ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ

ಶಿಕ್ಷಣವನ್ನು ಕನ್ನಡದಲ್ಲೇ ನೀಡಬೇಕು, ಅಂಗಡಿ ಬೋರ್ಡಗಳನ್ನು ಕನ್ನಡದಲ್ಲೇ ಬರೆಯಬೇಕು ಇಂತಹ ಮಾತುಗಳನ್ನು ಕನ್ನಡದ ಪರ ವಕಾಲತ್ತು ವಹಿಸುವವರು (ಅದರಲ್ಲಿ ಅನೇಕರು ಕನ್ನಡದ ಪರ ಭಾಷಣವನ್ನು ಮಾತ್ರ ಮಾಡುತ್ತಾರೆ!) ನಮ್ಮಲ್ಲಿ ಇದ್ದಾರೆ.


ಇತ್ತೀಚೆಗೆ ವಿಶ್ವ ಕನ್ನಡ ಸಮ್ಮೇಳನವೂ ನಡೆದಿರುವುದರಿಂದ ಇಂತಹ ಮಾತುಗಳು ಬಹಳ ಕೇಳಿಬರುತ್ತಿದೆ. ಇಂತಹ ಭಾಷಣಗಾರರ ವೈಚಾರಿಕತೆಯ ಪ್ರತಿಫಲವಾಗಿಯೇ ಹತ್ತನೇ ತರಗತಿ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯುವವರಿಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ. ಅದರ ಪ್ರಯೋಜನ ಪಡೆದ ನಂತರ ಮುಂದೇನು? ಕನ್ನಡ ಮಾಧ್ಯಮದ ಆ ವಿದ್ಯಾರ್ಥಿ ಪಿ.ಯು.ಸಿ.ಯಲ್ಲಿ ವಿಜ್ಞಾನ ಆಯ್ದುಕೊಂಡರೆ ಆತನಿಗೆ ಕನ್ನಡದಲ್ಲಿ ವಿಜ್ಞಾನದ ಸರಿಯಾಗಿ ಪುಸ್ತಕಗಳಿವೆಯೇ? ಇಲ್ಲ! ಅರ್ಥಾತ್ ಆತ ಪಿ.ಯು.ಸಿ.ಯಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಬೇಕು. ಕನ್ನಡದಲ್ಲೇ ಕಲಿತ ವಿದ್ಯಾರ್ಥಿ ಭವಿಷ್ಯದಲ್ಲಿ ಇಂಜಿನೀಯರಿಂಗ್ ಎಂ.ಬಿ.ಬಿ.ಎಸ್. ಬಿ.ಬಿ.ಎಂ. ಮುಂತಾದ ಯಾವ ಕೋರ್ಸ್ಗಳಿಗೆ ಹೋದರೂ ಪುಸ್ತಕಗಳಿರುವುದಿಲ್ಲ. ಅಪ್ಪಟ ಭಾರತೀಯ ಆಯುರ್ವೇದದ ಕೋರ್ಸಿಗೂ ಸರಿಯಾಗಿ ಕನ್ನಡ ಪುಸ್ತಕಗಳಿಲ್ಲ ಆಗ ಭಾಷಣಕೋರರು ಸಹಾಯಕ್ಕೆ ಬರುವುದಿಲ್ಲ!

ಹಾಗಾದರೆ ಪ್ರೋತ್ಸಾಹ ಧನದಿಂದ ಏನು ಪ್ರಯೋಜನ? ಪಿ.ಯು.ಸಿ.ಯಲ್ಲಿ ಒಮ್ಮೆಲೆ ಇಂಗ್ಲೀಷ್ ಮಾಧ್ಯಮದಲ್ಲಿ ಓದಬೇಕಾಗಿ ಪರಿಸ್ಥಿತಿ ಬಂದವರಲ್ಲಿ ಕೇಳಿ ಅವರಿಗೆ ಕಷ್ಟವಾಗಿರುತ್ತದೆ. ವಿಶ್ವೇಶ್ವರಯ್ಯರಂತಹ ಮೇಧಾವಿಗಳಿಗೆ ಮಾಧ್ಯಮ ತೊಡಕಾಗದಿರಬಹುದು. ಅದರ ಅರ್ಥ ಯಾರಿಗೂ ತೊಂದರೆಯಾಗುವುದಿಲ್ಲ ಎಂದಲ್ಲ. ಕನ್ನಡ ಮಾಧ್ಯಮದಿಂದ ಬಂದು ಇಂಗೀಷ್ ಮಾಧ್ಯಮಕ್ಕೆ 'ನಿರಾಯಾಸವಾಗಿ' ಹೊಂದಿಕೊಂಡವರ ಸಂಖ್ಯೆ ಕಡಿಮೆ. ಇಂಗ್ಲೀಷ್ ಕಲಿಯುವುದೆಂದರೆ ಕನ್ನಡವನ್ನು ಅವಮಾನಿಸುವುದು ಎಂದರ್ಥವಲ್ಲ, ಅನಂತಮೂರ್ತಿ ಕಲಿತದ್ದು, ಇಂಗ್ಲೀಷ್ ಎಂ.ಎ. ಪಾಠ ಮಾಡಿದ್ದೂ ಇಂಗ್ಲೀಷ್ ಸಾಹಿತ್ಯ! ಇನ್ನು ಪ್ರಾಥಮಿಕ ಇಂಗ್ಲೀಷನಲ್ಲಿ ಕಲಿಯುವುದು. ಇಂಗ್ಲೀಷ್ ಸ್ಪೀಕಿಂಗ್ ಕೋರ್ಸುಗಳನ್ನು ಸೇರುವುದು ವ್ಯಾವಹಾರಿಕ ಅಗತ್ಯಗಳಿಗಾಗಿ ಹೊರತು ಕನ್ನಡಕ್ಕಿಂತ ಇಂಗ್ಲೀಷ್ ಮುಖ್ಯ ಎಂಬ ಕಾರಣಕ್ಕಾಗಿ ಅಲ್ಲ. ಕಂಪ್ಯೂಟರ್ ಜ್ಞಾನ, ಇಂಟರ್ನೆಟ್ ತಿಳುವಳಿಕೆ ಹೇಗೆ ಇಂದಿನ ಅಗತ್ಯವೊ ಅಂತೆಯೇ ಇಂಗ್ಲೀಷ್ ಕೂಡ. ಅಗತ್ಯಕ್ಕಾಗಿ ಇಂಗ್ಲೀಷ್ ಕಲಿಯುವುದನ್ನು ಕನ್ನಡ ವಿರೋಧಿ ಎಂದು ಪರಿಗಣಿಸುವುದು ತಪ್ಪು.

ಜಪಾನ್, ಫ್ರಾನ್ಸ್ ಮುಂತಾದ ದೇಶಗಳಲ್ಲಿ ಎಲ್ಲಾ ಕೋರ್ಸುಗಳ ಪುಸ್ತಕಗಳೂ ಮಾತೃಭಾಷೆಯಲ್ಲಿ ದೊರಕುತ್ತದೆ. ಆದ್ದರಿಂದ ಅಲ್ಲಿ ಭಾಷಣಗಾರರು ಮಾತೃಭಾಷೆಯಲ್ಲೇ ಓದಿ ಎಂದರೆ ತಪ್ಪಲ್ಲ. ಅಂತಹ ವ್ಯವಸ್ಥೆಯನ್ನು ಇಲ್ಲಿಯೂ ಮಾಡಿದರೆ ಮಾತ್ರ ಭಾಷಣಕೋರರಿಗೆ ಮಾತೃಭಾಷೆಯಲ್ಲೇ ಓದಿ ಎನ್ನುವ ನೈತಿಕ ಹಕ್ಕು ಇರುತ್ತದೆ. ನೆನಪಿರಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದುವವನಿಗೂ ಕನ್ನಡ ಭಾಷೆಯನ್ನು ಪಠ್ಯದಲ್ಲೇ ಓದುವ ಅವಕಾಶವಿರುವುದರಿಂದ ಕನ್ನಡ ಅಧ್ಯಯನಕ್ಕೆ ತೊಂದರೆಯಾಗುವುದಿಲ್ಲ.
ನಾವಿಂದು ತೊಲಗಿಸಬೇಕಾದದ್ದು ಇಂಗ್ಲೀಷ್ ವ್ಯಾಮೋಹ, ಭಾಷೆಯಲ್ಲ, ಇವತ್ತು ಕನ್ನಡದ ಬಹುತೇಕ ನಟಿಯರು ನಿರೂಪಕರು ಪ್ರಶ್ನೆಗಳನ್ನು ಕೇಳಿದರೆ ಇಂಗ್ಲೀಷ್ ನಲ್ಲಿ ಉತ್ತರ ನೀಡುತ್ತಾರೆ? ಕನ್ನಡದ ಬಹಳಷ್ಟು ಚಿತ್ರತಾರೆಯರು ಅನಗತ್ಯವಾಗಿ ಇಂಗ್ಲೀಷ್ ಬಳಸುತ್ತಾರೆ! ಬಹಳಷ್ಟು ಮಧ್ಯಮ ವರ್ಗದವರಿಗೆ ಮಗ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯುತ್ತಿದ್ದಾನೆ ಎನ್ನುವುದೇ ಹೆಮ್ಮೆಯ ಸಂಗತಿ! ಕನ್ನಡ ಮಾತನಾಡುವುದೆಂದರೆ ಕೀಳು ಎಂಬಂತೆ ವರ್ತಿಸುವ ಮೇಲ್ವರ್ಗದ ಜನ ನಮ್ಮಲ್ಲಿ ಇದ್ದಾರೆ. ನಾವು ತೊಲಗಿಸಬೇಕಾದದ್ದು ಇಂತಹ ವ್ಯಾಮೋಹವನ್ನು ಅವರ ಅಂಧಕಾರಕ್ಕೆ, ಇಂಗ್ಲೀಷ್ ವ್ಯಾಮೋಹಕ್ಕೆ ಭಾಷೆ ಮಾತ್ರ ಕಾರಣವಲ್ಲ. ಸಾಂಸ್ಕೃತಿಕ ವಸಾಹತಿನ ಪ್ರಭಾವವೂ ಇದೆ. ಅನುಕರಣೆಯ ಸಂಸ್ಕೃತಿಯು ಕಾರಣ. ಇದು ಸಂಕುಚಿತ ಮನೋಭಾವದ ಪ್ರತಿಫಲ. ಅನುಕರಣೆ ಎಂಬ ಲಜ್ಜೆಗೇಡಿತನದ ಪ್ರತಿಫಲ. ಕನ್ನಡದ ಶ್ರೇಷ್ಠತೆ ಇಂತವರ ತಲೆಗೆ ಹೋಗುವುದಿಲ್ಲ.!

ಕಾರ್ಪೋರೇಟ್ ಮಾತನಾಡುವುದರಿಂದ ಕಾಲ್ಸೆಂಟರ್ನಲ್ಲಿ ಉದ್ಯೋಗ ಸಿಗುತ್ತದೆ ಆದರೆ ಸಾಹಿತ್ಯದ ಓದಿಲ್ಲದ (ಕನ್ನಡ ಸಾಹಿತ್ಯವೂ ಸೇರಿದಂತೆ) ಬದುಕಿನ ವಿಶಾಲತೆ ನಿರರ್ಥಕತೆ ಅರಿಯಲು ಸಾಧ್ಯವಿಲ್ಲ. ಇದನ್ನೆಲ್ಲ ವಿದ್ಯಾರ್ಥಿಗಳಿಗೆ ತಿಳಿಸಬೇಕಾದ ಜನರು ವೇದಿಕೆಗೆ ಸೀಮಿತವಾಗಿದ್ದಾರೆ! ಹಿರಿಯ ಸಾಹಿತಿಯೊಬ್ಬರು ಕನ್ನಡದ ಎಲ್ಲಾ ಶ್ರೇಷ್ಠ ಕೃತಿಗಳನ್ನು ಜಗತ್ತಿನ ವಿವಿಧ ಭಾಷೆಗಳಿಗೆ ಅನುವಾದಿಸಬೇಕು ಎಂದಿದ್ದರು. ಇವತ್ತು ಶೇಕ್ಸ್ಪಿಯರ್ ಜಗತ್ತಿನ ಬಹುತೇಕ ಭಾಷೆಗಳಲ್ಲಿ ಲಭ್ಯವಿದ್ದಾರೆ. ಆದರೆ ಕಾರಂತರು, ಭೈರಪ್ಪ? ಕನ್ನಡ ಮಾಧ್ಯಮದಲ್ಲಿ ಹತ್ತನೆ ತರಗತಿಯಲ್ಲಿ ಬರೆಯಲು ಪ್ರೇರೇಪಿಸಿ ನಂತರ ಕೈ ಬಿಡುವುದಕ್ಕಿಂತ ಆ ಹಣವನ್ನು ಕನ್ನಡದ ಶ್ರೇಷ್ಠ ಕೃತಿಗಳ ಭಾಷಾಂತರಕ್ಕೆ ಉಪಯೋಗಿಸಬಹುದು. ಈ ನಿಟ್ಟಿನಲ್ಲಿ ಕೆಲಸ ಮಾಡಬಹುದಾದ ಭಾಷಣಕೋರರೂ ವೇದಿಕೆಗೆ ಸೀಮಿತವಾಗಿದ್ದಾರೆ. ಕೋರ್ಸುಗಳ ಪುಸ್ತಕಗಳನ್ನು ಕನ್ನಡದಲ್ಲಿ ರೂಪಿಸುವ ಸಾಮಥ್ಯವುಳ್ಳವರೂ ವೇದಿಕೆಗೆ ಸೀಮಿತವಾಗಿದ್ದಾರೆ.

ಯಾವ ಕ್ಷೇತ್ರಕ್ಕೆ ಕಾಲಿಟ್ಟರೂ ಕನ್ನಡದಲ್ಲೇ ವ್ಯವಹರಿಸುವಂತಹ ಅವಕಾಶಗಳಿರಬೇಕು. ಎಂ.ಬಿ.ಬಿ.ಎಸ್. ಇರಲಿ ರಾಜ್ಯಶಾಸ್ತ್ರದ ಎಂ.ಎ. ಇರಲಿ ಕೇವಲ ಕನ್ನಡದಲ್ಲಿ ಓದಿ ಬರೆಯುವಷ್ಟು ಪುಸ್ತಕಗಳು, ವ್ಯವಸ್ಥೆ ಇರಬೇಕು ಆಗ ಮಾತ್ರ ಪ್ರಾಥಮಿಕ ಶಿಕ್ಷಣ ಕನ್ನಡದಲ್ಲೇ ನೀಡಬೇಕು ಎಂಬ ಭಾಷಣಕ್ಕೆ ಅರ್ಥ ಬರುತ್ತದೆ. ಇಲ್ಲದಿದ್ದರೂ ವಿದ್ಯಾರ್ಥಿಯ ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲಿ ನೀಡಿ ನಡು ರಸ್ತೆಯಲ್ಲಿ ಕೈ ಬಿಟ್ಟಂತೆ ಆಗುತ್ತದೆ. ಕನ್ನಡದವರೇ ಆದ ಲಕ್ಷಾಂತರ ಇಂಜಿನೀಯರ್ಗಳು, ಡಾಕ್ಟರ್ಗಳು ಇದ್ದಾರೆ. ಅವರಿಂದ ಅವರವರ ಕ್ಷೇತ್ರದ ಪಠ್ಯಪುಸ್ತಕಗಳನ್ನು ಕನ್ನಡದಲ್ಲಿ ಬರೆಸಿದರೆ ಒಳಿತು. ಹೆಚ್ಚು ಹೆಚ್ಚು ಕನ್ನಡದ ಸಾಪ್ಟವೇರ್ಗಳು ಬರಬೇಕು. ಕನ್ನಡ ಎಲ್ಲಾ ಕ್ಷೇತ್ರಗಳಲ್ಲೂ ಬಳಕೆಯಾಗುವಂತೆ ಆಗಬೇಕು. ಕನ್ನಡ ಮಾತ್ರ ಗೊತ್ತಿರುವವನಿಗೂ ಜಗತ್ತು ತೆರೆದುಕೊಳ್ಳಬೇಕು.
ಇಷ್ಟಾದರೂ ಇಂಗ್ಲೀಷ್ ಕಲಿಕೆಯ ಅಗತ್ಯ ಉಂಟಾಗುತ್ತದೆ ಕಾರಣ ಇಂಗ್ಲೀಷ್ ಕಲಿಕೆಯಿಂದ ಸಮಸ್ತವಲ್ಲದಿದ್ದರೂ ಜಗತ್ತು ತೆರೆದುಕೊಳ್ಳುತ್ತದೆ. ಭೌತಿಕವಾಗಿ ಕರ್ನಾಟಕದಲ್ಲೇ ಬದುಕುತ್ತೇನೆ. ಹೊರಗಿನ ಜ್ಞಾನ, ವಿಚಾರ, ತಿಳುವಳಿಕೆ ಬೇಡ ಎನ್ನುವವರಿಗೆ ಇಂಗ್ಲೀಷ್ನ ಅಗತ್ಯ ಉಂಟಾಗದೇ ಇರಬಹುದು. ಉಳಿದವರಿಗೆಲ್ಲಾ ಇಂಗ್ಲಿಷ್ ಅನಿವಾರ್ಯ. ಜಾಗತಿಕ ಮಟ್ಟದಲ್ಲಿ ಕರ್ನಾಟಕ ಹೇಗೆ ಬೆಳೆಯುತ್ತಿದೆ ಎಂದು ತಿಳಿದುಕೊಳ್ಳಲಾದರೂ ಇಂಗೀಷ್ ಬೇಕು! ವ್ಯಾವಹಾರಿಕ ಅಗತ್ಯಗಳಿಗಾಗಿ ಇಂಗ್ಲೀಷ್ ಇರಲಿ ವ್ಯಾಮೋಹ ತೊಲಗಲಿ.

- ಆದಿತ್ಯ ಭಟ್

1 comments:

BIDIRE said...

ಬಹಳ ಅರ್ಥಪೂರ್ಣ ಲೇಖನ ಸರ್...ನಿಮ್ಮ ವಿಚಾರಗಳು ಕನ್ನಡಪರ ಭಾಷಣ ಮಾಡುವ ತಮ್ಮ ಮಕ್ಕಳನ್ನು ಇಂಗ್ಲೀಷ್ ಸ್ಕೂಲ್ಗಳಿಗೆ ಕಳುಹಿಸುವವರನ್ನು ಎಚ್ಚರಿಸಲಿ...

Post a Comment