ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್
ಇದು ಅಚ್ಚರಿಯಾದರೂ ಸತ್ಯ!. ಇಲ್ಲೊಂದು ಹಣತೆಯಿದೆ. ಈ ಹಣತೆಯಲ್ಲಿ ಉರಿಯುವ ಬತ್ತಿಗಳಿವೆ. ವರುಷದ ಪೂರ್ತಿ ಒಂದು ಕ್ಷಣವೂ ಆರಿಹೋಗದಂತೆ ಈ ಬತ್ತಿ ಉರಿಯುತ್ತಲೇ ಇರಬೇಕು. ಒಂದೊಮ್ಮೆ ಉರಿರುವ ಬತ್ತಿ ಆರಿಹೋದರೆ ಇಡೀ ಊರಿಗೇ ಸಂಚಕಾರ! ಹೌದು ...ಇದು ಅಚ್ಚರಿಯಾದರೂ ಸತ್ಯ...ಈ ಸತ್ಯದ ಶೋಧನೆ ನಮ್ಮ ಸವಾಲಾಗಿತ್ತು. ಎಲ್ಲಿದೆ ಆ ರಹಸ್ಯ... ಆ ಸ್ಥಳವಾದರೂ ಯಾವುದು? ಏನು ಅದರ ಹಿಂದಿರುವ ಶಕ್ತಿ... ನಮ್ಮ ತಂಡ ಈ ರಹಸ್ಯದ ಮೂಲ ಹುಡುಕುತ್ತಾ ಸಾಗಿತು... !!!ಅಬ್ಬಾ ರಾಕ್ಷಸಾಕಾರದ ಎರಡು ಬಂಡೆಗಳು...ಆಗಸವನ್ನೇ ಚುಂಬಿಸುವಂತಿರುವ ಈ ಕಲ್ಲುಗಳಿರುವ ಪ್ರದೇಶವೇ ಕೊಣಾಜೆಕಲ್ಲು.ಮೂಡುಬಿದಿರೆಯಿಂದ 5-6ಕಿ.ಮೀ.ದೂರದಲ್ಲಿರುವ ಈ ಪ್ರದೇಶಕ್ಕೆ ಸ್ಥಳೀಯರಾದರೂ ಒಮ್ಮೆ ಹೋಗಲೇಬೇಕು.ಚಾರಣಕ್ಕಂತೂ ಹೇಳಿಮಾಡಿಸಿದ ಪ್ರದೇಶ...
ಮೂಡುಬಿದಿರೆಯಿಂದ ಶಿರ್ತಾಡಿ ರಸ್ತೆಯಲ್ಲಿ 8 ಕಿ.ಮೀ.ನಷ್ಟು ದೂರ ವಾಹನದಲ್ಲಿ ಹೋಗಿ ಮತ್ತೆ 2ಕಿ.ಮೀ.ನಷ್ಟು ನಡೆಯಲೇಬೇಕು ಅಂದರೆ ಬೆಟ್ಟ ಹತ್ತಲು ಪ್ರಾರಂಭಿಸಬೇಕು.ಒಂದು ಬಾಟಲಿ ನೀರು ಮತು ಹೊಟ್ಟೆಗೆ ಏನಾದರೂ ಹಿಡಿದುಕೊಂಡು ಹೋದರೆ ನೀವು ಬಚಾವ್...ಚಿಕ್ಕ ಮಕ್ಕಳಿಲ್ಲವೆಂದರೆ ನಿಮಗೆ ನೆಮ್ಮದಿಯಾಗಿಹೋಗಿಬರಬಹುದು.

ಹೌದು ಅನಾದಿ ಕಾಲದಿಂದ ಪ್ರಕೃತಿಯ ಗರ್ಭಸೀಳಿ ಹೊರಬಂದ ಬೃಹದಾಕಾರದ ಕಲ್ಲುಗಳಿವು. ವಿವಿಧ ಕೋನಗಳಿಂದ ವೀಕ್ಷಿಸಿದರೆ ವಿವಿಧ ಆಕೃತಿಗಳಲ್ಲಿ ಗೋಚರಿಸುವ ಈ ಕಲ್ಲು ನಿಜಕ್ಕೂ ಪ್ರಕೃತಿಯ ಅಚ್ಚರಿಗೊಂದು ಕೈಗನ್ನಡಿ.
ಇದು ಕೊಣಾಜೆ ಕಲ್ಲು. 1947ರಲ್ಲಿ ಇಲ್ಲಿಗೆ ಋಷಿವರ್ಯರು ಆಗಮಿಸಿ ಈ ಸ್ಥಳದ ಮಹತ್ವವನ್ನು ಅರಿತು ಇಲ್ಲಿನ ಅದ್ಭುತ ಶಕ್ತಿಯಸಿದ್ಧಿಪಡೆಯುವ ಸಾಹಸಕ್ಕೆ ಕೈಯಿಕ್ಕಿದರು. ತದನಂತರ ಅನೇಕಾನೇಕ ಮಹಾನ್ ವ್ಯಕ್ತಿಗಳು ಈ ಭಾಗದಲ್ಲಿ ಆಗಮಿಸಿ ಸಿದ್ಧಿಪಡೆದು ತೆರಳಿದ್ದಾರೆ. ಪಾಂಡವರು ಈ ಪರಿಸರದಲ್ಲಿ ವಾಸಿಸಿದ್ದರು ಎಂಬುದನ್ನು ಇಲ್ಲಿರುವ ಸಾಧಕರು ತಿಳಿಸುತ್ತಾರೆ.


ಗಗನಚುಂಬೀ ವೃಕ್ಷಸಂಕುಲ, ಅಲ್ಲಲ್ಲಿ ಬೆಳೆದುನಿಂತ ಔಷಧಿಯುಕ್ತ ಸಸ್ಯರಾಶಿ, ಸ್ವಚ್ಛ ನಿರ್ಮಲ ಜಲಧಾರೆ...ಇವೆಲ್ಲವೂ ಒಂದು ಅವ್ಯಕ್ತ ಭಾವನೆಯನ್ನು ಮನದಲ್ಲಿ ಮೂಡಿಸುತ್ತದೆ.ಬೆಟ್ಟದ ಅರ್ಧಕ್ಕೆ ತಲುಪಿದಾಗ ಅಲ್ಲಿ 150 ಋಷಿಗಳ ಸಮಾಧಿಗಳನ್ನೊಳಗೊಂಡ ಒಂದು ದೇವಸ್ಥಾನವಿದೆ. 7 ಗುಹೆಗಳಿರುವಂತಹ ಈ ಪ್ರದೇಶಕ್ಕೆ ಅಪರೂಪದ ಜನ ಸಿದ್ಧಿ ಮಾಡಲೆಂದು ಬರುತ್ತಾರೆ.ಇಲ್ಲಿ 365 ದಿನಗಳ ಕಾಲವೂ ದೀಪ ಉರಿಯುತ್ತಲೇ ಇರುತ್ತದೆ.ಅದೊಂದುವೇಳೆ ಆರಿ ಹೋದರೆ ಊರಿನ ಜನಕ್ಕೆ ತೊಂದರೆಯಗುತ್ತದೆ ಎಂಬುದು ಸ್ಥಳೀಯರ ನಂಬಿಕೆ.ಇದನ್ನೆಲ್ಲಾ ದಾಟಿ ಇನ್ನೂ ಮೇಲೆ ಹೋದರೆ ಅಲ್ಲಿ ಸಿಗುತ್ತದೆ ನೊಡಿ ಸ್ವರ್ಗದಂತಹ ಜಾಗ. ಆ ಕಲ್ಲಿನ ತುದಿಯಲ್ಲಿ ನಿಂತು ಸುತ್ತಲೂ ಕಣ್ಣು ಹಾಯಿಸಿದಾಗ ಮೂಡುಬಿದಿರೆ ಇರುವೆ ಗೂಡಿನಂತೆ ಕಾಣಿಸುತ್ತದೆ.ಜೀವನದಲ್ಲಿ ಎಲ್ಲಾ ನೋವನ್ನೂ ಮರೆತುಬಿಡಲು ಅತ್ಯಂತ ಯೋಗ್ಯವಾದ ಪ್ರದೇಶ ಎಂದೆನಿಸಿಬಿಡುತ್ತದೆ.


-ಹರ್ಷ ಪದ್ಯಾಣ.
ಪ್ರಥಮ ಪತ್ರಿಕೋದ್ಯಮ ವಿಭಾಗ, ಆಳ್ವಾಸ್ ಕಾಲೇಜು,ಮೂಡಬಿದಿರೆ.

2 comments:

Anonymous said...

ಹರ್ಷ ಅವರೆ, ಬಹಳ ಚೆನ್ನಾಗಿ, ಸ್ಪಷ್ಟವಾಗಿ ಬರೆದಿದ್ದೀರಿ. ಹೀಗೆಯೇ ಪಯಣ ಸಾಗುತ್ತಿರಲಿ.....ಖಾನ್.

Anonymous said...

u written the article in a good way... really awsome keep it up... keep on writing

Post a Comment