ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್
ಸ್ಫಟಿಕ ಶುಭ್ರ ನೀರು,ಅಲ್ಲಿ ಸೊಂಪಾಗಿ ಬೆಳೆದ ನೀಲಗಿರಿ ಮರಗಳು ಸೊಯ್ಯನೆ ಬೀಸುವ ಗಾಳಿಯ ವೈಯ್ಯಾರಕೆ ಅಲ್ಲಿ ತನಕ ಸ್ತಬ್ದವಾಗಿದ್ದಂತೆ ಕಂಡ ನೀರಿನ್ನಲ್ಲಿ ಒಮ್ಮೆಲೆ ಸುರುಳಿಯಾಕಾರದ ಅಲೆಗಳು ಎದ್ದವು ಆ ಅಲೆಗಳು ಕೆರೆಕಂಡಿರುವ ಏರಿಳಿತಗಳನ್ನು ದೃಶ್ಯರೂಪದಲ್ಲಿ ತೋರಿಸಿದಂತೆ ಭಾಸವಾಯಿತು.


ವಿಶಾಲವಾಗಿ ತುಂಬಿನಿಂತಿರುವ ಕೆರೆ ಒಂದೆಡೆ,ಆ ಕೆರೆಗೆ ಉದ್ದನೆಯ ಏರಿ,ಅದರ ಬದಿಯಲ್ಲಿ ಹತ್ತು ಹಲವು ರೀತಿಯ ಮರಗಳು,ಕೆರೆಯ ಮಧ್ಯದಲ್ಲೊಂದು ಸಣ್ಣದ್ವೀಪ ಅಲ್ಲಿ ಪಕ್ಷಿಗಳ ಕಲರವ ಕಣ್ತುಂಬಿಕೊಳ್ಳುವ ನಭ ಪ್ರಪಂಚ,ಇವೆಲ್ಲವನ್ನು ಕಾಣಲು ಮತ್ತೆಲ್ಲು ಹೊಗಬೇಕಾಗಿಲ್ಲ ನಮ್ಮ ಅರಮನೆ ನಗರಿಯಲ್ಲಿರುವ ಕುಕ್ಕರಹಳ್ಳಿ ಕೆರೆಗೆ ಹೋದರೆ ಸಾಕು.

ಅದೊಂದು ಏಕಾಏಕಿ ಸಂಜೆ ನಮ್ಮ ಉಪನ್ಯಾಸಕರು ಕುಕ್ಕರಹಳ್ಳಿ ಕೆರೆಗೆ ನಮ್ಮನ್ನ ಬರಲು ತಿಳಿಸಿದರು. ಜನನಿಬಿಡವಾಗಿರುತ್ತಿದ್ದ ಸ್ಥಳ ಅಂದು ಕೊಂಚ ಆರಾಮವಾಗಿತ್ತು.ಕೊಕ್ಕರೆಗಳು,ಮರಿಕೊಕ್ಕರೆಗಳು ಜಲಕ್ರೀಡೆಯಾಡುತ್ತಿದ್ದವು.ಯಜಮಾನ ಕೊಕ್ಕರೆಗಳು ಮೀನು ಹಿಡಿಯುವುದರಲ್ಲಿ ನಿರತವಾಗಿದ್ದವು, ಮರದಲ್ಲಿದ್ದ ಇತರೇ ಪಕ್ಷಿಗಳು ಏನೋ ಸಡಗರದಲ್ಲಿದ್ದವು.ಕೆಲವು ಗಂಭೀರ ಚಿಂತನೆಯಲ್ಲಿ ಮುಳುಗಿದಂತೆ ಕಂಡವು.


ಒಟ್ಟಿನ್ನಲ್ಲಿ ಪಕ್ಷಿಗಳ ತರಗತಿ ಅಲ್ಲೇ ಮರದ ಮೇಲೆ ನಡೆಯುತ್ತಿತ್ತು.ನಮ್ಮ ತರಗತಿ ಅಲ್ಲೇ ಕುವೆಂಪುವನದ ಪಕ್ಕದಲ್ಲಿದ್ದ ಹುಲ್ಲುಹಾಸಿನ ಮೇಲೆ ಪ್ರಾರಂಭವಾಗಿತ್ತು.ಎಲ್ಲರೂ ಅಲ್ಲಿ ಅವರವರ ವ್ಯವಹಾರದಲ್ಲಿ ಮಗ್ನವಾಗಿದ್ದರು.ಕೆರೆ ಮಾತ್ರ ಹಾಗೇ ಇದ್ದಂತೆ ಭಾಸವಾಗಲಿಲ್ಲ,ಗಾಳಿಬೀಸಿದಾಗ ಬಂದ ಸಹಿಸಲು ಅಸಾದ್ಯವಾದ ವಾಸನೆ,ಅದರ ಜೊತೆಗೆ ಮರಗಳನ್ನು ತೆಗೆದಿರುವುದರಿಂದ ಜೀವಕ್ಕೆ ತ್ರಾಸ ನೀಡುವ ಧಗೆ ಎಲ್ಲವು ಕೆರೆ ಏನೋ ಆರೊಪಮಾಡಲು ಯತ್ನಿಸುತ್ತಿದೆ ಏಂದೆನ್ನಿಸಿತು.ಬಹಳಷ್ಟು ವರ್ಷಗಳಿಂದ ಕೆರೆಅಂಗಳವನ್ನು ಬಲ್ಲವರಾಗಿದ್ದ ನಮ್ಮ ಮೇಡಂ ಅದರ ನಿಜ ಚಿತ್ರಣವನ್ನು ,ಅಲ್ಲಿಯ ಚೆಲುವನ್ನು ನಮಗೆ ಪದಗಳಲ್ಲಿ ಕಟ್ಟಿಕೊಡಲು ಬಹಳ ಉತ್ಸುಕರಾಗಿದ್ದರು.ಪರಿಸರದ ಕುರಿತ ಅವರ ಈ ಕಾಳಜೀ ಈ ಕುಕ್ಕರಹಳ್ಳಿಕೆರೆಯ ಬಗ್ಗೆ ಮತ್ತಷ್ಟು ತಿಳಿಯುವಂತೆ ನಮ್ಮನ್ನು ಪ್ರೇರೆಪಿಸಿತು.

ಮೈಸೂರುನಗರದಲ್ಲಿರುವ ಈ ಕುಕ್ಕರಹಳ್ಳಿಕೆರೆಯು ಸುಮಾರು 104 ಹೆಕ್ಟೇರ್ಗಳಷ್ಟು ಜಾಗದಲ್ಲಿದೆ ಅದರಲ್ಲಿ ಸುಮಾರು 49- 50ಹೆಕ್ಟೇರ್ಗಳಷ್ಟು ನೀರಿನಿಂದ ಆವೃತವಾಗಿದೆ.ಈ ಭೂಮಿ ಸರಕಾರದ ಅದೀನದಲ್ಲಿದ್ದ ಸಮಯದಲ್ಲಿ ಕೃಷಿ ಉದ್ದೇಶಕ್ಕೆ ಬಳಸಲಾಗತಿತ್ತು. ಇನ್ನು ಹೆಚ್ಚು ನಗರ ಬೆಳೆದಿರದಂತಹ ಸಮಯದಲ್ಲಿ ಮೈಸೂರು ನಗರಕ್ಕೆ ಇದರಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತಿತ್ತು. ನಗರೀಕರಣವಾದಂತೆ ನೀರುಸರಬರಾಜು ಮಾಡುವುದನ್ನು ನಿಲ್ಲಿಸಲಾಯಿತು.ಅದರ ನಂತರ ಈ ಕೆರೆಯ ದುರ್ಬಳಕೆ ಅಧಿಕವಾಯಿತು,ಮೈಸೂರು ನಗರದ ಕೊಳಚೆಯನ್ನು ಈ ನೀರಿಗೆ ಸೇರಿಸುವ ಕಾರ್ಯ ಪ್ರಾರಂಭವಾಯಿತು.ಇದರಿಂದಾಗಿ ಇಲ್ಲಿ ಹೈಸಿಂಥಿಯಾ(ಜಂಡು)ಬೆಳೆಯಲಾರಂಬಿಸಿತು.ಪ್ರಸ್ತುತವಾಗಿ ಈ ಜಾಗ ಮೈಸೂರು ವಿಶ್ವವಿದ್ಯಾನಿಲಯದ ಸುಪರ್ದಿನಲ್ಲಿದೆ.


ಕೆರೆಯ ಪಕ್ಕದಲ್ಲೆ ಇರುವ ಹಳ್ಳಿ ಕುಕ್ಕರಹಳ್ಳಿಯಿಂದಾಗಿ ಈ ಕೆರೆಯನ್ನ ಹಾಗೇ ಕರೆಯುವ ರೂಡಿ ಬೆಳೆದುಬಂದಿತು. ಸಾಂಸ್ಕೃತಿಕ ವೈವಿದ್ಯಗಳನ್ನು ಹೊಂದಿರುವ ಮೈಸೂರು ನಗರಿಯಲ್ಲಿರುವ ಈ ಕೆರೆ ಹಲವು ಪಾಕೃತಿಕ ಅಚ್ಚರಿಗಳನ್ನು ಹೊಂದಿದೆ.ವಿಫುಲವಾಗಿ ಜಲಚರಗಳು ಇವೆ,ಜೊತೆಗೆ ಹಸಿರುವನ ಸಿರಿಯನ್ನು ಹೊಂದಿರುವುದರಿಂದ ಪಕ್ಷಿಗಳ ಸಂತಾನೋತ್ಪತಿಗೆ ಹೇಳಿ ಮಾಡಿಸಿದ ಜಾಗ ಇದಾಗಿದೆ.ಸುಮಾರು 470 ವಿವಿಧ ಪ್ರಬೇದಗಳಿಗೆ ಸೇರಿದ ಪಕ್ಷಿಗಳ ಬೀಡು ಇದಾಗಿದೆ.ನಗರೀಕರಣದ ಉತ್ತುಂಗದಲ್ಲಿರುವ ಇಂತಹ ದಿನಗಳಲ್ಲಿಯೂ ಪಕ್ಷಿ ಸಂಕುಲವನ್ನು ತನ್ನಂತೆ ತಾನು ಅದರ ಆವಾಸದಲ್ಲಿ ಬದುಕಲು ಅವಕಾಶ ನೀಡಿರುವುದು ಈ ಕೆರೆಯ ಉದಾರತೆಗೆ ಸಾಕ್ಷಿ.ಕೆರೆಯಲ್ಲಿ ಮೊಸಳೆ ಸಂತತಿಯು ಅಷ್ಟೇ ಸಮೃದ್ದವಾಗಿದೆ.ಅವುಗಳ ಸಂಖ್ಯೆಗನುಗುಣವಾಗಿ ಇದನ್ನು ಮೊಸಳೆ ಕೆರೆ ಎಂದು ಕರೆದರೆ ತಪ್ಪಾಗಲಾರದು ಏಂಬುದು ಜೀವವಿಜ್ಞಾನಿಗಳ ಅಂಬೋಣ.

ಪ್ರಕೃತಿ ಸೌಂದರ್ಯವನ್ನು ಸವಿಯಲು ದಿನಂಪ್ರತಿ ಈ ಕೆರೆ ಅಂಗಳಕೆ ಬರುವ ಸಾರ್ವಜನಿಕರಿಗೂ ಏನು ಕೊರತೆಯಿಲ್ಲ,ಸೂರ್ಯೋದಯಕ್ಕೂ ಮುನ್ನ ಗಾಳಿಸೇವನೆಗಾಗಿ,ವ್ಯಾಯಮಕ್ಕಾಗಿ ವಯೋಮಿತಿಯ ಅಂತರವಿಲ್ಲದೆ ಬಂದು ಹೋಗುತ್ತಿದ್ದಾರೆ.

ಮುರಿದು ಬಿದ್ದಿರುವ ಮರದ ರೆಂಬೆಗಳು,ಇನ್ನು ವಿಲೇವಾರಿಯಾಗದ ಕಸದರಾಶಿ,ಎಲ್ಲವು ಕೆರೆ ಎದುರಿಸುತ್ತಿರುವ ದುಸ್ಥಿತಿಯನ್ನು ಸಾರುತ್ತಿವೆ.ಆದರೆ ವಿಶ್ವವಿದ್ಯಾನಿಲಯ ಆಗೊಮ್ಮೆ-ಈಗೊಮ್ಮೆ ಅಭಿವೃದ್ದಿಯ ಕೆಲಸಗಳನ್ನು ಕೈಗೊಂಡರು ಕೂಡಾ ನಿರೀಕ್ಷಿತ ಮಟ್ಟವನ್ನು ತಲುಪಿಲ್ಲ, ಸುಮಾರು ಮೂವತ್ತು ವರ್ಷಗಳ ಹಿಂದೆ ಕುಕ್ಕರಹಳ್ಳಿ ಕೆರೆ ಉಳಿಸಿ ಅಭಿಯಾನ ಕೈಗೊಂಡಿದ್ದ ಪ್ರಜ್ನಾವಂತ ನಾಗರೀಕರು ಸರಕಾರದ ಹಾಗೂ ವಿಶ್ವವಿದ್ಯಾನಿಲಯದ ಗಮನ ಸೆಳೆದು ಕೊಳಚೆ ನೀರು ಬರುವುದನ್ನು ತಡೆದಿದ್ದರು,ಇಂದು ಕೂಡಾ ಈ ಕೆರೆಗೆ ಅಂತಹ ಆಂದೋಲನದ ಅವಶ್ಯಕತೆ ಅಕ್ಷರಶಃ ಬೇಕಾಗಿದೆ.

- ಉಷಾ ಜಿ.ಎಸ್.

0 comments:

Post a Comment