ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಉಡುಪಿ : ಹದಿನಾಲ್ಕನೇ ಶತಮಾನದ ಅಂತ್ಯ ಕಾಲದ ಅಪೂರ್ವ ಶಾಸನ ಮಂಗಳೂರು ನಗರ ಜೆಪ್ಪು, ಬಪ್ಪಾಲ್ ಶಾಂತಿನಗರ ವಿ. ಮಾಲತಿ ಕುರುಪ್ ಎಂಬುವರ ಹಳೆ ಮನೆಯ ಜಾಗದಲ್ಲಿ ಪತ್ತೆಯಾಗಿದೆ. ಸ್ಥಂಭ ಶಾಸನ ಸುಮಾರು ನಾಲ್ಕು ಅಡಿ ಎತ್ತರವಿದೆ. ಸ್ಥಂಭದ ಎರಡು ಬದಿಯಲ್ಲಿ ಕನ್ನಡ ಭಷೆ ಮತ್ತು ಲಿಪಿಯಲ್ಲಿ ಬರೆದ ಶಾಸನ ಇದೆ. ಶಾಸನದ ಮುಮ್ಮುಖದಲ್ಲಿ 27 ಮತ್ತು ಹಿಮ್ಮುಖದಲ್ಲಿ 26, ಒಟ್ಟು53 ಸಾಲು ಬರಹವಿದೆ. ಆಯತಾಕಾರದ ಸ್ಥಂಭ ಮೇಲ್ಭಾಗದಲ್ಲಿ ನಂದಿ ಮತ್ತು ಶಿವಲಿಂಗದ ಉಬ್ಬು ಕೆತ್ತನೆಯಿದೆ. ಹಿಂಬದಿಯಲ್ಲಿ ಅಸ್ಪಷ್ಠ ಚಿತ್ರ ಗಣಪತಿ ಶಿಲ್ಪದಂತಿದೆ ಎಂದು ಶಿರ್ವ ಎಂಎಸ್ಆರ್ಎಸ್ ಕಾಲೇಜ್ ಪುರಾತತ್ವ ಉಪನ್ಯಾಸಕ ಪ್ರೊ.ಟಿ. ಮುರುಗೇಶಿ ಮತ್ತು ಕಲ್ಯಾಣ್ಪುರ ಮಿಲಾಗ್ರಿಸ್ ಕಾಲೇಜ್ ಇತಿಹಾಸ ಉಪನ್ಯಾಸಕ ಪ್ರಶಾಂತ್ ಶೆಟ್ಟಿ 'ಈ ಕನಸು.ಕಾಂಗೆ' ತಿಳಿಸಿದ್ದಾರೆ.


ಸ್ವಸ್ತಿಶ್ರಿ ಎಂಬ ಸೂಚಕ ಪದದಿಂದ ಆರಂಭವಾಗಿರುವ ಶಾಸನ, ಜಯಾಭ್ಯುದಯ ಶಕಾಬ್ದ1305ನೇ ದುಂದುಭಿ ಸಂವತ್ಸರ ಮಾಘ ಶುದ್ಧ 5ಲೂ ಎಂದು ಕಾಲ ಉಲ್ಲೇಖಿಸಿದೆ. ಅದು ಕ್ರಿ.ಶ.1384 ಕ್ಕೆ ಸರಿ ಹೊಂದುತ್ತದೆ. ಶ್ರೀ ಮತ್ತು ವಶಿಷ್ಠ ಗೋತ್ರದ ಚೌಡರಸ ಮಂತ್ರಿಯ ಕುಮಾರ ಮಲಗರ್ಸ ಒಡೆರೂ ಮಂಗಳೂರು ರಾಜ್ಯವನಾಳುವಾಗ, ಕಾಶ್ಯಪ ಗೋತ್ರದ ಮಾಇ ದೀಕ್ಷಿತರ ಮಗ ಮುರಾರಿ ಭಟ್ಟರಿಗೆ ಅರ್ಧೋದಯ ಪುಂಣ್ಯ ಕಾಲದಲಿ ಧಾರೆ ಎರೆದು ಕೊಟ್ಟ ದಾನ ವಿವರಿಸುತ್ತದೆ.
ಸಂಶೋಧಿತ ಶಾಸನ ತುಳುನಾಡಿನ ಇತಿಹಾಸ ಅಧ್ಯಯನದಲ್ಲಿ ಮಹತ್ವದ ದಾಖಲೆಯಾಗಿದ್ದು, ಹೊಸ ವಿಷಯ ಒಳಗೊಂಡಿದೆ. ಕಾಲಮಾನದ ದೃಷ್ಠಿಯಿಂದ ವಿಜಯನಗರದ ಶಾಸನವಾಗಿದ್ದರೂ, ವಿಜಯನಗರದ ಉಲ್ಲೇಖವಾಗಲೀ ಅಥವಾ ಚಕ್ರವರ್ತಿಯ ಉಲ್ಲೇಖವಾಗಲಿ ಶಾಸನದಲ್ಲಿ ಇಲ್ಲ.
ಶಾಸನ ಮಾಇ ದೀಕ್ಷಿತರ ಮಗ ಮುರಾರಿ ಭಟ್ಟರಿಗೆ ಅರ್ಧೋದಯ ಪುಂಣ್ಯ ಕಾಲದಲ್ಲಿ ದಾನವನ್ನು ನೀಡಿದಂತೆ ತಿಳಿಸಿದ್ದು, ಅರ್ಧೋದಯ ಪುಂಣ್ಯಕಾಲ ಎಂಬ ಉಲ್ಲೇಖ ಕುತೂಹಲಕಾರಿಯಾಗಿದ್ದು, ಇದು ಗೋಧೂಳಿ ಕಾಲ ಎಂಬುದರ ಕನ್ನಡ ರೂಪವಾಗಿದೆ. ಇದು ಕನ್ನಡ ಭಷಾ ಅಧ್ಯಯನ ದೃಷ್ಟಿಯಿಂದ ಮಹತ್ವದ್ದಾಗಿದೆ.

ಶಾಸನೋಕ್ತ ಚೌಡರಸ ಮಂತ್ರಿ ಮತ್ತು ಆತನ ಮಗ ಮಲಗರ್ಸ ಒಡೆಯ ತುಳುನಾಡಿನ ಶಾಸನಗಳಲ್ಲಿ ಇದೇ ವೊದಲ ಬಾರಿಗೆ ಉಲ್ಲೇಖಗೊಂಡಿದ್ದು, ವಿಜಯನಗರದ ಆಳ್ವಿಕೆಯ ಕಾಲದಲ್ಲಿ, ಮಲಗರ್ಸ ಒಡೆಯನೆಂಬುವನು ಮಂಗಳೂರು ರಾಜ್ಯವನ್ನು ಆಳುತ್ತಿದ್ದನೆಂಬ ಹೊಚ್ಚ ಹೊಸ ವಿಷಯ ಈ ಶಾಸನದಿಂದ ತಿಳಿದುಬರುತ್ತದೆ.

ಶಾಸನ ಇದೇ ಮೊದಲ ಬಾರಿಗೆ ಆಲಂತಿ ಮರೆ ಮತ್ತು ಕೂವಲಂ ಬಳಿಯ ಮಂತ್ರಿ ಗಿರಿ ಗಂಗ ಹೆಗಡೆ ಯನ್ನು ಉಲ್ಲೇಖಿಸಿದ್ದು, ಇವು ಮದ್ಯಯುಗೀನ ತುಳುನಾಡಿನ ಇತಿಹಾಸ ಮತ್ತು ಸಂಸ್ಕ್ಕೃತಿಯ ಅಧ್ಯಯನಕ್ಕೆ ಹೊಸ ಸೇರ್ಪಡೆಯಾಗಿದೆ.
ಶಾಸನ ದಾನದ ಭೂವಿವರ ಮತ್ತು ಅದರ ಚತುಸ್ಸೀಮೆ ಅಂದರೆ ಮೇರೆಗಳನ್ನು ಉಲ್ಲೇಖಿಸಿ, ದಾನವನ್ನು ಸಂತಾನ ಪರಂಪರೆಯಾಗಿ ಅನುಭವಿಸಿಕೊಂಡು ಬರಬೇಕೆಂದು ಹೇಳಿದೆ. ಯಾವನೊಬ್ಬನು ಅಳುಪಿದರೆ, ವಾರಣಾಸಿಯಲಿ ಸಾವಿರ ಕಪಿಲೆಯ ಸ್ವ ಹಸ್ತದಿಂದ ಕೊಂದ ಪಾಪಕೆ ಹೊಹರು ಎಂಬ ಶಾಪಾಶಯವಿದೆ. ಕೊನೆಯಲ್ಲಿ ಶಾಸನ ಮಂಗಳ ಮಹಾ ಶ್ರೀ ಶ್ರೀ ಶ್ರೀ ಶ್ರೀ ಶ್ರೀ| ಎಂದು ಅಂತ್ಯವಾಗಿದೆ.
ಶಾಸನದ ಕುರಿತು ಮಾಹಿತಿ ಸ್ಥಳಕ್ಕೆ ಕರೆದುಕೊಂಡು ಹೋದ ಬಿ.ಎಂ.ರೋಹಿಣಿ ಅವರು ಶಾಸನವನ್ನು ಕಾಲೇಜ್ಗೆ ತೆಗೆದುಕೊಂಡು ಹೋಗಲು ಅನುಮತಿ ನೀಡಿದ್ದಾರೆ. ಮಾಲತಿ. ವಿ. ಕುರುಪ್, ಶಾಸನವನ್ನು ಕಾಲೇಜಿಗೆ ಸಾಗಿಸುವಲ್ಲಿ ನೆರವಿತ್ತ ಡಾ.ವೈ.ಎನ್.ಶೆಟ್ಟಿ ಹಾಗೂ ಪ್ರೊ.ವೈ.ಭಸ್ಕರ್ ಶೆಟ್ಟಿ, ಶಾಸನದ ಪ್ರತಿ ಮಾಡಿದ ಕಾಲೇಜಿನ ಪುರಾತತ್ವ ವಿಭಾಗದ ವಿದ್ಯಾರ್ಥಿಗಳಿಗೆ ಪ್ರೊ. ಟಿ.ಮುರುಗೇಶಿ ಕೃತಜ್ಞತೆ ಸಲ್ಲಿಸಿದ್ದಾರೆ.

- ಶ್ರೀಪತಿ ಹೆಗಡೆ ಹಕ್ಲಾಡಿ.

1 comments:

Parameshwar Puttanmane said...

ಅರ್ಧೋದಯ ಅಂದರೆ ಗೋಧೂಳೀ ಕಾಲ ಅಲ್ಲ ಅನಿಸುತ್ತೆ... ಅದು ಪುಷ್ಯ ಅಮಾವಾಸ್ಯೇ, ಶ್ರವಣಾ ನಕ್ಷತ್ರ ಮತ್ತು ವ್ಯತೀಪಾತ ಯೋಗ ಕೂಡಿಬಂದ ಕಾಲ...!!!

Post a Comment