ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್
ಬದುಕುವುದು ಏಕೆ ಎಂದು ಯಾರಾದರು ಕೇಳಿದರೆ ಜೀವಿಸುವುದಕ್ಕಾಗಿ ಎಂದು ಹೇಳುವವರು ಹಲವರು.ಜೀವನ ಮಾಡಬೇಕಾದರೆ ಕೆಲಸ ಅನಿವಾರ್ಯ.ಅನೇಕ ಮಂದಿ ತನ್ನ ಆಸಕ್ತಿದಾಯಕ ಕ್ಷೇತ್ರವನ್ನು ಆರಿಸಿಕೊಂಡು ಉದ್ಯೋಗವನ್ನು ಮಾಡಿದರೆ ,ಇನ್ನು ಕೆಲವರು ತನ್ನ ತಂದೆ ತಾಯಿ ಅಜ್ಜ ಅಜ್ಜಿ ಇವರೆಲ್ಲ ಜೀವನ ನಡೆಸಲು ಕೈಗೊಂಡ ಮಾರ್ಗವನ್ನೇ ಅನುಸರಿಸುತ್ತಾರೆ.ಹೆಚ್ಚಾಗಿ ನಮ್ಮ ಕಣ್ಣ ಮುಂದೆ ಕಾಣುವವರೆ ಚಮ್ಮಾರರು ಅರ್ಥಾತ್ ಚಪ್ಪಲಿ ರಿಪೇರಿ ಮಾಡುವವರು.ಚಪ್ಪಲಿ ರಿಪೇರಿ ಮಾಡುವವರನ್ನು ನಾವು ಪಟ್ಟಣ ಪ್ರದೇಶ, ನಗರಗಳಲ್ಲಿ ಫೂಟ್ ವೇರ್ ಅಂಗಡಿಗಳ ಪಕ್ಕ ಅಥವಾ ಫುಟ್ ಪಾತ್ ಕಡೆಗಳಲ್ಲಿ ಕಾಣುತ್ತೇವೆ.ಇವರ ಸೇವೆ ಎಲ್ಲರಿಗೂ ಅಗತ್ಯ.ನಾವು ಮದುವೆ ಸಮಾರಂಭಕ್ಕೋ, ಶಾಲಾ ಕಾಲೇಜಿಗೋ ಅಥವಾ ಇತರ ಕೆಲಸಗಳ ನಿಮಿತ್ತ ಪೇಟೆಗೆ ಹೋಗುವುದಾದರೆ ಅಂದದ ಚಪ್ಪಲಿಯನ್ನು ಹಾಕಿಕೊಂಡು ಹೋಗುತ್ತೇವೆ.ನಡೆಯುವಾಗ ಚಪ್ಪಲಿ ತುಂಡಾದರೆ ನಮ್ಮಲ್ಲಿ ಇರುವುದು ಎರಡೇ ಆಯ್ಕೆ.ಒಂದಾ ಅದನ್ನು ಎಸೆದು ಹೊಸ ಚಪ್ಪಲಿ ಕೊಂಡುಕೊಳ್ಳುವುದು ಅಥವಾ ಚಪ್ಪಲಿ ರಿಪೇರಿ ಮಾಡುವವರ ಬಳಿ ಹೋಗುವುದು.ಇನ್ನು ಕೆಲವು ಪುರುಷರು ಇದ್ದಾರೆ.ಕಾಲಿಗೆ ಶೂ ಏನಾದರು ಹಾಕಿಕೊಂಡಿದ್ದರೆ ಅದರ ಧೂಳನ್ನು ತೆಗೆದು ಪಾಲಿಶ್ ಮಾಡಲು ಚಪ್ಪಲಿ ರಿಪೇರಿ ಮಾಡುವಲ್ಲಿಗೆ ಹೋಗಿ ಕಾಲನ್ನೇ ತೋರಿಸಿ ಬೇಗ ಪಾಲಿಶ್ ಮಾಡಿ ಕೊಡಿ ಎನ್ನುವವರಿದ್ದಾರೆ.ತನ್ನ ಶೂವನ್ನು ತಾವಾಗಿಯೆ ಕಾಲಿಂದ ಜಾರಿಸಿ ತೆಗೆಸಿಕೊಡುವವರು ತುಂಬಾ ವಿರಳ.

ಇನ್ನು ಕೆಲವು ಹುಡುಗಿಯರು ರಸ್ತೆಯಲ್ಲಿ ಹೋಗುವಾಗ ಏನಾದರು ಅಪ್ಪಿ ತಪ್ಪಿ ಚಪ್ಪಲಿ ಮುರಿದುಕೊಂಡುರೆ ನಾಚಿಕೆಯಿಂದ ತಲೆ ತಗ್ಗಿಸಿ ಹೋಗುವ ರೀತಿಯನ್ನು ನೋಡುವುದೇ ಚೆಂದ.ಚಪ್ಪಲಿ ಹೊಲೆಯುವವರ ಸಹಾಯ ನಮಗೆ ಬೇಕೆ ಬೇಕು.ಉಜಿರೆಯ ಕಾಲೇಜು ರಸ್ತೆಯ ಬದಿಯಲ್ಲಿ ಲೋಕೇಶ್ ಸಮಗಾರ ಎಂಬುವವರು ಕಳೆದ ಕೆಲವು ವರ್ಷಗಳಿಂದ ಚಿಕ್ಕ ಆಂಗಡಿಯಲ್ಲಿ ಕೊಡೆ ರಿಪೇರಿ, ಬ್ಯಾಗ್ ರಿಪೇರಿ ಹಾಗೂ ಚಪ್ಪಲಿ ರಿಪೇರಿ ಮಾಡುತ್ತಿದ್ದಾರೆ.ದಿನವು ಇವರಿಗೆ ಬ್ಯುಸಿ.ವಿದ್ಯಾರ್ಥಿಗಳು ಇವರನ್ನು ಪ್ರೀತಿಯಿಂದ ಅಂಕಲ್ ಎಂದು ಕರೆಯುತ್ತಾರೆ.ಇವರ ವಿಶೇಷತೆ ಎಂದರೆ ಹೊಸ ಚಪ್ಪಲಿ ತಯಾರಿಸುವುದು.ಮಂಗಳೂರಿಗೆ ಹೋಗಿ ಬೇಕಾದ ಸಾಮಾಗ್ರಿಗಳನ್ನು ತಂದು ಉತ್ತಮ ಗುಣಮಟ್ಟದ ಲೆದರ್ ಚಪ್ಪಲಿಯನ್ನುಇಲ್ಲೇ ತಯಾರಿಸುವುದಲ್ಲದೆ ಕೈಗೆಟಕುವ ಬೆಲೆಗೆ ಗ್ರಾಹಕರಿಗೆ ನೀಡುತ್ತಾರೆ.


ಇವರ ತಂದೆ ಇದೇ ಕೆಲಸ ಮಾಡುತ್ತಿದ್ದರಂತೆ.ಇವರು ಶಾಲಾ ರಜಾದಿನಗಳಲ್ಲಿ ತಂದೆಯೊಂದಿಗೆ ಸೇರಿ ವೃತ್ತಿಕಲಿಯಲು ಸಹಾಯವಾಯಿತಂತೆ.ಚಪ್ಪಲಿ ರಿಪೇರಿ ಮಾಡುವುದರಿಂದಲೇ ತನ್ನ ವೃತ್ತಿ ಜೀವನವನ್ನು ಆರಂಭಿಸಿದೆ ಎನ್ನುವ ಇವರು ಇವತ್ತಿಗೂ ಅದನ್ನೇ ನಂಬಿ ಸುಖಕರ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಅಭಿಮಾನದಿಂದ ನುಡಿಯುತ್ತಾರೆ.

ಇವರ ಮನೆಯೊಡತಿ ಇವರಿಗೆ ಸಾಥ್ ನೀಡುತ್ತಾರೆ.ಒಂದು ದಿನಕ್ಕೆ ಕನಿಷ್ಟ ಮುನ್ನೂರಕಿಂತಲೂ ಹೆಚ್ಚು ಲಾಭ ಗಳಿಸಬಹುದು ಎನ್ನುವ ಇವರು ಬೆಳಿಗ್ಗೆ ಎಂಟು ಗಂಟೆಯಿಂದ ಸಂಜೆ ಏಳರವರೆಗೆ ಕೆಲಸ ಮಾಡುತ್ತಾರೆ.ಅಂಗಡಿಯಲ್ಲಿ ರೇಡಿಯೋ ಮೂಲಕ ಸಂಗೀತ ಕೇಳುವುದು ಇವರ ಹವ್ಯಾಸ.ಇವರೊಂದಿಗೆ ಕೆಲಸ ಮಾಡಿದವರು ಸ್ವಂತ ಉದ್ಯೋಗ ಮಾಡುತ್ತಿರುವುದು ಖುಷಿ ತಂದಿದೆ ಎನ್ನುತ್ತಾರೆ.ತನ್ನ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಕೊಡಬೇಕೆಂಬ ಆಶೆ ಇವರದು.

- ರಿಯಾಝ್.ಜಿ.ಉಜಿರೆ.

1 comments:

Abhirama Hegde said...

ಬೇರೆಯವರ ಪಾದರಕ್ಷಣೆ ಮಾಡಿ ತಮ್ಮ ಜೀವನ ರಕ್ಷಣೆ ಮಾಡಿಕೊಳ್ಳುತ್ತಿರುವ ಚಮ್ಮಾರರಿಗೆ ಜೈ ಹೋ!!

Post a Comment