ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್

ಸೆಮಿಸ್ಟರ್, ಪ್ರಾಕ್ಟಿಕಲ್ಸ್, ಪರೀಕ್ಷೆಗಳ ನಡುವೆ ಭಾರವಾದ ಮನಸ್ಸಿಗೆ ಕಾಲೇಜ್ ಗೆ ಒಂದೂವರೆ ತಿಂಗಳು ರಜೆ ಸಿಕ್ಕಿದ್ದು ಅತೀ ಖುಶಿಗೆ ಕಾರಣವಾಗಿತ್ತು.ಮೂರು ನಾಲ್ಕು ತಿಂಗಳಿನಿಂದ ಅಮ್ಮನ ಕಾಣದೇ ಮನ ಬರಡಾಗಿತ್ತು.ಬಸ್ ಹಿಡಿದು ಹೊರಟಾಗ ಮನದಲ್ಲಿ ಏನೋ ಕಾತುರ,ಕಿವಿಗೆ ಮೊಬೈಲ್ ಇಯರ್ ಪೋನ್ ಸಿಕ್ಕಿಸಿ ನನ್ನದೆ ಪ್ರಪಂಚವನ್ನು ಮತ್ತಷ್ಟು ಖಾಸಗಿಯಾಗಿಸಿ ಆ ಪ್ರಪಂಚದಲ್ಲಿ ಮುಳುಗಿದ್ದವಳಿಗೆ ಎಚ್ಚರಿಸಿದ್ದು ಕಿಟಕಿಯ ಗಾಜಿನ್ನು ದಾಟಿ ಒಳಬರಲು ತವಕಿಸುತ್ತಿದ್ದ ಮಲೆನಾಡಿನ ಮಳೆ,ಅಲ್ಲಲ್ಲಿ ಕೊಡೆ ಹಿಡಿದು ರಸ್ತೆಯ ಕೆಸರು ದೇಹಕ್ಕೆ ತಾಕಿತೋ ಎಂದು ಎಚ್ಚರಿಕೆಯಿಂದ ರಸ್ತೆ ದಾಟುವ ಜನರು, ಅಲ್ಲೆ ಗೊತ್ತಾಯಿತು ಮಲೆನಾಡಿಗೆ ಮಳೆರಾಯನ ಆಗಮನವಾಗಿದೆ ಎಂದು.


ಅಲ್ಲಿಂದ ನಮ್ಮ ಮನೆಗೆ ತೆರಳಲು ಜೀಪು ಹತ್ತಿ ಸಾಗಬೇಕು, ಡ್ರೈವರ್ ಅದರಲ್ಲಿ ಅಕ್ಕಿ ಮೂಟೆಗಳಂತೆ ಜನರನ್ನು ತುಂಬಿಸಲಾರಂಭಿಸಿದನು. ಮಲೆನಾಡಿನ ಕೊರಕಲು-ತಿರುವು ರಸ್ತೆಗಳಲ್ಲಿ ಸಾಗುವುದು ಒಂದು ರೋಮಂಚನಕಾರಿ ಅನುಭವವೆ ಸರಿ, ಸಾರಾ ಕುಡಿದು, ಎಲೆ ಅಡಿಕೆ ಜಗಿದು ಬಣ್ಣಹಿಡಿದ ತೋಟದ ಕೆಲಸ ಮಾಡುವ ಕೂಲಿ ಕಾರ್ಮಿಕರು, ನಗುವನ್ನೆ ತರಿಸದಿರುವ ಅವರ ಜೋಕುಗಳು. ಬ್ಯಾಗಿನಿಂದ ಹೊರಕ್ಕೆ ಇಣಕಿ ನೋಡುವ ಕೊಂಡ ಬೆಲ್ಲ ಕಡಲೆಪುರಿಗಳ ಪೊಟ್ಟಣಗಳು...


ಕಳೆದ ಬಾರಿ ಹೋಗುವಾಗ ಎಲೆ ಕಳಚಿದ ಮರಗಳು ಹಸಿರು ಒಣಗಿ ಬರಡಾಗಿದ್ದ ಬರೆಗಳು,ಧಾರಾಳವಾದ ಹಸಿರಿನಿಂದ ಕಂಗೊಳಿಸುತ್ತಿದ್ದವು.ಬೆಟ್ಟದ ಕಡೆಯಿಂದ ಬೀಸಿ ಬರುತ್ತಿದ್ದ ಗಾಳಿ,ಮನೆ ಕಾಣದಂತೆ ಆವರಿಸಿದ್ದ ಮಂಜು ಕಣ್ಣಾಮುಚ್ಚಾಲೆ ಆಟವಾಡಲು ಶುರುವಿಟ್ಟುಕೊಂಡಿತ್ತು. ನನ್ನ ಬರುವಿಕೆಯನ್ನು ಎದುರು ನೋಡುತ್ತಿದ್ದ ಅಮ್ಮ,ಮಲೆನಾಡನ್ನು ಮಳೆಯಿಂದ ತೋಯಿಸಲು ಬಂದಿದ್ದ ಮಳೆ, ಎಲ್ಲವು ಭಾರೀ ಸ್ವಾಗತವನ್ನೆ ನೀಡಿದವು.

ಅಂದು ಅಮ್ಮ ಅಷ್ಟು ದಿನದಿಂದ ಕಟ್ಟಿಟ್ಟ ಮಾತುಗಳನ್ನು ಜಡಿಮಳೆಯಂತೆ ಸುರಿಸಿದರು.ಅಮ್ಮನ ಆಪ್ತ ಉಪಚಾರದಲ್ಲಿ ಮಿಂದೇಳುವುದರೊಳಗೆ ಕತ್ತಲಾಗುವುದನ್ನು ಜೀರುಂಡೆಗಳು ಹಾಡುಕಟ್ಟಿ ಹಾಡಲಾರಂಭಿಸಿದವು.ಆಗಾಗ ಮಿಂಚು ಬಂದಾಗ ಫಳಾರನೆ ಮನೆಯಲ್ಲಿ ಮೂಡುವ ಬೆಳಕು, ಎದೆ ನಡುಗಿಸುವ ಗುಡುಗಿನ ಸದ್ದು, ಮಳೆಗೆ ತುಂಬಿ ಹರಿವ ಹೊಳೆ ,ಹೊಳೆಸಾಲಿನಿಂದ ಬಿರುಸಾಗಿ ಬೀಸುವ ಗಾಳಿ, ಇದ್ದಕ್ಕಿದ್ದಂತೆ ಇವೆಲ್ಲವು ಭಾಲ್ಯದ ದಿನಗಳೆಡೆಗೆ ಮನ ಜಾರುವಂತೆ ಮಾಡಿತು. ಜೋರಾಗಿ ಗುಡುಗಿದಾಗ ಅಮ್ಮನನ್ನು ತಬ್ಬಿ ಹಿಡಿಯುತ್ತಿದಿದ್ದು, ಅದರಿಂದ ಏನಾಗುತ್ತದೆ ಎಂಬ ಅರಿವಿಲ್ಲದಿದ್ದರು ಭಯ ಮಾತ್ರ ವರ್ಣಿಸಲಸದಳ. ಬೆಳ್ಳಿಗ್ಗೆಯಾದರೆ, ಊರವಾರ್ತೆ ಹೇಳಲು ಬರುವ ಮೋಟಜ್ಜಿಯ ಬಾಯಿಂದ ನಿನ್ನೆ ಹೊಡೆದ ಸಿಡಿಲು ಯಾವ ಮರಕ್ಕೆ ಬಡಿದಿದೆ, ಯಾರ ಮನೆಯ ಹೆಂಚು ಹಾರಿದೆ, ಹೊಳೆ ಎಷ್ಟು ಉಕ್ಕಿದ್ದೆ ಎಂಬ ಎಲ್ಲಾ ಮಾಹಿತಿಯು ಸಿಗುತಿತ್ತು. ಇದರೊಂದಿಗೆ ಆಕೆಗೆ ಭಕ್ಷಿಸಾಗಿ ಕಾಫಿ, ತಿಂಡಿಯ ಸರಬರಾಜು ಆಗುತಿತ್ತು.

ಗುಡುಗು ಬಂದ ಮಾರನೇಯ ದಿನ ಬೇರು ಅಣಬೆಗಾಗಿ ಸುತ್ತಮುತ್ತಲ ಬರೆಗಳಲ್ಲಿ ಅಲೆಯುತಿದಿದ್ದು,ಅದು ಹುಚ್ಚು ಅಣಬೆಯಾದರು ಸರಿಯೆ ಕಿತ್ತು ತರುವುದೇ!ಅದಲ್ಲದೆ ಜೋರು ಮಳೆ ಗಾಳಿಯಿಂದಾಗಿ ರಾಶಿ-ರಾಶಿಯಾಗಿ ಸುರಿಯುವ ಗೊರಟೆ ಮಾವಿನ ಹಣ್ಣುಗಳನ್ನು ಅರಸಿ ತರುತಿದಿದ್ದು,ಅದರಲ್ಲಿ ಬೆಣ್ಣೆ ಮಾವಿನ ಹಣ್ಣು,ಜೀರಿಗೆ ಮಾವಿನ ಹಣ್ಣು, ಹೊಳೆಸಾಲಿನ ಮಾವು ಹೀಗೆ ಬಗೆ-ಬಗೆಯ ಹಣ್ಣು ಹೆರಕಿ ತಂದಾಗ ಅಮ್ಮ ಈ ಮಕ್ಕಳ ಕಾಟ ನನಗೆ ಆಗಲ್ಲಪ್ಪ, ನಾನು ಯಾವುದು ಅಂಥಾ ಮಾಡಲಿ ಅಂಥಾ ಬೈಯ್ಯುತ್ತಲೆ ಉಣಬಡಿಸಿದ್ದು, ಕೈ ಒಣಗುವ ಮುನ್ನವೇ ಮತ್ತೆ ಮರದೆಡೆಗೆ ಸಾಗುತ್ತಿದಿದ್ದು ಆ ದಿನ ತುಸು ಜೋರಾಗಿಯೆ ಮಳೆಯಿತ್ತು.

ಬಲ್ಬ್ಗಗಳು ಉರಿಯದೇ ಹದಿನೈದು ದಿನದ ಮೇಲಾಗಿತ್ತು. ಬೇಸಿಗೆಯಲ್ಲೆ ಹೆಂಚುಗಳನ್ನು ಕೈಯಾಡಿಸಿದ್ದರು, ಕೂಡಾ ಮಳೆ ಹನಿ ಮನೆಯ ಒಳಗು ಪ್ರವೇಶ ಮಾಡಿಯಾಗಿತ್ತು.ಇದ್ದಕ್ಕಿದಂತೆ ಬೃಹಾದಕಾರವಾದ ಬಂಡೆ ಉರುಳುವಂತೆ ಸದ್ದಾಗಿ,ಇಡೀ ಭೂಮಿಯೆ ಕಂಪಿಸಿದಂತಾಯಿತು.ಅಲ್ಲೇ ಅಂಗಳದಲ್ಲಿ ಪ್ಲಾಸ್ಟಿಕ್ ಗೊಬ್ಬೆ ಹಾಕಿಕೊಂಡು ಕಾಫಿ ಹೀರುತ್ತಿದ್ದ ಮೋಟಜ್ಜಿ ,ಇದು ಖಂಡಿತವಾಗಿ ಯಾರಿಗೊ ಬಡಿದೆ ಬಡಿದಿರುತ್ತೆ ಅಂದಳು.ಅವಳ ಮಾತು ಸತ್ಯವೇ ಆಗಿತ್ತು ಕಾಫಿ ತೋಟದಲ್ಲಿ ದೊಡ್ಡಪ್ಪ ಬೆಳೆಸಿದ ಹಲವು ಜಾತಿಯ ಮರಗಳಿದ್ದವು, ಅದರಲ್ಲು ನೀಲಂ ಮಾವಿನ ಹಣ್ಣಿನ ಮರವಂತು ವಿಶಾಲವಾಗಿ ಬೆಳೆದಿತ್ತು.ಅದರ ಒಂದೊಂದು ರೆಂಬೆಗಳು ಆರಾಮ ಕುರ್ಚಿಯಂತಿದ್ದವು,ಅದು ನನಗೆ ಅಕ್ಕನಿಗೆ ಚಿಕ್ಕಂದಿನ್ನಲ್ಲ ಏನೆಲ್ಲಾ ಆಗಿತ್ತು.ರಂಗಜ್ಜ ಮಾಡಿಕೊಟ್ಟಿದ್ದ ಮರದ ಅಟ್ಟಣಿಗೆಗೆ ಬಿಸಿಲು ಬಾರದಂತೆ ಗೋಣಿಚೀಲ ಹೊದಿಸಿದ್ದನು ಛಾವಣಿಯಾಗಿ , ಅದರಲ್ಲಿ ಅಮ್ಮ ಬೈಯ್ಯುತ್ತಾರೆ ಎಂದು ಅಕ್ಕ ಕದ್ದು ಕಥೆ, ಕಾದಂಬರಿ ಓದುವ ಅಡಗುತಾಣವಾಗಿದ್ದು, ನೇರಳೆ ಹಣ್ಣುಗಳನ್ನು ಕೆ.ಜಿ ಗಟ್ಟಲೆ ಕಿತ್ತು ಪಾವುಗಳಲ್ಲಿ ಹಂಚಿ ತಿನ್ನುವ ಊಟದ ಕೋಣೆಯಾಗಿತ್ತು. ಅದರ ಮತ್ತೊಂದು ರೆಂಬೆಗೆ ಜೋಕಾಲಿ ಕಟ್ಟಿ ಆಟ ಆಡುತ್ತಿದ್ದೆವು. ಒಮ್ಮೆ ಅದರಲ್ಲಿ ಬೇಣ ಗೂಡು ಕಟ್ಟಿದ್ದು ನನಗಂತು ಅತೀ ಬೇಸರ ತಂದಿತ್ತು.ಏಕೆಂದರೆ ಅಮ್ಮ, ಅದು ಕಚ್ಚಿದ್ದರೆ ನಂಜು ಎಂದು ಅತ್ತ ಸುಳಿಯಲು ಬಿಡುತ್ತಿರಲಿಲ್ಲ.ಆಗಂತು ಬೇಣಕ್ಕೆ ಹಿಡಿ ಶಾಪ! ರಂಗಜ್ಜನಿಗೆ ಸಾವಿರಾರು ಪ್ರಶ್ನೆ ಕೇಳಿ ಅದನ್ನು ಓಡಿಸು ಎಂದು ಗೋಗರಿದಿದ್ದೆ.ಅವನು ಯಾವುದೋ ಮಹಾ ಹೋಮ ಮಾಡುವಂತೆ ಮಾಡಿ,ಹೊಗೆ ಹಾಕಿ,ತರಗು ಸುಟ್ಟು ಓಡುವಂತೆ ಮಾಡಿದಾಗ ಖುಶಿಯನ್ನು ಹೇಳತೀರದು. ಹೀಗೆ ಮತ್ತೊಂದು ಮನೆಯಂತೆ, ಅಮ್ಮನಂತೆ ಎಲ್ಲವನ್ನ ಸಹಿಸಿದ ಮಾವಿನ ಮರಕ್ಕೆ ಸಿಡಿಲು ಬಡಿದು ಬೇರು ಸಮೇತ ಉರುಳಿ ಮಲಗಿತ್ತು. ಓಡಿ ಹೋಗಿ ನೋಡಿದಾಗ ಕಣ್ಣುಗಳಲ್ಲಿ ಭಳ-ಭಳನೆ ನೀರು ಸುರಿಯಲಾರಂಭಿಸಿತು. ರಂಗಜ್ಜ ಆಗಲೇ ಅದನ್ನು ಸೌದೆ ಮಾಡಲು ಹೇಳಿ ಆಳುಗಳು ಅದನ್ನು ಕಡಿಯಲಾರಂಭಿಸಿದರು.

ಆ ಕ್ಷಣಕ್ಕೆ ಅಳುವುದು ಒಂದನ್ನು ಬಿಟ್ಟು ಬೇರಾವ ರೀತಿಯಲ್ಲಿ ಪ್ರತಿಕ್ರಿಯಿಸಲು ಬಾರದ ವಯಸ್ಸು, ಅಂದು ಅಮ್ಮನ ಜೊತೆ ಇಡೀ ದಿನ ಕೋಪ, ಪಕ್ಕ ಬಂದ ನಾಯಿ ಲಾರ ಜೊತೆಗೂ ಮುನಿಸು, ಅಮ್ಮ ಅಡುಗೆ ಮನೆಯಲ್ಲಿ ಇವಳಿಗೆ ಏನೋ ಭೂತ ಹಿಡಿದಿದೆ ಬರ್ತೀನಿ ತಾಳು ಎಂದು ಬೈಯ್ಯುತ್ತಲೆ ಇದ್ದರು. ಆಗ ಆಕಾಶ ಅಮ್ಮನಿಗಿಂತ ಜೋರಾಗಿ ಗುಡಿಗಿತು.ರಂಗಜ್ಜ ಅದೇ ಜಾಗದಲ್ಲಿ ಮತ್ತೊಂದು ಮಾವಿನ ಸಸಿಯನ್ನು ನೆಟ್ಟಿದ್ದನು. ಅವನಿಗು ಬೇಸರವಾಗಿರಬಹುದು, ಹೀಗೆ ಚಿಕ್ಕಂದಿನ ನೆನಪುಗಳಲ್ಲಿ ತೋಯ್ದು ಹೋಗಿದ್ದ ನನ್ನ ಎಚ್ಚರಿಸಿದ್ದು ಮತ್ತೆ ಶಬ್ದ ಮಾಡಿದ ಆಕಾಶ, ಆದರೂ ಇನ್ನು ಒಂದೂವರೆ ತಿಂಗಳು ಇದೇ ಸ್ವರ್ಗದಲ್ಲಿ ಸಾಕೆನಿಸುವಷ್ಟು ಇರಬಹುದು ಎಂದು ನೆನಪಾಗಿ ಅಮ್ಮನನ್ನು ಮತ್ತಷ್ಟು ಬಿಗಿಯಾಗಿ ಅಪ್ಪಿ ಮಲಗಿದೆನು...

- ಉಷಾ ಜಿ.ಎಸ್
ಪತ್ರಿಕೋದ್ಯಮ ಎಂ.ಎ
ದ್ವಿತೀಯ ವರ್ಷ
ಮಾನಸ ಗಂಗೋತ್ರಿ
ಮೈಸೂರು.
ಛಾಯಾಚಿತ್ರಗಳು: ಉಷಾ ಜಿ.ಎಸ್

3 comments:

BIDIRE said...

ಮಳೆಯ ನಾಡಾಗಿರುವ ಮಲೆನಾಡನ್ನು ಮಳೆಗಾಲದಲ್ಲಿ ನೋಡುವ ಹಂಬಲವನ್ನು ಹೆಚ್ಚು ಮಾಡಿದ್ದಿರಿ...ಪ್ರಸ್ತುತ ಪಡಿಸಿದ ಶೈಲಿ ಚೆನ್ನಾಗಿದೆ...ಬಾಲ್ಯದ ನೆನಪಿನ ಕೊಂಡಿಯಾದ ಮಾವಿನ ಮರದ ಬಗ್ಗೆ ಹೇಳಿದು ಚೆನ್ನಾಗಿದೆ. ಉತ್ತಮ ಲೇಖನ

ಮಲೆನಾಡಿನ ಬಗ್ಗೆ ಮತಷ್ಟು ಬರಹಗಳು ನಿಮ್ಮ ಲೇಖನಿಯಿಂದ ಅರಳಲಿ..
keep it up

Anonymous said...

ಮಲೆನಾಡು ತನ್ನ ಹಚ್ಚ ಹಸಿರಿನ ಒಲವಿಂದ ಮನುಷ್ಯನ ಅಂತರಾಳದ್ಲ್ಲಿರುವ ಸುಪ್ತ ಪ್ರತಿಭೆಯನ್ನ ಹೊರಹಾಕಿಸುತ್ತದೆ. ನಿಜಕ್ಕೂ ಇದು ಅವಿಸ್ಮರಣೀಯ....

Deepak.

Anonymous said...

ಮಲೆನಾಡಿನ ಜೀವನ ಶೈಲಿಯನ್ನು ಹಾಗು ಮುಂಗಾರು ಮಳೆಯೊಂದಿಗೆ ಹಾಸುಹೊಕ್ಕಾಗಿರುವ ಬದುಕನ್ನು ಬಾಲ್ಯದ ನೆನಪು ಹಾಗು ವಾಸ್ತವತೆಯ ಜೊತೆಯಲ್ಲಿ ತುಂಬಾ ನಾಜೂಕಾಗಿ ಹಾಗೂ ಕಾವ್ಯಾತ್ಮಕವಾಗಿ ಚಿತ್ರಣ ಮಾಡಿದ್ದಿರಿ, ಪ್ರಕೃತಿಯ ಸಹಜ ಗುಣವಾದ ಬದಲಾವಣೆಯನ್ನು ಹಾಗೂ ಜೀವನ ಚಕ್ರವನ್ನು ಮಲೆನಾಡಿನ ಮಳೆ ಹಾಗೂ ಮಾವಿನ ಮರದ ಅಂತ್ಯವಾದ ಜಾಗದಲ್ಲಿ ಹೊಸ ಮಾವಿನ ಗಿಡ ನೆಡುವುದರೊಂದಿಗೆ ಮನದಟ್ಟು ಮಾಡಿದ್ದಿರಿ. ಮಲೆನಾಡಿನವನಾದ ನನಗೆ ಈ ಲೇಖನದಲ್ಲಿರುವ ವಿಷಯಗಳು ಕಣ್ಣಿಗೆ ಕಟ್ಟಿದಂತಿದೆ. ಲೇಖನ ತುಂಬ ಚೆನ್ನಾಗಿದೆ.

.....ಹರ್ಷ

Post a Comment