ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಇಂಟರ್ಸೆಪ್ಟರ್ ಅರಂಭ ಬಲು ಜೋರು, ಅದಕ್ಕೀಗ ಆಗಿದೆ ಬೋರು!

ಉಡುಪಿ : `ಇಂಟರ್ಸೆಪ್ಟರ್' ಆಧುನಿಕ ಟ್ರಾಫಿಕ್ ಕಂಟ್ರೂಲ್ ವಾಹನಕ್ಕೆ ಉತ್ತಮ ಆರಂಭಸಿಕ್ಕಿತ್ತು. ಬರುಬರುತ್ತಾ ರಾಯರ ಕುದುರೆ ಕತ್ತೆ ಆಯ್ತು ಅಂತಾರಲ್ಲಾ ಆ ಸ್ಥಿತಿಗೆ ಬಂದಿದೆ. ಬಂದ ಹೊಸತರಲ್ಲಿ ದಿನಕ್ಕ್ಕೊಂದು ಕಾಕತಾಳಿಯ ಕತೆ ಹುಟ್ಟಿಕೊಂಡು ಅಗ್ಗದ ಪ್ರಚಾರಕ್ಕೆ ಬಂದಿತ್ತು ಇಂಟರ್ಸೆಪ್ಟರ್. ಭರೀ ಭರ್ಜರಿ ಆರಂಭ ಪಡೆದ ವಾಹನಕ್ಕೆ ಬರುಬರುತ್ತಾ ಬೋರಾಯಿತೋ ಏನೋ ಗೊತ್ತಿಲ್ಲ ಸಪ್ಪೆಯಾಗಿದೆ. ವಾಹನ ಮಂದಿ ಮಾಗಧರ ಬೆಂಗಾವಲಿಗಷ್ಟೆ ಎಂಬ ಸ್ಥಿತಿಗೆ ಬಂದಿದೆ.ಇಂಟರ್ಸೆಪ್ಟರ್ ಬಂದ ವೊದವೊದಲು ರಾತ್ರಿ ಕುಡಿದು ಗಾಡಿ ಓಡಿಸಲಿಕ್ಕೆ ಹೆದರುತ್ತಿದ್ದರು. ಎಲ್ಲಾದರೂ ಇಂಟರ್ ಸೆಪ್ಟೆರ್ ವಾಹನಕ್ಕೆ ಸಿಕ್ಕಿಬಿದ್ದರೆ ದಂಡ ಕಟ್ಟಬೇಕಾಗುತ್ತದೆ ಎಂದು ವಾಹನ ಚಾಲಕರು ಕುಡಿತಕ್ಕೊಂದು ಬ್ರೇಕ್ ಹಾಕಿ ಗಾಡಿ ಚಲಾಯಿಸುತ್ತಿದ್ದರು. ಓವರ್ ಸ್ಪೀಡ್, ರಸ್ತೆ ನಿಯಮ ಎಲ್ಲಾ ಒಂದು ಹಂತಕ್ಕೆ ಬಂದಿದೆ ಅನ್ನೋವಷ್ಟರಲ್ಲಿ ಇಂಟರ್ಸೆಪ್ಟರ್ ಅಚಾನಕ್ ಬದಿಗೆ ಸರಿದಿದೆ. ಎಗ್ಗಿಲ್ಲದೆ ವಾಹನಗಳ ನಾಗಾಲೋಟ ನಡೆಯುತ್ತಿದೆ.ಏನದು ಇಂಟರ್ಸೆಪ್ಟರ್ : ಸುಮಾರು 25 ಲಕ್ಷ ರೂ. ವೆಚ್ಚದ ಅತ್ಯಾಧುನಿಕ ವಾಹನ ಇಂಟರ್ಸೆಪ್ಟರ್. ಹದ್ದು ಮೀರಿದ ವಾಹನಗಳ ಮೇಲೆ ಇಂಟರ್ಸೆಪ್ಟರ್ ಹದ್ದಿನ ಕಣ್ಣಿಡುತ್ತದೆ. ವಾಹನಗಳ ಮೇಲೊಂದು ಕಣ್ಣಿಡಲು ಇಂಟರ್ಸೆಪ್ಟರ್ ಸದಾ ಸಂಚಾರಿ. ಉಡುಪಿ ಜಿಲ್ಲೆಗೂ ಇಂಟರ್ಸೆಪ್ಟರ್ ವಾಹನ ಬಂದಿದೆ. ಕುಂದಾಪುರ, ಕಾರ್ಕಳ ಮತ್ತು ಉಡುಪಿ ಇಂಟರ್ಸೆಪ್ಟರ್ ಕಾರ್ಯಸ್ಥಾನ.

ಈ ವಾಹನ ಟ್ರಾಫಿಕ್ ನಿಯಮ ಮೀರಿದವರನ್ನು `ರೆಡ್ಹ್ಯಾಂಡ್'' ಆಗಿ ಹಿಡಿಯುತ್ತದೆ. ತಪ್ಪು ಮಾಡಿ ಇಂಟರ್ಸೆಪ್ಟರ್ ವಾಹನಕ್ಕೆ ಸಿಕ್ಕಿಬಿದ್ದರೆ ತಪ್ಪಿಸಿಕೊಳ್ಳುವ ಪ್ರಶ್ನೆಯೇ ಬರೋದಿಲ್ಲ. ದಂಡ ಕಟ್ಟದೆ ಬೇರೆ ದಾರಿಯೂ ಇಲ್ಲಾ. ಇನ್ನು ಚಾಲಕ ನಾನು ಕರೆಕ್ಟ್ ಅಂತ ನ್ಯಾಯಾಲಯದ ಕಟಕಟೆ ಹತ್ತಿದರೂ, ಇಂಟರ್ಸೆಪ್ಟರ್ ಬೇಕಾಗುವ ಸಾಕ್ಷಿ ಒದಗಿಸುತ್ತದೆ.

ವಾಹನದ ಕತೆಯಂತೂ : ಮಿತಿ ಮೀರಿದ ವಾಹನ ದಟ್ಟಣೆ, ಹೆಚ್ಚುತ್ತಿರುವ ರಸ್ತೆ ಅಪಘಾತ, ಬೇಕಾಬಿಟ್ಟಿ ಉಪಯೋಗವಾಗುತ್ತಿರುವ ರಸ್ತೆ ನಿಯಮ, ಕಳ್ಳ ಸಾಗಣೆ ಮುಂತಾದ ಅಪಸೌವ್ಯಗಳ ಮೇಲೆ ಕಣ್ಣಿಡಲು ರಾಜ್ಯ ಸರಕಾರ ಕಂಡುಕೊಂಡ ಮಾರ್ಗ ಇಂಟರ್ಸೆಪ್ಟರ್. ಈ ವಾಹನ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ನಿರ್ಮಿಸಲಾಗಿದೆ. ಈ ವಾಹನದ ವೆಚ್ಚ ಎಷ್ಟು ಗೊತ್ತಾ? ಬರೋಬ್ಬರಿ 25 ಲಕ್ಷ ರೂ.
ಇಂಟರ್ಸೆಪ್ಟರ್ನಲ್ಲಿ ವೀಡಿಯೋ ಚಿತ್ರೀಕರಣ, ವೇಗ ಪರೀಕ್ಷಕ ಯಂತ್ರ ಮತ್ತು ಡ್ರಿಂಕ್ ಎಂಡ್ ಡ್ರೈವ್ ಪತ್ತೆ ಮಾಡುವ ಸಾಧನಾ ಇರುತ್ತದೆ. ಒಟ್ಟಿನಲ್ಲಿ ಹೇಳೋದಾದರೆ ಅಪರಾತಪರಾಕ್ಕೆ ಮದ್ದರೆಯುವ ಎಲ್ಲಾ ವಿಧಾನ ವಾಹನದಲ್ಲಿದೆ. ಸಂಚಾರಿ ವಾಹನ ನೋಡಲಿಕ್ಕೂ ದಿವಿನಾಗಿದೆ.

ಇಂಟರ್ಸೆಪ್ಟರ್ ವಾಹನ ನೂರು ಕಿಮೀ ಅಂತರದಲ್ಲಿ ಬರುವ ಮತ್ತು ಹೋಗುವ ವಾಹನದ ವಾಸನೆ ಹಿಡಿದು ಅದರ ವೇಗವನ್ನು ಕರಾರುವಕ್ಕಾಗಿ ದಾಖಲಿಸುತ್ತದೆ. ರಸ್ತೆ ಬದಿಯಲ್ಲಿ ನಿಂತು ವಾಹನ ಬರುತ್ತಿರುವ ಮಾಹಿತಿಯನ್ನು ಪೊಲೀಸರಿಗೆ ನೀಡುತ್ತದೆ. ನಿಯಮ ಮೀರಿ ಬರುತ್ತಿರುವ ವಾಹನವನ್ನು ತಡೆದು ದಂಡ ಹಾಕುತ್ತಾರೆ. ಪೊಲೀಸರು ಸೂಚಿಸಿಸದರೂ ನಿಲ್ಲದೆ ವಾಹನ ಮುಂದಕ್ಕೆ ಹೋದರೆ ಇಂಟರ್ಸೆಪ್ಟರ್ ಛೇಸ್ ಮಾಡೋಕೆ ಹಿಂಜರಿಯೋದಿಲ್ಲ. ಇನ್ನು ಸಿಕ್ಕಿಬಿದ್ದ ವಾಹನಗಳಿಗೆ ದಂಡ ಕಟ್ಟದೆ ವಿಧಿಯಿಲ್ಲ. ಸ್ಥಳದಲ್ಲೆ ದಂಡ ಕಟ್ಟದೆ ನ್ಯಾಯಾಲಯದ ಕಟ್ಟೆ ಏರಿದರೆ ನ್ಯಾಯಾಲಯ ಬರೆ ಎಳೆಯುತ್ತದೆ.

ವಾಹನಗಳಿಗೂ ಕಲೆ ಸ್ಪೀಡ್ ಲಿಮಿಟ್ ಇದೆ. ಬಾಡಿಗೆ ಕಾರು ಅಥವಾ ಬಸ್ಗಳಿಗೆ 65 ಕಿ.ಮೀ. ಸ್ಪೀಡ್ ಲಿಮಿಟ್ ಇದೆ. ಮಂಗಳೂರು, ಕುಂದಾಪುರ ಕಡೆ ಸಂಚರಿಸುವ ಯಾವ ಬಸ್ಸ್ಸೂ ನಿಯಮ ಪಾಲಿಸೋದಿಲ್ಲ. ಆದರೆ ಇಂಟರ್ಸೆಪ್ಟರ್ ಹೆದ್ದಾರಿಯಲ್ಲಿ ಕಾಣಿಸೋದಿಲ್ಲಾ!

ಜಿಲ್ಲೆಯಲ್ಲಿ 54 ಲಕ್ಷ ರೂ. ದಂಡ : ಇಂಟರ್ಸೆಪ್ಟರ್ ಇದೂವರಿಗೆ ಉಡುಪಿ ಜಿಲ್ಲೆಯಲ್ಲಿ 24 ಲಕ್ಷ ರೂ. ದಂಡ ವಸೂಲಿ ಮಾಡಿದೆ. ಅದೂ ಪುರುಸತ್ತಾದಾಗಿ ರಸ್ತೆ ಬದಿಯಲ್ಲಿ ನಿಂತಿದ್ದಕ್ಕೆ ಸಿಕ್ಕ ಪ್ರತಿಫಲ. ಕರಾರುವಕ್ಕಾಗಿ ಸಂಚಾರಿ ವಾಹನ ರಸ್ತೆಗಿಳಿದಿದ್ದರೆ ದಂಡ ದುಪ್ಪಟ್ಟಾಗುತ್ತಿತ್ತು ಎನ್ನೋದು ಕೆಲ ಜನರ ಆಶಯ. ಸಮಚಾರಿ ವ್ಯವಸ್ಥೆಯೂ ಹಿಡಿತಕ್ಕೆ ಬರುತ್ತಿತ್ತು.
ಕಳೆದ ಒಂದು ವರ್ಷದ ಹಿಂದೆ ಕುಂದಾಪುರದಲ್ಲಿ ಒಂದೇ ದಿನ 54 ಸಾವಿರ ರೂ. ದಂಡ ವಸೂಲಾಗಿದೆ ಎಂದರೆ ಅದು ಇಂಟರ್ ಸೆಪ್ಟರ್ ವಾಹನದ ತಾಕತ್ತು ಸೂಚಿಸುತ್ತದೆ.
ಪ್ರಸಕ್ತ ಹೆದ್ದಾರಿ ಸಂಚಾರ ಅಂದರೆ ಯಮಲೋಕದ ರಹದಾರಿಯಂತಾಗಿದೆ. ಇದರೊಟ್ಟಿಗೆ ಹೆದ್ದಾರಿ ವಿಸ್ತರಣೆ ದಿನಕ್ಕೊಂದು ಅವಗಢ ಸೃಷ್ಟಿಸುತ್ತಿದೆ. ಮೀನು ಲಾರಿಯವರದ್ದೂ ಮೃತ್ಯು ವೇಗ. ದಿನ ನಿತ್ಯ ಇದೆಲ್ಲಾ ನಡೆಯುತ್ತಿದ್ದರೂ ಇಂಟರ್ಸೆಪ್ಟರ್ ಹೆದ್ದಾರಿಯಲ್ಲಿ ಸಿಕ್ಕೊದಿಲ್ಲ.
ಹಿಂದೆಲ್ಲಾ ಪೋಲೀಸರು ಹೇಳೋದಿತ್ತು ನಮಗೂ ಅತ್ಯಾಧುನಿಕ ವಾಹನ, ಶಸ್ತ್ರಕೊಡೆ ಅಪಸೌವ್ಯಗಳನ್ನು ಮಟ್ಟಹಾಕುತ್ತೇವೆ ಅಂತ ಜಂಬ ಕೊಚ್ಚಿಕೊಳ್ಳುತ್ತಿದ್ದರು. ಅತ್ಯಾಧುನಿಕ ವ್ಯವಸ್ಥೆ ಮಾಡಿಕೊಟ್ಟರೂ ಅದೇ ಹಾಡು ಅದೇ ಪಾಡಿ. ಒಟ್ಟ್ಟಿನಲ್ಲಿ ಇಂಟರ್ಸೆಪ್ಟರ್ ಆಟಕ್ಕುಂಟು ಲೆಕ್ಕಕ್ಕಿಲ್ಲ.

ಶ್ರೀಪತಿ ಹೆಗಡೆ ಹಕ್ಲಾಡಿ.

0 comments:

Post a Comment