ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

`ಹೋಗುವೆನು ನಾ' - ಕುವೆಂಪು ಕವನ; ಕೆ.ವಿ. ಶಿಶಿರ ದೃಶ್ಯ ಶ್ರಾವ್ಯ -ಒಂದು ಅವಲೋಕನ

ಭಾಗ ಒಂದು

ರಾಷ್ಟ್ರ ಕವಿ ಕುವೆಂಪು ಅವರ ಕವನ `ಹೋಗುವೆನು ನಾ' ಬಯಲು ಸೀಮೆಯ ಬಾಳಿಗೆ ಬೇಸರಾಗಿ ತನ್ನೂರನ್ನು ನೆನೆಯುತ್ತಾ ಮರಳಿ ಅಲ್ಲಿಗೆ ಹೋಗುವೆನೆನ್ನುವ ಕವಿ ಹೃದಯದ ಆಶಾಗೀತೆಯಾಗಿದೆ. ಮಲೆನಾಡಿನ ಸೊಬಗಿನ ಬಗೆ ಕವಿ ವರ್ಣಿಸುತ್ತಾ ಅಲ್ಲಿ ಏನಿಲ್ಲ, ಏನಿದೆಯೆಂದು ತಿಳಿಸುತ್ತಾ ಮಲೆನಾಡಿನ ಸಮೃದ್ಧ ಜೀವ ಚರಗಳ ಕಡೆಗೆ ಓದುಗನನ್ನು ಕರೆದೊಯ್ಯುತ್ತಾನೆ.

ಇದು ಸುಮಾರು 1935 ರಲ್ಲಿ ಬರೆದಿರುವ ಕವನ. ಆಗಿನ ಮಲೆನಾಡು ಕವಿತೆಯಲ್ಲಿ ವರ್ಣಿಸಿದಂತೆ ಇದ್ದಿರಬಹುದು. ಆದರೆ ಕುವೆಂಪು ಅವರ ಇತರ ಕೃತಿಗಳಲ್ಲಿ ಬರುವ ಮಲೆನಾಡಿನ ವರ್ಣನೆಯಲ್ಲಾಗಲಿ, ಅವರ ಕಾದಂಬರಿಗಳಲ್ಲಾಗಲಿ ಇರುವ ಮಲೆನಾಡು ಬೇರೆಯದೇ ಆಗಿದೆ. ಆದ್ದರಿಂದ ಇದೊಂದು ಅಮೂರ್ತ ಕಾವ್ಯವಾಗಿ ಉಳಿಯುತ್ತದೆ. ಇಂತೊಂದು ಕವನ ಕೆ.ವಿ, ಶಿಶಿರರಂತಹ ಯುವ ಹೃದಯದಲ್ಲಿ ಮೆಲುಕು ಹಾಕುವಂತಹ ಮೆಲೊಡಿಯೊಂದಿಗೆ ದೃಶ್ಯ ಕಾವ್ಯವಾಗಿ ಮೂಡಿ ಬಂದಿದೆ. ನಿಜಕ್ಕೂ ಇದು ಅಭಿನಂದನೀಯ ಕೆಲಸ. ಇಲ್ಲಿ ಕವಿಯ ವರ್ಣನೆಯಲ್ಲಿರುವ ಮಲೆನಾಡನ್ನು ತೋರಿಸುವ ಪ್ರಯತ್ನವಿಲ್ಲ, ಆದರೂ ಇದು ಶ್ರೀಮಂತಿಕೆಯಿರುವ ದೃಶ್ಯಕಾವ್ಯ. ಯಾಕೆಂದರೆ `ಬಿಂಬ' ಅನ್ನುವುದು ವ್ಯಕ್ತಿಯ ಸೃಜನಶೀಲತೆಗೆ ಹಿಡಿದ ಕನ್ನಡಿ. ಇಲ್ಲಿಯ ಯುವ ಹೃದಯಿಯ ಬಿಂಬದಲ್ಲಿ ಮೂಡಿದ್ದ ಸೃಜನಶೀಲತೆ, ಮಧುರವಾದ ದನಿಯೊಂದಿಗೆ ಮತ್ತು ಈಗಿನ ಮಲೆನಾಡಿನ ಪರಿಸರಕ್ಕೆ ಚಿರಸ್ಥಾಯಿಯಾಗಿ ಗುನುಗುನಿಸುವಂತಿದೆ.

`ಹೋಗುವೆನು ನಾ' ಕವನದಲ್ಲಿ ಕವಿ ಕಟ್ಟಿಕೊಡುವ ಮಲೆನಾಡು ಇಂದಿಗೆ ಕಾಣಸಿಗುವುದು ಅಸಾಧ್ಯ. ಹಾಗಾಗಿ ಈ ಕವಿತೆ ಒಂದು ಅಮೂರ್ತವಾದ ಗೀತೆಯಾಗಿ ಉಳಿಯುತ್ತದೆ. ಇಲ್ಲಿಯ ಅಮೂರ್ತತೆ ಏನಿದೆ ಅದು ಕೇವಲ ಮಲೆನಾಡಿಗರಿಗೆ ಮತ್ತು ಮಲೆನಾಡಿಗೆ ಮಾತ್ರ ಸೀಮಿತವಲ್ಲ. ಅದು ಪ್ರತೀಯೊಬ್ಬನ್ನು ತನ್ನೂರಿಂದ ದೂರವಿದ್ದು, ಅಲ್ಲಿಯ ಜೀವನದ ಯಾಂತ್ರಿಕತೆಗೆ ತನ್ನನ್ನು ತಾನು ಒಗ್ಗಿಸಿಕೊಂಡು ಬದುಕುವ ಅನಿವಾರ್ಯವಿದ್ದಾಗ, ಎಲ್ಲೋ ಮನದ ಮೂಲೆಯಲ್ಲಿ ಇಂದಲ್ಲ, ನಾಳೆ ಮತ್ತೆ ಊರಿಗೆ ಹಿಂತಿರುಗಿ ಅಲ್ಲೇ ಉಳಿದು ಬಿಡುವ ಆಶಯವನ್ನು ಹೊಂದಿರುವ ಹಾಗೆ ಕಾಡುತ್ತಲೇ ಇರುತ್ತದೆ. ಈ ಆಶಯವೇನಿದೆ ಅದು ನಡೆಯಬಹುದು, ಇಲ್ಲ ನಡೆಯದೆಯೂ ಇರಬಹುದು. ಆದರೂ ಅವನಲ್ಲಿ ಜೀವಕಳೆಯನ್ನು ತುಂಬುವ ಈ `ಮರಳಿ ಊರಿಗೆ ಸೇರುವ ಆಶಯ' ಮತ್ತೆ ಮತ್ತೆ ಅವನಲ್ಲಿ ಲವಲವಿಕೆಯನ್ನು ತುಂಬಿಸುವ ವಿಷಯವಾಗಿರುತ್ತದೆ.

ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ;
ಮಲೆಯ ನಾಡಿಗೆ, ಮಳೆಯ ಬೀಡಿಗೆ, ಸಿರಿಯ ಚೆಲುವಿನ ರೂಢಿಗೆ.
ಬೇಸರಾಗಿದೆ ಬಯಲು, ಹೋಗುವೆ ಮಲೆಯ ಕಣಿವೆಯ ಕಾಡಿಗೆ;
ಹಸುರು ಸೊಂಪಿನ ಬಿಸಿಲು ತಂಪಿನ ಗಾನದಿಂಪಿನ ಕೂಡಿಗೆ!

ಬೇಸರಾಗಿದೆ ಬಯಲು ಸೀಮೆಯ ಬೋಳು ಬಯಲಿನ ಬಾಳಿದು,
ಬಿಸಿಲು, ಬೇಸಗೆ, ಬೀಸುವುರಿಸೆಕೆ; ತಾಳಲಾರದ ಗೋಳಿದು!
ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ;
ಬಿಳಿಯ ತಿಂಗಳ ಸಿರಿ ಬನಂಗಳ ಮಲೆಯ ಮಂಗಳ ನಾಡಿಗೆ!

ಮೇಲಿನ ನಾಲ್ಕು ಸಾಲುಗಳಲ್ಲಿ ಕವಿ ಮಲೆನಾಡಿನ ಮಳೆಯನ್ನು, ಸಿರಿಯ ಚೆಲುವನ್ನು, ಕಣಿವೆಯ ಕಾಡನ್ನು, ಹಸಿರು ಸೊಂಪಿನ ತಂಪಿನ ಗಾನಲೋಕವನ್ನು ನೆನೆಯುತ್ತಾ ಬಯಲು ಸೀಮೆಯ ಉರಿಸೆಕೆಯನ್ನು ತಾಳಲಾಗದೆ ಮತ್ತೆ ಮಲೆನಾಡಿಗೆ ಹಿಂತಿರುಗುವ ಅದಮ್ಯ ಬಯಕೆಯನ್ನು ವ್ಯಕ್ತಪಡಿಸುತ್ತಾನೆ.

ಇದೇ ಗೀತೆ ನೆನಪಾಗಿ ಉಳಿದ ಗಾಯಕ ಸುಭಾಷ್ ಹಾರೆಗೊಪ್ಪ ಅವರ ಮಧುರ ಕಂಠದಿಂದ ಹೊರ ಹೊಮ್ಮಿ ಅಮೂರ್ತವಾದ ಕವಿತೆಯಂತೆ ಅಮೂರ್ತವಾದ ಸನ್ನಿವೇಶದಲ್ಲಿ ಹಸಿರು ವನರಾಶಿಯ ಮೇಲೆ ಹಾಯ್ದು ಸವೆದ ಬದುಕಿನಂತೆ ಕಾರಿನ ಗಾಲಿಗಳ ಉರುಳುವಿಕೆಯಲ್ಲಿ ಮುಂದೆ ಸಾಗುತ್ತದೆ. ಇಲ್ಲೆಲ್ಲೋ ಒಂದು ಆಶಯ ಮಲೆನಾಡಿನತ್ತ ಮುಖ ಮಾಡಿದಂತೆ ಕಂಡರೂ ಅದು ಅದಮ್ಯ ಚೇತನದ ಹೊರಳು ಹಾದಿಯಂತೆ ಕಾಣುತ್ತದೆ. ತಟ್ಟನೆ ಕವಿತೆ ನಿಂತು ಬಿಟ್ಟಂತೆ ಬೇಸರದ ದನಿಯೊಂದು ಬೋಳು ಬಯಲಿನ ಬಾಳು, ಬಿಸಿಲು, ಬೇಸಗೆ, ಸೆಕೆಯ ತಾಳಲಾರದ ಗೋಳನ್ನು ಬಿಚ್ಚುಡುತ್ತಲೇ ದೃಶ್ಯದಲ್ಲಿಯೂ ಒಣ ಭೂಮಿ, ಚೇತನವಿಲ್ಲದ ನೆರಳು, ಬಿಸಿಲಿನ ನೇರ ನೋಟವಿಲ್ಲದ ನೀರ ಬಿಂಬ, ಒಂಟಿತನದ ನೋವು ತೆರೆಯ ಮೇಲೆ ಅಚ್ಚೊತ್ತಿ ನಿಲ್ಲುತ್ತವೆ.

ಒಂದು ನಿಮಿಷದ ದೃಶ್ಯ ಶ್ರಾವ್ಯದೊಂದಿಗೆ ಬಯಲು ಸೀಮೆಯ ನೋವು ಕಣ್ಣೆದುರು ಪ್ರತ್ಯಕ್ಷವಾಗುತ್ತದೆ. ಇಲ್ಲಿ ಓಡುವ ಕ್ಯಾಮರಾದ ಕಣ್ಣು ಲವಲವಿಕೆಯದ್ದು.
ಹಸಿರು ವನರಾಶಿಯನ್ನು ಸೀಳಿ ಸಾಗುವ ಅಚಲ ರಸ್ತೆಯ ಹಾದಿ ಮತ್ತೆ ಬದುಕಿನ ನವಚೈತನ್ಯದ ರೂಪಕವಾಗಿ ಕಾಣಿಸುವುದು ಕವನದ ದೃಶ್ಯಾವಳಿಗೆ ಶ್ರೀಮಂತಿಕೆಯನ್ನು ತುಂಬುವಂತಿದೆ.
ತುಂಗೆಯ ಪರಿಶುದ್ಧ ನೀರು, ಸ್ವಚ್ಛತೆಯ ಸಂಕೇತವಾಗಿಯೂ; ಬೋಳು ಹುಡುಗನ ಮುಗ್ಧತೆಯ ಸ್ವಚಂದ ನೀರಾಟ ಶೋಷಣೆಗೊಳಗಾಗದ ಶ್ರೀಮಂತ ಮಲೆನಾಡಿನ ರೂಪಕವಾಗಿಯೂ ಕಾಣಿಸುವ ನಿರ್ದೇಶಕ ಮತ್ತೆ ಕವನದಲ್ಲಿ ಕಾಣುವ ಕವಿ ವಿವರಣೆಯ ಮಲೆನಾಡೇನೋ ಅನ್ನುವಂತೆ ಭಾವಿಸುತ್ತದೆ. ಮುಂದೆ ಸಾಗುವಾಗಿನ ನೀರ ಮೇಲೆ ಬಿಟ್ಟ ಅಲೆಗಳು ಹಿಂತಿರುಗಿ ಬಾರದ ಪ್ರಕೃತಿಯ ಕಾಣ್ಕೆಯಾಗಿದೆ. ಜೀವಜಲದ ಬಾಯಾರಿಕೆಯೆನ್ನುವುದನ್ನು ತಿಳಿಸುವ ಹಾಗೆ ಮತ್ತೆ ಮುಗ್ಧತೆಗೆ ಮರಳುತ್ತದೆ ನೋಟ.

ಅಲ್ಲಿ ಇಂತಿರಬೇಕು, ಇಂತಿರಬಾರದೆಂಬುವುದಿಲ್ಲವೈ;
ಅಲ್ಲಿ ಹೊರೆ ಹೊಣೆಯಿಲ್ಲ; ಶಾಸ್ತ್ರದ ವಿಧಿ ನಿಷೇಧಗಳಿಲ್ಲವೈ;
ಜಾತಿಗೀತಿಯ ವೇದಭೇದದ ಕಟ್ಟು ಕಟ್ಟಳೆ ನಿಲ್ಲದೈ;
ಅಲ್ಲಿ ಪ್ರೀತಿಯೆ ನೀತಿ; ಧರ್ಮಕೆ ಬೇರೆ ಭೀತಿಯೆ ಸಲ್ಲದೈ!

ಈ ಮೇಲಿನ ಪಂಕ್ತಿಗಳಲ್ಲಿ ವರ್ಣಿಸಿರುವ ಮಲೆನಾಡು ಯಾವುದು? ಮಲೆನಾಡಿನಲ್ಲಿ ಇಂತಹ ವಿಧಿ ನಿಷೇಧಗಳಿಲ್ಲವೆ? ಜಾತಿಗೀತಿಗಳಿಲ್ಲವೆ? ಇದು ಅಮೂರ್ತವಾಗಿರುವಂತಹುದು. ಆದರೆ ಮಲೆನಾಡಿನ ಸೌಂದರ್ಯದ ನಡುವೆ ಇವೆಲ್ಲವೂ ಗೌಣ್ಯವೆನ್ನುವುದು ಕವಿಹೃದಯದ ಮಾತಾಗಿರಬಹುದು. ಈ ಸಾಲುಗಳು ಹಾಗೆ ಉಳಿದು ಮುಂದೆ ಮತ್ತೆ ಪ್ರಕೃತಿಯ ನಡುವೆ ಕವಿ ಕರೆದೊಯ್ಯುದು ನಿಲ್ಲಿಸುತ್ತಾನೆ.

ಅಲ್ಲಿ ತೆರೆಯದ್ರಿ ಪಂಕ್ತಿಗಳೆಲ್ಲೆ ಕಾಣದೆ ಹಬ್ಬಿವೆ;
ನಿಬಿಡ ಕಾನನರಾಜಿ ಗಿರಿಗಳನಪ್ಪಿ ಸುತ್ತಲು ತಬ್ಬಿವೆ.
ದೆಸೆಯ ಬಸವನ ಹಿಣಿಲ ಹೋಲಿವೆ; ಮುಗಿಲ ಚುಂಬನಗೈದಿವೆ
ತುಂಗ ಶೃಂಗಗಳಲ್ಲಿ; ದಿಕ್ತಟದಲ್ಲಿ ಸೊಂಡಿಲ ನೆಯ್ದಿವೆ!

ರವಿಯ ರಶ್ಮಿಯ ಪ್ರಜ್ಞೆಯಿಲ್ಲದ ವಿಪಿನ ನಿರ್ಜನ ರಂಗಕೆ,
ಮುಗಿಲನಂಡಲೆಯುತ್ತ ನಿಂತಿಹ ಧೀರ ಪರ್ವತ ಶೃಂಗಕೆ,
ವನ ವಿಹಂಗಸ್ವನ ತರಂಗಿತ ಪವನ ಪಾವನ ಸಂಗಕೆ,
ಹೋಗುವೆನು ನಾ ಮಧುರ ಸುಂದರ ಶೈಲವನ ಲಲಿತಾಂಗಕೆ!

ನಿಬಿಡ ಕಾಡು ಗಿರಿಗಳನ್ನು ತಬ್ಬಿ ನಿಂತಲ್ಲಿಗೆ, ರವಿಯ ರಶ್ಮಿಯ ತೀವ್ರತೆಯಿಲ್ಲದ ನಿರ್ಮಾನುಷವಾದ ಶೈಲವನಕ್ಕೆ ಹೋಗುವ ಕವಿಯ ಮನಸ್ಸು ತನ್ನ ಹಿಂದಿನ ದಿನಗಳಲ್ಲಿ ಓಡಾಡಿದ ಮಲೆನಾಡನ್ನು ನೆನಪಿಸುತ್ತದೆ. ಸ್ವಚಂದವಾಗಿ ಹರಿಯುವ ತುಂಗೆಯ ನೋಟ ಕಣ್ಣಿಗೆ ತಂಪು ತಂದಷ್ಟೇ, ಕಣಿವೆಯಾಚೆಯ ಗಿರಿಗಳ ಸಾಲು ಮೋಹಕವಾಗಿ ಬಿಡುತ್ತದೆ. ಯಾಂತ್ರಿಕತೆಯ ಹೊಳಹು ಕ್ಷುಲ್ಲಕವೆನಿಸಿ, ರವಿಯ ರಶ್ಮಿಯಿಲ್ಲದ ನಿರ್ಜನ ಪ್ರದೇಶಕ್ಕೆ, ಪರ್ವತಗಳ ತುದಿಗೆ ಹೋಗಿಯೇ ಬಿಡುವ ಕ್ಯಾಮರಾ ಕಣ್ಣು ಕಟ್ಟಿಕೊಡುವುದು ಸುಂದರವಾದ ಮಲೆನಾಡಿನ ಚೌಕದ ಮನೆಯನ್ನು. ಹೆಬ್ಬಾಗಿಲಿನಿಂದಾಚೆಗೆ ಬೀಳುವ ಬೆಳಕು ಕಪ್ಪು ಬಿಳುಪಿನ ಅದ್ಭುತ ದೃಶ್ಯವನ್ನು ಸೃಷ್ಟಿಸಿ ಛಾಯಾಚಿತ್ರಗ್ರಾಹಕನ ಕೈಚಳಕವನ್ನು ತೋರಿಸುತ್ತದೆ. ಮತ್ತೆ ಹಸಿರು ಪೈರುಗಳು, ಪಂಕ್ತಿಯ ನಡುವೆ ಬೆಳ್ಳಕ್ಕಿಗಳ ಸಾಲು, ಅದೇ ಹಾರಾಟದ ನಡುವೆ ಸಾಗುತ್ತಾ ನೆಲದ ಮೇಲೆ ಕುಳಿತುಕೊಳ್ಳುವ ನಿಟ್ಟುಸಿರಿನಂತೆ ಕಾಣುವ ವೈಭವ ಮಲೆನಾಡಿನ ಮತ್ತೊಂದು ಮಗ್ಗುಲನ್ನು ತೋರಿಕೊಡುತ್ತದೆ.

ಅಲ್ಲಿ ಇವೆ ಕಾಜಾಣ, ಕೋಗಿಲೆ, ತೇನೆ, ಗಿಳಿ, ಕಾಮಳ್ಳಿಯು;
ಕಂಪೆಸೆವ ಸೀತಾಳಿ, ಕೇದಗೆ, ಬಕುಳ, ಮಲ್ಲಿಗೆ ಬಳ್ಳಿಯು.
ನೀಲಿ ಬಾನಲಿ; ಹಸುರು ನೆಲದಲಿ; ಕಂಗಳೆರಡನೆ ಬಲ್ಲವು;
ಅಲ್ಲಿ ಸಗ್ಗವೆ ಸೂರೆ ಹೋಗಿದೆ; ನಂದನವೆ ನಾಡೆಲ್ಲವು!

ನೆಳಲುಗತ್ತಲೆ ತೀವಿದಡವಿಯ ಹೊದರು ಹಳುವಿನ ಸರಲಲಿ
ಹುಲಿಯ ಗರ್ಜನೆ, ಹಂದಿಯಾರ್ಭಟೆ; ಕಾಡುಕೋಲಿಯ ಚೀರುಲಿ;
ದೊಡ್ಡು, ಕಡ, ಮಿಗ, ಮುಸಿಯ, ಕೋಡಗ, ಎರಳೆ, ಸಾರಗ, ಬರ್ಕವು,
ಹಾವು, ಉಡ, ಕಣೆಹಂದಿ, ಚಿಪ್ಪಿನ ಹಂದಿ, ಮುಂಗುಸಿ, ಕುರ್ಕವು!

ಬರಿಯ ಹೆಸರುಗಳಲ್ಲ, ನನಗಿವು ಸಾಹಸಂಗಳ ಕಿಡಿಗಳು;
ಕಂಡು ಕೇಳಿದ ಕಥೆಯನೊಡಲೊಳಗಾಂತ ಮಂತ್ರದ ನುಡಿಗಳು!
ಮಗುವುತನದಿಂದಿಂದುವರೆಗಾ ಒಂದು ಹೆಸರಿನ ಚೀಲಕೆ
ಸೇರಿ ಅನುಭವ ನೂರು ಕಲ್ಪನೆ, ಬಡ್ಡಿ ಮೀರಿದೆ ಸಾಲಕೆ!

ಕವಿ ಮಲೆನಾಡಿನ ಜೀವರಾಶಿಗಳ ಬಗ್ಗೆ ಹೇಳುತ್ತಾ ಅವೆಲ್ಲವೂ ಸಾಹಸದ ಕಿಡಿಗಳಾಗಿ ಚಿತ್ರಿಸಿಕೊಳ್ಳುತ್ತಾನೆ. ಹಲವು ಬಗೆಯ ಪುಷ್ಪಗಳು, ಅವುಗಳ ಕಂಪು ಮಲೆನಾಡನ್ನೆ ಸುವಾಸಿತವನ್ನಾಗಿಸಿದಂತೆ ಬೆರಗಾಗುತ್ತಾ, ಸ್ವರ್ಗವೇ ಅಲ್ಲಿರುವಂತೆ ಕಾಣುತ್ತದೆ. ಗಂಡಬೇರುಂಡ, ಶಾರ್ದೂಲಗಳಂತೆ ಅಳಿವಿನಂಚಿಗೆ ಸಾಗಿದ ಹುಲಿ, ಉಡಗಳನ್ನು ಕವಿ ಮಲೆನಾಡಿನಲ್ಲಿ ಕಂಡು ಅವುಗಳ ಬಗ್ಗೆ ವರ್ಣಿಸುತ್ತಾನೆ. ಆದರೆ ಈಗಿನ ಮಲೆನಾಡಿನಲ್ಲಿ ಅವೆಲ್ಲವೂ ವಿರಳ! ಮೇಲಿನ ಕವನದ ಸಾಲುಗಳು ಮಲೆನಾಡಿನ ಅನಂತ ಅನುಭವದ ನೂರು ಕಲ್ಪನೆ ಅವನ ಮನದಲ್ಲಿ ಅಚ್ಚೊತ್ತಿ ನಿಂತಿರುವುದನ್ನು ಹೇಳಿವೆ.

(ಮುಂದುವರೆಯುತ್ತದೆ)

ದೃಶ್ಯ ಕೃಪೆ : ಕೆ. ವಿ. ಶಿಶಿರ
ರೂಪದರ್ಶಿ : ಸುಬಾಷ್ ಹಾರೆಗೊಪ್ಪ

- ಅನು ಬೆಳ್ಳೆ

0 comments:

Post a Comment