ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
4:53 PM

ಪೂರ್ವಭಾವೀ ಸಭೆ

Posted by ekanasu

ಪ್ರಾದೇಶಿಕ ಸುದ್ದಿ

ಮಂಗಳೂರು:ನಗರದ ಸ್ಟೇಟ್ ಬ್ಯಾಂಕ್ ನಲ್ಲಿರುವ ಖಾಸಗಿ ಬಸ್ ನಿಲ್ದಾಣವನ್ನು ಕಂಕನಾಡಿ ಪಂಪ್ ವೆಲ್ ನಲ್ಲಿ ನಿರ್ಮಿಸುವ ವಿಷಯದ ಬಗ್ಗೆ ಚರ್ಚಿಸಲು ಹಾಗೂ ಒಂದು ಒಳ್ಳೆ ವ್ಯವಸ್ಥೆ ಬಗ್ಗೆ ಯೋಜನೆ ರೂಪಿಸಲು ಜಿಲ್ಲಾಧಿಕಾರಿಗಳು ಸಭೆ ಕರೆದಿದ್ದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಹಾನಗರಪಾಲಿಕೆ,ಸಾರಿಗೆ ಇಲಾಖೆ,ಲೋಕೋಪಯೋಗಿ ಇಲಾಖೆ,ಬಸ್ ಮಾಲೀಕರ ಸಂಘದ ಪದಾಧಿಕಾರಿಗಳನ್ನೊಳಗೊಂಡ, ಪಂಪ್ ವೆಲ್ ಬಸ್ ನಿಲ್ದಾಣ ನಿರ್ಮಾಣ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಪಂಪ್ ವೆಲ್ ಬಸ್ ನಿಲ್ದಾಣ ನಿರ್ಮಿಸಲು ಒಂದು ಕಮಿಟಿಯನ್ನು ರಚಿಸಿ,ಅವರ ಅಭಿಪ್ರಾಯವನ್ನು ಸಂಗ್ರಹಿಸಿಕೊಂಡು ವಿಷಯದ ಬಗ್ಗೆ ಖಾತರಿ ಮಾಡಿಕೊಂಡು ನಿಲ್ದಾಣದ ಕಾಮಗಾರಿಯನ್ನು ಮುಂದುವರಿಸಬಹುದಾಗಿದೆಯೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.


ಕಮಿಟಿಯು ವಾರಕ್ಕೊಮ್ಮೆ ಸಭೆ ಸೇರಿ ಬಸ್ ನಿಲ್ದಾಣದ ಪ್ಲಾನ್ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕಾಗಿದೆ. ಈ ಕಮಿಟಿಯಲ್ಲಿ ಇಂಜಿನಿಯರ್ , ಕನ್ಸಲ್ಟೆಂಟ್, ಬಸ್ ಮಾಲೀಕರಾದ ರಾಜವರ್ಮ ಬಲ್ಲಾಳ್,ಬಸ್ ಮಾಲೀಕರ ಸಂಘದ ಕಾರ್ಯದರ್ಶಿಗಳಾದ ಅಜೀಜ್ ಪರ್ತಿಪಾಡಿ,ಸಹಾಯಕ ಪ್ರಾದೇಶಿಕ ಅಧಿಕಾರಿ,ಟ್ರಾಫಿಕ್ ಇನ್ಸ್ಪೆಕ್ಟರ್, ಮೂಡಾದ ಅಧಿಕಾರಿ ಸೇರಿದಂತೆ ಒಟ್ಟು ಏಳು ಸದಸ್ಯರ ಒಂದು ಕಮಿಟಿಯನ್ನು ರಚಿಸಲಾಯಿತು. ಈ ಕಮಿಟಿ ಸಭೆ ಸೇರಿ ಬಸ್ ನಿಲ್ದಾಣದ ಬಗ್ಗೆ ಅಭಿಪ್ರಾಯವನ್ನು ಸಂಗ್ರಹಿಸಿ,ಅದರಂತೆ 15 ದಿನಗಳೊಳಗೆ ಬಸ್ ನಿಲ್ದಾಣ ನಿರ್ಮಾಣದ ಬಗ್ಗೆ ಕ್ರಮ ಕೈಗೊಳ್ಳಬಹುದೆಂದು ಜಿಲ್ಲಾಧಿಕಾರಿಗಳು ಅಭಿಪ್ರಾಯ ಪಟ್ಟರು.ಕನ್ಸಲ್ಟೆಂಟ್ ಮತ್ತು ಇಂಜಿನಿಯರ್ ರವರು ಬೆಂಗಳೂರಿನಲ್ಲಿ ನಿರ್ಮಾಣವಾಗಿರುವ ಕೆಲವೊಂದು ಬಸ್ ನಿಲ್ದಾಣಗಳನ್ನು ನೋಡಿಕೊಂಡು ಪ್ಲಾನ್ ತಯಾರಿಸಬಹುದಾಗಿದೆ. ಹೊಸ ಬಸ್ ನಿಲ್ದಾಣದಲ್ಲಿ ಗರಿಷ್ಠ ಪ್ರಮಾಣದ ಬಸ್ಗಳು ಬಂದು ಹೋಗುವಂತೆ ವ್ಯವಸ್ಥೆಯನ್ನು ಮಾಡಬೇಕೆಂದು ತಿಳಿಸಿದರು.ಮಂಗಳೂರಿನಲ್ಲಿ ಸುಮಾರು 250 ಬಸ್ ಗಳು ದಿನವೊಂದಕ್ಕೆ ಕನಿಷ್ಠ 6 ಬಾರಿಯಾದರೂ ನಿಲ್ದಾಣಕ್ಕೆ ಬಂದು ಹೋಗುತ್ತಿರುತ್ತದೆ. ಅಲ್ಲದೆ ಶಿವಮೊಗ್ಗ,ಉಡುಪಿ,ಕಾಸರಗೋಡು ಮುಂತಾದ ಕಡೆಗಳಲ್ಲಿ ನೀಡಿರುವ ಪರವನಿಗೆಯ ಬಸ್ಸುಗಳು ಕೂಡಾ ಬಂದು ಹೋಗುತ್ತಿರುತ್ತದೆಯೆಂದು ಸಭೆಯಲ್ಲಿ ಚರ್ಚಿಸಲಾಯಿತು.ಮುಂದಿನ 20 ವರ್ಷಗಳ ಬಳಿಕ ಮಂಗಳೂರಿನಲ್ಲಾಗಬಹುದಾದ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಬಸ್ ನಿಲ್ದಾಣದ ಯೋಜನೆ ರೂಪಿಸುವ ಹೊಣೆಗಾರಿಕೆಯನ್ನು ಸಮಿತಿಗೆ ವಹಿಸಲಾಗಿದೆ. ಸಭೆಯಲ್ಲಿ ಮಹಾನಗರಪಾಲಿಕೆ ಆಯುಕ್ತರಾದ ಡಾ .ಕೆ.ವಿ.ವಿಜಯಪ್ರಕಾಶ್, ಟ್ರಾಫಿಕ್ ಪೊಲೀಸ್ ಇನ್ಸ್ ಪೆಕ್ಟರ್,ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧಿಕಾರಿಗಳು,ಲೋಕೋಪಯೋಗಿ ಇಲಾಖೆ ಅಧಿಕಾರಿಗಳು,ಮೂಡಾದ ಆಯಕ್ತ ಮಧುಕರ್ ಗಡ್ಕರ್ ಹಾಗೂ ಬಸ್ ಮಾಲೀಕರುಗಳು ಪಾಲ್ಗೊಂಡಿದ್ದರು.

0 comments:

Post a Comment