ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್
ಮೈಸೂರು ನಗರದಲ್ಲಿ 5 ವರ್ಷಕ್ಕಿಂತ ಮುಂಚೆ 600ಕ್ಕೂ ಹೆಚ್ಚು ಟಾಂಗಾಗಾಡಿಗಳು ಓಡುತ್ತಿದ್ದವಲ್ಲದೆ ಸುಮಾರು 500 ಕುಟುಂಬಗಳನ್ನು ಈ ಕಾಯಕ ಪೋಷಿಸುತ್ತಿತ್ತು. ಆದರೆ ಇಂದು ಟಾಂಗಾ ಗಾಡಿಗಳ ಸಂಖ್ಯೆ ತೀವ್ರ ಪ್ರಮಾಣದಲ್ಲಿ ಕಡಿಮೆಯಾಗಿ ಕೇವಲ 100 ಟಾಂಗಾಗಾಡಿಗಳನ್ನು ಇಟ್ಟುಕೊಂಡಿರುವ 100 ಕುಟುಂಬಗಳು ಮಾತ್ರ ಇವೆ. ಕಾರಣ ಪ್ರಯಾಣಿಕರ ಕೊರತೆ.


ನಿಮಗೆ ದೈನಂದಿನ ಆಟೋ, ಬಸ್, ಕಾರ್, ಬೈಕ್ ಮುಂತಾದ ವಾಹನಗಳಲ್ಲಿ ಓಡಾಟ ಮಾಡಿ ಬೇಸರವೆನಿಸಿದೆಯೇ ಹಾಗಾದರೆ ಬನ್ನಿ. ನಿಮ್ಮ ಬೇಸರವನ್ನು ಕಳೆದುಕೊಳ್ಳಲು, ವಾಹನದ ಸದ್ದಿನ ಜಂಜಾಟವಿಲ್ಲದೆ ನಗರಕ್ಕೊಂದು ಸುತ್ತು ಹೊಡೆಯೋಣ. ಇದು ಕಾಲ್ನಡಿಗೆಯಿಂದಲ್ಲ. ಬದಲಿಗೆ ರಾಜ ಗಾಂಭೀರ್ಯ ಹೊಂದಿರುವ ಟಾಂಗಾ ಗಾಡಿಯಲ್ಲಿ! ಮೈಸೂರು ಎಂದಾಕ್ಷಣ ಎಲ್ಲರಿಗು ನೆನಪಾಗುವುದು ಮೈಸೂರು ದಸರಾ, ಮೈಸೂರು ಪಾಕ್, ಮೈಸೂರು ರೇಷ್ಮೆ, ಹಾಗೆಯೇ ಮೈಸೂರು ಎಂದರೆ ತಕ್ಷಣಕ್ಕೆ ಗೋತ್ತಾಗುವುದೆಂದರೆ ಟ್ರಾಫಿಕ್ ಮಧ್ಯೆ ಟಕ್ ಟಕ್ ಎಂದು ಶಬ್ಧ ಮಾಡಿಕೊಂಡು ಓಡಿಕೊಂಡು ಬರುವ ಟಾಂಗಾ ಗಾಡಿಗಳು.ಈ ಎರಡು ಪುಟ್ಟ ಪ್ಯಾರಾಗಳನ್ನು ಓದಿದ ತಕ್ಷಣ ನಿಮ್ಮಲ್ಲಿ ಟಾಂಗಾದಲ್ಲಿ ಪ್ರಯಾಣ ಮಾಡಬೇಕೆಂಬ ಆಸೆ ಗರಿಗೆದರಿದರೆ ತಡಮಾಡದೆ ಬನ್ನಿ ಟಾಂಗಾ ಸವಾರಿಗೆ ಮುಂದಾಗಿ ಹಾಗೂ ಟಾಂಗಾ ಓಡಿಸುವ ಕುಟುಂಬಗಳ ಬದುಕಿನ ಬಂಡಿಯನ್ನು ಉರುಳಿಸಲು ಸಹಕಾರಿಯಾಗಿ.

ಮೈಸೂರು ದಸರಾ ಎಂದರೆ ಸಾಕು ಇಡೀ ನಾಡಿಗೆ ಹಬ್ಬ. ಅದರಲ್ಲಿ ಮುಖ್ಯವಾಗಿ ಟಾಂಗಾ ಓಡಿಸುವವರಿಗಂತು ಮನೆಹಬ್ಬ. ಟ್ರಾಫಿಕ್ ಮಧ್ಯೆ ಗಾಡಿಯನ್ನು ಓಡಿಸುವಂತಿಲ್ಲ, ಪ್ರೇಕ್ಷಣೀಯ ಸ್ಥಳಗಳಲ್ಲಿ ಗಾಡಿಗಳನ್ನು ನಿಲ್ಲಿಸುವಂತಿಲ್ಲ ಎಂದು ಯಾರು ಸಹ ಆಜ್ಞೆ ಮಾಡುವಂತಿಲ್ಲ. ಏಕೆಂದರೆ ಆಗ ಪ್ರವಾಸಿಗರ ಮೊದಲನೆ ಆಯ್ಕೆಯೇ ಟಾಂಗಾದಲ್ಲೊಂದು ನಗರ ಸುತ್ತು. ಆದರೆ ಅದೇ ಟಾಂಗಾವಾಲಗಳು ಇಂದು ಬೆಳಿಗ್ಗೆಯಿಂದ ಸಂಜೆ ತನಕ ಕಾದರೂ ಯಾರೊಬ್ಬ ಪ್ರಯಾಣಿಕನೂ ಬಾರದೆ ಬರಿಗೈಯಲ್ಲಿ ಕುದುರೆ ಗಾಡಿಯನ್ನು ಓಡಿಸಿಕೊಂಡು ಮನೆಗೆ ತೆರಳುವ ಸ್ಥಿತಿ ನಿರ್ಮಾಣವಾಗಿದೆ.

"ಇಂತಹ ಪರಿಸ್ಥಿತಿಯಲ್ಲಿ ಟಾಂಗಾ ಗಾಡಿ ಓಡಿಸಿ ಬದುಕಿನ ಬಂಡಿ ಉಳಿಸುವುದು ಅಸಾಧ್ಯ ಆದ್ದರಿಂದ ಈ ಕೆಲಸವನ್ನು ಬಿಟ್ಟು ಬಿಡುತ್ತೇನೆ!" ಎಂಬ ಬೇಸರದ ಮಾತನ್ನು 25 ವರ್ಷಗಳಿಂದ ಟಾಂಗಾ ಗಾಡಿಯನ್ನು ಓಡಿಸುತ್ತಿರುವ ಜಟಕಾ ಸಾಬಿ ಝಾಕಿರ್ ಸಾಬ್ ಹೇಳುತ್ತಿದ್ದಾರೆ. ಅನೇಕ ಜನರು ಈ ಟಾಂಗಾ ಗಾಡಿಯ ದುಡಿಮೆಯಲ್ಲಿ ಮನೆ ಸಾಗಿಸಲು ಕಷ್ಟ ಎಂದು ಈ ವೃತ್ತಿಯನ್ನು ಬಿಟ್ಟು ಕೂಲಿ ಕೆಲಸ, ಆಟೋ ಚಾಲಕ ವೃತ್ತಿ ಸೇರಿದಂತೆ ಅನೇಕ ಬೇರೆ ಬೇರೆ ಕಾಯಕವನ್ನು ಆರಿಸಿಕೊಳ್ಳುತ್ತಿದ್ದಾರೆ.

ಅಂದಿನ ದಿನಗಳಲ್ಲಿ ಟಾಂಗಾ ಗಾಡಿಗಳು ಹೆಚ್ಚಿನ ಜನಪ್ರಿಯತೆ ಪಡೆದಿದ್ದವಲ್ಲದೆ ಟಾಂಗಾ ಗಾಡಿಗಳಲ್ಲಿ ತೆರಳುವುದೆಂದರೆ ಅಂದೊಂದು ಪ್ರತಿಷ್ಟೆಯ ಸಂಕೇತವಾಗಿತ್ತು. ದೂರದ ಊರುಗಳಿಗೆ ತೆರಳಬೇಕಾಗಿದ್ದರೆ ಮುನ್ಸಿಪಾಲಿಟಿಗೆ ಬಾಡಿಗೆ ನೀಡಿ ಟಾಂಗಾ ಗಾಡಿಯಲ್ಲಿ ಹೋಗ ಬೇಕಾಗಿತ್ತು. ಮೈಸೂರು ನಗರದಲ್ಲಿ 5 ವರ್ಷಕ್ಕಿಂತ ಮುಂಚೆ 600ಕ್ಕೂ ಹೆಚ್ಚು ಟಾಂಗಾಗಾಡಿಗಳು ಓಡುತ್ತಿದ್ದವಲ್ಲದೆ ಸುಮಾರು 500 ಕುಟುಂಬಗಳನ್ನು ಈ ಕಾಯಕ ಪೋಷಿಸುತ್ತಿತ್ತು. ಆದರೆ ಇಂದು ಟಾಂಗಾ ಗಾಡಿಗಳ ಸಂಖ್ಯೆ ತೀವ್ರ ಪ್ರಮಾಣದಲ್ಲಿ ಕಡಿಮೆಯಾಗಿ ಕೇವಲ 100 ಟಾಂಗಾಗಾಡಿಗಳನ್ನು ಇಟ್ಟುಕೊಂಡಿರುವ 100 ಕುಟುಂಬಗಳು ಮಾತ್ರ ಇವೆ. ಕಾರಣ ಪ್ರಯಾಣಿಕರ ಕೊರತೆ.

ಹುಲ್ಲು, ಹುರುಳಿ, ಭೂಸ ಹೀಗೆ ಕುದುರೆಗೆ ದಿನಕ್ಕೆ ಐವತ್ತರಿಂದ 100 ರೂಪಾಯಿಗಳು ಖರ್ಚಾಗುತ್ತದೆ. ಇನ್ನು ಏನು ಉಳಿಯುತ್ತದೆ? ಇನ್ನು ನಮ್ಮ ಜೀವನ ಹೇಗೆ ಎಂಬ ಪ್ರಶ್ನೆಯನ್ನು ಇನ್ನೊಬ್ಬ ಟಾಂಗಾವಾಲ ರಿಯಾಜ್ ಹೇಳುತ್ತಾರೆ. ಈ ಕಥೆ ಕೇವಲ ಇವರಿಬ್ಬರದೇ ಅಲ್ಲ. ಎಲ್ಲಾ ಟಾಂಗಾವಾಲಗಳದ್ದೂ ಅದೇ ಕಥೆ ಅದೇ ವ್ಯಥೆಯಾಗಿದೆ. ತಾತ ಮುತ್ತಾತ ಕಾಲದಿಂದಲೂ, ಕೆಲವರು ವರದಕ್ಷಿಣೆಯ ಮೂಲಕ ಬಂದಿರುವಂತಹ ಟಾಂಗಾಗಳನ್ನು ಓಡಿಸಿಕೊಂಡು ಬದುಕು ಸಾಗಿಸಿಕೊಂಡು ಬಂದಿದ್ದಾರೆ. ಹಾಗಾಗಿ ಇದನ್ನು ಬಿಟ್ಟು ಬೇರೆ ಉದ್ಯೋಗಕ್ಕೆ ಹೊಂದಿಕೊಳ್ಳುವುದು ಸಾಧ್ಯವಾಗುತ್ತಿಲ್ಲ.

ತಮ್ಮ ಹಳೆ ನೆನಪನ್ನು ನಮ್ಮ ಮುಂದೆ ತೆರೆದಿಟ್ಟ ಹಿರಿಯ ರಹೀಮ್ ಸಾಬ್ 'ಅಂದು ಎಲ್ಲೆಡೆ ಹೋಗಲು ನಮ್ಮ ಟಾಂಗಾ ಗಾಡಿಗಳೇ ಬೇಕಾಗುತ್ತಿತ್ತು. ಹೀಗಾಗಿ ಜನರೇ ನಮ್ಮನ್ನು ಹುಡುಕಿಕೊಂಡು ಮನೆ ಬಾಗಿಲಿಗೆ ಬರುತ್ತಿದ್ದರು. ಈಗ ಬದಲಾಗುತ್ತಿರುವ ದಿನಗಳನ್ನು ನೋಡಲಾಗುತ್ತಿಲ್ಲ. 'ಬನ್ನಿ ಸಾಬ್ ಬೆಳಿಗ್ಗೆಯಿಂದ ಯಾರೂ ಗಾಡಿಯಲ್ಲಿ ಬಂದಿಲ್ಲ. ನೀವಾದರು ಬನ್ನಿ ಸಾಬ್' ಎಂದು ಗೋಗೆರೆದು ಕರೆದರೂ ಸಹ ಯಾರೂ ಬರುತ್ತಿಲ್ಲ ಎಂದು ಅಲವತ್ತು ತೋಡಿಕೊಂಡರು.


ಮೊದಲು ಕುದುರೆಗಳು 6 ರಿಂದ 10 ಸಾವಿರಕ್ಕೆ ಟಾಂಗಾ ಗಾಡಿ 25 ರಿಂದ 35 ಸಾವಿರಕ್ಕೆ ಸಿಗುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ 1 ಲಕ್ಷದಿಂದ 1.5 ಲಕ್ಷದ ವರೆಗೆ ಹಣವನ್ನು ಬಂಡವಾಳವಾಗಿ ಹಾಕಿದರೆ ಅದರ ಬಡ್ಡಿಯಾದರೂ ಸಹ ಹುಟ್ಟುವದಿಲ್ಲ. ಆದ್ದರಿಂದ ನನ್ನ ಮಕ್ಕಳಿಗೆ ಈ ಕಾಯಕವನ್ನು ಬಿಟ್ಟು ಆಟೋ ಓಡಿಸಲಿ ಎಂದು ಆಟೋವನ್ನು ಸಾಲದ ಮೇಲೆ ಕೊಡಿಸಿದ್ದೇನೆ ಎಂದು ಹೇಳುತ್ತಾರೆ 57 ವರ್ಷದ ಮಕ್ಬೂಲ್ ಸಾಬ್.

ವರ್ಷದ ಇತರೆ ದಿನಗಳಲ್ಲಿ ನೆನಪಾಗದ ಟಾಂಗಾವಾಲಗಳು ದಸರಾ ಬಂತೆಂದರೆ ಸಾಕು ಎಲ್ಲರಿಗೂ ನೆನಪಿಗೆ ಬರುತ್ತಾರೆ. ಸರಕಾರದಿಂದ ಭರವಸೆಗಳ ಮಹಾಪೂರಗಳು ಮಾತ್ರ. ನಮ್ಮ ಬದುಕು ನಡೆಸುವುದು ಎಷ್ಟು ಕಷ್ಟ ಹಾಗು ಮನೆ ನಡೆಸಬೇಕಾದರೆ ಹಗಲು ಟಾಂಗಾ ಕೆಲಸ ರಾತ್ರಿ ವಾಚ್ಮೆನ್ ಕೆಲಸ ಮಾಡಬೇಕಾಗಿದೆ. 'ಈಗೇನು ಮಿನಿಸ್ಟರ್ ಸಾಬ್ರು ಮಾಲಿನ್ಯ ತಡೆಗಟ್ಟಲು ಅರಮನೆ ಸುತ್ತ ವಾಹನ ಓಡಾಡದಂತೆ ಕಟ್ಟೆಚ್ಚರ ವಹಿಸಲಾಗುವುದು ಎಂದು ಹೇಳಿದ್ದಾರೆ' ಆಗಲಾದರು ನಮಗೆ ಬೇಡಿಕೆ ಬರಬಹುದೇನೋ ಕಾದು ನೋಡಬೇಕು ಎಂದು ಹೇಳುತ್ತಾರೆ ಜಾವೇದ್ ಭಾಯ್.

ಅಲಂಕೃತ ಟಾಂಗಾ ಗಾಡಿಗಳಲ್ಲಿ ದಸರೆಯ ಸಂದರ್ಭದಲ್ಲಿ ನಗರದ ಒಂದು ಸುತ್ತು ಹೊಡೆಸುವ ಟಾಂಗಾವಾಲಾಗಳಿಗೆ ಸಿಗುವುದು ಒಂದು ಸುತ್ತಿಗೆ 250 ರಿಂದ 300 ರೂಗಳು ಮಾತ್ರ. ಆನಂತದ ದಿನಗಳಲ್ಲಿ ಟಾಂಗಾವಾಲಗಳ ಬದುಕು ಹೊಸ ಹೊಸ ವಾಹನಗಳ ಅರ್ಭಟದಲ್ಲಿ ಕಳೆದು ಹೋಗುತ್ತಿದೆ ಎನ್ನಬಹುದು. ಆದ್ದರಿಂದ ಬನ್ನಿ ಟಾಂಗಾವಾಲಾಗಳ ಬದುಕು ಬದಲಾಯಿಸಿ ಅವರ ಬದುಕಿನ ಜಟಕಾ ಬಂಡಿಯನ್ನು ಉರುಳಿಸಿ.

- ಹೈಮದ್ ಹುಸೇನ್ ದಂಡ್
ಪ್ರಥಮ ಪತ್ರಿಕೋದ್ಯಮ , ಮಾನಸಗಂಗೋತ್ರಿ ಮೈಸೂರು.

0 comments:

Post a Comment