ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

`ಹೋಗುವೆನು ನಾ' - ಕುವೆಂಪು ಕವನ; ಕೆ.ವಿ. ಶಿಶಿರ ದೃಶ್ಯ ಶ್ರಾವ್ಯ -ಒಂದು ಅವಲೋಕನ

ಕೊನೆಯ ಕಂತು

ಈ ದೃಶ್ಯ ಶ್ರಾವ್ಯದಲ್ಲಿ ಇನ್ನೊಂದು ಮುಖ್ಯವಾಗಿ ಗಮನಿಸಬೇಕಾದ ಅಂಶವೊಂದಿದೆ. ಅದು ಶಿಶಿರ ಕೆ.ವಿ. ಅವರು ಇಡೀ ಕವನವನ್ನು ಬಳಸಿಕೊಳ್ಳದೆ ಕೇವಲ ಕೆಲವೇ ಕೆಲವು ಸಾಲುಗಳನ್ನು ಬಳಸಿಕೊಂಡು ಶ್ರಾವ್ಯಗಾಗಿರಿಸಿರುವುದು. ಇದರಿಂದ ಕೇಳುವ ದನಿ ಎಲ್ಲೂ ಎಡತಾಕದೆ ಸುಶ್ರಾವ್ಯವಾಗಿ ಮೂಡಿ ಬಂದಿದೆ. ಕೆಳಗಿನ ಸಾಲುಗಳಲ್ಲಿಯ ಕೊನೆಯ ಎರಡು ಸಾಲುಗಳು ಮತ್ತು ಆನಂತರದ ಪ್ಯಾರಾದಲ್ಲಿ ಕೊನೆಯ ಎರಡು ಸಾಲುಗಳನ್ನು ಉಪಯೋಗಿಸಿಕೊಂಡು ಬಹಳ ಜಾಣ್ಮೆಯಿಂದ ರಾಗ ಸಂಯೋಜಿಸುವುದು ಅದ್ಭುತ ಅನಿಸಿಬಿಡುತ್ತದೆ.ಎಲ್ಲಿ ತಿಂಗಳು ಕಾಡುಮಲೆಗಳ ಮೇಲೆ ಹಾಲ್ಮಳೆ ಸುರಿವುದೋ,
ಕಿವಿಯ ಜಿಹ್ವೆಗೆ ಎಲ್ಲಿ ಜೊನ್ನುಣಿ ತೇನೆ ಜೇನ್ಮಳೆ ಕರೆವುದೋ,
ಎಲ್ಲಿ ಕದ್ದಿಂಗಳಲಿ ತಾರಾಕೋಟಿ ಕಿಡಿಕಿಕ್ಕಿರಿವುದೋ,
ಕಾರಿನಿರುಳಲಿ ಮಿಂಚುಹುಳುಗಳ ಸೇನೆ ಕತ್ತಲೆಗಿರಿವುದೋ,

ಮೇಲಿನ ಸಾಲುಗಳಲ್ಲಿ ಕವಿ ತನ್ನ ಮಲೆನಾಡನ್ನು ಇನ್ನಷ್ಟು ವಿವರಿಸುತ್ತಾ ಅಲ್ಲಿ ಏನಿದೆ? ಹೇಗಿದೆಯೆಂದು ನೆನಪಿಸಿಕೊಳ್ಳುತ್ತಾ ಪ್ರಕೃತಿಯ ಸೊಬಗನ್ನು ತೆರೆದಿಡುತ್ತಾನೆ. ತಿಂಗಳ ಬೆಳಕು ಕಾಡುಮಲೆಗಳ ಮೇಲೆ ಹಾಲು ಮಳೆಯನ್ನು ಸುರಿಯುವಲ್ಲಿ, ಕಿವಿಯ ನಾಲಿಗೆಗೆ ಅಂದರೆ ಕಿವಿ ಕೇಳುವ ಇಂಪಾದ ಗಾನವನ್ನು ಗುಂಜಿಸುವ ಜೇನು ನೊಣಗಳ ಗುಂಜಾರವಿದೆಯೋ, ಬೆಳದಿಂಗಳು ಕದ್ದು ಹೋಗಿರುವಲ್ಲಿ ಕೋಟಿ ತಾರೆಗಳು ಮಿನುಗುತ್ತವೋ ಆ ಇರುಳಿನಲ್ಲಿ ಮಿಂಚುಹುಳುಗಳ ಗೊಂಚಿಲು ಕತ್ತಲೆಯನ್ನು ದೂರಮಾಡುತ್ತದೋ ಅಂತಹ ಮಲೆನಾಡಿಗೆ ಹೋಗಿ ಬಿಡುವ ದಾವಂತ ಕವಿಗೆ. ಇಲ್ಲಿ ಇನ್ನೊಂದು ಸೂಕ್ಷ್ಮವಾದ ವಿಚಾರವನ್ನು ತಿಳಿದುಕೊಳ್ಳುವ ಅಗತ್ಯವಿದೆ. ಕವನದಲ್ಲಿ ಬೆಳದಿಂಗಳು ಇದ್ದ ಮಲೆನಾಡು ಮತ್ತು ಕಾರಿನಿರುಳಿನ ಮಲೆನಾಡು ಎರಡೂ ವ್ಯತಿರಿಕ್ತಗಳನ್ನು ಪಕ್ಕಪಕ್ಕದಲ್ಲಿಟ್ಟು ಕವಿ ಮಲೆನಾಡನ್ನು ಬಣ್ಣಿಸುವಾಗ ಕವಿ ಮನ ಪುಳಕವಾಗದಿರದು.

ಮುಂದಿನ ಸಾಲುಗಳಲ್ಲಿ ಹಸಿರು ಚಿಮ್ಮುವ ಪಚ್ಚೆ ಪೈರುಗಳು ಬೆಳೆಯುವಲ್ಲಿ, ಗದ್ದೆಗಳ ನಡುವೆ ಬರುವ ಗಾಳಿಯಿದೆಯೋ ಅಲ್ಲಿ ಭ್ರಮರದ ಕಣ್ಣುಗಳ ಮಲೆನಾಡಿನ ಹೆಣ್ಣುಗಳ ನೋಟದಲ್ಲಿ ಹೃದಯ ಎಲ್ಲಿ ಸೆಳೆದು ಬಿಡುವುದೋ ಎಂಬ ಭಯ, ಹಾಗೆ ಎಲ್ಲಿ ಕಾಲವು ಸುಖದಲ್ಲಿ ತಿಳಿಯದ ಹಾಗೆ ಕಳೆದು ಹೋಗುವುದೋ ಅಂತಹ ಮಲೆನಾಡು ಕವಿಯನ್ನು ಕೂಗಿ ಕರೆವುದು.

ಎಲ್ಲಿ ಹಸುರನು ಚಿಮ್ಮಿ ಕಣ್ಣಿಗೆ ಪೈರು ಪಚ್ಚೆಯ ಬೆಳೆವುದೋ,
ಎಲ್ಲಿ ಗದ್ದೆಯ ಕೋಗು ಪವನನ ಹತಿಗೆ ತೆರೆತೆರೆಯೊಲೆವುದೋ,
ಬಿಂಗಗಣ್ಗಳ ಮಲೆಯ ಹೆಣ್ಗಳ ದಿಟ್ಟಿಯೆಲ್ಲೆದೆ ಸೆಳೆವುದೋ,
ಎಲ್ಲಿ ಕಾಲವು ತೇಲಿ ಸುಖದಲಿ ತಿಳಿಯದಂತೆಯೆ ಕಳೆವುದೋ,

ದೃಶ್ಯಶ್ರಾವ್ಯದಲ್ಲಿ ಎಲ್ಲಿ ಕದ್ದಿಂಗಳಲಿ ತಾರಾಕೋಟಿ ಕಿಡಿಕಿಕ್ಕಿರಿವುದೋ, ಕಾರಿನಿರುಳಲಿ ಮಿಂಚುಹುಳುಗಳ ಸೇನೆ ಕತ್ತಲೆಗಿರಿವುದೋ ಮತ್ತು ಬಿಂಗಗಣ್ಗಳ ಮಲೆಯ ಹೆಣ್ಗಳ ದಿಟ್ಟಿಯೆಲ್ಲೆದೆ ಸೆಳೆವುದೋ, ಎಲ್ಲಿ ಕಾಲವು ತೇಲಿ ಸುಖದಲಿ ತಿಳಿಯದಂತೆಯೆ ಕಳೆವುದೋ ಬಹಳ ಅದ್ಭುತವಾಗಿ ಕೇಳಿಸುವುದಲ್ಲದೆ ಮಲೆನಾಡಿನ ಸದ್ಯದ ಸ್ಥಿತಿಯನ್ನು ತೋರಿಸುತ್ತದೆ. ದೃಶ್ಯ ಮಾಧ್ಯಮಕ್ಕೆ ಕವನ ಮತ್ತು ಕಥೆಯನ್ನು ಅಳವಡಿಸುವಾಗ ಕೆಲವೊಂದು ಚೌಕಟ್ಟುಗಳಿರುತ್ತದೆ. ಆ ಸಮಯದಲ್ಲಿ ಸರಿಯಾದ ರೂಪದರ್ಶಿಗಳಿಲ್ಲದೆ ಅಥವಾ ಪರಿಕರಗಳಿರದೆ ನಿರ್ದಿಷ್ಟವಾದ ರೂಪುರೇಷೆ ಬರಲು ಸಾಧ್ಯವಿಲ್ಲ. ಹಾಗೆಯೇ ಇಲ್ಲಿ ಕಲಾವಿದರ ಕೊರತೆ ಎದ್ದು ಕಾಣುತ್ತದೆ. ಅತೀ ಕಡಿಮೆ ಖರ್ಚಿನಲ್ಲಿ ದೃಶ್ಯವನ್ನು ಸೆರೆಹಿಡಿಯುವ ಪ್ರಯತ್ನವನ್ನು ಮಾಡಲಾಗಿದೆ ಅನಿಸಿದರೆ ಹೆಚ್ಚಲ್ಲ. ಹಾಗಾಗಿ ಇನ್ನೂ ಪ್ರಕೃತಿಯ ಮತ್ತು ರೂಪದರ್ಶಿಗಳ ಎಕ್ಸ್ಪೋಸಿಂಗ್ ಆಗಬೇಕಾಗಿತ್ತು ಅನ್ನುವುದು ಸ್ಪಷ್ಟವಾಗಿದೆ.

ಅಲ್ಲಿಗೈದುವೆನಲ್ಲಿಗೈದುವೆನಿಲ್ಲಿ ಬೇಸರವಾಗಿದೆ;
ಕಾಡುಮಲೆಗಳನಲೆವ ಹುದ್ದಿನ ಕಿಚ್ಚು ಹೃದಯದಿ ರೇಗಿದೆ!
ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ;
ಹಸುರು ಸೊಂಪಿನ ಬಿಸಿಲು ತಂಪಿನ ಗಾನದಿಂಪಿನ ಕೂಡಿಗೆ!

ಈ ಸಾಲುಗಳಲ್ಲಿ ಬಯಲು ಸೀಮೆ ಬೇಸರವಾಗಿ ಮಲೆನಾಡಿಗೆ ಹೋಗುವೆನೆನ್ನುವ ಕವಿಯ ತುಡಿತ ಮತ್ತೆ ಮತ್ತೆ ಅನುರಣಿಸುತ್ತದೆ. ಇದಿಷ್ಟು ವಾಸ್ತವತೆಯ ಮಗ್ಗುಲನ್ನು ಸೂಚಿಸಿದರೆ ಉಳಿದಂತೆ ಭಾವನೆಯ ಲೋಕಕ್ಕೆ ಕವಿ ಇಳಿಯುವುದನ್ನು ಮುಂದಿನ ಸಾಲುಗಳಲ್ಲಿ ನೋಡಬಹುದು.

ಅಲ್ಲಿ ಭಾವದ ಬೆಂಕಿಹಕ್ಕಿಯ ಮಿಂಚುರೆಕ್ಕೆಯನೇರುವೆ;
ಧರಣಿ, ದಿನಮಣಿ, ತಾರೆ, ನೀಹಾರಿಕೆಯ ನೇಮಿಯ ಮೀರುವೆ!
ಕಾಲದಾಚೆಗೆ, ದೇಶದಾಚೆಗೆ, ಚಿಂತೆಯಾಚೆಗೆ ಹಾರುವ;
ಕಾವ್ಯಕನ್ಯಾಶ್ರಾವ್ಯಕಂಠದೊಳಾತ್ಮಭೂತಿಯ ಸಾರುವೆ!

ಇಲ್ಲಿ ಬೆಂಕಿಯ ಹಕ್ಕಿಯೆನ್ನುವುದು ವಾಸ್ತವದಲ್ಲಿಲ್ಲದ್ದು; ಅದು ಭಾವನಾತ್ಮಕವಾದದ್ದು. ಕವಿ ತನ್ನ ನಾಡಿನ ಬಗ್ಗೆ ಹೇಳುತ್ತಾ ಹೇಳುತ್ತಾ ಭಾವದ ಬೆಂಕಿ ಹಕ್ಕಿಯೆನ್ನುವ ಉತ್ಪ್ರೇಕ್ಷೆಗೆ ಇಳಿಯುತ್ತಾ ಅದರ ಮಿಂಚಿನಂತಹ ರೆಕ್ಕೆಯನ್ನು ಏರುತ್ತಾ, ಭೂಮಿ, ಸೂರ್ಯ, ಚಂದ್ರ, ತಾರೆಗಳನ್ನು ಮೀರಿ ಹೋಗುವೆನೆನ್ನುತ್ತಾನೆ. ಮತ್ತು ಕಾಲ, ದೇಶ, ಚಿಂತೆಯ ದಿಗಂತವನ್ನು ಹಾರಿ ಕಾವ್ಯ ಶ್ರಾವ್ಯಗಳಲ್ಲಿ ಆತ್ಮಭೂತಿಯನ್ನು ಸಾರುವುದನ್ನು ಹೇಳಿಕೊಳ್ಳುತ್ತಾನೆ.

ನಗರ ನಾಗರಿಕತೆಯ ಗಲಿಬಿಲಿ ಅಲ್ಲಿ ಸೋಂಕದು, ಸುಳಿಯದು,
ದೇಶದೇಶದ ವೈರಯುದ್ಧದ ಸುದ್ದಿಯೊಂದೂ ತಿಳಿಯದು.
`ತಿಳಿಯದಿರುವುದೆ ತಿಳಿವು' ಎಂಬುವ ನನ್ನಿ ಆಯೆಡೆ ತಿಳಿವುದು,
`ತಿಳಿಯೆ ನೋವಿರೆ, ತಿಳಿಯದಿರುವುದೆ ಜಾಣ್ಮೆ' ಎಂಬರಿವುಳಿವುದು.

ಅಲ್ಲಿ ನಗರ ನಾಗರೀಕತೆಯ ಗಲಿಬಿಲಿಯಿಲ್ಲ; ದೇಶದೇಶ ಹಗೆತನ, ಯುದ್ಧದ ಸುದ್ದಿ ತಿಳಿಯುವುದಿಲ್ಲ. ತಿಯದಿರುವುದೆ ತಿಳಿವು ಮತ್ತು ತಿಳಿಯೆ ನೋವಿರೆ, ತಿಳಿಯದಿರುವುದು ಜಾಣ್ಮೆಯೆಂದು ತನ್ನನ್ನು ತಾನು ಸಮಾಧಾನಿಸುತ್ತಾ ಮುಂದಿನ ಸಾಲುಗಳನ್ನು ಹೇಳುತ್ತಾ ತನ್ನೂರಿನ ಕನಸು ಕಾಣುತ್ತಾನೆ.

ಶಿಶಿರರ ದೃಶ್ಯಶ್ರಾವ್ಯದಲ್ಲಿಯೂ ನೇರ ಮಣ್ಣಿನ ದಾರಿಯೊಂದು ತೆರೆದುಕೊಳ್ಳುತ್ತಾ ಕಾಲದಾಚೆಗೆ, ದೇಶದಾಚೆಗೆ, ಚಿಂತೆಯಾಚೆಗೆ ಎಲ್ಲವನ್ನು ತೊರೆದು ಸಾಗುವಂತೆ ಕೊನೆಯಾಗುತ್ತದೆ.

ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ;
ಮಲೆಯನಾಡಿಗೆ, ಮಳೆಯ ಬೀಡಿಗೆ ಸಿರಿಯ ಚೆಲುವಿನ ರೂಢಿಗೆ.
ಬೇಸರಾಗಿದೆ ಬಯಲು, ಹೋಗುವೆ ಮಲೆಯ ಕಣಿವೆಯ ಕಾಡಿಗೆ;
ಹಸುರು ಸೊಂಪಿನ ಬಿಸಿಲು ತಂಪಿನ ಗಾನದಿಂಪಿನ ಕೂಡಿಗೆ!

ಒಟ್ಟಾರೆಯಾಗಿ ಕವನಗಳನ್ನು ಕವಿತೆಗಳನ್ನು ಓದಲು ಪ್ರಚೋದಿಸುವ ಒಂದು ಸುಂದರ ದೃಶ್ಯ ಶ್ರಾವ್ಯ ಈ `ಹೋಗುವೆನು ನಾ' ಒಂದು ಪ್ರಾಯೋಗಿಕ ಕಿರುಚಿತ್ರವಾಗಿ ಮೂಡಿಬಂದಿದೆ. ಶಿಶಿರ ಕೆ. ವಿ. ಅವರಿಗೆ ಅಭಿನಂದನೆಗಳು. ನಿಮ್ಮಿಂದ ಇನ್ನಷ್ಟು ಶ್ರೇಷ್ಠ ಕವನಗಳು ದೃಶ್ಯಮಯವಾಗಿ ಮೂಡಿಬರಲಿ.

(ಮುಗಿಯಿತು)
ದೃಶ್ಯ ಕೃಪೆ : ಶಿಶಿರ ಕೆ. ವಿ.
ರೂಪದರ್ಶಿ : ಸುಭಾಷ್ ಹಾರೆಗೊಪ್ಪ
- ಅನು ಬೆಳ್ಳೆ

0 comments:

Post a Comment