ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಐತಪ್ಪ ಪೂಜಾರಿಗಳ ಮನೆಗೆ ಮಟಮಟ ಮಧ್ಯಾಹ್ನ ಹೋದಾಗ ಅವರ ಮನೆಯಲ್ಲಿ ಕರೆಂಟಿರಲಿಲ್ಲ. ಕರಾವಳಿಯ ಸೆಖೆ ಮತ್ತು ಉರಿ ಇತ್ತು. ಅವರ ಮಗನಿಗೆ ತೆಂಡೂಲ್ಕರನ ಬ್ಯಾಟಿಂಗ್ ನೋಡಲಾಗದ ಅಸಹನೆ ಇತ್ತು. ಮನೆಯೊಳಗೆ ಮತ್ತು ಹೊರಗೆ ಕಂಡೂ ಕಾಣದಂತೆ ಏನೋ ಒಂದು ಕೂತಂತಿತ್ತು. ಹೋದವರ ಮೈಗಳಲ್ಲೂ ಏನೋ ಅಂಟು, ಕೆರೆತ, ತೆಳುವಾದ ಕೆಮ್ಮು, ಹೊರಗೂ ಗಾಳಿಯಾಡುತ್ತಿಲ್ಲ. ಏಕೆಂದರೆ ಮರಗಳಲ್ಲಿ ಹಸಿರೇ ಇಲ್ಲ. ಸೊರಗಿರುವ ಮರಗಳು. ಕುಡಿಯಲು ಕೊಟ್ಟ ತಣ್ಣನೆಯ ನೀರಿನಲ್ಲೂ ಉಪ್ಪಿನ ಘಾಟು. ಲೋಡ್ ಶೆಡ್ಡಿಂಗ್‌ಗೆ ಒಳಗಾದ ಆ ಮನೆಯಲ್ಲಿ ಕಂಡು ಬಂದ ಸನ್ನಿವೇಷಗಳು ಇಷ್ಟು.ವಿಪರ್ಯಾಸವೆಂದರೆ ಅನತಿ ದೂರದಲ್ಲೇ ಬೃಹತ್ ಉಷ್ಣವಿದ್ಯುತ್ ಸ್ಥಾವರವೊಂದಿತ್ತು. ನಿರಂತರ ಉತ್ಪಾದನೆ ಮಾಡುತ್ತಿತ್ತು.ಐತಪ್ಪ ಪೂಜಾರಿಗಳ ಮನೆಯಲ್ಲಿ ನೀರು ಸೊರಗಿರುವುದಕ್ಕೆ , ಹಸಿರು ಮಾಸಿರುವುದಕ್ಕೆ, ಕ್ರಿಕೆಟ್ ನೋಡಲಾಗದ್ದಕ್ಕೆ ಕಾರಣ ಕೂಡ ಅದೇ ಆಗಿತ್ತು.ಅದು ನಂದಿಕೂರು. ಮಂಗಳೂರಿನಿಂದ ಉಡುಪಿಗೆ ಸಾಗುವ ರಾಷ್ಟ್ರೀಯ ಹೆದ್ದಾರಿ ೧೭ರಲ್ಲಿ ಸಾಗಿ, ಪಡುಬಿದ್ರಿ ಎಂಬ ಪುಟ್ಟ ಪಟ್ಟಣದಿಂದ ಬಲಕ್ಕೆ ತಿರುಗಿಕೊಂಡರೆ ಎರಡೇ ಎರಡು ಕಿ.ಮೀ.ನಲ್ಲಿ ಸಿಗುವುದು ನಂದಿಕೂರು. ಅಲ್ಲಿಗೆ ಸಾಗಿದವರು ಮರಳಿ ಬರುವಾಗ ಹೋದಂತೆಯೇ ಹಿಂತಿರುಗುವುದಿಲ್ಲ. ಬಟ್ಟೆಗಳಿಗೆ ಕಲೆ ಅಂಟಿಸಿಕೊಂಡು, ಚರ್ಮಕ್ಕಷ್ಟು ಖನಿಜಗಳೂ ಲವಣಗಳೂ ಮತ್ತಿನ್ನೇನೋ ಒಂದನ್ನು ತುಂಬಿಸಿಕೊಂಡು, ದೇಹಕ್ಕಷ್ಟು ಗಂಧಕ- ರಂಜಕ-ಕಾರ್ಬನ್‌ಗಳನ್ನು ತುಂಬಿಸಿಕೊಂಡು ಮರಳಿ ಬರಬೇಕು. ಹೋದವರನ್ನು ನಂದಿಕೂರು ಬರಿಗೈಯಲ್ಲಿ ಕಳುಹಿಸುವುದಿಲ್ಲ.

ಏಕೆಂದರೆ ಅಲ್ಲಿ ಬೂದಿ ಹಾರುತ್ತದೆ. ಸರಕಾರಗಳು, ಬೃಹತ್ ಕಂಪನಿಗಳ ಪಾಲಿಗೆ ಆ ಬೂದಿ ಭಸ್ಮವೇ ಇರಬಹುದೇನೋ. ಆದರೆ ಪರಿಸರಕ್ಕೆ , ಕೃಷಿಗೆ ಮತ್ತು ಜನರಿಗೆ ಮಾತ್ರ ಅದು ಅಂತಿಂಥ ಬೂದಿಯಲ್ಲ. ಇಟ್ಟರೆ ಸೆಗಣಿಯಾದೆ ಸುಟ್ಟರೆ ವಿಭೂತಿಯಾದೆ ಎನ್ನುವಂತಹ ಬೂದಿ ಇದಲ್ಲ. ಅದು ಗಂಧಕದ ಡೈ ಆಕ್ಸೈಡ್‌ಗಳು ಮತ್ತು ಸಾರಜನಕದ ಆಕ್ಸೈಡ್‌ಗಳ ಮಿಶ್ರಿತ ಬೂದಿ. ಆ ಬೂದಿ ಹಾರುತ್ತದೆ.ಹಾರುತ್ತಲೇ ಇರುತ್ತದೆ. ಎಂದೂ ಅದು ನೆಲಮುಟ್ಟುವುದಿಲ್ಲ. ಹಲವು ಬಾರಿ ಅದು ಕಾಣುವುದೇ ಇಲ್ಲ. ಅದು ಕೊಳೆಯುವುದಿಲ್ಲ. ಏಕೆಂದರೆ ಅದು ಕಲ್ಲಿದ್ದಲಿನ ಬೂದಿ. ಕಲ್ಲಿನಂತೆ ಗಟ್ಟಿಯಾಗಿರುವ ಕಲ್ಲಿದ್ದಲ್ಲನ್ನು ನುಣ್ಣಗೆ ಅರೆದು ಪುಡಿಮಾಡಿ ಸುಟ್ಟು ಸಮುದ್ರದ ಉಪ್ಪುನಿರನ್ನು ಬಳಸಿಕೊಂಡು ಸ್ಥಾವರಗಳಲ್ಲಿನ ಟರ್ಬೈನುಗಳನ್ನು ತಿರುಗಿಸಿ ಹೊರಹಾಕಿದ ಬೂದಿ.

ಹೀಗೆ ನಂದಿಕೂರಿನಲ್ಲಿ ವಿದ್ಯುತ್ತನ್ನು ಉತ್ಪಾದಿಸಲಾಗುತ್ತದೆ. ಹೀಗೆ ಸುಟ್ಟ ಮತ್ತು ತಿರುಗಿಸಿದ ಅನಂತರ ತ್ಯಾಜ್ಯವನ್ನು ಉದ್ದನೆಯ ಚಿಮಿಣಿಗಳ ಮೂಲಕ ಆಕಾಶಕ್ಕೆ ಬಿಡಲಾಗುತ್ತದೆ. ಹೀಗೆ ಬಿಡಲ್ಪಟ್ಟ ತ್ಯಾಜ್ಯದಲ್ಲಿ ಸಾರಜನಕ, ಗಂಧಕಗಳೊಟ್ಟಿಗೆ ಸಮುದ್ರದ ಉಪ್ಪುನೀರಿನ ಉಪ್ಪುಪ್ಪಾದ ಹಬೆಗಳು ಒಟ್ಟು ಸೇರಿ ವಿಚಿತ್ರವಾದ ಮತ್ತೇನೂ ಒಂದು ವಿಷವನ್ನು ಉತ್ಪತ್ತಿ ಮಾಡುತ್ತದೆ. ಅದು ಕಿ.ಮೀ. ದೂರದವರೆಗೆ ಹಾರುತ್ತದೆ. ಹಾರುತ್ತದೆ ಎಂದರೆ ಹನಿಯುತ್ತದೆ. ಅನಿಲಯುಕ್ತವಾಗಿ ಪರಿಸರವನ್ನೆಲ್ಲಾ ವ್ಯಾಪಿಸುತ್ತದೆ. ಇನ್ನೊಂದೆಡೆ ಸುಟ್ಟ ಕಲ್ಲಿದ್ದಲಿನ ಹುಡಿಯ ತ್ಯಾಜ್ಯ ಬೂದಿಯಿದ್ದು. ಇದರ ವಿಲೇವಾರಿ ಇನ್ನೂ ಬೃಹತ್ ಪ್ರಮಾಣದ್ದು. ಅತ್ತ ಟಬೈನುಗಳು ತಿರುಗುತ್ತಿದ್ದಂತೆಯೇ ಇತ್ತ ಅದರ ವಿಲೇವಾರಿಯಾಗುತ್ತದೆ. ಅದೂ ಹೇಗೆ? ಟ್ಯಾಂಕರುಗಳು ಮತ್ತು ಟ್ರಕ್ಕುಗಳು ತುಂಬಿದ ಬೂದಿಯನ್ನು ಹೊತ್ತು ನಂದಿಕೂರಿನ ಆಸುಪಾಸಿನ ಊರುಗಳತ್ತ ಧಾವಿಸುತ್ತದೆ. ಒಂದು ಆಯಕಟ್ಟಿನ ಜಾಗವನ್ನೂ ಅದು ಕಂಡುಕೊಂಡಿದೆ. ಮೂರು ಬೆಟ್ಟಗಳು ಸೇರುವ ಒಂದು ಜಾಗ.

ಅದನ್ನು ಕೊರೆದು ಗುಂಡಿ ಮಾಡಿ ೫ ಎಕರೆಯನ್ನು ಮಾಡಿಕೊಂಡಿದೆ. ಅಲ್ಲಿ ನಿತ್ಯ ಬೂದಿಯನ್ನು ಡಂಪ್‌ಮಾಡಲಾಗುತ್ತದೆ. ಅಪರೂಪಕ್ಕೆ ಕೆಲವೊಮ್ಮೆ ಬೂದಿಗೆ ನೀರು ಮಿಶ್ರ ಮಾಡಿ ಹಾಕಲಾಗುತ್ತದೆ. ಆ ಬೂದಿಯೇ ವಿಚಿತ್ರ ಗುಣವುಳ್ಳದ್ದು. ನೀರನ್ನು ಬಹುಬೇಗ ಹೀರಿಕೊಂಡು ತಾನು ಒಣಗುತ್ತದೆ. ಹಾರಲು ತವಕಿಸುತ್ತದೆ. ಬುಸಬುಸನೆ ಗಾಳಿಗೆ ಎಲ್ಲೆಂದರಲ್ಲಿ ಅಂಕುಶವಿಲ್ಲದೆ ಹಾರುತ್ತದೆ.
ಅಂದಹಾಗೆ ಇಷ್ಟೆಲ್ಲಾ ಮಾಡುತ್ತಿರುವ ಕಂಪೆನಿಯ ಹೆಸರು ‘ಉಡುಪಿ ಪವರ್ ಕಾರ್ಪೋರೇಷನ್’. ಹೆಸರೇ ಮೋಸ ಮಾಡುವಂತಿದೆ. ಹೆಸರಿನ ಬಲದಿಂದ ಅದೊಂದು ಅಪ್ಪಟ ಸರಕಾರಿ ಸ್ವಾಮ್ಯದ ಸಂಸ್ಥೆ ಎಂದುಕೊಳ್ಳುವ ಹಾಗಿಲ್ಲ.LANCO ಎಂಬ ಖಾಸಗೀ ಕಂಪೆನಿಯ ಈ ಸ್ಥಾವರದ ಹೆಸರು ‘ಉಡುಪಿ ಪವರ್ ಕಾರ್ಪೊರೇಶನ್’.

ಹೀಗೆ ಸ್ಥಳೀಯ ಹೆಸರುಗಳನ್ನಿಟ್ಟುಕೊಂಡರೂ ಉಡುಪಿಗೂ ಅದಕ್ಕೂ ಬಾಧರಾಯಣ ಸಂಬಂಧವೂ ಇಲ್ಲ. ಸಮಸ್ತ ಕರಾವಳಿಯನ್ನೇ ಗುಡಿಸಿ ಗಂಡಾಂತರ ಮಾಡಬಲ್ಲ ಪ್ರಣಾಳಿಕೆಯ ಕಂಪೆನಿಗಳು ಇವು. ವಿಶಾಖಪಟ್ಟಣದ ಕಾಂಗ್ರೆಸ್ ಸಂಸದ ರೆಡ್ಡಿ ಎಂಬವರ ಒಡೆತನದ ಈ ಕಂಪೆನಿಗೆ ಇದಕ್ಕೂ ಮೊದಲು ವಿದ್ಯುತ್ ಉತ್ಪಾದನೆ ಮಾಡಿದ ಅನುಭವವಿಲ್ಲ. ಇದೊಂದು ಅಪ್ಪಟ ವ್ಯಾವಹಾರಿಕ ಸಂಸ್ಥೆ. ಆದರೂ ರಾಜಕೀಯ ಶಕ್ತಿ, ಹಣಬಲ, ಕುಟಿಲತೆಗಳ ಬಲದಿಂದ ನಂದಿಕೂರಿನಂಥ ಕೃಷಿ ಭೂಮಿಯಲ್ಲಿ ಸ್ಥಾವರವನ್ನು ಸ್ಥಾಪಿಸುವಲ್ಲಿ ಅದು ಯಶಸ್ವಿಯಾಗಿದೆ. ಅದೂ ಬೃಹತ್ ಪ್ರಮಾಣದಲ್ಲಿ . ಆರಂಭದಲ್ಲೇ ೧೦೧೫ ಮೆ.ವಾ. ಸಾಮರ್ಥ್ಯಕ್ಕೆ ಒಪ್ಪಿಗೆಯನ್ನೂ ಪಡೆದುಕೊಂಡಿದೆ. ೧೨೦೦ ಮೆ. ವಾಟ್‌ಗೆ ಬೇಡಿಕೆಯನ್ನೂ ಇಟ್ಟಿದೆ. ಒಂದು ಅನನುಭವಿ ಕಂಪೆನಿ ಭಾರತದಲ್ಲಿ ಹೀಗೆಲ್ಲಾ ಬದುಕುತ್ತವೆ.

ಅದಕ್ಕೆ ಭೂಮಿಯನ್ನು, ರಕ್ಷಣೆಯನ್ನು ಕೊಡಲು ಸರಕಾರಗಳು ಸಿದ್ಧವಾಗಿಡುತ್ತವೆ. ಪ್ರಸ್ತುತ ನಂದಿಕೂರು ಸ್ಥಾವರದಲ್ಲಿ ಒಂದು ಪ್ಲಾಂಟ್ ಮಾತ್ರ ಸ್ಥಾಪನೆಯಾಗಿದೆ. ಉಳಿದದ್ದು ಕಾಮಗಾರಿಯಲ್ಲಿದೆ. ಒಂದಕ್ಕೇ ಇಷ್ಟು ಬೂದಿ ಹಾರುತ್ತಿದೆ. ಹಾರಿಹಾರಿ ಊರು ಹಾಳು ಮಾಡುತ್ತಿದೆ. ನಂದಿಕೂರು ಸುತ್ತಮುತ್ತಲಿನ ಕುತ್ಯಾರು, ಕೊಲೆಚ್ಚೂರು, ಸಾಂತೂರು, ಪಡುಸಾಂತೂರು ಊರುಗಳಲ್ಲಿ ಬೂದಿಗಳ ಕಾಟದಿಂದ ಜನ ವಿಭೂತಿ ಧರಿಸುವುದಕ್ಕೂ ಹೆದರುವಂತಾಗಿರುವುದು ಸುಳ್ಳಲ್ಲ.ಸ್ಥಾವರದ ಪಕ್ಕದಲ್ಲೇ ವಾಸಮಾಡುತ್ತಿರುವ ಜನಾರ್ದನ ಸುವರ್ಣರು ಸಣ್ಣ ರೈತರು. ಸ್ವಲ್ಪ ಭತ್ತ, ನಾಲ್ಕು ಹಸುಗಳನ್ನಿಟ್ಟುಕೊಂಡು ಬದುಕುತ್ತಿರುವವರು. ಚಿಮಣಿಗಳಿಂದ ಹೊರಬರುವ ಅನಿಲಗಳಿಂದ ಇವರ ಬದುಕು ಅಪಾಯದಲ್ಲಿದೆ. ಭತ್ತದ ತೆನೆ ಸೊಗಸಾಗಿ ಕಟಾವಿಗೆ ಬರುತ್ತದೆ. ಕಟಾವು ಮಾಡಿದರೆ ಬರೀ ಜೊಳ್ಳ್ಳುಜೊಳ್ಳು. ಹಸುಗಳು ಸೊರಗಿವೆ.

ಮೇವು ಹುಟ್ಟುತ್ತಿಲ್ಲ. ಕೆಲವು ಹಸುಗಳು ಕರು ಹಾಕುತ್ತಿಲ್ಲ. ಸಂಜೆಯಾಯಿತೆಂದರೆ ಕೊಡೆಹಿಡಿದೇ ಹೊರಬರಬೇಕು. ಮರಗಳಿಂದಲೂ ಹನಿಗಳು ತೊಟ್ಟಿಕ್ಕುತ್ತವೆ. ಇದ್ದ ಎರಡು ಹಲಸಿನ ಮರಗಳು ಒಣಗುತ್ತಿವೆ. ಬಾಳೆ ಗಿಡಗಳು ಕರಕಲಾಗುತ್ತಿವೆ. ಬಾವಿಯ ನೀರು ಕಪ್ಪು ಕಪ್ಪಾಗಿದೆ. ಕುದಿಸಿದರೂ ಕಪ್ಪು ಹೋಗದು. ಮಕ್ಕಳಿಗೆ ದಿನನಿತ್ಯ ಬಿಸ್ಲೇರಿ ಬಾಟಲಿನಿಂದ ನೀರು ತಂದು ಕುಡಿಸುತ್ತಿದ್ದಾರೆ. ಎಲ್ಲವೂ ಕರೆಂಟಿಗಾಗಿ. ಎಲ್ಲೋ ಯಾರಿಗೋ ಬೆಳಕು ನೀಡುವುದಕ್ಕಾಗಿ. ನಂದಿಕೂರಿನವರೇ ಆದ ಐತಪ್ಪ ಪೂಜಾರಿಗಳು ಸ್ವಲ್ಪ ಸ್ಥಿತಿವಂತರು. ಆದರ್ಶ ಕೃಷಿಕರು. ವರ್ಷಕ್ಕೆ ಎರಡು ಬೆಳೆ ಬೆಳೆಯುತ್ತಿದ್ದರು. ಕಳೆದ ಕೃಷಿಯಲ್ಲಿ ಕೆಲಸ ಮುಗಿಸಿ ನಿಲ್ಲಿಸಿದ್ದ ಟಿಲ್ಲರನ್ನು ತಿಂಗಳ ನಂತರ ಸ್ಟಾರ್ಟ್ ಮಾಡುವಾಗ ನಿಶ್ಚಲವಾಗಿತ್ತು. ಅಷ್ಟೇ ಅಲ್ಲ ಮುಟ್ಟಿದೆಡೆ ಮುರಿದು ಬೀಳುತ್ತಿತ್ತು.ಅವರು ದನದ ಕೊಟ್ಟಿಗೆಗೆ ಹಾಕಿದ ಝಿಂಗ್‌ಶೀಟಿನ ಮಾಡು ಬಾಯಿ ಬಿಡುತ್ತಿದೆ. ಕಿಟಕಿಯ ಗ್ರಿಲ್ಲುಗಳು, ಮನೆಯ ಪಾತ್ರೆಗಳು, ಅಡಿಕೆ ಕತ್ತರಿಸುವ ಕತ್ತಿ, ನಾಯಿಯ ಗೂಡು, ನಾಯಿ ಕಟ್ಟುವ ಸರಪಳಿಗಳು ತುಕ್ಕು ಹಿಡಿಯುತ್ತಿವೆ. ಕಬ್ಬಿಣವೆಂದರೆ ಪೂಜಾರಿಗಳು ಬೆಚ್ಚಿ ಬೀಳುತ್ತಾರೆ. ಐತಪ್ಪ ಪೂಜಾರಿಗಳ ಶ್ರೀಮತಿಯವರ ಹೊಲಿಗೆ ಯಂತ್ರ ಕಿರಕಿರವೆನ್ನುತ್ತಿದೆ. ಅಂಗಳದಲ್ಲಿನ ತುಳಸಿ ಗಿಡಕ್ಕೆ ರಾಸಾಯನಿಕ ಹನಿಗಳ ಕಾಟ. ಕಾಣದ ಕೈಗಳ ದೋಷಕ್ಕೆ ಪರಿಹಾರವಿದೆ. ಇದಕ್ಕೇನು ಪರಿಹಾರ ಎಂದು ಪ್ರಶ್ನಿಸುತ್ತಾರೆ ಪೂಜಾರಿ ದಂಪತಿಗಳು.

೯೦ರ ದಶಕದಲ್ಲಿ ಇದೇ ಜಾಗದಲ್ಲಿ ಉಷ್ಣ ವಿದ್ಯುತ್ ಸ್ಥಾವರ ನಿರ್ಮಿಸಲು ನಾಗಾರ್ಜುನ ಎಂಬ ಕಂಪೆನಿ ಬಂದಿತ್ತು. ಭೂಕಬಳಿಕೆಯೂ ಆಗಿ ಬೇಲಿಯೂ ಹಾಕಿತ್ತು. ಆದರೆ ಉತ್ಪಾದನೆಯವರೆಗೆ ಅದು ಮುಂದುವರೆದಿರಲಿಲ್ಲ. ಆ ಪ್ರದೇಶದಲ್ಲಿ ಕರಾವಳಿಯಲ್ಲಿ ಪ್ರಭಾವಿ ಎಂದು ಕರೆಯಲಾಗುವ ಬಬ್ಬು ಸ್ವಾಮಿಗಳ ದೇಗುಲವಿತ್ತು.ಭೂಕಬಳಿಕೆಯ ತರುವಾಯ ಸ್ಥಾವರದ ‘ಬಕೇಟ್’ನ ಪಕ್ಕದಲ್ಲಿ ಬಬ್ಬು ಸ್ವಾಮಿಗಳು ನೆಲೆ ನಿಂತಿದ್ದಾರೆ. ಪೂಜೆಯಿಲ್ಲ. ಪುನಸ್ಕಾರವಿಲ್ಲ. ಬ್ರಹ್ಮಕಲಶಗಳಂತೂ ಮೊದಲೇ ಇಲ್ಲ. ಆಮ್ಲದ ಅಭಿಷೇಕ , ರಾಸಾಯನಿಕಗಳ ಆರತಿ. ಅಭಿವೃದ್ಧಿಗೆ ಭಾವನೆಗಳ ಹಂಗಿಲ್ಲ. ಸ್ಥಾವರದ ಹೊರಗೆ ಅನತಿ ದೂರದಲ್ಲೇ ಬ್ರಹ್ಮ ಬೈದರ್ಕಳ ಗರಡಿಯೊಂದಿದೆ. ಗರಡಿಯ ತಗಡಿನ ಹೊದಿಗೆ ನಿತ್ಯ ಸಿಂಚನವಾಗುವ ರಾಸಾಯನಿಕ ಸಿಂಚನಕ್ಕೆ ಕಬ್ಬಿಣವೂ ಕರಗಿದೆ. ಕಬ್ಬಿಣದ ಪಾಕ ಗರಡಿಯ ಸುತ್ತಲೂ ಚಿತ್ತಾರ ಬಿಡಿಸಿದೆ. ಗರಡಿಯ ಬಾವಿಯಲ್ಲಿ ಕಪ್ಪು ನೀರಿದೆ. ಬಾವಿಯಲ್ಲಿ ಕಪ್ಪೆಗಳು ತೇಲಿಕೊಂಡಿವೆ. ಕ್ಷಮಿಸಿ ಇದೆಲ್ಲಾ ಕರಾವಳಿಯಲ್ಲಿ , ಅದೇ ಗರಡಿಯನ್ನು ದೇವಸ್ಥಾನವೆಂದು ಭಾವಿಸುವ ತುಳುವರ ನೆಲದಲ್ಲಿ, ಅದೇ ಉಡುಪಿ ಜಿಲ್ಲೆಯಲ್ಲಿ. ಅದೇ ಸನ್ಮಾನ್ಯರಿರುವ ನೆಲದಲ್ಲಿನಡೆಯುತ್ತಿದೆ.


ಇನ್ನು ಬೂದಿ ಡಂಪಿಂಗ್ ಯಾರ್ಡನ್ನೊಮ್ಮೆ ನೋಡಬೇಕು. ಬೂದಿ ಸಾಗಿಸಲು ಬೆಟ್ಟಗಳನ್ನು ಕೊರೆದು ರಸ್ತೆಯನ್ನೇ ನಿರ್ಮಿಸಲಾಗಿದೆ. ರಸ್ತೆಯಲ್ಲಿ ಸಾಗಿದರೆ ಬಳ್ಳಾರಿ ನೆನಪಾಗುತ್ತದೆ. ರಸ್ತೆಯುದ್ದಕ್ಕೂ ಬೂದಿ ಚೆಲ್ಲಿದೆ. ಒಂದು ಅಂದಾಜಿನ ಪ್ರಕಾರ ದಿನಕ್ಕೆ ೧೨೦೦ ಟನ್ ಹಾರುಬೂದಿಯನ್ನು ಇಲ್ಲಿ ಡಂಪ್ ಮಾಡಲಾಗುತ್ತದೆ. ಅದರ ಸುತ್ತಲೂ ಊರುಗಳಿವೆ. ಸಾಂತೂರು ಎಂಬ ಗ್ರಾಮದವರ ತೆಂಗಿನ ಮರಗಳು ಬೋಳಾಗಲಾರಂಭಿಸಿವೆ. ದೇವದಾಸ ಪ್ರಭುಗಳೆಂಬವರು ನೆಟ್ಟ ಗೆಣಸುಗಳು ಕಡ್ಡಿಯಂತಾಗಿವೆ. ಪಕ್ಕದಲ್ಲೇ ಹರಿಯುವ ಹೊಯಿಗೆ ಮಾರು ಹೊಳೆ, ಸಮೃದ್ಧ ಪರಿಸರ, ದುಡಿಯುವ ಶಕ್ತಿ ಎಲ್ಲವೂ ಇದೆ ಆದರೆ. ಹಾರುವ ಬೂದಿಯಿಂದ ಬದುಕು ಬರ್ಬರವಾಗಿದೆ ಎನ್ನುತ್ತಾರೆ ದೇವದಾಸ ಪ್ರಭುಗಳು. ಪ್ರಭುಗಳ ಮಗ ದೀಕ್ಷಿತನಿಗೆ ಮನೆಪಕ್ಕದ ಹೊಳೆಯಲ್ಲಿ ಆಡುವ ಆಶೆ. ಆದರೆ ವಾಸನೆ ಹೊಡೆಯುವ ನೀರಿನ ಬಗ್ಗೆ ಅವನಿಗೆ ಪ್ರಶ್ನೆಗಳಿವೆ. ದೀಕ್ಷಿತನ ಅಕ್ಕನಿಗೆ ಕೆಮ್ಮು, ಕಫದ ಸಮಸ್ಯೆ. ಇಬ್ಬರೂ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಶಾಲೆಗೆ ಹೋಗುತ್ತಾರೆ. ಪಾದೆಬೆಟ್ಟು ಗ್ರಾಮದ ೭೦ರ ವಯಸ್ಸಿನ ಜಗನ್ನಾಥ ಶೆಟ್ಟಿ ಕೃಷಿಯಲ್ಲಿ ಪಳಗಿದವರು. ಈ ಬೂದಿಯ ಕಾಟದಿಂದ ಕೃಷಿ ಏಕೆ ಮಾಡಬೇಕು ಎಂಬುದು ಅವರಿಗೂ ಅನಿಸಿದೆ. ಚಾಪೆ ಹಾಕಿ ಮಲಗಿದರೆ ಮರುದಿನ ಚಾಪೆಯ ಸುತ್ತಲೂ ಬೂದಿ ಹರಡಿರುವುದು, ಉಸಿರಾಟಕ್ಕೆ ತೊಂದರೆಯಾಗಿರುವುದು, ಮೀನಿನ ಸಾರು ತಿನ್ನಲೂ ಕಷ್ಟಪಡುವ ಬದುಕಿನ ಬಗ್ಗೆ ಶೆಟ್ಟರಿಗೆ ನೋವಿದೆ. ಸರಕಾರ, ಕಂಪೆನಿಗಳು ಮತ್ತು ಪೇಪರಿನವರ ಕೈವಾಡದಿಂದ ಹಾರುಬೂದಿಯ ಸಮಸ್ಯೆ ನಿಲ್ಲುತ್ತಿಲ್ಲ ಎನ್ನುವುದು ಅವರ ಆಕ್ರೋಶ.

ಹೀಗೆ ನಂದಿಕೂರು ಸುತ್ತಮುತ್ತಲ ಪ್ರಪಂಚವೇ ಬೇರೆಯಂತೆ ಅನಿಸುತ್ತದೆ. ಒಂದೆಡೆ ಜಗಕ್ಕೆ ಬೆಳಕು ನೀಡಲು ತಂತ್ರಜ್ಞಾನದ ಅಬ್ಬರ. ಇನ್ನೊಂದೆಡೆ ಮಾನವ ಬಾಳಿಗೆ ಕತ್ತಲೆ ನೀಡುವ ಸ್ಥಾವರಗಳ ಅಬ್ಬರ. ಕರಾವಳಿಯಂತಹ ಪರಿಸರ ಸೂಕ್ಷ್ಮವಾದ ಅದೂ ಯಾವ ರೀತಿಯಿಂದಲೂ ನಾಶಕ್ಕೆ ಅರ್ಹವಲ್ಲದ ಭೂಮಿಯನ್ನು ಸಾಂಪ್ರದಾಯಿಕವಲ್ಲದ ರೀತಿಯಲ್ಲಿ ಕೈಗಾರಿಕೆಗಾಗಿ ಭೂಮಿಯನ್ನು ತಟ್ಟೆಯಲ್ಲಿಟ್ಟು ಕೊಡಲು ಹೇಗೆ ತಾನೆ ಮನಸ್ಸು ಬರುತ್ತದೆ? ಹಾಗಾದರೆ ವಿದ್ಯುತ್ ಬೇಡವೇ ಎಂಬ ಪ್ರಶ್ನೆಯೂ ಇಲ್ಲಿ ಪ್ರಾಯೋಗಿಕವಾಗಿ ಕಾಣುವುದಿಲ್ಲ. ಏಕೆಂದರೆ ಯಾವುದೋ ಖಾಸಗೀ ಕಂಪೆನಿ ಉತ್ಪಾದಿಸುವ ಈ ವಿದ್ಯುತ್ತನ್ನು ಸರಕಾರ ದುಬಾರಿ ಬೆಲೆಯಲ್ಲಿ ಕೊಂಡುಕೊಳ್ಳಬೇಕು. ಕಂಪೆನಿ ಒಂದು ಯೂನಿಟ್‌ಗೆ ಒಂದು ಒಂದೂವರೆ ರೂ.ಗಳಲ್ಲಿ ವಿದ್ಯುತ್ ಉತ್ಪಾದಿಸಿದರೆ ಸರಕಾರ ಕೊಂಡುಕೊಳ್ಳುವುದು ೪ ಅಥವಾ ೫ ರೂ.ಗಳಲ್ಲಿ. ಅಲ್ಲದೆ ಪ್ರಸ್ತುತ ನಂದಿಕೂರು ಸ್ಥಾವರದಿಂದ ಎಷ್ಟು ವಿದ್ಯುತ್ ಉತ್ಪಾದನೆ ಆಗುತ್ತಿದೆ, ಎಲ್ಲಿಗೆ ಹೋಗುತ್ತಿದೆ ಎನ್ನುವುದು ಗೊತ್ತಾಗುತ್ತಿಲ್ಲ. ಕನಿಷ್ಟ ಕಾಣುತ್ತಲೂ ಇಲ್ಲ. ಯೋಜನೆಯ ರೂಪುರೇಷೆಯ ಪ್ರಕಾರ ಸಾವಿರ ಮೆ. ವಾಟ್‌ನಷ್ಟು ವಿದ್ಯುತ್ ಹಾಸನದ ಶಾಂತಿಗ್ರಾಮಕ್ಕೆ ಸಾಗಿ ಅಲ್ಲಿ ಶೇಖರಣೆಯಾಗಿ ಬೆಂಗಳೂರಿಗೆ ಹರಿಯಬೇಕು. ಆದರೆ ಅದಿನ್ನೂ ಆಗಿಲ್ಲ. ಹಾಸನಕ್ಕೆ ಸಾಗಬೇಕಿದ್ದರೆ ಪ. ಘಟ್ಟದ ೪೦೦ ಎಕರೆ ಅರಣ್ಯ ಪ್ರದೇಶ ನಾಶವಾಗಬೇಕು.


ಈ ಸಂಬಂಧ ಹಿಂದೊಮ್ಮೆ National Environment Engineering Research Institute (NEERI) ನಡೆಸಿದ ಸಂಶೋಧನಾ ವರದಿಯು ನಂದಿಕೂರು ಸ್ಥಾವರಗಳ ಪರಿಣಾಮವಾಗಿ ಪಶ್ಚಿಮ ಘಟ್ಟದಲ್ಲಿ ಮರಗಳೇ ಚಿಗುರದಂತೆ ಆಗುತ್ತದೆ ಎಂಬ ಎಚ್ಚರಿಕೆಯನ್ನು ಕೊಟ್ಟಿತ್ತು.ಆದರೆ ನಾವು ಪರಿಸರದ ಸಂತಾನಹರಣವನ್ನು ಮಾಡುವ ಅಭಿವೃದ್ಧಿಯನ್ನು ಜಗಬೆಳಗುವ ಜ್ಯೋತಿ ಎಂದುಕೊಳ್ಳುತ್ತಿದ್ದೇವೆ.
ಒಂದು ವಿದ್ಯುತ್‌ನ ಹಿಂದೆ ಇಷ್ಟೆಲ್ಲಾ ಕಥೆಗಳಿವೆ. ಅಥವಾ ಒಂದು ನಂದಿಕೂರು ಉಷ್ಣವಿದ್ಯುತ್ ಸ್ಥಾವರ ವಿದ್ಯುತ್ತಿನ ಕಥೆಯನ್ನು ಹೇಳುತ್ತದೆ. ಯಾರದ್ದೋ ಕಫ, ಯಾರದ್ದೊ ಕೆಮ್ಮು, ಜ್ವರ ನರಳುವಿಕೆ, ಸತ್ತ ಎಮ್ಮೆ-ಹಸು, ಭೂಮಿಯೊಳಗಿನ ಕಪ್ಪೆ , ಹೊಲಸು ನೀರು, ಗಂಧಕ, ರಂಜಕ , ಕಲ್ಲಿದ್ದಲು. ಯಾರದ್ದೋ ನೋವು. ಹತಾಶೆ, ಯಾರದೋ ಕೇಸುಗಳ ಕತೆಯನ್ನು ನಮ್ಮ ಮನೆಯ ಬಲ್ಬುಗಳು ಹೇಳಲಾರವು. ತಂಪಾದ ಏಸಿ, ತಣ್ಣನೆಯ ರೆಫ್ರಿಜರೇಟರುಗಳು. ಬಣ್ಣದ ಟಿವಿಗಳ ಮಧ್ಯೆ ಅವಾವೂ ನಮಗೆ ಪ್ರಸ್ತುvವಾಗಿ ಕಾಣುವುದಿಲ್ಲ. ವೇದನೆಯನ್ನು ಮರೆಯಲು ಇಂದು ನಮಗೆ ಕರೆಂಟು ಬೇಕೇ ಬೇಕು ಆದರೆ ನಂದಿಕೂರಿನಲ್ಲಿ ಕರೆಂಟೇ ಎಲ್ಲಾ ವೇದನೆಗಳಿಗೆ ಮೂಲ.ಇದನ್ನು ಬಾಧರಾಯಣ ಎಂದುಕೊಳ್ಳುವ ಹಾಗಿಲ್ಲ.
- ಸಂತೋಷ್ ತಮ್ಮಯ್ಯ.

0 comments:

Post a Comment