ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಿನೆಮಾ

ತೆರೆಯ ಮೇಲಿನ ಮುಖವಾಡಗಳು ಬದಲಾಗುವುದನ್ನಷ್ಟೇ ನೀನು ಕಂಡಿದ್ದಿಯಾ ಉಷಾ...ನಿಜಜೀವನದ ಪರಿಚಯ ನಿನಗಿನ್ನೂ ಸಂಪೂರ್ಣವಾಗಿ ಆಗಿಲ್ಲ. ಗಂಡಸರು ಎಂದೂ ಬದಲಾಗಲು ಸಾಧ್ಯವಿಲ್ಲ. ನೀನು ಈ ಮನೆಯನ್ನು ಬಿಟ್ಟು ಹೋದರೆ ಇಲ್ಲಿನ ಶಯ್ಯಾಗೃಹ ಮತ್ತು ಅಡುಗೆ ಮನೆಗಳಷ್ಟೇ ಬದಲಾಗುತ್ತವೆ...ವಿನಃ ಮತ್ತೇನು ಇಲ್ಲ... ಆಕೆ ಮಲಗಿದಲ್ಲಿನಿಂದ ಸೂರನ್ನೇ ದಿಟ್ಟಿಸುತ್ತಾ ವಾಸ್ತವವನ್ನು ಉಷಾಳಿಗೆ ಪರಿಚಯಿಸಿದಳು. ಅದೆಷ್ಟೋ ವರುಷಗಳಿಂದ ಮನದಾಳದಲ್ಲಿ ತನ್ನ ಬದುಕಿನ ಕುರಿತಾಗಿದ್ದ ಹತಾಶೆಯನ್ನು ಇಂದು ಆಕೆ ಉಷಾಳೊಡನೆ ಹಂಚಿಕೊಂಡಳು. ಉಷಾ ನಿಟ್ಟುಸಿರೊಂದನ್ನು ಬಿಟ್ಟು ಕೊನೆಗೊಮ್ಮೆ ಆಕೆಯ ತಲೆಯನ್ನು ಪ್ರೀತಿಯಿಂದ ಸವರಿ, ಕಾಲುಗಳಿಗೆ ನಮಸ್ಕರಿಸಿ ಹಿಂದಿರುಗಿ ನೋಡದೆ ಹೊಸ್ತಿಲು ದಾಟಿದಳು.


ಹೊರ ಚಾವಡಿಯಲ್ಲಿ ಕುಳಿತ್ತಿದ್ದ ಮಿ. ಕಾಳೆ ಉಷಾಳನ್ನು ತಡೆಯುವ ಪ್ರಯತ್ನ ಮಾಡಲಿಲ್ಲ. ಆಕೆಗೆ ಇದುವರೆಗೆ ಆ ಮನೆಯಲ್ಲಿದ್ದ ಸ್ಥಾನ ಎಂತಹದ್ದು ಎಂಬುವುದನ್ನು ತಮ್ಮ ಮೌನದಲ್ಲೇ ತಿಳಿಸಿದರು ಮಿ. ಕಾಳೆ. ಅವನನ್ನು, ಆ ಮನೆಯನ್ನೊಮ್ಮೆ ದೀರ್ಘವಾಗಿ ದಿಟ್ಟಿಸಿ ಹೊರಗೆ ತನಗಾಗಿ ಕಾಯುತ್ತಿದ್ದ ಪತಿಯೊಡನೆ ಜೀಪ್ ಏರಿ ಹೊರಟಳು ಉಷಾ.

ವುಮೆನ್ ಸೆಂಟರ್ಡ್ ಚಿತ್ರಗಳನ್ನು ನಿರ್ದೇಶಿಸುವಲ್ಲಿ ಶ್ಯಾಮ್ ಬೆನೆಗಲ್ ಅವರದ್ದು ಎತ್ತಿದ ಕೈ. ತನ್ನ ಒಂದೊಂದು ಚಿತ್ರದಲ್ಲೂ ಭಾರತೀಯ ಸಮಾಜದ ಒಬ್ಬೊಬ್ಬ ವಿಭಿನ್ನ ಸ್ತ್ರೀ ಪಾತ್ರವನ್ನು ಬೆನೆಗಲ್ ವೀಕ್ಷಕರ ಮುಂದಿಡುತ್ತಾರೆ. ಸಮಾಜದ ರೀತಿ-ರಿವಾಜುಗಳನ್ನು ಮೆಟ್ಟಿ ನಿಂತು ಸ್ತ್ರೀ ಶೋಷಣೆಯನ್ನು ಪ್ರಶ್ನಿಸುವ, ಅದರ ವಿರುದ್ಧ ಸ್ವರವೆತ್ತುವ ಸ್ತ್ರೀ ಪಾತ್ರಗಳು ಇವರ ಚಿತ್ರಗಳಲ್ಲಿ ಸಾಮಾನ್ಯ. ಸ್ತ್ರೀಪರ ಚಿಂತನೆಗಳಲ್ಲಿ ಆಧುನಿಕತೆಯನ್ನು ಮೈಗೂಡಿಸಿಕೊಂಡು ಅದನ್ನು ವೀಕ್ಷಕರಿಗೆ ಪರಿಚಯಿಸುವ ಶ್ಯಾಮ್ ಬೆನಗಲ್ ದೇಶದಲ್ಲಿ ತನ್ನ ಚಿತ್ರಗಳ ಮೂಲಕ ಮಹಿಳಾ ಸುಧಾರಣೆಗಾಗಿ ಪ್ರಯತ್ನಿಸಿದ ಕೆಲವೇ ನಿರ್ದೇಶಕರಲ್ಲಿ ಒಬ್ಬರು.

ಬೆನಗಲ್ ಚಿತ್ರಗಳು ಕಾವ್ಯಗಳಿದ್ದಂತೆ...ಒಬ್ಬೊಬ್ಬ ವೀಕ್ಷಕನೂ ಅವನ್ನು ಒಂದೊಂದು ದೃಷ್ಟಿಕೋನದಲ್ಲಿ ಓದುತ್ತಾನೆ...ವಿಮರ್ಶಿಸುತ್ತಾನೆ. ತನ್ನ ಚಿತ್ರಗಳಲ್ಲಿನ ಕಥಾವಸ್ತುವನ್ನು ನವಿರಾಗಿ ವೀಕ್ಷಕರ ಮುಂದಿಡುವ ಕಲೆ ಬೆನಗಲ್ ಅವರಿಗೆ ಕರಗತ. ಇವರ ಚಿತ್ರಗಳನ್ನು ನೋಡುತ್ತಿದ್ದಂತೆ ವೀಕ್ಷಕನಿಗೆ ಇದು ನನ್ನ ಮನೆಯ ಕಥೆಯೇನೋ ಎಂಬ ಸಂಶಯ ಉಂಟಾಗುತ್ತದೆ. ವೀಕ್ಷಕರಿಗೆ ತೀರಾ ಆಪ್ತವಾಗಿರುವ ವಿಚಾರಗಳನ್ನೇ ತನ್ನ ಚಿತ್ರದ ಕಥೆಯನ್ನಾಗಿಸುವುದು ಬೆನಗಲ್ ವಿಶೇಷತೆ. ಇಂತಹ ಅಪೂರ್ವ ನಿರ್ದೇಶಕನ ಮಾಸ್ಟರ್ ಪೀಸ್ ಚಿತ್ರ ಭೂಮಿಕಾ...

1977ರಲ್ಲಿ ಬಿಡುಗಡೆಗೊಂಡ ಭೂಮಿಕಾ ಮರಾಠಿ ರಂಗಭೂಮಿ ಕಲಾವಿದೆ ಹನ್ಸಾ ವಾಡ್ಕರ್ ಜೀವನಾಧಾರಿತ ಚಿತ್ರ. ಈ ಚಿತ್ರದ ನಾಯಕಿ ಉಷಾ. ಮರಾಠಿ ಬ್ರಾಹ್ಮಣ ಕುಟುಂಬದ ಏಕೈಕ ಪುತ್ರಿ. ತಂದೆ ಕುಡುಕ...ಹಾಸಿಗೆ ಹಿಡಿದು ವರುಷಗಳೇ ಸಂದಿವೆ. ತಾಯಿ ಬದುಕಿನಲ್ಲಿ ಬೇಸತ್ತು ಅನಿವಾರ್ಯವಾಗಿ ದಿನದೂಡುತ್ತಿರುವ ಗೃಹಿಣಿ. ಉಷಾಳ ಅಜ್ಜಿಗೆ ಸಂಗೀತವೇ ಜೀವಾಳ. ಅಜ್ಜಿಯ ಸಂಗೀತವೇ ಉಷಾಳ ಬಾಲ್ಯ ಸಂಗಾತಿ. ಇನ್ನು ಕೇಶವ ಮನೆಯ ಹಿತಚಿಂತಕನಂತೇ ನಟಿಸುವ ದುರುಳ ಯುವಕ.

ತನಗಿಂತ ಬಹಳ ಹಿರಿಯವಳಾದ ಉಷಾಳ ತಾಯಿಯನ್ನು ಕೇಶವ ದೃಷ್ಟಿಸುವ ರೀತಿ ಅದೆಕೋ ವೀಕ್ಷಕರಿಗೆ ಹಿತವೆನಿಸುವುದಿಲ್ಲ. ಆತನ ವರ್ತನೆ ಹಾಸಿಗೆ ಹಿಡಿದಿರುವ ಉಷಾಳ ತಂದೆಯನ್ನು ಚುಚ್ಚುತ್ತಿರುತ್ತದೆ. ಅದೊಂದು ದಿನ ತಂದೆ ಚಿಂತೆಯಲ್ಲೇ ಕಾಷ್ಟಕ್ಕೇರುತ್ತಾರೆ. ತಂದೆಯ ಸಾವಿನ ಬಳಿಕ ಕೇಶವ ಮನೆಗೆ ಇನ್ನಷ್ಟು ಹತ್ತಿರವಾಗುತ್ತಾನೆ. ಈಗ ಮನೆಗಿರುವ ಏಕೈಕ ಗಂಡು ದಿಕ್ಕೆಂದರೆ ಅವನೇ...ಮನೆಯ ಆರ್ಥಿಕ ಸ್ಥಿತಿ ಹದಗೆಟ್ಟಾಗ ಕೇಶವ ಉಷಾಳನ್ನು ಮುಂಬಯಿಯ ಸ್ಟುಡಿಯೋ ಒಂದಕ್ಕೆ ಗಾಯಕಿಯ ಆಡಿಷನ್ ಗೆ ಕರೆತರುತ್ತಾನೆ. ಆಕೆ ಬಾಲ ಗಾಯಕಿಯಾಗಿ ಆಯ್ಕೆಯಾಗುತ್ತಾಳೆ. ತಾಯಿಯ ಆಕ್ಷೇಪದ ಬಳಿಕವೂ ಉಷಾ ಸಿನಿಮಾಕ್ಕೆ ಸೇರುತ್ತಾಳೆ. ಮುಂದೆ ಚಿತ್ರರಂಗದಲ್ಲಿ ಟಾಪ್ 1 ಪಟ್ಟಕ್ಕೇರುತ್ತಾಳೆ.


ಕೇಶವ ಉಷಾಳಿಗೆ ತಾನು ಮಾಡಿದ ಸಹಾಯವನ್ನು ಜ್ಣಾಪಿಸುತ್ತಿರುತ್ತಾನೆ. ಅವಳು ಅದನ್ನು ಆತನ ಋಣವೆಂದು ಭಾವಿಸುತ್ತಾಳೆ. ಈ ನಡುವೆ ಸಿನಿಮಾ ರಂಗದ ಖ್ಯಾತ ಹಿರೋ ರಾಜನ್ ಉಷಾಳನ್ನು ಪ್ರೀತಿಸತೊಡಗುತ್ತಾನೆ. ಇತ್ತ ಕೇಶವ ಉಷಾಳನ್ನು ತನ್ನ ಹುಸಿ ಪ್ರೇಮದಲ್ಲಿ ಬಂಧಿಸಿಡುತ್ತಾನೆ. ವಯಸ್ಸಿನ ಅಂತರ ಅವರನ್ನು ಕಾಡುವುದಿಲ್ಲ. ಉಷಾ ಗರ್ಭಿಣಿಯಾಗುತ್ತಾಳೆ. ಕೇಶವನನ್ನು ಮದುವೆಯಾಗಿ ಸಿನಿಮಾ ಬಿಟ್ಟು ಗೃಹಿಣಿಯಾಗುವ ಕನಸನ್ನು ಕಾಣುತ್ತಾಳೆ. ತಾಯಿಯ ಆಕ್ಷೇಪದ ನಡುವೆಯೂ ಅವನನ್ನು ಮದುವೆಯಾಗುತ್ತಾಳೆ. ಬಳಿಕ ಪ್ರಾರಂಭವಾಗುತ್ತದೆ ಅವಳ ಜೀವನದ ಅಗ್ನಿ ಪರೀಕ್ಷೆ.

ಕೇಶವನನ್ನು ಮದುವೆಯಾಗಿ ಮಗಳಿಗೆ ಜನ್ಮ ಕೊಟ್ಟ ಬಳಿಕವೂ ಆಕೆಗೆ ಸಿನಿಮಾ ರಂಗವನ್ನು ಬಿಡಲಾಗುವುದಿಲ್ಲ. ಕಾರಣ ಕೇಶವನ ಒತ್ತಾಯ. ಆಕೆಯನ್ನು ಆತ ಕೈಗೊಂಬೆಯನ್ನಾಗಿಸಿರುತ್ತಾನೆ .ಈಗ ಆಕೆ ಆತನ ಹಣದ ಮೂಲ. ರಾಜನ್ ಹಾಗೂ ಆಕೆಯ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಗೊಂಡ ಗಾಸಿಪ್ ಸುದ್ದಿಗಳಿಂದ ಬೇಸತ್ತ ಉಷಾ ಆತನೊಡನೆ ನಟಿಸುವುದನ್ನು ಬಿಟ್ಟರೂ ಕೇಶವ ಹಣದಾಸೆಗಾಗಿ ಆಕೆಯನ್ನು ಮತ್ತೆ ಆತನಲ್ಲಿ ದೂಡುತ್ತಾನೆ. ರಾಜನ್ ಪ್ರೀತಿ ಮೊದಲು ಬೇಡವಾಗಿದ್ದರೂ ಬಳಿಕ ಅದೇ ಆಕೆಗೆ ನೆಮ್ಮದಿಯನ್ನು ಕೊಡುತ್ತದೆ. ಆದರೂ ಆತನ ಪ್ರೀತಿಗೆ ಆಕೆ ಸ್ಪಂದಿಸುವ ಸೌಜನ್ಯವನ್ನೂ ತೋರುವುದಿಲ್ಲ.

ಕೇಶವ ಉಷಾರ ಸಂಬಂಧ ಹಳಸುತ್ತದೆ. ಆತನ ಅಧಿಕಾರ, ದರ್ಪ, ಸಂಶಯಗಳಿಂದ ಬೇಸತ್ತ ಉಷಾ ಮತ್ತೆಂದೂ ಮರಳುವುದಿಲ್ಲವೆಂಬ ನಿರ್ಧಾರದೊಂದಿಗೆ ಮನೆ ಬಿಟ್ಟು ಹೋಗುತ್ತಾಳೆ. ರಾಜನ್ ಉಷಾಳ ಪ್ರೀತಿಯನ್ನು ಮರೆಯಲಾಗದೇ ಅವಿವಾಹಿತನಾಗೇ ಉಳಿಯುತ್ತಾನೆ. ಉಷಾಳಿಗೆ ಸಿನಿಮಾ ನಿರ್ದೇಶಕ ಸುನಿಲ್ ವರ್ಮಾರ ಪರಿಚಯವಾಗುತ್ತದೆ. ಆತ ಆಕೆಯನ್ನು ಶಯ್ಯಾಗೃಹದವರೆಗೂ ಕೊಂಡೊಯ್ಯತ್ತಾನೆ. ಆತ್ಮಹತ್ಯೆಯ ಬಗ್ಗೆ ತನ್ನದೇ ಆದ ಡೆಫಿನಿಶನ್ ನೀಡುವ ಸುನಿಲ್, ನಾನು ಸಾಯುವುದಾದರೆ ಆತ್ಮಹತ್ಯೆ ಮಾಡಿಕೊಂಡು..ಆದರೆ ಅದು ದುಃಖದಲ್ಲಿರುವಾಗಲ್ಲ...ಸುಖದ ಪರಾಕಾಷ್ಟೆಯಲ್ಲಿರುವಾಗ...ಎಂಬ ಮಾತುಗಳನ್ನಾಡಿ ವೀಕ್ಷಕರ ಮನದಲ್ಲಿ ಗೊಂದಲವನ್ನು ಸೃಷ್ಟಿಸುತ್ತಾನೆ. ನೋಡ ನೋಡುತ್ತಿದ್ದಂತೇ ವೀಕ್ಷಕ ನಿಧಾನಗತಿಯಲ್ಲಿ ಆ ಪಾತ್ರವನ್ನು ಮೆಚ್ಚತೊಡಗುತ್ತಾನೆ. ಆ ಪಾತ್ರದ ಸಿದ್ಧಾಂತಗಳನ್ನು ಒಪ್ಪುವ ಹಂತಕ್ಕೆ ವೀಕ್ಷಕ ಬಂದಾಗ ಆತನಿಗೊಂದು ಸಡನ್ ಶಾಕ್ ನೀಡುತ್ತಾನೆ ಸುನಿಲ್ ವರ್ಮಾ. ಉಷಾಳನ್ನು ಮಂಚದಲ್ಲೇ ಒಂಟಿಯಾಗಿ ಬಿಟ್ಟಹೋಗುವುದರ ಮೂಲಕ ವೀಕ್ಷಕ ಆ ಪಾತ್ರದ ಬಗ್ಗೆ ಇಟ್ಟುಕೊಂಡಿದ್ದ ಮೆಚ್ಚುಗೆಯನ್ನು ಕ್ಷಣ ಮಾತ್ರದಲ್ಲೇ ಹೊಸಕಿಹಾಕುತ್ತಾನೆ.

ಜಗಳದಲ್ಲೇ ಪ್ರಾರಂಭವಾಗುತ್ತದೆ ಉಷಾ ಹಾಗೂ ಮಿ. ಕಾಳೆಯರ ಸಂಬಂಧ. ಆತನಿಗೆ ಬೇಕಾಗಿದ್ದು ಒಂದು ಹೆಣ್ಣು...ಅದು ಉಷಾಳೇ ಆಗಬೇಕೆಂದೇನಿರಲಿಲ್ಲ. ಉಷಾ ಆತನ ಮನೆಯಲ್ಲಿ ಮಡದಿಯ ಸ್ಥಾನ ಪಡೆಯುತ್ತಾಳೆ. ಆತನ ಮಗನಿಗೆ ಚಿಕ್ಕಮ್ಮನಾಗುತ್ತಾಳೆ. ಪ್ರಾರಾಲಿಸಿಸ್ ಹಿಡಿದು ಮಲಗಿದ ಆತನ ಮೊದಲ ಮಡದಿಗೆ ತಂಗಿಯಾಗುತ್ತಾಳೆ. ಆಕೆ ಮೊದಲು ಬಯಸಿದ ಗೃಹಿಣಿಯ ಬದುಕು ಆಕೆಯದಾಗುತ್ತದೆ. ಆದರೆ ಆಕೆಯ ಕನಸಿನ ಬದುಕು ಇಲ್ಲೂ ಆಕೆಗೆ ದೊರಕುವುದಿಲ್ಲ. ದಿನಕಳೆದಂತೇ ಮನೆ ಸೆರೆಮನೆಯಾಗುತ್ತದೆ. ಈ ಮನೆಯ ಹೆಣ್ಮಕ್ಕಳು ಹೊರಹೋಗುವುದು ಚಟ್ಟವೇರಿದಾಗ ಮಾತ್ರಾ ...ಇದು ಸಂಪ್ರದಾಯಸ್ಥರ ಮನೆ ಉಷಾ...ಕಾಳೆಯ ಮಾತುಗಳು ಆಕೆಯನ್ನು ನಿರ್ಲಿಪ್ತಳನ್ನಾಗಿಸುತ್ತವೆ. ಅದೆಷ್ಟೋ ವರುಷಗಳ ಬಳಿಕ ಆಕೆ ಕೇಶವನಿಗೆ ಪತ್ರ ಬರೆಯುತ್ತಾಳೆ. ಬಂದು ಬಿಡಿಸೆಂದು...

142 ನಿಮಿಷಗಳ ಚಿತ್ರ ಮುಗಿದ ಮೇಲೂ ವೀಕ್ಷಕ ಮನದಲ್ಲಿ ಹಲವು ಪ್ರಶ್ನೆಗಳು ಹಾಗೇ ಉಳಿದುಕೊಂಡು ಬಿಡುತ್ತವೆ. ಜೀವನ ಪರ್ಯಂತ ಉಷಾ ಹುಡುಕಿದ್ದಾದರು ಏನು? ಆಕೆಗೆ ಏನು ಬೇಕಿತ್ತು ಜೀವನದಲ್ಲಿ? ಈ ಎಲ್ಲಾ ಪ್ರಶ್ನೆಗಳಿಗೆ ವೀಕ್ಷಕ ತಾನಾಗಿಯೇ ಉತ್ತರವನ್ನು ಕಂಡುಕ್ಕೊಳ್ಳಬೇಕಷ್ಟೇ. ಕೇಶವನೊಡನೆ ಮರಳಿದ ಉಷಾ ಆತನೊಡನೆಯೂ ಬದುಕಲು ಒಪ್ಪವುದಿಲ್ಲ. ತನಗಾಗಿ ಕಾಯುತ್ತಿರುವ ರಾಜನ್ ಎಡೆಯೂ ಮನಸ್ಸು ಮಾಡುವುದಿಲ್ಲ. ತನಗೇನು ಬೇಕು? ಎಂಬ ಪ್ರಶ್ನೆಗೆ ಆಕೆಯ ಬಳಿ ಉತ್ತರವಿಲ್ಲ. ಕೇಶವನ ಬಳಿಯಿರುವಾಗ ಗೃಹಿಣಿಯ ಜೀವನವನ್ನು ಬಯಸುತ್ತಾಳೆ. ಕಾಳೆಯ ಬಳಿಯಿದ್ದಾಗ ಸ್ವಂತಂತ್ರ ಬದುಕಿಗಾಗಿ ಆಸೆಪಡುತ್ತಾಳೆ. ಉಷಾಳ ಚಂಚಲ ಮನಸ್ಸಿಗಾಗಿ ವೀಕ್ಷಕ ತಾನೇ ಪರಿತಪಿಸುತ್ತಾನೆ. ಆದರೂ ಚಿತ್ರದ ಕೊನೆಯಲ್ಲಿ ಒಂಟಿಯಾಗಿ ಬದುಕುವ ನಿಧರ್ಾರ ಮಾಡುವ ಮೂಲಕ ಆಕೆ ವೀಕ್ಷಕರ ಅನುಕಂಪವನ್ನು ಗಿಟ್ಟಿಸುತ್ತಾಳೆ.

ಬದಲಾಗುವ ಹೆಣ್ಣಿನ ಮನಸ್ಸು, ಜೀವನದಲ್ಲಿ ಬದಲಾಗುತ್ತಲೇ ಇರುವ ಆಕೆಯ ಪಾತ್ರ ಇವು ಭೂಮಿಕಾ ಚಿತ್ರದಲ್ಲಿ ಎದ್ದು ಕಾಣುವ ಅಂಶಗಳು. ಮುಗ್ಧ ಹೆಣ್ಣು ಮಗಳೋರ್ವಳು ಪ್ರೌಢ ಮಹಿಳೆಯಾಗಿ ಪರಿವರ್ತನೆಗೊಳ್ಳುವ ಪರಿ ಈ ಚಿತ್ರದಲ್ಲಿ ಮನೋಜ್ಣವಾಗಿ ಮೂಡಿ ಬಂದಿದೆ. ಇಲ್ಲಿನ ಪಾತ್ರಗಳು ಸಂಬಂಧಗಳಲ್ಲಿ ಸುಖವನ್ನರಸುತ್ತವೆ. ಸುಖಕ್ಕಾಗಿಯೇ ಹೊಸ ಸಂಬಂಧಗಳನ್ನು ರೂಪಿಸುತ್ತವೆ. ಅದು ಸಿಗದೇ ಹೋದಾಗ ಸಂಬಂಧಗಳನ್ನೇ ಬಲಿಕೊಡುತ್ತವೆ.

ಚಿತ್ರದ ಕಥಾವಸ್ತು ಹಾಗೂ ಪಾತ್ರಗಳಿಗೆ ಹೋಲುವ ಅದ್ಭುತ ಸಂಭಾಷಣೆ ಪಂಡಿತ್ ಸತ್ಯದೇವ್ ದುಬೆ ಅವರದ್ದು. ಸಂಗೀತದಲ್ಲೇ ಭಾವನೆಗಳನ್ನು ಮೀಟುವ ವನರಾಜ್ ಭಾಟಿಯಾರ ಮ್ಯುಸಿಕ್ ಡೈರೆಕ್ಷನ್ ಚಿತ್ರದ ಮೆರುಗನ್ನು ಇನ್ನಷ್ಟು ಹೆಚ್ಚಿಸಿದೆ. ಸುನಿಲ್ ಪಾತ್ರಧಾರಿ ನಾಸಿರುದ್ದೀನ್ ಶಾರದ್ದು ಪ್ರೌಢ ಅಭಿನಯ. ರಾಜನ್ ಪಾತ್ರಧಾರಿ ಅನಂತ್ ನಾಗ್ ಅಭಿನಯ ಸುಮಾರಾಗಿದೆ. ಅಮೋಲ್ ಪಾಲೇಕರ್ ಕೇಶವನಾಗಿ ಎಫೆಕ್ಟಿವ್ ಅಭಿನಯ ನೀಡಿದ್ದಾರೆ. ಗೋವಿಂದ ನಿಹಲಾನಿಯವರು ಈ ಚಿತ್ರಕ್ಕೆ ನೀಡಿದ ಸಿನೆಮಾಟಗ್ರಾಫಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆಗ ಪಾತ್ರವಾಗಿದೆ. ಚಿತ್ರದುದ್ದಕ್ಕೂ ಉಷಾ ಪಾತ್ರದ ಮೂಲಕ ವೀಕ್ಷಕರನ್ನು ಹಿಡಿದಿಟ್ಟ ಸ್ಮೀತಾ ಪಾಟೀಲ್ ಅಭಿನಯ ವೀಕ್ಷಕರ ಮನದಲ್ಲಿ ಬಹುಕಾಲ ಉಳಿಯುವಂತಹದ್ದು. ಭೂಮಿಕಾ ಸ್ಮೀತಾರ ವೃತ್ತಿ ಜೀವನದ ಟರ್ನಿಂಗ್ ಪಾಯಿಂಟ್. ತನ್ನ ಮುಖದ ಅಭಿವ್ಯಕ್ತಿಯಲ್ಲೇ ವೀಕ್ಷಕರೊಡನೆ ಮಾತನಾಡುವ ಸ್ಮಿತಾ ಪಾಟೀಲ್ ಈ ಚಿತ್ರದಲ್ಲಿ ನಿರೀಕ್ಷೆಗೂ ಮೀರಿದ ಅಭಿನಯ ನೀಡಿದ್ದಾರೆ. ಉಷಾ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಚಿತ್ರದ ಅಭಿನಯಕ್ಕಾಗಿ ಆಕೆ 1978ರ ಸಾಲಿನ ಫಿಲ್ಮ ಫೇರ್ ಉತ್ತಮ ನಟಿ ಪ್ರಶಸ್ತಿಯನ್ನು ಪಡೆದಿರುತ್ತಾರೆ.

ಭೂಮಿಕಾ ಶ್ಯಾಮ್ ಬೆನಗಲ್ ನಿರ್ದೇಶನದ ಅತ್ಯತ್ತಮ ಚಿತ್ರಗಳಲ್ಲೊಂದು. ಹಿಂದಿ ಚಿತ್ರ ರಂಗದಲ್ಲಿ ಸಾಮಾಜಿಕ ಕಳಕಳಿಯುಳ್ಳ ಹಾಗೂ ಮಾನವ ಸಂಬಂಧಗಳ ಸೂಕ್ಷತೆಗಳನ್ನು ಬಿಂಬಿಸುವ ಚಿತ್ರಗಳು ತುಂಬಾ ವಿರಳ. ಮಾಡಿದರೂ ಅವು ಯಶಸ್ವಿಯಾಗುವುದಿಲ್ಲ ಎಂಬ ಕೂಗು ನಿರ್ದೇಶಕರದ್ದು. ಅಂತಹ ಸ್ಥಿತಿಯಲ್ಲಿ ಬೆನೆಗಲ್ ಧೈರ್ಯವಾಗೇ 'ಭೂಮಿಕಾ'ವನ್ನು ನಿರ್ದೇಶಿಸಿದ್ದರು. ಈ ಚಿತ್ರದ ಮೂಲಕ 70 ದಶಕದಲ್ಲಿ ಬಾಲಿವುಡ್ನಲ್ಲಿ ಕಲಾತ್ಮಕ ಚಿತ್ರಗಳಿಗೆ ನಾಂದಿ ಹಾಡಿದರು. ಭಾರತೀಯ ನಿರ್ದೇಶಕರಲ್ಲೂ ಸೃಜನಶೀಲತೆಗೆ ಕೊರತೆಯಿಲ್ಲ ಎಂಬುವುದನ್ನು ಈ ಚಿತ್ರದ ಮೂಲಕ ಪ್ರಂಪಚದ ಎಲ್ಲಾ ಚಿತ್ರ ರಸಿಕರಿಗೆ ತೋರಿಸಿಕೊಟ್ಟರು. ಇಂತಹ ಚಿತ್ರಗಳು ಭಾರತೀಯ ಚಿತ್ರರಂಗದಲ್ಲಿ ಇನ್ನಷ್ಟು ಮೂಡಿಬರಲಿ ಎಂಬ ಆಶಯ ನಮ್ಮದು.

ಅಕ್ಷತಾ ಸಿ. ಎಚ್

0 comments:

Post a Comment