ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಸುಮ್ಮನೆ ಕತ್ತು ಬಗ್ಗಿಸಿ ಕೆಲಸ ಮಾಡುತ್ತಾ ಹೋಗಿ... ಕೆಲಸಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ ಎನ್ನೋದಕ್ಕೆ ಕೇಶವ ಕೋಟೇಶ್ವರ ಅವರಿಗಿಂತ ಬೇರೆ ಉದಾಹಾರಣೆ ಬೇಕಾ? ಕೃಷ್ಣ ಗೀತೆಯಲ್ಲಿ ಹೇಳಿದ್ದೂ ಇದನ್ನೇ ಆಲ್ವಾ? ಹಳ್ಳಿ ಮೂಲೆಯಲ್ಲಿ ನಡೆಯುತ್ತಿರುವ ಶಿಕ್ಷಣ ಕ್ರಾಂತಿಗಾಗಿ ಪ್ರಶಸ್ತಿ ಪುರಸ್ಕಾರಗಳು ಇಂದು ಅರಸಿಬರುತ್ತಿದೆ.


ಕೇಶವ ಕೋಟೇಶ್ವರ ಅವರ `ಸ್ಪೂರ್ತಿ' `ಧಾಮ ಇಂದು ಜಗದಗಲಕ್ಕೆ. ಕೇವಲ ಐದು ಜನ ಯುವಕರು ಹುಟ್ಟುಹಾಕಿದ ಅನುದಾನಿತ ಕೊರಗ ಮಕ್ಕಳ ವಸತಿ ಶಾಲೆ `ಸ್ಪೂರ್ತಿ `ಧಾಮ' ಏರಿದ ಎತ್ತರವಿದೆಯಲ್ಲಾ ಅದು ಬೆರಗು ಮೂಡಿಸುತ್ತದೆ. ಅದೂ ರಸ್ತೆ ಬದಿಯಲ್ಲಿ ಕೂಲಿ ಮಾಡುತ್ತಿದ್ದ ಸಂಜೀವಯ್ಯ ಅವರ ಮಗ ಕೇಶವ ಕೋಟೇಶ್ವರ ಏರಿದ ಎತ್ತರದ ಪರಿಯಿದೆಯಲ್ಲಾ ಅದು ಊಹಿಸಲಸಾಧ್ಯ. ತಾಯಿ ಲಕ್ಷ್ಮೀ ಬಳೆಗಾರ್ತಿ ಅವರ ಜೊತೆ ಹೆಗಲಿಗೆ ಹೆಗಲಕೊಟ್ಟು ಬಳೆ ಹೊತ್ತು ಹಳ್ಳಿ ಹಳ್ಳಿ ತಿರುಗುತ್ತದ್ದ ಕೇಶವ ಅವರು ಸ್ಪೂರ್ತಿ ಧಾಮ ಕಟ್ಟಿನಿಲ್ಲಿಸಿದ ರೀತಿಯಿದೆಯಲ್ಲಾ ಅದೂ ಊಹೆಗೂ ನಿಲುಕದ ಮಾತು.


ಸ್ಪೂರ್ತಿಧಾಮದ ತಾಕತ್ತೇ ಅಂಥಾಹದ್ದು..ಡಾ.ವೀರೆಂದ್ರ ಹೆಗ್ಗಡೆ ಸ್ವತಃ ಸ್ಪೂರ್ತಿ ಅಂಗಳದಲ್ಲಿ ನಿಂತು ಬಲೆ ಬಲೇ ಅಂದಿದ್ದಾರೆ. ಪೇಜಾವರ ಮಠ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಸ್ಪೂರ್ತಿಗೆ ಭೇಟಿ ನೀಡಿ ಒಳ್ಳೆ ಕೆಲಸ ಮಾಡ್ತಿದೀಯ ಅಂತ ಬೆನ್ನು ಚಪ್ಪರಿಸಿದ್ದಾರೆ. ಪರ್ಯಾಯ ಶಿರೂರು ಮಠ ಶ್ರೀ ಲಕ್ಷ್ಮೀವರತೀರ್ಥ ಸ್ವಾಮೀಜಿ ಒಂದು ಹೆಜ್ಜೆ ಮುಂದೆಹೋಗಿ `ಸಮಾಜ ಸುಧಾರಕ' ಅಂತ ಬಿರುದು ನೀಡಿದ್ದಾರೆ. ಅಷ್ಟೇಕೆ ರಾಜ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸ್ಪೂರ್ತಿಯ ನಡುಮನೆಯಲ್ಲಿ ನಿಂತು ಇಲ್ಲಿ ಶಿಕ್ಷಣ ಕ್ರಾಂತಿ ಮೂಲಕ ಸಮಾಜ ಪರಿರ್ವತನೆ ಕೆಲಸ ನಡೆಯುತ್ತದೆ ಎಂದು ಹೇಳಿದ್ದಾರೆ.
ಸಾಂಸದ ಅನಂತಕುಮಾರ್ ಸ್ಪೂರ್ತಿ ಮಕ್ಕಳಿಗೆ ಏಕಲವ್ಯ ಕತೆ ಹೇಳಿದ್ದಾರೆ. ನ್ಯಾ.ವೆಂಕಟಾಚಲಯ್ಯ ಸ್ಪೂರ್ತಿಯ ಸಾಮಾಜಿಕ ಕೆಲಸ ಕಣ್ಣಾರೆ ಕಂಡಿದ್ದಾರೆ. ಸ್ಪೂರ್ತಿ ಹುಟ್ಟುಹಾಕಿ ಅದರ ಅಭಿವೃದ್ಧಿ ಪಥಕ್ಕೆ ಕೊಂಡೊಯಿದ ಕೇಶವ ಕೋಟೇಶ್ವರ ಅವರ ಶುದ್ಧ ಮನಸ್ಸಿನ ಪರಾಕ್ರಮವಿದೆ. ಅಂದು ಸದ್ದಿಲ್ಲದೆ ದುಡಿಯುತ್ತಾ ಹೋದ ಕೇಶವ ಅವರಿಗೆ ಈಗ ಪ್ರಶಸ್ತಿ ಪುರಸ್ಕಾರದ ಕಾಲ.

ಆರಂಭ ಹೀಗಿತ್ತು : ಸ್ಪೂರ್ತಿ ಸಂಸ್ಥೆ ತೆಂಗಿನ ಮಡಲಿನ ಚಪ್ಪರದಿಂದ ಮಹಡಿ ಮಹಲ್ ವರಗೆ ನಡೆದ ದಾರಿ ಸಾಪ್ ಸೀದಾ ಆಗಿರಲಿಲ್ಲ. ನೀರಿನ ಹರಿವಿಕೆ ಜೋತೆ ಈಜೋದು ಸುಲಭ. ಆದರೆ ವಿರುದ್ಧ ಈಜೋದಿದೆಯಲ್ಲಾ ಅದಕ್ಕೆ ಎಂಟೆದೆಬೇಕು. ಹತ್ತು ಹಲವು ಅಡೆತಡೆ ಮೀರಿ ಸ್ಪೂರ್ತಿ ಬೇಳೂರಿನಲ್ಲಿ ಸದೃಡವಾಗಿ ನಿಂತಿದೆ.
ಗಿರಜನರ ಶಿಕ್ಷಣ ಗುರಿಯೊಂದಿಗೆ ಆರಂಭವಾದ ಸ್ಪೂರ್ತಿ ಎರಡನೇ ದಶಕದ ಅಂಚಿಗೆ ಬಂದು ನಿಂತಿದೆ. ಸ್ಪೂರ್ತಿ ಮಾನವ ಸೇವೆಗೆ ಒತ್ತು ನೀಡುತ್ತಿದೆ. ಸಮಾಜದಲ್ಲಿ ಶಿಕ್ಷಣ ವಂಚಿತರ, ಅನಾಥ ಮತ್ತು ಗಿರಿಜನ ಮಕ್ಳಳ ಶಿಕ್ಷಣಕ್ಕೆ ಆದ್ಯತೆ ನೀಡುತ್ತಾ ಜನರಲ್ಲಿ ಶಿಕ್ಷಣಿಕ ಜಾಗೃತಿ ಮೂಡಿಸುವ ಮೂಲಕ ಸಮಾಜದಲ್ಲಿರುವ ಕೀಳರಿಮೆ ತೊಡೆದು ಹಾಕುವ ಸಾರ್ಥಕ ಕೆಲಸದಲ್ಲಿ ಸ್ಪೂರ್ತಿ ನಿರತ.

ಸ್ಪೂರ್ತಿ ಸಂಸ್ಥೆಯನ್ನು ಇನ್ನಿಲ್ಲದೆ ಕಾಡಿದವರ ಪಟ್ಟಿ ದೊಡ್ಡದಿದೆ. ಎಲ್ಲಾ ಅಡೆತಡೆ ಮೆಟ್ಟಿ ನಿಂತು ಸ್ಪೂರ್ತಿಗೆ ಇಂದಿಗೂ ಚಿಟುಕು ಮುಳ್ಳಾಡಿಸೋದು ತಪ್ಪಿಲ್ಲ. ದಿನಕ್ಕೊಂದು ತನಿಖೆ, ನಿಯೋಗ ಭೇಟಿ ನೀಡುತ್ತಲೇ ಇದೆ. ಸ್ಪೂರ್ತಿಗೆ ಬಂದವರು ಸಂದರ್ಶನ ಪುಸ್ತಕದಲ್ಲಿ ಬರದಿರುವ ಒಕ್ಕಣೆ ನೋಡಿದರೆ ಸಾಕು ಸ್ಪೂರ್ತಿ ಹೇಗಿದೆ ಎಂಬುದಾಗಿ. ಮಾಜಿ ಶಾಸಕಿ ವಿನ್ನಫ್ರಡ್ ಫೆರ್ನಾಂಡೀಸ್ ಅವರ ಬಾಡಿಗೆ ಕಟ್ಟಡದಲ್ಲಿ ಸ್ಪೂರ್ತಿ ಹುಟ್ಟಿತು. ಗಿರಿಜನರ ಮೇಲೆ ಅಪಾರ ಕಾಳಜಿಯಿದ್ದ ಮಂಗಳೂರಿನ ಡೆಸ್ಮಂಡ್ ಏಬ್ರಿಯೋ ಅವರು ಬೇಳೂರು ಪಂಚಾಯ್ತಿ ವ್ಯಾಪ್ತಿಯಲ್ಲಿ ಸ್ಪೂರ್ತಿಗೆ 2.20 ಎಕ್ರೆ ಜಾಗ ಕೊಟ್ಟರು. ಆರಂಭದಲ್ಲಿ ಮಡ್ಲು ಚಪ್ಪರದ ಶೃಂಗಾರದಲ್ಲಿದ್ದ ಸ್ಪೂರ್ತಿ ಈಗ ಸುಸಜ್ಜಿತ ಕಟ್ಟಡ ಹೊಂದಿದೆ. ಕೇಶವ ಕೋಟೇಶ್ವರ, ಪ್ರಮೀಳಾ ವಾಜ್, ಗಣೇಶ್, ನಿತ್ಯಾನಂದ ಮತ್ತು ಕರುಣಾಕರ ಎಂಬವರು ಸ್ಪೂರ್ತಿ ಕಟ್ಟಿ ಬೆಳೆಸಿದರು. ಹದಿನೈದು ಗಿರಿಜನ ವಿದ್ಯಾರ್ಥಿಗಳೊಂದಿಗೆ ಆರಂಭಗೊಂಡ
ಸ್ಪೂರ್ತಿಯಲ್ಲಿ ಈಗ 150ರಷ್ಟು ಮಕ್ಕಳಿದ್ದಾರೆ. ಇದರಲ್ಲಿ ಶಿಕ್ಷಣ ವಂಚಿತರು. ಅನಾಥ ಹಾಗೂ ಗಿರಿಜನ ಮಕ್ಕಳಪಾಲು ದೊಡ್ಡದಿದೆ. ಸ್ಪೂರ್ತಿ ಆರಂಭದ ಕಾಲದಲ್ಲಿ ನೂರಾರು ವರ್ಷಗಳಿಂದ ತಮ್ಮದೇ ಬದುಕಿನ ಗೂಡಲ್ಲಿದ್ದ ಗಿರಿಜನರಿಗೆ ಅಕ್ಷರದ ಕಾಗುಣತದ ಅರಿವೂ ಇರಲಿಲ್ಲ. ಅವರು ತಮ್ಮ ಮಕ್ಕಳು ಶಾಲೆಗೆ ಹೋಗುವುದನ್ನೂ ಊಹಿಸಲೂ ಹಿಂಜರಿಯುತ್ತಿದ್ದರು. ಆದರೆ ಈ ಯವಕರು ಗಿರಿಜನ ಕೇರಿಗೆ ಎಡತಾಗಿದರು. ಅವರ ಮನವೊಲಿಸಿ ಮಕ್ಕಳನ್ನು ಕರೆತರುವುದಲ್ಲಿ ಯಶಸ್ವಿಯಾದರು. ಅಂದು ಗಿರಿಜನರಲ್ಲಿ ಬಿತ್ತಿದ ಅಕ್ಷರ ಬೀಜ ಇಂದು ಫಲಕೊಡುತ್ತಿದೆ. ಗಿರಿಜನರೇ ತಮ್ಮ ಮಕ್ಕಳನ್ನು ಕರೆತಂದು ಸ್ಪೂರ್ತಿಗೆ ಬಿಡುವಷ್ಟು ಬದಲಾವಣೆಯಾಗಿದೆ.

ಆರಂಭವಾಯಿತು ಶಿಕ್ಷಣ ಯಜ್ಞ: ಕಳೆದ ಹದಿನೇಳು ವರ್ಷದ ಹಿಂದೆ ಆರಂಭಗೊಂಡ ಸ್ಪೂರ್ತಿ ಸಂಸ್ಥೆಯಲ್ಲಿ ಪ್ರಸಕ್ತ 150 ವಿದ್ಯಾರ್ಥಿಗಳಿದ್ದಾರೆ. ಸ್ಪೂರ್ತಿ ಸಂಸ್ಥೆ ಮಕ್ಕಳು ಕಲಿಕೆಯಲ್ಲೂ ಮುಂದಿದ್ದಾರೆ. ಆರಂಭಿಕ ಹಂತದಲ್ಲಿ ಶೇ.90ರಷ್ಟಿದ್ದ್ದು ಫಲಿತಾಂಶ ನಂತರದ ದಿನಗಳಲ್ಲಿ ನೂರಕ್ಕೆ ಏರಿದೆ.
ಸ್ಪೂರ್ತಿ ಗಿರಿಜನ ಮಕ್ಕಳಿಗೆ ಶಿಕ್ಷಣ ಕೊಡುವುದಷ್ಟಕ್ಕೇ ಸೀಮಿತವಾಗಿಲ್ಲ. ಗಿರಜನ ಸಮಾಜದ ಮೌಲ್ಯ ವೃದ್ಧಿಗಾಗಿ ಹತ್ತು ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ಕೊರಗರ ಶಿಕ್ಷಣ ಅನೌಪಚಾರಿಕ ವಸತಿ ಶಿಕ್ಷಣ, ಸಂಸ್ಕೃತಿಕ ಅಧ್ಯಯನ ಮತ್ತು ಸಾಂಸ್ಕೃತಿಕ ಪರಿಕರ ಸಂಗ್ರಹ, ಸಮುದಾಯದ ಅಭಿವೃದ್ಧಿ ಕಾರ್ಯಕ್ರಮ, ಗಿರಿಜನ ಯುವಕ, ಯುವತಿಯರಿಗೆ ನಾಯಕತ್ವ ತರಬೇತಿ, ಸಂಘಟನಾ ಚಟುವಟಿಕೆ, ಸಣ್ಣ ಉಳಿತಾಯದ ಬಗ್ಗೆ ಜಾಗೃತಿ, ಸರಕಾರಿ ಯೋಜನೆಗಳ ಕುರಿತು ಮಾಹಿತಿ, ಹಕ್ಕಿನ ಭೂಮಿಗಾಗಿ ಹೋರಾಟ ಮತ್ತು ಏಡ್ಸ್, ವರದಕ್ಷಿಣ ಮುಂತಾದ ಸಾಮಾಜಿಕ ಪಿಡುಗುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಸ್ಪೂರ್ತಿ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಸಮುದಾಯದ ಒಳಿತಿಗಾಗಿ ಹಲವು ಯೋಜನೆಗಳನ್ನು ತರೋದು ಕೇಶವ ಕೋಟೇಶ್ವರ ಅವರ ಕನಸು.

ಸ್ಪೂರ್ತಿ ಸಂಸ್ಥೆ ಅಂಗಳದಲ್ಲಿ ಅನಾಥ ಮತ್ತು ಬೀದಿಬದಿ ಬಿಟ್ಟು ಹೋದ ಮಕ್ಕಳಿಗೂ ಆಶ್ರಯ ನೀಡುತ್ತದೆ. ಅನಾಥರು ಕೂಡಾ ಸ್ಪೂರ್ತಿ ಸಂಸ್ಥೆ ಬಾಗಿಲಿಗೆ ಬಂದಿದ್ದಾರೆ. ನಾಲ್ಕು ಜನ ಅನಾಥರು ಸ್ಪೂರ್ತಿ ಆಶ್ರಯದಲ್ಲಿದ್ದಾರೆ. ಅವರೆಲ್ಲರಿಗೂ ಎಲ್ಲಾ ಇದ್ದೂ ಮನೆಯಿಂದ ಹೊರಗೆ ಹಾಕಲ್ಪಟ್ಟವರು. ಮತ್ತು ವಂಚನೆಗೆ ಒಳಗಾದವರು. ದತ್ತು ಕೇಂದ್ರದಲ್ಲಿ ಎಳೆಯ ಮಕ್ಕಳ ನಗು ಅಳುವಿನ ಅಲೆಯಿದೆ. ಈ ಮಕ್ಕಳ ಮುಂದಿನ ಭವಿಷ್ಯ ಬರೆಯುವ ಪ್ರಯತ್ನ ಸ್ಪೂರ್ತಿ ಮಾಡುತ್ತಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಪ್ರಶಸ್ತಿಗಳು ಹುಡುಕಿ ಬರುತ್ತದೆ ಕೇಶವ ಕೋಟೇಶ್ವರ ಅವರನ್ನು.
ಸಮಾಜ ಸುಧಾರಕ, ಕಲಾ ಪೋಷಕ, ಸಮಾಜ ರತ್ನ ಹೀಗೆ ಸಾಗುತ್ತದೆ ಪುರಸ್ಕಾರಗಳ ಪಟ್ಟಿ. ಅದಕ್ಕೆ ಹೆಳಿದ್ದು ಮಾಡೋಕೆಲಸವನ್ನು ನಿಷ್ಠೆಯಿಂದ ಮಾಡುತ್ತಾ ಹೋದರೆ ಸಮಾಜ ಅವರನ್ನು ಗುರತಿಸುತ್ತದೆ. ಒಳ್ಳೆ ಕೆಲಸ ಮಾಡೋರನ್ನು ಸಮಾಜ ಮರೆಯೋದಿಲ್ಲ. ಕೇಶವ ಕೋಟೇಶ್ವರ ಅವರಿಂದ ಇನ್ನಷ್ಟು ಸಮಾಜಕಿ ಕೆಲಸಗಳು ಆಗಲಿ.ಜೈ..ಹೋ...


-ಶ್ರೀಪತಿ ಹೆಗಡೆ ಹಕ್ಲಾಡಿ

0 comments:

Post a Comment