ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಚತುಷ್ಪದ ರಸ್ತೆ , ದಲಿತ ಕುಟುಂಬಗಳಿಗೆ ಎಲ್ಲಿದೆ ಬದಲಿ ವ್ಯವಸ್ಥೆ

ಉಡುಪಿ : ದಲಿತರಿಗೆ ಭೂಮಿ ಕೊಡಿ, ಇಲ್ಲಾ ಕುರ್ಚಿ ಬಿಡಿ.... ಇದೇನು ಪ್ರಾಸ ಕಾವ್ಯದ ಪಲ್ಲವಿಯಲ್ಲಾ! ರಾಷ್ಟ್ರೀಯ ಹೆದ್ದಾರಿ17ರ ವಿಸ್ತರಣೆಯಿಂದ ದಿಕ್ಕೆಟ್ಟ ದಲಿತ ಕುಟುಂಬದ ಪ್ರತಿಭಟನೆಯ ಉದ್ಘೋಷದ ಸಾಲು! ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯ ಬಿಸಿ ದಲಿತ ಕುಟುಂಬದ ಬುಡಕ್ಕೂ ಬಂದಿದೆ. ಇದ್ದ ತುಂಡು ಭೂಮಿಯಲ್ಲಿ ಮನೆಕಟ್ಟಿ ಹಾಗೂ, ಹೀಗೂ ಬದುಕು ನಡೆಸುತ್ತಿರುವ ದಲಿತ ಕುಟಂಬದ ಇದ್ದ ಗುಡಿಸಲನ್ನು ಹೆದ್ದಾರಿ ವಿಸ್ತರಣೆ ಗುಡಿಸಿಗುಂಡಾರ ಮಾಡಲು ಹೊರಟಿದೆ. ಭೂಮಿ ಕಳೆದುಕೊಂಡ ದಲಿತ ಕುಟುಂಬಗಳಿಗೆ ಮುಂದೇನು ಎಂಬ ಚಿಂತೆ ಹೊಸದಾಗಿ ತೆಲೆಯೇರಿದೆ. ಹಾಗಾಗಿ ತಮ್ಮ ಹೋರಾಟದ ಹಾದಿಯಲ್ಲಿ ದಲಿತ ಕುಟುಂಬಗಳು ಹೆಜ್ಜೆಯಿಟ್ಟಿವೆ. ವಿರೋಧದ ವೊದಲನೆಯ ಹೆಜ್ಜೆಯೇ ದಲಿತರಿಗೆ ಭೂಮಿ ನೀಡಿ ಇಲ್ಲಾ ಅಧಿಕಾರ ಬಿಡಿ. ಪರಿಹಾರದ ರೊಕ್ಕದ ಮಾತು ಬಿಡಿ ಎಂಬ ದಿಕ್ಕಾರದ ಸ್ಲೋಗನ್ ಹೊರಟಿದೆ.ಚತುಷ್ಪದ ರಸ್ತೆ ವಿಸ್ತರಣೆ ಸಾಲು ಮರಗಳ ಬುಡಕ್ಕೆ ಕೊಡಲಿ ಇಟ್ಟಿದೆ. ಕುಂದಾಪುರ ಪೇಟೆಯನ್ನು ಪೂರ್ವ ಮತ್ತು ಪಶ್ಚಿಮವಾಗಿ ಇಬ್ಬಾಗ ಮಾಡೋದು ಬೇಡಾ ಅಂತ ಕುಂದಾಪುರ ನಾಗರಿಕರು ಸ್ವರ ಎತ್ತಿದ್ದಾರೆ. ರಸ್ತೆ ಕಾಮಗಾರಿ ಕುರಿತು ಮಾಹಿತಿ ಕೊಡಿ ಅಂತ ಕೋಟದಲ್ಲಿ ನಾಗರಿಕರು ರಸ್ತೆ ಗಿಳಿದಿದ್ದಾರೆ. ಇದ್ಯಾವುದನ್ನೂ ಲೆಕ್ಕಕ್ಕೆ ತೆಗೆದು ಕೊಳ್ಳದೆ ರಸ್ತೆ ವಿಸ್ತರಣೆ ಕಾಮಗಾರಿ ವೇಗ ಪಡೆದಿಕೊಳ್ಳುತ್ತಿದೆ.

ಇವರು ಒಕ್ಕಲೇಳಬೇಕು : ಉಡಪಿ ತಾಲೂಕ್ ಕಡೆಕಾರು ಗ್ರಾಮ ಕನ್ನರ್ಪಾಡಿ ಏಳನೇ ವಾರ್ಡ್ ನಲ್ಲಿರುವ ವಾಸಿಸುರುವ ಸುಮಾರು ಹದನೈದು ದಲಿತ ಕುಟುಂಬ ಒಕ್ಕಲೇಳಬೇಕಾಗಿದೆ. ಈಗಾಗಲೇ ಚತುಷ್ಪದ ರಸ್ತೆಗಾಗಿ ದಲಿತರು ವಾಸಿಸುತ್ತಿರುವ ಲೇಬರ್ ಕಾಲೋನಿಯ ಭೂ ಸ್ವಾಧೀನ ಪ್ರಕ್ರಿಯೆ ಆರಂಭಿಸಿದೆ. ಲೇಬರ್ ಕಾಲೋನಿ ನಿವಾಸಿಗಳಿಗೆ ಯಾವ ಮುನ್ಸೂಚನೆಯನ್ನು ನೀಡದೆ ಜಾಗ ಖಾಲಿ ಮಾಡುವಂತೆ ನೊಟೀಸ್ ಕೊಡಲಾಗಿದೆ.
ಇಲ್ಲಿನ ನಿವಾಸಿಗಳಿಗೆ ಪರಿಹಾರಕ್ಕೆ ಸಂಬಂಧಸಿದಂತೆ ಕುಂದಾಪುರ ಉಪವಿಭಗಾಧಿಕಾರಿ ಭೇಟಿ ಮಾಡುವಂತೆ ತಾಕೀತು ಮಾಡಲಾಗಿದೆ. ಅಕ್ಷರ ಮತ್ತು ವ್ಯವಹಾರಿಕ ಜ್ಞಾನ ಹಾಗೂ ಮಾಧ್ಯಮ ಲೋಕದಿಂದ ದೂರವಿರುವ ದಲಿತ ಕುಟುಂಬಕ್ಕೆ ಮಾಧ್ಯಮದಲ್ಲಿ ಜಾಹೀರಾತು ಬಂದಿದೆ ಅಂತ ಓದಿ ಹೇಳೋರು ಯಾರು? ಒಟ್ಟಿನಲ್ಲಿ ಒಂದು ಹೊತ್ತಿನ ಅನ್ನಕ್ಕಾಗಿ ಕೂಲಿ,ನಾಲಿ ಮಾಡಿ ಬದುಕುತ್ತಿರುವ ದಲಿತ ಕುಟುಂಬಗಳು ತಾವು ಬಾಳಿ, ಬದುಕಿದ ಭೂಮಿ ಕಳೆದುಕೊಂಡು ಬೀದಿ ಪಾಲಾಗುವ ಸ್ಥಿತಿಗೆ ಮುಟ್ಟಿದ್ದಾರೆ.

ಹಾಗಂತ ದಲಿತ ಕುಟುಂಬ ನಿನ್ನೆ ವೊನ್ನೆಯಿಂದ ಇಲ್ಲಿ ವಾಸಮಾಡುತ್ತಿಲ್ಲ. ಕಳೆದ ಅರುವತ್ತು ಎಪ್ಪತ್ತು ವರ್ಷದಿಂದ ಇಲ್ಲಿನ ಖಾಯಂ ನಿವಾಸಿಗಳು. ಇವರಿಗೆ ಬದಲಿ ವ್ಯವಸ್ಥೆ ಮಾಡದೆ ಏಕಾಏಕಿ ಜಾಗ ಬಿಡಿ ಎಂದರೆ ಅವರು ಎಲ್ಲಿಗೆ ಹೋಗಬೇಕು ಎನ್ನೋದು ಭಗವಂತನಿಗೆ ಗೊತ್ತು.

ಬ್ರಿಟೀಷ್ ಕಾಲದಲ್ಲಿ ಮಂಜೂರು : ಕಡೆಕಾರು ಗ್ರಾಮ ಕನ್ನರ್ಪಾಡಿಯಲ್ಲಿ ವಾಸಮಾಡುತ್ತರುವ ದಲಿತ ಕುಂಟುಬಕ್ಕೆ ಸಿಕ್ಕ ಜಾಗ ಬ್ರಿಟೀಷ್ ಕಾಲದ ಬಳುವಳಿ. ರಸ್ತೆ ಅಭಿವೃದ್ಧಿ ಹೆಸರಲ್ಲಿ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ವೊದಲು ಸರಕಾರ ದಲಿತ ಕುಟುಂಬಕ್ಕೆ ಬೇರೆ ಕಡೆ ನಿವೇಶನವನ್ನಾದರೂ ಒದಗಿಸಿದೆಯಾ ಅಂದರೆ ಅದೂ ಇಲ್ಲ. ನಿವೇಶನ ನೀಡಲಾಗುತ್ತದೆ. ಪರಿಹಾರದ ಹಣ ಬರುತ್ತದೆ ಎಲ್ಲವೂ ಅಂತೆ ಕಂತೆ ಪುರಾಣ. ಇಲ್ಲಿ ವಾಸ ಮಾಡೋ ಕುಟುಂಬಕ್ಕೆ ಏನೂ ಸಿಗುತ್ತದೆ ಎಂಬ ಮಾಹಿತಿಯೂ ಇಲ್ಲ. ಹಾಗಾಗಿ ನಿವೇಶನ ನೀಡಿ, ವಸತಿ ಯೋಜನೆಯಡಿ ಮನೆ ಕಟ್ಟಿಕೊಡಿ ಎಂದು ದಲಿತ ಕುಟುಂಬ ಸ್ವರ ಎಬ್ಬಿಸಿವೆ. ಸ್ವರ ದೆಹಲಿ ತಲುಪುತ್ತಾ ಎನ್ನೋದು ಪ್ರಶ್ನೆ.

ದಲಿತ ಸಂಘರ್ಷ ಸಮಿತಿ ಎಂಟ್ರಿ : ಒಕ್ಕಲೇಳುವ ದಲಿತ ಕುಟುಂಬದ ನೆರವಿಗೆ ರಾಜ್ಯ ದಲಿತ ಸಂಘರ್ಷ ಸಮಿತಿ ಬಂದಿದೆ. ಚತುಷ್ಪದ ರಸ್ತೆ ವಿಸ್ತರಣೆಗಾಗಿ ಜಾಗ ಕಳೆದುಕೊಳ್ಳುತ್ತಿರುವ ದಲಿತ ಕುಟುಂಬಕ್ಕೆ ಭೂಮಿ ನೀಡುವಂತೆ ಸಮಿತಿ ಜಿಲ್ಲಾಧಿಕಾರಿ ಅವರನ್ನು ಆಗ್ರಹಿಸಿದೆ.
ಅಭಿವೃದ್ಧಿ ಹೆಸರಲ್ಲಿ ದಲಿತರ ಬದುಕು ನಾಶಮಾಡುತ್ತಿರುವ ಮತ್ತು ಭೂ ಸ್ವಾಧೀನ ಪಡಿಸಿಕೊಂಡ ದಲಿತರಿಗೆ ಮನೆ ನಿವೇಶನ, ಜೊತೆಗೆ ಉದ್ಯೋಗ ನೀಡಬೇಕು ಎನ್ನೋದು ಹಿರಿಯ ಚಿಂತಕ ಜಿ.ರಾಜಶೇಕರ್ ಸಲಹೆ ಮಾಡಿದ್ದಾರೆ.

ಚತುಷ್ಪದ ರಸ್ತೆ ವಿಸ್ತರಣೆಗಾಗಿ ಭೂಮಿ ಮತ್ತು ಮನೆ ಕಳೆದುಕೊಳ್ಳುತ್ತಿರುವ ದಲಿತರಿಗೆ ಭೂಮಿ ಮತ್ತು ಮನೆ ಕಟ್ಟಿಸಿಕೊಡಿ ಎಲ್ಲಾ ಕುರ್ಚಿ ಬಿಡಿ ಎಂದು ಸರಕಾರಕ್ಕೆ ತಾಕೀತು ಮಾಡಿದ್ದಾರೆ ದಲಿತ ಸಂಘರ್ಷ ಸಮಿತಿ ಪ್ರಧಾನ ಸಂಚಾಲಕ ಜಯನ್ ಮಲ್ಪೆ.
ಜನಾರ್ದನ ಭಂಡಾರ್ಕಾರ್, ವನಜಾಕ್ಷಿ, ಶ್ರೀರಾಮ ದಿವಾಣ, ಸುಂದರಿ ಪುತ್ತೂರು, ವಿಠಲ ತೊಟ್ಟಂ, ಗಣೇಶ್ , ಯುವರಾಜ್ ಪುತ್ತೂರು, ಸರಸ್ವತಿ ಶಂಕರ್, ಜ್ಯೋತಿ ಕಪ್ಪೆಟ್ಟು, ಸುಧಾಕರ ಕಿನ್ನಮುಲ್ಕಿ, ತಾರಾನಾಥ ಕೋಟ್ಯಾನ್, ಶೇಖರ್ ಹೆಜಮಾಡಿ, ದಿನಕರ ಬೆಂಗ್ರೆ ಮುಂತಾದವರು ದಲಿತರ ನೆರವಿಗೆ ಬಂದಿದ್ದಾರೆ. ಮುಂದೇನಾಗುತ್ತದೆ ಎನ್ನೋದನ್ನ ಕಾದು ನೋಡಬೇಕು.

- ಶ್ರೀಪತಿ ಹೆಗಡೆ ಹಕ್ಲಾಡಿ.

0 comments:

Post a Comment