ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:36 AM

ದೀಪದ ಸುತ್ತ

Posted by ekanasu

ಕಥೆ

ಹೀಗೆ ಬನ್ನಿ..
ನೋಡಿ ಈ ಮಾವಿನ ಮರಗಳನ್ನು ನೆಟ್ಟವರು ಯಾರೋ.. ಆದರೆ ಈ ಕಾಲೇಜಿಗೆ ಬಂದವರಿಗೆಲ್ಲ ಇಲ್ಲಿರುವ ಹತ್ತು ಹನ್ನೆರಡು ಕಟ್ಟೆಗಳು ನೆರಳು ಕೊಟ್ಟಿದೆ. ವಿಶ್ರಾಂತಿಗೆ ಜಾಗ ಕೊಟ್ಟಿದೆ. ಕಾಲೇಜು ತೊಡಗುವ ಮೊದಲ ವಾರದಲ್ಲಿ ಎಷ್ಟೋ ಅಮ್ಮಂದಿರು ಬ್ಯಾಗಿನಲ್ಲಿ ಬುತ್ತಿ ಹಿಡಿದು ಇಲ್ಲೇ ಕಾಯುತ್ತಿರುತ್ತಾರೆ. ಶುರುವಾಗಿ ಎರಡು ಮೂರು ದಿನ ಕಳೆವಾಗ ಹೀಗೆ ಕಾಯುವುದು ಮಕ್ಕಳಿಗೆ ಇಷ್ಟವಾಗುವುದಿಲ್ಲ ಎಂಬುದು ಖಾಲಿ ಕಟ್ಟೆಗಳನ್ನು ನೋಡಿದರೇ ಗೊತ್ತಾಗುತ್ತೆ. ನಂತರ ಕೆಲ ದಿನ ಕೆಲವು ಕಟ್ಟೆಗಳಲ್ಲಿ ಹುಡುಗಿಯರು, ಇನ್ನು ಕೆಲವದರಲ್ಲಿ ಹುಡುಗರು ಆಚೀಚೆ ನೋಡುತ್ತಾ ಹರಟುತ್ತಾ ಕಾಲಕಳೆಯುತ್ತಾರೆ. ಪರೀಕ್ಷೆ ಬಂತೆಂದರೆ ಓದಿನ ನಡುವೆಯೇ ಓರೆ ಕಣ್ಣಲ್ಲಿ ಬರುವವರನ್ನು ನೋಡುತ್ತಾ, ಮರಕ್ಕೆ ಸುತ್ತು ಬರುತ್ತಾ, ಪುಸ್ತಕವನ್ನು ಎದೆಗವಚಿಕೊಳ್ಳುತ್ತ ಆಕಾಶ ನೋಡಿ ನೆನಪುಜಪ ಮಾಡುತ್ತಾ ಇರುವುದನ್ನು ದೂರ ಕುಳಿತು ನೋಡುವುದೇ ಸೊಗಸು.


ಬನ್ನಿ.. ಬನ್ನಿ..

ಇದು ಪ್ರವೇಶ ದ್ವಾರ. ಓ ಅಲ್ಲಿ ಆಕಾಶದಿಂದ ಇಳಿಬಿಟ್ಟಂತೆ ತೋರುವ ಆ ದೀಪ ಈ ಕಾಲೇಜಿನ ಕ್ರಿಯಾಶೀಲತೆಯ ಸಂಕೇತ. ಐದಾರು ಲೀಟರ್ ಎಣ್ಣೆಯನ್ನು ಒಮ್ಮೆಗೆ ತನ್ನೊಡಲಲ್ಲಿ ತುಂಬಿಕೊಳ್ಳುವ ಸಾಮರ್ಥ್ಯವಿರುವ ಈ ದೀಪದ ತೂಕ ಕನಿಷ್ಟ ಒಂದು ಕ್ವಿಂಟಾಲ್ ಇರಬಹುದು. ವರ್ಷಕ್ಕೆ ಮೂರು ಬಾರಿ ಈ ದೀಪ ಜೀವ ಪಡೆಯುತ್ತದೆ. ಓಣಂನ ಹಿಂದಿನ ದಿನ ಇದರ ಕೆಳಗೆ ದೋಡ್ಡ.. ಪೂಕಳಂ ಬಿಡಿಸುತ್ತಾರೆ. ಒಬ್ಬರ ಮೇಲೊಬ್ಬರು ನಿಂತು ಮನುಷ್ಯ ಗೋಪುರ ಮಾಡಿ ದೀಪ ಇಳಿಬಿಟ್ಟ ಸರಪಳಿಗೂ ಹೂವನ್ನು ಹೆಣೆದು ಸಿದ್ಧಗೊಳಿಸುತ್ತಾರೆ.
ಪ್ರಾಂಶುಪಾಲರು ಓಣಂ ದಿನ ಮೊದಲ ದೀಪ ಬೆಳಗಿ ನಗುತ್ತಾರೆ. ಆ ದಿನವಿಡೀ ಹುಡುಗ ಹುಡುಗಿಯರ ಮುಖ ತುಂಬಾ ನಗುವೋ ನಗು. ಮಾವೆಲಿ ಬೆಳಗ್ಗೆಯೇ ಇಲ್ಲಿಗೆ ಬಂದರಂತೂ ಉಳಿದವರು ಅವನಿಗಾಗಿ ಪೂಕಳಂ ಹಾಕಿ ಮನೆ ಮನೆಯಲ್ಲಿ ಕಾಯುವುದು ಖಂಡಿತಾ ವೇಸ್ಟ್. ಅಷ್ಟು ಸಂಭ್ರಮ. ಹಾಗೆಂದು ಇದು ಇಲ್ಲಿನ ಮಲಯಾಳಿಗಳ ಹಬ್ಬ ಮಾತ್ರವಲ್ಲ. ಪೂಕಳಂ ಸ್ಪರ್ಧೆಯಲ್ಲಿ ಹೆಚ್ಚಾಗಿ ಪ್ರಶಸ್ತಿ ಗೆಲ್ಲುವ ತಂಡದಲ್ಲಿ ಕನ್ನಡಿಗರು ಇದ್ದೇ ಇರುತ್ತಿದ್ದರು.

ದೀಪಾವಳಿ ಬಂತೆಂದರೆ ಇನ್ನೊಮ್ಮೆ ದೀಪಕ್ಕೆ ಜೀವ. ದೀಪದಿಂದ ಎರಡಾಳು ಕೆಳಗೆ ಅಂದರೆ ನೆಲದಲ್ಲಿ ಸುತ್ತ ವೃತ್ತಾಕಾರದಲ್ಲಿ ಹಣತೆಗಳು. ಕೇರಳಸೀರೆ ಉಟ್ಟ ಕಾಲೇಜು ಹುಡುಗಿಯರು ಉರಿಯುತ್ತಿರುವ ಕ್ಯಾಂಡಲ್ ದೀಪ ಕೈಯಲ್ಲಿ ಹಿಡಿದುಕೊಂಡು ಈ ಹಣತೆಗಳನ್ನು ಬೆಳಗುವಾಗ 'ದೀಪ ಹಚ್ಚೋಣ.. ಸಂಭ್ರಮದಾರತಿ ಬೆಳಗೋಣ...' ಎನ್ನುತ್ತಾ ನಾವೆಲ್ಲ ಚಪ್ಪಾಳೆ ಬಡಿದು ಸಂಭ್ರಮಿಸುತ್ತಿದ್ದೆವು. ಒಂದು ವರ್ಷದ ದೀಪಾವಳಿಯಂದು ಮಾತ್ರ ಅಚಾತುರ್ಯವೊಂದು ನಡೆದು ಹೋಯಿತು. ಮೊದಲ ಬಾರಿ ಸೀರೆಯುಟ್ಟಿದ್ದ ಹುಡುಗಿಯೊಬ್ಬಳಿಗೆ ಗೊತ್ತಾಗದೇ ಹಿಂದಿನ ಹಣತೆಯ ದೀಪ ತಾಗಿ ಸೆರಗು ಸುಟ್ಟಿತು. ತಕ್ಷಣ ಉಳಿದವರು ನಂದಿಸಿದರಾದರೂ ಹುಡುಗಿ ಮಾತ್ರ ಮೂರ್ಚೆ ತಪ್ಪಿ ಬಿದ್ದಳು. ಕೂಡಲೇ ಆಸ್ಪತ್ರೆ ಸೇರಿಸಿದರು. ಒಂದೆರಡು ದಿನದಲ್ಲಿ ಅವಳು ಮತ್ತೆ ಕಾಲೇಜಿಗೆ ಬರಲಾರಂಭಿಸಿದಳು.

ಕಾಲೇಜಿನ ತುಂಬಾ ಗುಸು ಗುಸು ಆರಂಭವಾಗಿತ್ತು. ಯಾರೋ ಅವಳು ಜನ ಸರಿಯಿಲ್ಲ. ಮಾಪ್ಳೆಗಳ ಜತೆ ಹೆಚ್ಚು ಮಾತಾಡ್ತಾಳೆ. ಕೆಲ ದಿನಗಳ ಹಿಂದೆ ಇದೇ ದೀಪದ ಅಡಿಯಲ್ಲಿ ಅವ ಕೊಟ್ಟ ರೋಸನ್ನು ತಕ್ಕೊಂಡಿದ್ದಳಂತೆ. ಅದಕ್ಕೇ ಹಾಗಾಯಿತು ಎನ್ನುವವರು ಕೆಲವರು. ಹಾಸ್ಟೇಲಿನಲ್ಲಿ ಹುಡುಗಿಯೊಬ್ಬಳ ಪರ್ಸ್ ನಿಂದ ಒಂದು ಸಾವಿರ ಕಳುವಾಗಿತ್ತಂತೆ. ಆ ಹುಡುಗಿ ಈ ದೀಪದಡಿ ಬಂದು ಕದ್ದವರಿಗೆ ತಕ್ಕ ಶಾಸ್ತಿಯಾಗಲಿ ಎಂದು ಹರಕೆ ಹೊತ್ತಿದ್ದಳಂತೆ ಎನ್ನುವವರು. ಅಂತೂ ಆ ಹುಡುಗಿಯನ್ನು ನೋಡಿದವರೆಲ್ಲಾ ಇನ್ನೊಬ್ಬರ ಮುಖ ನೋಡಿಕೊಂಡು ನಗುವವರೇ. ಈ ಪ್ರಕರಣದಿಂದ ಹುಡುಗಿಗೆ ಎಷ್ಟು ನೋವಾಯಿತೋ ಗೊತ್ತಿಲ್ಲ. ಆದರೆ ಈ ದೀಪಕ್ಕೆ ಮಾತ್ರ ಇದ್ದಕಿದ್ದಂತೇ ಪಾವಿತ್ರ್ಯ ಬಂದು ಬಿಟ್ಟಿತ್ತು.

ಈ ಕಾಲೇಜಿನಲ್ಲಿ ಕ್ಲಾಸಿಗಿಂತ ಹೆಚ್ಚು ಮುಷ್ಕರ. ಕನಿಷ್ಟ 10 ವಿವಿಧ ವಿದ್ಯಾರ್ಥಿ ಸಂಘಟನೆಗಳು ಇಲ್ಲಿ ಕಾರ್ಯಾಚರಿಸುತ್ತಿವೆ. ತಿಂಗಳಿಗೆ ಎರಡಾದರೂ ಒಂದು ಸಂಘಟನೆಯ ಮುಷ್ಕರ ಇಲ್ಲದಿದ್ದರೆ ಶಕ್ತಿ ಪ್ರದರ್ಶನ ಮಾಡುವುದಾದರೂ ಎಂತು? ಮತ್ತಿರುವ 10 ದಿನದಲ್ಲಿ ರಜೆ ಕ್ಲಾಸು ಎಲ್ಲ ನಡೆಯಬೇಕು. ತೈಲ ಬೆಲೆ ಹೆಚ್ಚಾದರೆ, ಬಸ್ಸು ಟಿಕೇಟು ದರ ಏರಿದರೆ, ತಿರುವನಂತಪುರದಲ್ಲಿ ತನ್ನ ಸಂಘಟನೆಯ ಸದಸ್ಯ ವಿದ್ಯಾರ್ಥಿಗೆ ಬಸ್ಸು ತಾಗಿದರೆ, ಅಮೆರಿಕದ ಅಧ್ಯಕ್ಷರೊಂದಿಗೆ ಪ್ರಧಾನಿ ಪೋನಿನಲ್ಲಿ ಮಾತಾಡಿದರೆ.. ಹೀಗೆ ಮುಷ್ಕರಕ್ಕೆ ಧಾರಾಳ ಕಾರಣ ಇದ್ದೇ ಇರುತ್ತಿತ್ತು.

ಕಾಲೇಜಿಗೆ ಬರುವವರಿಗೆ ತರಗತಿ ಇದೆಯೋ ಇಲ್ಲವೋ ಎಂದು ತಿಳಿಯುವುದು ಈ ದೀಪದ ಬುಡದಲ್ಲಿಯೇ. ಅಂದರೆ ಅಲ್ಲಿ ಸೂಚನಾ ಫಲಕ ಇದೆಯೆಂದಲ್ಲ. ಅಲ್ಲಿ ಯಾರಾದರೂ ನಾಲ್ಕು ವಿದ್ಯಾರ್ಥಿಗಳು ದೀಪ ಹಿಡಿದು ನಿಂತರೆಂದರೆ ಅಂದು ಮುಷ್ಕರ ಇದೆ ಎಂದರ್ಥ. ಸರಿಯಾಗಿ 9.30ಕ್ಕೆ ಇಂಕಿಲಾಬ್ ಜಿಂದಾಬಾದ್ ಎಂದೋ ಅಥವಾ ಬೋಲೋ ಭಾರತ ಮಾತಾಕಿ ಜೈ ಎಂದೋ ಕೂಗು ಕೇಳುತ್ತದೆ. ದೀಪದಡಿಯಿಂದ ಆರಂಭಗೊಂಡ ಜಾಥಾ ಬಲ ಕಡೆಗೆ ಚಲಿಸಿ, ಮೇಲೆಹತ್ತಿ ಎಡಗಡೆಗೆ ತಿರುಗಿ ಇಳಿದು ಇಡೀ ಕಾಲೇಜು ಸುತ್ತಿ ಪ್ರಾಂಶುಪಾಲರ ಕೊಠಡಿಯೆದುರು ಬಂದು ಮನವಿ ಕೊಟ್ಟು ಮರಳಿ ದೀಪದಡಿ ಸೇರುವಾಗ ಭರ್ತಿ ಹತ್ತೂವರೆ. ಆಗ ಲಾಂಗ್ ಬೆಲ್ ಬಾರಿಸುತ್ತದೆ.

ಮನೆಗೆ ಹೋಗುವವರು ಮನೆಗೆ. ಮೂಲೆ ಮೂಲೆಯಲ್ಲಿ ನಿಂತು ಮಾತಾಡುವವರು ಅವರವರ ಜಾಗಕ್ಕೆ, ಕ್ರಿಕೆಟ್ ಆಡುವವರು ಗ್ರೌಂಡಿಗೆ, ಕೆಲವು ಗಾಂಧಿಗಳು ಲೈಬ್ರರಿಗೆ, ಇನ್ನು ಹಲವರು ಹನ್ನೊಂದು ಗಂಟೆಗೆ ಆರಂಭಗೊಳ್ಳುವ ಸಿನಿಮಾಗಳಿಗೆ ಹಾಜರಾಗುತ್ತಾರೆ. ಮಮ್ಮುಟ್ಟಿಯದ್ದೋ, ಲಾಲೇಟನದ್ದೋ, ಗೋಪಿಯದ್ದೋ ಹೊಸ ಸಿನಿಮಾ ರಿಲೀಸ್ ಆಗುತ್ತೆ ಎಂದರೆ ಖಂಡಿತ ಒಂದು ಸ್ಟ್ರೈಕ್ ಇದ್ದೇ ಇದೆ ಎನ್ನುವಷ್ಟು ಸಿನಿಮಾಪ್ರಿಯರು ಇಲ್ಲಿದ್ದರು.

ಇದು ಕಾಲೇಜಿನ ಆಡಿಟೋರಿಯಂ. ಈ ವೇದಿಕೆಗೆ ಭಯಂಕರ ಇತಿಹಾಸವಿದೆ. ಇಲ್ಲಿ ಸಾಧಾರಣ ಎಲ್ಲ ಮಹನೀಯರೂ ಬಂದಿದ್ದಾರೆ. ಆದರೆ ಯಾರ ಮಾತನ್ನೂ ಪೂರ್ತಿಯಾಗಿ ಯಾರೂ ಕೇಳಿಸಿಕೊಂಡದ್ದಿಲ್ಲ. ಯಾಕೆ ಗೊತ್ತಾ? ಅವರು ಮಾತು ಆರಂಭಿಸುವ ಮೊದಲೇ ಕೇಕೆ, ಕೂಗು, ರಾಕೆಟ್, ಕೊನೆಗೆ ಪೆಟ್ಟು ಹೊಡೆದಾಟ ಇದು ಮಾಮೂಲಿ.
ಸುಧಾಮ ಕಾಲೇಜಿನ ಸೆಕ್ರೇಟರಿ ಆಗಿದ್ದ ಕಾಲ. ಕಾಲೇಜು ವಾರ್ಷಿಕೋತ್ಸವಕ್ಕೆ ತನ್ನ ಮಾತೃಪಕ್ಷದ ಮುಖಂಡರನ್ನು ಅತಿಥಿಗಳಾಗಿ ಕರೆದರೆಂದು ಉಳಿದ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿತ್ತು. ಕ್ಯಾರೇ ಅನ್ನದೇ ಕಾರ್ಯಕ್ರಮ ನಡೆಸಲು ಯೂನಿಯನ್ ನಿರ್ಧರಿಸಿತು. ಮೊದಲೇ ಅನುಕಂಪದ ಆಧಾರದ ಮೇಲೆ ಗೆದ್ದ ಪಕ್ಷದ ಮೇಲೆ ಸೋತವರಿಗೆ ಸಿಟ್ಟಿತ್ತು.

ಅನುಕಂಪ ಏನಂತೀರಾ. ಯೂನಿಯನ್ ಚುನಾವಣೆ ಘೋಷಣೆಯಾಗಿತ್ತು. ಚುನಾವಣೆಗೆ ಮೂರೇ ದಿನ ಬಾಕಿ. ಮದ್ಯಾಹ್ನ ಚುನಾವಣಾ ಪ್ರಚಾರ ರ್ಯಾಲಿ ನಡೆಸಲು ಇದ್ದ ಸಂಘಟನೆಯವರೆಲ್ಲಾ ಸಿದ್ಧರಾಗಿದ್ದರು. ಸಣ್ಣ ಪುಟ್ಟ ಸಂಘಟನೆಯವರೆಲ್ಲಾ ಮೂಲೆ ಮೂಲೆಯಿಂದ ಜಾಥಾ ಆರಂಭಿಸಿದ್ದರು. ಮುಖ್ಯ ಸಂಘಟನೆಯಾದ ಎಎನ್ಎಫ್ ಮತ್ತು ಬಿಎನ್ಐಯವರ ನಡುವೆ ಜಿದ್ದಾ ಜಿದ್ದಿ. ದೀಪದಡಿಯಿಂದ ಜಾಥಾ ತೊಡಗಬೇಕೆಂಬ ಹಠ. ಬಣ್ಣ ಬಣ್ಣದ ಕೊಡೆಗಳು, ಕುಣಿಯುವ ಗೊಂಬೆಗಳು, ಚೆಂಡೆ ತಾಳ ಬೊಬ್ಬೆ ಎಲ್ಲ ಶುರುವಾಯಿತು. ಎರಡೂ ತಂಡಗಳು ಹತ್ತಿರ..ಹತ್ತಿರ. ಯುವಕರ ರಕ್ತ ಕುದಿಯಿತು. ಯಾರೋ ಒಬ್ಬ ಇನ್ನೊಬ್ಬನಿಗೆ ತಾಗಿದ. ರಣರಂಗವಾಯಿತು.
ಚುನಾವಣೆಯಲ್ಲಿ ಸೆಕ್ರೆಟರಿ ಸ್ಥಾನಕ್ಕೆ ಸ್ಪರ್ಥಿಸಿದ್ದ ಬಿಎನ್ಐಯ ಸುಧಾಮನ ಕೈಯಲ್ಲಿದ್ದ ಚಕ್ರತಾಳ ಕೈಜಾರಿ ಕೆಳಕ್ಕೆ ಅವನ ಕಾಲಿಗೇ ಬಿತ್ತು. ಕಾಲಿನ ಕಿರುಬೆರಳು ತುಂಡಾಗಿ ರಟ್ಟಿತ್ತು. ಅಮ್ಮಾ.. ಎನ್ನುತ್ತಾ ಅಲ್ಲೇ ಕುಸಿದ. ಎಲ್ಲರೂ ಗೊಂದಲದಿಂದ ಆಚೀಚೆ ಓಡತೊಡಗಿದರು. ಬಿದ್ದು ಕಾಲನ್ನು ಗಟ್ಟಿ ಹಿಡಿದುಕೊಂಡಿದ್ದ ಸುಧಾಮನ ಕೈಗೆ ಯಾರೋ ರೀಪಿನ ತುಂಡಿನಿಂದ ಬಡಿದರು. ಲಟಕ್ ಎಂದಿತು ಕೈ. ಮೊದಲೇ ಹೊರಗೆ ರೆಡಿಯಾಗಿ ನಿಂತಿದ್ದ ಪೋಲೀಸ್ ಬಸ್ಸಿನಿಂದ ಲಾಠಿ ಮತ್ತು ರಕ್ಷಣಾ ಗುರಾಣಿ ಹಿಡಿದವರು ಕಾಲೇಜಿನೊಳಗೆ ನುಗ್ಗಿದರು. ಮತ್ತೆ ಹತ್ತು ನಿಮಿಷದಲ್ಲಿ ಎಲ್ಲಾ ಸ್ತಬ್ಧ.
ಮರುದಿನ ಗಲಾಟೆ ಜೋರಾಗುತ್ತೆ ಎಂದು ಭಾವಿಸಿದವರಿಗೆ ಅಚ್ಚರಿ ಕಾದಿತ್ತು. ಪ್ರಾಂಶುಪಾಲರು ಜಾಥಾಗಳನ್ನು ನಡೆಸಬಾರದು ಎಂದು ನೋಟಿಸ್ ಕಳುಹಿಸಿದರು. ಎಲ್ಲವೂ ಶಾಂತ.

ಚುನಾವಣೆಯ ದಿನ. ಕಾಲೇಜಿನ ಮುಖ್ಯದ್ವಾರ ಮಾತ್ರ ತೆರೆದಿತ್ತು. ಅದರ ಬಳಿಯಲ್ಲಿ ಹೊರಗೆ ಇಡೀ ಕಾಲಿಗೆ ಮತ್ತು ಕೈಗೆ ಬ್ಯಾಂಡೇಜು ಸುತ್ತಿಕೊಂಡು ವೀಲ್ ಚಯರಿನಲ್ಲಿ ಕುಳಿತು ಬಂದವರಿಗೆಲ್ಲ ಕಷ್ಟದಲ್ಲಿ ವಿಪರೀತ ನೋವನ್ನು ನಟಿಸುತ್ತಾ ಸುಧಾಮ ಮತ ಯಾಚಿಸುತ್ತಿದ್ದ. ಬಸ್ಸಿಂದ ಇಳಿದು ಬಂದ ಹುಡುಗಿಯರೆಲ್ಲಾ ಪಾಪ ಎಂಬಂತೆ ಮುಖ ಮಾಡಿ ಮುಂದೆ ಹೋಗುತ್ತಿದ್ದರು. ಎಎನ್ಎಫ್ ನವರಿಗೆ ವಿಪರೀತ ಸಿಟ್ಟು ಬಂದರೂ ಏನೂ ಮಾಡುವಂತಿಲ್ಲ. ಪೊಲೀಸರು ಅಲ್ಲೇ ಇದ್ದಾರೆ. ಒಳಗೊಳಗೆ ಚಡಪಡಿಸಿದರು.
ಫಲಿತಾಂಶ ಬಂತು. ಸುಧಾಮನ ಬಣ ಭರ್ಜರಿ ಜಯ ಸಾಧಿಸಿತ್ತು.

ತೂಗುದೀಪವನ್ನು ಬೆಳಗಿ ಆಡಿಟೋರಿಯಂಗೆ ಅತಿಥಿಗಳೆಲ್ಲಾ ಬಂದರು. ಕಾಲೇಜು ವಾರ್ಷಿಕೋತ್ಸವ ಆರಂಭವಾಯಿತು. ಒಂದೆಡೆ ನಾವು ಕನ್ನಡದ ಅತಿಥಿಗಳನ್ನು ಕರೆದಿಲ್ಲ ಎಂದು ಆಕ್ಷೇಪಿಸುತ್ತಿದ್ದೆವು. ಕನ್ನಡ ಕಲಿಯುವುದರಲ್ಲಿ ಹುಡುಗಿಯರೇ ಹೆಚ್ಚಿದ್ದದ್ದರಿಂದ ಜಗಳ ಆಗುವ ಸೂಚನೆಯರಿತ ನಾವು ಹುಡುಗಿಯರನ್ನೆಲ್ಲಾ ಸುತ್ತ ನಿಲ್ಲಿಸಿ ನಡುವಲ್ಲಿ ನಿಂತು ಧಿಕ್ಕಾರ ಕೂಗಿದೆವು. ಆದರೆ ಜಾಣ ಸುಧಾಮ ನಮ್ಮಲ್ಲಿನದ್ದೇ ಅಧ್ಯಾಪಕರೊಬ್ಬರನ್ನು ವೇದಿಕೆಗೆ ಕರೆತಂದು ಕುಳಿತುಕೊಳ್ಳಿಸಿಯೇ ಬಿಟ್ಟ. ನಾವು ತಣ್ಣಗಾದೆವು. ಇದರಿಂದ ತೀರಾ ಬೇಸರಗೊಂಡದ್ದು ಎಎನ್ಎಫ್ ನವರು. ಅವರು ನಮ್ಮ ಪ್ರತಿಭಟನೆಯಿಂದ ಕಾರ್ಯಕ್ರಮ ನಿಲ್ಲುತ್ತೆ ಎಂದು ಭಾವಿಸಿದ್ದರು. ಆದರೆ ಹಾಗಾಗಲಿಲ್ಲ. ಹಿಂದೆ ನಿಂತಿದ್ದ ಯಾರೋ ಒಬ್ಬ ಎದುರಿನ ಬೆಂಚು ಮೇಲೆ ನಿಂತಿದ್ದವನನ್ನು ದೂಡಿದ. ಒಮ್ಮೆಗೆ ಐದಾರು ಜನ ಬಿದ್ದರು. ಕೆಲ ಬಾಟ್ಲಿಗಳು ಒಡೆದ ಸದ್ದಾಯಿತು. ಮತ್ತೇನಾಯಿತೋ ಯಾರಿಗೂ ಗೊತ್ತಿಲ್ಲ.

ಅಲ್ಲಿದೆಯಲ್ಲಾ.. ಆ ಸ್ಮಾರಕ ಅದು ಆ ದೊಂಬಿಯ ಕುರುಹು. ದೊಂಬಿಯಲ್ಲಿ ಏನಾಯಿತು ಗೊತ್ತಾ? ನಮ್ಮ ಜತೆಗೆ ಕನ್ನಡ ಭಾಷಾ ತರಗತಿಯಲ್ಲಿ ಕುಳಿತುಕೊಳ್ಳುತ್ತಿದ್ದ ಇಸ್ಮಾಯಿಲ್ ಮತ್ತು ದೃಷ್ಟಿ ದೋಷದಿಂದ ಓದಲು ಕಷ್ಟಪಡುತ್ತಿದ್ದ ಸೋಡ ಗ್ಲಾಸಿನ ಮಲಯಾಳಿ ರಾಮು ಹೊಟ್ಟೆಗೆ ಯಾರೋ ಬಾಟ್ಲಿ ಚೂರನ್ನು ಚುಚ್ಚಿದ್ದರು. ಇಬ್ಬರೂ ರಕ್ತ ಸೋರಿ ವಿಲವಿಲನೆ ಒದ್ದಾಡುತ್ತಿದ್ದರಂತೆ. ಪೊಲೀಸರು ಆಸ್ಪತ್ರೆ ಸೇರಿಸಿದರೂ ಬದುಕು ಸಿಗಲಿಲ್ಲ. ಒಂದು ತಿಂಗಳು ಕಾಲೇಜು ಮುಚ್ಚಿತು. ವಿದ್ಯಾರ್ಥಿ ಸಂಘಟನೆಗಳ ನಡುವೆ ವಾರಗಟ್ಟಲೆ ಶಾಂತಿ ಸೌಹಾರ್ದ ಸಭೆ ನಡೆಯಿತು. ಮತ್ತೆ ಕಾಲೇಜು ತೆರೆಯಿತು.

ಕಾಲೇಜು ಆರಂಭಗೊಂಡ ದಿನ ಒಂದು ಎಸೆಂಬ್ಲಿ ನಡೆಯಿತು. ಎಲ್ಲರೂ ಇಲ್ಲೇ ಈ ಸ್ಮಾರಕದ ಎದುರಲ್ಲಿ ಸೇರಿದೆವು. ಗುರುಗಳೊಬ್ಬರು ಸ್ಮಾರಕದಲ್ಲಿರುವ ಹಸ್ತ ಲಾಘವದ ವಿನ್ಯಾಸವನ್ನು ತೋರಿ ಇದರಲ್ಲಿರುವ ಒಂದು ಕೈ ಇಸ್ಮಾಯಿಲ್ನದ್ದು. ಇನ್ನೊಂದು ರಾಮುವಿನದ್ದು. ಅವರಿಬ್ಬರ ಮನಸ್ಸು ನಮ್ಮ ನಡುವೆ ಇದೆ ಎಂದು ಕಣ್ಣೊರೆಸಿಕೊಂಡರು. ತಲೆ ಬಾಗಿಸಿ ನಾವು ನಮ್ಮ ನಾಚಿಕೆಯನ್ನೂ ಗೌರವವನ್ನೂ ಸಮರ್ಪಿಸಿದೆವು. ತೀರಾ ಭಾವುಕರಂತೆ ಕಂಡ ಗುರುಗಳು ಸ್ಮಾರಕದಲ್ಲಿ ಹಚ್ಚಿಟ್ಟಿದ್ದ ಹಣತೆಯನ್ನು ಕೈಯಲ್ಲಿ ಹಿಡಿದುಕೊಂಡು ತೂಗು ದೀಪದ ಬಳಿ ಬಂದರು. ಕೈಗಳನ್ನೆತ್ತಿ ತೂಗುದೀಪವನ್ನು ಬೆಳಗಿದೆವು. ಹಾಗೆ ಹೊರಟೆವು. ಹೊರಗೆ ಮಾವಿನ ಮರದಡಿಯ ಕಟ್ಟೆಯಲ್ಲಿ ಇಸ್ಮಾಯಿಲ್ನ ತಾಯಿ ಮತ್ತು ರಾಮುವಿನ ತಾಯಿ ಕುಳಿತುಕೊಂಡು ಹೊರಬರುತ್ತಿದ್ದ ನಮ್ಮನ್ನು ನೋಡುತ್ತಾ ಕಣ್ಣೊರೆಸಿಕೊಳ್ಳುತ್ತಿದ್ದರು.


ಡಾ.ಧನಂಜಯ ಕುಂಬ್ಳೆ
ಕನ್ನಡ ಉಪನ್ಯಾಸಕ, ಆಳ್ವಾಸ್ ಪದವಿ ಕಾಲೇಜು, ವಿದ್ಯಾಗಿರಿ, ಮೂಡುಬಿದಿರೆ-574227
ದೂ: 9448911190

2 comments:

KODAKKAL SHIVAPRASAD said...

ಈ ಕನಸಿನ ಪ್ರತಿ ಲೇಖನ ಒಪ್ಪ ಓರಣವಾಗಿದ್ದು, ಮುಂದೆ ಇದು ತುಂಬಾ ಮಂದಿಗೆ ಉಪಕಾರವಾಗ ಬಹುದೆಂಬುದು ನನ್ನ ಅಂಬೋಣ ಹಾಗೂ ಹಾಗಾಗಲೆಂದು ನಾವು ಆಶಿಸೋಣ.
www.kodakkal.ning.com

Vivek said...

ಚೆನ್ನಾಗಿದೆ...
ಟೀಂ Windows admins ...
http://windowsadminspage.blogspot.com/

Post a Comment