ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್

ದಿನಗಳೆದಂತೆ ಮಾನವನ ಬದುಕು ಯಾಂತ್ರಿಕವಾಗುತ್ತಿರುವುದು ಎಲ್ಲರ ಅನುಭವಕ್ಕೆ ಬಂದಿರುವ ಸ್ವಯಂವೇದ್ಯ ಸಂಗತಿ. ಈ ಯಾಂತ್ರಿಕತೆ ಮನುಷ್ಯನ ದೇಹ, ಮನಸ್ಸುಗಳ ಮೇಲಷ್ಟೇ ಅಲ್ಲದೆ ಕೌಟುಂಬಿಕ ಸಂಬಂಧಗಳ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಇದರಿಂದಾಗಿ ಅನಾರೋಗ್ಯ, ಆಲಸ್ಯ, ಬದುಕಿನಲ್ಲಿ ನಿರಾಸಕ್ತಿ, ಜಿಗುಪ್ಸೆ, ಕೌಟುಂಬಿಕ ಕಲಹ ಮೊದಲಾದವುಗಳು ಹೆಚ್ಚಾಗುತ್ತಿವೆ. ಯಾಂತ್ರಿಕ ಬದುಕಿನ ಒತ್ತಡ ಹಾಗೂ ಅದರ ಪರಿಣಾಮಗಳಿಂದ ಮುಕ್ತರಾಗಲು ಪ್ರತಿಯೊಬ್ಬರೂ ಹೆಣಗಾಡುತ್ತಿದ್ದಾರೆ. ಇದಕ್ಕಾಗಿ ಕೆಲವರು ಟಿ.ವಿ., ಸಿನಿಮಾ ಮೊರೆ ಹೋದರೆ ಇನ್ನೂ ಕೆಲವು ಧೂಮಪಾನ, ಮದ್ಯಪಾನ ಅಥವಾ ಪಾರ್ಟಿ ಮುಂತಾದವುಗಳಿಗೆ ದಂಬಾಲು ಬೀಳುತ್ತಾರೆ. ಆದರೆ ಇವುಗಳಿಂದ ಕ್ಷಣಿಕ ನೆಮ್ಮದಿ ಬಿಟ್ಟರೆ ಹೇಳಿಕೊಳ್ಳುವಂತಹ ಪ್ರಯೋಜನವೇನೂ ಆಗದು. ಇಂತಹ ಯಾಂತ್ರಿಕ ಬದುಕಿನ ಒತ್ತಡವನ್ನು ದೂರಮಾಡಿ ಮನಸ್ಸಿನ ಆಹ್ಲಾದತೆಯನ್ನು ನೀಡುವಲ್ಲಿ ಪ್ರವಾಸ ಅತ್ಯಂತ ಸಹಾಯಕಾರಿ.


ಪ್ರವಾಸ ದೇಹ ಹಾಗೂ ಮನೋ ವಿಕಾಸಕ್ಕಿರುವ ಉತ್ತಮ ಸಾಧನ. ಪ್ರತಿಯೊಬ್ಬ ವ್ಯಕ್ತಿಯ ಮನಸ್ಸು ಪ್ರವಾಸವೆಂದ ಕೂಡಲೇ ಪ್ರಪ್ಪುಲ್ಲಿತಗೊಳ್ಳುತ್ತದೆ. ಪ್ರವಾಸದಿಂದ ಒತ್ತಡ ಮುಕ್ತರಾಗುವುದಲ್ಲದೆ ಮನೋಲ್ಲಾಸ, ಮನಃಶಾಂತಿ, ಮನರಂಜನೆಯೂ ಲಭ್ಯವಾಗುತ್ತದೆ. ಜೊತೆಗೆ ಕುಟುಂಬದರೊಡನೆ ಹಾಗೂ ಸ್ನೇಹಿತರೊಡನೆ ಪ್ರವಾಸ ಕೈಗೊಳ್ಳುವುದರಿಂದ ಸ್ನೇಹ, ಸಂಬಂಧಗಳು ಗಟ್ಟಿಯಾಗಿ ಸಂತೋಷ ವೃದ್ಧಿಯಾಗುತ್ತದೆ. ಜ್ಞಾನ ವೃದ್ಧಿಸಿಕೊಳ್ಳಲು ಹಾಗೂ ವ್ಯಕ್ತಿತ್ವ ವಿಕಾಸಕ್ಕೂ ಪ್ರವಾಸದಲ್ಲಿ ವಿಪುಲ ಅವಕಾಶವಿದೆ. ಜಗತ್ತಿನಾದ್ಯಂತ ಇರುವ ಪ್ರವಾಸಿ ತಾಣಗಳನ್ನು ಮನರಂಜನಾ ತಾಣ, ಮನೋವಿಕಾಸದ ತಾಣ ಹಾಗೂ ಮನಃಶಾಂತಿಯ ತಾಣಗಳೆಂದು ವರ್ಗೀಕರಿಸಬಹುದು. ವಿದೇಶೀಯರು ತಮ್ಮ ಜೀವನದಲ್ಲಿ ಪ್ರವಾಸಕ್ಕೆ ಎಲ್ಲಿಲ್ಲದ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಯಾವುದೇ ಪ್ರವಾಸಿ ತಾಣವನ್ನು ಅದರಲ್ಲೂ ವಿಶೇಷವಾಗಿ ಮನೋವಿಕಾಸದ ಪ್ರವಾಸಿ ತಾಣಗಳನ್ನು ಅಧ್ಯಯನಕ್ಕೆ ಬಂದ ವಿದ್ಯಾರ್ಥಿಗಳಂತೆ ಶ್ರದ್ಧೆ, ಆಸಕ್ತಿ ಕುತೂಹಲಗಳಿಂದ ಸಾವಧಾನವಾಗಿ ವೀಕ್ಷಿಸುತ್ತಾರೆ. ತಮ್ಮ ಫೋಟೋ ತೆಗೆದುಕೊಳ್ಳುವ ಬದಲು ತಾವು ಸಂದರ್ಶಿ ಸುವ ಸ್ಥಳಗಳಲ್ಲಿನ ವಿಶೇಷತೆಗಳನ್ನು ತಮ್ಮ ಕ್ಯಾಮರಾಗಳಲ್ಲಿ ಸೆರೆಹಿಡಿದು ತಮ್ಮ ಜ್ಞಾನಭಂಡಾರ ಹೆಚ್ಚಿಸಿಕೊಂಡು ಪ್ರವಾಸವನ್ನು ಸಾರ್ಥಕಪಡಿಸಿಕೊಳ್ಳುತ್ತಾರೆ.

ನಮ್ಮಲ್ಲಿ ಪ್ರವಾಸಿತಾಣಗಳಿಗೇನೂ ಕೊರತೆಯಿಲ್ಲ. ಆದರೆ ಅವುಗಳ ಬಗೆಗಿನ ಮಾಹಿತಿಯ ಕೊರತೆ, ಜತೆಜತೆಗೆ ಸಾರಿಗೆ ಹಾಗೂ ಕನಿಷ್ಠ ಮೂಲಭೂತ ಸೌಕರ್ಯಗಳ ಕೊರತೆ ಬಹಳಷ್ಟಿದೆ. ಭಾರತದಲ್ಲಿ ಬಹುತೇಕ ಎಲ್ಲಾ ಪ್ರವಾಸಿ ಸ್ಥಳಗಳು ಇಂದು ಮಜದ ತಾಣಗಳಾಗಿ ಪರಿವರ್ತನೆಯಾಗಿವೆ. ಖಂಡಿತವಾಗಿಯೂ ಈ ಬೆಳವಣಿಗೆ ನಮ್ಮ ದೇಶದ ಇತಿಹಾಸ, ಸಂಸ್ಕೃತಿ, ಪರಂಪರೆಗೆ ಪೂರಕವಾದುದಲ್ಲ. ಇದನ್ನು ಸರಿಪಡಿಸುವ ಗುರುತ ಜವಾಬ್ದಾರಿ ಸ್ಥಳೀಯರ ಹಾಗೂ ಸರಕಾರದ ಮೇಲಿದೆ. ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ತ್ವರಿತವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅವಶ್ಯಕತೆ ಇದೆ. ಮೊದಲು ಪ್ರವಾಸೀ ತಾಣಗಳನ್ನು ಗುರುತಿಸಬೇಕು. ಅವನತಿಯ ಅಂಚಿನಲ್ಲಿರುವ ಸ್ಮಾರಕಗಳನ್ನು ಸ್ಥಳೀಯರ ಹಾಗೂ ಖಾಸಗಿ ಸಂಘ-ಸಂಸ್ಥೆ ಸಹಕಾರದೊಂದಿಗೆ ಸಂರಕ್ಷಿಸಬೇಕು. ಮನಸ್ಸಿಗೆ ಮುದ ನೀಡುವ ಇಂತಹ ಪ್ರವಾಸೀ ತಾಣಗಳು ಇನ್ನಷ್ಟು ಬೆಳಿಯಬೇಕು. ಅದು ಸಾದ್ಯವಾಗಬೇಕಾದರೆ ಸರಕಾರದ ಜತೆ ನಾವೂ ಕೈ ಜೋಡಿಸಬೇಕು.


-ರೇಶ್ಮಾ, ತೃತೀಯ ಬಿ.ಎ.
ಗೋವಿಂದ ದಾಸ ಕಾಲೇಜು, ಸುರತ್ಕಲ್.

0 comments:

Post a Comment