ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್
ಪರಶುರಾಮ ಸೃಷ್ಠಿಯ ನಾಡು ತುಳುವ ನಾಡು. ಈ ತುಳುವನಾಡು ಉತ್ತರಕ್ಕೆ ಬಾರಕೂರಿನಿಂದ ದಕ್ಷಿಣಕ್ಕೆ ಮಂಜೇಶ್ವರದವರೆಗೆ ಹಬ್ಬಿಕೊಂಡಿದೆ. ಇಲ್ಲಿ ಅನೇಕ ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಆದರೆ ಆಡುಭಾಷೆ ಮಾತ್ರ ತುಳು. ತುಳುವ ನಾಡಿನ ವಿಶೇಷ ಆಕರ್ಷಣೆ ಇಲ್ಲಿನ ವಿಸ್ತಾರವಾದ ಕರಾವಳಿ ಪ್ರದೇಶ. ಈ ಕರಾವಳಿ ಪ್ರದೇಶದಲ್ಲಿ ವಾಸಿಸುವ ಜನರೇ ಮೊಗವೀರ ಜನಾಂಗದವರು. ಈ ಮೊಗವೀರರ ಕುಲಕಸುಬು ಮೀನುಗಾರಿಕೆ. ಮುಂಜಾನೆಯ ಸೂರ್ಯೋದಯಕ್ಕೆ ಸರಿಯಾಗಿ ಮೊಗವೀರರು ಮೀನು ಹಿಡಿಯುವುದಕ್ಕಾಗಿ ದೋಣಿಗಳನ್ನು ಬಳಸಿ ಸಮುದ್ರದ ಕಡೆಗೆ ಹೋಗುತ್ತಾರೆ. ಸಮುದ್ರದಲ್ಲಿ ಬಲೆ ಬೀಸಿ ಮೀನುಗಳನ್ನು ಹಿಡಿದು ಹಿಂದಿರುಗುವಾಗ ಸೂರ್ಯ ನೆತ್ತಿಯ ಮೇಲೆ ಬಂದು ನಿಂತಿರುತ್ತಾನೆ. ಹಿಡಿದು ತಂದ ಮೀನುಗಳನ್ನು ಕಡಲ ತಡಿಯಲ್ಲಿಯೇ ವ್ಯಾಪಾರ ಮಾಡುತ್ತಾರೆ. ಇನ್ನುಳಿದ ಮೀನುಗಳನ್ನು ಮೊಗವೀರ ಹೆಂಗಸರು ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡುತ್ತಾರೆ. ಅಲ್ಲೂ ಮಾರಾಟವಾಗದೇ ಉಳಿದ ಮೀನುಗಳನ್ನು ಉಪ್ಪು ಹಾಕಿ ಒಣಗಿಸುತ್ತಾರೆ.ಮೊಗವೀರರಿಗೆ ಮೀನುಗಾರಿಕೆಗೆ ದೋಣಿಯೇ ಆಧಾರ. ಪ್ರತಿಯೊಂದು ಮನೆಗೂ ಒಂದೊಂದು ದೋಣಿಯಿದ್ದರೂ ಮೊಗವೀರರು ಸಮೂಹವಾಗಿ ಮೀನು ಹಿಡಿಯುವುದನ್ನೇ ಹೆಚ್ಚಾಗಿ ಇಷ್ಟಪಡುತ್ತಾರೆ. ಫ್ರೆಂಚರು ಭಾರತಕ್ಕೆ ಆಗಮಿಸಿದ ಕಾಲದಲ್ಲಿ ತಮ್ಮ ವಸಾಹತುಗಳನ್ನು ಹೆಚ್ಚಾಗಿ ಕರಾವಳಿ ಪ್ರದೇಶಗಳಲ್ಲಿಯೇ ಸ್ಥಾಪಿಸಿದರು. ಕರಾವಳಿ ಪ್ರದೇಶದಲ್ಲಿದ್ದ ಮೀನುಗಾರರಿಗೆ ಫ್ರೆಂಚರು ಗುಂಪುಗುಂಪಾಗಿ ಮೀನುಗಾರಿಕೆ ನಡೆಸುವ ಸಮೂಹ ಮೀನುಗಾರಿಕೆಯನ್ನು ಪರಿಚಯಿಸಿದರು. ಈ ಸಮೂಹ ಮೀನುಗಾರಿಕೆಯನ್ನು ಮೊಗವೀರ ಜನಾಂಗದವರು ಪೀಳಿಗೆಯಿಂದ ಪೀಳಿಗೆಗೆ ಮುಂದುವರೆಸಿಕೊಂಡು ಬಂದಿದ್ದಾರೆ. ಮೊಗವೀರರು ಕೈರಂಪಣಿಯ ಮೂಲಕವೂ ಮೀನುಗಾರಿಕೆ ಮಾಡುವುದಿದೆ. ಕೈರಂಪಣಿ ಎಂದರೆ ಒಂದು ರೀತಿಯ ಸಾಮೂಹಿಕ ಮೀನುಗಾರಿಕೆಯಾಗಿದೆ. 10ರಿಂದ 20 ಮೊಗವೀರ ಜನರು ಒಂದು ಗುಂಪನ್ನು ರಚಿಸಿ ಸಮುದ್ರದಲ್ಲಿ ಸುಮಾರು 2 ಕಿ.ಮೀ. ದೂರ ದೋಣಿಗಳಲ್ಲಿ ಚಲಿಸಿ, ಬಲೆ ಬೀಸಿ ಮೀನುಗಳನ್ನು ಹಿಡಿಯುತ್ತಾರೆ. ಹಿಂದಿನ ಕಾಲದಲ್ಲಿ ಮರದ ದೋಣಿಗಳನ್ನು ಮಾತ್ರ ಬಳಸಿ ಕೈರಂಪಣಿಯಿಂದ ಮೀನುಗಾರಿಕೆ ನಡೆಸುತ್ತಿದ್ದರು. ಆದರೆ ಈಗ ಯಂತ್ರಗಳ ದೋಣಿಗಳನ್ನೂ ಬಳಸುತ್ತಿದ್ದಾರೆ. ಈ ಕೈರಂಪಣಿಯ ಮುಖ್ಯಸ್ಥನನ್ನು ತಂಡೇಲ್ ಎಂದು ಕರೆಯುತ್ತಾರೆ.

ಮೀನುಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದ್ದರೂ ಮೊಗವೀರರಿಗೆ ಸರಿಯಾದ ಆದಾಯ ದೊರಕುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಮಧ್ಯವರ್ತಿಗಳು . ಈ ಮಧ್ಯವರ್ತಿಗಳು ಮೊಗವೀರರಿಂದ ಕಡಿಮೆ ಬೆಲೆಗೆ ಮೀನುಗಳನ್ನು ಪಡೆದುಕೊಂಡು ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆಗೆ ಮಾರಾಟ ಮಾಡಿ ಲಾಭ ಗಳಿಸುತ್ತಾರೆ. ಇದರಿಂದಾಗಿ ಅದೆಷ್ಟೋ ಮೊಗವೀರ ಕುಟುಂಬಗಳು ಬಡತನದ ಬೇಗೆಯಲ್ಲಿಯೇ ಬೇಯುತ್ತಿವೆ. ಮನೆಯಲ್ಲಿ ಅವಿಭಕ್ತ ಕುಟುಂಬಗಳನ್ನಿಟ್ಟುಕೊಂಡು ಕಷ್ಟಕರ ಬದುಕು ಸಾಗಿಸುತ್ತಿದ್ದಾರೆ. ತಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡುವುದೂ ಇವರಿಂದ ಅಸಾಧ್ಯವಾಗಿದೆ. ಈ ಕಾರಣಕ್ಕಾಗಿಯೇ ಇರಬೇಕು ಹೆಚ್ಚಿನ ಮೊಗವೀರರು ತಮ್ಮ ಕೊನೆಯ ಮಗುವಿಗೆ ಮಾತ್ರ ವಿದ್ಯಾಭ್ಯಾಸವನ್ನು ನೀಡುತ್ತಿದ್ದಾರೆ.


ಆಚಾರ-ವಿಚಾರ

ಮೊಗವೀರರ ಆಚರಣೆ ಸಾಂಪ್ರದಾಯಗಳು ವಿಶೇಷವಾದವುಗಳು. ಊರಿನ ಎಲ್ಲಾ ಮನೆಗಳ ಸಭೆ, ಸಮಾರಂಭಗಳನ್ನು ನಿರ್ವಹಿಸುವವನು ಗುರಿಕಾರ. ಗುರಿಕಾರನನ್ನು ಮೊಗವೀರರು ತಂಡೇಲ್ ಎಂಬುವುದಾಗಿ ಕರೆಯುತ್ತಾರೆ. ತಂಡೇಲ್ ಕೈರಂಪಣಿಯ ಮುಖ್ಯಸ್ಥನಾಗಿರುತ್ತಾನೆ. ಆತ ಊರಿನ ಮುಖ್ಯಸ್ಥನೂ ಹೌದು. ಮೊಗವೀರರ ವಿವಾಹ ಆಚರಣೆ ಮನೆಯವರ ಮೇಲೆ ಸೀಮಿತವಾಗಿರುತ್ತದೆ. ಮನೆಯವರ ಒಪ್ಪಿಗೆ ಪಡೆದ ಮೇಲಷ್ಟೇ ವಿವಾಹ ಕಾರ್ಯ ಮುಂದುವರೆಯುತ್ತದೆ. ವಯುಕ್ತಿಕ ನಿರ್ಧಾರಗಳನ್ನು ತಳೆಯುವಲ್ಲಿ ಗಂಡು ಹೆಣ್ಣಿಗೆ ಅಷ್ಟೇನೂ ಸ್ವಾತಂತ್ರ್ಯ ಇರುವುದಿಲ್ಲ. ಹಿಂದಿನ ಕಾಲದಲ್ಲಿ ಮೊಗವೀರರಲ್ಲಿ ಬಾಲ್ಯ ವಿವಾಹ, ವರದಕ್ಷಿಣೆಗಳಂತಹ ಆಚರಣೆಗಳು ಕಂಡುಬರುತ್ತಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ವರದಕ್ಷಿಣೆ ಪಡೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಹೆಣ್ಣು ಮಕ್ಕಳು ಮೈನೆರೆದಾಗ ಆ ವಿಷಯವನ್ನು ಊರಿಗೆ ತಿಳಿಸಿ ಕಲಶ ಮುಹೂರ್ತ ಮಾಡಿಸಿ ಅವಳ ಹೆಸರಿನಲ್ಲಿ ದೇವರಿಗೆ ಪೂಜೆ ಮಾಡುವ ವಿಶೇಷ ಆಚರಣೆ ಇಂದಿಗೂ ಮೊಗವೀರರಲ್ಲಿದೆ.

ಮೊಗವೀರರ ವಿಶೇಷ ಹಬ್ಬ ದಿಂಡು ಹಬ್ಬ. ಈ ಹಬ್ಬವನ್ನು ದೀಪಾವಳಿಯ ನಾಲ್ಕು ದಿವಸದ ನಂತರ ಮೊಗವೀರರು ಆಚರಿಸುತ್ತಾರೆ. ದೀಪಾವಳಿ ಹಬ್ಬದ ದಿನದಂದು ಮಾರುಕಟ್ಟೆಯಲ್ಲಿ ಮೀನುಗಳಿಗೆ ವಿಶೇಷ ಬೇಡಿಕೆ ಇರುತ್ತದೆ. ಆ ದಿನದಂದು ಹೆಂಗಸರು ಮೀನುಗಳನ್ನು ಮಾರಾಟ ಮಾಡಿ ಅದಕ್ಕೆ ಆದಾಯವಾಗಿ ದವಸ ಧಾನ್ಯಗಳನ್ನು ಪಡೆದುಕೊಂಡು ನಾಲ್ಕು ದಿನದ ನಂತರ ದಿಂಡು ಹಬ್ಬವನ್ನು ಆಚರಿಸುವುದು ರೂಢಿಯಾಗಿದೆ. ತುಳುವನಾಡು ಭೂತಾರಾಧನೆಗೆ ಹೆಸರುವಾಸಿ. ಈ ಭೂತಾರಾಧನೆಗೆ ಮೊಗವೀರರೂ ಹೊರತಾಗಿಲ್ಲ. ಮೊಗವೀರರು ತಮ್ಮ ಕುಲದೈವವಾಗಿ ಪಂಜುರ್ಲಿ ದೈವವನ್ನು ಆರಾಧಿಸುತ್ತಾರೆ. ಬಬ್ಬರ್ಯ, ಭಗವತಿಗಳೆಂಬ ದೈವಗಳನ್ನೂ ಮೊಗವೀರ ಜನಾಂಗದವರು ಆರಾಧಿಸಿಕೊಂಡು ಬಂದಿದ್ದಾರೆ. ಊರಿನಲ್ಲಿ ಈ ದೈವಗಳಿಗೆ ನೇಮೋತ್ಸವ ಜರಗುತ್ತದೆ.

ಆಧುನಿಕ ಸ್ಥಿತಿಗತಿ...

ಇಂದು ಮೊಗವೀರರ ಜೀವನದಲ್ಲಿ ಮಂದಹಾಸ ಮೂಡಿದೆ. ಇವರ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಮೀನುಗಳಿಗೆ ಜಗತ್ತಿನಾದ್ಯಂತ ಬೇಡಿಕೆ ಹೆಚ್ಚಾದುದರಿಂದ ಮೊಗವೀರರ ಆದಾಯವೂ ಜಾಸ್ತಿಯಾಗಿದೆ. ಮೊಗವೀರ ಜನಾಂಗಕ್ಕಾಗಿಯೇ ಸರಕಾರ ವಿಶೇಷ ಸಹಕಾರವನ್ನು ನೀಡುತ್ತಿದೆ. ಬಡ ವರ್ಗದ ಮೊಗವೀರರಿಗೆ ವಸತಿಗಳನ್ನು ಕಲ್ಪಿಸಲು ಸರಕಾರ ಮತ್ಸ್ಯ ಯೋಜನೆಯ ಮೂಲಕ 40 ಸಾವಿರ ರೂಪಾಯಿಗಳ ಅನುದಾನವನ್ನು ನೀಡುತ್ತದೆ. ಮೊಗವೀರರು ಒಟ್ಟಾಗಿ ಸಹಕಾರಿ ಸಂಘಗಳನ್ನು ಸ್ಥಾಪಿಸಿದ್ದಾರೆ. ಈ ಸಹಕಾರಿ ಸಂಘದ ಸದಸ್ಯರಾದ ಮೊಗವೀರರಿಗೆ ಮಾತ್ರ ಈ ಮತ್ಸ್ಯ ಯೋಜನೆಯ ಅವಕಾಶ ದೊರಕುತ್ತದೆ. ಈ ಮತ್ಸ್ಯ ಯೋಜನೆಯ ಹಣವನ್ನು ಕಂತುಗಳ ರೂಪದಲ್ಲಿ ನೀಡಲಾಗುತ್ತದೆ. ಮೊಗವೀರರು ಮರದ ದೋಣಿಗಳ ಬದಲಾಗಿ ಈಗ ಹೆಚ್ಚಾಗಿ ಫೈಬರ್ ದೋಣಿಗಳನ್ನು ಬಳಸುತ್ತಿದ್ದಾರೆ. ಮೊಗವೀರರು ಮೀನುಗಳನ್ನು ನೇರವಾಗಿ ಬಂದರುಗಳಿಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ಮಧ್ಯವರ್ತಿಗಳ ಕಾಟ ತಪ್ಪಿದೆ. ಉತ್ತಮ ದರ್ಜೆಯ ಮೀನುಗಳಾದ ಮಾಂಜಿ, ಬೊಂಡಾಸ್, ಸಿಗಡಿ ಮೀನುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ.

ಇತ್ತೀಚಿನ ದಿನಗಳಲ್ಲಿ ಮೊಗವೀರರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿದ್ದಾರೆ. ಶಿಕ್ಷಣಕ್ಕಾಗಿ ಸರಕಾರ ಮೊಗವೀರರಿಗೆ ವಿಶೇಷ ನೆರವನ್ನು ನೀಡುತ್ತಿದೆ. ಮೊಗವೀರರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ಸೇರಿಸುವಷ್ಟೂ ಪ್ರಗತಿ ಸಾಧಿಸಿದ್ದಾರೆ. ಇಂದು ಅನೇಕ ಮೊಗವೀರ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆದು ವೈದ್ಯಕೀಯ, ಇಂಜಿನೀಯರಿಂಗ್ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮೊಗವೀರರ ಮುಖ್ಯ ಸಾಧನೆ ಎಂದರೆ ಸಂಘ ಸಂಸ್ಥೆಗಳ ನಿರ್ಮಾಣ. ಮೊಗವೀರ ಯುವಕರು ಒಟ್ಟಾಗಿ ಹಲವು ಸಂಘಗಳನ್ನು ಸ್ಥಾಪಿಸಿದ್ದಾರೆ. ಮಹಿಳೆಯರ ಪಾತ್ರವೂ ಈ ಸಂಘಗಳಲ್ಲಿವೆ. ಈ ಸಂಘಗಳಿಂದಾಗಿ ಬಡ ಮೊಗವೀರರಿಗೆ ಹಣಕಾಸಿನ ನೆರವು ದೊರಕುತ್ತಿದೆ. ಮಹಿಳೆಯರ ಸ್ಥಾನಮಾನವೂ ಸುಧಾರಿಸಿದೆ. ಮೊಗವೀರ ಮಹಿಳೆಯರೂ ಸಮಾಜದಲ್ಲಿ ಉನ್ನತ ಸ್ಥಾನಮಾನವನ್ನು ಪಡೆಯುತ್ತಿದ್ದಾರೆ.


ಭರತ್ ರಾಜ್,
ತೃತೀಯ ಬಿ.ಎ, ಗೋವಿಂದ ದಾಸ ಕಾಲೇಜು, ಸುರತ್ಕಲ್.

2 comments:

Anonymous said...

great being a student you have observed so many things about a community. i appreciate your keen interest on such.
here what i want to say is, see what are the problem that community is facing and what they are in need of. many of us write praising them but failed to bring out their real life conditions and threats. we enjoy eating fish but not listening at the sad story of those poors who are surviving in different ways.

Ur's
chinkra alvas college

Anonymous said...

good very nice Bharath.. keep it uu.. Darshan M kammaragatte.

Post a Comment