ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ಲೇಖನ
" ಯೋಗಕ್ಕೆ ಅದರದ್ದೇ ಆದಂತಹ ನೀತಿ ನಿಯಮ ಎಂಬುದಿದೆ. ಯೋಗವನ್ನು ಒಂದು ಫ್ಯಾಶನ್ ಆಗಿ ಬಳಸುವುದು ಸರಿಯಲ್ಲ. ಇಂದು ಯೋಗದ ಬಗೆಗೆ ಜನತೆಯಲ್ಲಿ ಅನೇಕ ತಪ್ಪುಕಲ್ಪನೆಗಳಿವೆ. ಅದನ್ನು ಹೋಗಲಾಡಿಸುವುದೇ ಈ ಲೇಖನದ ಮುಖ್ಯ ಉದ್ದೇಶ. ಈ ಕನಸು.ಕಾಂ ನ ಅಂಕಣಕಾರರಾದ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರು ತಮ್ಮ ಕಳೆದ 30 ವರುಷಗಳ ಅನುಭವದ ಆಧಾರದಲ್ಲಿ ಈ ವಿಶೇಷ ಲೇಖನವನ್ನು ನೀಡಿದ್ದಾರೆ. ಓದಿ...ಅಭಿಪ್ರಾಯಿಸಿ... -ಸಂ.ಇತ್ತೀಚಿನ ದಿನಗಳಲ್ಲಿ ವಿಶ್ವದ ಎಲ್ಲಾ ಜನಾಂಗದವರನ್ನು ಬಲವಾಗಿ ಆಕರ್ಷಿಸುತ್ತಿರುವುದು ಯೋಗವಿದ್ಯೆ ನಮ್ಮ ಭಾರತೀಯ ಪಾರಂಪರಿಕ ಕಲೆಯಾದ ಯೋಗವನ್ನು ಸಮರ್ಪಕವಾಗಿ ಅಭ್ಯಾಸ ಮಾಡಿದರೆ ದೊರಕುವ ಪ್ರಯೋಜನವು ವೈಜ್ಞಾನಿಕವಾಗಿಯೂ ದೃಢಪಟ್ಟಿದೆ. ಇತ್ತೀಚಿನ ಕಾಲದಲ್ಲಿ ಜನರಲ್ಲಿ ಯೋಗದ ಬಗ್ಗೆ ಅರಿವು ಮೂಡುತ್ತಿರುವುದು ಒಳ್ಳೆಯ ವಿಚಾರವಾಗಿದೆ, ಹಾಗೂ ಬಹಳಷ್ಟು ಸ್ಥಳಗಳಲ್ಲಿ ಯೋಗದ ಬಗ್ಗೆ ಜಾಗೃತಿ, ಅರಿವು, ತರಬೇತಿ ಶಿಬಿರಗಳು ನಡೆಯುತ್ತಿವೆ.

ಆದರೆ ತರಬೇತಿ ನೀಡುವಾಗ ಯಾ ಪಡೆಯುವಾಗ ಯೋಗದ ಬಗ್ಗೆ ಅರಿವು, ಮಾಹಿತಿ, ಸೂಚನೆ ಮತ್ತು ಕೆಲವು ನಿಯಮಗಳನ್ನು ಪಾಲಿಸಬೇಕಗುತ್ತದೆ.

ಮಾಹಿತಿ:


*ಯೋಗವನ್ನು ಸರಿಯಾದ ಗುರುಮುಖೇನವೇ ಕಲಿಯಬೇಕು.
* ನುರಿತ, ಆಸಕ್ತ ಯೋಗ ಶಿಕ್ಷಕರೇ ಯೋಗದ ತರಬೇತಿ ನೀಡಬೇಕು.
*ಯೋಗ ತರಬೇತಿ ನೀಡುವವರು ಒಂದು ಯಾ ಎರಡು ವರ್ಷ ಸಮರ್ಪಕವಾಗಿ ಕಲಿತು ಅಭ್ಯಾಸ ಮಾಡಿ, ಅನುಭವಿಸಿ ಅನಂತರ ಹೊಸಬರಿಗೆ ತರಬೇತಿ ನೀಡಬೇಕು.
*ಟಿ.ವಿ., ಪುಸ್ತಕ, ಚಿತ್ರ ನೋಡಿ ಯೋಗವನ್ನು ಕಲಿಯಲೇಬಾರದು. ಗುರುಮುಖೇನ ಸರಿಯಾಗಿ ಕಲಿತ ನಂತರ ಹೆಚ್ಚಿನ ಮಾಹಿತಿಗಾಗಿ ಟಿ.ವಿ. ಪುಸ್ತಕಗಳನ್ನು ನೋಡಬಹುದು ಅಥವಾ ಮಾಹಿತಿ ಪಡೆಯಬಹುದು.
*ಕಲಿತ ನಂತರ ನಿತ್ಯವೂ, ಶಿಸ್ತು ಬದ್ಧವಾಗಿ, ಕ್ರಮವತ್ತಾಗಿ ಉಸಿರಿನ ಗತಿಯೊಂದಿಗೆ ಯೋಗಾಭ್ಯಾಸ ನಡೆಸಬೇಕು.

ಸೂಚನೆಗಳು:
*ಆರೋಗ್ಯದ ಸಮಸ್ಯೆ ಇದ್ದವರು ಸರಿಯಾದ ವೈದ್ಯಕೀಯ ತಪಾಸಣೆಯನ್ನು ನಿಯಮಿತವಾಗಿ ಮಾಡಬೇಕು. ಅಗತ್ಯವಿದ್ದಲ್ಲಿ ಔಷಧ ಉಪಚಾರ ವೈದ್ಯರ ಸಲಹೆಯಂತೆ ಪಡೆಯಬೇಕು. (ಉದಾ: ಬಿ.ಪಿ., ಮಧುಮೇಹ ಸಮಸ್ಯೆ).

*ಔಷಧ ಸೇವಿಸುವ ರೋಗಿಗಳು ಯೋಗ ತರಬೇತಿ ಪಡೆಯುವಾಗ ಔಷಧಿ ಸೇವನೆ ನಿಲ್ಲಿಸಲೇ ಬಾರದು. ವೈದ್ಯರ ಸಲಹೆಯನ್ನು ಪಾಲಿಸಬೇಕು. ಕೆಲವು ಆರೋಗ್ಯ ಸಮಸ್ಯೆ ಯೋಗದಿಂದ ತಕ್ಷಣ ಪರಿಹಾರವಾಗುವುದಿಲ್ಲ. ಯೋಗಾಭ್ಯಾಸದಿಂದ ಆರೋಗ್ಯ ಸುಧಾರಣೆಯಾದುದು ದೃಢಪಟ್ಟನಂತರ ವೈದ್ಯರ ಸಲಹಯಂತೆ ಔಷಧ ನಿಲ್ಲಿಸಬಹುದು.

*ದೇಹದ ಶುದ್ಧೀಕರಣಕ್ಕಿರುವ ಕಪಾಲ ಭಾತಿ ಯನ್ನು ಹೆಚ್ಚಿನ ರಕ್ತದೊತ್ತಡ, ಹೃದಯ ದೌರ್ಬಲ್ಯ, ಸೊಂಟ ನೋವು, ಕುತ್ತಿಗೆ ನೋವು ಇದ್ದವರು ಅಭ್ಯಾಸ ಮಾಡಬಾರದು. ಟಿ.ವಿ. ನೋಡಿ ಕಪಾಲ ಭಾತಿ ಯನ್ನು ಕಲಿಯಬಾರದು.

*ಯೋಗವನ್ನು ತಪ್ಪಾಗಿ ಅಭ್ಯಾಸ ಮಾಡಬಾರದು, ಮಾಡಿದರೆ ಆರೋಗ್ಯ ಲಾಭಕ್ಕಿಂತ ನಷ್ಟವೇ ಹೆಚ್ಚಾಗಬಹುದು.

*ಒಬ್ಬ ವ್ಯಕ್ತಿಯು ಯಾವ ರೀತಿ ನಿತ್ಯ ಬ್ರಶ್ ಮಾಡಿ ತನ್ನ ಹಲ್ಲುಗಳನ್ನು ಆರೋಗ್ಯವಾಗಿಟ್ಟುಕೊಳ್ಳುತ್ತಾನೆಯೋ ಅದೇ ರೀತಿ ದೇಹದ ಆರೋಗ್ಯಕ್ಕೆ ಯಾವುದೇ ರೀತಿಯ ಕ್ರಮವತ್ತಾದ ವ್ಯಾಯಾಮ, ವಾಕಿಂಗ್ ಚಲನೆ, ಚಟುವಟಿಕೆ, ಯೋಗ ಇತ್ಯಾದಿಗಳನ್ನು ಅಗತ್ಯವಾದಷ್ಟು ಮಾಡಬೇಕು. ಯೋಗಾಭ್ಯಾಸ ಮಾಡುವುದರಿಂದ ದೇಹದ ಒಳಗಿನ ಅಂಗಕ್ಕೆ ವ್ಯಾಯಾಮ ದೊರೆತು, ರಕ್ತಪರಿಚಲನೆ ಸುಗಮವಾಗಿ, ನರನಾಡಿಗಳು ಪುನಃಶ್ಚೇತನಗೊಳ್ಳುತ್ತವೆ.

ನಿಯಮಗಳು:

*ಯೋಗಾಭ್ಯಾಸ ನಡೆಸುವವರು ಯಮ, ನಿಯಮ (ಒಳ್ಳೆಯ ಅಭ್ಯಾಸಗಳು, ನೈತಿಕ ಬಲಸುಧಾರಣೆ)ಗಳನ್ನು ಪಾಲಿಸಬೇಕು. ಮನಸ್ಸು, ಧನಾತ್ಮಕವಾಗಿ ಯೋಚಿಸುತ್ತಿರಬೇಕು. ಯಾರಿಗೂ ನೋವು, ಹಿಂಸೆ, ಮಾಡಬಾರದು.

*ಯೋಗ ಅಭ್ಯಾಸ ಮಾಡುವಾಗ ಉತ್ತಮ ಪರಿಸರ ಇರಬೇಕು. ನೆಲದ ಮೇಲೆ ಕಡ್ಡಾಯವಾಗಿ ಜಮಖಾನ ಹಾಸಿರಬೇಕು.

*ಯೋಗವು ಸರ್ಕಸ್ ಅಲ್ಲ ಮ್ಯಾಜಿಕ್ ಅಲ್ಲ. ಆತ್ಮ, ಆಧ್ಯಾತ್ಮ್ಕ ಮತ್ತು ಉತ್ತಮ ಜೀವನ ಶೈಲಿಗೆ ಸಂಬಂಧಪಟ್ಟ ವಿಚಾರವಾಗಿದೆ.

*ಪ್ರಾಣಾಯಾಮವನ್ನು ಅಭ್ಯಾಸ ಮಾಡುವ ಮೊದಲು ಪ್ರಾಣಾಯಾಮಕ್ಕೆ ಸೂಕ್ತವಾದ ಕೆಲವು ಯೋಗಾಭ್ಯಾಸಗಳನ್ನು ಕಲಿತಿರಬೇಕು.(ವಜ್ರಾಸನ ಯಾ ಪದ್ಮಾಸನ ಯಾ ಸುಖಾಸನ ಯಾ ಸ್ವಸ್ತಿಕಾಸನ ಯಾ ವೀರಾಸನ).
*ಮೇಲಿನ ಆಸನದಲ್ಲಿ ಕುಳಿತುಕೊಳ್ಳಲು ಆಗದವರಿಗೆ ಕುಚರ್ಿಯಲ್ಲಿ ಕುಳಿತು ಪ್ರಾಣಾಯಾಮವನ್ನು ಅಭ್ಯಾಸ ಮಾಡಬಹುದು.
*ಯೋಗಾಭ್ಯಾಸದ ಕೊನೆಯಲ್ಲಿ ಕಡ್ಡಾಯವಾಗಿ 5 ರಿಂದ 10 ನಿಮಿಷಗಳಷ್ಟು ಶವಾಸನ ಮಾಡಬೇಕು.

*ಅಭ್ಯಾಸಿಗಳು ಉತ್ತಮ ಪೋಷಕಾಂಶ ಹಾಗೂ ಸತ್ವಯುತವಾದ ಆಹಾರವನ್ನು ಸೇವಿಸಬೇಕು.

*ದಿನ ನಿತ್ಯ ಅರ್ಧಗಂಟೆಯಿಂದ ಒಂದು ಗಂಟೆಯಷ್ಟು ಸಮಯ ಯೋಗ ಅಭ್ಯಾಸ ಮಾಡಬೇಕು.

*ಅತಿಯಾದ ಯೋಗ ಅಭ್ಯಾಸ ಮಾಡಬಾರದು.

*ಯೋಗವು ಮುಖ್ಯವಾಗಿ 'ಗುರು - ಶಿಷ್ಯ'ರ ಪರಂಪರೆಯಲ್ಲಿ ಬೆಳೆಯಬೇಕು.

*ವಿದ್ಯಾರ್ಥಿಗಳಿಗೆ ಯೋಗವನ್ನು ಬಹಳ ಜಾಗರೂಕತೆಯಿಂದ ಕಲಿಸಬೇಕು. ಅವರ ಮೇಲೆ ಒತ್ತಡ ಹೇರಿ ಕಲಿಸಬಾರದು.

*ಆರಂಭದಲ್ಲಿ ಒಮ್ಮೆಲೇ ಕ್ಲಿಷ್ಟಕರ ಯೋಗಾಸನಗಳನ್ನು ಮಾಡಬಾರದು. ಪ್ರಥಮ, ದ್ವಿತೀಯ, ತೃತೀಯ ಹಂತದ ಮೂಲಕ ಕಲಿಯಬೇಕು.

*ನಿರ್ಧಿಷ್ಟ ಕಾಯಿಲೆ ವಾಸಿಯಾಗುವ ಉದ್ದೇಶದಿಂದ ಯೋಗಾಭ್ಯಾಸ ಮಾಡುವವರು ನಿರ್ಧಿಷ್ಟ ಆಸನಕ್ಕೆ ಹೆಚ್ಚು ಒತ್ತು ಕೊಡಬೇಕು. ಆರೋಗ್ಯ ಸಮಸ್ಯೆ ಇರುವವರು ಎಲ್ಲಾ ಆಸನಗಳನ್ನು ಮಾಡುವ ಬದಲು ಗುರುವಿನಿಂದ ಹೇಳಿಸಿಕೊಂಡ ರೀತಿಯಲ್ಲಿ ಯೋಗಾಭ್ಯಾಸ ಮಾಡಿದರೆ ಹೆಚ್ಚು ಸಮರ್ಪಕ.


ಈ ಮೇಲಿನ ಸೂಚನೆ, ನಿಯಮಗಳನ್ನು ಪಾಲಿಸಿ, ನುರಿತ ಯೋಗ ಶಿಕ್ಷಕರ ಮುಖಾಂತರ ಕಲಿತು, ನಿತ್ಯ-ನಿರಂತರ, ಶಿಸ್ತು ಬದ್ಧ, ಕ್ರಮಬದ್ಧವಾಗಿ ಪ್ರಾಣಾಯಾಮಗಳೊಂದಿಗೆ ಯೋಗಾಭ್ಯಾಸ ಮಾಡಿದಲ್ಲಿ ಮನಸ್ಸು ಮತ್ತು ಶರೀರ ಲವಲವಿಕೆಗೊಂಡು, ನಮ್ಮನ್ನು ಕಾಡುವ ಶಾರೀರಿಕ ಬಾಧೆಗಳು ನಿಯಂತ್ರಣದಲ್ಲಿದ್ದು, ಒತ್ತಡ ರಹಿತ ಜೀವನ ಶೈಲಿ ಮೈಗೂಡಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪುಗೊಳ್ಳುವುದರಲ್ಲಿ ಸಂಶಯವಿಲ್ಲ.ಬರಹ: 'ಯೋಗರತ್ನ' ಶ್ರೀ ಗೋಪಾಲಕೃಷ್ಣ ದೇಲಂಪಾಡಿ

1 comments:

Panduranga D said...

good to know &follow.please continue spreading such princples

Post a Comment