ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಸ್ಪೆಷಲ್ ಸ್ಟೋರಿ
ಕರಾವಳಿಯಲ್ಲಿ ಮರೀಚಿಕೆಯಾದ ಲೋಹದ ಹಕ್ಕಿಗಳ ಕಲರವ!


ಹಚ್ಚ ಹಸಿರಿನ ಸುಂದರ ಪ್ರಕೃತಿ ಸೌಂದರ್ಯ, ವರ್ಷದುದ್ದಕ್ಕೂ ಬತ್ತದ ಜಲರಾಶಿಯ ಸಮುದ್ರ...! ಮರಳ ರಾಶಿಯ ಸುಂದರ ಸಮುದ್ರ ಕಿನಾರೆ... ಹಸುರ ಗುಡ್ಡಗಳ ಸಾಲು, ವಿಶ್ವಖ್ಯಾತಿಯ ಬಸದಿಗಳ ತಾಣ... ಪುರಾಣ ಪ್ರಸಿದ್ಧಿಯ ದೇಗುಲ, ಮಂದಿರ ಮಸೀದಿಗಳು... ಆಕರ್ಷಕ ಕೃಷಿ ಭೂಮಿ, ಚಾರಣಯೋಗ್ಯ ಪರ್ವತಗಳು, ಜಲಲ ಜಲಧಾರೆ... ಹೀಗೆ ಪರಿಸರ ಪ್ರಿಯರಿಗೆ ಪ್ರವಾಸಿಗರಿಗೆ ದಕ್ಷಿಣ ಕನ್ನಡ, ಕರಾವಳಿ ಪ್ರದೇಶ ಹೇಳಿ ಮಾಡಿಸಿದ ಸ್ಥಳ...ಇಲ್ಲಿ ಹೆಲಿಕಾಪ್ಟರ್ ಬಳಸಿ ಟೂರಿಸಂ ಅಭಿವೃದ್ಧಿಪಡಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವರಾಗಿದ್ದ ಜನಾರ್ಧನ ರೆಡ್ಡಿ ದೊಡ್ಡದೊಂದು ಹೇಳಿಕೆ ನೀಡಿದ್ದರು. ಇದನ್ನು ನೀಡಿ ವರುಷಗಳು ಉರುಳಿವೆ.ಆದರೆ ರೆಡ್ಡಿ ಮಾತು ಠುಸ್ ಆಗಿದೆ.ಒಂದೇ ಒಂದು ಬಾರಿಯೂ ಇಲ್ಲಿ ಹೆಲಿಕಾಪ್ಟರ್ ಹಾರಿಲ್ಲ...ಟೂರಿಸಂ ಅಭಿವೃದ್ಧಿಯೂ ಆಗಿಲ್ಲ...!


ವರುಷಗಳ ಹಿಂದೆ .... ಕರ್ನಾಟಕ ರಾಜ್ಯ ಪರಿಪೂರ್ಣವಾಗಿ ಬಿಜೆಪಿ ಆಳ್ವಿಕೆಯ ತೆಕ್ಕೆಗೆ ಬಂದಾಗಿತ್ತು. ರೆಡ್ಡಿ ಬ್ರದರ್ಸ್ ಸಚಿವ ಪಟ್ಟ ಸ್ವೀಕರಿಸಿ ಆಗಿತ್ತು. ಪ್ರವಾಸೋದ್ಯಮ ಸಚಿವ ಜನಾರ್ಧನ ರೆಡ್ಡಿ ಹೊಸ ಸರಕಾರದಲ್ಲಿ ಹುರುಪಿನಿಂದ ಹೊಸ ಯೋಜನೆಯೊಂದನ್ನು ರೂಪಿಸಲು ಸಿದ್ಧರಾಗಿ ಹೇಳಿಕೆಗಳನ್ನೂ ಕೊಟ್ಟಾಗಿತ್ತು... "ಮಂಗಳೂರು ಹಾಗೂ ಹಂಪಿಯಲ್ಲಿ ಆರಂಭಿಕ ಹಂತದಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗೆ ಹೊಸ ಯೋಜನೆ ರೂಪಿಸಲಾಗುತ್ತಿದೆ. ಈ ಎರಡೂ ಪ್ರದೇಶಗಳಲ್ಲಿ ತಲಾ 10 ಹೆಲಿಕಾಪ್ಟರ್ಗಳನ್ನು ನಿಯೋಜಿಸಲಾಗುತ್ತದೆ.ತನ್ಮೂಲಕ ಹೆಲಿ ಟೂರಿಸಂ ಇಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ ಎಂಬುದಾಗಿ"

ಅಮೆರಿಕಾದ ಗ್ರೇಟ್ ಕ್ಯಾನಿಯನ್ ಮಾದರಿಯಲ್ಲಿಯೇ ಇಲ್ಲೂ ಈ ಯೋಜನೆ ಅನುಷ್ಠಾನಗೊಳ್ಳಲಿದೆ. ಕರಾವಳಿಯ ಸೌಂದರ್ಯ, ಇಲ್ಲಿನ ಪಶ್ಚಿಮ ಘಟ್ಟಗಳ ಸುಂದರ ಶಿಖರ ರಾಶಿಗಳು... ಚಾರಿತ್ರಿಕ ತಾಣಗಳನ್ನು ಹೆಲಿಕಾಪ್ಟರ್ ಮೂಲಕ ಸಂದರ್ಶಿಸಲು ಅವಕಾಶ. ಇದು ಹೆಲಿಕಾಪ್ಟರ್ ಆಧಾರಿತ ಪ್ರವಾಸೋದ್ಯಮದ ಒಂದು ಸಣ್ಣ ಚಿತ್ರಣ!

ಕರಾವಳಿಯ ಜನ ಜನಾರ್ಧನ ರೆಡ್ಡಿ ಅವರ ಮಾತಿಗೆ ಮರುಳಾದರು. ಖುಷಿಯಿಂದ ಹುಚ್ಚೆದ್ದು ಕುಣಿದರು. ಹೆಲಿಕಾಪ್ಟರ್ ಮೂಲಕ ಸೌಂದರ್ಯ ವೀಕ್ಷಣೆಯ ಕನಸು ಕಂಡರು. ಆದರೆ ಕರಾವಳಿಯ ಬಾನಲ್ಲಿ ಟೂರಿಸಂ ಹೆಲಿಕಾಪ್ಟರ್ ಗಳು ಹಾರಾಡಲೇ ಇಲ್ಲ...ಜನ ಇದರಲ್ಲಿ ಸೌಂದರ್ಯ ವೀಕ್ಷಿಸಲೂ ಇಲ್ಲ...

ಹೆಲಿ ಟೂರಿಸಂ ಯೋಜನೆ ಒಳ್ಳೆಯದ್ದೇ ಆಗಿದೆ. ಆದರೆ ಇದನ್ನಾದರೂ ಅನುಷ್ಠಾನ ಮಾಡುವ ಕಾರ್ಯ ಆಗಬೇಕಾಗಿದೆ.

ಹೇಗಿರುತ್ತದೆ ಈ ಯೋಜನೆ...
ಇದು ಒಂದು ದಿನದ ಪ್ರವಾಸ. ಹೆಲಿಕಾಪ್ಟರ್ ಮೂಲಕ ಈ ಪ್ರವಾಸಕ್ಕೆ ಅವಕಾಶ. ಇಲ್ಲಿನ ಪಶ್ಚಿಮ ಘಟ್ಟಗಳಾಗಿರಬಹುದು, ಸುಂದರ ಬೀಚ್ಗಳಾಗಿರಬಹದು, ಅಥವಾ ದೇಗುಲಗಿರಬಹುದು...ಇನ್ಯಾವುದೇ ಸ್ಥಳಗಳಿರಬಹುದು...ಅಲ್ಲಿಗೆ ಯಾತ್ರಾರ್ಥಿಗಳನ್ನು ಕರೆದೊಯ್ದು ಅಲ್ಲಿನ ಸುಂದರ ಸ್ಥಳಗಳ ವೀಕ್ಷಣೆಗೆ ಅವಕಾಶ. ಸೂಕ್ತ ಸ್ಥಳಗಳಲ್ಲಿ ಹೆಲಿಕಾಪ್ಟರ್ ನಿಲುಗಡೆ... ಆ ಸುಂದರ ಸ್ಥಳದಲ್ಲೇ ಊಟ, ಉಪಹಾರದ ವ್ಯವಸ್ಥೆ... ಹೀಗಿರುತ್ತೆ ಯೋಜನೆ.

ಏನಿದು ಗ್ರೇಟ್ ಕ್ಯಾನಿಯನ್ ಮಾದರಿ...
ಅಮೆರಿಕಾದ ಗ್ರೇಟ್ ಕ್ಯಾನಿಯನ್ ಆಳವಾದ ಪ್ರಪಾತಗಳನ್ನು ಹೊಂದಿದ ಗುಡ್ಡಕಾಡು ಪ್ರದೇಶ. ಇಲ್ಲಿ ಪ್ರವಾಸೋದ್ಯಮ ನಡೆಸಿದರೆ ಹೇಗೆ ಎಂಬ ಚಿಂತನೆ ಅಲ್ಲಿನ ಪ್ರಮುಖರಿಗೆ ಬಂತು. ಅದರ ಪರಿಣಾಮವೇ 20 ಹೆಲಿಕಾಪ್ಟರ್ಗಳ ಮೂಲಕ ಪ್ರವಾಸೋದ್ಯಮಕ್ಕೆ ಚಾಲನೆ. ಪ್ರವಾಸಿಗರನ್ನು ಹೆಲಿಕಾಪ್ಟರ್ ಮೂಲಕ ಕರೆದೊಯ್ದು ಸ್ಥಳ ವೀಕ್ಷಣೆಗೆ ಅವಕಾಶ ನೀಡುವುದೇ ಇಲ್ಲಿನ ಒಂದು ಮಾದರಿ.

- ಹರೀಶ್ ಕೆ.ಆದೂರು.

0 comments:

Post a Comment