ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್
ಅನೇಕ ವೇಳೆ ನಮ್ಮ ಕಣ್ಣು ಏನನ್ನೊ ಅರಸುತ್ತಿರುತ್ತದೆ,ಆದರೆ ವನ್ಯಜೀವಿ ಸಂಶೋಧಕರಾದ ಕೃಪಾಕರ ಮತ್ತು ಸೇನಾನಿಯವರ ಕ್ಯಾಮೆರಾ ಕಣ್ಣು ಸತತ ಮೂರು ದಶಕಗಳಿಂದ ಅರಸಿದ್ದು ಸಂಘಜೀವಿಗಳಾದ ಸೀಳುನಾಯಿಗಳನ್ನ. ಮನುಷ್ಯನ ರೀತಿಯ ಸಾಮಜಿಕ ಸಂ-ರಚನೆಯನ್ನು ಹೊಂದಿರುವ ಸೀಳು ನಾಯಿಗಳ ಕೌಟುಂಬಿಕ ವ್ಯವಸ್ಥೆ, ಮಾನಸಿಕ ತೊಳಲಾಟ, ಜೀವನಶೈಲಿ, ಅವುಗಳ ಬದ್ಧವೈರಿಗಳು, ಸಂಸಾರ-ಸರಸ, ವಿರಸಗಳ ಜಾಡು ಹಿಡಿದು, ಕಾಡಿನ ನಿಶ್ಯಬ್ಧವನ್ನು ಸೀಳುನಾಯಿಗಳ ಹೆಜ್ಜೆಯಿಂದ, ತರಗೆಲೆಗಳು ಮಾಡುವ ಸರಪರ ಸದ್ದನ್ನು ಆಲಿಸಿ ಅದನ್ನು ಸೆರೆಹಿಡಿದ ಪ್ರಯತ್ನಕ್ಕೆ ಇಂದು ಫಲ ದೊರೆತಿದೆ. ಭಾರತದ ಯಾವುದೋ ಕಾಡಿನ ಮೂಲೆಯ ಈ ಒಂದು ಪುಟ್ಟ ಪ್ರಾಣಿ ಇಂದು `ಹಸಿರು ಆಸ್ಕರ್'ನಂತಹ ಶ್ರೇಷ್ಠ ಪ್ರಶಸ್ತಿಗೆ ಪಾತ್ರವಾಗುವ ಮೂಲಕ ಕೃಪಾಕರ ಸೇನಾನಿ ಈ ಮಿತ್ರರಲ್ಲಿ ಸಾರ್ಥಕ್ಯಭಾವ ಮೂಡಿಸಿದೆ. ಇದು ಭಾರತೀಯರ ಪಾಲಿಗೆ ಒಂದು ಹೆಮ್ಮೆಯೇ ಸರಿ!.ಹಸಿರು ಆಸ್ಕರ್ ಪ್ರಶಸ್ತಿಯನ್ನು ಮೂಡಿಗೇರಿಸಿಕೊಂಡ ದಿ ಪ್ಯಾಕ್ ಡಾಕ್ಯುಮೆಂಟರಿ ಚಿತ್ರವನ್ನು ನೋಡಿದ ನಂತರ ಕೃಪಾಕರ ಸೇನಾನಿಯವರನ್ನು ನಮ್ಮ ತಂಡ ಬೇಟಿ ಮಾಡಲೇಬೇಕು ಎಂಬ ಹಂಬಲದಿಂದ ತೆರಳಿದಾಗ, ಅಂದು ನಮಗೆ ಕೃಪಾಕರ್ ಅವರೊಂದಿಗೆ ಮಾತ್ರ ಸಂದರ್ಶನ ಲಭ್ಯವಾಯಿತು. ಮುಂದಿನದು ಅವರೊಂದಿಗೆ ನಡೆಸಿದ ಸಂದರ್ಶನದ ಸಾರಾಂಶ.


ಪ್ರಶ್ನೆ: ಭಾರತದಲ್ಲಿ ಹಲವಾರು ರೀತಿಯ ಪ್ರಾಣಿಗಳಿವೆ, ಆದರೆ ಸೀಳುನಾಯಿಗಳನ್ನೆ ನೀವು ನಿಮ್ಮ ಸಂಶೋಧನೆಗೆ, ಚಿತ್ರನಿರ್ಮಾಣಕ್ಕೆ ಬಳಸಿಕೊಳ್ಳಲು ಕಾರಣವೇನು?
ಕೃಪಾಕರ್: ಇದಕ್ಕೆ ಬಹುಮುಖ್ಯವಾಗಿ ಮೂರು ಪ್ರಮುಖ ಕಾರಣಗಳಿವೆ, ಮೊದಲನೆಯದಾಗಿ ಈಗಾಗಲೇ ರಾಜ ಪ್ರಾತಿನಿಧ್ಯ ಪಡೆದಿರುವಂತಹ ಹುಲಿ! ಅದೊಂದು ಗ್ಲಾಮರಸ್ ಪ್ರಾಣಿ,ಅದರ ಬಗ್ಗೆ ಅಂತಹ ಆಸಕ್ತಿಧಾಯಕವಾಗಿ ಅನ್ನಿಸಲಿಲ್ಲ.ಎರಡನೆಯದಾಗಿ ಸೀಳುನಾಯಿಗಳ ಬಗ್ಗೆ ಇದ್ದಂತಹ ಅವೈಜ್ಞಾನಿಕ ಅರಿವು ಅಂದರೆ ಅವುಗಳಿಂದ ಜಿಂಕೆಗಳ ಸಂತತಿ ಕಡಿಮೆಯಾಗುತ್ತಿದೆ,ಎಂಬುದನ್ನು ತೆಗೆದು ಹಾಕಬೇಕು ಎಂದು ,ಬಹುಪ್ರಮುಖವಾಗಿ ಸೀಳುನಾಯಿಗಳು ಮನುಷ್ಯರಂತೆ ಸಾಂಘಿಕಜೀವನವನ್ನು ನಡೆಸುತ್ತವೆ ಮತ್ತು ನಮ್ಮ ಜೀವನಶೈಲಿಗೆ ಹತ್ತಿರವಾದಂತಹ ಜೀವನವನ್ನು ಸೀಳುನಾಯಿಗಳು ಹೊಂದಿರುವ ಕಾರಣ ನಾವು ಇವುಗಳ ಬಗ್ಗೆ ಅಧ್ಯಯನ ಮಾಡಬೇಕೆಂದು ಯೋಚಿಸಿದೆವು ಎಂದರು.


ಪ್ರಶ್ನೆ: ನಿಮ್ಮ ಹಾಗೇ ಕಾಡು ಹಾಗೂ ಕಾಡುಪ್ರಾಣಿಗಳ ಬಗ್ಗೆ ಆಸಕ್ತಿಯಿರುವ ಯುವಕರು ಇದನ್ನು ಒಂದು ವೃತ್ತಿಯಾಗಿ ಆಯ್ಕೆಮಾಡಿಕೊಳ್ಳಬಹುದಾ?ಮಾಡಿಕೊಂಡದ್ದೆ ಆದರೆ ಬರುವ ತೊಡಕುಗಳೇನು ?
ಕೃಪಾಕರ್ : ಕಾಲೇಜ್ ದಿನಗಳಲ್ಲಿ ನನಗೆ ಸ್ಟಿಲ್ ಫೋಟೊಗ್ರಫಿಯ ಬಗ್ಗೆ ಆಸಕ್ತಿ ಬೆಳೆಯಿತು.ಆದಾದ ನಂತರ ಬ್ಯಾಂಕ್ನ್ನಲ್ಲಿ ಕೆಲಸ ಸಿಕ್ಕಿದರು ಆ ಕೆಲಸಕ್ಕೆ ಹೋಗಲಿಲ್ಲ, ಯಾಕಂದ್ರೆ ನನಗೆ ಹಾಗೇ ಬದುಕಬೇಕಾಗಿತ್ತು. ಹಾಗೇ ಬರಿ ಆಸಕ್ತಿ ಇದ್ದರೆ ಸಾಲದು, ಆಸಕ್ತಿ ಅಗಾಧವಾಗಿರಬೇಕು.ಕಾಡಿನ ಬಗ್ಗೆ, ಪ್ರಾಣಿಗಳ ಬಗ್ಗೆ ಆಳವಾದ ಜ್ಞಾನವಿರಬೇಕು. ವಿಜ್ಞಾನಿಗಳೊಂದಿಗೆ ಒಡನಾಟವಿರಬೇಕು. ವಿಜ್ಞಾನದಂತಹ ವಿಷಯವನ್ನು ಕಥಾರೂಪವಾಗಿ ಇರಿಸುವ ನೈಪುಣ್ಯತೆ ಇರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಒಳ್ಳೆಯ ಕ್ಯಾಮರಾ ವರ್ಕ ಗೊತ್ತಿರಬೇಕು. ಏಕೆಂದರೆ ಪ್ರಾಣಿಗಳ ಬಳಿ ನಾವು ಮತ್ತೊಂದು ಟೇಕ್ ಕೇಳುವುದಕ್ಕೆ ಸಾದ್ಯವಾಗುವುದಿಲ್ಲ. ಬಹು ಮುಖ್ಯವಾಗಿ ಮನಸ್ಸು ಒಂದು ಎಡಿಟಿಂಗ್ ಸಾಫ್ಟ್ವೇರ್ ರೀತಿ ಕೆಲಸ ನಿರ್ವಹಿಸಬೇಕು, ಯಾವ ಸಮಯದಲ್ಲಿ ಯಾವ ದೃಶ್ಯ ಸೆರೆಹಿಡಿಯಬೇಕು ಎಂಬ ಅರಿವಿರಬೇಕು ಎಂದರು. ಎಲ್ಲಕ್ಕಿಂತ ಮಿಗಿಲಾಗಿ ಯಾವ ವೃತ್ತಿಯೇ ಆದರೂ ಅಲ್ಲಿ ನಾವು ಏನಾಗಬೇಕು, ಎಲ್ಲಿ ನಿಲ್ಲಬೇಕು ಎಂಬುದು ನಮಗೆ ನಿಚ್ಚಳವಾಗಿರಬೇಕು.


ಪ್ರಶ್ನೆ: ಸೀಳುನಾಯಿಗಳ ಪ್ರತಿಯೊಂದು ಚಲನವಲನವನ್ನು ಗಮನಿಸಿ, ಶೂನ್ಯ ದಿಟ್ಟಿಸಿ ಕೂತ ಚುಟ್ಟಿ ಮನಸ್ಸಿನಲ್ಲಿ ನಡೆಯುವ ತೊಳಲಾಟ, ಕಣ್ಣಿನಲ್ಲಿ ಕಾಣುವ ಆತಂಕ ಈ ಭಾವನೆಗಳನ್ನು ಗುರುತಿಸುವುದು ಹೇಗೆ ಸಾಧ್ಯ ?
ಕೃಪಾಕರ್: ಇವರ ಮೊದಲ ಉತ್ತರ ಮುವತ್ತು ವರ್ಷಗಳೊಂದಿಗೆ ಕಾಡಿನೊಂದಿಗೆ ಒಡನಾಟ ಜೊತೆಗೆ ಪ್ರಾಣಿಗಳ ಹಾಗೂ ಮನುಷ್ಯರ ನಡವಳಿಕೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುವುದರಿಂದ ಇವೆಲ್ಲಾ ಸಾಧ್ಯವಾಯಿತು ಎನ್ನುವ ಇವರು ಮತ್ತೊಂದು ಗಮನಾರ್ಹ ಅಂಶವನ್ನು ತಿಳಿಸಿದರು.. ಪ್ರಾಣಿಗಳನ್ನು ಪ್ರಾಣಿಗಳ ದೃಷ್ಟಿಕೋನದಿಂದ ನೋಡಬೇಕೆ ವಿನಹ ಮನುಷ್ಯ ದೃಷ್ಟಿಕೋನದಿಂದ ನೋಡಬಾರದು. ಎಷ್ಟೋ ಸಾರಿ ನಾವು ನಮ್ಮಂತೆ ಅವು ಯೋಚಿಸುತ್ತಿವೆ, ಕೆಲಸ ಮಾಡುತ್ತಿವೆ ಎನ್ನುತ್ತೇವೆ ಆದರೆ ಅದು ತಪ್ಪು ತಿಳುವಳಿಕೆ.

ಪ್ರಶ್ನೆ: ಕ್ಯಾಮರಾ ಹೆಗಲಿಗೇರಿಸಿಕೊಂಡು, ಸಣ್ಣ ಪುಟ್ಟ ಪಕ್ಷಿ ಅರಸುತ್ತಿದ್ದ ನಿಮಗೆ ಎಂದಾದರೂ ಆಸ್ಕರ್ ಪ್ರಶಸ್ತಿಯ ಕಲ್ಪನೆಯಾದರೂ ಮೂಡಿತ್ತಾ ?
ಕೃಪಾಕರ್: ಇಲ್ಲ .

ಪ್ರಶ್ನೆ: ನಮ್ಮ ಭಾರತೀಯರಲ್ಲಿ ವನ್ಯ ಜೀವಿ ಸಂಶೋಧಕರು ಅತೀ ವಿರಳ ಆದರೆ ವಿದೇಶಿಯರು ಅತೀ ಹೆಚ್ಚು ಏಕೆ ?
ಕೃಪಾಕರ್: ಮೊದಲನೆಯದಾಗಿ ನಮ್ಮ ಭಾರತೀಯರ ಮನೋಭಾವ, ನಮ್ಮಲ್ಲಿ ಮಕ್ಕಳನ್ನು ನೀವು ಏನಾಗುತ್ತೀರ ಎನ್ನುವ ಭಾವನೆಗಿಂತ ನೀನು ಏನಾಗಬೇಕು ಎನ್ನುವ ಭಾವನೆ ಬಿತ್ತುವುದು ಹೆಚ್ಚು. ಹೀಗಾಗಿ ನಮ್ಮ ಮಕ್ಕಳ ಪ್ರತಿಭೆ ಚಿಗುರುವುದಕ್ಕಿಂತ ಕಮರುವುದು ಹೆಚ್ಚು. ಎರಡನೆಯದಾಗಿ ಫೀಲ್ಟ್ಗೆ ಬಂದು ಸಂಶೋಧಿಸುವುದಕ್ಕಿಂತ ಪುಸ್ತಕ ರೂಪದ ಸಂಶೋಧನೆಗೆ ಹೆಚ್ಚು ಬೆಲೆ. ಪುಸ್ತಕ ರೂಪದ ಸಂಶೋಧನೆಯನ್ನು ಸಮಥರ್ಿಸುವಂತಹ ಕ್ಷೇತ್ರ ಅಧ್ಯಯನವು ಅಷ್ಟೇ ಮುಖ್ಯ. ಅದರ ಕೊರತೆಯೇ ಇದಕ್ಕೆ ಕಾರಣ .

ಪ್ರಶ್ನೆ: ಮೊದಲ ಬಾರಿಗೆ ನೀವು ಸಮಾಜದ ದೃಷ್ಟಿಯಲ್ಲಿ ಗುರುತಿಸಿಕೊಂಡಿದ್ದು ಯಾವಾಗ ?
ಕೃಪಾಕರ್: ಬಹುಶಃ ಅದು ನಾನು ಮತ್ತು ಸೇನಾನಿ ಪ್ರಜಾವಾಣಿಗೆ ಅಂಕಣ ಬರೆಯುತ್ತಿದ್ದಾಗ. ಅದು ಕೂಡ ಕೃಷಿ ಭೂಮಿಯಲ್ಲಿರುವ ಚಿಕ್ಕ ಪಕ್ಷಿಗಳ ಬಗ್ಗೆ ಎಂದು ಖುಷಿಯಿಂದ ನೆನಪಿಸಿಕೊಂಡರು.

ಪ್ರಶ್ನೆ: ಕಾಡಿನೊಂದಿಗೆ ಮೂರು ದಶಕಗಳ ಕಾಲ ಸಂಬಂಧ ಹೊಂದಿರುವ ನಿಮ್ಮನ್ನ ಇಂತಹ ಕೈಂಕರ್ಯಕ್ಕೆ ದೂಡಿದ ಸ್ಪೂರ್ತಿ?
ಕೃಪಾಕರ್: ಬಹುಶಃ ಅದು ನಮ್ಮಿಬ್ಬರಲ್ಲಿ ಇರಬಹುದಾದ ಜೀವನಾಸಕ್ತಿ ಇರಬಹುದು. ಉದಾಹರಣೆಗೆ ಒಂದು ಊರಿಗೆ ಪ್ರಯಾಣ ಮಾಡುವಾಗ ಅದು ನಮಗೆ ತಲಿಪಬೇಕಲ್ಲ ಎಂಬ ತಲೆನೋವಲ್ಲ, ಬದಲಿಗೆ ಹೋಗುತ್ತೇವಲ್ಲ ಎಂಬ ಖುಷಿ. ಇದೇ ಕಾರಣವಿರಬಹುದು.

ಪ್ರಶ್ನೆ: ನಮ್ಮ ಸರಕಾರ ಜಾರಿ ಮಾಡುವಂತಹ ಸಾಮಾಜಿಕ ಅರಣ್ಯ, ರಕ್ಷಿತ ಅರಣ್ಯ ಇಂತಹ ಕಾರ್ಯಕ್ರಮಗಳ ಬಗ್ಗೆ ನಿಮ್ಮ ಅಭಿಪ್ರಾಯದಲ್ಲಿ?
ಕೃಪಾಕರ್: ನೈಸರ್ಗಿಕವಾಗಿ ಇರುವುದನ್ನು ಯಾರು ಸೃಷ್ಟಿಮಾಡಲು ಸಾಧ್ಯವಾಗುವುದಿಲ್ಲ ಮತ್ತು ಇಂತಹ ಕಾರ್ಯಕ್ರಮಗಳನ್ನು ಅಷ್ಟೇ ಕಾಳಜಿಯಿಂದ ಮುಂದುವರೆಸಿಕೊಂಡು ಹೋಗುವುದಿಲ್ಲ. ಈ ಕಾರಣದಿಂದಾಗಿ ಇವು ಯಾವ ಉಪಯೋಗಕ್ಕೆ ಬರುವುದಿಲ್ಲ. ಇವುಗಳನ್ನು ಬೆಳೆಸುವುದರ ಹಿಂದೆಯೂ ಮಾನವನ ಸ್ವಾರ್ಥ ಅಡಗಿದೆ .

ಪ್ರಶ್ನೆ: ಪರಿಸರ ಉಳಿಸಿ ಇಂತಹ ಅಭಿತಾನಗಳಲ್ಲಿ ಎಂದಾದರೂ ಭಾಗವಹಿಸಿದ್ದಿದೆಯಾ?
ಕೃಪಾಕರ್: ಮೊದಲನೆಯದಾಗಿ ಪ್ರತಿಕ್ರಿಯಿಸುದಕ್ಕಿಂತ ನಮ್ಮಿಂದಾಗುವ ಕ್ರಿಯೆಯಲ್ಲಿ ನಂಬಿಕೆ ಇಟ್ಟವನು. ಸಾಧರಣವಾಗಿ ಇಂತಹ ಸಂದರ್ಭದಲ್ಲಿ ಯಾರೋ ಒಬ್ಬ ನಾಯಕ ಧ್ವನಿ ಎತ್ತುವುದಕ್ಕಿಂತ ಸ್ಥಳೀಯರು ಒಂದಾಗಿ ಪತಿಭಟಿಸುವುದು ಹೆಚ್ಚು ಸೂಕ್ತ .

ಪ್ರಶ್ನೆ: 'ದಿ ಪ್ಯಾಕ್' ನಂತರ ಮುಂದಿನ ನಿಮ್ಮ ಕಾಡಿನ ದಾರಿಯಲ್ಲಿ ನಿಮಗೆ ಎದುರಾಗುವ ಪ್ರಾಣಿ ಯಾವುದು ?
ಕೃಪಾಕರ್: ಆ ವಿಷಯದಲ್ಲಿ ಯಾವ ತೀರ್ಮಾನ ಮಾಡಿಲ್ಲ. ಹಾಗೇಯೆ ಮುಂಚೆಯೇ ಯೋಚಿಸುವ ಅಭ್ಯಾಸವೂ ಇಲ್ಲ ಎಂದರು.
- ಉಷಾ ಜಿ.ಎಸ್.

1 comments:

23ce3aa6-5edd-11e0-b471-000bcdcb471e said...

ನಿಮ್ಮ ನಿರೂಪಣೆಯ ಆರಂಭ ತುಂಬ ಚೆನ್ನಾಗಿದೆ. ಕಡಿಮೆ ಶಬ್ದಗಳಲ್ಲಿ ಪೂರ್ಣ ವಿಷಯವನ್ನು ತಿಳಿಸಲು ಬಳಸಿರುವ ಪದಗಳು ಕಾವ್ಯತ್ಮಕವಾಗಿವೆ ಹಾಗೂ ಅವುಗಳ ಬಳಕೆ, ನೀಡಿರುವ ಹೋಲಿಕೆಗಳು ತುಂಬಾ ಸಮಂಜಸವಾಗಿದ್ದು ನಮ್ಮನ್ನು ಕಲ್ಪನಾತೀತವನ್ನಾಗಿಸುತ್ತದೆ. ಕೇಳಿರುವ ಪ್ರಶ್ನೆಗಳು ವಿಭಿನ್ನವಾಗಿವೆ ಹಾಗೂ ತುಂಬ ವಿಷಯಗ್ರಾಹಕವಾಗಿದೆ ಹಾಗೂ ಕ್ರಪಾಕರ ಸೇನಾನಿ ರವರ ಮನದಾಳದ ಮಾತುಗಳು ಮೂಡಿಬಂದಿವೆ. ಒಟ್ಟಾರೆಯಾಗಿ ಸಂದರ್ಶನ ತುಂಬ ಚೆನ್ನಾಗಿ ಮೂಡಿಬಂದಿದೆ.

--ಹರ್ಷ.

Post a Comment