ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಭಾಗ - ಮೂರು


ಇಲ್ಲಿ ನಾವು ಗಮನಿಸಬೇಕಾದ ಮುಖ್ಯ ಅಂಶ ದೃಶ್ಯಶ್ರಾವ್ಯದಲ್ಲಿ ಶಿಶಿರ ಕೆ.ವಿ. ಅವರು ಭೌತಿಕ ನೆಲೆಯಲ್ಲಿ ಪ್ರಸ್ತುತವಾದ ಮಲೆನಾಡನ್ನು ಕಟ್ಟಿಕೊಟ್ಟರೆ, ಕುವೆಂಪು ಭಾವನಾತ್ಮಕ ನೆಲೆಯಲ್ಲಿ ಕವಿತೆಯನ್ನು ರಚಿಸಿದ್ದಾರೆ. ಹಾಗಾಗಿ ದೃಶ್ಯದಲ್ಲಿ ಕಾಣುವುದೆಲ್ಲ ಸುಳ್ಳು ಮತ್ತು ಕವನದಲ್ಲಿರುವ ಮಲೆನಾಡು ಕಾಣಿಸುವುದೇ ಇಲ್ಲ ಅನ್ನುವ ಭಾವನೆ ನೋಡುಗನಿಗಾಗುವುದು ಸಹಜ. ಇಲ್ಲಿಯ ಬಿಂಬ ಕೇಲವ ಕವಿತೆಯಿಂದ ಸ್ಫೂರ್ತಿ ಪಡೆದ ಕವಿ ಹೃದಯದ ಸೃಜನಶೀಲನೊಬ್ಬನ ಕನಸುಗಳೇ ಹೊರತು ಕವಿತೆ ಯಥಾವತ್ತಾಗಿಯಿಲ್ಲ. ಹಾಡಿಗೂ ದೃಶ್ಯಕ್ಕೂ ಮೇಳಾಮೇಳಿಯಿಲ್ಲದಿದ್ದರೂ ಇಲ್ಲಿ ಕವಿ ಹೃದಯದ ನಿರ್ದೇಶಕನಲ್ಲಿಯ ಭಾವನೆಗಳು ಆ ಹಾಡಿನ ಜಾಡನ್ನು ಹಿಡಿದು ಸಾಗಿರುವುದನ್ನು ಗುರುತಿಸಬಹುದು. ಹಾಗಾಗಿ ಕುವೆಂಪು `ಹೋಗುವೆನು ನಾ' ಕವಿತೆಯಲ್ಲಿ ಕಟ್ಟಿಕೊಡುವ ಮಲೆನಾಡು, ಶಿಶಿರ ಅವರ ದೃಶ್ಯದಲ್ಲಿ ಕಾಣಿಸದ್ದಿದರೂ ಶ್ರಾವ್ಯದಲ್ಲಿ ಶ್ರೀಮಂತವಾಗಿದೆ. ಇದಕ್ಕೆ ಪೂರಕವಾದ ಸಂಗೀತ ಮತ್ತು ಸುಭಾಷ್ ಹಾರೆಗೊಪ್ಪ ಅವರ ಇಂಪಾದ ಕಂಠ ಕೇಳುಗನನ್ನು ಮುಗ್ಧನನ್ನಾಗಿಸುತ್ತದೆ. ಈ ರೀತಿಯ ಪ್ರಯೋಗ ಯುವ ಓದುಗರಿಗೆ ಕಾವ್ಯದ ಮೇಲೆ ಅಭಿರುಚಿಯನ್ನು ಹುಟ್ಟಿಸುವುದಕ್ಕೂ ಕಾರಣವಾಗಿದೆಯೆಂದರೆ ಉತ್ಪ್ರೇಕ್ಷೆಯಲ್ಲ.

ಮೊದಲ ಹದಮಳೆ ತಿರೆಯ ತೊಯ್ಯಲು ಮಿಂದ ಕಾಫಿಯ ತೋಟವು
ಇಂದ್ರನಂದನದ ಮರ ವೃಂದಕು ಬೆರಗನೀಯುವ ನೋಟವು!
ಬೆಟ್ಟದೋರೆಯು, ಕಣಿವೆ, ತಪ್ಪಲು, ಗಿರಿಯ ನೆತ್ತಿಯೊಳಲ್ಲಿಯೂ
ಕಣ್ಣು ಹೋಹೆಡೆಯಲ್ಲಿ ಕಾಫಿಯ ಹೂವು; ಬೆಣ್ಣೆಯು, ಬೆಳ್ಳಿಯು!


ಮೇಲಿನ ಸಾಲುಗಳಲ್ಲಿ ಕವಿ ಮಲೆನಾಡಿನಲ್ಲಿ ಇಳೆಗೆ ಮಳೆಯು ಸುರಿಯುವ ಸಂದರ್ಭದಲ್ಲಿ ಕಾಫಿಯ ಗಿಡಗಳೆಲ್ಲ ನೀರಲ್ಲಿ ಮಿಂದು ಇಂದ್ರನ ಉದ್ಯಾನವನದಲ್ಲಿರುವ ಮರಗಳೂ ಬೆರಗು ಹುಟ್ಟಿಸುವ ಹಾಗೆ ನಳನಳಿಸುವುದನ್ನು ಹೇಳುತ್ತಾನೆ. ಬೆಟ್ಟ, ಕಣಿವೆ, ತಪ್ಪಲು, ಗಿರಿ ಎಲ್ಲೆಂದರಲ್ಲಿ ಕಣ್ಣು ಹಾಯಿಸಿದರೂ ಬೆಣ್ಣೆಯಂತಹ, ಬೆಳ್ಳಿಯಂತಹ ಕಾಫಿಯ ಹೂವುಗಳು ಕಾಣುವುದನ್ನು ಕವಿ ಕಣ್ಣು ಗುರುತಿಸುತ್ತದೆ.

ಗಗನದಭ್ರತೆ ಜಗದ ಶುಭ್ರತೆಯೆಲ್ಲ ಸುಂದರ ಶಾಪದಿ
ಕಾಫಿಯಕಾನಿಗೆ ಬಂದು ನಿಂದಿವೆ ಪುಷ್ಪ ಪುಣ್ಯದ ರೂಪದಿ!
ಕಣ್ಣು ತಣಿವುದು; ಮನವು ಮಣಿವುದು; ಹಾಲುಹೂವಿನ ಹೊಳೆಯಲಿ
ಅಮೃತಸ್ನಾನವೊ ಮೇಣು ಪಾನವೊ ಬಿಳಿಯ ಮುತ್ತಿನ ಮಳೆಯಲಿ!


ಆ ಕಾಫಿಯ ಹೂವುಗಳೆಲ್ಲ ಗಗನದ ಮೋಡಗಳಂತೆ ಮತ್ತು ವಿಶ್ವದ ಶುಭ್ರತೆಯೆಲ್ಲ ಸುಂದರವಾದ ಶಾಪಕೊಳಗಾಗಿ ಕಾಫಿಯ ವನಕ್ಕೆ ಬಂದು ನಿಂತ ಹಾಗೆ ಕಾಣಿಸುವುದು ಮತ್ತು ಕಣ್ಣು, ಮನಸ್ಸು ಆ ಹಾಲು ಬಣ್ಣದ ಹೂವನ್ನು ನೋಡುತ್ತಾ ಆನಂದವನ್ನು ಹೊಂದುವುದೆಂದು ಕವಿ ನುಡಿಯುತ್ತಾನೆ.

ಹಾತೊರೆಯುತಿದೆ; ಕಾತರಿಸುತಿದೆ; ಮನಕೆ ಮನೆಗಿರ ಹಿಡಿದಿದೆ;
ನೆನಹಿನಲರಿನ ಬಂಡನಾತ್ಮದ ಭೃಂಗ ಹೊಡೆಯಲಿ ಕುಡಿದಿದೆ!
ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ;
ಬಿಳಿಯ ತಿಂಗಳ ಸಿರಿ ಬನಂಗಳ ಮಲೆಯ ಮಂಗಳ ನಾಡಿಗೆ!


ಭಾವನಾತ್ಮಕ ಬಂಧದೊಳಗೆ ಸಿಲುಕಿ ಬಯಲು ಸೀಮೆಗೆ ಬೇಸರಿಸಿ, ಮಲೆನಾಡನ್ನು ನೆನಪಿಸಿಕೊಂಡು ಕವಿ ಒಲುಮೆಯ ಗೂಡಾದ ಮಲೆನಾಡಿಗೆ ಮತ್ತು ತಿಂಗಳ ಬೆಳಕಿನ ಬನಗಳ ಸಿರಿವಂತಿಕೆಯ ಸುಂದರವಾದ ಮಲೆನಾಡಿಗೆ ಹೋಗುವೆನೆನ್ನುವ ತುಡಿತದಲ್ಲಿರುತ್ತಾನೆ.

ಮೂಡು ಬಾನಿನ ಮೊಗದಿ ಮಲರಲು ಉಷೆಯ ನಸುನಗೆ ತಾವರೆ,
ತುಂಬಿ ತುಳಕೆ ದಿಗಂತದತ್ತಣಿನರುಣ ಕಾಂತಿಯ ಹೊಂದೊರೆ,
ಕುಸುಮಧೂಳಿಯ ಕೆದರ್ವ ಗಾಳಿಯು ಬೀಸಿ ಪರಿದಿರೆ ಕಳ್ತಲೆ
ಏರುವೆನು ನಾ ನವಿಲುಕಲ್ಲಿಗೆ ನೇಸರುದಯವನಿದಿರ್ಗೊಳೆ!

ಮೂಡು ದಿಗಂತದಲ್ಲಿ ನಸುನಗುವ ಉಷೆ ತಾವರೆಯಂತೆ ಕಂಡರೆ ಅವಳ ಆ ಅರುಣ ಕಿರಣ ದಿಗಂತದ ಸುತ್ತಲೂ ಹರಡಿದೆ. ಹೂವ ಪರಿಮಳ ಹೊತ್ತು ತರುವ ಗಾಳಿಯು ಬೀಸಿ ಬರುತಿದ್ದರೆ ಸೂರ್ಯನನನ್ನು ಸ್ವಾಗತಿಸಲು ನವಿಲುಕಲ್ಲಿಗೆ ಏರುವೆನೆಂದು ಕವಿ ಹುಮ್ಮಸಿನಿಂದ ಹೇಳುತ್ತಾನೆ. ಇಲ್ಲಿ ಮುಂಜಾವನ್ನು ವರ್ಣಿಸಿದರೆ ಕೆಳಗಿನ ಸಾಲುಗಳಲ್ಲಿ ಸಂಜೆಯ ಸೊಬಗನ್ನು ಬಿಚ್ಚಿಡುತ್ತಾನೆ ಕವಿ.

ಸಂಜೆ ಕುಂಕುಮರಂಗಿನನೋಕುಳಿಯೆರಚುತಿಳಿತರೆ ಬನದಲಿ,
ಗೂಡಿಗೋಡುವ ಹಕ್ಕಿಯಿಂಚರ ನೆಯ್ಯೆ ನಾಕವ ಮನದಲಿ,
ಹಾದಿಯಲಿ ಹೊಂಧೂಳಿಯೆಬ್ಬಿಸಿ ಗೋಗಳೈತರೆ ಹಟ್ಟಿಗೆ,
ಕಾನನದ ಕವಿಶೈಲಕೇರುವೆ, ಮನೆಯ ಮೇಲಕೆ ನೆಟ್ಟಗೆ!


ಸಂಜೆಯ ಹೊತ್ತು ಬನದಲಿ ಕುಂಕುಮರಂಗಿನ ಓಕುಳಿ ಎರಚುವಾಗ ಗೂಡಿಗೆ ಓಡುವ ಹಕ್ಕಿಗಳ ಇಂಚರ ಮನದಲ್ಲಿ ಸ್ವರ್ಗವನ್ನು ಮನಸ್ಸು ಚಿತ್ರಿಸುತ್ತದೆ. ಕೆಂಧೂಳನ್ನು ಎಬ್ಬಿಸಿ ಗೋವುಗಳು ಹಟ್ಟಿಗೆ ಬರುತ್ತಿರಲು ಮನೆಯ ಬಳಿಯಿರುವ ಕಾಡಿನ ನಡುವೆಯ ಕವಿಶೈಲಕೆ ಹೋಗಿ ನೋಡುತ್ತಾನೆ ಆ ದೃಶ್ಯಗಳನ್ನ.

ಗಾಳಿ ಸುಯ್ಯನೆ ಬೀಸಿ ಮರಗಳ ತೂಗುತುಯ್ಯಲೆಯಾಡಲು,
ಶೈಲಶೈಲಿಯ ಮೈಲಿಮೈಲಿಯ ದೂರ ದಿನಮಣಿ ಬಾಡಲು,
ಬೇಟೆಗಾರನನಡವಿಯಿಂ ಮನೆಗೆಳೆವ ಬೆಳ್ಳಿಯು ಮೂಡಲು
ಸಂಜೆಗಿರಿಯಾ ಶೃಂಗಕೇರುವೆ ದಿವ್ಯದೃಶ್ಯವ ನೋಡಲು!


ಮೈಲುಗಳಾಚೆ ಸಂಜೆ ಸೂರ್ಯ ಕಂತಲು, ಗಾಳಿ ಬೀಸಿ ಮರಗಳನ್ನು ತೂಗಿಸುತ್ತಾ ಇರುವಾಗ ಬೇಟೆಗಾರನನ್ನು ಅಡವಿಯಿಂದ ಮನೆಗೆ ಎಳೆಯುವ ನಕ್ಷತ್ರ ಮೂಡುವಾಗ ಸಂಜೆಗಿರಿಯಾ ತುದಿಗೆ ಏರಿ ಸೂರ್ಯ ಕಂತುವ ದಿವ್ಯ ದೃಶ್ಯವನ್ನು ನೋಡುವೆನೆನ್ನುತಾನೆ ಬೆರಗಿನಿಂದ.
ಈ ದೃಶ್ಯವೇ ಕಣ್ಣಿನಲ್ಲಿ ರಮಣೀಯವಾಗಿ ಕಾಣುತ್ತಿರಲು ಮಲೆನಾಡಿನ ಸಮೃದ್ಧವನರಾಶಿಯೆ ಕಣ್ಣಿಗೆ ಇನ್ನಷ್ಟು ದೃಶ್ಯವೈಭವವನ್ನು ನೀಡುತ್ತದೆಯೆಂದರೆ ಸುಳ್ಳಲ್ಲ. ಇವಿಷ್ಟು ವಾಸ್ತವವನ್ನು ಕವಿ ಚಿತ್ರಿಸುತ್ತಾ ಮುಂದೆ ಭಾವನಾ ಪ್ರಪಂಚಕ್ಕೆ ಬರುವುದು ಹೀಗೆ...


ದೃಶ್ಯ ಕೃಪೆ : ಶಿಶಿರ ಕೆ. ವಿ.
ರೂಪದರ್ಶಿ : ಸುಭಾಷ್ ಹಾರೆಗೊಪ್ಪ- ಅನು ಬೆಳ್ಳೆ

(ಮುಂದುವರೆಯುತ್ತದೆ)

0 comments:

Post a Comment