ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ದೃಶ್ಯ ಮಾಧ್ಯಮದ ನೆನಪಿನ ಸವಾರಿ...

ಲೇಖನ ಮಾಲೆ : ಹದಿನೇಳನೆ ಕಂತು

ಫೋಟೋಕಾಮಿಕ್ಸ್ ಎಂಬ ಆಕರ್ಷಣೆ

ಸಿನಿಮಾದಲ್ಲಿ ಕಥೆ ಹೇಳುವುದನ್ನು ಅಡೆತಡೆಯಿಲ್ಲದೆ ಅಥವಾ ಯಾವ ಸೆನ್ಸಾರ್ ಇಲ್ಲದೆ ನೇರವಾಗಿ ಹೇಳಿಕೊಂಡು ಹೋಗಬಹುದು. ಅಲ್ಲದೆ ಸೃಜನಶೀಲತೆಯಿಂದ ವಿವಿಧ ಆಯಾಮಗಳಲ್ಲಿ ಕಥೆಯನ್ನು ಬಿಚ್ಚಿಡುತ್ತಾ ಸಾಂಗವಾಗಿ ಸಾಗಿಸುವುದು ಸಿನಿಮಾದ ಇನ್ನೊಂದು ಶೈಲಿಯಾಗಿರಬಹುದು. ಇಲ್ಲಿ ಪಾತ್ರಗಳಿಗೆ ಜೀವಂತಿಕೆಯಿದೆ ಮತ್ತು ಅವು ತಮ್ಮ ತಮ್ಮ ಡೈಲಾಗುಗಳನ್ನು ಪ್ರಸೆಂಟ್ ಮಾಡುತ್ತಾ ಇಡೀ ಸಿನಿಮಾಕ್ಕೊಂದು ಚೌಕಟ್ಟನ್ನು ನಿರ್ಮಿಸಿಬಿಡುತ್ತವೆ. ಇದರಿಂದ ಒಂದು ಕಥೆಯನ್ನು ಸಿನಿಮಾದಲ್ಲಿ ಹೇಗೆ ಪ್ರೆಸೆಂಟ್ ಮಾಡಬಹುದೋ ಅದನ್ನು ಸುಲಭವಾಗಿ ಡೈಲಾಗ್ ಮತ್ತು ದೃಶ್ಯಗಳ ಮೂಲಕ ತೋರಿಸಬಹುದು.
ಆದರೆ ಫೋಟೋ ಕಾಮಿಕ್ಸ್ ಸೃಜನಶೀಲತೆಗೆ ಒಂದು ಸವಾಲಾಗಿದೆ. ಇಲ್ಲಿ ಸ್ಥಿರ ಚಿತ್ರಗಳಿರುವುದರಿಂದ ಉದ್ದುದ್ದ ಡೈಲಾಗ್ ಹೇಳುವಂತಿಲ್ಲ. ಸೀಮಿತ ಛಾಯಾಚಿತ್ರಗಳ ಮೂಲಕ ಮೂಲ ಕಥೆಗೆ ದಕ್ಕೆಯಾಗದಂತೆ ಕೆಲವೇ ಕಲವು ತೂಕದ ಸಂಭಾಷಣೆಯ ಮೂಲಕ ಕಥೆಯನ್ನು ಹದಿನೈದರಿಂದ ಇಪ್ಪತ್ತು ಕಂತುಗಳ ಮೂಲಕ ಹೇಳಬೇಕಾಗಿರುವುದು ಫೋಟೋಕಾಮಿಕ್ಸ್ನ ವಿಶೇಷತೆಯಾಗಿದೆ. ಆದ್ದರಿಂದಾಗಿಯೇ ಅಂತಹ ಸಾಹಸ ನನ್ನನ್ನು ಕೊರೆಯುತ್ತಾ ಇತ್ತು.

ನಾನು ಯಾವುದೇ ಕಥೆ, ಕಾದಂಬರಿಯಾಗಲಿ ಬರೆದರೆ ಅದನ್ನು ದೃಶ್ಯಮಾಧ್ಯಮಕ್ಕೆ ಹೇಗೆ ಅಳವಡಿಸುವುದೆನ್ನುವುದನ್ನು ಆಲೋಚಿಸುತ್ತಿರುತ್ತೇನೆ. ಹಾಗೆ ಅದೆಷ್ಟೋ ಕಥೆಗಳು ಸಿನಿಮೀಯವಾಗಿಯೂ ಮೂಡಿ ಬಂದಿದೆಯೆಂದರೆ ನಾನು ಅದನ್ನು ಒಪ್ಪಿಕೊಳ್ಳಲೇಬೇಕು.
ನಾನು ಕಾಲೇಜು ಓದುತ್ತಿರುವಾಗ ಸುಧಾ ವಾರಪತ್ರಿಕೆಯಲ್ಲಿ ಫೋಟೋಕಾಮಿಕ್ಸ್ ಅನ್ನುವ ಹೊಸ ಅಲೆಯ ಧಾರಾವಾಹಿಗಳು ಆರಂಭವಾಗಿದ್ದವು. ಕೇವಲ ಫ್ಯಾಂಟಮ್, ರಾಮು ಶಾಮು, ಚಿಕ್ಕ ದೊಡ್ಡ, ವಿಕ್ರಮ್ ಮುಂತಾದ ಕಾರ್ಟೂನ್ ಕಾಮಿಕ್ಸ್ಗಳನ್ನು ನೋಡುತ್ತಿದ್ದ ನನಗೆ ಅಲ್ಲೊಬ್ಬ ಕಲಾವಿದ ಪಾತ್ರಗಳಿಗೆ ಜೀವ ತುಂಬುವುದು ಒಂದು ರೀತಿಯ ಹೊಸತನವನ್ನ ಈ ಕಾಮಿಕ್ಸ್ಗಳಿಗೆ ಕೊಡುತ್ತಿದೆಯೆನಿಸುತ್ತಿತ್ತು. ಈಗ ಖ್ಯಾತ ನಟರಾಗಿರುವ ಪ್ರಕಾಶ್ ರೈಯಂತಹ ಪ್ರತಿಭಾವಂತ ನಟರು ಕೂಡ ಆಗ ಇಂತಹ ಫೋಟೋಕಾಮಿಕ್ಸ್ಗಳಲ್ಲಿ ನಟಿಸಿದ್ದಾರೆ ಅಂದರೆ ಆಶ್ಚರ್ಯವೆ. ಸುಧಾದಲ್ಲಿ ಮೊದಲಬಾರಿಗೆ ಫೋಟೋಕಾಮಿಕ್ಸ್ ಟ್ರೆಂಡ್ ಆರಂಭವಾಯಿತು. ಮೊದಲಿಗೆ ಬೇಟೆ ಆನಂತರ ಜಾಲ, ಇಂಚರ, ದಾಳ, ನಕ್ಷತ್ರ ಮೀನು ಹೀಗೆ ತುಂಬಾ ಕಾಮಿಕ್ಸ್ಗಳು ಪ್ರಕಟವಾದವು. ಅದೇ ರೀತಿ ಸುದ್ಧಿ ಸಂಗಾತಿ ಅನ್ನುವ ಪತ್ರಿಕೆಯಲ್ಲಿ ಕೂಡ ಒಂದು ಫೋಟೋ ಕಾಮಿಕ್ಸ್ ಪ್ರಕಟವಾಗಿತ್ತು. ಬಳಿಕ ಇತ್ತೀಚೆಗೆ ಕರ್ಮವೀರ ಪತ್ರಿಕೆ ಕೂಡ ಅಂತಹ ಧಾರಾವಾಹಿಯನ್ನು ಪ್ರಕಟಿಸಿತ್ತು. ಈ ಕ್ರಿಯಾಶೀಲತೆಯ ಮತ್ತು ಸೃಜನಶೀಲತೆಯ ಕೆಲಸ ಮೊದಲಿನಿಂದಲೂ ನನ್ನ ತಲೆಯಲ್ಲಿ ತಿರುಗುತ್ತಲೇ ಇದ್ದವು.

ಹಾಗಾಗಿಯೋ ಅಥವಾ ಒಂದು ರೀತಿಯ ಛಾಲೆಂಜಿಂಗ್ ಆಗಿರೋ ಫೋಟೋಕಾಮಿಕ್ಸ್ನಿಂದಾಗಿಯೋ ನಾನು ಅಂತಹ ಪ್ರೋಜೆಕ್ಟ್ ಒಂದನ್ನು ನಿರ್ಮಿಸಿಕೊಂಡೆ. ಆದರೆ ಅದನ್ನು ಹೇಗೆ ಮತ್ತು ಯಾವ ರೀತಿಯಲ್ಲಿ ಪತ್ರಿಕೆಗೆ ಮಾಡಿಕೊಡಬೇಕೆನ್ನುವುದು ಮಾತ್ರ ಒಗಟಾಗಿತ್ತು. ಆ ಸಮಯದಲ್ಲಿ ಮೊಬೈಲ್ ಫೋನ್ ನನ್ನಂತಹ ಒಬ್ಬ ಲೇಮ್ಯಾನ್ಗೂ ಎಟಕುವಷ್ಟು ಬೆಳವಣಿಗೆ ಪಡೆದಿತ್ತು. ಮತ್ತು ನಾನು ಜನಪ್ರಿಯ ಸಾಹಿತ್ಯಲೋಕದಲ್ಲಿ ಗುರುತಿಸಿಕೊಂಡಿದ್ದ ಸಮಯ. ನನ್ನ ಗೆಳೆಯ ಯಾವಾಗಲೂ ಹೇಳುತ್ತಿದ್ದ, ಈಗ ಕಮ್ಯುನಿಕೇಷನ್ ಬಹಳ ಸರಳ. ನಿನ್ನತ್ರ ಮೊಬೈಲ್ ಇದೆ. ಪತ್ರಿಕಾ ಕಚೇರಿಯ ಫೋನ್ ನಂಬರ್ ಪತ್ರಿಕೆಯಲ್ಲಿರುತ್ತೆ. ನೇರವಾಗಿ ಸಂಪಾದಕರ ಜೊತೆಗೆ ಮಾತಾಡು ಅಂತ.

ನನಗೂ ಅದು ಸರಿಯೆನಿಸಿತು. ಆದರೆ ನನ್ನ ಪ್ರಪೋಸಲನ್ನು ಅವರು ಯಾವ ರೀತಿ ತೆಗೆದುಕೊಳ್ಳುತ್ತಾರೆನ್ನುವ ಅಳುಕು ನನ್ನನ್ನು ಬಿಟ್ಟಿರಲಿಲ್ಲ. ಒಮ್ಮೆ ಸುಧಾ ಕಚೇರಿಗೆ ಹೋದಾಗ ಅಲ್ಲಿ ಹಿರಿಯ ಉಪಸಂಪಾದಕರಾಗಿದ್ದ ಶ್ರೀಯುತ ನಾಗೇಶ ಹೆಗಡೆಯವರನ್ನು ಭೇಟಿ ಮಾಡಿ, ನನ್ನ ಆಶಯವನ್ನು ವ್ಯಕ್ತಪಡಿಸಿದೆ. ಅವರೂ ಆಗಲೇ ನನ್ನ ನಾಲ್ಕು ಪತ್ತೇದಾರಿ ಕಥೆಗಳನ್ನು ಸುಧಾ ಪತ್ರಿಕೆಯಲ್ಲಿ ಪ್ರಕಟಿಸಿದ್ದರಿಂದ ಬಹಳ ಆತ್ಮೀಯವಾಗಿ ಮಾತನಾಡಿ, ಫೋಟೋ ಕಾಮಿಕ್ಸ್ಗಾಗಿ ಯಾವ ತರಹ ಕಥೆ ಮತ್ತು ಡೈಲಾಗ್ಗಳನ್ನು ಬರೆದು ಕಳುಹಿಸಬೇಕೆಂದು ನನಗೆ ಮಾರ್ಗದರ್ಶನ ನೀಡಿ, ಆದಷ್ಟು ಬೇಗನೆ ಕಳುಹಿಸಿಕೊಡುವಂತೆ ಹೇಳಿದರು. ನಾನು ಬಹಳ ಖುಷಿಯಿಂದಲೇ ಒಪ್ಪಿಕೊಂಡು ಬಂದು `ಮೂರನೆಯ ದಾರಿ' ಅನ್ನುವ ಕಥೆಯನ್ನು ಸಿದ್ಧಪಡಿಸಿದೆ. ಅದನ್ನು ಡೈಲಾಗ್ ರೂಪದಲ್ಲಿಯೂ ಅವರಿಗೆ ಕಳುಹಿಸಿದೆ. ಆದರೆ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಕೊನೆಗೆ ಆರು ತಿಂಗಳು ಬಿಟ್ಟು ವಿಚಾರಿಸಿದೆ.

ಆ ಹೊತ್ತಿಗೆ ನಾಗೇಶ ಹೆಗಡೆಯವರು ನಿವೃತ್ತರಾಗಿರುವ ಮಾಹಿತಿ ದೊರಕಿತು. ಆ ಕಥೆಯನ್ನು ವಾಪಾಸು ಪಡೆಯುವುದಕ್ಕೆ ಸುಧಾ ಕಚೇರಿಗೆ ಹೋದಾಗ ಮಂಜುಳಾ ಮೇಡಂ ಸುಧಾವನ್ನು ನೋಡಿಕೊಳ್ಳುತಿದ್ದರು. ನಾನು ಹೋದ ವಿಚಾರವನ್ನು ತಿಳಿಸಿದೆ. ಅವರು ನನ್ನ ಸ್ಕ್ರಿಪ್ಟ್ಗಾಗಿ ಹುಡುಕಾಡಿದರು. ಕೊನೆಗೂ ಅದು ಸಿಗಲೇ ಇಲ್ಲ. ಕೊನೆಗೆ ಅವರೂ ಕೂಡ ಬೇರೆ ಯಾವುದಾದರೂ ಕಥೆಯನ್ನು ಬರೆದು ಕಳುಹಿಸುವಂತೆ ಉತ್ತೇಜಿಸಿದರು. ಅಷ್ಟರಲ್ಲಿ `ಇ-ಮೇಲ್' ಬಹಳ ಜನಪ್ರಿಯವಾಗಿತ್ತು. ಪ್ರಜಾವಾಣಿ ಗ್ರೂಪ್ ಹೊಸತನಕ್ಕೆ ಬೇಗನೆ ಒಗ್ಗಿಕೊಳ್ಳುತ್ತಿತ್ತು.
ಹಾಗಾಗಿ ನಾನು ಹೊಸ ಕಥೆಯೊಂದನ್ನು ಸಿದ್ಧಪಡಿಸಿ ಅಲ್ಲಿಗೆ ಕಳುಹಿಸಿದೆ. ಆ ಕಥೆ ಕಳುಹಿಸಿದ್ದು ಫೋಟೋಕಾಮಿಕ್ಸ್ಗಾಗಿಯಾದರೂ ಅದು ಕಥೆಯಾಗಿಯೇ ಪ್ರಕಟವಾಯಿತು. ಆ ನಂತರ ಬಹಳ ನಿರಾಸೆಯಿಂದ ಫೋನ್ ಮಾಡಿದೆ. `ಇಲ್ಲ ಅನು, ನೀವು ಇನ್ನೊಂದು ಕಥೆ ಕಳುಹಿಸಿ ಅಂದರು' ನಾನು ಪ್ರಯತ್ನಿಸುತ್ತಿರುವಂತೆ ಪ್ರವೃತ್ತಿಯ ರಾಜಕೀಯ ನನ್ನನ್ನು ಸಾಹಿತ್ಯದಿಂದ ವಿಮುಖನನ್ನಾಗಿಸಿತು. ಕೊನೆಗೆ ಒಂದು ಫೋಟೋಕಾಮಿಕ್ಸ್ ಮಾಡಲೇಬೇಕೆನ್ನುವ ಉದ್ದೇಶದಿಂದ ಕಥೆ ಸಿದ್ಧಪಡಿಸಿಕೊಂಡು ಸುಧಾ ಜೊತೆಗೆ ಒಪ್ಪಂದ ಮಾಡಿಕೊಂಡು ಒಂದು ದಿನದಲ್ಲಿಯೇ ಒಂದೇ ಲೊಕೇಶ್ನಲ್ಲಿ ಚಿತ್ರೀಕರಣ ಮುಗಿಸಿಕೊಂಡೆವು.

ಇದಕ್ಕೆ ನನ್ನ ಕೆಲವು ಗೆಳೆಯರ ಸಹಕಾರವೂ ಇತ್ತು. ಪ್ರವೃತ್ತಿ ರಾಜಕೀಯದ ಡೊಂಬರಾಟ ನಡೆಯುತ್ತಲೇ ಇತ್ತು.ಪಾತ್ರಗಳ ಆಯ್ಕೆ ಮಾಡುವಲ್ಲಿ ಬಹಳ ಕಷ್ಟ ಅನುಭವಿಸಿದೆ. ನನ್ನ ಗೆಳೆಯರ ಸಹಕಾರದಿಂದ ಪುರುಷ ಪಾತ್ರಗಳೆನೋ ಸುಲಭದಲ್ಲಿ ಹೊಂದಿಸಿಕೊಂಡೆ. ಆದರೆ ಮೂರು ಸ್ತ್ರೀ ಪಾತ್ರಗಳು ಬೇಕಾಗಿದ್ದವು. ಅವರಿವರನ್ನು ಕೇಳಿಯಾಯಿತು, ತುಂಬಾ ಆತ್ಮೀಯರಾಗಿದ್ದವರನ್ನು ಒತ್ತಾಯಿಸಿಯಾಗಿತ್ತು. ಆದರೂ ಯಾರು ಪತ್ರಿಕೆಯಲ್ಲಿ ತಮ್ಮ ಫೋಟೋ ಬರುತ್ತದೆಯೆಂದಾಗ ಹಿಂಜರಿದವರೇ ಹೆಚ್ಚು. ಕೊನೆಗೆ ಈ ಪ್ರೋಜೆಕ್ಟೇ ನಿಂತು ಹೋಗುತ್ತೇನೋ ಅನ್ನುವ ಭಯ ಕಾಡುತ್ತಿತ್ತು. ಆದರೂ ದೃತಿಗೆಡದೆ ನಮ್ಮ ತಂಡದಲ್ಲಿದ್ದ ಸುಬಹ್ಮಣ್ಯ ಭಟ್ಟರನ್ನು ಕೇಳಿದೆ. ಕೊನೆಗೆ ಅವರೇ ಆ ಪಾತ್ರಕ್ಕೆ ಸರಿಯಾದ ಹುಡುಗಿಯನ್ನು ಆಯ್ಕೆ ಮಾಡಿ ಅವಳ ಫೋಟೋವನ್ನು ಕಳುಹಿಸಿಕೊಟ್ಟರು. ಕೊನೆಗೆ ಆ ಹುಡುಗಿಯ ಒಪ್ಪಿಗೆ ಪಡೆದುಕೊಂಡು ಚಿತ್ರೀಕರಣದ ದಿನವನ್ನು ನಿರ್ಧರಿಸಿದೆವು.

ಕೊನೆಗೆ ಆ ದಿನ ಬೆಳಗ್ಗೆ ಎಲ್ಲಾ ಕಲಾವಿದರನ್ನು ಒಟ್ಟು ಸೇರಿಸಿ ಚಿತ್ರೀಕರಣ ಘಟಕವನ್ನು ತಲುಪುವಾಗ ಸೂರ್ಯ ಸರಿಯಾಗಿ ನೆತ್ತಿಯ ಮೇಲೆ ಬಂದಿದ್ದ. ಅಂತು ಶುಭ ಮುಹೂರ್ತದಲ್ಲಿ ಚಿತ್ರೀಕರಣ ಆರಂಭವಾಯಿತು. ಅದೇ ಸಂಜೆ ಏಳು ಗಂಟೆಗೆ ಚಿತ್ರೀಕರಣ ಮುಗಿದು ನಾವು ಪ್ಯಾಕ್ಅಪ್ ಮಾಡಿಕೊಂಡೆವು.ಮುಂದಿನ ಕಾರ್ಯ ಚಿತ್ರಗಳನ್ನು ಸೀಕ್ವೆಂಸಿನಲ್ಲಿ ಜೋಡಿಸಿ ಸುಧಾ ಪುಸ್ತಕದ ಅಳತೆಗೆ ಒಂದು ಪುಟದಲ್ಲಿ ಆರು ಚಿತ್ರಗಳು ಬರುವಂತೆ ಜೋಡಿಸಿ ಒಟ್ಟು ಹನ್ನೆರಡು ಚಿತ್ರಗಳ ಧಾರಾವಾಹಿಯನ್ನು ಸಂಭಾಷಣೆ ಸಹಿತ ಸೆಟ್ ಮಾಡಬೇಕಾಗಿತ್ತು. ಮಂಗಳೂರಿನ ಎಕ್ಸ್ಪ್ರೆಸ್ ಸ್ಟುಡಿಯೋದಲ್ಲಿ ಎಡಿಟಿಂಗ್ ಕಾರ್ಯವನ್ನು ರಾತ್ರಿ ಹನ್ನೊಂದು ಗಂಟೆಯವರೆಗೂ ಮಾಡಿ ಮುಗಿಸಿ ಸುಧಾಕ್ಕೆ ಸಿಡಿ ಮೂಲಕ ಕಳುಹಿಸಿದೆ. ಅಂತು ಮೊದಲ ಫೋಟೋ ಕಾಮಿಕ್ಸ್ ಸುಧಾದಾಲ್ಲಿ ಅನೌನ್ಸ್ ಆಗುವಾಗ ನನಗಾದ ಸಂತೋಷ ಅಷ್ಟಿಷ್ಟಲ್ಲ.

ಬಳಿಕ ನನಗೆ ಬಹಳಷ್ಟು ಮೆಚ್ಚುಗೆಯ ಫೋನ್ಗಳು ಬಂದವು. ಜೊತೆಗೆ ನಿರಾಶೆಯಾದವರು ಹಿಂದಿನಿಂದ ನನಗೆ ತ್ರೆಟ್ ಕೊಟ್ಟದ್ದು ಇದೆ. ನಾನು ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ನನ್ನದೇ ರೀತಿಯಲ್ಲಿ ಇನ್ನೊಂದು ಕಾದಂಬರಿಯನ್ನು ಬರೆದು ಸುಧಾಕ್ಕೆ ಕಳುಹಿಸಿದೆ. ಮಂಜುಳಾ ಮೇಡಂ ಅವರು ಅದನ್ನು ಫೋಟೋಕಾಮಿಕ್ಸ್ ಮಾಡಿಕೊಡುವಂತೆ ಮೇಲ್ ಕಳುಹಿಸಿದರು. ನನಗಾದ ಸಂತೋಷಕ್ಕೆ ಪಾರವೇ ಇರಲಿಲ್ಲ. ನಾನು ಅದನ್ನು ಕೂಡಲೆ ಕಾರ್ಯ ರೂಪಕ್ಕೆ ತಂದೆ.

ನಮ್ಮ ಮೊದಲಿನ ಫೋಟೋಕಾಮಿಕ್ಸ್ನಲ್ಲಿ ಏನೆಲ್ಲಾ ನ್ಯೂನತೆಗಳಿದ್ದವೋ ಅವನ್ನೆಲ್ಲಾ ನಾನು ಸ್ಟಡಿ ಮಾಡಿದೆ. ಅದಲ್ಲದೆ ಮೊದಲ ಫೋಟೋಕಾಮಿಕ್ಸ್ ಧಾರಾವಾಹಿಯಾಗಿ ಬರುತ್ತಿರುವಾಗ ನಮ್ಮನ್ನು ಸುಮ್ಮನೆ ಪಿಂಚ್ ಮಾಡುವುದಕ್ಕಾಗಿಯೆ ಕೆಲವೊಂದು ಪ್ರತಿಕ್ರಿಯೆಗಳು ಬಂದಿದ್ದವು. ಅವುಗಳನ್ನೆಲ್ಲಾ ನೋಡಿ ಪರಾಮರ್ಶಿಸಿ ಎರಡನೆ ಪ್ರೋಜೆಕ್ಟನ್ನು ಸಿದ್ಧಪಡಿಸಿ ಶೂಟಿಂಗಾಗಿ ದಿನ ಮತ್ತು ರೂಪದರ್ಶಿಗಳನ್ನು ಹುಡುಕಾಡುತ್ತಿದ್ದೆವು. ಇದು ಸ್ವಲ್ಪ ದೊಡ್ಡ ಮೊತ್ತದ ಬಜೆಟ್ ಆಗಿತ್ತು.

ನನಗೆ ಪುಸ್ತಕಗಳೆಂದರೆ ಮೊದಲಿನಿಂದಲೂ ಇಷ್ಟ. ನನ್ನ ಪುಸ್ತಕಗಳು ಕಳೆದುಹೋದವೆಂದರೆ ನನಗೆ ಅದರಷ್ಟು ಬೇಸರದ ಸಂಗತಿ ಇನ್ನೊಂದಿಲ್ಲ. ಹೀಗೆ ಕಹಿ ವಿಷಯವೆಂದರೆ ಬೇಟೆ ಫೋಟೋ ಕಾಮಿಕ್ಸ್ ಅನ್ನು ಕಾದಂಬರಿ ಬರೆಯುವುದಕ್ಕೆ ಕನ್ನಡದ ಲೇಖಕರೊಬ್ಬರು ಅದನ್ನು ಪಡೆದುಕೊಂಡು ಇವತ್ತಿಗೂ ಅದನ್ನು ಮರಳಿಸದೇ ಇರುವುದು ನನಗೆ ಬೇಸರದ ಸಂಗತಿ. ಇಂತಹ ಪುಸ್ತಕ ಭಕ್ಷಕರು ಇದ್ದಾರೆ ಅನ್ನುವುದು ಖೇದದ ವಿಷಯ. ಫೋನ್ ಮಾಡಿ ಕೇಳಿದರೆ ಅವರ ಉತ್ತರ, ನಾನು ಸೀರಿಯಲ್ ನೋಡ್ತಾ ಇದ್ದೇನೆ. ಆಮೇಲೆ ಮಾಡಿ ಅಂತ. ಅಂತು ಹತ್ತು ಹದಿನೈದು ಬಾರಿ ಫೋನ್ ಮಾಡಿದರೂ ಉತ್ತರವಿಲ್ಲ. ಅದನ್ನು ಆ ಲೇಖಕರಿಗೆ ತೆಗೆದುಕೊಟ್ಟ ಲೇಖಕ ಮಹಾಶಯರು, ಕೊಡ್ತಾರೆ ಕೊಡ್ತಾರೆ ಅನ್ನುತ್ತಾ ಸಮಾಧಾನ ಪಡಿಸಿ ಹಿಂದಿನಿಂದ ನಗುವುದು ಈಗಲೂ ಮುಂದುವರೆದಿದೆ. ಇಂತಹ ಪ್ರತಿಭೆಗಳನ್ನು ಏನು ಹೇಳೋಣ. ಕಳೆದು ಹೋದುದಕ್ಕೆ ದು:ಖವಿದೆ. ಆ ವಿಷಯ ಹಾಗಿರಲಿ.
ರೂಪದರ್ಶಿಗಳು : ಸತೀಶ್ ಶೆಟ್ಟಿ ಕೊಡಿಯಾಲ್ಬೈಲ್, ವಿ. ಸುಬ್ರಹ್ಮಣ್ಯ ಭಟ್, ಗುರುರಾಜ್, ಮಂಗಳೂರು, ಕಾಜೋಲ್ ರಾಜ್.
ಚಿತ್ರ ಕೃಪೆ: ಸುಧಾ


- ಅನು ಬೆಳ್ಳೆ.

0 comments:

Post a Comment