ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:03 PM

ಅಸ್ಪೃಶ್ಯರು

Posted by ekanasu

ಸಾಹಿತ್ಯ
ವೈದೇಹಿ ಕಾದಂಬರಿ : ಭಾಗ - 3

ಮಕ್ಕಳಿಗೆಲ್ಲ ಬೇಗ ಊಟಹಾಕಿದ್ದಾಳೆ ಸರೋಜ. ಪುಟ್ಟ ಜಯರಿಗೆ ನಿದ್ದೆ ಬಂದಾಯಿತು. ಇನ್ನೂ ಹೆರಿಗೆಯಾಗಿಲ್ಲ. ಈಗ, ಇನ್ನು ಒಂದು ಸ್ವಲ್ಪ ಹೊತ್ತಿನೊಳಗೆ ಎಂಬ ಒಸಗೆ ಮಾತ್ರ ಬರುತ್ತಿದೆ. ಅವತ್ತಿಡೀ ಕೆಲಸ ತನ್ನ ಮೇಲೆ ಬಿದ್ದದ್ದಕ್ಕೂ , ಜೊತೆಗೆ ರತ್ನನ ಹಿರಿಯ ಮಗ ರವಿಯನ್ನೂ ನೋಡಿಕೊಂಡು ಸಾಕಾಗಿದ್ದಕ್ಕೂ ಸರೋಜನಿಗೆ ಕಣ್ಣೆಳೆಯುತ್ತಿದೆ.ತಮ್ಮ ಶಿವನನ್ನು ಕರೆದು `ಮಣಿ , ಮಗು ಹುಟ್ಟಿದ ಕೂಡಲೆ ನನ್ನನ್ನು ಕರೆ.ರವಿಗೆ ನಿದ್ರೆ ಬರುತ್ತಿದೆ.ಮಲಗಿಸಲು ಹೋಗುತ್ತೇನೆ' - ಎಂದಳು. `ಹೂಂ ಹೂಂ ಮಗುವಿನ ಹೆಳೆ , ತನ್ನ ಬೆಳೆ ' - ಎಂದ ಶಿವ.
ಈಗ ಶಾಮಿ ಮತ್ತು ಶಿವ ಮಾತ್ರ ಕಾಯುತ್ತಿದ್ದಾರೆ. ಗಂಟೆ ದಾಟುತ್ತಾ ಇದೆ. ಗೌರಮ್ಮ `ಮಕ್ಕಳೇ , ಮಲಗಬಾರದ?' - ಎಂದರೆ `ಹೂಂ' ಎನ್ನುತ್ತಾರೆ. ಕೂತಲ್ಲಿಂದ ಹಂದುವುದಿಲ್ಲ.ಶಾಮಿ ಅಣ್ಣನೊಡನೆ ಪಿಸಿ ಪಿಸಿಯಾಗಿ ಕೇಳಿದಳು.
`ಹೆರುವುದೆಂದರೆ ಹೇಗೆ?'
ಶಿವ ಜೋರಿನಿಂದೊಮ್ಮೆ ಅವಳತ್ತ ನೋಡಿದ. `ಇಸಿಸಿ, ಬೇರೆ ಏನಿಲ್ಲವ ನಿಂಗೆ ಕೇಳಲಿಕ್ಕೆ? ಸುಮ್ಮನೆ ಕೂತುಕೋ' - ತನಗೆ ಗೊತ್ತಿಲ್ಲವೆಂಬ ಸುಳಿವು ಶಾಮಿಗೆ ಸಿಕ್ಕದಂತೆ ಗೊತ್ತಿದ್ದೂ ಹೇಳಿದವನಂತಹ ಮುಖ ಹೊತ್ತಿದ್ದ.
ಶಾಮಿಯೇ ಕಿವಿಯಲ್ಲಿ `ಹೊಟ್ಟೆ ಬಗೆಯುತ್ತಾರಂತೆ '
`ಹಾಗೆ ಮಾಡಬೇಕು ನಿನ್ನಂಥವರಿಗೆ'
`ಹೋಗ.'
`ಹೆಣೆ , ಒಂದು ಕ್ಷಣ ಬಾಯಿ ಹೊಲಿದುಕೊಳ್ಳುತ್ತಿಯ? ಈ ಅಪರ ರಾತ್ರಿಗೆ ಹೀಗೆ ನಿದ್ದೆ ಮಾಡದೆ ಕೂತದ್ದು ಯಾಕೆ ಅಂತ ಈಗ!' ಕೋಣೆಯೊಳಗಿಂದಲೇ ಗೌರಮ್ಮ ಗದರಿಸಿದರು.
ಮಿಡ್ ಬಾಯಿಯ ಸ್ವರ ಕೇಳುತ್ತಿತ್ತು. `ಹೂ....ಹಾ....ಗೆ ನಿಧಾ...ನ. ಇನ್ನು ಒಂದೇ ಒಂದು ನೋವು ಕೊಟ್ಟುಬಿಡು...'
`ಮತ್ತೆ ಮಕ್ಕಳು ಬೇಕೆಂದರೆ ಸುಮ್ಮನೆ ಆಗುತ್ತದೆಯೇ?' - ಪಾರ್ತಕ್ಕ.
ಗೌರಮ್ಮ ಪುನಃ ಕೇಳಿದರು. `ಮಕ್ಕಳೇ , ಮಲಗಿಕೊಳ್ಳಿ ಹೋಗಿ.'
ಇಬ್ಬರೂ ಏಳಲಿಲ್ಲ.
ಶಾಮಿ ಕುಪ್ಪಳಿಸಿ ಶಿವನಿಗೆ ಮತ್ತಷ್ಟು ಹತ್ತಿರ ಕುಳಿತಳು.
`ಅವತ್ತು ಎಮ್ಮೆ ಕರುಹಾಕಿತ್ತಲ್ಲ. ರಾತ್ರಿಯಿಡೀ ಕಸ ಬಿದ್ದಿರಲಿಲ್ಲ. ಸೀತು ಚಿಮಿಣಿ ದೀಪ ಇಟ್ಟುಕೊಂಡು ಅದು ಬೀಳುವುದನ್ನೇ ಕಾಯುತ್ತಾ ಕುಳಿತಳು. ಕಸ ತಿಂದರೆ ಎಮ್ಮೆ ಹಾಲುಕೊಡುವುದಿಲ್ಲ ಅಂತಲ್ಲ! ಅಮ್ಮ ಎಷ್ಟು ಬೇಡವೆಂದರೂ ನಾನು ಸೀತುವಿನ ಒಟ್ಟಿಗೆ ಕೂತಿದ್ದೆ... ಬರೀ ಮೀನು ಜಂಬು ಮಾರಾಯ ಅವಳು.'
`ಮತ್ತೆ ? ಮೀನು ತಿಂದವರ ಹತ್ತಿರ ಮೀನು ವಾಸನೆ ಅಲ್ಲದೆ ಬೇರೆಯದು ಇರುತ್ತದ?"
`ಆ ದಿನ ಎಂಥೆಂಥಾ ಕತೆ ಹೇಳಿದಳು ಗೊತ್ತುಂಟ? ಹಟ್ಟಿಯ ಹಿಂದೆ ಹಾಯ್ಗುಳಿ ದೈವ ಇದೆಯಂತೆ. ಅದು ಬೇಗ ಕಸ ಬೀಳಲು ಬಿಡುವುದಿಲ್ಲವಂತೆ. ಅದಕ್ಕೊಂದು ಮುಟ್ಸು ಮಾಡಿದ್ದೇನೆ - ಎಂದಳು. ಕೆಂಪಿ ದನ ಯಾಕೆ ಹಾಲು ಕೊಡುವುದಿಲ್ಲವಂತೆ ಆದಿತ್ಯವಾರ ಗೆಂಡದಲ್ಲಿ ಕೇಳುತ್ತಾಳಂತೆ. ಒಂದು ಸಲ ನಮ್ಮನ್ನೆಲ್ಲ ಕರೆದುಕೊಂಡು ಹೋಗುತ್ತೇನೆ ಗೆಂಡಕ್ಕೆ ಎಂದಿದ್ದಾಳೆ. ಬರುವುದಾದರೆ ಬಾ... ಕಡೆಗೂ ಬಿತ್ತು ಕಸ. ಅವಳು ಅದನ್ನು ಮಡಕೆಗೆ ಎತ್ತಿ ಹಾಕಿ ಕೊಂಡ ತೋಡಿ ಹುಗಿದು ಬಂದಳು.'
`ಕಸ ಎಂದರೆ?'
ಆಹಾ! ಈಗ ತನ್ನ ಸರದಿ! ಕಸ ಎಂದರೆ ಏನಂತ ನಾನೂ ಸೀತುವಿನ ಹತ್ತಿರ ಕೇಳಿದ್ದೆ. ಆಕೆಯೂ ಹೇಳಿರಲಿಲ್ಲ. `ಕಸ ಎಂದರೆ ಕಸ' - ಎಂದಿದ್ದಳಲ್ಲ! ತಾನೂ `ಕಸ ಎಂದರೆ, ಕಸ'! ಅಷ್ಟೂ ಗೊತ್ತಿಲ್ಲನ' - ಎಂದಳು.
`ನಿನ್ನ ಮಂಡೆ.'
`ನಿನ್ನ ಮಂಡೆ.'
`ಬಾಯಿ ಮುಚ್ಚುತ್ತೀರ ಇಲ್ಲವ! ಅಲ್ಲ ಮಕ್ಕಳೆ , ನಿಮಗೆ ನಿದ್ದೆಯಾದರೂ ಬರುವುದಿಲ್ಲವ ಎಂತದು?'
`...'
ರತ್ನ ಅಮ್ಮಾ ಎಂದು ಗಟ್ಟಿಯಾಗಿ ಒಮ್ಮೆ ಕಿರುಚಿದಳು... ಸ್ವಲ್ಪ ಹೊತ್ತಿನಲ್ಲಿಯೇ....

ಮುಂದುವರಿಯುತ್ತದೆ...

- ವೈದೇಹಿ.

0 comments:

Post a Comment