ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಉಡುಪಿ : ಸ್ವಾಭಾವಿಕ ಹರಿಯುವ ನದಿ ದಿಕ್ಕು ತಿರುಗಿಸಿದರೆ ಆಣೆಕಟ್ಟು ಕಟ್ಟಿ ನೀರು ತಡೆ ಹಿಡಿದರೆ, ಪ್ರಕೃತಿ ವಿರುದ್ದ ನಡೆದರೆ ಏನೆಲ್ಲಾ ಅನಾಹುತ ಸೃಷ್ಟಿಯಾಗುತ್ತದೆ ಎನ್ನೋದಕ್ಕೆ ಚಕ್ರಾ ನದಿ ಜ್ವಲಂತ ಸಾಕ್ಷಿ.ವಿದ್ಯುತ್ ಹೆಸರಲ್ಲಿ ಕೊಡಚಾದ್ರಿ ಮೂಲದಿಂದ ಅರಬ್ಬಿ ಸಮುದ್ರ ಸೇರುವ ಚಕ್ರಾ ನದಿಗೆ ಕಟ್ಟಿದ ಒಡ್ಡು ಸೃಷ್ಟಿಸಿದ ಅಡಾವುಡಿಗೆ ಆಣೆಕಟ್ಟು ಕೆಳಭಾಗದ ಕೃಷಿ, ನೀರಿನ ಸೆಲೆ, ಸ್ವಾಭಾವಿಕ ಕೃಷಿ ಒಡ್ಡಿನ ನೀರಿನಲ್ಲಿ ಮುಳುಗಡೆ. ಕಳೆದ ಎರಡು ದಶಕದಿಂದ ಆಣೆಕಟ್ಟು ಸೃಷ್ಟಿದ ಬಾನ್ಗಡಿ ವಿರುದ್ಧ ಚಕ್ರಾ ನದಿ ನೀರು ಬಳಕೆದಾರರ ಹೋರಾಟ ಸಮಿತಿ ಹೋರಾಟ ಮಾಡುತ್ತಲೇ ಬಂದಿದೆ. ನ್ಯಾಯಮಾತ್ರ ಇನ್ನೂ ಮರೀಚಿಕೆ. ಸಾವಿರಾರು ಜನರ ಕೂಗು ಅರಣ್ಯರೋಧನ. ಹೋರಾಟಗಾರರಿಗೆ ಇದುವರೆಗೆ ಸಿಕ್ಕಿದ್ದು ಮಾತ್ರ ಆಶ್ವಾಸನೆಯ ಅರೆಮನೆ. ಹಾಗಂತ ಹೋರಾಟ ಸಮಿತಿ ಸುಮ್ಮನೆ ಕೂತಿಲ್ಲ. ಹೋರಾಟ ಮಾತ್ರ ಕೈಬಿಟ್ಟಿಲ್ಲ. ನ್ಯಾಯ ಸಿಗುತ್ತಾ ಅನ್ನೋದು ಪ್ರಶ್ನೆಯಾಗಿಯೇ ಉಳಿದಿದೆ.

ಸಾವೆಹಕ್ಲು ಬಳಿ ಎದ್ದಿತು ಆಣೆಕಟ್ಟು

ನಗರ, ಮಾಸ್ತಿಕಟ್ಟೆ, ಹಳ್ಳಿಹೊಳೆ ಮೂಲಕ ಹರಿತುವ ಚಕ್ರಾ ನದಿ ನೂರಾರು ಹೆಕ್ಟೇರ್ ಪ್ರದೇಶವನ್ನು ಹಸಿರಾಗಿಸಿದೆ. ಕುಬ್ಜಾ ,ವರಹಾ ಸೌಪರ್ಣಿಕಾ ಮತ್ತು ಕೀಟಕಿ ಹಾಗೂ ಚಕ್ರಾನದಿಗಳ ಒಂದಾಗುವಿಕೆಗೆ ಪಂಚಗಂಗಾವಳಿ ಎಂಬ ಹೆಸರು ಬಂದಿದೆ. ಈ ಐದು ನದಿಗಳು ಪಂಚಗಂಗಾವಳಿ ಹೆಸರಲ್ಲಿ ಅರಬ್ಬಿ ಸಮುದ್ರ ಸೇರುತ್ತವೆ.
ಪಂಚ ನದಿಗಳಲ್ಲಿ ಒಂದಾದ ಚಕ್ರಾ ನದಿಗೆ ನಗರ ಸಮೀಪ ಸಾವೇಹಕ್ಲು ಬಳಿ ಕಟ್ಟಿದ ಅಣೆಕಟ್ಟು ಅಪಸೌವ್ಯಗಳ ಸೃಷ್ಟಿ ಹಿಂದಿರುವ ಕತೆ. ಪಂಚಗಂಗಾವಳಿ ಪ್ರೇಕ್ಷಣೀಯ ಸ್ಥಳವೂ ಹೌದು.

ಚಕ್ರಾ ನದಿಗೆ ಆಣೆಕಟ್ಟು ಕಟ್ಟಿ ನೀರನ್ನು ಲಿಂಗನಮಕ್ಕಿ ಡ್ಯಾಮ್ಗೆ ಹರಿಬಿಡುವ ಸಲುವಾಗಿ ಸಾವೆಹಕ್ಲು ಬಳಿ ಆಣೆಕಟ್ಟು ಕಟ್ಟಲಾಗಿದೆ. ಲಿಂಗಿನಮಕ್ಕಿ ಡ್ಯಾಮ್ ತುಂಬಿ ತುಳಿಕಿತೋ ಇಲ್ಲವೋ ಗೊತ್ತಿಲ್ಲ. ಆದರೆ ಸಾವೆಹಕ್ಲು ಆಣೆಕಟ್ಟಿನಲ್ಲಿ ಬರೋಬ್ಬರಿ ಅರವತ್ತು ಅಡಿ ನೀರು ನಿಲ್ಲುತ್ತದೆ. ಆಣೆಕಟ್ಟಿನಲ್ಲಿ ಸ್ಟಾಕ್ ಆಗುವ ನೀರೇ ರೈತರ ಬದುಕನ್ನು ಕಿತ್ತುಕೊಂಡಿದೆ. ಶಾಪವಾಗಿ ತಗಲಿಕೊಂಡಿದೆ.

ಚಕ್ರಾ ನದಿಗೆ ಐತಿಹಾಸಿಕ ಹಿನ್ನೆಲೆ ಇದೆ. ಕೃಷ್ಣ, ಸತ್ಯಭಾಮೆ ಜೊತೆ ಪಶ್ಚಿಮ ಘಟ್ಟದ ಬುಡಕ್ಕೆ ವನವಿಹಾರಕ್ಕೆ ಬಂದಿದ್ದ ಎಂಬ ಕತೆಯಿದೆ. ವಿಹಾರದ ಸಂದರ್ಭ ಸತ್ಯಭಾಮೆಗೆ ಉಂಟಾದ ಬಾಯಾರಿಕೆ ನಿವಾರಣೆಗೆ ಶ್ರೀ ಕೃಷ್ಣ ಚಕ್ರ ಬಿಟ್ಟು ನೀರು ತರಿಸಿದ್ರಿಂದ ಚಕ್ರಾ ನದಿ ಎಂಬ ಹೆಸರು ಬಂತು ಅಂತ ನೀರು ಬಳಕೆದಾರರ ಹೋರಾಟ ಸಮಿತಿ ಸದಸ್ಯರು ವಿವರಿಸುತ್ತಾರೆ. ಕೃಷ್ಣ ಚಕ್ರಬಿಟ್ಟು ತರಿಸಿದ ಚಕ್ರಾ ನದಿ ಹರಿವಿಗೆ ಸಾವೆಹಕ್ಲು ತಡೆಗೋಡೆ.

ಕೃಷಿ ನೆಲಸಮ, ಬತ್ತಿತು ಜೀವ ಜಲ
ಸಾವೆಹಕ್ಲು ಬಳಿ ಆಣೆಕಟ್ಟು ನಿರ್ಮಿಸಿದ್ದರಿಂದ ಯಡೆವೊಗೆ, ಹಳ್ಳಿಹೊಳೆ, ಕಲಮಶಿಲೆ, ಚಕ್ರಾಮೈದಾನ, ಹೆಮ್ಮಣ್ಣು ಪ್ರದೇಶದಲ್ಲಿ ನಡೆಯುತ್ತಿದ್ದ ಸ್ವಾಭಾವಿಕ ಕೃಷಿ ನಿಲುಗಡೆಯಾಗಿದೆ. ಅಂತರ್ಜಲ ಮಟ್ಟ ಪಾತಾಳ ಸೇರಿದೆ. ಬಾವಿ ಹಾಳಾಗಿ ಹೋಗಲಿ, ಕೊಳವೆ ಬಾವಿ ತೆಗೆದರೂ ಕುಡ್ತೆ ನೀರು ಸಿಗುತ್ತಿಲ್ಲ. ಚಕ್ರಾ ನದಿ ತೀರದಲ್ಲಿ ಬೇಸಿಗೆಯಲ್ಲಿ ನೀರಿಗಾಗಿ ಹುಡುಕಾಟ ನಡೆಯುತ್ತದೆ. ಕ್ಷೀರ ಸಾಗರ ಭಟ್ಟರ ಮನೆಯಲ್ಲಿ ಹನಿ ಮಜ್ಜಿಗೆಗೂ ತತ್ವಾರ ಅಂತಾರಲ್ಲ ಹಾಗೆ ಚಕ್ರ ನದಿ ತೀರ ವಾಸಿಗಳು ಹನಿ ಹನಿ ನೀರಿಗೂ ಬೇಸೆಗೆಯಲ್ಲಿ ಪರದಾಡಬೇಕು.

ಈ ಎಲ್ಲಾ ತಾಪತ್ರೆಯಗಳಿಗೆ ಕಂಡುಕೊಂಡ ಕಾರಣ ಸಾವೆಹಕ್ಲು ಆಣೆಕಟ್ಟು. ಸಾವೆಹಕ್ಲು ಆಣೆಕಟ್ಟಿನಿಂದ ಆಗುತ್ತಿರುವ ಅಪಸೌವ್ಯಗಳ ಬಗ್ಗೆ ಅಧಿಕಾರಿಗಳಿಗೂ ಮನವರಿಕೆಯಿದೆ. ಜನಪ್ರತಿನಿಧಿಗಳು ಒಪ್ಪಿಕೊಳ್ಳುತ್ತಾರೆ. ಪರಿಸರ ಪ್ರಿಯರಂತೂ ಸಾವೆಹಕ್ಲು ಡ್ಯಾಮ್ ಜನರ ಬದುಕನ್ನೇ ಆಪೋಶನ ಪಡೆದುಕೊಂಡಿದೆ ಎಂದು ಘಂಟಾಘೋಷವಾಗಿ ಹೇಳುತ್ತಿದ್ದಾರೆ. ಆದರೇನು ಬಂತು ಸಮಸ್ಯೆ ಪರಿಹಾರವಾಗಿಲ್ಲ.
ಸಾವೆಹಕ್ಲು ಬಳಿ ಕಟ್ಟಿದ ಆಣೆಕಟ್ಟು ಚಕ್ರ ನದಿಯನ್ನು ಘಟ್ಟದ ಕೆಳಕ್ಕೆ ಹರಿಯಲು ಬಿಡೋದಿಲ್ಲ. ಮಳೆಗಾದಲ್ಲಿ ಸ್ವಲ್ಪ ಮಟ್ಟಿಗಿನ ಹರಿವು ಕಂಡರೂ ಬೇಸಿಗೆಯಲ್ಲಿ ಕೃಷವಾಗುತ್ತದೆ ಚಕ್ರಾನದಿ ಹರಿವು. ಕಡು ಬೇಸಿಗೆಯಲ್ಲಂತೂ ಚಕ್ರಾ ನದಿಯಲ್ಲಿ ಪ್ರೋಕ್ಷಣ್ಯಕ್ಕೂ ನೀರಿರೋದಿಲ್ಲ. ಇದೆಲ್ಲದರ ಒಟ್ಟಾರೆ ಪರಿಣಾಮ ನೀರಿಗೆ ಹಾಹಾಕಾರ.-ಶ್ರೀಪತಿ ಹೆಗಡೆ ಹಕ್ಲಾಡಿ

0 comments:

Post a Comment