ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್

ಕನಸಿನಿಂದ ಒಮ್ಮೇಲೆ ಎಚ್ಚರಗೊಂಡೆ. ಹೌದು ಸುಂದರ ಬದುಕನ್ನು ಕಾಣಲು ಸಾಧ್ಯವಾಗೋದು ನನಗೆ ಕನಸಲ್ಲಿ ಮಾತ್ರ. ನಾನು ಮೀನಾ, ಕೆಂಪು ದ್ವೀಪದ ಬೆಳಕಿನಾಚೆ ಕತ್ತಲೆಯ ಬದುಕು ಸಾಗಿಸುತ್ತಿರುವವಳು. ಮುಂಬೈಯ ಈ 'ರೆಡ್ ಲೈಟ್ ಏರಿಯಾ' ನನ್ನಂತೆ ಎಷ್ಟೋ ಹೆಣ್ಣು ಮಕ್ಕಳಿಗೆ ನರಕ ಸದೃಶವಾದಂತಹ ಜಾಗ. ಯಾವ ಹೆಣ್ಣು ಮಗಳು ಇಲ್ಲಿಗೆ ಬರಲು ಇಷ್ಟಪಡುವುದಿಲ್ಲ. ನನ್ನಂತಹ ಎಷ್ಟೋ ಹೆಣ್ಣುಮಕ್ಕಳು ಇವತ್ತು ಇಲ್ಲಿದ್ದಾರೆ ಅಂದರೆ ಅದು ಪರಿಸ್ಥಿತಿಯ ಕಾರಣದಿಂದ, ವಿಧಿಯ ಆಟದಿಂದ, ಬ್ರಹ್ಮ ಬರೆದ ಹಣೆಬರಹದಿಂದಾಗಿ.ನಾನಿವತ್ತು ಹೇಳಹೊರಟಿರುವುದು ನನ್ನ ಕಥೆಯಲ್ಲ. ನನ್ನಂತೆ ಹಲವಾರು ಕನಸು, ನಿರೀಕ್ಷೆಗಳನ್ನು ಇಟ್ಟುಕೊಂಡು, ಪರಿಸ್ಥಿತಿಯ ಕೈಗೊಂಬೆಯಾಗಿ ಈ ಜಾಗಕ್ಕೆ ಬಂದಂತಹ ಸಾವಿರಾರು ಹುಡುಗಿಯರ ಕಥೆ. ನನ್ನದು ಅಪ್ಪ, ಅಮ್ಮ, ತಮ್ಮ, ಇಬ್ಬರು ತಂಗಿಯರ ಜತೆಗಿನ ಸುಖೀ ಕುಟುಂಬ. ನಾನೇ ಹಿರಿಯವಳು. ಬಡತನವೇ ಆದರೂ ಸುಂದರ ಬದುಕು. ಆದರೆ ಅಪ್ಪನ ಸಾವಿನಿಂದ ನಮ್ಮ ಕುಟುಂಬವೇ ತಲ್ಲಣಿಸಿತು. ಆ ಬಳಿಕ ಕುಟುಂಬ ನಿರ್ವಹಣೆ ಕಷ್ಟ ಆಯಿತು. ಅಸೌಖ್ಯದಿಂದಾಗಿ ಬರಬರುತ್ತಾ ತಾಯಿಗೂ ದುಡಿಯುವುದು ಕಷ್ಟವಾಯಿತು. ಅದಕ್ಕೆ ಅಮ್ಮನಿಗೆ ನೆರವಾಗುವುದಕ್ಕಾಗಿ, ತಮ್ಮ ತಂಗಿಯರ ವಿದ್ಯಾಭ್ಯಾಸಕ್ಕಾಗಿ ನನ್ನ ವಿದ್ಯಾಭ್ಯಾಸ ತೊರೆದು ಕೆಲಸಕ್ಕೆ ಹೋಗಲು ಪ್ರಾರಂಭಿಸಿದೆ. ಬರುವ ಅಲ್ಪ ಸಂಬಳ ಯಾವುದಕ್ಕೂ ಸಾಕಾಗುತ್ತಿರಲಿಲ್ಲ. ಆಗಲೇ ಪಟ್ಟಣಕ್ಕೆ ಹೋದರೆ ಹೆಚ್ಚು ದುಡಿಯಬಹುದೆಂಬ ವಿಷಯವನ್ನು ಸ್ನೇಹಿತರು, ಪರಿಚಯದವರು ತಿಳಿಸಿದರು. ನನಗೂ ಹೌದೆನಿಸಿತು. ನಾನೂ ನಮ್ಮಲ್ಲಿ ಕೆಲವರು ಮುಂಬೈ, ಕಲ್ಕತ್ತ ನಗರಗಳಿಗೆ ಹೋಗಿ ದುಡಿದು ಮನೆಗೆ ಸಂಬಳ ಕಳಿಸುತ್ತಿದ್ದುದನ್ನು ನೋಡುತ್ತಿದ್ದೆ. ಅದನ್ನು ನೋಡಿ ನನ್ನ ಆಸೆ ಗರಿಗೆದರಿತು. ಅಮ್ಮನಿಗೆ ನೆರವಾಗುವ ಉದ್ದೇಶದಿಂದ, ತಮ್ಮ-ತಂಗಿಯರ ಉಜ್ವಲ ಭವಿಷ್ಯಕ್ಕಾಗಿ ಹಲವಾರು ಕನಸು, ನಿರೀಕ್ಷೆ, ಭರವಸೆಗಳನ್ನು ಹೊತ್ತು ಮುಂಬೈಯ ರೈಲು ಹತ್ತಿದ್ದೆ.

ಆದರೆ ರೈಲು ತನ್ನ ಹಳಿ ತಪ್ಪಿಸಿತ್ತು... ಕ್ಷಮಿಸಿ ಹಳಿ ತಪ್ಪಿದ್ದು ರೈಲಿನದ್ದಲ್ಲ ನನ್ನ ಬದುಕಿನದ್ದು. ನಿರ್ದಿಷ್ಟ ಗುರಿಯನ್ನು ಹೊತ್ತು ಸಾಗಿದ್ದ ನನ್ನ ಬದುಕಿನ ಪಯಣ ಎಲ್ಲೋ ಹಾದಿ ತಪ್ಪಿತ್ತು. ಕೆಲಸ ಕೊಡಿಸುವುದಾಗಿ ನಂಬಿಸಿದ ವ್ಯಕ್ತಿ ನನ್ನನ್ನು ನೇರವಾಗಿ ಮುಟ್ಟಿಸಿದ್ದು ಈ ರೆಡ್ ಲೈಟ್ ಏರಿಯಾಕ್ಕೆ. ಭಯ, ಅತಂಕಗಳಿಂದ ಯಾವುದೋ ಒಂದು ಕೋಣೆ ಸೇರಿದ್ದೆ. ಆದರೆ ಆ ಕ್ಷಣ ಅನಿಸಿರಲಿಲ್ಲ. ಇದು ನನಗಿನ್ನು ಯಾವತ್ತೂ ಬಿಡಿಸಿಕೊಳ್ಳಲಾಗದ ಸಂಕೋಲೆ ಆಗುತ್ತದೆ ಎಂದು. ಇದು ನನ್ನೊಬ್ಬಳ ಕಥೆಯಲ್ಲ. ನನ್ನಂತೆ ಮುಂಬೈಗೆ ಕೆಲಸ ಹುಡುಕಿಕೊಂಡು ಬರುವ ಎಷ್ಟೋ ನತದೃಷ್ಟ ಬಡ ಹೆಣ್ಣುಮಕ್ಕಳ ಕಥೆ. ಮಾಯಾನಗರಿ ಮುಂಬೈ 'ಕನಸು ಕಟ್ಟುವ' ನಗರಿ ಅಂತೆ. ಆದರೆ ನನ್ನಂತವರಿಗೆ ಅದು 'ಕನಸು ಮಾರುವ' ಜಾಗ. ಪ್ರತೀ ತಿಂಗಳು ಮನೆಗೆ ಸಂಬಳ ಕಳುಹಿಸುವಾಗ ಏನೋ ಸಂಕಟ, ಅಪರಾಧಿ ಭಾವ. ಇವತ್ತು ಮುಂಬೈಯಂತಹ ಮಹಾನಗರಿಗೆ ಬಾಲಿವುಡ್ ಸೇರಿ ನಟಿಯಾಗಬೇಕು, ಮಾಡೆಲ್ ಆಗಬೇಕು ಎಂದು ಹಲವಾರು ನಿರೀಕ್ಷೆಗಳನ್ನಿಟ್ಟುಕೊಂಡು ದಿನವೂ ನೂರಾರು ಹುಡುಗಿಯರು ಬರುತ್ತಾರೆ. ಅವರಲ್ಲಿ ನನ್ನಂತ ನತದೃಷ್ಟ ಹೆಣ್ಣುಮಕ್ಕಳು ಬಂದು ಸೇರುವುದು ಈ ರೆಡ್ ಲೈಟ್ ಏರಿಯಾಕ್ಕೆ. ಇಲ್ಲಿ ಬಂದು ಸೇರುವುದು ಆಕಸ್ಮಿಕ, ಅನಿರೀಕ್ಷಿತ. ಆದರೆ ಮುಂದೆ ನಡೆಯುವುದೆಲ್ಲ ನಿರೀಕ್ಷಿತ, ಯಾತನಾಮಯ.

ಇವತ್ತು ಎಷ್ಟೋ ತಂದೆ-ತಾಯಿಗಳಿಗೆ ಗೊತ್ತಿಲ್ಲ, ಕೆಲಸಕ್ಕೆಂದು ಮಹಾನಗರಕ್ಕೆ ಸೇರಿದ ತಮ್ಮ ಮಗಳು ಎಲ್ಲಿ ದುಷ್ಟರ ಕೈಗೆ ಸಿಕ್ಕಿ ಕಳೆದುಹೋಗಿದ್ದಾಳೆ ? ಏನು ಮಾಡುತ್ತಿದ್ದಾಳೆ ? ಎಂದು. ತಿಂಗಳಿಗೆ ಸರಿಯಾಗಿ ಸಿಗುವ ಆಕೆಯ ಸಂಬಳದಿಂದ ತನ್ನ ಮಗಳು ನೆಮ್ಮದಿಯಾಗಿ ದುಡಿಯುತ್ತಿದ್ದಾಳೆಎಂದು ಭಾವಿಸುತ್ತಾರೆ ಹೆತ್ತವರು. ಆದರೆ ಏನು ? ಎಲ್ಲಿ ? ಅನ್ನೋದು ಯಾರಿಗೂ ಗೊತ್ತಿಲ್ಲ. ಇನ್ನು ಮನೆ ಬಿಟ್ಟು, ಕೆಲಸ ಕೊಡಿಸುತ್ತೇನೆಂದು ಹೇಳಿದವರನ್ನು ನಂಬಿ ಮುಂಬೈಯ ರೈಲು ಹತ್ತಿದ ಎಷ್ಟೋ ಅಮಾಯಕ ಹೆಣ್ಣುಮಕ್ಕಳು ಬಂದು ಸೇರುವುದು ಇಲ್ಲಿಗೆ, ಈ ನರಕ ಕೂಪಕ್ಕೆ.

ಸಮಾಜ ನಮ್ಮನ್ನು ಅಸಹ್ಯವಾಗಿ, ಕೆಟ್ಟ ದೃಷ್ಟಿಯಿಂದ ನೋಡುತ್ತದೆ. ಆದರೆ ಯಾರೊಬ್ಬರೂ ನಮ್ಮ ಈ ಸ್ಥಿತಿಗೆ ಕಾರಣರಾದವರನ್ನು ದೂರುವುದಿಲ್ಲ. ಸಮಾಜದಲ್ಲಿ ನಮಗೆ ಗೌರವ, ಬೆಲೆಗಳಿಲ್ಲ. ಈ 'ವೃತ್ತಿ' ಕೀಳು ಎಂದು ಈ ಸಮಾಜ ದೂರುತ್ತದೆ. ಆದರೆ ಪರಿಸ್ಥಿತಿಯ ಕೈಯಲ್ಲಿ ಸಿಕ್ಕಿ ನಲುಗುತ್ತಿರುವ ನಮಗೆ ಎಷ್ಟು ಸಂಕಟವಾಗಬೇಡ? ಇಲ್ಲಿ 'ಸುಖ' ವನ್ನು 'ಮಾರಾಟ' ಮಾಡುತ್ತಾರೆ. ಭಾವನೆಗಳಿಗೆ ಬೆಲೆ ಅನ್ನೋದೇ ಇಲ್ಲ. ಸತ್ತ ಭಾವನೆಗಳ ಮಧ್ಯೆ ಇಲ್ಲಿ ಜೀವಂತವಾಗಿ ಬದುಕಬೇಕು. ಬದಲಾವಣೆ ಇಲ್ಲದ ಬದುಕು ಇದು.

ಹಲವಾರು ಬಾರಿ ಅನಿಸಿದ್ದಿದೆ ನನ್ನದು ಒಂದು ಬದುಕಾ ಎಂದು ? ನನ್ನ ಈ ಸ್ಥಿತಿಗೆ ಕಾರಣರಾದವರು ಸಮಾಜದಲ್ಲಿ ತಲೆ ಎತ್ತಿ ಬದುಕುತ್ತಿರುವಾಗ ನನಗೇಕೆ ಆ ಬದುಕು ಸಾಧ್ಯವಾಗುತ್ತಿಲ್ಲ ? ಈ ಕೆಂಪು ದ್ವೀಪದ ಕತ್ತಲಕೋಣೆಯೊಳಗೆ ನಡೆಯುವುದು ಹೊರ ಜಗತ್ತಿಗೆ ತಿಳಿಯದಂತಹ ದುರಂತ ಘಟನೆ. 'ಗಿರಾಕಿ' ಗಳಿಗೆ ಸ್ವರ್ಗದ ಸುಖದ ಆನಂದವಾದರೆ, ಮುಗ್ಧ, ಅಮಾಯಕ ಜೀವಗಳಿಗೆ ನರಕದ ಯಾತನೆ. ಹಗಲು ಹೊತ್ತಿನಲ್ಲಿ ಸಾಮಾನ್ಯ ಪ್ರದೇಶದಂತಿರುವ ಈ ಕೆಂಪು ದ್ವೀಪದಲ್ಲಿ ರಾತ್ರಿಯಾದಂತೆ ಭರ್ಜರಿ ವ್ಯಾಪಾರ ಶುರುವಾಗಿಬಿಡುತ್ತದೆ. ಸುಖ ಅರಸಿ ಬರುವ ಗಿರಾಕಿಗಳನ್ನು ಸೆಳೆಯಲು ಮುಖಕ್ಕೆ 'ಮೇಕಪ್' ಹಾಕಿಕೊಂಡ ಹುಡುಗಿಯರು ಅಲ್ಲಿ-ಇಲ್ಲಿ ತಿರುಗುತ್ತಾರೆ. ಹೊಟ್ಟೆಪಾಡಿಗಾಗಿ ಇದನ್ನು ಮಾಡಲೇಬೇಕು. ಆದರೆ ಆ 'ಮೇಕಪ್' ನ ಹಿಂದೆ ಬಣ್ಣರಹಿತ ದುರಂತಮಯ ಬದುಕಿದೆ. ಕಳೆಗಟ್ಟಿದ ಯಾತನಾಮಯ ಬದುಕಿದೆ. ಇದು 'ಮುಂಬೈ' ನ 'ರೆಡ್ ಲೈಟ್ ಏರಿಯಾ' ದ ನಿತ್ಯದ ಜೀವಂತ ಕಥೆ.

ದಿನವೂ ಇಲ್ಲಿಗೆ ಸುಖ ಅರಸಿ ಬರುವವರು ಎಷ್ಟು ಮಂದಿಯೋ ? ಆದರೆ ಅವರ್ಯಾರೂ ನಮ್ಮ ಭಾವನೆಗಳಿಗೆ ಸ್ಪಂದಿಸಲಿಲ್ಲ. ಅಂತಹ ಗುಣವೂ ಅವರಲ್ಲಿಲ್ಲ. ಈ 'ವೃತ್ತಿ' ಮಾಡುವ ನಮಗೆ ಬಹಿಷ್ಕಾರ ಹಾಕುವ ಈ ಸಮಾಜ, ಈ ಗಂಡು ಜಾತಿಗೆ ಏನನ್ನೂ ಅನ್ನುವುದಿಲ್ಲ. ಎಂತಹ ತಾರತಮ್ಯ ! ಎಂತಹ ವಿಚಿತ್ರ ! ಇಲ್ಲಿಗೆ ಬರುವ ಯಾವ 'ಗಿರಾಕಿ' ಗೂ ನಾವಾಗಲೀ, ನಮ್ಮ ಭಾವನೆಗಳ ಮೇಲಾಗಲೀ ಪ್ರೀತಿ ಇಲ್ಲ. ಅವನಿಗೆ ಪ್ರೀತಿ ಇರೋದು ಈ 'ದೇಹ' ದ ಮೇಲೆ. ಇದೊಂಥರಾ ಸುಖದ ಮಾರುಕಟ್ಟೆ. ನಮ್ಮಂಥ ಹೆಣ್ಣುಮಕ್ಕಳಿಗೆ ನಾಳೆ ಹುಟ್ಟುವ ಮಕ್ಕಳು ಅಪ್ಪ ಯಾರು ? ಎಂದು ಕೇಳುವ ಪ್ರಶ್ನೆಗೆ ನಮ್ಮಲ್ಲಿ ಉತ್ತರವಿಲ್ಲ. ಆದರೆ ನನಗೆ ಬಂದಂತಹ ಸ್ಥಿತಿ ನನ್ನ ಮಗಳಿಗೆ ಬರಬಾರದೆಂದು ಪ್ರಾರ್ಥಿಸುವ ಹೆಣ್ಣುಮಕ್ಕಳೇ ಎಲ್ಲ.
ನನ್ನದು ಯಾವುದೇ ನಿರೀಕ್ಷೆಗಳಿಲ್ಲದ ಬದುಕು. ಮನಸ್ಸಲ್ಲಿ ಉರಿಯೋ ಕೋಪ, ನನ್ನ ಈ ಪರಿಸ್ಥಿತಿಗೆ ಕಾರಣರಾದವರ ಮೇಲೆ, ಈ ಜನರ ಮೇಲೆ, ಈ ಸಮಾಜದ ಮೇಲೆ. ಆದರೆ ನಾನು ಅಸಹಾಯಕಿ. ನನ್ನದೊಂಥರ ಬೆಲೆಯಿಲ್ಲದ ಭಾವನೆಗಳ ಬದುಕು. ಭಾವನೆಗಳು ಇಲ್ಲಿ ಹರಾಜಿಗಿಟ್ಟಂತೆ . ಒಮ್ಮೊಮ್ಮೆ ಅನಿಸುವುದಿದೆ ಇದರ ಜಂಜಾಟವೇ ಬೇಡ, ದೂರ ಹೋಗೋಣ ಎಂದು. ಆದರೆ ಎಲ್ಲಿಗೆ ? ಮುಂದಿನ ಬದುಕು ? ಉತ್ತರವಿಲ್ಲದ ಪ್ರಶ್ನೆಯಿದು.

ಹಾಗಾದರೆ, ನನಗೆ ಸುಂದರ ಬದುಕಿನ ಹಕ್ಕಿಲ್ಲವೇ ? ಒಮ್ಮೆ ಈ 'ವೃತ್ತಿ' ಗೆ ಬಂದ ಮೇಲೆ ಆ ಕಳಂಕ ಎಂದೂ ತಪ್ಪುವುದಿಲ್ಲ. ಎಷ್ಟೋ ಸಲ ಮನಸ್ಸು ಅಂದಿದ್ದಿದೆ, ನನಗಾಗಿ ಒಂದು ಸುಂದರ ಜೀವ ಎಲ್ಲಿಯೋ ಇದೆ ಎಂದು. ನನ್ನ ಈ ಸ್ಥಿತಿಗೆ ಮರುಗಿ ನನಗೆ ಸುಂದರ ಬಾಳು ಕೊಡುವವನು, ನನ್ನ ಭಾವನೆಗಳಿಗೆ ಸ್ಪಂದಿಸುವವನು, ನನ್ನ ಕಷ್ಟ ಅರಿತವನು.... ಅರೇ ಇದೇನಿದು... ಹೌದು ಅವನೇ ನನಗೆ ಸುಂದರ ಬದುಕು ಕೊಟ್ಟವನು, ಈ ನರಕ ಕೂಪದಿಂದ ನನ್ನ ಕರೆದುಕೊಂಡ ಸಂತಸಮಯ ಬದುಕು ನೀಡಿದವನು. ಪ್ರೀತಿಯಿಂದ ನೋಡೋ ಅತ್ತೆ - ಮಾವ, ಕೇಳಿದ್ದನ್ನೆಲ್ಲ ತಂದುಕೊಡುವ, ಪ್ರೀತಿಯನ್ನು ಉಣಬಡಿಸೋ ಗಂಡ, ಮುದ್ದು ಮಕ್ಕಳು, ಹೊಸ ನಿರೀಕ್ಷೆ, ಹೊಸ ಭರವಸೆ... ಆದರೆ ಇದು ಬರೀ ಕನಸು ಮಾತ್ರಾ...


-ಶ್ವೇತಾ, ಪ್ರಥಮ ಬಿ.ಎ
ಪತ್ರಿಕೋದ್ಯಮ ವಿಭಾಗ, ಗೋವಿಂದ ದಾಸ ಕಾಲೇಜು, ಸುರತ್ಕಲ್.

0 comments:

Post a Comment