ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:25 AM

ಅಸ್ಪೃಶ್ಯರು

Posted by ekanasu

ವೈದೇಹಿ ಕಾದಂಬರಿ ಭಾಗ - 2

`ಯಾವಾಗ ಕಂಡರೂ ಕೆಲಸ ಕೆಲಸ... ನಂಗೆ ಮಿಡ್ ಬಾಯಿಯಾದರೂ ಅಮ್ಮನಾಗಿದ್ದರೆ' ಎಂದಳು ಶಾಮಿ ಅಮ್ಮನಿಗೆ ಕೇಳಿಸುವಂತೆ ಗಟ್ಟಿಯಾಗಿ.
ಒಂದು ಕೋಲು ತೆಗೆದುಕೊಂಡು `ಏನಂದೆ? ಇನ್ನೊಂದು ಸಲ ಹೇಳು' ಎಂದು ಗೌರಮ್ಮ ಬರುವಾಗ ಅವಳೆಲ್ಲಿದ್ದಳು? ಉಪ್ಪರಿಗೆ ತಳಿಕಂಡಿಯಲ್ಲಿ ಚಾಳಿಸುತ್ತಿದ್ದಳು - `ನೀ ಕೆಳಗೆ ಬರದೆ ಹೋಗುತ್ತೀಯಾ? ಬಾ ಬೆನ್ನು ಚರ್ಮ ಸುಲಿಯುತ್ತೇನೆ' - ಎಂದರು ಗೌರಮ್ಮ.

ಎಷ್ಟೋ ಹೊತ್ತಿನ ಮೇಲೆ ಕೆಳಗೆ ಬಂದರೆ ಅಲ್ಲಿ ಮಿಡ್ ವೈಫ್ ಬಂದಿದ್ದಳು. ಗೌರಮ್ಮ ಅವಳ ಸಂಗಡ ಮಾತಾಡುತ್ತಾ ಇದ್ದರು.ಅವರ ಹತ್ತಿರದಲ್ಲಿಯೇ ಶಾಮಿ ಬಂದು ಕುಳಿತರೂ ಮೈ ಮುಟ್ಟಲಿಲ್ಲ.ಕೋಣೆಯಲ್ಲಿಯೇ ಆಚೆ ಈಚೆ ಯಾರದೋ ಆಜ್ಞೆಯಾಗಿದೆಯೆಂಬಂತೆ ನಿಧಾನವಾಗಿ ನಡೆದಾಡುತ್ತಿದ್ದಳು ರತ್ನ. `ನೋಡುವ, ಫಕ್ಕ ಹೆರಿಗೆ ಆಗಲಿಕ್ಕಿಲ್ಲ, ಸ್ವಲ್ಪಹೊತ್ತು ಹೋದೀತು.ನೋವು ಮೇಲಿಂದ ಮೇಲೆ ಬಂದಾಗ ಹೇಳಿ ಕಳಿಸಿ ಕೂಡಲೇ ಬರುತ್ತೇನೆ' - ಎಂದು ಹೊರಟುಹೋದಳು ಮಿಡ್ ಬಾಯಿ.

ಬ್ರೆಡ್ ತಿನ್ನಬೇಕಂತ ತನಗೆ ಆಸೆಯಾಗಿತ್ತು. ಪಾರ್ತಕ್ಕ ಹಾಗೆ ಹೇಳುವುದು ಬೇಡವಿತ್ತು. ಅವರು ಮಾಂಸ ತಿಂದರೇನಾಯಿತು? ಬ್ರೆಡ್ ಮಾಂಸ ತಿಂದಿರುತ್ತದೆಯೇ? ಅಂದ ಹಾಗೆ ಬ್ರೆಡ್ಡನ್ನು ಹೇಗೆ ಮಾಡುತ್ತಾರೆ? ಇನ್ನೊಮ್ಮೆ ಹೋದಾಗ ತಿನ್ನಬೇಕು.

ಓಡಿಯಾಡುತ್ತಿದ್ದ ರತ್ನಬಂದು ಮಂಚದ ಮೇಲೆ ಕುಳಿತಳು. ಬಾಡಿ ಸೊಪ್ಪಾಗಿದ್ದ ಅವಳ ಮುಖ ಕಂಡ ಗೌರಮ್ಮನ ಕಣ್ಣಲ್ಲಿ ನೀರಾಡುತ್ತಿತ್ತು. `ಅವಳೆದರು ನೀನೇ ಕಣ್ಣೀರು ಹಾಕಿದರೆ?' - ಎಂದು ಜೋರು ಮಾಡುತ್ತಾ ಪಾರ್ತಕ್ಕ `ಹೆಣೆ ರತ್ನ, ಇದೊಂದು ಕಷಾಯ ಕುಡಿ ಮಗ. ವಾಯು ಹೊಟ್ಟೆನೋವಾದರೆ ಹೋದೀತು. ನಿಜವಾದ ಹೊಟ್ಟೆನೋವಾದರೆ ಜಾಸ್ತಿಯಾದೀತು'-ಎಂದಳು.

ಅದು ರತ್ನನ ಸ್ವರವೇ ಆಗಿರಲಿಲ್ಲ. ಬರೀ ನಿತ್ರಾಣದ್ದು. `ಅದಕ್ಕೆ ಎಲ್ಲ ಬೇಕು. ಮೊನ್ನೆ ಏನು ಹೇಳುತ್ತಿತ್ತು ಗೊತ್ತಿತ್ತ? ಮಗು ಹೊರಗೆ ಹೇಗೆ ಬರುತ್ತದೆ ಅಂತೆಳಿ.ಹೊಟ್ಟೆ ಬಗೆದು ಎಂದೆ. "ನಾ ಬಸುರಿಯಾಪುದಿಲ್ಲೇ..." ಎಂದು ಬೊಬ್ಬೆ ಹೊಡೆದದ್ದಂದರೆ ಆಗ!' ಗೌರಮ್ಮ ನಕ್ಕರು. ಮಂಚಕ್ಕೆ ಕೈಯೆರಡನ್ನೂ ಒತ್ತಿ ಹಲ್ಲುಕಚ್ಚಿ ಕುಳಿತಂತಿದ್ದ ರತ್ನನೂ ಕಿಸಕ್ಕೆಂದಳು.

ಪಾರ್ತಕ್ಕ `ಮತ್ತೆ? ಹಾಂಗೇ ಹೇಳಕು. ಊರು ಪಾರುಪತ್ತೆ ಬೇಕದಕ್ಕೆ. ಒಳ್ಳೆದಾಯಿತು, ಈಗ ಬರುತ್ತಾಳೆ ಕಾಣು , ಮಿಡ್ ಬಾಯಿ, ಚೂರಿ ಹಿಡಕೊಂಡು. ನೀನಿಲ್ಲೇ ನಿಂತಿದ್ದರೆ ನಿನ್ನ ಹೊಟ್ಟೆಯನ್ನೂ ಸೀಳಿ ಮಗು ಇತ್ತಾ ಕಾಂಬಳು' - ಎಂದರು. `ನಿನ್ನ ಹೊಟ್ಟೆಯನ್ನೇ ಸೀಳುವುದು' - ಎಂದು ಎದುರುತ್ತರ ಕೊಟ್ಟರೂ ಶಾಮಿ ಮತ್ತಲ್ಲಿ ನಿಲ್ಲಲಿಲ್ಲ. ಪುಟ್ಟ, ಜಯ ಆಡುವಲ್ಲಿಗೆ ಹೋಗಿ - ರತ್ನಕ್ಕನಿಗೆ ಹೊಟ್ಟೆನೋವು. ಸ್ವಲ್ಪ ಹೊತ್ತಲ್ಲಿ ಮಗು ಹುಟ್ಟುತ್ತದೆ ಎಂದು ಹೇಳಲಿಕ್ಕುಂಟಲ್ಲ!

ಮುಂದುವರಿಯುತ್ತದೆ...

- ವೈದೇಹಿ.

1 comments:

Anonymous said...

Dear sir,

namaskara.

we wish to ekanasu.com to reach each and every nook of karnataka and
heart of kannadikas.

regards,

Editor,
Dinakaran,
Bangalore

Post a Comment