ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಲೇಖನ ಮಾಲೆ : ಹದಿನೆಂಟನೆ ಕಂತು
ದೃಶ್ಯ ಮಾಧ್ಯಮದ ನೆನಪಿನ ಸವಾರಿ...
`ಜಲಪಾತ'ವೆಂಬ ಪ್ರಪಾತ!

ಜಲಪಾತ ಕಿರು ಕಾದಂಬರಿಯನ್ನು ಬರೆದು ಸುಧಾ ವಾರಪತ್ರಿಕೆಗೆ ಕಳುಹಿಸಿದ್ದೆ.


ಆ ಕಾದಂಬರಿಯನ್ನು ಕಳುಹಿಸಿದ ಕೆಲವೇ ದಿನಗಳಲ್ಲಿ ಇನ್ನೊಂದು ಫೋಟೋ ಕಾಮಿಕ್ಸ್ ಮಾಡಿಕೊಡಬೇಕೆಂದು ಸುಧಾ ಕಚೇರಿಯಿಂದ ಮೇಲ್ ಬಂತು. ತಕ್ಷಣಕ್ಕೆ ಜಲಪಾತ ಕಾದಂಬರಿಯನ್ನೇ ಆದರಿಸಿ ಕಾಮಿಕ್ಸ್ ತಯಾರಿಸುವುದೆಂದು ನಾನು ನಿರ್ಧರಿಸಿ, ಮೇಲೆ ಕಳುಹಿಸಿದೆ. ಅಲ್ಲಿಂದ ಕೂಡಲೆ ಒಪ್ಪಿಗೆಯ ಉತ್ತರ ಬಂತು.

ಜಲಪಾತ ಕಥೆಯು ಒಂದು ಕೊಲೆಯ ಸುತ್ತ ಹೆಣೆದ ಕಥೆಯಾದರೂ ಅದರಲ್ಲಿದ್ದ ಹೊಸತನವೆಂದರೆ ಅವರವರ ವೃತ್ತಿಯಲ್ಲಿ ಐದು ಜನ ಯುವಕರು ಪರಿಣಿತರು. ಆ ಐವರು ಒಂದು ದಿನ ಜಲಪಾತ ಎಸ್ಟೇಟ್ಗೆ ಬಂದು ಒಂದು ವಾರ ಅಲ್ಲಿದ್ದು ಮಜಾಮಾಡಿ ಹೋಗಬೇಕೆನ್ನುವ ಉದ್ದೇಶದಿಂದಿದ್ದವರು. ಅಲ್ಲಿ ಸಂಧ್ಯಾ ಅನ್ನುವ ಹುಡುಗಿಯ ಕೊಲೆಯಾಗಿರುತ್ತದೆ. ಆ ಕೊಲೆಯಾದ ಹುಡುಗಿಯ ಹೆಣವನ್ನು ಅವರೆಲ್ಲರೂ ನೋಡಿದ್ದರೂ ಅದನ್ನು ಒಬ್ಬರಿಗೊಬ್ಬರು ಹೇಳಲಾರರು. ಹೇಳಿದರೆ ಎಲ್ಲಿ ತಮ್ಮ ವೃತ್ತಿಗೆ ಕುತ್ತು ತರುತ್ತದೆಯೋ ಎಂದು ಹೆದರಿದವರು. ಆ ಐವರ ಮೇಲೆ ಸಂಶಯ ಹೊಂದುವ ಲಾಯರ್ ಪ್ರಾಂಜಲಿ, ಸಂಧ್ಯಾಳಿಗೆ ಆ ಎಸ್ಟೇಟ್ವರೆಗೆ ಡ್ರಾಪ್ ಕೊಟ್ಟಿರುತ್ತಾಳೆ. ಅದಕ್ಕಾಗಿ ಅವಳು ಆ ಯುವಕರನ್ನು ತಡೆದು ನಿಲ್ಲಿಸಿ, ಕೊಲೆಯ ರಹಸ್ಯವನ್ನು ಬೇಧಿಸುತ್ತಾಳೆ. ಅದೇ ಕಥೆಯ ತಿರುಳು. ಕೊನೆಯವರೆಗೂ ಕುತೂಹಲ ಉಳಿಸಿಕೊಂಡು ಸಾಗುವ ಈ ಕಥೆಯಲ್ಲಿ ಒಂದೇ ವಯಸ್ಸಿನ ಯುವಕರು ಬೇಕಾಗಿದ್ದರಿಂದ ರೂಪದರ್ಶಿಗಳಿಗಾಗಿ ಹುಡುಕಾಡುವುದು ಸಾಹಸವೇ ಆಗಿತ್ತು.

ಮೊದಲ ಫೋಟೋ ಕಾಮಿಕ್ಸ್ನಲ್ಲಿ ಅಭಿನಯಿಸಿದ ರೂಪದರ್ಶಿಗಳನ್ನೇ ಇದರಲ್ಲಿ ಬಳಸಿಕೊಳ್ಳುವಂತೆ ಇರಲಿಲ್ಲ. ಹಾಗಾಗಿ ನನ್ನ ಪರಿಚಿತರನ್ನ ಮತ್ತು ಸ್ವಲ್ಪ ಫೋಟೋಜನಿಕ್ ಮುಖಗಳನ್ನ ಹುಡುಕುತ್ತಿದ್ದೆ. ಅದರಲ್ಲು ಒಬ್ಬಾತ ನನ್ನ ಆಪ್ತ ಗೆಳೆಯನೆ ಮತ್ತು ಉಳಿದಂತೆ ಸ್ಟುಡಿಯೋದ ರಾಜಣ್ಣನ್ನೇ ಇಬ್ಬರನ್ನು ಪರಿಚಯಿಸಿದರು. ನಾಲ್ಕನೆಯ ರೂಪದರ್ಶಿಯಾಗಿ ಸಾಫ್ಟ್ವೇರ್ ಕಂಪನಿಯ ಪರಿಚಿತರೊಬ್ಬರನ್ನು ಆಯ್ಕೆ ಮಾಡಿದೆ. ಕೊನೆಯದಾಗಿ ಅದೇ ವಯಸ್ಸಿನ ಇನ್ನೊಬ್ಬ ವ್ಯಕ್ತಿಯ ಹುಡುಕಾಟದಲ್ಲಿದ್ದೆ. ಆಸಮಯದಲ್ಲಿ ನನಗೆ ಪಾಂಡೇಶ್ವರ ಪೊಲೀಸ್ ಠಾಣೆಯಿಂದ ಒಂದು ಕರೆ ಬಂತು. ನಾನು ನಿಜವಾಗಿಯೂ ಹೆದರಿಬಿಟ್ಟೆ. ಫೋಟೋ ಕಾಮಿಕ್ಸ್ ಮಾಡುವುದು ತಪ್ಪೇ? ಅಥವಾ ನನ್ನನ್ನು ಸುಮ್ಮನ್ನೆ ಪಿಂಚ್ ಮಾಡುತ್ತಿದ್ದವರೇನಾದರೂ ಸುಳ್ಳು ಸುಳ್ಳೆ ಕಂಪ್ಲೇಂಟ್ ಕೊಟ್ಟಿದ್ದಾರೆಯೆ? ಎಂದು ಹೆದರಿದೆ. ಕೊನೆಗೂ ಅಲ್ಲಿಗೆ ಹೋಗುವ ಧೈರ್ಯವಾಗಲಿಲ್ಲ.

ಮತ್ತೊಮ್ಮೆ ಅಲ್ಲಿಂದ ಫೋನ್ ಬಂದಾಗ, ನಾನು ಎಸ್ ಐ ಮಾತಾಡ್ತಾ ಇದ್ದೀನ್ರಿ. ಒಮ್ಮೆ ಬರ್ರಿ ಮಾತಾಡೋಕೆ ಅಂದ್ರೆ ನನ್ನ ಮುಖ ಕೆಂಪು ಕೆಂಪಾಗಿತ್ತು. ಎಸ್ ಐ ಹೇಳಿದ ಬಳಿಕ ನಾನು ಹೋಗದಿರುವುದು ಚೆನ್ನಾಗಿರುವುದಿಲ್ಲವೆಂದು ಆ ದಿನ ಸಂಜೆ ಮನೆಯಲ್ಲಿ ಹೇಳಿ ಸ್ಟೇಶನ್ಗೆ ಹೊರಟೆ. ಅಲ್ಲಿಯ ಪೇದೆಯನ್ನು, ಎಸ್. ಐ. ಎಲ್ಲಿದ್ದಾರೆಂದು ಕೇಳಿದೆ?

ಅವರು ಇನ್ನೂವೇ ಬಂದಿಲ್ಲ. ನೀವು ಸ್ವಲ್ಪ ಹೊತ್ತು ಹೊರಗೆ ನಿಂತಿರಿ ಇನ್ನೇನು ಬರ್ತಾರೆ ಅಂತಂದಾಗ ನಾನು ಸದ್ಯ ಬಚಾವಾದೆ ಎಂದುಕೊಂಡು ಹೊರಗೆ ಬರುವಷ್ಟರಾಲ್ಲಿ ಜೀಪ್ ಬಂದು ನಿಂತಿತು. ನಾನೇನು ಇನ್ನು ಗೇಟ್ ತಲುಪಬೇಕೆನ್ನುವಷ್ಟರಲ್ಲಿ ಆ ಪೇದೆ ನನ್ನನ್ನು ಕರೆದ.

ನಾನು ಅಳುಕುತ್ತಲೇ ಒಳಗೆ ಹೋದೆ. ಎಸ್. ಐ. ಅಂದ್ರೆ ಕಣ್ಣು ಕೆಂಪಗೆ ಮಾಡಿ, ಗಿರಿಜಾ ಮೀಸೆ ಬಿಟ್ಟು ಭಯಂಕರ ಅಪಿಯರೆನ್ಸ್ ಹೊಂದಿದ ವ್ಯಕ್ತಿ ಅಂದುಕೊಂಡಿದ್ದ ನನಗೆ ಅವರನ್ನು ನೋಡುತ್ತಲೇ ಸಮಾಧಾನವಾಯಿತು. ಬಹಳ ಮೃದು ವ್ಯಕ್ತಿತ್ವದ, ನನ್ನಷ್ಟೇ ವಯಸ್ಸಿನ ಸುಂದರ ತರುಣನನ್ನು ನೋಡುತ್ತಲೇ ಹೆದರಿಕೆ ಮಾಯವಾಗಿತ್ತು. ಆದರೂ ವಿಷಯ ಏನು ಅನ್ನುವುದು ತಿಳಿದುಕೊಳ್ಳದೆ ಹೇಗೆ ನಿರ್ಧಾರಕ್ಕೆ ಬರಲಿ? ಸ್ವಲ್ಪ ಸಮಯದ ಬಳಿಕ ಪೇದೆ ನನ್ನನ್ನು ಒಳಗೆ ಬಿಟ್ಟ. ಎಸ್. ಐ. ನನ್ನನ್ನು ವಿಚಿತ್ರ ರೀತಿಯಲ್ಲಿ ದೃಷ್ಟಿಸಿ, ಏನು ಪಾಸ್ ಪೋರ್ಟ್ ಗಾಗಿ ಬಂದ್ರಾ? ಅಂದ್ರು. ನಾನು ತಕ್ಷಣ, ಇಲ್ಲ ಸಾರ್, ನೀವೇ ನನಗೆ ಬಂದು ಮೀಟಾಗೂಂತ ಫೋನ್ ಮಾಡಿದ್ರಿ ಅಂದಾಗ ಒಂದು ಕ್ಷಣ ಗೊಂದಲಕ್ಕೆ ಬಿದ್ದ ಅವರು ತಕ್ಷಣ ನೆನಪಿಸಿಕೊಂಡು, ನಿಮ್ಮ ಹೆಸರೇನು ಅಂದ್ರು. ಹೆಸರು ಹೇಳಿದ ಕೂಡಲೆ ಕುರ್ಚಿಯಿಂದ ಎದ್ದು ನಿಂತು ಬಹಳ ಆತ್ಮೀಯತೆಯಿಂದ ಹಸ್ತ ಲಾಘವ ಮಾಡಿದರು. ಕೊನೆಗೆ ತನ್ನನ್ನು ಪರಿಚಯಿಸಿಕೊಂಡು, ಬಹಳಷ್ಟು ನಿಮ್ಮ ಕಥೆ, ಕಾದಂಬರಿಗಳನ್ನು ಓದಿದ್ದೇನೆ. ನೀವು ಬಿಡುವಿದ್ದಾಗ ಬರುತ್ತಿರಿ ಎಂದು ಆಹ್ವಾನಿಸಿದರು. ಹಾಗೆ ನನಗೂ ಎಸ್.ಐ. ರವಿಶಂಕರ್ ಅವರಿಗೂ ಪರಿಚಯವಾಯಿತು.

ಸಾಧಾರಣವಾಗಿ ವಾರಕ್ಕೊಮ್ಮೆ ಭೇಟಿಯಾಗುತ್ತಿದ್ದೆವು. ಪತ್ತುಮುಡಿ ಸೌಧದಲ್ಲಿದ್ದ ಜನತಾ ಡಿಲಕ್ಸ್ ನಮ್ಮ ಸಾಹಿತ್ಯ ವಿನಿಮಯದ ಅಡ್ಡೆಯಾಯಿತು. ನಾನು ಆ ಸಮಯದಲ್ಲಿ ನಮ್ಮ ಜಲಪಾತ ಫೋಟೋಕಾಮಿಕ್ಸ್ ಬಗ್ಗೆ ತಿಳಿಸಿದೆ. ಅವರು ತಮ್ಮ ಕಾರ್ಯನಿಮಿತ್ತ ಸಾಧ್ಯವಾಗಲಾರದೆನ್ನುವ ಅಭಿಪ್ರಾಯ ಸೂಚಿಸಿದರೂ, ನಾನು ಅವರಿಗಾಗಿ ತಿಂಗಳುಗಳಷ್ಟು ಸಮಯವನ್ನು ಮುಂದಕ್ಕೆ ಹಾಕಿದೆ. ಕೊನೆಗೂ ಅವರು ಇಲಾಖೆಯಿಂದ ಅನುಮತಿಯನ್ನು ಪಡೆದು `ಜಲಪಾತ' ದ ಐವರು ಹೀರೋಗಳಲ್ಲಿ ಒಬ್ಬರಾಗಿ ಅಭಿನಯಿಸಲು ಒಪ್ಪಿಕೊಂಡರು.

ಮೊದಲ ಫೋಟೋಕಾಮಿಕ್ಸ್ ನ ಹಾಗೆ ಒಂದೇ ದಿನದಲ್ಲಿ ಶೂಟಿಂಗ್ ಮುಗಿಯುವುದಿಲ್ಲವೆನ್ನುವುದು ನನಗೆ ಗೊತ್ತಿತ್ತು. ಒಮ್ಮೆ ಆರ್ಟಿಸ್ಟ್ ಗಳನ್ನು ಬಿಟ್ಟರೆ ಮತ್ತೊಂದು ದಿನಕ್ಕೆ ಸಿಗುವುದಿಲ್ಲವೆಂದು ಗೊತ್ತಿತ್ತು. ಹಾಗಿದ್ದರೂ ಧೈರ್ಯದಿಂದ ಎರಡು ದಿನಗಳ ಶೆಡ್ಯೂಲ್ ಹಾಕಿಕೊಂಡೆ. ಮೊದಲ ದಿನ ಕುದುರೆಮುಖ ದಾರಿಯಲ್ಲಿ ಸಿಗುವ ಒಂದು ಜಲಪಾತದ ಎದುರು ಶೂಟಿಂಗ್ ಮಾಡಿಕೊಂಡು, ಅಲ್ಲಿಂದ ಕಳಸದ ಬಳಿಯ ಅಂಬಾತೀರ್ಥಕ್ಕೆ ಹೋಗಿ ಅಲ್ಲಿ ಶೂಟಿಂಗ್ ಮುಗಿಸಿ ಮರಳಿ ಮಂಗಳೂರಿಗೆ ಬಂದು ಮಧ್ಯೆ ಒಂದು ದಿನದ ಗ್ಯಾಪ್ ಬಿಟ್ಟು ಮತ್ತೆ ಮಂಗಳೂರು, ಕಾವೂರು, ಮೂಡುಬಿದಿರೆಯ ಹತ್ತಿರ ಶೂಟಿಂಗ್ ಮಾಡುವ ಪ್ಲಾನ್ ಹಾಕಿಕೊಂಡೆವು. ಸುಸ್ತಾದರೂ ಕುದುರೆಮುಖ ಮತ್ತು ಅಂಬಾತೀರ್ಥದ ಶೂಟಿಂಗ್ ಸಾಂಗವಾಗಿ ನೆರವೇರಿತು. ಆದರೆ ಮಂಗಳೂರು, ಕಾವೂರು, ಮೂಡುಬಿದಿರೆಯ ಶೂಟಿಂಗ್ ಮಾತ್ರ ನಡೆಯುವುದಿಲ್ಲವೇನೋ ಅನಿಸಿತು. ಒಂದೆಡೆ ಫೋಟೋಗ್ರಾಫರ್ಗೆ ಬಿಡುವಿಲ್ಲದ ಮದುವೆಯ ಸೀಸನ್! ಉಳಿದವರಿಗೆ ಅವರವರ ಉದ್ಯೋಗ ಬಿಟ್ಟು ಬರುವ ಹಾಗೆ ಇಲ್ಲ. ಅಂತು ದಮ್ಮಯ್ಯ ದಕ್ಕಯ್ಯ ಹಾಕಿ ಶೂಟಿಂಗ್ ಮುಗಿಸುವ ಹೊತ್ತಿಗೆ ಕುತ್ತಿಗೆಯವರೆಗೆ ಬಂತು. ಜಲಪಾತ ದೊಡ್ಡ ಪ್ರಪಾತದಂತೆ ಕಂಡಿತು.

ಆನಂತರ ನಮ್ಮ ಎಡಿಟಿಂಗ್ ಕಾರ್ಯ ಬಹಳ ನಿಧಾನಗತಿಯಿಂದ ಸಾಗುತ್ತಿತ್ತು. ಇಷ್ಟಕ್ಕೂ ಅದು ಇಪ್ಪತ್ತನಾಲ್ಕು ಕಂತುಗಳ ಧಾರಾವಾಹಿ. ನಮ್ಮ ಹಾಗು ಸುಧಾ ವಾರಪತ್ರಿಕೆಯ ಅಗ್ರಿಮೆಂಟ್ ಪ್ರಕಾರ ಇನ್ನು ಉಳಿದಿರುವುದು ಕೇವಲ ಒಂದು ವಾರಗಳ ಸಮಯ. ಆ ಸಮಯದಲ್ಲಿ ನಾವು ಎಡಿಟಿಂಗ್ ಮುಗಿಸಿ ಡೈಲಾಗ್ಗಳನ್ನು ಹಾಕಿ ಪತ್ರಿಕಾ ಕಚೇರಿಗೆ ಸಿಡಿ ಮಾಡಿ ಕಳುಹಿಸಬೇಕಿತ್ತು. ಹೇಗೂ ಮುನ್ನಾ ದಿನ ಅದನ್ನು ಮುಗಿಸಿ ಸಿಡಿಯನ್ನು ಕೊರಿಯರ್ ಮಾಡಿಯಾಯಿತು. ಆದರೆ ಪತ್ರಿಕಾ ಕಚೇರಿಯಿಂದ ಸಿಡಿ ತಲುಪಿಲ್ಲವೆನ್ನುವ ಆಘಾತಕರ ವಿಷಯ ನನ್ನನ್ನು ಹೈರಾಣನನ್ನಾಗಿಸಿತು. ಆತಂಕದಿಂದಲೇ ಕೊರಿಯರ್ ಆಫೀಗೆ ಹೋಗಿ ವಿಚಾರಿಸಿದರೆ ಇನ್ನೂ ತಲುಪದಿರುವುದು ನಮ್ಮ ಗಮನಕ್ಕೆ ಬಂತು. ಕೊರಿಯರ್ನವನನ್ನು ಚೆನ್ನಾಗಿ ಬೈದು ಬಂದೆ. ಅಷ್ಟೊಂದು ಆತಂಕ ನನಗಿದ್ದಿದ್ದು ನಮ್ಮ ಅಗ್ರಿಮೆಂಟ್ ಮುರಿಯಿತೆಂದು, ಮೂವತ್ತು ಸಾವಿರ ಇನ್ವೆಸ್ಟ್ ಮಾಡಿದ್ದೆಲ್ಲಾ ನೀರಲ್ಲಿ ಹೋಮವಾಗಿಬಿಡುವುದೇನೋ ಅನ್ನುವುದಕ್ಕಾಗಿ ಮಾತ್ರ. ಆದರೂ ಒಂದೆರಡು ದಿನ ಕಾಯುವ ಭರವಸೆ ಸಿಕ್ಕಿತು. ಕೊನೆಗೆ ಸಿಡಿ ತಲುಪಿದ ಸುದ್ದಿ ಕಿವಿಗೆ ಬೀಳುತ್ತಲೇ ಸಂತೋಷವಾಯಿತು. ಒಂದೆರಡು ವಾರವಾದರೂ ಪತ್ರಿಕೆಯಲ್ಲಿ ಪ್ರಕಟಣೆ ಬರಲೇ ಇಲ್ಲ. ಇನ್ನೇನು ಆವಾಂತರವೋ ಎಂದು ಕಚೇರಿಗೆ ಫೋನಾಯಿಸಿದರೆ, ಇನ್ನೊಂದು ತಿಂಗಳು ಬಿಟ್ಟು ಹಾಕ್ತೀವಿ ಅನ್ನುವ ಉತ್ತರ ಬಂತು.

ಅಂತೂ ಜಲಪಾತ ಬರೀ ಆತಂಕಗಳನ್ನೇ ಸೃಷ್ಟಿಸಿತ್ತಲ್ಲಾ ಎಂದು ಬೇಸರಿಸುತ್ತಿದ್ದಂತೆ ಸುಧಾದಲ್ಲಿ `ಜಲಪಾತ'ದ ಪ್ರಕಟನೆ ಬಂತು. ಅಂತು ನಮ್ಮ ಕೆಲಸಕ್ಕೆ ಜಯ ಸಿಕ್ಕಿತೆನ್ನುವ ಆನಂದವಾಯಿತು. ಆ ಫೋಟೋಕಾಮಿಕ್ಸ್ ಅನ್ನು ಸಂಗ್ರಹಿಸಿ ಬೈಂಡ್ ಮಾಡಿಸಿ ಯಾವಾಗಲಾದರೊಮ್ಮೆ ಅದನ್ನು ನೋಡುವಾಗ ನನ್ನ ಜೊತೆಗೆ ಸಹಕರಿಸಿದ ಎಲ್ಲಾ ರೂಪದರ್ಶಿಗಳನ್ನು, ಸ್ಟುಡಿಯೋದವರನ್ನು, ಸಹಾಯಮಾಡಿದ ಮಿತ್ರರನ್ನು ನಾನು ತುಂಬು ಹೃದಯದಿಂದ ನೆನಪಿಸಿಕೊಳ್ಳುತ್ತೇನೆ. ನಿಜವಾಗಿಯೂ, ಆ ಸಮಯದಲ್ಲಿ ಸುಧಾ ವಾರಪತ್ರಿಕೆಯ ಹಿರಿಯ ಉಪಸಂಪಾದಕಿಯಾಗಿದ್ದ ಸಿ. ಜಿ. ಮಂಜುಳಾರನ್ನು ನಾನು ಗೌರವದಿಂದ ನೆನಪಿಸಿಕೊಳ್ಳುತ್ತೇನೆ.

ರೂಪದರ್ಶಿಗಳು : ಚೈತ್ರಾ ವಿ ಶೆಟ್ಟಿ, ಪ್ರವೀಣ್ ಕುಮಾರ್, ರವಿಶಂಕರ್, ನವನೀತ್, ಸುಧಾಕರ, ಕಿರಣ್ ಕೆ.
ಚಿತ್ರ ಕೃಪೆ: ಸುಧಾ ವಾರಪತ್ರಿಕೆ- ಅನು ಬೆಳ್ಳೆ.

2 comments:

RAVIRAJ SHETTY,KATEEL said...

good...

badekkila said...

Interesting tale!
aadre, Nanna anisike prakaara, Photo Comics annodakkintha photo kaadambari or Photo novel andre adakke svalpa seriousness barutthe antha!

Post a Comment