ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್

"ಸಹಜ ಲಾಲಿತ್ಯದ ಮೇರು ಕಲಾವಿದ ಮಿಜಾರು ಅಣ್ಣಪ್ಪ"

'ಮಿಜಾರು' ಎಂಬುದು ಇಂದು ಕರಾವಳಿಯ ಹಳ್ಳಿಯ ಹೆಸರಾಗಿ ಮಾತ್ರ ಉಳಿದಲ್ಲ. ಸಾಂಸ್ಕೃತಿಕ ಕಲಾಲೋಕದಲ್ಲೊಂದು ಅದಕ್ಕೋಸ್ಕರ ಜಾಗತಿಕ ಮನ್ನಣಿ ಒದಗಿದೆ. ಕಲಾಪ್ರಿಯರ ಮನದಲ್ಲಿ ಸ್ಥಾಯಿಯಾಗಿ ಉಳಿದಿದೆ. ಇತರ ಎಲ್ಲಾ ಊರಿನಂತೆ ಕರ್ಮಭೂಮಿಯಾಗಿರುವ 'ಮಿಜಾರು' ಕಲಾಭೂಮಿಯಾಗಿ ಎದ್ದುನಿಂತ ಬಗೆ ವಿಸ್ಮಯ. ಇದು ಇಂದು ಪ್ರಕೃತಿ-ಸಂಸ್ಕೃತಿಯ ಸಂಗಮ-ಸ್ಥಾನವಾಗಿದೆ. ಇದೆಕ್ಕೆಲ್ಲಾ ಕಾರಣ ವಿರಾಸತ್ ನಂತಹ ವಿರಾಟ್ ಸ್ವರೂಪದ ಕಲೋತ್ಸವವೇ ಕಾರಣ ಎಂದು ಬೇರೆ ಹೇಳಬೇಕಾಗಿಲ್ಲ. ಆದುದರಿಂದ 'ಮಿಜಾರು' ಇಂದು ಸಾಂಸ್ಕೃತಿಕ ಭೂಪಟದಲ್ಲಿ ಮಿಂಚುವ ಕಿರಣ.
ಆದರೆ ಕರಾವಳಿಯ ಜನತೆಗೆ ಮಿಜಾರು ಎಂದಾಗ ಯಕ್ಷಗಾನದ ಹಾಸ್ಯ ಕಲಾವಿದ ಮಿಜಾರು ಅಣ್ಣಪ್ಪರ ಹೆಸರು ಕಣ್ಣ ಮುಂದೆ ಹಾದು ಹೋಗುತ್ತದೆ.
1970-90ರ ಕಾಲವನ್ನು ಯಕ್ಷಗಾನದ 'ಸುವರ್ಣಯುಗ' ಎಂಬುದಾಗಿ ಕರೆಯಬಹುದು ಅದರಲ್ಲೂ ತುಳು ಕಾಲ್ಪನಿಕ ಮತ್ತು ಕಾಲ್ಪನಿಕ ಮತ್ತು ಜಾನಪದ ಮೂಲದ ಕಥಾವಸ್ತುವನ್ನು ಒಳಗೊಂಡ ಟೆಂಟುಮೇಳಗಳ ವಿಜೃಂಭಣೆಯ ಕಾಲ. ಕರ್ನಾಟಕ ಮೇಳ ಊರಿನಲ್ಲಿ ಯಕ್ಷಗಾನ ಪ್ರದರ್ಸಿಸುತ್ತದೆ ಎಂಬ ಸುದ್ಧಿ ಯಾವ ವಾಹಕವಿಲ್ಲದೇ ಇದ್ದರೂ ಕಿವಿಯಿಂದ ಕಿವಿಗೆ ಬಿದ್ದು ಜನಸೇರುತ್ತಿದ್ದರು. ಒಂದೇ ಊರಿನಲ್ಲಿ ವಾರಗಟ್ಟಲೇ ಯಕ್ಷಗಾನ ಪ್ರದರ್ಶಿಸಿದರೂ ಜನರ ಉತ್ಸಾಹ ಬತ್ತುತ್ತಿರಲಿಲ್ಲ. ಒಟ್ಟಿನಲ್ಲಿ ಯಕ್ಷಗಾನದ ಸುಗ್ಗಿಯ ಕಾಲದಲ್ಲಿ ಮಿಜಾರು ಅಣ್ಣಪ್ಪರು ಕರ್ನಾಟಕ ಮೇಳದ ತಾರಾಮೌಲ್ಯದ ಕಲಾವಿದ.

ತುಳು ಯಕ್ಷಗಾನವು ಆ ಕಾಲದಲ್ಲಿ ಯಶಸ್ಸು ಕಾಣುವಲ್ಲಿ ಹಾಸ್ಯ ಕಲಾವಿದರ ಪಾತ್ರ ಹಿರಿದು ಮಿಜಾರು ಅಣ್ಣಪ್ಪರದ್ದು ಸಹಜ ಲಾಲಿತ್ಯದ ಹಾಸ್ಯ. ಪಾತ್ರದ ಗುಣ ಸ್ವಭಾವ ಅರಿತು ನಟಿಸುವ ಕಲಾ ನೈಪುಣ್ಯತೆಯನ್ನು ರೂಡಿಸಿಕೊಂಡಿದ್ದರು. ಕರ್ನಾಟಕ ಮೇಳದಲ್ಲಿ ಪುಳಿಂಚರಾಮಯ್ಯ ರೈ ಎಂಬವರೂ ಪ್ರಮುಖ ಹಾಸ್ಯ ವೇಷದಾರಿ ಆದರೆ ಅಣ್ಣಪ್ಪರಿಗೆ ಹೆಚ್ಚಾಗಿ ಸಾತ್ವಿಕ ಗುಣವಿರುವ ಹಾಸ್ಯಪಾತ್ರವೇ ದೊರೆಯುತಿತ್ತು. ಅನಂತರಾಂ ಬಂಗಾಡಿಯವರ 'ಬೊಳ್ಳಿಶಿಂಡೆ' ಪ್ರಸಂಗದಲ್ಲಿ ಬರುವ ಕೇಚುವಿನ ಪಾತ್ರ ಎಂತವರ ಮನಸ್ನಾನ್ನಾದರೂ ತಟ್ಟಬಲ್ಲದು. ಅತ್ತಿಗೆಯ ಮೋಸ ವಂಚನೆಗೆ ಗುರಿಯಾಗಿ ರಾಜಕುಮಾರನಾದರೂ ಕಷ್ಟಕ್ಕೆ ಈಡಾಗುವ ಅರಮನೆಯಿಂದ ಬೀದಿಗೆ ಬರುವ ಮಾಧ್ಯಮ ಬುದ್ಧಿಯ ಕೇತುವಿನ ಅಭಿನಯ ಮನೋಜ್ಞವಾದುದು ಜಾನಪದ ಮೂಲದ ಪ್ರಸಿದ್ಧ ಪ್ರಸಂಗಗಳಲ್ಲಿ ಒಂದಾದ 'ಕೋಟಿ-ಚೆನ್ನಯ'ದ ಪಯ್ಯಬೈದ್ಯ ಅಣ್ಣಪ್ಪರ ಯಶಸ್ವಿ ಪಾತ್ರಗಳಲ್ಲಿ ಒಂದು. 'ಕಾಡಮಲ್ಲಿಗೆ' ಎಂಬ ಜನಪ್ರಿಯ ಪ್ರಸಂಗದಲ್ಲಿ ಅಣ್ಣಪ್ಪರ ಪಾತ್ರವು ಕೇವಲ ಹಾಸ್ಯಪಾತ್ರವಾಗಿ ಉಳಿಯದೆ ಇಡೀ ಪ್ರಸಂಗಕ್ಕೆ ಪೋಷಕ ಪಾತ್ರವಾಗಿ ಉಳಿದಿದೆ. ಕಚ್ಚೂರಮಾಲ್ದಿ' ಯಲ್ಲಿ ಬರುವ ರಾಜುಮುಗೇರ ಮಾನವತೆಯ ನಿಧಿಯಾಗಿ ಮೂಡಿ ಬರುತ್ತಾನೆ. ಉಳ್ಳವರ ವಂಚನೆಗೆ ತುತ್ತಾದ ರಾಜಕುಮಾರ-ಕುಮಾರಿಯರಿಗೆ ಆಶ್ರಯದಾತ ಅಜ್ಜನಾಗಿಯೇ ಮಿಜಾರ್ ಅವರ ಪಾತ್ರ ಮೂಡಿ ಬಂದಿದೆ. ಕೃಷ್ಣನ ಜೊತೆಗಿರುವ ಮಕರಂದನಾಗಿಯೂ ಇವರು ಯಶಸ್ಸು ಕಂಡವರು. ಅಣ್ಣಪ್ಪರ ವೃದ್ಧಬ್ರಾಹ್ಮಣವನ್ನು ನೋಡದ ಕಲಾರಸಿಕರೇ ವಿರಳ.

ಸುಮಾರು 1946ರ ಕಾಲದಲ್ಲಿ ಆಕಸ್ಮಿಕವಾಗಿ ಯಕ್ಷರಂಗಕ್ಕೆ ಬಂದ ಅಣ್ಣಪ್ಪರು ಪೌರಾಣಿಕ ಕಾಲ್ಪನಿಕ ಹೀಗೆ ಸಾವಿರಾರು ಪ್ರಸಂಗಗಳಲ್ಲಿ ಆದೆಷ್ಟೊ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿ ರಸಿಕರ ಮನಗೆದ್ದಿದ್ದಾರೆ. ಕೂಡ್ಲು ಮೇಳದಿಂದ ಮೊದಲೊಂಡು ಕರ್ನಾಟಕ ಮೇಳದಲ್ಲಿ ಮೆರೆದವರು ಮೂಡಬಿದಿರೆ ನರ್ಸಪ್ಪರಾಯರಿಂದ ಕಲಿತು ಬೆಳೆದವರು. ಕಲಾಶಕ್ತಿಯ ಮೂಲಕ ನಾಡು-ಹೊರನಾಡನ್ನು ಸುತ್ತಿ ಬದಕನ್ನು ಸಂಪದ್ಧರಿತಗೊಳಿಸಿದ ನಮ್ಮ ನಡುವಿನ ಹಿರಿಜೀವ ಅಣ್ಣಪ್ಪರು.

ಕನ್ನಡ ರಾಜ್ಯೋತ್ಸವ ಸೇರಿದಂತೆ 180ಕ್ಕಿಂತಲು ಅಧಿಕ ಪ್ರಶಸ್ತ್ರಿ ಸನ್ಮಾನಗಳು ಅಣ್ಣಪ್ಪರ ಮಡಿಲು ಸೇರಿದೆ ಆದರೆ ಸಾವಿರಾರು ರಾತ್ರಿಗಳನ್ನು ಹಗಲಾಗಿ ಕಳೆದ ಅನುಭವದಿಂದ ಮಾಗಿದ ಈ ಹಿರಿಯ ಕಲಾವಿದನ ಕಲಾಜೀವನದ ಬಗ್ಗೆ ಯಾರಿಂದಲೂ ಕೃತಿ ರಚನೆಯಾಗಿಲ್ಲ. ಚಿಕ್ಕಪುಟ್ಟ ಕಲಾವಿದರಿಗೂ ನಾಗರಿಕ ಸನ್ಮಾನ, ಅಭಿನಂದನಾ, ಗ್ರಂಥ, ಹೊರ ಬರುವ ಈ ಕಾಲದಲ್ಲಿ ಅಣ್ಣಪ್ಪರ ಕುರಿತು ಯಾವುದೇ ಗ್ರಂಥಗಳು ಹೊರ ಬರದೇ ಇರುವುದು ಆಶ್ಚರ್ಯವನ್ನು ತರುವಂತಹುದು. ಕಲಾವಿದನ ಸಾಮಾಜಿಕ ಹಿನ್ನೆಲೆಗಿಂತಲೂ ಕಲೆ ಶ್ರೇಷ್ಠ ಎಂಬ ಭಾವ ಜೀವ ಪಡೆಯ ಬೇಕು. ಕಲಾವಿದನನ್ನು ಕಲಾವಿದನಾಗಿ ನೋಡುವ ಮಾನವೀಯ ಮನಸ್ಸು ಬಲಗೊಳ್ಳಬೇಕು.

- ವಿಜಯಶ್ರೀ ಶೆಟ್ಟಿ (ದ್ವಿತೀಯ ಬಿ.ಹೆಚ್.ಆರ್.ಡಿ.)
ಆಳ್ವಾಸ್ ಕಾಲೇಜು, ಮೂಡಬಿದಿರೆ.

1 comments:

Anonymous said...

ನವರಸಗಳ ಮೂಲಕ ಯಕ್ಷಗಾನ ರಂಗವನ್ನು ಆಳಿದ ಮೇರು ಕಲಾವಿದ ಮಿಜಾರು ಅಣ್ಣಪ್ಪ
ಪಾರಂಪರಿಕ ಒಂದು ದೇಶೀ ಕಲೆಗೆ ತನ್ನ ವೈಯಕ್ತಿಕ ಛಾಪನ್ನು ಬೆರೆಸಿ ಸೃಜನಶೀಲ ಅಭಿವ್ಯಕ್ತಿ ನೀಡಿದ ಮೇರು ಕಲಾವಿದರು. ನಿಮಗೆ ನನ್ನ ಕೋಟಿ ಕೋಟಿ ನಮನ........

Deepak..

Post a Comment