ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ಇದು ನಿಸರ್ಗದತ್ತ ನಡಿಗೆ...

ಟ್ಟು...ಟ್ಟು...ಟ್ವಿ....ರ್.... ಚ್ವೀಂ...ವ್.... ಹೀಗೆ ವೈವಿಧ್ಯಮಯ ಇಂಚರಗಾನ...ದೂರದಲ್ಲಿ ಸಾಥ್ ನೀಡುವ ಜೀರುಂಡೆಗಳು... ಫಕ್..ರ್..... ಎಂದು ಸದ್ದುಮಾಡುತ್ತಾ ಜಿಗಿದು ಸಾಗಿದ ಕಾಡುಪ್ರಾಣಿ...ಇನ್ನೇನು ಇಲ್ಲೆಲ್ಲೋ ತನ್ನ ಆವಾಸಸ್ಥಾನವಿದೆ ಎಂಬಂತೆ ದೂರದಲ್ಲೇ ಕುರುಹುನೀಡಿಹೋದ ಕಾಡುಹಂದಿ...


ಕಾಡುಕಳ್ಳರ ಕೊಡಲಿಗೆ ಸಿಕ್ಕು ಧಾರಾಶಾಹಿಯಾಗಿ ಅಳಿದುಳಿದ ಅವಶೇಷಗಳೊಂದಿಗಿದ್ದ ಮರದ ಕಾಂಡದೊಳಗೆ ಶ್ವೇತವರ್ಣದ ಮೊಟ್ಟೆ...ಇವೆಲ್ಲನೋಡುತ್ತಿದ್ದಂತೆಯೇ "ನ್ಯಾಷನಲ್ ಜಿಯೋಗ್ರಾಫೀ ಚಾನೆಲ್ಲೋ... ಡಿಸ್ಕವರೀ ಚಾನೆಲ್ಲಲ್ಲಿ " ಬರುವ ಡಾಕ್ಯುಮೆಂಟರಿ ರೀತಿ ಇದ್ಯಲ್ಲಾ ಸಾರ್... ಎಂಬ ಮಾತು ನಮ್ಮ ತಂಡದಲ್ಲಿದ್ದ ವಿದ್ಯಾರ್ಥಿಗಳ ನಡುವಿನಿಂದ ಕೇಳಿಬಂತು.
ಮೂಡಬಿದಿರೆಯ ಆಳ್ವಾಸ್ ಪದವಿಕಾಲೇಜಿನ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳಿಗೆ ಒಂದು ದಿನದ ಟ್ರಕ್ಕಿಂಗ್ ಏರ್ಪಡಿಸಲಾಗಿತ್ತು. ಅದು ರಾಜ್ಯಮಟ್ಟದಲ್ಲಿ ಕ್ಲೀನ್ ವಿಲೇಜ್ ಎಂದೇ ಗುರುತಿಸಲ್ಪಟ್ಟ ಹೊಸಂಗಡಿ ಗ್ರಾಮದಲ್ಲಿ. ಟ್ರಕ್ಕಿಂಗ್ ನೇತೃತ್ವವನ್ನು ಹೊಸಂಗಡಿ ಗ್ರಾಮಪಂಚಾಯತ್ ಸದಸ್ಯ ಹರಿಪ್ರಸಾದ್ ವಹಿಸಿದ್ದರು. "ನಿಸರ್ಗದತ್ತ ನಡಿಗೆ" ಎಂಬ ಹೆಸರಿನೊಂದಿಗೆ ಈ ಟ್ರಕ್ಕಿಂಗ್ ಏರ್ಪಡಿಸಲಾಗಿತ್ತು. ಇದು ಮಾಮೂಲಿ ಟ್ರಕ್ಕಿಂಗ್ ಇರಬಹುದೆಂದು ಮೂಗುಸಿಂಡರಿಸಬೇಡಿ...ನೀವು ಕನಸಲ್ಲೂ ಊಹಿಸಲು ಅಸಾಧ್ಯವಾದಂತಹ ನಡಿಗೆ...ಕಾರಣ ಮತ್ತೆ ಹಳೆತನಕ್ಕೆ ಶಿಫ್ಟ್...
ಕೆಲವು ದಶಕಗಳ ಹಿಂದಿನ ಜೀವನ ಹೇಗಿದ್ದರಬಹುದು...ಊಹಿಸಿನೋಡಿ...ಅದಾಗ ಪಾತ್ರೆಗಳ ಬಳಕೆ ವಿರಳ...ತೆಂಗಿನಕಾಯಿ ಗೆರಟೆಯಲ್ಲಿ ಪಾನೀಯ ಸೇವನೆ...ಊಟಕ್ಕೆ ಬಟ್ಟಲಿದ್ದಿರಲಿಲ್ಲ...ಬದಲಾಗಿ ಅಡಿಕೆ ಹಾಳೆ ಬಳಕೆ... ಅನ್ನಕ್ಕೆ ತತ್ವಾರ..ಹಾಗಾಗಿ ಗಡ್ಡೆ ಗೆಣಸಿಗೆ ಮೊರೆ... ಆರೋಗ್ಯಕ್ಕೂ ಪೂರಕವಾದಂತಹ ಕಾಡುತ್ಪನ್ನಗಳ ಪಾನೀಯ... ಇದು ಇಂದಿನವರಿಗಂತೂ ಮರೀಚಿಕೆ... ಆದರೆ ನಮ್ಮ ಹಿರಿಯರು ಇಂದಿಗೂ ಆರೋಗ್ಯವಂತರಾಗಿದ್ದಾರಲ್ಲ...ಅವರ ಆರೋಗ್ಯದ ರಹಸ್ಯ ಇದೇ ಆಗಿತ್ತು...ಆ ಆರೋಗ್ಯ ರಹಸ್ಯವನ್ನು ಈ ತಲೆಮಾರಿಗೆ ಪರಿಚಯಿಸುವುದು "ನಿಸರ್ಗದತ್ತ ನಡಿಗೆ" ಕಾರ್ಯಕ್ರಮದ ಮೂಲೋದ್ಧೇಶವಾಗಿತ್ತು... ಅದರಲ್ಲಿ ಸಫಲತೆಯನ್ನೂ ಕಂಡಿತು.ಹೊಸಂಗಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಹೊಸಂಗಡಿ ಕಟ್ಟೆಯಿಂದ ಆರಂಭಗೊಂಡ ನಡಿಗೆ ಕಾರ್ಯಕ್ರಮ ಬಡಕೋಡಿ ಗ್ರಾಮದಲ್ಲಿ ಕೊನೆಗೊಂಡಿತು. ಸುಮಾರು 12ಕಿಲೋಮೀಟರ್ ಗಳ ನಡಿಗೆ. ಆರಂಭದಲ್ಲಿ ಕೆರಸಿ ಚೆಂದಮಾಡಿದ ಗೆರಟೆಯಲ್ಲಿ ನೀರು,ಕರಿಮೆಣಸು, ಏಲಕ್ಕಿಮಿಶ್ರಿತ ಮಸಾಲೆ ಬೆಲ್ಲ...ಸಾಂಪ್ರದಾಯಿಕ ಬೆಲ್ಲನೀರಿನ ಸ್ವಾಗತ...ಅಲ್ಲಿಂದ ಪಯಣ ಪ್ರಾರಂಭ.ಹೊಸಂಗಡಿಯ ನದಿಯಗಲನೋಡುತ್ತಾ ಚಾರಣದ ಪಯಣ ... ಊರಮಧ್ಯೆ ಸಾಗಿ ಹೊಳೆದಾಟಿ, ಕಾಲುಸಂಕದಲ್ಲಿ ಕಸರತ್ತುಮಾಡುತ್ತಾ ತಡಮೆ(ದಡಮೆ=ಗೇಟಿನಂತಿರುವ ಸಾಧನ)ದಾಟಿ, ಗದ್ದೆಹುಣಿಯಲ್ಲಿ ಸರ್ಕಸ್ ಮಾಡುತ್ತಾ , ಪಾಪು(ತೋಡಿಗೆ ಮರದ ಕಾಲುಸಂಕ) ದಾಡಿ ಸಾಗುತ್ತಲೇ ವಿಶಾಲವಾದ ಮನೆಗೋಚರಿಸಿತು. ಅದು ಹೊಸಂಗಡಿ ಪೋಸ್ಟ್ ಆಫೀಸ್ ನಲ್ಲಿ ಅಂಚೆಮಾಮನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸೇಸಪ್ಪರ ಮನೆ. ಅಲ್ಲಿ "ಕದುಪದಂಗಿ" ಸಸ್ಯದ ಕೆತ್ತೆಯ ಕಷಾಯ. ಕದುಪದೆಂಗಿ ಔಷಧೀಯ ಸಸ್ಯ. ಹೊಟ್ಟನೋವಿಗೆ ಅದು ರಾಮಬಾಣವಂತೆ. ಅದರಿಂದ ತಯಾರಿಸಿದ ಕಷಾಯ ಗೆರಟೆಯಲ್ಲಿ ಎಲ್ಲರ ಬಾಯಿ ಹೊಟ್ಟೆ ತಣಿಸಿತು... ಮತ್ತೆ ಮುಂದುವರಿದ ಪಯಣ...ಗದ್ದೆಕೊಯ್ಯುವ, ತೆನೆಕಟ್ಟುವ ಸಾಹಸಕ್ಕೆ ವಿದ್ಯಾರ್ಥಿ ತಂಡ ವಿಫಲ ಪ್ರಯತ್ನ ನಡೆಸಿತು.ಮುಂದೆ ಸಾಗಿದಾಗ ಕೆಂಡದಲ್ಲಿ ಸುಟ್ಟ ಗೆಣಸು ಹಿಡಿದು ನಿಂತಿದ್ದರು ಸಂಪಿಗೆದಡಿ ಶ್ರೀಪತಿ ಭಟ್. ಲಿಂಗಪ್ಪ ಪೂಜಾರಿಯವರು ಆಗತಾನೆ ತಯಾರಿಸಿದ ಬಿಸಿ ಬಿಸಿ ನೆಲನೆಲ್ಲಿ ಕಷಾಯದೊಂದಿಗೆ ಹಾಜರಾದರು... ಅದಾಗಲೇ ಸಾಕಷ್ಟು ದೂರ ಕ್ರಮಿಸಿದ ವಿದ್ಯಾರ್ಥಿ ತಂಡ ಗೆಣಸು ತಿಂದು ಕಷಾಯ ಕುಡಿದು ಕೊಂಚ ವಿಶ್ರಾಂತಿ ಪಡೆದು ಪಯಣ ಮುಂದುವರಿಸಿತು.


ಮುಂದಿನ ಪಯಣ ಕಡಿದಾದ ಹಾದಿಯಲ್ಲಿ... ಕಾಡಿನೊಳಗೊಂದು ನಡಿಗೆ... ಅಕ್ಷರಶಃ ಅದೊಂದು ಸೊಕ್ಕುಮುರಿಸುವ ಸಾಹಸ... ನೆತ್ತಿಸುಡುವಂತೆ ಸೂರ್ಯ ಮೇಲೇರಿದ್ದ... ಕಾಡಹಾದಿಯಲ್ಲಿ ಪಯಣ...ಬೃಹದಾಕಾರದ ಕಲ್ಲು...ಅದರಮೇಲೇರುವ ಸಾಹಸ...ಕೆಲವರು ಜಾರಿದರು...ಕೆಲವರು ಏರಿದರು...ಮತ್ತೆಕೆಲವರು ಆರಂಭದಲ್ಲೇ ಕೈಚೆಲ್ಲಿ ಕೂತರು... ಅಲ್ಲಿಂದ ತುಸು ಮುಂದೆ ಸಾಗಿದಾಗ ಶ್ರೀ ಆದಿಶಕ್ತಿ ಮಹಮ್ಮಾಯಿ ಅಮ್ಮನವರ ಗುಡಿಯೊಂದು ಗೋಚರಿಸಿತು... ಬಡಕೋಡಿ ಗ್ರಾಮಕ್ಕೆ ಪ್ರಯಾಸದ ಆಗಮನ!. ಅಲ್ಲಿನ ಮರಾಠಿ ಬಂಧುಗಳು ವಿದ್ಯಾರ್ಥಿ ತಂಡವನ್ನು ಪ್ರೀತಿಯಿಂದ ಬರಮಾಡಿಕೊಂಡರು... ಬಿಸಿಲ ಝಳಕ್ಕೆ ರೋಸಿಹೋಗಿದ್ದ ವಿದ್ಯಾರ್ಥಿಗಳಿಗೆ ನೈಸರ್ಗಿಕವಾದಂತಹ ಶರಬತ್ತು...ಪುನರುಪುಳಿ(ಬಿರಿಂಡಾ) ಹಣ್ಣಿನ ರಸದ ಶರಬತ್ತು...ತಾಜಾ ಶರಬತ್ತು ಕುಡಿದು, ನಕ್ಷತ್ರನೇರಳೆ ಹಣ್ಣಿನ ರುಚಿಸವಿಯುತ್ತಿದ್ದಂತೆಯೇ ಬಡಕೋಡಿಯ ಅಪ್ಪಿ ಹೆಂಗಸು ಪಾಡ್ದನ ಪ್ರಾರಂಭಿಸಿದರು...ಅಲ್ಲಿಂದ ಮುಂದೆ ಕಡಿದಾದ ಹಾದಿ.ಪೊದೆಗಳಿಂದಾವೃತವಾದ ಕಾನನ. ಬಾನೆತ್ತರಕ್ಕೆ ಬೆಳೆದುನಿಂತ ಮರಗಿಡಗಳು...ಸೂರ್ಯನ ಬಿಸಿಲು ಒಳಪ್ರವೇಶಿಸುತ್ತಿಲ್ಲ...ಹಾದಿಮಾಡಿಕೊಂಡು ಬೆಟ್ಟವೇರುವ ಸಾಹಸ...ಸುಮಾರು ಮೂರುನಾಲ್ಕು ಕಿಲೋಮೀಟರ್ಗಳಷ್ಟೆತ್ತರಕ್ಕೆ ಕಾಡಿನೊಳಗೆ ಹಾದಿಮಾಡುತ್ತಾ ಮಾಡುತ್ತಾ ಬೆವರಿಳಿಸುತ್ತಾ ನಿಸರ್ಗದತ್ತ ನಡಿಗೆ...ಹಲಾವರು ವೃಕ್ಷ ಸಂಕುಲಗಳ ಪರಿಚಯ...ಹಲವೆಡೆಗಳಲ್ಲಿ ಕಾಡುಬಳ್ಳಿಗಳೇ ಆಸರೆ...ಗುಡ್ಡದ ತುತ್ತ ತುದಿಯಲ್ಲಿ ವಿಶಾಲವಾದ ಹಾಸುಪಾದೆ...ಅಲ್ಲೊಂದು ಸಣ್ಣ ರೆಸ್ಟ್...ಮತ್ತೆ ಗುಡ್ಡವಿಳಿಯುವ ಸಾಹಸ...ಮಧ್ಯೆ ಸಣ್ಣದೊಂದು ಬ್ರೇಕ್...ಹಟ್ಯಾಲು ಕಾಡು ಸುತ್ತಿ ಸುತ್ತಿ ದಣಿವಾದ ತಂಡ ಕೆಳಭಾಗದತ್ತ ಮುಖಮಾಡಿತು...ಅದಾಗ ಹೊಟ್ಟೆತಣಿಸಲು ನೆರೆ ಬೇರು, ಬೇಯಿಸಿದ ಹೆಸರುಕಾಳು ....ಎಲ್ಲರ ಮನಸ್ಸು ಗಡಿಯಾರದತ್ತ...ಗಂಟೆಮುಳ್ಳು ಎರಡು ತೋರಿಸಿ ಕೊಂಚ ಕೆಳಜಾರಿತ್ತು...ತಂಡ ಕಾಡಿನೊಳಗಿನಿಂದ ಹೊರಬರುವ ಚಿಂತನೆ ನಡೆಸಿತ್ತು...ಬಡಕೋಡಿ ಸಮುದಾಯ ಭವನದಲ್ಲಿ ಬಿಸಿ ಬಿಸಿ ಗಂಜಿ... ನಲುವತ್ತೆರಡು ಕಾಡು ಚಿಗುರುಗಳಿಂದ ತಯಾರಿಸಿದ ವಿಶೇಷ ಚಟ್ನಿ, ಹೆಬ್ಬಲಸು ಕಾಯಿಯ ವಿಶೇಷ ಗಸಿ, ತೇರೆಕೊಡಿ ಚಟ್ನಿ, ಕೊರಂಜಿಕೊಡಿ ಚಟ್ನಿ ತಯಾರಾಗಿತ್ತು. ಊಟಮುಗಿಸಿದ ತಂಡಕ್ಕೆ ಬೇಂಗದ ಕೆತ್ತೆ ಕಷಾಯ ಪುಷ್ಠಿನೀಡಿತು...
ಅಂತೂ ಒಂದು ದಿನದ ನಿಸರ್ಗದತ್ತ ನಡಿಗೆ...ಜೊತೆಗೆ ನಿಸರ್ಗದತ್ತ ಆಹಾರ...ವ್ಹಾವ್...ಎಷ್ಟೊಂದು ರುಚಿ...ಸವಿ...!

- ಹರೀಶ್ ಕೆ.ಆದೂರು.

1 comments:

Anonymous said...

sir..excellent day ..unforgettable journey..meaningful moments..n of-course fantastic report..made me to go back to hosangadi..
@Athmeeya J Kadamba

Post a Comment