ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ

ಜಂತರ್ ಮಂತರ್ ನಲ್ಲಿ ಉಪವಾಸ ಕೂತ ಅಣ್ಣಾ ಹಜಾರೆ ಗಾಂಧಿಯಂತೆ ಕಂಡದ್ದೇಕೆ ಎಂಬ ಒಂದು ಪ್ರಶ್ನೆಯಲ್ಲೇ ಹಲವು ಪ್ರಶ್ನೆಗಳಿಗೆ ಉತ್ತರವಿದೆ. ಅವರ ಆಮರಣ ಉಪವಾಸ,ಸತ್ಯಾಗ್ರಹ, ಮಾಧ್ಯಮಗಳ ಪ್ರಚಾರ ಮೊದಲಾದವುಗಳ ತರುವಾಯವೂ ಅವರು ಆಧುನಿಕ ಪೀಳಿಗೆಗೆ ಭಿನ್ನವಾಗಿ ಕಂಡಿದ್ದರು. ಆ ಭಿನ್ನತೆಯೇ ಒಂಥರಾ ‘ಕ್ಯಾಚಿ’ ಅನ್ನಿಸಿಬಿಟ್ಟಿತ್ತು. ಭ್ರಷ್ಟಾಚಾರದ ವಿರುದ್ದದ ಹೋರಾಟವಷ್ಟೇ ಅಲ್ಲದೆ ಏನೋ ಒಂದು ಸಂವೇದನೆಯೂ ಅಣ್ಣಾವರ ಉಪವಾಸದಲ್ಲಿ ಉದ್ಭವವಾಗಿತ್ತು. ವಿಪರ್ಯಾಸವೆಂದರೆ ಅದು ಅಷ್ಟೇ ಬೇಗ ಉಡುಗಿಯೂ ಹೋಯಿತು.
ಮೊನ್ನೆಯ ಘಟನೆಗೊಂದು ಪೂರ್ವರಂಗವಿದೆ. ಅದನ್ನು ಅರಿಯದೆ ಇದನ್ನು ಅರಿಯಲಾಗದು ಎಂಬಷ್ಟು ಅದು ನಿಕಟವೂ ಆಗಿದೆ. ಅದು ಪ್ರಸ್ತತ ಚರ್ಚೆಯದೇ ವಿಷಯವಾಗಿರಬಹುದು. ಭ್ರಷ್ಟಾಚಾರ ಮೇರೆಮೀರಿ ಸಜ್ಜನ,ಕ್ರಿಯಾಶೀಲ,ಸಂಸ್ಕಾರವಂತ, ದೇಶಪ್ರೇಮಿ,ಓರ್ವ ನಾಗರಿಕ ಸುಮ್ಮನೆ ಕೂತುಕೊಳ್ಳಲು ಇನ್ನು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಬಂದಿದ್ದು ಸತ್ಯವೇ. ಆದರೆ ಭಾರತ ಇದಕ್ಕಿಂತ ಭಿನ್ನವಾಗಿದ್ದದ್ದು ಯಾವಾಗ? ಭ್ರಷ್ಟಾಚಾರದ ನಾನಾ ಮುಖಗಳಲ್ಲಿ ಒಂದಲ್ಲಾ ಒಂದು ಮುಖ ಬಹುತೇಕ ಸಮಯದಲ್ಲಿ ಇದ್ದದ್ದೇ.ಆಳುವ ವರ್ಗದ ಭ್ರಷ್ಟತೆ ಇದ್ದದ್ದೇ. ಆದರೆ ಇವತ್ತಿನ ಪರಿಸ್ಥಿತಿಯಲ್ಲಿ ಆಳಿಸಿಕೊಳ್ಳುವವರೂ ಭ್ರಷ್ಟರಾದ ಪರಿಸ್ಥಿತಿ ಇದೆ. ಇವೆರಡೂ ಸನ್ನಿವೇಶಗಳು ಬಹುಕಾಲದ ನಂಟನಂತೆ ಒಟ್ಟೊಟ್ಟಿಗೆ ಸಾಗುತ್ತಿರುವುದನ್ನು ಕೆಲವು ಶತಮಾನಗಳ ಇತಿಹಾಸ ಕಥನದಿಂದ ಅರಿಯಬಹುದು.ಒಂದೆಡೆ ಆಳಿಸಿಕೊಂಡರೆ ನಿಲ್ಲುವ ಪ್ರಜಾವರ್ಗದ ಭ್ರಷ್ಟತೆ. ಇನ್ನೊಂದೆಡೆ ಹೆಪ್ಪುಗಟ್ಟಿದ ಆಳುವವರದ್ದೇ ಭ್ರಷ್ಟತೆ. ಒಂದು ಉದಾಹರಣೆಯನ್ನು ನಾವು ಗಮನಿಸಬೇಕು. ಬ್ರಿಟಿಷರು ವ್ಯಾಪಾರಿಗಳಿರಬಹುದು.ಭ್ರಷ್ಟತೆಯಿಂದಲೇ ಭಾರತವನ್ನಾಳಿರಬಹುದು. ಆದರೆ ಬ್ರಿಟಿಷ್ ಅವಧಿಯಲ್ಲಿ ಭಾರತೀಯರಲ್ಲಿ ಭ್ರಷ್ಟತೆ ಇಷ್ಟುಇರಲಿಲ್ಲವೆಂಬುದನ್ನು ಅರಿಯಬೇಕು. ಲಂಚ ರುಷುವತ್ತುಗಳು ಈಗಿನಷ್ಟಿರಲಿಲ್ಲ್ಲ. ಭಯದಿಂದಲೂ ಭಂಡತನದಿಂದಲೂ ಆಳಿಸಿಕೊಳ್ಳುವ ಜನಸಮುದಾಯದಲ್ಲಿ ಅಂಥ ಭೃಷ್ಟತೆಯಿರುವುದಿಲ್ಲ.ಇದು ಭ್ರಷ್ಟತೆಯ ಮೀಮಾಂಸೆಯಲ್ಲ. ಇತಿಹಾಸ ಹೇಳುವ ಸತ್ಯ. ಆದ್ದರಿಂದ ಬ್ರಿಟಿಷ್ ಕಾಲದಲ್ಲಿ ಓರ್ವ ಗಾಂಧಿ ಮಹಾತ್ಮನಾದ. ನಂದರ ಕಾಲದ ಒರ್ವ ಸಾಮಾನ್ಯ ವ್ಯಕ್ತಿ ಮೌರ್ಯನಾದ.


ಈ ಆಳುವ ಮತ್ತು ಆಳಿಸಿಕೊಳ್ಳುವ ವ್ಯಕ್ತಿಗಳ ನಡುವಿನ ಮಾಧುರ್‍ಯ ಬೆಸೆಯುವ ಸಂವೇದನೆಯೇ ಸ್ವರಾಜ್ಯ. ಅದರಲ್ಲಿ ಆಳುವ ಮತ್ತು ಆಳಿಸಿಕೊಳ್ಳುವ ಸಂದರ್ಭದಲ್ಲಿ ಸದ್ಭಾವನೆ ಇರುತ್ತದೆ. ಅವೆರಡರ ಮಧ್ಯದ ಸರಕು ರಾಜಧರ್ಮವೋ ಪ್ರಜಾಧರ್ಮವೋ ಏನೋ ಒಂದು ಆಗಿರುತ್ತದೆ. ಬಲವಿದ್ದರೂ ಅಲ್ಲಿ ಧರ್ಮವೇ ಆಳಲ್ಪಡುತ್ತದೆ. ಅದು ನೈತಿಕ ಬಲವೂ ಆಗಿರಬಹುದು. ಅದು ವ್ಯವಸ್ಥೆಯನ್ನು ನೀತಿವಂತವನ್ನಾಗಿಸುತ್ತದೆ. ಎರಡು ತುದಿಗಳ ನಡುವೆ ಆ ವ್ಯವಸ್ಥೆ ಸುಲಭ ತಂತು ಒಂದನ್ನು ಪೋಣಿಸಿರುತ್ತದೆ. ಅದಕ್ಕೆ ಬ್ರಿಟಿಷ್ ಕಾಲದ ಮಹಾತ್ಮರೆಲ್ಲರೂ ‘ಸ್ವರಾಜ್ಯ’ ಎಂದರು. ಸ್ವರಾಜ್ಯದ ನೆರಳಲ್ಲಿ ಸ್ವಾತಂತ್ರ್ಯದ ಕನಸು ಕಂಡರು. ಸಾವರ್ಕರರು, ಭೋಸರು, ಅರವಿಂದರು, ತಿಲಕರು ಎಲ್ಲರೂ ಸ್ವರಾಜ್ಯದ ದೀಪದಲ್ಲೇ ಸ್ವಾತಂತ್ರ್ಯವನ್ನು ಅಪೇಕ್ಷಿಸಿದರು. ಆಳುವ ಮತ್ತು ಆಳಿಸಿಕೊಳ್ಳುವ ಸಿದ್ಧತೆಗೆ ಸಮಾಜವನ್ನು ರೂಪಿಸುವ ಕೆಲಸ ಮಾಡಿದರು. ಆ ಕೆಲಸ ೧೯೪೭ರಲ್ಲಿ ಪೂರ್ತಿಯಾಯಿತೋ ಗೊತ್ತಿಲ್ಲ. ಬ್ರಿಟಿಷರು ಟ್ರಾನ್ಸ್‌ಫರ್ ಆದದ್ದಂತೂ ಸತ್ಯ. ಕಾಲಕಳೆದಂತೆ ಸ್ವರಾಜ್ಯದ ಕಲ್ಪನೆ ಮರೆಯಿತು. ಆಳುವ ಮತ್ತು ಆಳಿಸಿಕೊಳ್ಳುವ ಮೌಲ್ಯಗಳನ್ನು ಹೇಳುವವರು ಇಲ್ಲವಾದರು.ಪಾಲಿಸುವವರೂ ಇಲ್ಲವಾದರು. ಬ್ರಿಟಿಷ್ ವ್ಯವಸ್ಥೆ ರೂಪುಗೊಂಡಿತು. ಅಂದು ವೈಸರಾಯಿ, ಗವರ್ನರ್ ಜನರಲ್ ರಂತೆ ಇಂದಿರಾಗಾಂಧಿ ಆಳುವ ವ್ಯವಸ್ಥೆಯಲ್ಲಿ ಬಂದು ವ್ಯವಸ್ಥೆಯಲ್ಲಿ ಹೆಚ್ಚು ವ್ಯತ್ಯಾಸವಾಗಲಿಲ್ಲ. ಭ್ರಷ್ಟತೆಯ ಸ್ಥಿತಿಯಲ್ಲೂ ಗುಣ ಕಾಣಲಿಲ್ಲ. ವ್ಯವಸ್ಥೆಯ ಗೌರವ ಬೆಳೆಯಲಿಲ್ಲ. ಆಳ್ವಿಕೆಗೆ ಪ್ರಜಾ ಜನರನ್ನು ಭಯ-ಭಕ್ತಿ ಮೂಡಿಸಿಕೊಳ್ಳುವ ಶಕ್ತಿಯೇ ಬರಲಿಲ್ಲ . ಅಡಿಗಡಿಗೆ ತನ್ನ ದೌರ್ಬಲ್ಯವನ್ನು ಪ್ರಕಟಪಡಿಸಿಕೊಂಡಿತು. ಆಳಿಸಿಕೊಳ್ಳುವವರೂ ಭ್ರಷ್ಟರಾದರು. ಆಳುವವರು ಆಳಿಸಿಕೊಳ್ಳು ವವರೊಡಗೂಡಿ ಭ್ರಷ್ಟತೆಯನ್ನು ಪೋಷಿಸಿದರು. ಹೀಗೆ ವ್ಯವಸ್ಥೆಯಲ್ಲಿ ಬಿತ್ತಿದ್ದೇ ಬೇವು. ಇನ್ನು ಮಾವು ಬೆಳೆಯುವುದು ಹೇಗೆ? ಸ್ವರಾಜ್ಯ ಬರುವುದು ಹೇಗೆ? ವ್ಯವಸ್ಥೆ ಶಕ್ತಿ ತುಂಬುವುದು ಹೇಗೆ?
ಹೀಗೆ ಸ್ವರಾಜ್ಯದ ಹಾದಿಯಲ್ಲಿ ವಿರಮಿಸದೆ ತನ್ನ ಪಾಡಿಗೆ ತಾವು ಪ್ರವ್ರತ್ತರಾದವರು ಅಣ್ಣಾ ಹಜಾರೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಅದರ ಆವಶ್ಯಕತೆ, ಅನಿವಾರ್ಯತೆಗಳನ್ನು ಪ್ರತಿಪಾದಿಸಿದವರು ಅವರು. ಅದಕ್ಕಾಗಿ ಅಣ್ಣಾ ವಿನೋಭಾರಂತೆ, ಜೆ.ಪಿ.ಯವರಂತೆ ಕಾಣುತ್ತಾರೆ. ಮತ್ತು ಅಣ್ಣಾ ಕಾಲದ ಹಂಗಿಗೊಳಪಟ್ಟು ಜೆಪಿ ಮತ್ತು ವಿನೋಭಾರಿಗಿಂತ ಭಿನ್ನರಂತೆಯೂ ಕೆಲವೊಮ್ಮೆ ಕಾಣುತ್ತಾರೆ. ಏಕೆಂದರೆ ಅವರಿಬ್ಬರೂ ಸ್ವರಾಜ್ಯದ ಹಾದಿಯಲ್ಲಿ ರಾಜಿ ಮಾಡಿಕೊಳ್ಳದವರು. ಅಂದರೆ ಇಟ್ಟ ಹೆಜ್ಜೆಯನ್ನು ಹಿಂತೆಗೆಯದವರು. ಆದರೆ ಅಣ್ಣಾ...? ನೀರಿಗೇನೋ ಇಳಿದಿದ್ದರು. ಹಿಂದೆ ಸರಿಯಲಾರದ ಛಾತಿಯೂ ಅವರಿಗಿತ್ತು. ಆದರೆ ಆಳುವವರ ಹುನ್ನಾರಕ್ಕೆ ಬಲಿಬಿದ್ದರೇನೋ ಅನಿಸುತ್ತದೆ. ಸಾತ್ವಿಕತೆಯ ಮೂರ್ತಿವೆತ್ತವರಲ್ಲಿ ಕೊಂಚ ಹೆಚ್ಚೇ ಇರಬಹುದಾದ ಮುಗ್ಧತೆ, ಹುನ್ನಾರವನ್ನು ಸುಲಭವಾಗಿ ಅರಿಯಲಾರದ ಪ್ರಾಂಜಲ ಮನಸು ಅಣ್ಣಾ ಅವರದ್ದೂ ಕೂಡ. ಹಾಗಾಗಿ ಎಲ್ಲವೂ ಇದ್ದು, ಶಕ್ತಿಯನ್ನೂ ಸಂಚಯಿಸಿ ಈಗ ಎಲ್ಲವೂ ಸ್ತಬ್ಧವಾಗಿದೆ. ಭೀಕರ ಚಂಡಮಾರುತವೊಂದು ತನ್ನ ಮುನ್ಸೂಚನೆಯನ್ನು ನೀಡಿ ತನ್ನ ಸಂಚಾರಕ್ಕೆ ಮುನ್ನವೇ ನಿಶ್ಚಲವಾದಂತೆ ಎನಿಸುತ್ತದೆ. ಅಂದರೆ ಲೋಕಪಾಲ ಮಸೂದೆ ಪಾಸಾಗುವುದರಲ್ಲಿ ನಂಬಿಕೆಯಿಲ್ಲ. ಹೇಗೆ ತಾನೇ ನಂಬಿಕೆ ಇಡುವುದು? ಬೇಲಿಯೇ ಹೊಲ ಮೇಯುವ ಸನ್ನಿವೇಶದಲ್ಲಿ ಬೆಳೆ ಸುರಕ್ಷಿತವಾಗಿರುವುದು ಎಂದು ಹೇಗೆ ಹೇಳಲು ಸಾಧ್ಯವಿಲ್ಲವೋ ಹಾಗೆಯೇ ಇಂಥದ್ದೊಂದು ಮಸೂದೆ ಪಾಸಾಗಿ, ಅನುಷ್ಠಾನಕ್ಕೆ ಬಂದು ಭೃಷ್ಟಾಚಾರ ಕೊನೆಯಾಗುವುದೆಂದು ಹೇಳುವುದೂ ಕಷ್ಟವೇ. ಒಂದು ವೇಳೆ ಮಸೂದೆ ಪಾಸಾದರೂ ಅದು ಸಂಪೂರ್ಣ ಸ್ವರಾಜ್ಯದ ತಳಹದಿಯಲ್ಲಿ,ನೈತಿಕ ಮೌಲ್ಯಗಳಾಧಾರದಲ್ಲಿ ಇರುವುದೆಂದು ಹೇಳಲು ಸಾಧ್ಯವಿಲ್ಲ. ಬಣ್ಣ ರೂಪಗಳಲ್ಲಿ ಲೋಕಪಾಲ ಇರಬಹುದು. ಆದರೆ ರುಚಿಯಲ್ಲಿ ಇರುವುದು ಕಷ್ಟ. ಏಕೆಂದರೆ ಯಾರೂ ಫ್ರೀ ರನ್ನಿಂಗ್ ಕೇಸಿನಲ್ಲಿ ಹರ್ಡಲ್ಸ್ ಅನ್ನು ನಿರೀಕ್ಷಿಸುವುದೇ ಇಲ್ಲ. ಇನ್ನು ಅಪೇಕ್ಷಿಸುವರೇ? ಮೊನ್ನೆಯ ಹೋರಾಟದಲ್ಲೇ ಅದು ಗೊತ್ತಾಗಲಿಲ್ಲವೇ? ಯಾರ್‍ಯಾರೆಲ್ಲಾ ಭ್ರಷ್ಟತೆಯ ಬಗ್ಗೆ ಮಾತಾಡಿದರು? ಜೈಲಲ್ಲಿ ಕೂತ ಪಪ್ಪೂ ಯಾದವನಿಂದ ಹಿಡಿದು ಬಾಲಿವುಡ್ಡಿನ ಬಿಚ್ಚಮ್ಮಗಳೂ ಜಂತರ್ ಮಂತರ್‌ಗೆ ಬೆಂಬಲ ಸೂಚಿಸಿದವರೇ? ಎಲ್ಲರಿಗೂ ಕಾನೂನಿನ ಅರಿವು ಇದೆ. ತಮ್ಮ ಪ್ರಜ್ಞೆಯೂ ಸ್ಪಷ್ಟವಾಗಿದೆ. ಆದ್ದರಿಂದ ಪಾಲನೆಯಾಗಬೇಕಾದ ಕಾನೂನುಗಳು ಇಲ್ಲಿ ಮಂಡನೆಯಾಗುವುದೇ ಇಲ್ಲ. ಚಾಲ್ತಿಯಲ್ಲಿರುವ ಕಾನೂನುಗಳಿಗೆ ಬೆನ್ನುಮೂಳೆಯೇ ಸರಿ ಇಲ್ಲ. ಅಥವಾ ಸೊಂಟ ಬಿದ್ದು ಹೋದಂಥಾ ಕಾನೂನುಗಳನ್ನೇ ನಿರ್ಮಾಣ ಮಾಡಲಾಗಿರುತ್ತದೆ. ಮಂಡನೆಯಾಗುವ ಕಾನೂನುಗಳಲ್ಲಿ ಒಂದು ರಂಧ್ರವಂತೂ ಇದ್ದೇ ಇರುತ್ತದೆ. ಟ್ಯಾಂಕ್ ಖಾಲಿಯಾಗಲು ಅದು ಸಾಲದೇ? ಹಾಗಾಗಿ ಕಾನೂನಿನ ಬಗ್ಗೆ ಯಾರೂ ಮಾತಾಡಬಹುದು. ಭಯೋತ್ಪಾದನೆಯ ಬಗ್ಗೆ ಮಾತಾಡಿದಂತೆ. ಚಪ್ಪಾಳೆ ಗಿಟ್ಟಿಸಿಕೊಂಡು ತಜ್ಞತೆಯ ಪಟ್ಟವನ್ನೂ ಅಲಂಕರಿಸಬಹುದು. ಆದರೆ ಅಫಜಲ್ ಗುರುವಿಗೆ ಕಸಬನಂತವರಿಗೆ ಗಲ್ಲು ಶಿಕ್ಷೆ ಆಗಬೇಕು ಎಂದೇನೂ ಇಲ್ಲ. ಇದು ಕಾನೂನು. ಅದಕ್ಕೆ ಬಾಯಿಗಳಿಲ್ಲ. ಅದು ಮಾತಾಡುವುದಿಲ್ಲ. ಕಣ್ಣಿಲ್ಲ, ಬಟ್ಟೆ ಕಟ್ಟಲಾಗಿದೆ. ಭಾರತದ ಕಾನೂನುಗಳ ಸ್ವರೂಪಗಳೇ ಹೀಗೆ. ಸ್ವರಾಜ್ಯಕ್ಕೆ ಪ್ರಮುಖ ಅಡ್ಡಿಯಾಗಿರುವುದೇ ಈ ಕಾನೂನುಗಳು . ವಿಪರ್ಯಾಸವೆಂದರೆ ಅಣ್ಣಾ ಹಜಾರೆ ಅದರ ಬಗ್ಗೆ ಹೆಚ್ಚು ಚಿಂತಿಸಲಿಲ್ಲ. ಲೋಕಪಾಲರ ಕಮಿಟಿಯೊಂದೇ ಅವರ ಕಣ್ಣ ಮುಂದಿತ್ತು. ಬಿಲ್ಲು ಪಾಸಾಗಬೇಕಾಗಿತ್ತು. ಅವೆರಡಕ್ಕೂ ಆಶ್ವಾಸನೆಗಳು ಸಿಕ್ಕವು. ಅಷ್ಟರಿಂದಲೇ ಸ್ವರಾಜ್ಯದ ದಾರಿ ಸುಗಮವಾದಂತಾಯಿತು ಎನ್ನುವುದು ಗಾಂಧಿಗಿರಿಯ ಒಂದು ದೊಡ್ಡ ದೌರ್ಬಲ್ಯ. ಆಗಸ್ಟ್ ೧೫ರೊಳಗೆ ಲೋಕಪಾಲ ಮಸೂದೆ ಪಾಸಾಗಬಹುದು. ಆದರೆ ಭ್ರಷ್ಟತೆ ಇಂಗುವಂತಲ್ಲ. ಪಾಸಾದ ಕಾನೂನಿನಲ್ಲಿ ಏನಾದರೂ ಟ್ವಿಸ್ಟ್‌ಗಳು ಇದ್ದೇ ಇರುತ್ತವೆ. ಕೋಟಿಗಳ ಆದಾಯದ ಮೂಲವನ್ನು ಅಷ್ಟು ಸುಲಭವಾಗಿ ಮುಚ್ಚಿ ಹಾಕುವಷ್ಟು ಮುಠಾಳರಲ್ಲ ಆಳುವವರು. ಅಣ್ಣಾ ಹಜಾರೆಯನ್ನು ಬಾಯಿ ಮುಚ್ಚಿಸಲಾಗಿದೆ. ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸಲ್ಲವೇ? ಅಣ್ಣಾ ಹಜಾರೆ ಒಂದು ಸಂಗತಿಯನ್ನಂತೂ ಗಣನೆಗೆ ತೆಗೆದುಕೊಳ್ಳಬೇಕಿತ್ತು. ಕಾಳಜಿಯುಕ್ತ, ಸ್ವರಾಜ್ಯದ ತಳಹದಿಯ, ಇಚ್ಛಾಶಕ್ತಿಯ ಲವಲೇಶ ಆಳುವವರಲ್ಲಿ ಇದ್ದಿದ್ದರೆ ಭಾರತದಲ್ಲಿ ಒಂದು ರಾಲೇಗಣಸಿದ್ಧಿ ಮಾತ್ರ ಇರುತ್ತಿರಲಿಲ್ಲ. ಇಡೀ ಭಾರತವೇ ರಾಲೇಗಣಸಿದ್ಧಿ ಆಗಿರುತ್ತಿತ್ತು.
ಇಷ್ಟಕ್ಕೆ ಎಲ್ಲವೂ ಮುಗಿದುಹೋಯಿತು ಎಂದುಕೊಂಡು ಸಮಾಧಾನಪಟ್ಟುಕೊಳ್ಳುವಂತೆ ಕೂಡ ಪರಿಸ್ಥಿತಿ ಇಲ್ಲ. ಗಡುವು ಕೊಟ್ಟಾಗಿದೆಯಲ್ಲಾ ಎಂದುಕೊಂಡರೂ ಸರಿಯಲ್ಲ. ಏಕೆಂದರೆ ಗಾಂಧಿತತ್ವದ ಅಣ್ಣಾ ಚಾಪೆಯ ಕೆಳಗೆ ತೂರುವ ಜಾಯಮಾನದವರಂತೂ ಅಲ್ಲವೇ ಅಲ್ಲ. ಆದರೆ ಸರಕಾರ ಮತ್ತು ರಾಜಕಾರಣಿಗಳು ರಂಗೋಲಿ ಕೆಳಗೂ, ನೆಲದ ಒಳಗೂ ತೂರಿ ಬಿಡುತ್ತಾರೆ. ಸದ್ಯದ ಒಂದು ಅಲೆ ನಿಲ್ಲಿಸುವುದು ಬೇಕಾಗಿತ್ತು.ನಿಲ್ಲಿಸಿಯಾಗಿದೆ. ಜೆ.ಪಿ. ಚಳವಳಿಯ ಅನಂತರ ದೇಶಾದ್ಯಂತ ಯಶಸ್ಸಿನತ್ತ ಸಾಗುತ್ತಿದ್ದ ಸ್ವರಾಜ್ಯದ ಅಲೆಯೊಂದು ಫಲಿತಾಂಶವಿಲ್ಲದೇ ಕೊನೆಯಾಗಿ ಹೋಗಿದೆ. ಸರಕಾರದ ಒಂದು ಹೇಳಿಕೆಗೆ ಹಣ್ಣಿನ ರಸದ ಸೇವನೆಯಾಗಿದೆ. ಉಪವಾಸ ಅಂತ್ಯವಾಗಿದೆ. ದೇಶಾದ್ಯಂತ ಭರವಸೆಯ ಕಣ್ಣುಗಳಿಂದ ಕಾಯುತ್ತಿದ್ದವರಿಗೆ ಹೆಚ್ಚೇನೂ ಸಿಗದೆ ಎಲ್ಲವೂ ನಿಂತುಹೋಗಿದೆ. ಚಳವಳಿಯ ದಿಕ್ಕನ್ನು ನಿರ್ಧರಿಸಬಲ್ಲ ಕೆಚ್ಚು,ರಾಷ್ಟ್ರ ಸಾಗುತ್ತಿದ್ದ ನಡೆ,ಜಾಗತೀಕರಣದಲ್ಲಿ ಸ್ವರಾಜ್ಯದ ಪರಿಭಾಷೆಗಳ ಲವಲೇಷವೇ ಇಲ್ಲದೆ ಗಾಂಧೀವಾದಿಯೊಬ್ಬನ ಚಿಂತನೆ ದಡ ಸೇರಿದೆ ಎಂದೆನ್ನದೆ ವಿಧಿ ಇಲ್ಲ. ಗಡುವು ಕೊಟ್ಟು ಇದು ಅಂತ್ಯವಲ್ಲ ಆರಂಭ ಎನ್ನುವುದೇನೋ ಸರಿ. ಆದರೆ ದೇಶದ ವಿಶಾಲ ಜನಸಮುದಾಯವನ್ನು ಭ್ರಮನಿರಸನಗೊಳಿಸುವ ಪ್ರಕ್ರಿಯೆ ಆರಂಭವಾಗಿದೆಯೇನೋ ಅನಿಸುತ್ತದೆ.ಕ್ರಾಂತಿಗೆ ಕಾಲ ಕೂಡಿಬರಬೇಕು ನಿಜ. ಸ್ವರಾಜ್ಯದ ಚಿಂತನೆಗೆ ಇನ್ನೆಷ್ಟು ಕಾಲಕಾಯಬೇಕು? ಅಂದು ಬ್ರಿಟಿಷರ ವಿರುದ್ದ ಪ್ರಾತಿನಿಧ್ಯ ಬೇಕು ಎಂದು ನಿರಸನ ಕೂತು ಯಾವ್ಯಾವುದೋ ಆಯೋಗಗಳನ್ನು ಹೇರಿಸಿಕೊಂಡಂತೆ ಆಗಬಾರದಲ್ಲಾ. ಕಾಲ ಪಕ್ವವಾಗಿತ್ತು. ಕಬ್ಬಿಣ ಕಾದಿತ್ತು. ಬಗ್ಗಿಸಲು ಅವಕಾಶಗಳು, ಕಾರಣಗಳು ತುಂಬಾ ಇದ್ದವು. ಯಾಕೋ ಏನೋ ಎಲ್ಲೋ ಸೋತೆವು ಅನಿಸುತ್ತಿದೆ. ರಾಜಕಾರಣದ ಹುಂಬತನಕ್ಕೋ,ತಂತ್ರಗಾರಿಕೆಗೋ, ಗಾಂಧಿವಾದದ ಮುಗ್ಧತೆಗೋ ಗೊತ್ತಿಲ್ಲ. ಆದರೆ ಒಂದಂತೂ ಖಂಡಿತಾ. ಹೋರಾಟದ ತೀವ್ರತೆ, ಸ್ತಬ್ಧತೆಗಳ ಎಡೆಯಲ್ಲಿ ಒಂದು ಮಹಾನ್‌ಸಂವೇದನೆಯನ್ನು ದೇಶ ಮೊಟಕುಗೊಳಿಸಿಕೊಂಡಿತು. ಅದಕ್ಕೆ ಗಡುವಿನ ಬ್ರೇಕ್ ಮದ್ದಾಗುವುದಿಲ್ಲ. ಏಕೆಂದರೆ ಆದದ್ದೆಲ್ಲಾ ಬಹುಬೇಗನೆ ಮರೆತುಹೋಗುತ್ತವೆ. ಇಂದು ಅಬ್ಬರಿಸಿದ ಮಾಧ್ಯಮಗಳೂ ಮುಂದೆ ಅದೇ ವಿಷಯಕ್ಕೆ ಅಬ್ಬರಿಸಲಾರದು. ಸೆನ್ಸೇಷನಲ್ ಸೃಷ್ಟಿಸಲಾರದು. ಜನರ ಸ್ಫೂರ್ತಿಯೂ ದೀರ್ಘ ಸಮಯದವರೆಗೆ ಉಳಿಯಲಾರದು.

- ಸಂತೋಷ್ ತಮ್ಮಯ್ಯ

0 comments:

Post a Comment