ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಮಂಗಳೂರು: ತಾಲೂಕಿನ ಮಿಜಾರು ಸನಿಹದ ಬಡಗ ಎಡಪದವು ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ವಾರ್ಷಿಕ ಉತ್ಸವ ಹಾಗೂ 45ನೇ ಭಜನಾ ಮಂಗಲೋತ್ಸವದ ಅಂಗವಾಗಿ ಪ್ರತಿನಿತ್ಯ ದೇವಳದಲ್ಲಿ ವಿವಿಧ ದೇವತಾ ಕಾರ್ಯಕ್ರಮಗಳಲ್ಲದೆ ನಾಡಿನ ಪ್ರತಿಭಾವಂತ ಮತ್ತು ಹೆಸರಾಂತ ಕಲಾವಿದರು ಹಾಗೂ ಕಲಾ ತಂಡಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಮಾರ್ಚ್ 5ರಂದು ನಾಡಿನ ಹೆಸರಾಂತ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ಬಳಗದವರಿಂದ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಪ್ರಕೃತಿ ರಮಣೀಯ ಪರಿಸರದಲ್ಲಿರುವ ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಳಕ್ಕೆ ಸುಮಾರು 1500ವರ್ಷಗಳ ಇತಿಹಾಸವಿದ್ದು, ತ್ರಿವಳಿ ಲಿಂಗ ಶ್ರೀ ಕ್ಷೇತ್ರದ ವೈಶಿಷ್ಟ್ಯತೆ. ಕಳೆದ ವರ್ಷವಷ್ಟೇ ಊರಪರವೂರ ಭಕ್ತಾದಿಗಳ ಸಹಕಾರದೊಂದಿಗೆ ದೇವಳವು ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ವೈಭವೋಪೇತವಾಗಿ ನೆರವೇರಿತ್ತು. ಇದೀಗ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಬಳಿಕ ಪ್ರಥಮ ಬಾರಿಗೆ ಶ್ರೀ ದೇವರ ವಾರ್ಷಿಕ ಮಹೋತ್ಸವ ಹಾಗೂ ಭಜನಾ ಮಂಗಲೋತ್ಸವ, ಶ್ರೀ ಭೂತನಾಥನ ಸನ್ನಿಧಿಯಲ್ಲಿ ನಡೆಯುತ್ತಿದೆ.ಮಾರ್ಚ್ 5ರ ಶನಿವಾರ ಅಪರಾಹ್ನ ಘಂಟೆ 2ಕ್ಕೆ ದಕ್ಷಿಣಕನ್ನಡ ಜಿಲ್ಲಾ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಮತ್ತು ಶಾಸ್ತಾವು ಶ್ರೀ ಭೂತನಾಥೇಶ್ವರ ಕ್ರೀಡೋತ್ಸವ ಸಮಿತಿ, ಬಡಗ ಎಡಪದವು, ಮಿಜಾರು ಇವುಗಳ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡೆಗಳಲ್ಲಿ ವಿಜೇತರಾದ ಹಾಗೂ ಭಾಗವಹಿಸಿದ ದಕ್ಷಿಣಕನ್ನಡ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ ಕ್ರೀಡಾಪಟುಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಆ ಬಳಿಕ ಸಂಜೆ ಘಂಟೆ 6ರಿಂದ ಫೆಬ್ರವರಿ 12ಮತ್ತು 13ರಂದು ಜರುಗಿದ `ಶ್ರೀ ಭೂತನಾಥೇಶ್ವರ ಕ್ರೀಡೋತ್ಸವ'ದಲ್ಲಿ ವಿಜೇತರಾದವರಿಗೆ ನಗದು ಬಹುಮಾನ ವಿತರಣಾ ಸಮಾರಂಭ ಜರುಗಲಿದ್ದು, ಸಮಾರಂಭದ ವಿಶೇಷ ಅತಿಥಿಯಾಗಿ ಕನ್ನಡ ಚಿತ್ರರಂಗದ ನಾಯಕ ನಟ ವಿಜಯ ರಾಘವೇಂದ್ರ, ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ನ 7ನೇ ಬೆಟಾಲಿಯನ್ನ ಕಮಾಂಡೆಂಟ್ ಎಸ್.ರಾಮದಾಸ್ ಗೌಡ, ಮಂಗಳೂರು ಪ್ರಾದೇಶಿಕ ಅಗ್ನಿಶಾಮಕ ದಳದ ಮುಖ್ಯ ಅಗ್ನಿಶಾಮಕ ಅಧಿಕಾರಿ ಎಸ್.ವರದರಾಜನ್ ಅವರು ಪಾಲ್ಗೊಳ್ಳಲಿರುವರು.

ರಸಮಂಜರಿ: ಮಾರ್ಚ್ 5ರಂದು ಸಂಜೆ ಘಂಟೆ 8.30ರಿಂದ 10.30ರವರೆಗೆ ನಾಡಿನ ಹೆಸರಾಂತ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ಬಳಗದವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಜರುಗಲಿದೆ. ದೇವಳದ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿ ಹಮ್ಮಿಕೊಳ್ಳಲಾಗಿದ್ದ ಗುರುಕಿರಣ್ ಮತ್ತು ಬಳಗದವರ ರಸಮಂಜರಿ ಕಾರ್ಯಕ್ರಮ, ಊರಪರವೂರ ಅಪಾರ ಸಂಖ್ಯೆಯ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಊರವರ ಒತ್ತಾಸೆಯಂತೆ ಈ ಬಾರಿಯೂ ಗುರುಕಿರಣ್ ಮತ್ತು ಬಳಗದವರಿಂದ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಪ್ರಧಾನ ಸಂಘಟಕರಾದ ವಿಜಯನಾಥ ವಿಠಲ ಶೆಟ್ಟಿ ಮುಂಡಬೆಟ್ಟು ತಿಳಿಸಿದ್ದಾರೆ. ರಸಮಂಜರಿ ಕಾರ್ಯಕ್ರಮದ ಬಳಿಕ ಶ್ರೀ ದೇವಳದಿಂದ ಮೂಡಬಿದ್ರೆ ಹಾಗೂ ಮಂಗಳೂರಿಗೆ ವಿಶೇಷ ಬಸ್ನ ವ್ಯವಸ್ಥೆಯನ್ನು ಮಾಡಲಾಗಿದೆ ಎಂದೂ ಅವರು ತಿಳಿಸಿದ್ದಾರೆ. ಮಾರ್ಚ್ 6ರಂದು ಸನಾತನ ನಾಟ್ಯಾಲಯ, ಮಂಗಳೂರು ಇವರು ಪ್ರಸ್ತುತ ಪಡಿಸುವ `ರಾಷ್ಟ್ರದೇವೋಭವ' ನೃತ್ಯ ಕಾರ್ಯಕ್ರಮ, ಮಾ. 7ರಂದು ಶ್ರೀ ದುರ್ಗಾ ನೃತ್ಯಾಂಜಲಿ ಪ್ರಸ್ತುತ ಪಡಿಸುವ ಅಂತಾರಾಷ್ಟ್ರೀಯ ನೃತ್ಯ ಕಲಾವಿದೆ ಡಾ|ವಸುಂಧರಾ ದೊರೆಸ್ವಾಮಿ ಇವರ ಶಿಷ್ಯರಾದ ಪೆರ್ಮಂಕಿ ಸುರೇಶ ಕಾರಂತ ಮತ್ತು ಬಳಗದವರಿಂದ `ಶನಿ ಪ್ರಭಾವ' ವಿನೂತನ ಶೈಲಿಯ ನೃತ್ಯ ರೂಪಕ ನಡೆಯಲಿದೆ. 8ರಂದು ಸಂಜೆ ಘಂಟೆ 7.30ರಿಂದ ಮರುದಿನ ಬೆಳಿಗ್ಗೆವರೆಗೆ ಭಜನಾ ಮಂಗಲೋತ್ಸವ ನೆರವೇರಲಿದೆ. 9ರಂದು ಸಂಜೆ ಘಂಟೆ 8.00ರಿಂದ ಸುರೇಂದ್ರ ಕುಮಾರ್, ಕಲತ್ರಪಾದೆ ವಿರಚಿತ ಉತ್ಸಾಹಿ ಕಲಾವೃಂದ, ಶಾಸ್ತಾವು ಇದರ ಉತ್ಸಾಹಿ ಕಲಾವಿದರು ಅಭಿನಯಿಸುವ ತುಳು ನಾಟಕ `ಬಾಜೆಲ್ ಬಾಬು' ಹಾಗೂ 10ರಂದು ಲಯನ್ ಕಿಶೋರ್ ಡಿ.ಶೆಟ್ಟಿ ಅವರ ಲಕುಮಿ ತಂಡದ ಕುಸಲ್ದ ಕಲಾವಿದರಿಂದ ನವೀನ್ ಶೆಟ್ಟಿ ಅಳಕೆ ವಿರಚಿತ `ಒಯ್ಕ್ಲಾ ಯೋಗ ಬೋಡು' ತುಳು ನಾಟಕ ಪ್ರದರ್ಶನಗೊಳ್ಳಲಿದೆ.

ಕಬಡ್ಡಿ ಪಂದ್ಯಾಟ: ಏಪ್ರಿಲ್ 22, 23 ಮತ್ತು 24ರಂದು ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನದ ಆವರಣದಲ್ಲಿ ಪುರುಷರು ಮತ್ತು ಮಹಿಳೆಯರಿಗಾಗಿ ಅಂತರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟ ಹಾಗೂ ಹಳ್ಳಿ ಕಬಡ್ಡಿ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ. ಅಂತರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯ ಪ್ರಥಮ ವಿಜೇತ ತಂಡಕ್ಕೆ 1 ಲಕ್ಷ ರೂಪಾಯಿ ಮತ್ತು ಟ್ರೋಫಿ, ದ್ವಿತೀಯ ಸ್ಥಾನಿ ತಂಡಕ್ಕೆ 50ಸಾವಿರ ರೂಪಾಯಿ ಮತ್ತು ಟ್ರೋಫಿ ಮತ್ತು ತೃತೀಯ ಸ್ಥಾನಿ ತಂಡಕ್ಕೆ ಟ್ರೋಫಿ ಮತ್ತು 25,000ರೂಪಾಯಿ ನಗದು ಬಹುಮಾನವನ್ನು ನೀಡಲಾಗುವುದು. ಹಳ್ಳಿ ಕಬಡ್ಡಿ ಪಂದ್ಯಾವಳಿಯ ಪ್ರಥಮ ವಿಜೇತ ತಂಡಕ್ಕೆ ಟ್ರೋಫಿ ಮತ್ತು 50,000ರೂಪಾಯಿ, ದ್ವಿತೀಯ ವಿಜೇತ ತಂಡಕ್ಕೆ ಟ್ರೋಫಿ ಮತ್ತು 25,000ರೂಪಾಯಿ, ತೃತೀಯ ತಂಡಕ್ಕೆ ಟ್ರೋಫಿ ಮತ್ತು 10,000ರೂಪಾಯಿ ಮತ್ತು ಚತುರ್ಥ ವಿಜೇತ ತಂಡಕ್ಕೆ 5,000ರೂಪಾಯಿ ನಗದು ಮತ್ತು ಟ್ರೋಫಿ ಲಭಿಸಲಿದೆ. ಹಳ್ಳಿ ಕಬಡ್ಡಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಎಲ್ಲಾ ತಂಡಗಳ ಆಟಗಾರರು ತಮ್ಮ ಗ್ರಾಮೀಣ ವಾಸ್ತವ್ಯದ ಬಗೆಗೆ ಧೃಢೀಕರಣ ಪತ್ರವನ್ನು ಪ್ರವೇಶಪತ್ರದೊಂದಿಗೆ ಲಗತ್ತಿಸತಕ್ಕದ್ದು. ಪುರುಷ ಆಟಗಾರರು ಬಿಳಿ ಕಚ್ಚೆ ಮತ್ತು ತಲೆಗೆ ಮುಂಡಾಸನ್ನು ಮಾತ್ರ ಧರಿಸಿ, ಉಳಿದಂತೆ ಬರೀ ಮೈಯಲ್ಲಿ ಆಡಬೇಕು. ಮಹಿಳಾ ಆಟಗಾರರಿಗೆ ಸಲ್ವಾರ್ ಕಡ್ಡಾಯ. ಪ್ರತೀ ತಂಡಕ್ಕೆ ಪ್ರವೇಶ ಶುಲ್ಕ 100ರೂಪಾಯಿಗಳಾಗಿದ್ದು, ಮಾರ್ಚ್ 20ರಿಂದ ದೇವಸ್ಥಾನದಲ್ಲಿ ಪ್ರವೇಶಪತ್ರಗಳು ಲಭ್ಯವಾಗಲಿದೆ. ಅಗತ್ಯವಿರುವ ಎಲ್ಲಾ ದಾಖಲಾತಿ ಹಾಗೂ ವಿವರಗಳೊಂದಿಗೆ ಭರ್ತಿ ಮಾಡಿದ ಪ್ರವೇಶ ಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 10.

0 comments:

Post a Comment