ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಉಡುಪಿ : ತ್ರಿಶಂಕು ಸ್ಥಿತಿ? ಹುಟ್ಟಿದೂರಲ್ಲಿ ನೆಲೆ ಕಳೆದುಕೊಂಡಿದ್ದಾರೆ. ಹೊಟ್ಟೆ ಪಾಡಿಗಾಗಿ ಮೆಟ್ಟಿದೂರು ದೂರವಾಗುತ್ತದೆ. ಒಟ್ಟಿನಲ್ಲಿ ವಲಸೆ ಕಾರ್ಮಿಕರು ಅಕ್ಷರಶಃ ನಿರಾಶ್ರಿತರು.ಸ್ಥಿತಿ ತ್ರಿಶಂಕು!
ಬ್ರಹ್ಮಾವರ ಸಕ್ಕರೆ ಕಾರ್ಖಾನೆಗಾಗಿ ವಲಸೆ ಬಂದ ಕಾರ್ಮಿಕರಿಗೆ ಕಾರ್ಖಾನೆ ಮುಖವಡಿಯಾಗಿ ಮಲಗಿದೆ. ಆ ಕಡೆ ಊರಿಗೂ ಹೋಗಲಾಗದೆ, ಈ ಕಡೆ ನಿಂತಲ್ಲಿಯೂ ನಿಲ್ಲಲಾಗದೆ ಆಕಾಶವೇ ತಲೆ ಮೇಲೆ ಕಳಚಿಬಿದ್ದ ಹಾಗೆ ವಲಸೆ ಕಾರ್ಮಿಕರು ಸೋತು ಕುಳಿತಿದ್ದಾರೆ. ವಲಸೆ ಕಾರ್ಮಿಕರಸಂಘ ಕೂಡಾ ಇವರ ನೆರವಿಗೆ ಬರುತ್ತಿಲ್ಲ.ಇದು ವಲಸೆ ಕಾರ್ಮಿಕರ ಕತೆಯೂ ಹೌದು ವ್ಯಥೆಯೂ ಹೌದು.ಬ್ರಹ್ಮಾವರ ಹಾರಾಡಿ ಗ್ರಾಮ ಸಕ್ಕರೆ ಕಾರ್ಖಾನೆ ದೂಪದಹಾಡಿ ಮಗ್ಗಲ್ಲಲ್ಲಿ ಕಳೆದ ಇಪ್ಪತ್ತೈದು ವರ್ಷದಿಂದ ಕೂತ ಕಾರ್ಮಿಕರಿಗೆ ಹೆದ್ದಾರಿ17ರ ವಿಸ್ತರಣೆ ಬಗಲುಹುಣ್ಣು. ಕುಂದಾಪುರ, ಉಡುಪಿ ನಡುವಿನ ಜೀವ ಮತ್ತು ಸಸ್ಯ ವೈವಿಧ್ಯಕ್ಕೆ ಕೊಡಲಿ ಬೀಸಿದ ಹೆದ್ದಾರಿ ವಲಸೆ ಕಾರ್ಮಿಕರ ಬದುಕಿನ ಮೇಲೆ ಮುರುಕೊಂಡು ಬಿದ್ದಿದೆ.

ಎಲ್ಲಿಂದ ಬಂದವರು : ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ-17ರ ಬಳಿ ಚಿಕ್ಕ ಚಿಕ್ಕ ಟೆಂಟ್ ಹಾಕಿ ಬದುಕು ಸಾಗಿಸುತ್ತಿರುವ ಕೂಲಿ ಕಾರ್ಮಿಕರ ಕೊಪ್ಪಳ ಜಿಲ್ಲೆ ಕುಷ್ಟಗಿತಾಲೂಕ್ ನಿಂದ ಬ್ರಹ್ಮಾವರಕ್ಕೆ ಬಂದವರು. ಬ್ರಹ್ಮಾವರದಲ್ಲಿ ಆರಂಭಗೋಂಡ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುವ ಸಲುವಾಗಿ ಬಂದರು. ಕೆಲವರು ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡಿದ್ದರು. ಕಾರ್ಖಾನೆ ಮುಖವಡಿಯಾಗಿ ಮಲಗಿ ಹತ್ತು ವರ್ಷ ಪೂರೈಸಿದೆ. ಸಕ್ಕರೆ ಕಾರ್ಖಾನೆಯಲ್ಲಿ ದುಡುದ ಕೆಲ ಕಾರ್ಮಿಕರು ಇಹಲೋಕ ತ್ಯಜಿಸಿದ್ದಾರೆ. ಮತ್ತೆ ಕೆಲವರಿಗೆ ಸಕ್ಕರೆ ಕಾರ್ಖಾನೆ ಟೊಪ್ಪಿ ಹಾಕಿದೆ.

ಸಕ್ಕರೆ ಕಾರ್ಖಾನೆ ಬಂದ್ ಆದರೂ ವಲಸೆ ಕಾರ್ಮಿಕರು ಊರಿಗೆ ಹೋಗುವ ಮನಸ್ಸು ಮಾಡಲಿಲ್ಲ. ಊರಲ್ಲಿ ಅಂಗೈಅಗಲದ ಮನೆ ಬಿಟ್ಟರೆ ಮತ್ತೇನು ಇಲ್ಲಾ. ಇವರು ರಟ್ಟೆ ಕುಟ್ಟಬೇಕು ಹೊಟ್ಟೆ ತುಂಬಿಸಿಕೊಳ್ಳಬೇಕು. ಜೊತೆಗೆ ಊರಲ್ಲಿರುವ ಹಿರಿಯರನ್ನೂ ಸಲಹ ಬೇಕು.

ವೈವಿಧ್ಯತೆಯಲ್ಲಿ ಏಕತೆ : ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಮಗ್ಗಲ್ಲಿ ವಲಸೆ ಕಾರ್ಮಿಕರ ಐವತ್ತಕ್ಕೂ ಮಿಕ್ಕ ಟೆಂಟ್ ಹೌಸ್ ಇದೆ. ಮಕ್ಕಳು, ಮರಿ, ಚಳ್ಳೆ, ಪಿಳ್ಳೆ ಎಲ್ಲಾ ಸೇರಿದರೆ ಬರೋಬ್ಬರಿ 350 ರಷ್ಟು. ಹೆಚ್ಚಿನವರ ಅನಕ್ಷರಸ್ಥರು. ಕಲಿತವರು ಬೆರಳೆಣಿಕೆಯಷ್ಟು ಮಂದಿ ಇದ್ದಾರೆ.
ಟೆಂಟ್ ಮನೆಯಲ್ಲಿ ವಾಸ ಮಾಡುವ ಕುಟುಂಬದಲ್ಲಿ ಕುರುಬರದ್ದು ಸಿಂಹ ಪಾಲು. ಮುಸ್ಲಿಂ ಮತ್ತು ಬೇರೆಯವರೂ ಇದ್ದಾರೆ. ಇವರಲ್ಲಿ ಸೌಹಾರ್ದತೆಯಿದೆ. ಹಂದಿಗೂಡಿನಂತ ಟೆಂಟ್ ಮನೆಯಲ್ಲಿ ಬುದಕುತ್ತಿರುವ ಇವರ ತಾಕತ್ತಿಗೆ ಶರಣು ಎನ್ನದೆ ವಿಧಿಯಿಲ್ಲ.

ಟೆಂಟ್ ಹೌಸ್ ವಾಸಿಗಳು ಹಿಂದಿನವರ ಸಂಪ್ರದಾಯ ಮಾತ್ರ ಬಿಟ್ಟಿಲ್ಲ. ವರ್ಷಕ್ಕೊಮ್ಮೆ ಊರಿಗೆ ಹೋಗುತ್ತಾರೆ. ದಿಪಾವಳಿ ಕಳೆದ ಊರಲ್ಲಿ ನಡೆಯುವ `ಶರಣಪ್ಪನ ಜಾತ್ರೆ` ಮತ್ತು `ದೇವಮ್ಮನ ಜಾತ್ರೆಗೆ' ಊರಿಗೆ ಹೋದೊರು ಒಂದೆರಡು ದಿನ ಮನೆಯಲ್ಲಿದ್ದು, ಮತ್ತೆ ಯತಾಸ್ಥಾನದಲ್ಲಿ ಸ್ಥಾಪನೆಯಾಗುತ್ತಾರೆ. ಕೆಲಸದ ಬೇಟೆ ಆರಂಭಿಸುತ್ತಾರೆ.

ಟೆಂಟ್ ಮನೆಯಲ್ಲಿ ವಾಸಮಾಡೋ ಮಕ್ಕಳು ಮನಸ್ಸು ಬಂದರೆ ಶಾಲೆಗೆ ಹೋಗುತ್ತಾರೆ. ಇಲ್ಲಾ ಸೈಕಲ್ ಟಯರ್ ಹಿಡಿದು ತಟ್ಟುತ್ತಾ ಪೇರಿ ಹೊರಡುತ್ತಾರೆ. ಪೋಷಕರು ಕೆಲಸಕ್ಕೆ ಹೋಗೋದ್ರಿಂದ ಮಕ್ಕಳು ಶಾಲೆಗೆ ಹೋದವಾ, ಬಿಟ್ಟವಾ ಅಂತ ಕೇಳೋರಿಲ್ಲ.
ಟೆಂಟ್ ಗುಡಿಸಲು ನಿವಾಸಿ ಗಂಡಸರು ಯಾವ ಕೆಲಸಕ್ಕೂ ಜಗ್ಗೋದಿಲ್ಲ. ಬಾವಿ ಕೆಲದಿಂದ ಹಿಡಿದ ಕೃಷಿ ವರೆಗೆ, ರಸ್ತೆ ಕೆಲಸದಿಂದ ಹಿಡಿದು ಕತ್ತೆ ಚಾಕರಿವಗೆ ಇವರು ಹೊಂದಿಕೊಳ್ಳುತ್ತಾರೆ. ಗಂಡಸರು ದುಡಿಯುತ್ತಾರಲ್ಲಾ ಅಂತ ಹೆಂಗಸರು ಮನೆಯಲ್ಲಿ ಬೆಚ್ಚಗೆ ಕೂರೋದಿಲ್ಲ. ಅವರು ಕಲ್ಯಾಣ ಮಂಟಪ, ಮನೆ ಕೆಲಸ ಮತ್ತು ಹೊಟೇಲ್ ಚಾಕರಿಗೆ ಹೋಗುತ್ತಾರೆ. ಗಂಡಾಳು ದಿನಕ್ಕೆ 150 ರೂ. ದುಡಿದರೆ ಹೆಣ್ಣಾಳು 100 ರೂ. ಸಂಪಾದಿಸುತ್ತಾಳೆ.
ಟೆಂಟ್ ವಾಸಿಗಳ ಹೆಸರು ಅದೇ ಓಬಿರಾಯನ ಕಾಲದ್ದು. ಟೆಂಟ್ ನಿವಾಸಿಗಳು ಆಧುನಿಕ ಶೋಕಿಗೆ ಬೀಳಲಿಲ್ಲ. ಹಾಗೆ ದೇವರು, ದಿಂಡಿರ ಹೆಸರಿಡೋದನ್ನು ಕೈಬಿಟ್ಟಿಲ್ಲ. ಬಡಿಯಮ್ಮ, ನೀಲವ್ವ, ಶರಣಪ್ಪ, ಶರಣವ್ವ, ಶಾರವ್ವ, ಬಸಮ್ಮ, ಬಸಪ್ಪ ಹೀಗೆ ಹೆಸರುಗಳ ಪಟ್ಟಿ ಬೆಳೆಯುತ್ತದೆ.
ವಲಸೆ ಕಾರ್ಮಿಕರಿಗೆ ಊರಲ್ಲಿ ಓಟಿದೆ. ಚುನಾವಣೆ, ಗಿನಾವಣೆ ಬಂದರೆ ವಾಹನಮಾಡಿ ಇವರನ್ನು ಊರಿಗೆ ಕರೆದುಕೊಂಡು ಹೋಗುತಾರೆ ಚುವಾವಣೆಗೆ ನಿಂತವರು. ಓಟಾದ ನಂತರ ಮತ್ತೆ ವಲಸೆ ಕಾರ್ಮಿಕರು ಅಬ್ಬೆಪಾರಿಗಳು.

ಹಗಲೆಂದರೆ ಭಯ ಪಡುತ್ತಾರೆ : ಹೆಚ್ಚಿನ ಎಲ್ಲಾ ಜನರು ರಾತ್ರಿ ಭಯಪಟ್ಟರೆ ಟೆಂಟ್ ವಾಸಿಗಳು ಹಗಲೆಂದರೆ ಭಯ ಬೀಳುತ್ತಾರೆ. ಟೆಂಟ್ ಸಮುಚ್ಛಯದಲ್ಲಿ ಪಾಯಿಖಾನೆ ಜಳಕಾ ಕೋಲಿಗಳಿಲ್ಲ. ದೇಹ ಬಾಧೆ ತೀರಿಸಿಕೊಳ್ಳಲು ಇವರು ಇರುಳನ್ನು ಎದುಕರು ನೋಡಬೇಕು. ಇವರಿಗೆ ಬಯಲೇ ಶೌಚಾಯಲ ಬಟ್ಟಂಬಯಲೇ ಜಳಕಾ ಕೋಲಿ. ಕೆಲವರದ್ದು ಐಟಿ ಬಿಟಿ ತಂತ್ರಜ್ಞಾನದ ಬಾತ್ರೂ!
ವಲಸೆ ಕಾರ್ಮಿಕರ ಹಟ್ಟಿಯಲ್ಲಿ ನೀರಿಗೆ ಮತ್ತೊಂದು ತಲೆಬೇನೆ. ರಹದೂರದಿಂದ ನೀರು ತರಬೇಕು. ಕೆಲಸಕ್ಕೆ ಹೋಗೋದಾ ನೀರು ತರೋದು ಎಂಬ ಜಿಜ್ಞಾಸೆ ಇವರನ್ನು ಕಾಡಿದ್ದೂ ಇದೆ. ಒಟ್ಟಾರೆ ಮನುಷ್ಯರು ವಾಸಮಾಡಲಾಗದ ನಾಲಾಯಕ್ ಪರಿಸರದಲ್ಲಿ ವಲಸೆ ಕಾರ್ಮಿಕರ ವಾಸ್ಥವ್ಯ ಇರೋದು ಕಠೋರ ಸತ್ಯ.

ಬೇಡಿಕೆ ಏನು : ವಲಸೆ ಕಾರ್ಮಿಕರು ಇಂದ್ರಲೋಕ ಚಂದ್ರ ಲೋಕದ ಬೇಡಿಕೆ ಇಟ್ಟಿಲ್ಲ. ಇವರಿಗೆ ನೆರಳು ನೀಡುವ ಪುಟ್ಟ ಗುಡಿಸಲು ಕಟ್ಟಿಕೊಳ್ಳುವಷ್ಟು ಜಾಗಾ ಕೇಳುತ್ತಿದ್ದಾರೆ. ಪ್ರಸಕ್ತ ಬ್ರಹ್ಮಾವರ ಸರಕಾರಿ ಜಾಗದಲ್ಲಿ ಇವರು ಕೂತಿದ್ದಾರೆ. ಇವರ ಗುಡಿಸಲ ಹಿಂದೆ ಅರಣ್ಯ ಇಲಾಖೆ ಹಾಡಿಯಿದೆ. ಅತ್ತ ಅರಣ್ಯ ಇಲಾಖೆ ಭಯ ಇವರನ್ನು ಕಾಡುತ್ತಿರುವ ಜೊತೆಗೆ ಹೆದ್ದಾರಿ ವಿಸ್ತರಣೆ ಟೆಂಟ್ ಮನೆಗಳನ್ನು ದೂಡಿ ಹಾಕಿದೆ.
ಇನ್ನೂ ವಲಸೆ ಕಾರ್ಮಿಕರು ಊರಿಗಾದರೂ ಹಿಂದುರುಗಿ ಹೋಗುವಾ ಅಂದರೆ ಅದಕ್ಕೂ ಸಾಧ್ಯವಿಲ್ಲ. ಕಳೆದ ಪ್ರಕೃತಿ ವಿಕೋಪಕ್ಕೆ ಇವರ ಗುಬ್ಬಚ್ಚಿ ಗೂಡಿನ ಮನೆ ಅಪ್ಪಚ್ಚಿ. ಸರಕಾರದ ಮನೆಗಳು ಗಗನ ಕುಸುಮ.
ನಮಗೆ ಶ್ರೀಮಂತಿಕೆಯ ಬದುಕು ಬೇಡ. ಕನಿಷ್ಠ ಬದುಕು ಸಾಗಿಸಲಿಕ್ಕಾದರೆ ಸಾಕು. ಹೇಗಾದರೂ ನಾವು ಬದುಕಕೊಳ್ಳುತ್ತೇವೆ ಎಂದು ಕಸ್ತೂರಿ ಉಲಿಯುತ್ತಾಳೆ. ಸರಕಾರ ಸಣ್ಣದೊಂದು ಜಾಗ ಕೊಟ್ಟರೆ ಅದರಲ್ಲಿ ಮನೆ ಕಟ್ಟಿ ಕೂಲಿನಾಲಿ ಮಾಡಿ ಬದುಕುತ್ತೇವೆ ಎನ್ನೊದು ಮಮತಾ ಅವರ ಅಂತರಾಳದ ಮಾತು.
ವಲಸೆ ಕಾರ್ಮಿಕರಿಗೆ ಬದುಕು ಕಟ್ಟಿಕೊಳ್ಳೋದು ಎಷ್ಟು ಪ್ರಾಮುಖ್ಯವೋ ದಕ ಮತ್ತು ಉಡುಪಿ ಜಿಲ್ಲೆಯ ಜನರಿಗೆ ವಲಸೆ ಕಾರ್ಮಿಕರೂ ಅಷ್ಟೇ ಮುಖ್ಯ. ಅವಳಿ ಜಿಲ್ಲೆಯಲ್ಲಿ ಕಾರ್ಮಿಕರ ಕೊರತೆ ಅನುಭವಿಸುತ್ತಿರುವ ಸಮಯದಲ್ಲೇ ವಲಸೆ ಕಾರ್ಮಿಕರು ನೆರವಿಗೆ ಬಂದಿದ್ದಾರೆ. ಸಂಕಷ್ಟದಲ್ಲಿರುವ ಹೊಟೇಲ್ ಉದ್ಯಮಿಗಳ ನೆರವಿಗೆ ವಲಸೆ ಕಾರ್ಮಿಕ ಮಹಿಳೆಯರು ನಿಂತಿದ್ದಾರೆ. ಒಂದೊಂಮ್ಮೆ ವಲಸೆ ಕಾರ್ಮಿಕರು ಒಕ್ಕಲೆದ್ದು ಹೋದರೆ ಅದರ ಪರಿನಾಮ ಅವಳಿ ಜಿಲ್ಲೆಯಲ್ಲಿ ಆಗುತ್ತದೆ. ಕಾರ್ಮಿಕರ ಕೊರತೆಯಿಂದ ರಸ್ತೆ, ಕಟ್ಟಡ ಕೃಷಿ ಚಟುವಟಿಕೆಗೆ ಹಿನ್ನೆಡೆಯಾಗಲಿದೆ. ಈ ಎಲ್ಲಾ ವೈಪರೀತ್ಯ ಹೋಗಲಾಡಿಸಲು ಸರಕಾರ ಇವರಿಗೆ ಮನೆ ಕಟ್ಟಿಕೊಳ್ಳಲು ಜಾಗ, ಕುಡಿಯವ ನೀರು ಮತ್ತು ರೇಶನ್ ಕಾರ್ಡ್ ನೀಡಬೇಕಾಗಿದೆ. ಸರಕಾರ ಮತ್ತು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ವಲಸೆ ಕಾರ್ಮಿಕರ ನೆರವಿಗೆ ಬರುತ್ತದಾ?

ಪ್ರೀತಿಮಾಡು ತಪ್ಪೇನಲ್ಲಾ : ಟೆಂಟ್ ಹೌಸನಲ್ಲಿ ಪ್ರೀತಿ ಮಾಡೋದು ತಪ್ಪೇನಲ್ಲಾ ಅಂತಾರೆ. ಪ್ರೀತಿ ಮಾಡಿದ ಜೋಡಿಗೆ ಮದುವೇನೂ ಮಾಡ್ತಾರೆ. ಅದರೆ ಒಂದು ಕಂಡೀಶನ್ ಇದೆ. ಲೌವ್ ಮಾಡೋದಾದರೆ ತಮ್ಮ ಕುಲದವರನ್ನೇ ಪ್ರೀತಿಮಾಡಬೇಕು. ಇಲ್ಲಾ ತಮ್ಮ ಜಾತಿಗಿಂತ ಮೇಲಿನ ಜಾತಿಯರಾದರೂ ಪ್ರೀತಿಗೆ ಅಡ್ಡಿಯಿಲ್ಲ. ಎಲ್ಲಾದರೂ ಕೆಳಸ್ಥರದ ಜನರೊಟ್ಟಿಗೆ ಪ್ರತಿ ಅರಳಿದರೆ ಭಹಿಷ್ಕಾರ ಗ್ಯಾರೆಂಟಿ. ಪ್ರೀತಿ ಮಾಡೋರು ಹುಷಾರ್.


- ಶ್ರೀಪತಿ ಹೆಗಡೆ ಹಕ್ಲಾಡಿ

1 comments:

Anonymous said...

ಸರ್, ಉಡುಪಿ ಜಿಲ್ಲೆಯಲ್ಲಿ ಉತ್ತಮ ವಿಚಾರಗಳೂ ಹಲವಾರಿವೆ. ಮುಂದೆ ಅದರೆಡೆಗೂ ಗಮನ ಹರಿಸುವಿರಿ ಎಂಬ ನಿರೀಕ್ಷೆ ಇದೆ.

Post a Comment