಆಕರ್ಷಣೆಯು ಪಾರಂಪರಿಕವಾದ ಸಂಸ್ಕೃತಿಯನ್ನು ಹೊಡೆದೋಡಿಸುತ್ತಿದೆ. ಜೀವನವು ಹೊಳಪಾಗುವುದರ ಬದಲಿಗೆ ಹೊಲಸಾಗುವಂತಾಗಿದೆ. ಈಗಿನ ಆಧುನಿಕ ಯುಗದಲ್ಲಿ ಮನಸ್ಸಿಗೆ ಗೊಂದಲವಾಗುವ ಪರಿಸರ ಕೆಲವೊಮ್ಮೆ ಸೃಷ್ಠಿಯಾಗುತ್ತದೆ. ವ್ಯಕ್ತಿಯು ತನ್ನ ಜೀವನದಲ್ಲಿ ಪದೇ ಪದೇ ಒತ್ತಡಕ್ಕೆ ಒಳಗಾಗುವ ಸಂಭವ ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತದೆ. ಹಾಗೂ ಸದ್ವಿಚಾರಗಳ ಕೊರತೆಯು ಕಂಡುಬರುತ್ತದೆ. ಮನಸ್ಸು ನಿಯಂತ್ರಣ ತಪ್ಪಿ ದಿಕ್ಕೆಟ್ಟು ಓಡಾಡಿ ಬಸವಳಿರುತ್ತಿದೆ. ನಿದ್ರೆ ಆಹಾರ ವಿಹಾರ ವಿಚಾರಗಳಲ್ಲೂ ಕೆಲವೊಮ್ಮೆ ನಿತ್ಯ ವ್ಯತ್ಯಾಸವಾಗುತ್ತಿದೆ. ಆದ್ದರಿಂದ ಮನಸ್ಸಿನ ನಿರ್ಮಲತೆಗಾಗಿ, ಏಕಾಗ್ರತೆಗಾಗಿ ಹಾಗೂ ಆಳ ವಿಶ್ರಾಂತಿಗಾಗಿ ಮತ್ತು ಶಾಂತ ಸ್ಥಿತಿಗಾಗಿ ವೈಜ್ಞಾನಿಕವಾಗಿ ದೃಢಪಟ್ಟಂತಹ ಧ್ಯಾನ ಈ ಮೇಲಿನ ಸಮಸ್ಯೆಯ ನಿವಾರಣೆಗೆ ಬಹಳಷ್ಟು ಸಹಕಾರಿಯಾಗುತ್ತದೆ.

ಧ್ಯಾನದ ಸಂಕ್ಷಿಪ್ತ ಮಾಹಿತಿ :

ಪತಾಂಜಲಿ ಋಷಿಮುನಿ ತಿಳಿಸಿದ ಅಷ್ಟಾಂಗ ಯೋಗದ ಏಳನೇ ಮಾರ್ಗವೇ 'ಧ್ಯಾನ'. ಧ್ಯಾನ ಎಂದರೆ ನಿರಂತರವಾದ ಪ್ರಯತ್ನ ರಹಿತವಾದ ಒಂದೇ ವಸ್ತುವಿನ ಯಾ ವಿಷಯದ ಯೋಚನೆಯ ಪ್ರವಾಹವಾಗಿದೆ. ಧ್ಯಾನದಿಂದ ಮನಸ್ಸಿನ ಚಂಚಲತೆ ನಿವಾರಣೆಯಾಗಿ ಮನಸ್ಸಿಗೆ ಆಳ ವಿಶ್ರಾಂತಿ ದೊರೆಯುತ್ತದೆ. ಮನಸ್ಸು ಪರಿಶುದ್ಧವಾಗಿ, ನಿರ್ಮಲಗೊಂಡು ಪ್ರಸನ್ನತೆಯಿಂದ ಅರಳುತ್ತದೆ. ಅಪೇಕ್ಷಿತ ವಿಷಯವಾಗಿ ಮನಸ್ಸು ಗಾಢವಾಗಿ ಚಿಂತಿಸಲು ಧ್ಯಾನ ಸಹಕಾರಿ. ವಿಷಯ ವೈಶಾಲ್ಯತೆ ಲಭಿಸುವುದು. ವಿದ್ಯುತ್ ನಿಂದ ತಂತಿ ಹೇಗೆ ಬೆಳೆಗುತ್ತದೆಯೋ ಅದೇ ರೀತಿ ಧ್ಯಾನದಿಂದ ಯೋಗಿಯ ಮನಸ್ಸು ಬೆಳಗುತ್ತದೆ. ಧ್ಯಾನದ ವೇಳೆ ಜೀವಾತ್ಮ ಪರಮಾತ್ಮರ ಮುಖಾಮುಖಿಯಾಗುವುದು. ಧ್ಯಾನಕ್ಕೆ ಆಂತರಿಕ ವಿಷಯಗಳಾದ ಉಸಿರು, ಹೃದಯ, ನಾಸಾಗ್ರ, ಭ್ರೂಮಧ್ಯೆ ಇತ್ಯಾದಿ ಹಾಗೂ ಬಾಹ್ಯ ವಿಷಯಗಳಾದ ಓಂಕಾರ, ನಕ್ಷತ್ರ, ಚಂದ್ರ, ಇಷ್ಟದೇವತಾಚಿತ್ರ, ಪ್ರತಿಮೆ, ಇತ್ಯಾದಿಗಳನ್ನು ಉಪಯೋಗಿಸಿ ಧ್ಯಾನ ಮಾಡಲಾಗುತ್ತದೆ. ಇದು ಜಾಗೃತ ಸ್ಥಿತಿಯಲ್ಲದೆ ನಿದ್ರಾಸ್ಥಿತಿಯಲ್ಲ; ಇಲ್ಲಿ ಏಕಾಗ್ರತೆಯು ಅಗತ್ಯವಾಗಿದೆ. ಧ್ಯಾನದಿಂದ ದುಃಖ, ಮನಸ್ಸಿನ ಒತ್ತಡ ನಿವಾರಣೆಯಾಗಿ ಮನಸ್ಸು ಹಗುರ, ಶಾಂತ ಆಗಿ ಲವಲವಿಕೆಯಾಗಿ ಆನಂದಮಯವೂ ಆಗುವುದು. ಮನೋಬಲ, ಆತ್ಮಬಲ ಹೆಚ್ಚುವುದು. ನಾವು ಸಮಾಧಿ ಸ್ಥಿತಿಗೆ ಸಿದ್ಧರಾಗುವೆವು. ಧ್ಯಾನದ ವೇಳೆ ಮನಸ್ಸು ಪೂರ್ಣಎಚ್ಚರ ಸ್ಥಿತಿಯಲ್ಲಿರಬೇಕು. ನಿದ್ರಿಸಬಾರದು. ಬೇರೆ ಬೇರೆ ವಿಷಯಗಳ ಆಲೋಚನೆ, ಚಿಂತೆ ಸಲ್ಲದು.

ಧ್ಯಾನ ಎಂಬ ಶಬ್ಧ ಲ್ಯಾಟಿನ್ ಭಾಷೆಯ 'ಮೆಡಿರೈ' ಎಂಬ ಶಬ್ಧದಿಂದ ಬಂದಿದೆ. 'ಮೆಡಿರೈ' ಎಂದರೆ ಶಾಂತಿ. ಧ್ಯಾನವನ್ನು ಮೊದಲ 6 ಮೆಟ್ಟಿಲುಗಳ (ಯಮ, ನಿಯಮ, ಆಸನ, ಪ್ರಾಣಯಾಮ, ಪ್ರತ್ಯಾಹಾರ, ಧಾರಣ) ಅಭ್ಯಾಸದ ನಂತರವೇ ಮಾಡಬೇಕು.

ಧ್ಯಾನದ ಉಪಯೋಗಗಳು

ಧ್ಯಾನ ಮಾಡುವುದರಿಂದ ಮನಸ್ಸಿನ ಹಾಗೂ ಅಂತಃಕರಣಗಳ ಚಂಚಲತೆ ನಿವಾರಣೆಯಾಗಿ ಮನಸ್ಸಿಗೆ ಆಳ ವಿಶ್ರಾಂತಿ ದೊರೆಯುತ್ತದೆ. ಮನಸ್ಸು ಪರಿಶುದ್ಧವಾಗುತ್ತದೆ ಹಾಗೂ ಮನಸ್ಸು ಅರಳುತ್ತದೆ. ಸಹಜ ಸ್ಥಿತಿಯಾದ ಆನಂದ ಸ್ವರೋಪವನ್ನು ಪಡೆಯಲು ಧ್ಯಾನದಿಂದ ಸಾಧ್ಯವಾಗುತ್ತದೆ.

ಮನಏವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋ ಹೀಗಂದು ಉಪನಿಷತ್ತು ತಿಳಿಸುತ್ತದೆ. ಅಂದರೆ ಮನುಷ್ಯನ ಬಂಧನಕ್ಕೂ ಮೋಕ್ಷಕ್ಕೂ ಮನಸ್ಸೇ ಕಾರಣ. ಮನಸ್ಸನ್ನು ನಿಯಂತ್ರಿಸದೆ ಸುಮ್ಮನೆ ಬಿಟ್ಟರೆ ಅದು ಕೊನೆಗೆ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದ್ದರಿಂದ ಮನಸ್ಸನ್ನು ಪ್ರಥಮವಾಗಿ ನಿಯಂತ್ರಿಸಿಕೊಳ್ಳಬೇಕು. ನಮ್ಮ ವಿವೇಕ (ಬುದ್ಧಿ) ಹೇಳಿದಂತೆ ನಮ್ಮ ಮನಸ್ಸು ಕೇಳಬೇಕೇ ವಿನಹ ಮನಸ್ಸು ಹೇಳಿದಂತೆ ನಾವು ಕೇಳಬಾರದು. ಮನಸ್ಸನ್ನು ಜಯಿಸಿದರೆ ಜಗತ್ತನ್ನೇ ಜಯಿಸಬಹುದು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ನಾವು ದೇಹದ ಆರೋಗ್ಯಕ್ಕೆ ಒತ್ತು ಕೊಡುವ ಹಾಗೇ ಮನಸ್ಸಿನ ಆರೋಗ್ಯಕ್ಕೆ ಒತ್ತು ಕೊಡುವುದಿಲ್ಲ. ಆದ್ದರಿಂದ ಮನಸ್ಸನ್ನು ಶುದ್ಧಗೊಳಿಸುವ ವಿಧಾನ ತಿಳಿದಿರಬೇಕು. ಹೆಚ್ಚಿನ ನಮ್ಮ ಸಮಸ್ಯೆ ಮನಸ್ಸಿನ ದೋಷದಿಂದಲೇ ಆಗುತ್ತದೆ.

ಯಾವ ರೀತಿ ಸೋಪು, ಪೌಡರ್ ಹಾಕಿ ಪಾತ್ರೆಯನ್ನು ಸ್ವಚ್ಛಗೊಳಿಸುತ್ತೇವೆ ಅದೇ ರೀತಿ ನಮ್ಮ ಮನಸ್ಸನ್ನು ಯೋಗ, ಧ್ಯಾನ, ಸತ್ಸಂಗ, ಜಪ, ಒಳ್ಳೆಯ ವಿಚಾರ ಇತ್ಯಾದಿಗಳಿಂದ ಶುದ್ಧಗೊಳಿಸಬಹುದು ಹಾಗೂ ಪೂಜೆ, ಭಜನೆ, ಕರ್ಮ ಯೋಗ ಇತ್ಯಾದಿಗಳಿಂದ ಮಾಡಬಹುದು. ಧ್ಯಾನದ ವೇಳೆ ಮನಸ್ಸು ಜಾಗ್ರತವಾಗಿರಬೇಕಲ್ಲದೆ ನಿದ್ರಿಸಬಾರದು.
ಧ್ಯಾನ ಮಾಡಲು ಆಂತರಿಕ/ಬಾಹ್ಯ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

1. ಧ್ಯಾನಕ್ಕೆ ಉಪಯೋಗಿಸುವ ಆಂತರಿಕ ವಿಷಯಗಳು : ಉಸಿರು, ಹೃದಯ ಇತ್ಯಾದಿ
2. ಧ್ಯಾನಕ್ಕೆ ಉಪಯೋಗಿಸುವ ಬಾಹ್ಯ ವಿಷಯಗಳು : ನಾಸಾಗ್ರ/ ಭ್ರೂ ಮಧ್ಯೆ/ ಓಂಕಾರ/ ನಕ್ಷತ್ರ/ ಚಂದ್ರ/ ಇಷ್ಟದೈವಚಿತ್ರ/ ಪ್ರತಿಮೆ/ ದೀಪದ ಜ್ಯೋತಿ, ಪೆನ್ಸಿಲಿನ ತುದಿ, ವ್ಯಕ್ತಿ ಹಾಗೂ ಯಾವುದೇ ಇನ್ನಿತರ ವಸ್ತುಗಳನ್ನು ಆರಿಸಿಕೊಳ್ಳಬಹುದು.

ಅಭ್ಯಾಸ ಕ್ರಮ:

ಸರಳ ಧ್ಯಾನ ಮಾಡುವ ವಿಧಾನ :

ಆರಂಭದಲ್ಲಿ ಸಿದ್ಧತೆ ಮಾಡಬೇಕು 'ಶುಚೌದೇಶೇ ಪ್ರತಿಷ್ಠಾಪ್ಯ ಸ್ಥಿರವಾದ ಆಸನವೊಂದನ್ನು ಸ್ಥಾಪಿಸುವುದು ಎಂದರ್ಥ. 'ಸಮಂ ಕಾಯ ಶಿರೋಗ್ರೀವಂ' ಎಂದರೆ ಶಿರಸ್ಸು, ಬೆನ್ನು, ಕುತ್ತಿಗೆ, ನೇರ. ಪದ್ಮಾಸನ/ ವಜ್ರಾಸನ/ ಸ್ವಸ್ತಕಾಸನ/ ಸುಖಾಸನ/ ವೀರಾಸನ ಇವುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.

ಈ ಮೇಲೆ ತಿಳಿಸಿದ ಯಾವುದಾದರೂ ಆಸನದಲ್ಲಿ ಕುಳಿತುಕೊಳ್ಳಬೇಕು. ಬೆನ್ನು, ಕುತ್ತಿಗೆ ಶಿರಸ್ಸು ನೇರವಾಗಿರಬೇಕು. ದೇಹ ಸಡಿಲಗೊಂಡಿರಬೇಕು ಹಾಗೂ ಹಾಯಾಗಿಕುಳಿತಿರಬೇಕು. ಮುಖದಲ್ಲಿ ಪ್ರಸನ್ನತೆ, ಸೌಮ್ಯ ಭಾವವಿರಬೇಕು. ಕೈಗಳು 'ಚಿನ್ಮುದ್ರೆ' ಭಂಗಿಯಲ್ಲಿರಬೇಕು. ಸಾಮಾನ್ಯ ಉಸಿರಾಟದಲ್ಲೇ ನೆಲಸಬೇಕು. ಹಾಗೇ ಸ್ವಲ್ಪ ಹೊತ್ತು ಮನಸ್ಸನ್ನು ಗಮನಿಸಬೇಕು. ಆಮೇಲೆ ಮನಸ್ಸಿನಿಂದ ಸಾಮಾನ್ಯ ಉಸಿರಾಟವನ್ನೇ ಗಮನಿಸಬೇಕು. (ಆರಂಭದಲ್ಲಿ ಸ್ವಲ್ಪಹೊತ್ತು) ಈ ಸ್ಥಿತಿಯಲ್ಲಿ ಯಾವುದೇ ರಿತಿಯ ಯೋಚನೆಯನ್ನು ಮಾಡದೇ ಉಸಿರಾಟವನ್ನೇ ನಿರಂತರವಾಗಿ ಗಮನಿಸುತ್ತಾ ಇರಬೇಕು. ಈ ಸ್ಥಿತಿಯಲ್ಲಿ ಐದರಿಂದ ಹತ್ತಿಪ್ಪತ್ತು ನಿಮಿಷದವರೆಗೆ ಧ್ಯಾನ ಮಾಡಬಹುದು. ಆದರೆ ಧ್ಯಾನ ಮಾಡುವಾಗ ಯಾವುದೇ ರೀತಿಯಾ ನೋವಿನ ಅನುಭವ ಬರಬಾರದು. ಆರಂಭದಲ್ಲಿ ಉಸಿರನ್ನು ಗಮನಿಸಿಕೊಂಡೇ ಧ್ಯಾನ ಮಾಡಲು ಸುಲಭವಾಗುತ್ತದೆ. ಆಮೇಲೆ ಓಂಕಾರ/ ಇಷ್ಟದೇವರ ಚಿತ್ರ/ ಪ್ರತಿಮೆ ಭ್ರೂಮಧ್ಯ ಅಥವಾ ನಾಸಾಗ್ರದಲ್ಲಿ ದೃಷ್ಠಿಯಿರಿಸಿ ಧ್ಯಾನ ಮಾಡಬಹುದು. ಈ ಧ್ಯಾನವನ್ನು ಗುರುಮುಖದಲ್ಲೇ ಕಲಿಯಬೇಕು.

ಯೋಗದಿಂದ ದೈಹಿಕ ಮಾನಸಿಕ ಸಮಸ್ಯೆಯನ್ನು ಪರಿಹರಿಸಬಹುದಾಗಿದೆ. ಈ ಆಧುನಿಕ ಯಾಂತ್ರಿಕ ವೈಜ್ಞಾನಿಕ ಸೌಕರ್ಯಗಳಿಂದ ಈ ಈಗಿನ ದಿನಗಳಲ್ಲಿ ದೈಹಿಕ ವ್ಯಾಯಾಮದ ಕೊರತೆಯನ್ನು ನಿವಾರಿಸಲು ಆರೋಗ್ಯವನ್ನು ಪಡೆಯಲು ಯೋಗಾಸನಗಳು ಅತ್ಯಾವಶ್ಯಕ. ಯೋಗ, ಆಸನ, ಪ್ರಾಣಯಾಮ, ಧ್ಯಾನ ಗುರುಮುಖೇನನೇ ಕಲಿತು ನಿತ್ಯ ನಿರಂತರ ಉದಾಸೀನ ಬಿಟ್ಟು ಅಭ್ಯಾಸ ಮಾಡಬೇಕು.


ಲೇಖಕರು :''ಯೋಗರತ್ನ' ಶ್ರೀ ಗೋಪಾಲಕೃಷ್ಣ ದೇಲಂಪಾಡಿ

0 comments:

Post a Comment