ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

`ಹೋಗುವೆನು ನಾ' - ಕುವೆಂಪು ಕವನ; ಕೆ.ವಿ. ಶಿಶಿರ ದೃಶ್ಯ ಶ್ರಾವ್ಯ.
ಭಾಗ ಎರಡು
ಅಲ್ಲಿ ಮೊರೆಮೊರೆದುರುಳಿ ಬರುತಿಹ ತೊರೆಯ ತೀರದ ಹಸುರಲಿ
ಮೊಲವು ಗರುಕೆಯ ಮೇದು ಕುಳಿತಿರೆ, ಬಳಿಯ ದಡದೆಡೆ ಕೆಸರಲಿ
ಒಂಟಿಕಾಲಲಿ ನಿಂತು ಕುಕ್ಕನ ಹಕ್ಕಿ ಬೆಳ್ಳಗೆ ಮೆರೆವುದು;
ಆಹ ನೆನೆದರೆ ಸಾಕು, ನನ್ನೆದೆಯುಕ್ಕಿ ಮೈಯನೆ ಮರೆವುದು!

ಮೇಲಿನ ಪಂಕ್ತಿಗಳಲ್ಲಿ ಮಲೆನಾಡಿನ ಹಸಿರು ವನರಾಶಿಯ ನಡುವೆ ತೊರೆಯನ್ನು ಕವಿ ವರ್ಣಿಸುತ್ತಾ, ಅಲ್ಲಿಯೇ ಪಕ್ಕದಲ್ಲಿ ಹಸುರು ಗರಿಕೆಯನ್ನು ಮೇಯುವ ಮೊಲ ಮತ್ತು ಕೆಸರಿನಲ್ಲಿ ಒಂಟಿ ನಿಂತಿರುವ ಬೆಳ್ಳಕ್ಕಿಯ ಮೌನದ ಕಾರ್ಯವನ್ನು ತಿಳಿಸುತ್ತಾನೆ. ಇಲ್ಲಿ ಮೊಲ ಅಂದಾಕ್ಷಣ ನಮಗೆ ನೆನಪಾಗುವುದು ಅಚ್ಚ ಬಿಳಿಯ ಪರಿಶುದ್ಧವಾದ ಸಂಕೇತದಂತೆ. ಆ ನೀರವ ಸೌಂದರ್ಯದ ಜೊತೆಗೆ ತುಲನೆ ಮಾಡಿದಂತೆ ಮೊಲ ಮತ್ತು ಒಂಟಿಕಾಲಲ್ಲಿ ನಿಂತಿರುವ ಬೆಳ್ಳಕ್ಕಿಗಳು ಆ ಪ್ರಕೃತಿಗೆ ಇನ್ನಷ್ಟು ಮೆರುಗು ತಂತವೇನೋ ಅನಿಸದಿರದು. ಅದನ್ನು ನೆನುಯುತ್ತಿದ್ದಂತೆ ಮೈ ಮರೆತು ಹೋಗುವಷ್ಟು ಪುಳಕ ಕವಿಮನಕ್ಕೆ.

ಆದರೆ ಶಿಶಿರ ತಮ್ಮ ದೃಶ್ಯಶ್ರಾವ್ಯದಲ್ಲಿ ಮಲೆನಾಡಿನ ಸೌಂದರ್ಯವನ್ನು ಕಟ್ಟಿಕೊಡುವುದಕ್ಕಿಂತಲೂ ಅಲ್ಲಿ ನಡೆಯುವ ತೀವ್ರ ಪರಿಣಾಮಕರ ಬದಲಾವಣೆಯನ್ನು ಸೂಕ್ಷವಾಗಿ ಕಟ್ಟಿಕೊಡುತ್ತಾರೆ. ಬೆಳ್ಳಕ್ಕಿಗಳ ಹಿಂಡು ಹಾರಿ ಸಾಗಿ ಕುಳಿತರೂ ಆ ಸೌಂದರ್ಯಕ್ಕಿಂತಲೂ ಸಾಮಾನ್ಯ ಬೆಳಕಿನಲ್ಲಿ ಹಿಡಿದ ದೃಶ್ಯಾವಳಿಗಳು ಆಪ್ತವೆನಿಸುತ್ತವೆ.

ಅಲ್ಲಿ ನಡುಹಗಲಲ್ಲಿ, ಮೌನದಿ ನಿದ್ದೆಗೈದಿರೆ ಬನಗಳು,
ಬಿಸಿಲ ಬೇಗೆಗೆ ಮನೆಯ ಸೇರಿರೆ ಗೇಯ್ದು ದಣಿದಿಹ ಜನಗಳು,
ತಳಿತ ಹೊಂಗೆಯ ಕರಿಯ ನೆಳಲಲಿ ಮಲಗಿ ಜೋಂಪಿಸೆ ದನಗಳು,
ಕೊಳಲನೂದುವನಾಹ ಗೋಪನು ನಲಿಯಲಾ ಮೃಗ ಮನಗಳೂ!

ಅಲ್ಲಿ ನಡುಹಗಲಿನಲ್ಲಿ ಗೋಪಾಲನ ಕೊಳಲದನಿಗೆ ಮೃಗಗಳಾದಿಯಾಗಿ ಎಲ್ಲವೂ ತಲೆದೂಗುತ್ತವೆ. ಬಿಸಿಲಿಗೆ ದುಡಿದು ದಣಿದ ಜನರು ಮನೆಯನ್ನು ಸೇರಿಕೊಂಡರೆ, ದನಗಳು ಮರದ ನೆರಳನ್ನು ಆಶ್ರಯಿಸಿ ಮಲಗಿವೆ. ಬನಗಳು ಕೂಡ ನಡು ಹಗಲಿಗೆ ನಿದ್ದೆ ಹೋಗಿವೆ ಅನ್ನುವ ಕವಿವಾಣಿಯಲ್ಲಿ ಅಲ್ಲಿಯ ವಾತಾವರಣ ಎಷ್ಟೊಂದು ಪ್ರಶಾಂತ ಮತ್ತು ಆಹ್ಲಾದಕರವೆನ್ನುವುದನ್ನು ತಿಳಿಸುತ್ತದೆ. ಆ ನಡು ಬಿಸಿಲಿಗೆ ನೆಳಲನ್ನು ಆಶ್ರಯಿಸಿ ನಿಲ್ಲುವುದೆ ಸುಖದ ಸ್ವಪ್ನ.

ಆದರೆ ಇಲ್ಲಿಯ ದೃಶ್ಯಶ್ರಾವ್ಯದಲ್ಲಿ ಬಹಳ ಮುದನೀಡುವ ವಿಷಯವೆಂದರೆ `ಅಲ್ಲಿ ನಡುಹಗಲಲ್ಲಿ ಮೌನದಿ' ಮಧುರವಾಣಿಯು ದುತ್ತನೆ ನಿಂತು ಒಂದು ಕ್ಷಣ ಬೆರಗು ಹುಟ್ಟಿಸಿ ಸುಸ್ತಾದ ಮನಕೆ ಆಶ್ರಯವನ್ನು ಹುಡುಕಾಡುವಂತೆ ತಟಸ್ಥ ಸ್ಥಾಯಿಯ ನಡುವೆ ಮತ್ತೆ ಅದೇ ಸಾಲುಗಳು ಅನುರಣಿಸುತ್ತವೆ. ಇಲ್ಲಿಯ ಬೆರಗಿನ ಈ ರೀತಿಯ ಒಂದುಕ್ಷಣದ ತಡೆ ಹೊಸತನದ ಹುಡುಕಾಟವೆನ್ನುವಂತೆ ಮೂಡಿ ನೋಡುಗನನ್ನು ಮತ್ತು ಕೇಳುಗನನ್ನು ಒಂದುಕ್ಷಣ ಉಸಿರು ಬಿಗಿ ಹಿಡಿಸುತ್ತವೆ. ಕುವೆಂಪು ಇಲ್ಲಿ ನಡು ಮಧ್ಯಾಹ್ನದ ಮಲೆನಾಡನ್ನು ಕಣ್ಣೆದುರಿಗೆ ತೋರಿಸುವ ಪ್ರಯತ್ನವನ್ನು ಮಾಡಿದರೆ, ಇಲ್ಲಿ ದೃಶ್ಯಶ್ರಾವ್ಯದಲ್ಲಿ ನಡು ಹಗಲಿನಲ್ಲಿ ನಡೆಯುವ ಘೋರ ಶೋಷಣೆಯನ್ನು ಬಿಚ್ಚಿಡುತ್ತದೆ. ಇದು ಪ್ರಸ್ತುತ ಮತ್ತು ಈ ಸಂದರ್ಭದಲ್ಲಿ ಅನುಪಮವಾಗಿ ಕಾಣಿಸುತ್ತದೆ. ಈ ರೀತಿಯ ಕಾಣಿಸುವಿಕೆ ಸದ್ಯದ ಮಲೆನಾಡು ಬೋಳು ಬಯಲಾಗುವ ದಿಗಿಲನ್ನು ಮೂಡಿಸುತ್ತದೆ. ಮರಗಳನ್ನು ಕಡಿದು ಬಯಲು ನಿರ್ಮಿಸಿದಂತೆ, ಕೆಂಪು ಮಣ್ಣನ್ನು ಅಗೆದು ಕಾಂಕ್ರೀಟ್ ಹಾಕಿಸುವಂತೆ ಮತ್ತು ವನಸಂಪತ್ತಿನ ನಿರ್ಭಯದ ಸಾಗಾಟ ಸದಾ ಮನುಷ್ಯನ ಲೋಭಿತನಕ್ಕೆ ಮೌನವಾಗಿದೆಯೋ ಏನೋ ಅನ್ನುವಂತೆ ನಮ್ಮನ್ನು ಚಿಂತನೆಗೆ ಗುರಿಪಡಿಸುತ್ತದೆ.

ಇನ್ನು ಮುಂದಿನ ಸಾಲುಗಳಲ್ಲಿ ಮಲೆನಾಡಿನಲ್ಲಿ ಗಿರಿಗಳನ್ನು ಅಪ್ಪಿ ಕುಳಿತ ಮೋಡಗಳ ಬಗ್ಗೆ ಕವಿ ಮನ ಪುಳಕವಾಗುವಂತೆ ಬಣ್ಣಿಸುತ್ತಾನೆ.

ಗಗನದೆತ್ತರಕೆತ್ತಿ ಕಬ್ಬಿಗನೆದೆಯನೆದ್ದಿವೆ ಗಿರಿಗಳು;
ಗಗನದಾಚೆಗೆ ಬೀಸಿ ಮನವನು ಬಹವು ಮೋಡದ ಕರಿಗಳು;
ತೇಲಿ ಮುಂದಕ್ಕೆ ನುಗ್ಗಿ, ತಿರುತಿರುಗುಬ್ಬಿ ಭೀಮಾಕಾರದಿ
ತಿರೆಗೆ ಬಾನಿಗೆ ನಡುವೆ ಬಂದಪವಡಗೆ ನೀಲದ ನೀರಧಿ!

ಅಲ್ಲಿ ಮಂದಾನಿಲನು ತೆಕ್ಕೆನೆಯಹನು ಜಂಝಾವಾತನು;
ಧ್ಯಾನ ಮೌನದ ವಿಪಿನ ತಾನಹುದಬ್ಬರಿಪ ಪೆರ್ಭೂತನು.
ಲಲಿತ ರುದ್ರಗಳಲ್ಲಿ ಯಮಳರು; ಹೂವು ಮುಳ್ಳಿಗೆ ಆರತಿ;
ಮುಗಿಲನಿರಿಯುವ ಶಿಖರಕಾಳದ ಕಣಿವೆ ತೆಕ್ಕೆಯ ಪೆಂಡಿತಿ!

ಅಲ್ಲಿ ಕಾನನ ಮಧ್ಯೆ ತುಂಗೆಯು ಮುತ್ತನಿಡುವಳು ಕಣ್ಣಿಗೆ;
ದಡದೊಳಿಡಿದಿಹ ಬಿದಿರು ಮೆಳೆಗಳ ಹಸುರು ಚಾಮರ ತಣ್ಣಗೆ
ಬೀಸುಗಾಳಿಯ ಒಲೆಯೆ, ಭದ್ರೆಯು ತುಂಬಿ ಹರಿವಳು ನುಣ್ಣಗೆ;
ಮಲೆಯ ಬಿತ್ತರದೆದುರು ಹೊನಲುಗಳೆನಿತು ನೋಡದೊ ಸಣ್ಣಗೆ!

ಮೇಲಿನ ಸಾಲುಗಳಲ್ಲಿ ಮಲೆನಾಡಿನಲ್ಲಿ ಹರಿಯುವ ತುಂಗೆ ಮತ್ತು ಭದ್ರೆಯರ ತುಂಬಿದ ಸೌಂದರ್ಯವನ್ನು ಕವಿ ವರ್ಣಿಸುತ್ತಾ ತುಂಗೆ ಕಣ್ಣಿಗೆ ಮುತ್ತನಿಡುವಳೆಂದರೆ, ಭದ್ರೆ ನುಣ್ಣಗೆ ತುಂಬಿ ಹರಿಯುವಳೆನ್ನುತ್ತಾನೆ. ತುಂಗೆಯ ದಡದಲ್ಲಿ ಬೆಳೆದ ಬಿದಿರಿನ ಗಿಡ ಚಾಮರ ಬೀಸುವುದನ್ನು ಹೇಳುತ್ತಾ ಈ ಎರಡು ನದಿಗಳು ಮಲೆನಾಡಿನ ಇಡೀಯ ದೃಶ್ಯದಲ್ಲಿ ಎರಡು ತೊರೆಗಳಂತೆ ಕಾಣುವುದೆಂದು ಕವಿ ಹೇಳುತ್ತಾನೆ.

ಚೈತ್ರ ಸಂಧ್ಯೆಯ ಮೊಗಕೆ ಮೆತ್ತುತೆ ಮುಗಿಲಕೂದಲ ಮಸಿಯನು,
ಮುಡಿಗೆದರಿ, ಸಿಡಿಲೊದರಿ, ಝಳಪಿಸಿ ಮಿಂಚಿನುಜ್ವಲ ಅಸಿಯನು
ಬಾನ ಕರೆಯಿಂ ನುಗ್ಗಿಬಹ ಮುಂಗಾರ ಕರಿ ರಕ್ಕಸಿಯನು
ಕಾಣುತುರ್ವರೆ ನವಿರುನಿಮಿರುವಳೆಳೆಯ ಹಸುರಿನ ಸಸಿಯನು!

ಇಲ್ಲಿ ಕವಿ ಮಲೆನಾಡಿನ ಮಳೆಯ ವೈಭವವನ್ನು ವಿವರಿಸುತ್ತಾನೆ. ಸದಾ ಹಸಿರು ತುಂಬಿದ ಮಲೆನಾಡಿನಲ್ಲಿ ಮಳೆಯ ದೃಶ್ಯವೇ ಪುಳಕಗೀತವಾಗಿ ನೆನಪಿನಲೆಯನ್ನು ಸುರಿಸುತ್ತದೆ. ಆ ಮಳೆಗೆ ಇಳೆಯು ಹಸಿರು ಚಾದರವನ್ನು ಹಾಸುವಳೆನ್ನುವ ಕವಿಯ ಬಣ್ಣನೆ ಆಪ್ತವಾಗುತ್ತದೆ.

- ಅವಲೋಕನ- ಅನು ಬೆಳ್ಳೆ

ದೃಶ್ಯ ಕೃಪೆ : ಶಿಶಿರ ಕೆ. ವಿ.
ರೂಪದರ್ಶಿ : ಸುಭಾಷ್ ಹಾರೆಗೊಪ್ಪ
(ಮುಂದುವರೆಯುತ್ತದೆ)

0 comments:

Post a Comment