ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
4:07 PM

ಅಸ್ಪೃಶ್ಯರು

Posted by ekanasu

ಸಾಹಿತ್ಯ
ವೈದೇಹಿಯವರ 'ಅಸ್ಪೃಶ್ಯರು' ಕಾದಂಬರಿ , ಮಂಗಳೂರು ವಿಶ್ವವಿಧ್ಯಾನಿಲಯದಲ್ಲಿ ಪದವಿ ತರಗತಿಗೆ ಪಠ್ಯಪುಸ್ತಕವಾಗಿದೆ.ಇದೀಗ ಈ ಕನಸು.ಕಾಂ ಮೂಲಕ ಜಗತ್ತಿನೆಲ್ಲೆಡೆ ಇರುವ ಕನ್ನಡಿಗರ ಮನೆ ಮನಕ್ಕೆ ಈ ಕಾದಂಬರಿ ತಲುಪಲಿದೆ. ಇತ್ತೀಚೆಗೆ ಮೂಡಬಿದಿರೆಯಲ್ಲಿ ನಡೆದ ಆಳ್ವಾಸ್ ನುಡಿಸಿರಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿ ಮೂರು ದಿನಗಳ ಕಾಲ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಹಿರಿಮೆ ಇವರದ್ದು. 'ವೈದೇಹಿಯವರ ಸಣ್ಣ ಕಥೆಗಳು' ಬೆಂಗಳೂರು ವಿಶ್ವವಿಧ್ಯಾನಿಲಯದ ಪದವಿ ತರಗತಿಗೆ ಪಠ್ಯಪುಸ್ತಕವಾಗಿದೆ. ಹಲವಾರು ಸಣ್ಣ ಕಥೆಗಳು ಹಿಂದಿ, ಮಲೆಯಾಳಂ, ತಮಿಳು, ತೆಲುಗು, ಗುಜರಾತಿ ಭಾಷೆಗಳಿಗೆ ಅನುವಾದಿವಾಗಿವೆ.ಇಂದಿನಿಂದ ವೈದೇಹಿಯವರು ಈ ಕನಸಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಓದುಗ ಮಿತ್ರರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಪ್ರೀತಿಯಿಂದ ಕಳುಹಿಸಿ...ಸಂ.ಅಸ್ಪೃಶ್ಯರು ಅಂದರೆ,"ಮುಟ್ಟಬಾರದ" ಎಂಬುದು ರೂಢಿಗತ ಅರ್ಥ; `ಮುಟ್ಟಲಾಗದ' ಎಂದೂ ಅದನ್ನು ಅರ್ಥೈಸಬಹುದು. ಈ ಎರಡೂ ಅರ್ಥದ ಅಸ್ಪೃಶ್ಯತೆಗಳನ್ನು ಈ ಕಾದಂಬರಿಯಲ್ಲಿ ಚಿತ್ರಿಸಲಾಗಿದೆ. ವೈದೇಹಿಯವರ ಈ ಕಾದಂಬರಿಯಲ್ಲಿ ಜಾತಿ ಜಾತಿಗಳ ನಡುವಿನ ಅಸ್ಪೃಶ್ಯತೆಯ ಕಥೆಯೂ ಕಾಣಸಿಗುತ್ತದೆ. ಜತೆಗೆ, ಒಂದೇ ಸಮುದಾಯದ ಒಂದೇ ಕುಟುಂಬದೊಳಗಿನ ಹಲವಾರು ಅಸ್ಪೃಶ್ಯತೆಯ ಸ್ತರಗಳನ್ನೂ ಕೂಡಾ ಈ ಕಾದಂಬರಿ ಅನಾವರಣಗೊಳಿಸಿದೆ. ಕುಂದಾಪುರ ಪ್ರಾಂತ್ಯದ ಕಾಲ್ಪನಿಕ ಕಿರುಕುಟುಂಬವೊಂದರ ಈ ಕಥೆಯು ಐತಿಹಾಸಿಕ ಬದಲಾವಣೆಗಳಿಗೆ ತೆರೆದುಕೊಳ್ಳುತ್ತಾ ಹೋಗುವ ಒಂದು ಸಾಂಪ್ರದಾಯಿಕ ಕಥನವೂ ಹೌದು.
ಅದು ಬದಲಾವಣೆಗಳನ್ನೆಲ್ಲ ಮೀರಿ ನಿಲ್ಲುವ ಒಂದು ಸಾರ್ವತ್ರಿಕ ಮಾನವ ಕಥನವೂ ಹೌದು. ಸಣ್ಣ ಸಣ್ಣ ವಿವರಗಳ ಮೂಲಕವೇ ಕಟ್ಟಿಕೊಳ್ಳುತ್ತಾ ಹೋಗುವ ಈ ಕಥನಕ್ಕೆ ಕಾದಂಬರಿಯ ಹರಹಿನ ಜತೆಗೆ ಕಾವ್ಯದ ವ್ಯಂಜಕತೆಯೂ ಇದೆಯಾದ್ದರಿಂದಲೇ ಇಲ್ಲಿ ಕಾಣುವ ಸಂಸಾರ ಚಿತ್ರವು ನಿರ್ದಿಷ್ಟ ದೇಶಕಾಲದ ಒಂದು ಕುಟುಂಬಕಥನವಾಗುವ ಜತೆಗೇ ವಿಶಾಲ ಸಂಸಾರದ ಪ್ರತಿಮೆಯೂ ಆಗುವ ಶಕ್ತಿಯನ್ನು ಪಡೆದುಕೊಂಡಿದೆ. ಇನ್ನು ನೀವು ಈ ಕಾದಂಬರಿಯನ್ನು ಓದಿ...ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಬಿಚ್ಚಿಡಿ.

ಕಾದಂಬರಿ

ಅಸ್ಪೃಶ್ಯರು ಭಾಗ -1.
ಶಾಲೆಯಿಂದ ಬಂದವಳೇ ಶಾಮಿ ಚರ್ಚ್ ರೋಡಿನಲ್ಲಿದ್ದ ಮಿಡ್ ಬಾಯಿ ಮನೆಗೆ ಓಡಿದಳು. `ಅಕ್ಕನಿಗೆ ಹೊಟ್ಟೆನೋವು ಸುರುವಾಗಿದೆ, ಬಂದು ಹೋಗಬೇಕಂತೆ ಅಮ್ಮ ಹೇಳಿದ್ದು' ಎನ್ನಲು ಮಿಡ್ ಬಾಯಿ ಐರಿನ್ ಗೆ ತಲೆ ಬಾಚುತ್ತಿದ್ದಳು. ಐರಿನ್ ಶಾಮಿಯ ಕ್ಲಾಸ್ ಮೇಟ್. ಶೂಸು ಸಾಕ್ಸು ಹಾಕಿ ಚಂದದ ಅಂಗಿಯೊಂದಿಗೆ ಶಾಲೆಗೆ ಬರುತ್ತಿದ್ದಳು. ದಡ್ಡಿ ಎಂದರೆ ದಡ್ಡಿ. ಮೂರು ಮೂರ್ಲಿ ಸಹ ಗೊತ್ತಿಲ್ಲ.
`ಬಾ ಬಾ ' ಎನ್ನುತ್ತಾ ಶಾಮಿ ಹೇಳಿದ್ದನ್ನು ಕೇಳಿ `ಬರುತ್ತೇನೆ. ನಿಂಗೊಬ್ಬ ಮಗ ಬರುತ್ತಾನೆ ಹಾಗಾದರೆ ಆಟ ಆಡಲಿಕ್ಕೆ'- ಅಂತ ಅಕ್ಷರ ಬಿಡಿಸಿ ಹೇಳಿದಳು ಕ್ರಿಶ್ಚನ್ ಕೊಂಕಣಿ ಮಾತೃಭಾಷೆಯ ಮಿಡ್ ಬಾಯಿ. `ಶಿಶಿ , ಮಗನ?' ಎಂದದ್ದಕ್ಕೆ `ಶೀಯೂ ಇಲ್ಲ ಗೀಯೂ ಇಲ್ಲ, ನಿನಗೇ ಒಮ್ಮೆ ಬರುತ್ತಾನಲ್ಲ. ಆಗ ಏನು ಹೇಳುತ್ತಿ?' - ಎನ್ನುತ್ತ ಬಟ್ಟೆ ಮಡಚುತ್ತಿದ್ದ ಒಬ್ಬ ಹುಡುಗಿಯತ್ತ ತಿರುಗಿ `ಮೇರಿ ಒಂದು ಲೋಟ ಹಾಲು ಮತ್ತು ಬ್ರೆಡ್ ತಂದು ಶ್ಯಾಮಲನಿಗೆ ಕೊಡು'-ಎಂದಳು.

ಅಬ್ಬಬ್ಬ ಪಾರ್ತಕ್ಕ ಹೇಳಿದ್ದಾರಲ್ಲ. ಅವಳ ಮನೆಯಲ್ಲಿ ಎಂತದಾದರೂ ಕೊಟ್ಟರೆ ತಿನ್ನಬೇಡ. ಮಾಂಸ ತಿನ್ನುವ ಜನ. ಹೇಳಿ ಓಡಿ ಬಂದು ಬಿಡು ಅಂತ.`ನಂಗೆಂತದೂ ಬೇಡ ಹೋಗುತ್ತೇನೆ.' ಅಂತಂದು ಹೇಳಿದಷ್ಟೇ ವೇಗದಲ್ಲಿ ಹೆಜ್ಜೆ ಕಿತ್ತಾಯಿತು.
ಮನಗೆ ಬಂದದ್ದೇ `ನಂಗೂ ಬಾಬ್ ಮಾಡೂ' ಎಂದು ಬೊಬ್ಬೆ ಹೊಡೆದಳು ಶಾಮಿ.
`ಮತ್ತೆಂತ ಬೇಡವ? ದಿನಕ್ಕೊಂದು ಹೊಸರಾಗ'- ಎನ್ನುತ್ತ ತನ್ನ ಕೆಲಸಕ್ಕೆ ಹೋದರು ಗೌರಮ್ಮ...
(ಮುಂದುವರಿಯುತ್ತದೆ...)


ವೈದೇಹಿ...ಒಂದು ಪುಟ್ಟ ಪರಿಚಯ...

ವೈದೇಹಿ ಕನ್ನಡ ಸಾಹಿತ್ಯಲೋಕದಲ್ಲಿ ಅಗ್ರ ಪಂಕ್ತಿಯಲ್ಲಿ ಕಾಣುವ ಹೆಸರು. ಸಣ್ಣಕಥೆ, ಕಾವ್ಯ,ಕಾದಂಬರಿಗಳು, ಮಕ್ಕಳ ಸಾಹಿತ್ಯ, ಅನುವಾದ ಸಾಹಿತ್ಯ, ಪ್ರಬಂಧ ಮುಂತಾದವುಗಳಲ್ಲಿ ತೊಡಗಿಸಿಕೊಂಡಿರುವ ಲೇಖಕಿ. ಇವರ ನಿಜ ನಾಮಧೇಯ ಜಾನಕಿ ಶ್ರೀನಿವಾಸ ಮೂರ್ತಿ. ತವರು ಮನೆಯಲ್ಲಿ ವಸಂತಿ ಎಂದೂ ಇವರನ್ನು ಕರೆಯುತ್ತಾರೆ. ಇವರಿಗೆ ನಯನಾ ಹಾಗೂ ಪಲ್ಲವಿ ಎಂಬ ಇಬ್ಬರು ಪುತ್ರಿಯರು.
೧೨-೨-೧೯೪೧ ರಲ್ಲಿ ಜನಿಸಿದ ವೈದೇಹಿ, ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರದವರು. ಇವರ ತಂದೆ ಎ. ವಿ. ಎನ್. ಹೆಬ್ಬಾರ್, ತಾಯಿ ಮಹಾಲಕ್ಶ್ಮಿ. ಕುಂದಾಪುರದ ಭಂಡಾರ್ಕರ್ ಕಾಲೇಜಿನ ಬಿ.ಕಾಂ ಪದವೀಧರೆ.
ನೀರೆಯರ ಮನ ಎಂಬ ಕತೆಯನ್ನು ಸುಧಾ ವಾರಪತ್ರಿಕೆಗೆ ಜಾನಕಿ ಎಂಬ ಕಾವ್ಯನಾಮದಲ್ಲಿ ಪ್ರಕಟಣೆಗೆ ಕಳುಹಿಸಿದರು. ನಿಜ ಘಟನೆಯಾದ್ದರಿಂದ ಪ್ರಕಟಿಸಬೇಡಿ ಎಂದು ಜಾನಕಿ ಪತ್ರವನ್ನೂ ಬರೆದರು. ಆದರೆ ಸುಧಾದ ಆಗಿನ ಸಂಪಾದಕರು ವೈದೇಹಿ ಎಂಬ ಕಾವ್ಯನಾಮ ನೀಡಿ ಈ ಕಥೆಯನ್ನು ಪ್ರಕಟಿಸಿಯೇ ಬಿಟ್ಟರು. ಅಂದಿನಿಂದ ಇವರಿಗೆ ವೈದೇಹಿ ಎಂಬುದೇ ಕಾವ್ಯನಾಮವಾಯಿತು.
ಇವರ ಕಥೆಗಳ ಅತ್ಯಂತ ಪ್ರಮುಖ ಲಕ್ಷಣಗಳೆಂದರೆ, ಕುಂದಾಪುರ ಕನ್ನಡದ ಬಳಕೆ, ಹಾಗೂ ಸ್ತ್ರೀ ಲೋಕದ ಸೂಕ್ಷ್ಮ ಅಂಶಗಳ ಅನಾವರಣ.
ಇವರು ಬರೆದ ಕಥೆಯನ್ನು ಆಧರಿಸಿದ, ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದ ಗುಲಾಬಿ ಟಾಕೀಸು ಚಲನಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ ೨೦೦೯ ರಾಷ್ಟ್ರೀಯ ಪ್ರಶಸ್ತಿ, ಹಾಗೂ ಚಿತ್ರದ ಪ್ರಮುಖ ಪಾತ್ರಧಾರಿ ಉಮಾಶ್ರೀ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಯಿತು.


ವೈದೇಹಿ ಅವರ ಕೃತಿಗಳು
ಸಂಗೀತಗಾರ ಭಾಸ್ಕರ ಚಂದ್ರಾವರ್ಕರ್-ರ ಸಂಗೀತ ಸಂವಾದ ಕೃತಿಯನ್ನು ಕನ್ನಡಕ್ಕೆ ತಂದಿದ್ದಾರೆ.
ಮಲ್ಲಿನಾಥನ ಧ್ಯಾನ
ಮೇಜು ಮತ್ತು ಬಡಗಿ

ಸಣ್ಣಕಥೆಗಳು

ಮರ ಗಿಡ ಬಳ್ಳಿ (೧೯೭೯)
ಅಂತರಂಗದ ಪುಟಗಳು (೧೯೮೪)
ಗೋಲ (೧೯೮೬)
ಸಮಾಜ ಶಾಸ್ತ್ರಜ್ಞೆಯ ಟಿಪ್ಪಣಿಗೆ (೧೯೯೧)
ಅಮ್ಮಚ್ಚಿ ಎಂಬ ನೆನಪು (೨೦೦೦)
ಹಗಲು ಗೀಚಿದ ನೆಂಟ
ಕ್ರೌಂಚ ಪಕ್ಷಿಗಳು
ಬಿಂದು ಬಿಂದಿಗೆ

ಕವನಗಳ ಸಂಗ್ರಹ

ಬಿಂದು ಬಿಂದಿಗೆ (೧೯೯೦)
ಅಸ್ಪೃಶ್ಯರು (೧೯೯೨)
ಪಾರಿಜಾತ (೧೯೯೯)

ಮಕ್ಕಳ ಸಾಹಿತ್ಯ

ಧಾಂ ಧೂಂ ಸುಂಟರಗಾಳಿ
ಮೂಕನ ಮಕ್ಕಳು
ಗೊಂಬೆ ಮ್ಯಾಕ್ ಬೆಥ್
ಢಣಾಡಂಗೂರ
ನಾಯಿಮರಿ ನಾಟಕ
ಕೋಟು ಗುಮ್ಮ
ಜುಂ ಜಾಂ ಆನೆ ಮತ್ತು ಪುಟ್ಟ
ಸೂರ್ಯ ಬಂದ
ಅರ್ಧಚಂದ್ರ ಮಿಠಾಯಿ
ಹಕ್ಕಿ ಹಾಡು
ಸೋಮಾರಿ ಓಳ್ಯಾ

ಅನುವಾದ ಸಾಹಿತ್ಯ

ಭಾರತೀಯ ಮಹಿಳೆಯರ ಸ್ವಾತಂತ್ರ್ಯ ಹೋರಾಟ ( ಕಮಲಾದೇವಿ ಚಟ್ಟೋಪಾಧ್ಯಾಯ ಅವರ 'Indian women's freedom struggle' ನಿಂದ ಅನುವಾದಿಸಿದ್ದು)
ಬೆಳ್ಳಿಯ ಸಂಕೋಲೆಗಳು ( ಮೈತ್ರೇಯಿ ಮುಖ್ಯೋಪಾಧ್ಯಾಯ ಅವರ 'Silver Shakles' ನಿಂದ ಅನುವಾದಿಸಿದ್ದು)
ಸೂರ್ಯಕಿನ್ನರಿಯರು ( ಸ್ವಪ್ನ ದತ್ತ ಅವರ 'Sun Fairies' ನಿಂದ ಅನುವಾದಿಸಿದ್ದು)
ಸಂಗೀತ ಸಂವಾದ (ಭಾಸ್ಕರ್ ಚಂದಾವರ್ಕರ್ ಅವರ ಟಿಪ್ಪಣಿಗಳಿಂದ)
ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ

ಆತ್ಮಕಥೆ ನಿರೂಪಣೆ

ಕೋಟ ಲಕ್ಷ್ಮೀನಾರಾಯಣ ಕಾರಂತ (ಕೋಲ ಕಾರಂತ) ರವರ ಆತ್ಮಕಥೆ "ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು"
ಸೇಡಿಯಾಪು ಕೃಷ್ಣಭಟ್ಟರ "ಸೇಡಿಯಾಪು ನೆನಪುಗಳು"
ಬಿ.ವಿ. ಕಾರಂತರ "ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ".

ಪ್ರಶಸ್ತಿಗಳು

'ಕರ್ನಾಟಕ ಲೇಖಕಿಯರ ಸಂಘ'ದಿಂದ ಗೀತಾ ದೇಸಾಯಿ ದತ್ತಿ ನಿಧಿ ಪುರಸ್ಕಾರ (ಅಂತರಂಗದ ಪುಟಗಳು ಮತ್ತು ಬಿಂದು ಬಿಂದಿಗೆ ಕೃತಿಗಳಿಗೆ).
'ವರ್ಧಮಾನ ಪ್ರಶಸ್ತಿ ಪೀಠ', ಮೂಡಬಿದಿರೆಯಿಂದ ವರ್ಧಮಾನ ಉದಯೋನ್ಮುಖ ಪ್ರಶಸ್ತಿ (ಗೋಲ ಕೃತಿಗೆ).
'ಕಥಾ ಆರ್ಗನೈಝೆಶನ್' ನವದೆಹಲಿ ಯಿಂದ ಕಥಾ ಪುರಸ್ಕಾರ (ಹಗಲು ಗೀಚಿದ ನೆಂಟ ಕೃತಿಗೆ).
'ಕರ್ನಾಟಕ ಲೇಖಕಿಯರ ಸಂಘ'ದಿಂದ ಅನುಪಮಾ ಪುರಸ್ಕಾರ (ಸಮಾಜ ಶಾಸ್ತ್ರಗ್ನೆಯ ಟಿಪ್ಪಣಿಗೆ ಕೃತಿಗೆ).
'ಕರ್ನಾಟಕ ಸಂಘ' ಶಿವಮೊಗ್ಗ ದಿಂದ ಎಂ.ಕೆ.ಇಂದಿರಾ ಪುರಸ್ಕಾರ (ಅಸ್ಪೃಶ್ಯರು ಕೃತಿಗೆ).
ಕರ್ನಾಟಕ ಸಾಹಿತ್ಯ ಅಕೆಡಮಿ ಪುರಸ್ಕಾರ (ಐದು ಮಕ್ಕಳ ನಾಟಕಗಳು ಕೃತಿಗೆ)
'ಅತ್ತಿಮಬ್ಬೆ ಪ್ರತಿಷ್ಠಾನ' ದಿಂದ ಅತ್ತಿಮಬ್ಬೆ ಪುರಸ್ಕಾರ.
ಸಾಹಿತ್ಯ ಅಕೆಡಮಿ ಪುರಸ್ಕಾರ (ಮಲ್ಲಿನಾಥನ ಧ್ಯಾನ ಕೃತಿಗೆ).
ಕರ್ನಾಟಕ ರಾಜ್ಯ ಸರ್ಕಾರದಿಂದ ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ
ಕ್ರೌಂಚ ಪಕ್ಷಿಗಳು ಎಂಬ ಸಣ್ಣ ಕಥಾ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ .


0 comments:

Post a Comment